ಕಾಲನಿರ್ಣಯ ವಿಧಾನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗತಕಾಲ ಬಿಟ್ಟಿರುವ ಗುರುತುಗಳ ವೈಜ್ಞಾನಿಕ ಅಭ್ಯಾಸದಿಂದ ಕಾಲವನ್ನು ನಿರ್ಣಯಿಸುವ ಕೆಲವು ವಿಧಾನಗಳನ್ನು ಇಲ್ಲಿ ಚರ್ಚಿಸಿದೆ (ಡೇಟಿಂಗ್ ಮೆಥಡ್ಸ್). ಇವುಗಳಲ್ಲಿ ಅಂತರ್ಗತವಾಗಿರುವ ತತ್ತ್ವವಿಷ್ಟು: ಬದಲಾವಣೆಗೂ ಕಾಲಕ್ಕೂ ಒಂದು ನಿರ್ದಿಷ್ಟ ಸಂಬಂಧವಿದೆ. ವಿಜ್ಞಾನದ ವಿವಿಧ ಭಾಗಗಳ ನೆರವಿನಿಂದ ಆ ಸಂಬಂಧವನ್ನು ಪ್ರತ್ಯೇಕವಾಗಿ ತಿಳಿಯುವುದು ಸಾಧ್ಯವಾಗಿದೆ. ಬದಲಾವಣೆಯ ಮೊತ್ತ ತಿಳಿದಿದ್ದರೆ ಈ ಸಂಬಂಧವನ್ನು ಅದಕ್ಕೆ ಅನ್ವಯಿಸುವುದರ ಮೂಲಕ ಪರೋಕ್ಷವಾಗಿ ಕಾಲವನ್ನು ನಿರ್ಧರಿಸಬಹುದು. ಮುಂದೆ ಬರೆದಿರುವ ಹಲವಾರು ವಿಧಾನಗಳು ಈ ತತ್ತ್ವದ ಪ್ರಾಯೋಗಿಕ ನಿದರ್ಶನಗಳು.

ಭೂಮಿಯ ವಯಸ್ಸು[ಬದಲಾಯಿಸಿ]

ಭೂಮಿಯ ಆರಂಭದ ದಿವಸಗಳಲ್ಲಿ ಸಾಗರಗಳು ರೂಪುಗೊಳ್ಳುತ್ತಿದ್ದಂದು ಅವುಗಳ ನೀರು ಸಿಹಿಯಾಗಿಯೇ ಇತ್ತು. ಹಲವಾರು ವರ್ಷಗಳ ಪರ್ಯಂತ ನಿರಂತರವಾಗಿ ಸುರಿದ ಮಳೆಯ ನೀರು ನೆಲದ ಕೊರಕಲುಗಳಲ್ಲಿ, ತಗ್ಗುಗಳಲ್ಲಿ, ಬಿರುಕುಗಳಲ್ಲಿ, ಸಂಗೃಹಿತವಾಗಿ ಸಾಗರಗಳು ಆದವು. ಅಂದಿನ ಸಾಗರಗಳ ನೀರು ಸಿಹಿಯಾಗಿದ್ದುದಕ್ಕೆ ಆಧಾರಗಳು ಉಂಟು. ಮುಂದೆ ಸಮುದ್ರಗಳ ನೀರು ಕಾದು ಆವಿಯಾಗಿ ಮೋಡವಾಗಿ ಎಲ್ಲೆಲ್ಲೋ ಮಳೆಸುರಿದು, ಆ ನೀರು ನೆಲದ ಮೇಲೆ ಹರಿದು ಸಮುದ್ರಗಳನ್ನು  ಸೇರುವ ನೀರಿನ ನಿರಂತರ ಚಕ್ರದ ಆವರ್ತನೆ ಪ್ರಾರಂಭವಾಯಿತು. ನದಿಗಳ ಈ ಪ್ರವಾಹದಲ್ಲಿ ನೆಲದ ಲವಣಾಂಶಗಳು ನೀರಿನಲ್ಲಿ ಕರಗಿ ಸಾಗರಗರ್ಭವನ್ನು ಸೇರಿದುವು. ಆದ್ದರಿಂದ ಇಂದು ಸಾಗರಗಳಲ್ಲಿ ಸಂಗೃಹಿತವಾಗಿರುವ ಲವಣಮೊತ್ತವನ್ನೂ ನದಿಗಳಿಂದ ಸಾಗರಗಳಿಗೆ ಸಾಗಣೆಯಾಗಿರುವ ಲವಣದ ವಾರ್ಷಿಕ ದರವನ್ನೂ ತಿಳಿಯುವುದು ಸಾಧ್ಯವಾದರೆ, ಸಾಗರಗಳ ನೀರು ಹಿಂದೆ ಎಷ್ಟು ಸಿಹಿಯಾಗಿತ್ತು ಎಂದು ಸುಲಭವಾಗಿ ಗಣಿಸಬಹುದು. ಸಮುದ್ರಗಳಲ್ಲಿ ಇಂದು ಇರುವ ನೀರಿನ ಘನಗಾತ್ರ ಸುಮಾರು 1,500,000,000 ಘನ ಕಿಮಿ. ಅದರಲ್ಲಿ ಕರಗಿರುವ ಲವಣದ ಪ್ರಮಾಣ ಸುಮಾರು 3%ರಷ್ಟು. ಈ ಲವಣದ ತೂಕ 4x1016 ಟನ್ನುಗಳಿಗಿಂತಲೂ ಹೆಚ್ಚು. ಭೂವಿಜ್ಞಾನಿಗಳ ಅಂದಾಜಿನ ಮೇರೆಗೆ ನದಿಗಳು ಸಾಗರಗಳಿಗೆ ಪ್ರತಿವರ್ಷವೂ ಕೊಂಡೊಯ್ಯುತ್ತಿರುವ ಲವಣ ಪ್ರವಾಹದ ದರ ಸರಿಸುಮಾರಾಗಿ ಏಕ ಪ್ರಕಾರವಾಗಿತ್ತೆಂದು ಭಾವಿಸಿದರೆ ಸಿಹಿನೀರಿನ ಸಾಗರಗಳ ಉಗಮವಾದದ್ದು ಸುಮಾರು 108 ವರ್ಷಗಳ ಹಿಂದೆ ಎಂದು ಗಣನೆಯಿಂದ ತಿಳಿಯುತ್ತದೆ. ಆ ಘಟನೆಗಿಂತಲೂ ಎಷ್ಟೊ ಮೊದಲೇ ಭೂಮಿಯ ಜನನವಾಗಿರಬೇಕಾದದ್ದು ಸಹಜವಷ್ಟೆ. ಆದ್ದರಿಂದ ಭೂಮಿಯ ಹುಟ್ಟು 108 ವರ್ಷಗಳಿಗಿಂತಲೂ ಹಿಂದೆ ಆಗಿದೆ ಎಂದು ಒಂದು ನಿರ್ಣಯಕ್ಕೆ ಈ ವಿಧಾನದಿಂದ ಬರಬಹುದು.[೧]

