ವಿಷಯಕ್ಕೆ ಹೋಗು

ಕುಪ್ಪಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಪ್ಪಳಿ
ಕವಿಯ ಸ್ವಗ್ರಾಮ
ಕವಿಮನೆ - ಕುವೆಂಪುರವರ ಕುಪ್ಪಳಿಯ ಮನೆ
ಕವಿಮನೆ - ಕುವೆಂಪುರವರ ಕುಪ್ಪಳಿಯ ಮನೆ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಶಿವಮೊಗ್ಗ
Languages
 • OfficialKannada
ಸಮಯ ವಲಯಯುಟಿಸಿ+5:30 (IST)
ಪಿನ್
577 126
ವಾಹನ ನೋಂದಣಿKA-14

ಕುಪ್ಪಳಿ - ಕರ್ನಾಟಕಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಒಂದು ಹಳ್ಳಿ. ರಾಷ್ಟ್ರಕವಿ ಕುವೆಂಪು ಅವರು ಜನಿಸಿದ ಊರು. ಇಲ್ಲಿ ಕುವೆಂಪು ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಲಾಗಿದೆ. ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಾಣವಾಗಿದ್ದು ಒಂದು ಪ್ರವಾಸಿ ಸ್ಥಳವಾಗಿಯೂ ರೂಪುಗೊಂಡಿದೆ.ಈ ಕುಪ್ಪಳಿಯ ಹತ್ತಿರ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಇದೆ. ದೇಶಿ ವಸ್ತು ಸಂಗ್ರಹಾಲಯ ಕೂಡ ಇದೆ. ಇದು ಕುಪ್ಪಳಿಯಿಂದ ಗಡಿಕಲ್ ನಡುವೆ ಮುಖ್ಯ ರಸ್ತೆಯಲ್ಲಿದೆ.

ಕುಪ್ಪಳಿಯಲ್ಲಿ ನೋಡುವ ಸ್ಥಳಗಳು ಇಂತಿವೆ.

ಕವಿಮನೆ[ಬದಲಾಯಿಸಿ]

