ಕಿಸ್ ಆಫ಼್ ಲವ್
ಕಿಸ್ ಆಫ಼್ ಲವ್ (ಅಂದರೆ ಪ್ರೀತಿಯ ಮುತ್ತು) -ಇದು ನೈತಿಕ ಪೋಲಿಸ್ ಗಿರಿ ಯನ್ನು ವಿರೋಧಿಸಿ ಕೇರಳದಲ್ಲಿ ಆರಂಭವಾಗಿ ನಂತರ ಭಾರತದ ಉಳಿದ ಭಾಗಗಳಿಗೆ ಹರಡಿದ ಅಹಿಂಸಾತ್ಮಕ ಪ್ರತಿಭಟನೆ.
ಇದು ನವೆಂಬರ್ ೨, ೨೦೧೪ ರಂದು ಕೊಚಿನ್ ನ ಮೆರೀನ್ ಡ್ರೈವ್ ನಲ್ಲಿ ನೈತಿಕ ಪೋಲಿಸ್ ಗಿರಿಯನ್ನು ವಿರೋಧಿಸುವಂತೆ ಕೇರಳದ ಯುವಕರಿಗೆ ಅಂತರ್ಜಾಲದ ಫೇಸ್ಬುಕ್ ಪುಟವೊಂದು ಕರೆನೀಡುವುದರಿಂದ ಆರಂಭವಾಯಿತು. ಈ ಚಳುವಳಿಗೆ ೧,೪೩,೦೦೦ ಲೈಕ್ ಗಳಷ್ಟು ಭಾರೀ ಬೆಂಬಲ ದೊರಕಿತು. ಕೊಚ್ಚಿಯಲ್ಲಿನ ಪ್ರಾರಂಭಿಕ ಪ್ರತಿಭಟನೆಯ ನಂತರ ಅಂತಹುದೇ ಪ್ರತಿಭಟನೆಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಏರ್ಪಡಿಸಲಾಯಿತು. ಅದಕ್ಕೆ ಭಾರತೀಯ ಜನತಾ ಯುವ ಮೋರ್ಚಾ, ವಿಶ್ವ ಹಿಂದೂ ಪರಿಷತ್, ಶಿವಸೇನಾ, ಬಜರಂಗದಳ, ಹಿಂದೂ ಸೇನಾ, ಕೇರಳ ವಿದ್ಯಾರ್ಥಿ ಸಂಘದ ಒಂದು ಅಂಗ ಹೀಗೆ ಅನೇಕ ಧಾರ್ಮಿಕ ಮರತ್ತು ರಾಜಕೀಯ ಸಂಘಟನೆಗಳಿಂದ ವಿರೋಧ ಎದುರಾಯಿತು. ಬೇರೆ ಬೇರೆ ಸಂದರ್ಭಗಳಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಮತ್ತು ದೆಹಲಿಯ ಉಚ್ಚನ್ಯಾಯಾಲಯಗಳು ಸಾರ್ವಜನಿಕವಾಗಿ ಮುತ್ತಿಡುವುದು ಅಶ್ಲೀಲ ಕೃತ್ಯವಲ್ಲ ಹಾಗೂ ಆ ಬಗ್ಗೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗದು ಎಂದು ಮೈಲಿಗಲ್ಲುಗಳೆನಿಸಿದ ನಿರ್ಣಯಗಳ ಮೂಲಕ ಸ್ಪಷ್ಟಪಡಿಸಿವೆ.