ಪ್ರಾಚೀನ ಕಲ್ಲುಗಳ ಸೂಕ್ಷ್ಮ ಪರೀಕ್ಷೆ[ಬದಲಾಯಿಸಿ]

ಪ್ರಥಮತಃ ಕುದಿಯುವ ದ್ರವರೂಪದಲ್ಲಿದ್ದ ಭೂಮಿ ವಿಸರಣೆಯಿಂದ ಕ್ರಮೇಣ ಉಷ್ಣವನ್ನು ಕಳೆದುಕೊಂಡು ಹೆಪ್ಪುಗಟ್ಟಲು ಆರಂಭಿಸಿದಾಗ ಗಟ್ಟಿಯಾದ ಹೊರ ತೊಗಟೆರೂಪ ತಳೆಯಿತು. ಆ ಅವಧಿಯಲ್ಲಿ ಬಂಡೆಗಳು ಸಹ ಉಂಟಾದುವು. ಈ ಶಿಲೆಗಳಲ್ಲಿ ಒಂದು ವಿಧವಾದ ನೈಸರ್ಗಿಕ ಗಡಿಯಾರ ಹುದುಗಿದೆ. ವಿಕಿರಣಶೀಲ (ರೇಡಿಯೋ ಏಕ್ಟಿವ್) ಧಾತುಗಳೇ ಈ ಗಡಿಯಾರಗಳು. ಯುರೇನಿಯಂ ಮತ್ತು ಥೋರಿಯಂ ಎಂಬ ವಿಕಿರಣಶೀಲ ಧಾತುಗಳ ಅತಿ ಸೂಕ್ಷ್ಮ ಪರಿಮಾಣಗಳನ್ನು ಭೂಗರ್ಭದಿಂದ, ಹಲವಾರು ಸಲ ಸಮುದ್ರ ತಳದಿಂದ, ಪಡೆದ ವಿವಿಧ ಶಿಲೆಗಳಲ್ಲಿ ಗುರುತಿಸಲಾಗಿದೆ. ಈ ಧಾತುಗಳು ನೈಸರ್ಗಿಕವಾಗಿ ಕ್ಷಯಿಸುತ್ತವೆ. ಗೊತ್ತಿರುವ ಪರಿಮಾಣದ ಯುರೇನಿಯಂ ವಿಕಿರಣಕ್ರಿಯೆಯಿಂದ ಕ್ಷಯಿಸಿ ಮೂಲತೂಕದ ಅರ್ಧಕ್ಕೆ ಇಳಿಯಲು ಬೇಕಾಗುವ ಅವಧಿ 4.5x109 ವರ್ಷಗಳು; ಥೋರಿಯಂಗೆ ಇದು 13.9x109 ವರ್ಷಗಳು. ಈ ಅವಧಿಗೆ ವಿಕಿರಣಶೀಲ ಧಾತುವಿನ ಅರ್ಧಾಯು ಎಂದು ಹೆಸರು. ಅಂದರೆ 1 ಗ್ರಾಂ ಯುರೇನಿಯಂನ ತೂಕ 4.5x109 ವರ್ಷಗಳ ಅನಂತರ ಳಿ ಗ್ರಾಂ ಆಗುವುದೆಂದು ಇದರ ಅರ್ಥ. ಪುನಃ 4.51x109 ವರ್ಷಗಳು ಕಳೆದಾಗ ಉಳಿಯುವ ಯುರೇನಿಯಂ ಳಿ ಗ್ರಾಂ ನ ಅರ್ಧ ಭಾಗ ಅಂದರೆ ¼ ಗ್ರಾಂ. ಉಳಿದುದೆಲ್ಲ ಕ್ರಮೇಣ ಸೀಸವಾಗಿ ಮಾರ್ಪಾಡಾಗುವುದು. ಇದೇ ರೀತಿ 13.9x109 ವರ್ಷಗಳಾದ ಮೇಲೆ ಥೋರಿಯಂ ಧಾತುವಿನ ತೂಕ ಮೊದಲಿನ ತೂಕದ ಅರ್ಧದಷ್ಟೂ ಇನ್ನೊಂದಾವರ್ತಿ 13.9x109 ವರ್ಷಗಳು ಕಳೆದರೆ ಮೊದಲಿನ ತೂಕದ ಕಾಲು ಭಾಗದಷ್ಟೂ ಮೂಲಧಾತು ಉಳಿಯುವುದು. ವಿಕಿರಣಗೊಂಡ ಪರಮಾಣುಗಳು ಕ್ರಮೇಣ ಸೀಸದ ಪರಮಾಣುಗಳಾಗಿ ಪರಿವರ್ತನೆ ಹೊಂದುತ್ತವೆ. ಹೀಗಾಗುವುದರಿಂದ ಯರೇನಿಯಂ-ಸೀಸ ಅಥವಾ ಥೋರಿಯಂ-ಸೀಸ ಇವುಗಳ ಪ್ರಮಾಣ ಗತಿಸಿದ ಕಾಲವನ್ನು ಅವಲಂಬಿಸಿರುತ್ತದೆ. ಕಾಲ ಹೆಚ್ಚಿದಂತೆಲ್ಲ ಯುರೇನಿಯಂ ಅಥವಾ ಥೋರಿಯಂಗಳ ಪರಿಮಾಣ ಕಡಿಮೆಯಾಗಿ ಸೀಸದ ಪರಿಮಾಣ ಹೆಚ್ಚುತ್ತ ಹೋಗುವುದು. ಆದ್ದರಿಂದ ಯುರೇನಿಯಂ-ಸೀಸ, ಅಥವಾ ಥೋರಿಯಂ-ಸೀಸ ಇವುಗಳ ಪ್ರಮಾಣವನ್ನು ಶಿಲೆಗಳಲ್ಲಿ ಕಂಡುಹಿಡಿದರೆ ಅವುಗಳ ಕಾಲವನ್ನು ಪರೋಕ್ಷವಾಗಿ ಕಂಡುಹಿಡಿಯಬಹುದು. ಈ ರೀತಿ ಮಾಡಿದ ಲೆಕ್ಕಾಚಾರಗಳಿಂದ ಭೂಮಿಯ ವಯಸ್ಸು 5,000,000,000 ವರ್ಷಗಳೆಂದು ಅಂದಾಜಾಗಿದೆ. ಅಲ್ಲದೆ, ವಿವಿಧ ಶಿಲೆಗಳಲ್ಲಿ ಈ ಪ್ರಮಾಣಗಳನ್ನು ಕಂಡುಹಿಡಿದರೆ, ಈ ಶಿಲೆಗಳು ಉತ್ಪತ್ತಿಯಾದ ಕಾಲ ಮತ್ತು ಭೂಗರ್ಭಶಾಸ್ತ್ರದ ಯುಗ ಇವನ್ನು ಕರಾರುವಕ್ಕಾಗಿ ಗೊತ್ತು ಮಾಡಬಹುದು.[೨]