೧೫೦ ವರ್ಷಗಳಷ್ಟು ಹಳೆಯದಾದ ಕುವೆಂಪು ಅವರು ಬೆಳೆದ ಮನೆಯನ್ನು ೨೦೦೧ ರಲ್ಲಿ ಪುನರ್ ನಿರ್ಮಿಸಲಾಯಿತು. ಮಲೆನಾಡಿನ ವಾಸ್ತುಶಿಲ್ಪಕ್ಕೆ ಉದಾಹರಣೆಯಾಗಿರುವ ಮನೆಗೆ ಎಳ್ಳಷ್ಟು ಕುಂದು ಬರದೆ ಕಣ್ಮನ ಸೆಳೆಯುತ್ತಿದೆ. ಮನೆಯ ಎದುರಿನ ಹೂದೋಟ ಹುಲ್ಲುಹಾಸು ಮೊದಲಿಗೆ ನಮ್ಮನ್ನು ಸ್ವಾಗತಿಸುತ್ತದೆ. ಮುಖ್ಯದ್ವಾರದ ಮೂಲಕ ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮೂರು ದಿಕ್ಕಿಗೂ ಚೌಕಿಗಳುಳ್ಳ ಮೂರು ಅಂತಸ್ತಿನ ಹೆಮ್ಮನೆಯ ಒಳಾಂಗಣದ ದರ್ಶನವಾಗುತ್ತದೆ. ಅಂಗಳದ ನಡುವಿನ ತುಳಸಿ ಕಟ್ಟೆ ಗಮನ ಸೆಳೆಯುತ್ತದೆ. ಮನೆಯಲ್ಲಿ ದೊಡ್ಡ ಕಲಬಿಗಲು, ಕವಿ ಮದುವೆಯಾದ ಮಂಟಪ, ದಂಡಿಗೆ, ಕವಿಮನೆಯ ಹಳೆಯಬಾಗಿಲು ಮುಂತಾದ ದೊಡ್ಡ ವಸ್ತುಗಳನ್ನು ಇಡಲಾಗಿದೆ. ಇವುಗಳನ್ನು ನೋಡುತ್ತಾ ಮುಂದೆ ಸಾಗಿ ಎಡಕ್ಕಿರುವ ಬಾಗಿಲಿನಿಂದ ಆಚೆ ದಾಟಿದರೆ ಕವಿಯ ಅಜ್ಜಯ್ಯ ಅಭ್ಯಂಜನ ಮಾಡಿದಂಥ ಮಲೆನಾಡ ಬಚ್ಚಲು ಮನೆಯ ಮಾದರಿಯನ್ನು ನೋಡಬಹುದು. ಆಚೆ ಕಣ್ಣಾಡಿಸಿದರೆ ಕೆರೆ, ತೋಟ, ಕಾಡು, ನೀರಿನ ಝರಿ. ಮುಖ್ಯ ಮನೆಗೆ ಮುಂತುದಿಯಲ್ಲಿ ಮೂರು ಹಂತದ ಜಗುಲಿ ಇದೆ. ಇಲ್ಲಿರುವ ಮುಂಡಿಗೆಗಳು ಸುಂದರವಾದ ಕೆತ್ತನೆಯ ಕುಸುರಿ ಕೆಲಸದಿಂದ ಅಲಂಕೃತವಾಗಿವೆ. ಮೇಲ್ಛಾವಣಿಗೂ ವಿಶಿಷ್ಟ ವಾಸ್ತು ವಿನ್ಯಾಸದ ಪಕ್ಕಸಿಗಳನ್ನು ಬಳಸಲಾಗಿದೆ. ಮನೆಯ ತುಂಬೆಲ್ಲ ನೂರಾರು ಮರದ ಕಂಬಗಳದ್ದೆ ಕಾರುಬಾರು. ಹೊರ ಆವರಣದಲ್ಲೇ 4 ಕಂಬಗಳಿವೆ. ಮನೆಯ ಎಲ್ಲಾ ಭಾಗಗಳಲ್ಲಿ ದಪ್ಪ ಹಲಗೆಗಳ ನಾಗೊಂದಿಗೆಗಳಿವೆ. ಜಗುಲಿಯ ಬಲಭಾಗದಲ್ಲಿ ಮೇಜಿನ ಮೇಲೆ ಕವಿಯ ಅರ್ಧಾಕೃತಿಯ ಪ್ರತಿಮೆ ಇದೆ. ಹಿಂಭಾಗದ ಗೋಡೆಯಲ್ಲಿ ಕವಿ ಕಾಲನಕರೆಗೆ ಓಗೊಟ್ಟ ಕಾಲವನ್ನು ಸೂಚಿಸುವ ಸ್ತಬ್ಧವಾಗಿರುವ ಗಡಿಯಾರವಿದೆ. ಜಗುಲಿಯ ಎಡ ಭಾಗದಲ್ಲಿ ಮಂಚ, ಕುರ್ಚಿಗಳಿದ್ದು ಗೊದೆಗಳುನ್ತ ಕರಿಕೋಟು, ಕರಿಟೋಪಿ, ಕಂಬಳಿ ಮುಂತಾದವನ್ನು ನೇಲಿಸಲಾಗಿದೆ. ತಲೆ ತಗ್ಗಿಸಿ ಹೆಬ್ಬಾಗಿಲು ದಾಟಿ ಒಳನಡೆದರೆ ನಡುಮನೆ, ಅದರ ಬಲಕ್ಕೊಂದು ಚಿಕ್ಕ ಕೋಣೆ, ಎಡಕ್ಕೆ ಬಾಣಂತಿ ಕೋಣೆ, ಅದರಾಚೆ ಕದಿಮಾಡುಗಳಿವೆ. ನಡುಮನೆಯ ಗೋಡೆಗುಂಟ ವಿವಿಧ ನಿತ್ಯ ಉಪಯೋಗಿಸುತ್ತಿದ್ದ ವಸ್ತುಗಳನ್ನು ಜೋಡಿಸಲಾಗಿದೆ. ಬಾಣಂತಿಕೋಣೆ ತಾಯಿಯ ಹಾಸಿಗೆ ಮಗುವಿನ ತೊಟ್ಟಿಲುಗಳಿಂದ ಸಜ್ಜಾಗಿದೆ. ಮುಂದಿನ ಕಡಿಮಾಡಿನ ಗೋಡೆಗಳ ಮೇಲೆ ಕವಿ ಕುವೆಂಪುರವರ ಕುಟುಂಬದ ಸದಸ್ಯರ ಮತ್ತು ಅವರ ಹತ್ತಿರದ ಬಂಧುಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ.

