ವಿಷಯಕ್ಕೆ ಹೋಗು

ಕುಂಭಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧. ಪೂರಕ ಪ್ರಾಣಾಯಾಮ ೨. ಕುಂಭಕ ೩.ರೇಚಕ

ಪ್ರಾಣಾಯಾಮಕ್ಕೆ ಪೂರಕ, ಕುಂಭಕ ಮತ್ತು ರೇಚಕಗಳೆಂದು ಮೂರು ಕ್ರಿಯೆಗಳಿವೆಯೆಂದು ಯಾಜ್ಞವಲ್ಕ್ಯ ಸ್ಮಂತಿ ಹೇಳುತ್ತದೆ. ವಾಯುವನ್ನು ಮೂಗಿನ ಮೂಲಕ ಒಳಗೆ ತೆಗೆದುಕೊಳ್ಳುವುದಕ್ಕೆ ಪೂರಕವೆಂದೂ ಹಾಗೆ ತೆಗೆದುಕೊಂಡ ವಾಯುವನ್ನು ಒಳಗೇ ತಡೆಹಿಡಿಯುವುದಕ್ಕೆ ಕುಂಭಕವೆಂತಲೂ ಅನಂತರ ಅದನ್ನು ಹೊರಗೆ ಬಿಡುವುದಕ್ಕೆ ರೇಚಕವೆಂತಲೂ ಕರೆಯುವರು.

ರೂಢಿ[ಬದಲಾಯಿಸಿ]

ಪತಂಜಲಿ ಮಹರ್ಷಿ ಪ್ರೋಕ್ತವಾದ ಯೋಗದರ್ಶನದ ಪ್ರಕಾರ ಅಷ್ಟಾಯೋಗದ ನಾಲ್ಕನೆಯ ಅಂಗವಾದ ಪ್ರಾಣಾಯಾಮದ ಒಂದು ಕ್ರಿಯೆ. ಪ್ರಾಣಾಯಾಮ ಎಂದರೆ ಶ್ವಾಸೋಚ್ಚ್ವಾಸಗಳ ಮೂಲಕ ಉಸಿರಾಡುವ ವಾಯುವನ್ನು ನಮ್ಮ ಅಂಕೆಯಲ್ಲಿಟ್ಟಿಕೊಳ್ಳುವುದು. ಯೋಗ ಸಾಧನಾಸಕ್ತರು ಯಮ, ನಿಯಮ ಮತ್ತು ಆಸನ ಎಂಬ ಮೂರು ಯೋಗಾಂಗಗಳನ್ನು ಸಿದ್ಧಿಸಿಕೊಂಡ ಮೇಲೆ ನಾಲ್ಕನೆಯದಾದ ಪ್ರಾಣಾಯಾಮವನ್ನು ಅಭ್ಯಸಿಸಬೇಕು.

ಮಾಡುವ ವಿಧಾನ ಹಾಗೂ ಉಪಯೋಗ[ಬದಲಾಯಿಸಿ]

ಮೇಲಿನ ಮೂರು ಕ್ರಿಯೆಗಳಲ್ಲಿ ಕುಂಭಕ ಸ್ಥಿತಿಯನ್ನು ಅಂದರೆ ಕುಂಭದಂತೆ ನಿಶ್ಚಲ ಸ್ಥಿತಿಯನ್ನು ಯೋಗಾಭ್ಯಾಸಿಗಳ ಉದ್ದೇಶ. ಈ ಸ್ಥಿತಿಯಲ್ಲಿ ಶ್ವಾಸೋಚ್ಚ್ವಾಸವಿಲ್ಲದುದರಿಂದ ಶರೀರ ಮತ್ತು ಮನಸ್ಸು ನಿಶ್ಚಲವಾಗಿರುತ್ತವೆ. ವಾಯಚಲನೆಯಿಂದ ಚಿತ್ತ ಚಲಿಸುತ್ತದೆ. ವಾಯು ನಿಶ್ಚಲವಾಗಿದ್ದರೆ ಚಿತ್ತವೂ ನಿಶ್ಚಲವಾಗಿರುತ್ತದೆ. ಉಚ್ಚ್ವಾಸ ಮಾಡಿದ ವಾಯುವನ್ನು ಶ್ವಾಸಕೋಶಗಳೊಳಗೆ ತಡೆದು ನಿಲ್ಲಿಸುವುದು ಒಂದು ಬಗೆಯ ಕುಂಭಕ. ಇದಕ್ಕೆ ಸಹಿತಕುಂಭಕವೆನ್ನುವರು. ಗಾಳಿಯನ್ನು ಹೊರಗೆ ರೇಚಿಸಿದ ಮೇಲೆ ಮತ್ತೆ ಒಳಗೆ ತೆಗೆದುಕೊಳ್ಳದೆ ಶ್ವಾಸಕೋಶಗಳನ್ನು ಒಂದು ವಿಧವಾದ ಶೂನ್ಯಸ್ಥಿತಿಯಲ್ಲಿಡುವುದು ಕೇವಲ ಕುಂಭಕವೆಂಬ ಎರಡನೆಯ ಬಗೆ. ಪ್ರಾಣಗತಿಯನ್ನು ರೋಧಮಾಡಿ ನಿಶ್ಚಲ ಸ್ಥಿತಿಯನ್ನು ಸಾಧಿಸಿಕೊಳ್ಳುವುದೇ ಯೋಗಿಗಳ ಗುರಿ.

ಕುಂಭಕದಲ್ಲಿರುವ ಬಗೆಗಳು[ಬದಲಾಯಿಸಿ]

ಕುಂಭಕದಲ್ಲಿ ಸೂರ್ಯಭೇದನ, ಉಜ್ಜಾಯೀ, ಸೀತ್ಕಾರೀ, ಸೀತಲೀ, ಭಸ್ತ್ರಿಕಾ, ಭ್ರಾಮರೀ, ಮೂಚ್ರ್ಫಾ ಮತ್ತು ಪ್ಲಾವಿನೀ ಎಂಬುದಾಗಿ ಎಂಟು ಬಗೆಯಾಗಿರುತ್ತದೆಯೆಂದು ಹಠಯೋಗ ಪ್ರದೀಪಿಕೆಯಲ್ಲಿ ಹೇಳಿದೆ. ಆದ್ದರಿಂದ ಕುಂಭಕವೇ ಪ್ರಾಣಾಯಾಮದಲ್ಲಿ ಬಹು ಮುಖ್ಯವಾದ ಕ್ರಿಯೆ, ಸ್ಥಿತಿ. ಮೊದಮೊದಲು ಸಹಿತ ಕುಂಭಕವನ್ನು ಅಭ್ಯಾಸ ಮಾಡಿ ಕ್ರಮಕ್ರಮವಾಗಿ ಕೇವಲ ಕುಂಭಕವನ್ನು ಸಿದ್ಧಿಸಿಕೊಂಡ ಯೋಗಿಗೆ ರಾಜಯೋಗ ಪದ ಲಭ್ಯವಾಗುತ್ತದೆ. ನಿತ್ಯತೃಪ್ತ ಸ್ಥಿತಿಯನ್ನು ಆರ್ಜಿಸಿಕೊಂಡ ಆ ಯೋಗಿಗೆ ಲೋಕದಲ್ಲಿ ದುರ್ಲಭವಾದುದಿರುವುದಿಲ್ಲ.