ರುಬಿಡಿಯಂ-ಸ್ಟ್ರಾಂಷಿಯಂ ವಿಧಾನ[ಬದಲಾಯಿಸಿ]

ಪುರಾತನ ಶಿಲೆಗಳಲ್ಲಿ ರುಬಿಡಿಯಂ ಧಾತು ಸೇರಿಕೊಂಡಿದ್ದರೆ ಅದು ಕ್ಷಯಿಸಿ ಸ್ಟ್ರಾಂಷಿಯಂ ಆಗಿ ಪರಿವರ್ತನೆಗೊಳ್ಳುವುದು. ರುಬಿಡಿಯಂನ ಅರ್ಧಾಯು 5.8x1010 ವರ್ಷಗಳು. ಶಿಲೆಯಲ್ಲಿ ರುಬಿಡಿಯಂ-ಸ್ಟ್ರಾಂಷಿಯಂಗಳ ಪ್ರಮಾಣವನ್ನು ಕಂಡುಹಿಡಿದು, ಮೇಲೆ ತಿಳಿಸಿರುವ ರೀತಿಯಲ್ಲಿ, ಆ ಶಿಲೆಯ ವಯಸ್ಸನ್ನು ಕಂಡುಹಿಡಿಯಬಹುದು. ಈ ವಿಧಾನದಲ್ಲಿ, ಯುರೇನಿಯಂ-ಸೀಸದ ವಿಧಾನಕ್ಕಿಂತ, ಹೆಚ್ಚು ಅನುಕೂಲತೆ ಉಂಟು. ಯರೇನಿಯಂ ಶ್ರೇಣಿಯಲ್ಲಿ ವಿವಿಧ ಧಾತುಗಳು ವಿಕಿರಣ ಕ್ರಿಯೆಗಳಿಂದ ಉತ್ಪನ್ನವಾಗಿ ಅಂತಿಮವಾಗಿ ಯುರೇನಿಯಂ ಸೀಸವಾಗಿ ಪರಿವರ್ತನೆಗೊಳ್ಳುವುವು. ಆ ಶ್ರೇಣಿಯಲ್ಲಿ ರೇಡಾನ್ ಎಂಬ ಅನಿಲವೂ ಉತ್ಪನ್ನವಾಗಿ ಶಿಲೆಯಿಂದ ಕೊಂಚ ಭಾಗ ವಿಸರಿತವಾಗಿ ಹೊರಕ್ಕೆ ಬಂದಿರಬಹುದು. ಹೀಗಾಗುವುದರಿಂದ ಆ ಶಿಲೆಯ ವಯಸ್ಸನ್ನು ಲೆಕ್ಕಾಚಾರ ಮಾಡಿದಾಗ ಸ್ವಲ್ಪ ಕಡಿಮೆಯಾಗಿ ಬಿಡುತ್ತದೆ. ರುಬಿಡಿಯಂ ವಿಕಿರಣಕ್ರಿಯೆಯಿಂದ ನೇರವಾಗಿ ಸ್ಟ್ರಾಂಷಿಯಂ ಮಾತ್ರ ಉತ್ಪನ್ನವಾಗುವುದರಿಂದ, ಈ ವಿಧಾನದಿಂದ ಗಣಿಸಿದ ಶಿಲೆಯ ವಯಸ್ಸು ಹೆಚ್ಚು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ವಿಧಾನದಲ್ಲಿ ಮುಖ್ಯ ತೊಂದರೆ ಏನೆಂದರೆ ಶಿಲೆಗಳಲ್ಲಿ ದೊರಕುವ ಸ್ಟ್ರಾಂಷಿಯಂ ಪರಿಮಾಣ ಅತ್ಯಲ್ಪ. ಇದನ್ನು ಅಳತೆಮಾಡುವುದು ಅತ್ಯಂತ ಪ್ರಯಾಸಕರವಾದದ್ದು.

ವಿಕಿರಣಶೀಲ ಕಾರ್ಬನ್ನಿನಿಂದ ಕಾಲ ನಿರ್ಣಯ[ಬದಲಾಯಿಸಿ]