ನಡುಮನೆಯಿಂದ ನೇರ ಒಳನಡೆದರೆ ಅಡುಗೆಮನೆ, ಎಡಭಾಗದಲ್ಲಿ ಒಲೆಸರ, ಹೊಗೆ ಕಂಡಿ , ಗೋಡೆಗಳ ಪಕ್ಕ ಜೋಡಿಸಿಟ್ಟ ಕವಿಮನೆಯ ಪಾತ್ರೆಗಳು, ಮಡಿಕೆ, ಮಣ್ಣಿನ ಸರಗೋಲು, ಕಡಗೋಲು ಕಂಬ, ಅನ್ನ ಬಸಿಯುವ ಬಾಗುಮರಿಗೆ, ಕೊಚ್ಚು ಕೊರಡಾದಿಯಾದ ಹಲವು ಹತ್ತು ಸಲಕರಣೆಗಳನ್ನು ನೋಡಬಹುದು. ಇಲ್ಲಿಂದಲೇ ಉಪ್ಪರಿಗೆಗೆ ಮರದ ಏಣಿ ಏರಿ ಹೋದರೆ ಅಲ್ಲಿ ಸುತ್ತುವರಿದ ಪ್ರಾಂಗಣ. ಅದರಲ್ಲೂ ಹಲವು ಅಪರೂಪದ ವಸ್ತುಗಳ ಜೋಡಣೆ. ಗೋಡೆಗಳ ಮೇಲೆ ಕವಿಶೈಲದ, ಕುಪ್ಪಳ್ಳಿ ಸುತ್ತಲ ಪ್ರಕೃತಿ ಚಿತ್ರಗಳ ಪ್ರದರ್ಶನ. ಇವನ್ನ ನೋಡುತ್ತ ನಡುವಿನ ಕೋಣೆಯನ್ನು ಹೊಕ್ಕರೆ ಅಲ್ಲಿ ಗಾಜಿನ ಪೆಟ್ಟಿಗೆಗಳಲ್ಲಿ ಕವಿ ಬಳಸುತ್ತಿದ್ದ ಪೆನ್ನು, ಬಟ್ಟೆ, ಕನ್ನಡಕ, ಊರುಗೋಲು, ಚಪ್ಪಲಿ,ಅವರ ತಲೆಗೂದಲು ಮುಂತಾದವು, ಕವಿ ಪಡೆದ ಪ್ರಶಸ್ತಿ ಪತ್ರಗಳು, ಪಳಕಗಳು, ಸ್ಮರಣಿಕೆಗಳು ಪೂಜಾ ಸಾಮಾಗ್ರಿಗಳು ಇವನ್ನೆಲ್ಲ ಸುರಕ್ಷಿತವಾಗಿ ಇದಲಾಗಿದೆ. ನಡುವಿನ ಕೊಣೆಯಿಂದ ಮತ್ತೊಂದು ಮಹಡಿಗೆ ಏಣಿಯ ಮೆಟ್ಟಿಲೇರಿ ಬಂದರೆ ಅಲ್ಲಿಯೂ ಗಾಜಿನ ಪೆಟ್ಟಿಗೆಗಳೊಳಗೆ ಕುವೆಂಪು ಅವರ ಸಾಹಿತ್ಯ ಕೃತಿಗಳ ಮೊದಲ ಆವೃತ್ತಿ, ಪರಿಷ್ಕೃತ ಆಧುನಿಕ ಆವೃತ್ತಿಗಳು, ಕವಿಯ ಬಗ್ಗೆ ಇತರ ಲೇಖಕರು ಬರೆದ ಸಾಹಿತ್ಯ ಕೃತಿಗಳನ್ನು ಪ್ರದರ್ಶಿಸಲಾಗಿದೆ. ಸುತ್ತ ಗೋಡೆಗಳಲ್ಲಿ ಕವಿ ಅನೇಕ ಪ್ರಶಸ್ತಿಗಳನ್ನು ಪಡೆದ, ವಿವಿಧ ಗಣ್ಯರು ಅವುಗಳನ್ನು ನೀಡುತ್ತಿರುವ ಸಂದರ್ಭದ ಛಾಯಾಚಿತ್ರಗಳನ್ನು ಇಡಲಾಗಿದೆ. ಕೆಳಗಿಳಿದು ನಿಜಮನೆಯ ಎಡಭಾಗದ ಮತ್ತು ಹಿಂಭಾಗದ ಕಡಿಮಾದುಗಳಲ್ಲಿ ವ್ಯವಸ್ಠೆಗೊಳಿಸಿರುವ ಛಾಯಾಚಿತ್ರಗಳ ಪ್ರದರ್ಶನಕ್ಕೆ ಭೇಟಿ ನೀಡಬಹುದು. ಇಲ್ಲಿ ಕವಿಯ ಮತ್ತು ಅವರ ಒಡನಾಡಿಗಳ ಸ್ಮರಣೀಯ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಡೀ ಮನೆಯನ್ನು ನಾವು ಸುತ್ತುವಾಗ ಕಲ್ಲಿನಲ್ಲಿ ಕೆತ್ತಿ ಗೋಡೆಗಳಿಗೆ ಲಗತ್ತಿಸಿರುವ ಕವಿ ಸಂದೇಶಗಳನ್ನು ಸಾರುವ ಸೂಕ್ತಿಗಳನ್ನು ನೋಡುತ್ತೇವೆ. ನಮ್ಮ ಕಿವಿಯ ಮೇಲೆ ಕುವೆಂಪು ಕವಿತೆಗಳ ಸುಮಧುರ ಸಂಗೀತ ಬೀಳುತ್ತಿರುತ್ತದೆ. ವೀಕ್ಷಕ ಮನೆಯ ಯಾವ ಭಾಗದಲ್ಲಿದ್ದರೂ ಇದು ಅವನಿಗೆ ಕೇಳಿಬರುವಂತೆ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿದೆ. ಕುವೆಂಪು ಅಭಿಮಾನಿಗಳಿಗಾಗಿ ಎಡಚೌಕಿಯ ತುದಿಯ ಚಿಕ್ಕಕೋಣೆಯಲ್ಲಿ ಕುವೆಂಪು ಕೃತಿಗಳು, ಅವರ ಕುರಿತ ಪುಸ್ತಕ, ಧ್ವನಿ ಮುದ್ರಿಕೆ, ದೃಶ್ಯಮುದ್ರಿಕೆ, ಛಾಯಾಚಿತ್ರ ಮುಂತಾದವುಗಳ ಸೌಕರ್ಯವಿದೆ.