ಪೂರಕ, ಕುಂಭಕ ಮತ್ತು ರೇಚಕಗಳನ್ನು ಮಾಡುವ ಕ್ರಮ[ಬದಲಾಯಿಸಿ]

ಈ ಮೂರು ಕ್ರಿಯೆಗಳೂ ಒಟ್ಟಿಗೆ ಸೇರಿ ಒಂದು ಪ್ರಾಣಾಯಾಮವಾಗುತ್ತದೆ. ಉದಾಹರಣೆಗೆ ನಾಲ್ಕು ಸೆಕೆಂಡುಗಳ ಕಾಲ ಶ್ವಾಸವನ್ನು ಒಳಗೆ ತೆಗೆದುಕೊಂಡು ಹದಿನಾರು ಸೆಕೆಂಡುಗಳು ಕುಂಭಕಮಾಡಿ ಆಮೇಲೆ ಎಂಟು ಸೆಕೆಂಡುಗಳ ಕಾಲ ನಿಧಾನವಾಗಿ ರೇಚಕ ಮಾಡಿದರೆ ಅಲ್ಲಿಗೆ ಒಂದು ಪ್ರಾಣಾಯಾಮ ಮಾಡಿದಂತಾಯಿತು. ಇದೇ ಅತಿ ಕಡಿಮೆ ಕಾಲ ತೆಗೆದುಕೊಳ್ಳುವುದು ಕನಿಷ್ಟಪ್ರಾಣಾಯಾಮ. ಈ ಕಾಲವನ್ನು ಎಂಟು, ಮೂವತ್ತೆರಡು ಮತ್ತು ಹದಿನಾರು ಸೆಕೆಂಡುಗಳಿಗೆ ಪರಿಮಿತಗೊಳಿಸಿದರೆ ಉತ್ತಮ ಪ್ರಾಣಾಯಾಮವಾಗುವುದು.[೧]

ಅಡ್ಡ ಪರಿಣಾಮಗಳು[ಬದಲಾಯಿಸಿ]

ಆದರೆ ಹೀಗೆ ಪ್ರಾಣಾಯಾಮ ಮಾಡಬೇಕಾದರೆ ಮೇಲೆ ಸೂಚಿಸಿರುವಂತೆ ಯೋಗಾಸನಗಳ ಸಿದ್ಧಿಯಾಗಿರಬೇಕು. ಶರೀರದ ಮಾಂಸಖಂಡಗಳ ಮತ್ತು ಶ್ವಾಸಕೋಶಗಳ ಸಂಕೋಚನ, ವಿಕಾಸನ ಕ್ರಿಯೆಗಳನ್ನು ಸಾಧಿಸಿಕೊಳ್ಳಬೇಕು. ಇದಕ್ಕೆ ಮೂಲಬಂಧ, ಜಾಲಂಧರ ಬಂಧ ಮತ್ತು ಉದ್ಯಾನ (ಉಡ್ಯಾಣ) ಬಂಧ ಎಂಬ ಕ್ರಿಯೆಗಳು ಅನಿವಾರ್ಯ ಮತ್ತು ಅವಶ್ಯಕವಾಗಿ ಮಾಡಲೇಬೇಕು. ಇಲ್ಲದಿದ್ದರೆ ಕುಂಭ ಕಾದಿಕ್ರಿಯೆಗಳಿಂದ ಆಗಬೇಕಾದ ಸತ್ಪರಿಣಾಮಗಳಿಗೆ ಬದಲಾಗಿ ದುಷ್ಪರಿಣಾಮಗಳಿಗೆ ಪಕ್ಕಾಗಬೇಕಾದೀತು.

ಇನ್ನಷ್ಟು[ಬದಲಾಯಿಸಿ]

ಪ್ರಾಣಾಯಾಮ

ಉಲ್ಲೇಖ[ಬದಲಾಯಿಸಿ]

  1. [೧][ಶಾಶ್ವತವಾಗಿ ಮಡಿದ ಕೊಂಡಿ]ಉಸಿರಾಟದ ತಂತ್ರಗಳು-ಪ್ರಜಾವಾಣಿ
"https://kn.wikipedia.org/w/index.php?title=ಕುಂಭಕ&oldid=1066128" ಇಂದ ಪಡೆಯಲ್ಪಟ್ಟಿದೆ