ವಿಶ್ವಕಿರಣಗಳು (ಕಾಸ್ಮಿಕ್ ರೇಸ್) ಅಂತರಿಕ್ಷದಲ್ಲಿ ಉತ್ಪನ್ನವಾಗಿ ಭೂಮಿಯ ಮೇಲಿರುವ ವಾಯುಮಂಡಲವನ್ನು ಅಪ್ಪಳಿಸುತ್ತವೆ. ಇವುಗಳಲ್ಲಿ ಅತಿ ಹೆಚ್ಚು ಶಕ್ತಿ ಇರುವುದರಿಂದ ವಾಯುಮಂಡಲದಲ್ಲಿ ಇವು ಸಾಕಷ್ಟು ಬದಲಾವಣೆಗಳನ್ನು ಮಾಡುತ್ತವೆ. ವಾಯುಮಂಡಲದ ಮೇಲ್ಭಾಗದಲ್ಲಿ ನ್ಯೂಟ್ರಾನುಗಳಿರುವುದು ಗೊತ್ತಾಗಿದೆ. ಇವು ಪ್ರಾಥಮಿಕ ವಿಶ್ವಕಿರಣಗಳಿಂದ ಉತ್ಪನ್ನವಾದ ದ್ವಿತೀಯಕ ಕಣಗಳು. ವಾಯುಮಂಡಲದಲ್ಲಿ ಆಕ್ಸಿಜನ್ ಮತ್ತು ನೈಟ್ರೊಜನ್ ಪರಮಾಣುಗಳು ಅಧಿಕ ಸಂಖ್ಯೆಯಲ್ಲಿವೆ. ಆಕ್ಸಿಜನ್ ಪರಮಾಣುಗಳು ನ್ಯೂಟ್ರಾನುಗಳೊಡನೆ ಪ್ರತಿಕ್ರಿಯೆ ನಡೆಸುವುದರಲ್ಲಿ ಜಡವಾಗಿರುತ್ತವೆ. ಆದರೆ ನೈಟ್ರೊಜನ್ ಪರಮಾಣುಗಳು ನ್ಯೂಟ್ರಾನ್‍ಗಳೊಡನೆ ಪ್ರತಿಕ್ರಿಯೆಯಿಂದ ವಿಕಿರಣಶೀಲ ಕಾರ್ಬನ್ನಾಗಿ ಪರಿವರ್ತನೆಗೊಳ್ಳುತ್ತವೆ.ಈ ರೀತಿಯಲ್ಲಿ ಉತ್ಪನ್ನವಾದ ಕಾರ್ಬನ್ನಿನ ಪರಮಾಣು ಆಕ್ಸಿಜನ್ ಸಂಯೋಗದಿಂದ ಕಾರ್ಬನ್ ಡೈಆಕ್ಸೈಡ್ ಆಗಿ ಪರಿವರ್ತನೆ ಹೊಂದಿದರೂ ವಿಕಿರಣಶೀಲವಾಗಿಯೇ ಇರುತ್ತದೆ. ವಾಯುಮಂಡಲದ ಮೇಲ್ಭಾಗದಿಂದ ಭೂಮಿಯ ಕಡೆಗೆ ಇಳಿದು ಬರುವಾಗ ಮರ, ಗಿಡ, ಬಳ್ಳಿಗಳಿಂದ ದ್ಯುತಿಸಂಶ್ಲೇಷಣದ ಮೂಲಕ ಈ ಅಣುಗಳು ಅವಶೋಷಿತವಾಗಿ ಬಿಡುತ್ತವೆ. ಪ್ರಾಣಿಗಳು ಗಿಡಗಳ ಎಲೆ, ಬಳ್ಳಿ, ಸೊಪ್ಪುಗಳನ್ನು ಆಹಾರವಾಗಿ ತಿಂದಾಗ ಅವುಗಳ ದೇಹದಲ್ಲಿ 14*6ಅ ಸೇರಿಹೋಗುವುದು. ಹಸಿರು ತರಕಾರಿ, ಪ್ರಾಣಿಗಳ ಮಾಂಸ ಇವನ್ನು ಮನುಷ್ಯ ಸೇವಿಸಿದಾಗ ಅವನ ಅಂಗಗಳಲ್ಲಿಯೂ ಈ ಪರಮಾಣುಗಳು ಪ್ರವೇಶಿಸುತ್ತವೆ. ಹೀಗಾಗಿ ಬದುಕಿರುವ ಜೀವಗಳಲ್ಲೆಲ್ಲ 14*6ಅ ಪರಮಾಣುಗಳು ಸೇರಿಕೊಂಡಿರುತ್ತವೆ. ಈ ಜೀವ ಪದಾರ್ಥಗಳು ಉಸಿರಾಡುವಾಗ ಈ ಪರಮಾಣುಗಳ ಕೊಂಚ ಭಾಗವನ್ನು ನೈಟ್ರೊಜನ್ನಾಗಿ ಮಾರ್ಪಡಿಸಿ ವಾಯುಮಂಡಲಕ್ಕೆ ಹಿಂತಿರುಗಿಸುತ್ತವೆ.ಈ ಸಸ್ಯ-ಪ್ರಾಣಿ-ಕಾರ್ಬನ್-ನೈಟ್ರೊಜನ್ ಚಕ್ರ ಕಾರ್ಯದ ಪರಿಣಾಮವಾಗಿ ಸಮಸ್ಥಿತಿಯಲ್ಲಿ ಪ್ರತಿಯೊಂದು ಜೀವವಸ್ತುವಿನಲ್ಲೂ ನಿರ್ದಿಷ್ಟವಾದ 146*ಅ ಸಮಸ್ಥಾನಿಯ ಪರಿಮಾಣ ಯಾವಾಗಲೂ ಇರುತ್ತದೆ.ಒಂದು ಮರವನ್ನು ಕತ್ತರಿಸಿಹಾಕಿದರೆ ಅಥವಾ ತಾನಾಗಿಯೇ ಅದು ಉರುಳಿಕೊಂಡರೆ, ಅದಕ್ಕೆ 14*6ಅ ಪೂರೈಕೆ ಸಂಪೂರ್ಣವಾಗಿ ನಿಂತುಹೋಗುತ್ತದೆ. ಕಾಲ ಕಳೆದಂತೆಲ್ಲ ಅದರಲ್ಲಿರುವ 14*6ಅ ಅಂಶ ಕಡಿಮೆಯಾಗುತ್ತ ಹೋಗುತ್ತದೆ.14*6ಅ ಅರ್ಧಾಯು ಸುಮಾರು 5,600 ವರ್ಷಗಳೆಂದು ಗೊತ್ತಾಗಿದೆ. ಅರ್ಧಾಯು ಇಷ್ಟೊಂದು ಹೆಚ್ಚಾಗಿರುವುದರಿಂದ, 146*ಅ ಕ್ಷಯ ಅನೇಕ ಕೋಟಿ ವರ್ಷಗಳವರೆಗೂ ವ್ಯಾಪಿತವಾಗಿರುತ್ತದೆ. ಹೀಗಾಗುವುದರಿಂದ ಅತಿ ಪುರಾತನವಾದ ಮರದ ಚೂರು, ಇದ್ದಲು, ಬೀಜ ಇತ್ಯಾದಿಗಳ ಕಾಲ ನಿರ್ಣಯವನ್ನು ಅವುಗಳಲ್ಲಿರುವ 14*6ಅ ಪರಿಮಾಣವನ್ನು ಕಂಡುಹಿಡಿದರೆ, ಕರಾರುವಕ್ಕಾಗಿ ಮಾಡಬಹುದು.