ಕೃಷಿ ಪರಿಕರಗಳ ವಸ್ತು ಸಂಗ್ರಹಾಲಯ[ಬದಲಾಯಿಸಿ]

ಕವಿಮನೆಯ ಹೊರಗೆ ಉದ್ಯಾನದ ಒಂದು ಬದಿಯಲ್ಲಿ ಮಲೆನಾಡಿಗರ ಕೃಷಿಗೆ ಸಂಬಂಧಿಸಿದ ನೇಗಿಲು, ಗಾಡಿ, ಪಣತ, ಕೊರಡು, ಕುಂಟೆ, ಕಣ್ಣಿ ಮುಂತಾದ ವಸ್ತುಗಳ ಪುಟ ಸಂಗ್ರಹಾಲಯವಿದೆ. ಇದರ ಪಕ್ಕದಿಂದಲೇ ಕವಿಶೈಲಕ್ಕೆ ಹೋಗುವ ಕಲ್ಲು ಹಾಸಿನ ಕಾಲುದಾರಿ ಆರಂಭವಾಗುತ್ತದೆ. ಕವಿಶೈಲಕ್ಕೆ ವಾಹನದ ಮೂಲಕವೂ ಹೊಗಬಹುದು.

ಪೊ ಚಿಂ ತೇ

ಕವಿಶೈಲ[ಬದಲಾಯಿಸಿ]

ಕವಿ ಮನೆಯ ಹಿಮ್ಮಗ್ಗುಲಲ್ಲಿರುವ ಬೆಟ್ಟಕ್ಕೆ ಹೋಗುವ ದಾರಿಯುದ್ದಕ್ಕೂ ಅಲ್ಲಲ್ಲಿ ಕಲ್ಲು ಮಂಟಪಗಳಿವೆ. ಗುಡ್ಡವನ್ನು ತಲುಪುತ್ತಿದ್ದಂತೆ ಕವಿ ಸಮಾಧಿ ಕಾಣಸಿಗುತ್ತದೆ. ಈ ತಾಣದ ಸುತ್ತಲೂ ಹಸಿರು ಹಾಸನ್ನು ಬೆಳೆಸಲಾಗಿದೆ. ಇಲ್ಲಿ ದೊಡ್ಡ ವೃತ್ತಾಕಾರದಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಜೋಡಿಸಿ ನಿಲ್ಲಿಸಿರುವ ಶಿಲಾಸ್ಮಾರಕಗಳಿವೆ. ಇವು ಈ ಪರಿಸರವನ್ನು ಕಲಾತ್ಮಕಗೊಳಿಸಿವೆ. ಇದನ್ನು ದಾಟಿ ನಡೆದರೆ ಗುಡ್ಡದ ನೆತ್ತಿಯಲ್ಲಿ ಚಿಕ್ಕದೊಂದು ಹಾಸುಬಂಡೆ. ಅದರ ಮೇಲೆ ಟಿ.ಎಸ್.ವಿ, ಬಿ.ಎಮ್.ಶ್ರಿ , ಕುವೆಂಪು, ಪೊ.ಚ.ತೆ ಎಂಬ ಅಕ್ಷರಗಳು ಕೆತ್ತಲ್ಪಟ್ಟಿವೆ. ಆ ಮಹನೀಯರೆಲ್ಲ ಇಲ್ಲಿ ಬಂದಿದ್ದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿಂತು ಪೂರ್ವ ದಿಸೆಯನ್ನು ವೀಕ್ಷಿಸಿದರೆ ಗುಡ್ಡಗಳ ಸಾಲು ಸಾಲು, ಹಸಿರುವನರಾಜಿ, ದಿಗಂತ ವಿಸ್ತಾರ ನೀಲಾಕಾಶ, ನೋಡಿ ಕನ್ಮಣಿಯದಂಥ ರಮಣೀಯ ದೃಶ್ಯ ಕಾಣುತ್ತದೆ. ಕವಿ ಇಲ್ಲಿ ಕುಳಿತು ರಚಿಸಿದ ಸ್ಫೂರ್ತಿ ತಾಣವಿದು. ಇದಕ್ಕೆ ಅವರೇ ಕೊಟ್ಟ ಹೆಸರು ಕವಿಶೈಲ. ಇಲ್ಲಿಂದ ಸೂರ್ಯಾಸ್ತವನ್ನು ನೋಡಬಹುದು. ದೂರದ ಕುಂದಾದ್ರಿ, ಕೊಡಚಾದ್ರಿ ಬೆಟ್ಡಗಳನ್ನೂ ಕಾಣಬಹುದು.

