ಕುಡುಗೋಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಡುಗೋಲು ಕೈಯಿಂದ ಬಳಸಲು ವಿಧವಿಧವಾದ ಬಾಗಿದ ಅಲಗುಗಳೊಂದಿಗೆ ವಿನ್ಯಾಸಗೊಳಿಸಲಾಗಿರುವ ಒಂದು ಕೃಷಿ ಉಪಕರಣ. ಇದನ್ನು ಸಾಮಾನ್ಯವಾಗಿ ಧಾನ್ಯ ಬೆಳೆಗಳ ಕಟಾವಿಗಾಗಿ ಅಥವಾ ಕೊಯ್ಲಿಗಾಗಿ, ಅಥವಾ ಮುಖ್ಯವಾಗಿ ಜಾನುವಾರುಗಳಿಗೆ ಆಹಾರವಾಗಿ ನೀಡಲು ರಸವತ್ತಾದ ಮೇವನ್ನು (ಹಸಿಯಾಗಿ ಕತ್ತರಿಸಿದ್ದು ಅಥವಾ ಹುಲ್ಲಾಗಿ ಒಣಗಿಸಿದ್ದು) ಕತ್ತರಿಸಲು ಬಳಸಲಾಗುತ್ತದೆ. ಕಬ್ಬಿಣ ಯುಗದ ಆರಂಭದಿಂದ, ಕುಡುಗೋಲಿನ ನೂರಾರು ಪ್ರದೇಶ ನಿರ್ದಿಷ್ಟ ರೂಪಾಂತರಗಳು ವಿಕಸನಗೊಂಡಿವೆ. ಮೊದಲು ಇವು ಕಬ್ಬಿಣದ್ದಾಗಿರುತ್ತಿದ್ದವು, ನಂತರ ಉಕ್ಕಿನವು ಆಗಿರುತ್ತಿದ್ದವು. ಅನೇಕ ಸಂಸ್ಕೃತಿಗಳಾದ್ಯಂತ ಕುಡುಗೋಲು ಬಗೆಗಳ ಈ ಭಾರಿ ವಿವಿಧತೆಯನ್ನು ನಯವಾದ ಮತ್ತು ದಂತುರೀಕೃತ ಅಲಗುಗಳೆಂದು ವಿಭಜಿಸಬಹುದು. ಸ್ವಲ್ಪಮಟ್ಟಿಗೆ ಭಿನ್ನ ತಂತ್ರಗಳನ್ನು ಬಳಸಿ ಹಸಿರು ಹುಲ್ಲು ಅಥವಾ ಪಕ್ವವಾದ ದವಸ ಧಾನ್ಯಗಳನ್ನು ಕತ್ತರಿಸಲು ಇವೆರಡನ್ನೂ ಬಳಸಬಹುದು. ಪ್ರಾಗೈತಿಹಾಸಿಕ ಕುಡುಗೋಲುಗಳಲ್ಲಿ ಹುಟ್ಟಿಕೊಂಡ ದಂತುರೀಕೃತ ಅಲಗು ಧಾನ್ಯದ ಕೊಯ್ಲಿನಲ್ಲಿ ಈಗಲೂ ಪ್ರಭಾವಯುತವಾಗಿದೆ ಮತ್ತು ಅಧುನಿಕ ಧಾನ್ಯ ಕಟಾವಿನ ಯಂತ್ರಗಳು ಹಾಗೂ ಕೆಲವು ಅಡುಗೆ ಚಾಕುಗಳಲ್ಲೂ ಕಂಡುಬರುತ್ತದೆ.