ಅಮೆರಿಕದ ವಿಜ್ಞಾನಿ ಲಿಬ್ಬಿ[ಬದಲಾಯಿಸಿ]

ಈ ರೀತಿಯ ವ್ಯಾಸಂಗಗಳನ್ನು ಅಮೆರಿಕದ ವಿಜ್ಞಾನಿ ಲಿಬ್ಬಿ ಪ್ರಾರಂಭಿಸಿದ. ಪುರಾತನ ವಸ್ತುಗಳಲ್ಲಿರುವ 14*6ಅ ಪರಿಮಾಣ ಅತ್ಯಲ್ಪ. ಇದನ್ನು ನಿಷ್ಕøಷ್ಟವಾಗಿ ಅಳೆಯಲು ಬಹು ಸೂಕ್ಷ್ಮವಾದ ಉಪಕರಣಗಳು ಆವಶ್ಯಕ. ಲಿಬ್ಬಿ ಈ ಅಳತೆಗಳನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ, ಸಂದೇಹಕ್ಕೆ ಆಸ್ಪದವಿಲ್ಲದಂತೆ, ಮಾಡಿದ್ದಾನೆ. ಈ ಕ್ರಮದಲ್ಲಿ ಕಾಲನಿರ್ಣಯ ಮಾಡುವಾಗ ವಿಶ್ವಕಿರಣಗಳ ತೀಕ್ಷ್ಣತೆ ಕಡೇ ಪಕ್ಷ 20,000 ವರ್ಷಗಳಿಂದಲೂ ಒಂದೇ ಸಮನಾಗಿದೆಯೆಂದು ಕಲ್ಪಿಸಿಕೊಂಡಿದೆ. ಹೀಗೆ ಪ್ರಾಚೀನ ವಸ್ತುಗಳಲ್ಲಿರುವ 14*6ಅ ಮತ್ತು ಬದುಕಿರುವ ವಸ್ತುಗಳಲ್ಲಿರುವ 14*6ಅ ಇವುಗಳ ಪ್ರಮಾಣದಿಂದ ಆ ವಸ್ತುವಿನ ವಯಸ್ಸನ್ನು ನಿರ್ಧರಿಸಬಹುದು. ಲಿಬ್ಬಿ ನಡೆಸಿದ ಸಂಶೋಧನೆಗಳಲ್ಲಿ ಭೂಗರ್ಭಶಾಸ್ತ್ರ ಮತ್ತು ಪ್ರಾಕ್ತನ ಶಾಸ್ತ್ರಗಳಿಗೆ ಮುಖ್ಯವಾದವುಗಳೆಂದು ಪರಿಗಣಿಸಲ್ಪಟ್ಟಿರುವ ಕೆಲವು ವಸ್ತುಗಳ ಕಾಲವನ್ನು ಕೊಟ್ಟಿದೆ. ವಯಸ್ಸು (ವರ್ಷಗಳಲ್ಲಿ)

ಈಜಿಪ್ಟಿನಲ್ಲಿರುವ ಹೆಮಾಕನ ಗೋರಿಯಲ್ಲಿದ್ದ ಮರ 4883±450 

ಡೆನ್ಮಾರ್ಕಿನಿಂದ ಪಡೆದ ಮರದ ಚೂರು 7583±380

ಟೆಕ್ಸಾಸಿನಿಂದ ಪಡೆದ ಕಾಡು ಕೋಣದ ಮೂಳೆ 9883±350

ಮಂಚೂರಿಯದ ಫಲವತ್ತಾದ ಕಮಲ ಬೀಜಗಳು  1040±210 ಇತ್ಯಾದಿ.ಈ ಕ್ರಮವನ್ನು ಅನುಸರಿಸಿ, ವಿಗ್ರಹ, ಚಿತ್ರ ಇವುಗಳ ಪ್ರಾಚೀನತೆಯನ್ನು ಕಂಡುಹಿಡಿಯಲು ಸಾಧ್ಯವಾಗಿದೆ. ಈ ವಿಧಾನಕ್ಕೆ ಕಾರ್ಬನ್-14 ಅಥವಾ ಇಂಗಾಲ-14 ಕಾಲನಿರ್ಣಯ ವಿಧಾನವೆಂದು ಹೆಸರು.

ಟ್ರೈಟಿಯಂನಿಂದ ಕಾಲನಿರ್ಣಯ[ಬದಲಾಯಿಸಿ]