ಕವಿ ಸಮಾಧಿ
ಕವಿಶೈಲ

ತೇಜಸ್ವಿ ಸ್ಮಾರಕ[ಬದಲಾಯಿಸಿ]

ಬೆಟ್ಟವನ್ನು ತಾರು ರಸ್ತೆಯ ಮೂಲಕ ಇಳಿದು ಬಂದರೆ ಅಡ್ಡರಸ್ತೆಗೆ ಸೇರುವಲ್ಲಿ ಎದುರಿಗೆ, ಕವಿಶೈಲದ ತಪ್ಪಲಿನಲ್ಲಿ, ಕವಿಪುತ್ರ ಪೂರ್ಣಚಂದ್ರ ತೇಜಸ್ವಿಯವರ ಸ್ಮಾರಕವಿದೆ. ತೇಜಸ್ವಿಯವರ ಅಂತ್ಯ ಸಂಸ್ಕಾರ ಮಾಡಿದ ಈ ಸ್ಥಳದಲ್ಲಿ ಕಲಾವಿದ ಕೆ.ಟಿ.ಶಿವಪ್ರಸಾದರ ಕಲ್ಪನೆ ಕಲಾಕೃತಿಯಾಗಿ ಅರಳಿನಿಂತಿದೆ.

ತೇಜಸ್ವಿ ಸ್ಮಾರಕ

ಶತಮಾನೋತ್ಸವ ಭವನ[ಬದಲಾಯಿಸಿ]

ಮಲೆನಾಡ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿತವಾಗಿರುವ ಕಟ್ಟಡವೇ ಶತಮಾನೋತ್ಸವ ಭವನ. ಕವಿಯ ಜನ್ಮಶತಾಬ್ದಿಯ ಸ್ಮಾರಕವಾಗಿ ೨೦೦೪ ರಲ್ಲಿ ಈ ಬಹೂಪಯೊಗಿ ಕಟ್ಟಡವನ್ನು ಕಟ್ಟಲಾಗಿದೆ. ಕಟ್ಟಡದೆದುರಿನ ಇಳಿಜಾರನ್ನು ಬಯಲು ರಂಗವನ್ನಾಗಿ ಮಾಡಲಾಗಿದೆ. ಹಂಪಿ ಕನ್ನಡ ವಿ.ವಿ.ಯ ಅಧ್ಯಯನ ಕೇಂದ್ರ ಇಲ್ಲಿ ಕೆಲಸ ಮಾಡುತ್ತಿದೆ. ಒಳನಡೆದರೆ ವಿಶಾಲ ತೊಟ್ಟಿ, ಎದುರಿಗೆ ಹೇಮಾಂಗಣ, ನೇಪಥ್ಯ, ದ್ವನಿ ಬೆಳಕಿನ ವ್ಯವಸ್ಥೆ ಹೊಂದಿ ಸಭೆ, ಗೋಷ್ಠಿ, ನಾಟ್ಯ, ನಾಟಕಗಳಿಗೆ ಅನುಕೂಲತೆ ಒದಗಿಸಿದೆ. ಬಲಭಾಗದ ಚೌಕಿಯ ಅರ್ಧ ಭಾಗದಲ್ಲಿ ಸುಸಜ್ಜಿತ ಗ್ರಂಥಾಲಯವಿದೆ. ವಸತಿಗೆ ಮುಂಚಿತವಾಗಿ ಕಾದಿರಿಸುವ ಸೌಲಭ್ಯವು ಇದೆ. ಕುವೆಂಪು ತತ್ವ ಆದರ್ಶಗಳನ್ನು ಒಪ್ಪಿ ಮಂತ್ರ ಮಾಂಗಲ್ಯ ವಿಧಾನದಲ್ಲಿ ಮದುವೆಯಾಗಲಿಚ್ಚಿಸುವವರಿಗೆ ಹೇಮಾಂಗಣದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶತಮಾನೋತ್ಸವ ಭವನ

ಕಲಾನಿಕೇತನ[ಬದಲಾಯಿಸಿ]