ವಿಶ್ವಕಿರಣದಿಂದ ಉತ್ಪನ್ನವಾದ ನ್ಯೂಟ್ರಾನುಗಳು ವಾಯುಮಂಡಲದ ಮೇಲ್ಭಾಗದಲ್ಲಿ ನೈಟ್ರೊಜನ್ ಪರಮಾಣುಗಳೊಡನೆ ಪ್ರತಿಕ್ರಿಯೆ ನಡೆಸಿ ಟ್ರೈಟಿಯಂ ಎಂಬ ಹೈಡ್ರೊಜನ್ನಿನ ಸಮಸ್ಥಾನಿಯನ್ನೂ ಉತ್ಪನ್ನ ಮಾಡಬಲ್ಲವು:ಮಳೆಯ ಜೊತೆಯಲ್ಲಿ ಈ ಸಮಸ್ಥಾನಿ ಭೂಮಿಯ ಮೇಲೆ ಬೀಳುತ್ತದೆ. ಟ್ರೈಟಿಯಂನ ಅರ್ಧಾಯು ಕೇವಲ 12.5 ವರ್ಷಗಳು. ಆದ್ದರಿಂದ ಇತ್ತೀಚಿನ ವಸ್ತುಗಳಿಗೆ ಮಾತ್ರ ಕಾಲ ನಿರ್ಣಯವನ್ನು ಟ್ರೈಟಿಯಂನಿಂದ ಮಾಡಬಹುದು. ವಿವಿಧ ಅಕ್ಷಾಂಶಗಳಲ್ಲಿ ಮಳೆ ಬೀಳುವ ಪ್ರಮಾಣ ಏಕರೂಪವಾಗಿಲ್ಲವಾದ್ದರಿಂದ ಟ್ರೈಟಿಯಂ ಪರಿಮಾಣ ವ್ಯತ್ಯಾಸವಾಗುವುದು. ಈ ಪರಿಮಾಣವೂ ಅತ್ಯಲ್ಪ. ಇದನ್ನು ಅಳತೆ ಮಾಡಲು ಅತಿಸೂಕ್ಷ್ಮ ಉಪಕರಣಗಳು ಬೇಕು.ಈ ರೀತಿಯಾದ ಅನೇಕ ತೊಡಕುಗಳಿದ್ದರೂ ಲಿಬ್ಬಿ ಮತ್ತು ಆತನ ಸಹೋದ್ಯೋಗಿಗಳು ಅನೇಕ ಸಂಶೋಧನೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವುಗಳಿಂದ ಕೆಲವು ಸ್ವಾರಸ್ಯವಾದ ಸಂಗತಿಗಳೂ ಹೊರಬಿದ್ದಿವೆ. ಉದಾಹರಣೆಗೆ, ಸಮುದ್ರದಿಂದ ಮೇಲಕ್ಕೆ ಬಂದ ಆವಿ ಮಳೆಯಾಗಿ ಕೆಳಕ್ಕೆ ಬೀಳುವ ಅವಧಿಯಲ್ಲಿ ಎಷ್ಟು ಕಾಲ ವಾಯುಮಂಡಲದಲ್ಲಿ ಇತ್ತು ಎನ್ನುವುದನ್ನು ಮಳೆಯಲ್ಲಿ ಟ್ರೈಟಿಯಂ ಪ್ರಮಾಣವನ್ನು ಅಳತೆ ಮಾಡಿ ಕಂಡುಹಿಡಿದಿದ್ದಾರೆ. ಇವರ ಅಂದಾಜಿನ ಪ್ರಕಾರ ಈ ಅಂತರ ಒಂಬತ್ತು ದಿವಸಗಳು. ಇದೇ ರೀತಿ ಭೂಗರ್ಭದಲ್ಲಿರುವ ನೀರು ಎಷ್ಟು ಕಾಲದಿಂದ ಅಲ್ಲಿ ಕೂಡಿಡಲ್ಪಟ್ಟಿದೆ ಎಂದು ಗೊತ್ತುಮಾಡಬಹುದು. ಹೀಗೆ ಟ್ರೈಟಿಯಂನಿಂದ ಕಾಲನಿರ್ಣಯ ವಿಧಾನ ಹವಾ ವಿಜ್ಞಾನಕ್ಕೂ ನೀರಿನ ಪೂರೈಕೆಯ ಸಮಸ್ಯೆಗಳಿಗೂ ಅತ್ಯಂತ ಸಹಾಯಕವಾಗಬಹುದೆಂದು ಭಾವಿಸಲಾಗಿದೆ.

ಉಲ್ಕೆಯಿಂದ ಸೌರವ್ಯೂಹದ ಆರಂಭಕಾಲದ ನಿರ್ಣಯ[ಬದಲಾಯಿಸಿ]

ಅಮೆರಿಕದ ಉತ್ತರ ಡಕೋಟದ ಹತ್ತಿರ ಸುಮಾರು 51 ವರ್ಷಗಳ ಹಿಂದೆ ಒಂದು ಉಲ್ಕಾಪಾತವಾಯಿತು. ಈ ಉಲ್ಕೆಯಲ್ಲಿ ಕ್ಸೆನಾನ್ ಎಂಬ ಅನಿಲ ಇರುವುದು ಪತ್ತೆಯಾಯಿತು. ಈ ಅನಿಲದ ಪರಮಾಣುತೂಕ 129, ಕ್ಸೆನಾನ್ ಪರಮಾಣುವಿನ ಸಮಸ್ಥಾನೀಯ. ಆದರೆ ಭೂಮಿಯಲ್ಲಿ ದೊರಕುವ ಕ್ಸೆನಾನ್ ಅನಿಲವನ್ನು ಅಧ್ಯಯನಮಾಡಿ, ಗೊತ್ತು ಮಾಡಿದ್ದ ತೂಕದ ಸಮಸ್ಥಾನೀಯ ಸಂಖ್ಯೆಗಿಂತ, ಈ ಉಲ್ಕೆಯಲ್ಲಿ ಇದು ಹೆಚ್ಚಿನ ಸಂಖ್ಯೆಯಲ್ಲಿರುವುದು ಗೋಚರವಾಯಿತು. ಹೀಗಾಗಲು ಉಲ್ಕೆಯಲ್ಲಿದ್ದ ಅಯೊಡೀನ್ 129 ವಿಕಿರಣಕ್ಷಯದಿಂದ ಕ್ಸೆನಾನಿಗೆ ಪರಿವರ್ತನೆಯಾಗಿರಬೇಕೆಂದು ವಿಜ್ಞಾನಿಗಳು ಕಲ್ಪಿಸಿಕೊಂಡರು. ಅಯೊಡೀನ್-129 ಧಾತುಸೌರವ್ಯೂಹ ಉದ್ಭವವಾದ ಕಾಲದಲ್ಲಿಯೇ ಇತರ ಧಾತುಗಳ ಜೊತೆಯಲ್ಲಿ ಉತ್ಪತ್ತಿಯಾಗಿರಬೇಕು. ಸೌರವ್ಯೂಹ ಉದ್ಭವವಾದ ಮೇಲೆ ಪ್ರತಿ 170 ಲಕ್ಷ ವರ್ಷಗಳ ಅಂತರದಲ್ಲಿ ಉತ್ಪನ್ನವಾಗಿದ್ದ ಅಯೊಡೀನ್-129ರ ಅರ್ಧದಷ್ಟು ಕ್ಸೆನಾನ್-129 ಆಗಿ ಪರಿವರ್ತನೆಯಾಗುತ್ತದೆ. ಈ ರೀತಿ ಅಯೊಡೀನ್-129ರ ಪರಿಮಾಣ ಕಡಿಮೆಯಾಗುತ್ತ ಹೋಗಿ, ಸುಮಾರು 46,000 ಲಕ್ಷ ವರ್ಷಗಳಾದ ಮೇಲೆ ಸೌರವ್ಯೂಹದಿಂದಲೇ ಅಳಿಸಿ ಹೋಗಿರುವ ಇಂದಿನ ಪರಿಸ್ಥಿತಿ ಉಂಟಾಗಿದೆ. ಉಲ್ಕೆಯಲ್ಲಿ ಅಲ್ಪಪ್ರಮಾಣದಲ್ಲಿ ಅಯೊಡೀನ್-129 ಇರುವುದರಿಂದ ಇದನ್ನು ಅಳತೆಮಾಡಿ ಉಲ್ಕೆ ಸೌರವ್ಯೂಹ ಉದ್ಭವವಾದ 3,500 ಲಕ್ಷ ವರ್ಷಗಳ ಅನಂತರ ರೂಪಗೊಂಡಿರಬೇಕೆಂದು ಕಲ್ಪಿಸಿಕೊಂಡಿದ್ದಾರೆ. ಹೀಗಾಗಿ ಸೌರವ್ಯೂಹ ಉದ್ಭವವಾಗಿ 49,500 ಲಕ್ಷ ವರ್ಷಗಳಾಗಿರಬೇಕೆಂದು ಅಂದಾಜು ಮಾಡಲಾಗಿದೆ.ವಿಕಿರಣಶೀಲ ಧಾತುಗಳು ಗಡಿಯಾರಗಳಂತೆ ಉಪಯೋಗಿಸಲ್ಪಟ್ಟು ಲಕ್ಷಾಂತರ ವರ್ಷಗಳ ಹಿಂದೆ ನಡೆದ ಘಟನೆಗಳ ಕಾಲವನ್ನು ನಿಷ್ಕøಷ್ಟವಾಗಿ ಅಳೆಯಲು ಹೀಗೆ ಸಹಾಯಕಾರಿಯಾಗಿವೆ.

ಪ್ರಾಕ್ತನಶಾಸ್ತ್ರದಲ್ಲಿ ಉಪಯೋಗಗಳು[ಬದಲಾಯಿಸಿ]

ಒಂದು ಐತಿಹಾಸಿಕ ವಸ್ತು ಅಥವಾ ಘಟನೆ ಯಾವ ಕಾಲಕ್ಕೆ ಸೇರುತ್ತದೆಂಬುದರ ನಿರ್ಧಾರವನ್ನು ಪ್ರಾಕ್ತನಶಾಸ್ತ್ರದಲ್ಲಿ ಮಾಡಬೇಕಾಗುತ್ತದೆ. ಮಾನವನ ಇತಿಹಾಸ ಮತ್ತು ಸಂಸ್ಕøತಿಗಳ ಬೆಳೆವಣಿಗೆಗಳನ್ನು ಅಭ್ಯಸಿಸುವಾಗ ಅವಕ್ಕೆ ಆಧಾರವಾಗಿ ದೊರಕಿರುವ ಅವಶೇಷಗಳ ಕಾಲಗಳನ್ನು ನಿರ್ದೇಶಿಸಿ ಆಯಾ ಕಾಲಗಳಲ್ಲಿ ಅವನು ಸಾಧಿಸಿದ್ದ ಮುನ್ನಡೆಯ ಹಂತಗಳನ್ನು ನಿರ್ಧರಿಸಬೇಕಾಗುವುದು. ಕಾಲನಿರ್ಣಯ ವಿಧಾನಗಳನ್ನು ವಿದ್ವಾಂಸರು ಖಚಿತ ಮತ್ತು ಸಂಬಂಧಸೂಚಕವೆಂದು ಎರಡು ಭಾಗ ಮಾಡಿದ್ದಾರೆ.

ಖಚಿತ ಕಾಲನಿರ್ಣಯ ಪದ್ಧತಿ[ಬದಲಾಯಿಸಿ]

ಇದರಲ್ಲಿ ವಿವಿಧ ವಸ್ತುಗಳ ಕಾಲವನ್ನು ಯಾವುದಾದರೊಂದು ನಿರ್ಧಾರವಾದ ಘಟನೆ ಅಥವಾ ಶಕಕಾಲಕ್ಕೆ ನಿರ್ದೇಶಿಸಿ, ಆ ವಸ್ತುವಿಗೆ ಎಷ್ಟು ವರ್ಷಗಳಾಗಿವೆಯೆಂದು ಹೇಳುತ್ತಾರೆ. ಕಾಲನಿರ್ಣಯ ಮಾಡಬೇಕಾದ ಅವಶೇಷಗಳೊಡನೆ ಅದೇ ಕಾಲದ ನಾಣ್ಯ ಮತ್ತು ಶಾಸನಗಳೂ ಆ ಕಾಲದವೇ ಎಂದು ನಿರ್ಧರಿಸಲಾದ ಇತರ ವಸ್ತುಗಳೂ ದೊರಕಿದಾಗ ಕಾಲನಿರ್ಣಯ ಸುಲಭವಾಗುತ್ತದೆ. ಆದರೆ ಇತಿಹಾಸಪೂರ್ವ ಯುಗದಲ್ಲಿ ಈ ರೀತಿಯ ನಿರ್ಧಾರ ಕಾಲದ ಘಟನೆ ಅಥವಾ ವಸ್ತುಗಳು ಕ್ರಿ. ಪೂ. 5000ಕ್ಕೂ ಮೊದಲಿನ ಕಾಲಕ್ಕೆ ಸಂಬಂಧಿಸಿದಂತೆ ಯಾವುದೂ ದೊರಕುವುದಿಲ್ಲ. ಇತ್ತೀಚಿನ ಹಲವಾರು ವೈಜ್ಞಾನಿಕ ಸಂಶೋಧನೆಗಳು ಖಚಿತ ಕಾಲನಿರ್ಣಯಕ್ಕೆ ಸಹಾಯಕವಾಗಿವೆ. ಅಂಥ ಕಾಲನಿರ್ಣಯ ಪದ್ಧತಿಗಳಲ್ಲಿ ಮುಖ್ಯವಾದ ಕೆಲವನ್ನು ಸ್ಥೂಲವಾಗಿ ಇಲ್ಲಿ ಸೂಚಿಸಬಹುದು. ಮರದ ಕಾಂಡಗಳಲ್ಲಿ ವರ್ಷೇ ವರ್ಷೇ ರೂಪುಗೊಳ್ಳುವ ವರ್ತುಲಗಳು ಹವಾಪರಿಸ್ಥಿತಿಗೆ ಹೊಂದಿಕೊಂಡಿದ್ದು, ಪ್ರತಿ 11 ವರ್ಷಗಳಿಗೆ ಒಂದೊಂದು ಗುಂಪಾಗಿ ಮರುಕಳಿಸುತ್ತವೆ. ದೊರಕಿದ ಅವಶೇಷಗಳಲ್ಲಿರುವ ಮರಗಳ ವರ್ತುಲಗಳ ಸಂಖ್ಯೆ ಮತ್ತು ರೀತಿಗಳನ್ನು ಪರೀಕ್ಷಿಸಿ, ಆ ಮರಗಳು ಯಾವ ಕಾಲದವೆಂದು ಹೇಳಬಹುದು.  ಹೀಗೆ ಕಾಲವನ್ನು ಸುಮಾರು 3,000 ವರ್ಷಗಳ ಹಿಂದಿನವರೆಗೂ ನಿರ್ಧರಿಸಬಹುದು. ಈ ಪದ್ಧತಿಗೆ ವೃಕ್ಷವರ್ತುಲ ವಿಶ್ಲೇಷಣ (ಟ್ರೀ ರಿಂಗ್ ಅನಾಲಿಸಿಸ್) ಪದ್ಧತಿಯೆಂದು ಅಥವಾ ವೃಕ್ಷ ಕಾಲನಿರ್ಣಯ ಶಾಸ್ತ್ರ (ಡೆಂಡ್ರೋ ಕ್ರೊನಾಲಜಿ) ಎಂದು ಹೆಸರು. ಜಾಯಿನರನ ಖಗೋಳಶಾಸ್ತ್ರಪದ್ಧತಿಯ ರೀತ್ಯಾ ಪ್ಲೀಸ್ಟೋಸೀನ್ ಯುಗ ಸು. 10 ಲಕ್ಷ ವರ್ಷಗಳಷ್ಟು ಹಳೆಯದೆಂದು ತಿಳಿದು ಬಂದಿದೆ. ಭೂಮಿಯ ವಿವಿಧ ಪದರಗಳಿಗೂ ಅವುಗಳಲ್ಲಿನ ಅವಶೇಷಗಳಿಗೂ ಈ ಪದ್ಧತಿಯಿಂದ ಕಾಲ ನಿರ್ದೇಶ ಮಾಡಲಾಗಿದೆ.