ಶತಮಾನೋತ್ಸವ ಭವನದ ಆವರಣದೊಳಗೆ ಸ್ವಲ್ಪ ಮುಂದೆ ಹೋದರೆ ಕಲಾನಿಕೇತನವಿದೆ. ಈ ಹೆಂಚಿನ ಮನೆಯಂಗಳದಲ್ಲಿ ನಿಂತು ಶಿಲ್ಪಕಲಾ ಸಾಕ್ಷಾತ್ಕಾರಗಳಾಗಿ ಕಾನೂರು ಸುಬ್ಬಮ್ಮ (ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ) ಮತ್ತು ನಾಯಿ ಗುತ್ತಿ (ಮಲೆಗಳಲ್ಲಿ ಮಧುಮಗಳು ಕಾದಂಬರಿ) ನಮ್ಮನ್ನು ಸ್ವಾಗತಿಸುತ್ತಾರೆ. ಮನೆಯ ಗೋಡೆಗಳ ಮೇಲೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕ್ಯಾಮಾರದಲ್ಲಿ ತೆಗೆದ ಹಕ್ಕಿಚಿತ್ರಗಳನ್ನು, ಕುವೆಂಪು ಕೃತಿಗಳನ್ನಾಧರಿಸಿ ರಚಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ.ನಿಕೇತನದ ನಡು ಕೋಣೆಯನ್ನು ಕುವೆಂಪು ನಾಟಕಗಳಿಂದ ಆಯ್ದ ದೃಶ್ಯಾವಳಿಗಳ ಚಿತ್ರಗಳಿಗೆ ಮೀಸಲಿಡಲಾಗಿದೆ. ಹೀಗೆ ಇಡೀ ಮನೆ ಚಿತ್ರಶಾಲೆಯಾಗಿ ಆಕಷಿ೯ಸುತ್ತದೆ. ನಡು ನಡುವೆ ಪ್ರಕೃತಿ ಕುರಿತ ಕವಿಯ ಸುಂದರ ಕವಿತೆಗಳ ನೆಡುಗಲ್ಲುಗಳಿವೆ.

ಕುವೆಂಪು ಸ್ಮಾರಕ ಅರಣ್ಯ[ಬದಲಾಯಿಸಿ]

ಕವಿಮನೆಗೆ ಹೊಂದಿಕೊಂಡ ೩೨೦೦ ಎಕರೆ ಅರಣ್ಯವನ್ನು ಸರ್ಕಾರ ಕುವೆಂಪು ಸ್ಮಾರಕ ಅರನ್ಯವೆಂದು ಘೋಷಿಸಿದೆ. ಇದನ್ನು ಅರಣ್ಯ ಇಲಾಖೆಯು ಸಂರಕ್ಷಿಸುತ್ತಿದೆ. ಇಲ್ಲಿ ಪಶ್ಚಿಮಘಟ್ಟಗಳ ನಿತ್ಯ ಹರಿದ್ವರ್ಣದ ಕಾಡುಗಳ ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿವೆ. ಅವುಗಳ ಅಧ್ಯಯನ ಮತ್ತು ಚಾರಣಕ್ಕೆ ಅವಕಾಶವಿರುತ್ತದೆ.

ದೇಸಿ ವಸ್ತು ಸಂಗ್ರಹಾಲಯ[ಬದಲಾಯಿಸಿ]

ಕವಿಮನೆಯಿಂದ ೨ ಕಿ. ಮೀ ದೂರದಲ್ಲಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲಿ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳ ಪಾರಂಪರಿಕ ಜೀವನಕ್ರಮವನ್ನು ಬಿಂಬಿಸುವ ವಸ್ತು ಸಂಗ್ರಹಾಲಯ ಇದೆ. ಇಲ್ಲಿರುವ ವಸ್ತುಗಳು ಕುವೆಂಪು ಚಿತ್ರಿಸಿರುವ ಮಲೆನಾಡಿನ ಜೀವನ ಹಾಗೂ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿದೆ. ಮಲೆ

ಈ ದೄಶ್ಯ ಚಿತ್ರಣವನ್ನು ವೀಕ್ಷಿಸಿ http://www.weedioh.com/Video.aspx?VideoId=2479 Archived 2012-03-13 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು[ಬದಲಾಯಿಸಿ]


"https://kn.wikipedia.org/w/index.php?title=ಕುಪ್ಪಳಿ&oldid=1193140" ಇಂದ ಪಡೆಯಲ್ಪಟ್ಟಿದೆ