ಸಂಬಂಧಸೂಚಕ ಕಾಲನಿರ್ಣಯ ಪದ್ಧತಿ[ಬದಲಾಯಿಸಿ]

ಇದರಲ್ಲಿ ಒಂದು ಅವಶೇಷದ ಕಾಲವನ್ನು ಮತ್ತೊಂದು ವಸ್ತುವಿನ ಕಾಲಕ್ಕೆ ಸಂಬಂಧಿಸಿದಂತೆ, ನಿರ್ದೇಶಿಸುತ್ತಾರೆ. ಹಳೆಯ ಅವಶೇಷಗಳು ಭೂಮಿಯ ಕೆಳಗಿನ ಪದರಗಳಲ್ಲೂ ಅನಂತರಕಾಲದ ವಸ್ತುಗಳು ಅವುಗಳ ಮೇಲಣ ಪದರಗಳಲ್ಲೂ ಇತ್ತೀಚಿನ ವಸ್ತುಗಳು ಎಲ್ಲಕ್ಕಿಂತ ಮೇಲ್ಪದರದಲ್ಲೂ ಇರುವುದರಿಂದ ಅವುಗಳ ಸಂಬಂಧಸೂಚಕ ಕಾಲವನ್ನು ನಿರ್ಧರಿಸಬಹುದು. ಪ್ಲೀಸ್ಟೊಸೀನ್ ಯುಗದ ಸಸ್ಯ, ಪ್ರಾಣಿ ಮತ್ತು ಮಾನವರ ಕ್ರಮಾಗತ ಬೆಳೆವಣಿಗೆಯ ಘಟ್ಟಗಳನ್ನು ನಿರ್ಧರಿಸಿ ಯಾವುವು ಹಳೆಯವೆಂಬುದನ್ನು ನಿರ್ಧರಿಸಬಹುದು. ವಸ್ತುಗಳ ಆಕಾರವನ್ನೂ ಮಾಡುವ ವಿಧಾನಗಳನ್ನೂ ಪರಸ್ಪರ ಹೋಲಿಸುವುದರಿಂದ ಸಂಬಂಧಸೂಚಕ ಕಾಲನಿರ್ಣಯ ಸಾಧ್ಯವಾಗುತ್ತದೆ. ವಿವಿಧ ಪ್ರದೇಶಗಳ ಸಂಸ್ಕøತಿಗಳ ಮುಖ್ಯ ಲಕ್ಷಣಗಳನ್ನು ಪಟ್ಟಿಮಾಡಿಕೊಂಡು ಆ ಲಕ್ಷಣಗಳುಳ್ಳ ಇತರ ಸಂಸ್ಕøತಿಗಳ ಸಂಬಂಧ ಮತ್ತು ಕಾಲಗಳನ್ನು ತಿಳಿಯಬಹುದು. ಯಾವ ಸಂಸ್ಕøತಿಯಿಂದ ಯಾವ ಸಂಸ್ಕøತಿ ಪ್ರಭಾವಿತವಾಗಿದೆಯೆಂದು ಕಂಡುಹಿಡಿಯಬಹುದು. ಒಂದೇ ವಾತಾವರಣ ಅಥವಾ ಪ್ರದೇಶದಲ್ಲಿ ದೊರಕಿದ ಮೂಳೆಗಳಲ್ಲಿರುವ ಫ್ಲೋರಿನ್ನನ್ನು ಅಳೆದು ನೋಡುವುದರಿಂದ ಅವೆಲ್ಲ ಸಮಕಾಲೀನವೇ ಅಥವಾ ಬೇರೆ ಬೇರೆ ಕಾಲಗಳಿಗೆ ಸೇರಿದವೇ ಎಂಬುದನ್ನು ತೀರ್ಮಾನಿಸಬಹುದು. ಈ ರೀತಿಯಲ್ಲಿ ಹಲವಾರು ವಿಧಾನಗಳಿಂದ ಪ್ರಾಕ್ತನಶಾಸ್ತ್ರದಲ್ಲಿ ಖಚಿತ ಅಥವಾ ಸಂಬಂಧಸೂಚಕ ಕಾಲನಿರ್ಣಯ ಮಾಡಲಾಗುತ್ತದೆ. 

ಉಲ್ಲೇಖಗಳು[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಲನಿರ್ಣಯ ವಿಧಾನಗಳು
  2. http://www.kanaja.in/%E0%B2%8E%E0%B2%B7%E0%B3%8D%E0%B2%9F%E0%B2%A8%E0%B3%87-%E0%B2%B9%E0%B3%81%E0%B2%9F%E0%B3%8D%E0%B2%9F%E0%B2%BF%E0%B2%A6-%E0%B2%B9%E0%B2%AC%E0%B3%8D%E0%B2%AC/[ಶಾಶ್ವತವಾಗಿ ಮಡಿದ ಕೊಂಡಿ]