ಕಾಲಜ್ಞಾನ ವಚನಗಳು
ತ್ರಿಕಾಲ ಜ್ಞಾನಿಗಳಾದ ಶಿವಶರಣರೇ ಮೊದಲಾದವರು ಭವಿಷ್ಯವನ್ನು ಕುರಿತು ಹಾಡಿದ ವಚನಗಳಿವು. ಇಂಥದೇ ವಿಷಯ ಪುರಾಣಗಳಲ್ಲಿ, ದಾಸರ ಪದಗಳಲ್ಲಿ ಬಂದಿರುವುದೂ ಉಂಟು. ಕಾಲಜ್ಞಾನವೊಂದು ಸಿದ್ಧಿ. ಪತಂಜಲಿ ಋಷಿಗಳು ತಮ್ಮ ಯೋಗದರ್ಶನದ ವಿಭೂತಿ ಪಾದದಲ್ಲಿ ಇದರ ಬಗ್ಗೆ ತಿಳಿಸಿದ್ದಾರೆ.[೧]
ಕಾಲದ ಜ್ಞಾನ
[ಬದಲಾಯಿಸಿ]ಧರ್ಮ, ಲಕ್ಷಣ, ಅವಸ್ಥಾ-ಈ ಪರಿಣಾಮಗಳಲ್ಲಿ ಸಂಯಮ ಮಾಡುವುದರಿಂದ ಕ್ರಮವಾಗಿ ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲದ ಜ್ಞಾನವಾಗುವುದು ಎಂದು ಅವರ ಮತ. ಅಂಥ ತ್ರಿಕಾಲಜ್ಞಾನಿಗಳು ಭರತಖಂಡದ ಭವಿಷ್ಯವನ್ನು ಕುರಿತು ಅಪಾರವಾಗಿ ಹೇಳಿದ್ದಾರೆ. ಭಾರತದ ದೇಶಗಳನ್ನು ಕುರಿತು, ಅಲ್ಲಿಯ ದೊರೆ ಮತ್ತು ಪಾಳೆಯಗಾರರ ದೆಸೆಯಿಂದ ಸಾಮಾನ್ಯರಿಗೆ ಆಗಬಹುದಾದ ಕಷ್ಟನಷ್ಟಗಳ ಕುರುಹುಗಳನ್ನು ಎಲ್ಲ ಕಾಲಜ್ಞಾನಿಗಳೂ ವಿಶದಪಡಿಸಿದ್ದಾರೆ. ಕಾಲಜ್ಞಾನ ವಚನಗಳನ್ನು ಬೋಧಿಸಿರುವ ಶರಣರೆಲ್ಲ 12ನೆಯ ಶತಮಾನದಿಂದ ಈಚಿನವರು. ಅನಂತರ ಬಂದವರು ಪದ, ಪದ್ಯ, ಲಾವಣಿಗಳ ರೂಪದಲ್ಲಿ ಹಿಂದಿನವರನ್ನು ಅನುಕರಣೆ ಮಾಡಿ ಕಾಲಜ್ಞಾನವನ್ನು ತಿಳಿಸಿದ್ದಾರೆ ಮುಸಲ್ಮಾನರ ಆಡಳಿತದಿಂದ ಆಗಬಹುದಾದ ತೊಂದರೆಗಳು; ಜಾತಿ, ನೀತಿ, ಧರ್ಮಗಳನ್ನು ಬಿಟ್ಟು ಜನ ಅನೀತಿವಂತರಾಗುವುದು; ಒಟ್ಟಾರೆ ಕಲಿಯುಗದ ಮಹಿಮೆಯ ವಿವಿಧ ಮುಖಗಳು ಈ ವಚನಗಳಲ್ಲಿ ಬಂದಿವೆ. ಈ ವಚನಗಳು ಮತ್ತೊಂದು ದೃಷ್ಟಿಯಿಂದಲೂ ಮಹತ್ತ್ವಪೂರ್ಣವಾದುವು. ಅಂದಿನ ವೀರಶೈವರ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ತಿಳಿಯಲು ಇವು ಬಹುಮಟ್ಟಿಗೆ ಅನುಕೂಲವಾಗಿವೆ. ಒಟ್ಟಾರೆ ಕರ್ಣಾಟಕ ಇತಿಹಾಸದ ಅನೇಕ ಸಂಗತಿಗಳು ಇಲ್ಲಿ ಬಂದಿವೆ. ಕಳಚೂರ್ಯರು, ವಿಜಯನಗರದ ರಾಜರು, ಬಿಜಾಪುರದ ಬಾದಶಹರು, ಮರಾಠರು, ಮೊಗಲರು ಇಕ್ಕೇರಿ ಅರಸರು ಅಲ್ಲದೆ ಅನೇಕ ಪಾಳೆಯಗಾರರ ಉಲ್ಲೇಖಗಳು ಇಲ್ಲಿ ಬಂದಿರುವುದರಿಂದ ಇತಿಹಾಸ ಸಂಶೋಧಕರಿಗೆ ಇವು ಉಪಯುಕ್ತವಾಗಿವೆ. ಕಾಲಜ್ಞಾನದ ಎಷ್ಟೋ ಸಂಗತಿಗಳು ಸತ್ಯವಾಗಿ ಪರಿಣಮಿಸಿವೆ ಎನ್ನಲಿಕ್ಕೆ ಒಂದೆರಡು ವಚನಗಳನ್ನು ನೋಡಬಹುದು.[೨]
ರಥವ ನಡೆಸುವ ಯಂತ್ರ, ಕಥೆಯ ಪೇಳುವ ಯಂತ್ರ
ಪಥಿಕ ಜನರನ್ನು ಒಯ್ಯುವ ಯಂತ್ರ
ಕಥೆಯನೇನೆಂಬೆ ನಂಜೇಶ
ನೆಲದ ಮೇಲಿನ ರಥವು, ಜಲದ ಮೇಲಿನ ರಥವು
ಬಲವಾದ ರಥವು-ಗಗನದೊಳು ನಡೆಯುವ
ಫಲವನೇನೆಂಬ ನಂಜೇಶ.ಇಂಥ ವಚನಗಳಲ್ಲಿ ಪ್ರಕ್ಷಿಪ್ತವೆಷ್ಟೆಂಬುದನ್ನು ಹೇಳುವುದು ಕಷ್ಟ. ಬಸವೇಶ, ಚನ್ನಬಸವಣ್ಣ, ಪ್ರಭುದೇವರು, ಕಲ್ಯಾಣಮ್ಮ, ಕೂಗಿನಮಾರಿತಂದೆ, ಘಟ್ಟಿವಾಳಯ್ಯ, ರುದ್ರಮುನಿತಂದೆ, ಸಿದ್ಧರಾಮೇಶ್ವರ, ನೀಲಮ್ಮ, ಎಮ್ಮೆ ಬಸವಣ್ಣ, ಕರಸ್ಥಲದ ನಾಗಲಿಂಗಯ್ಯ, ನಂಜೇಶ ಮುಂತಾದ ಶರಣರು ಕಾಲಜ್ಞಾನ ವಚನಗಳನ್ನು ಹಾಡಿದ್ದಾರೆ.
ಉದಾಹರಣೆಗೆ ಪ್ರಭುದೇವರದು ಎನ್ನಲಾದ ಒಂದು ವಚನದ ಭಾಗವನ್ನು ನೋಡಬಹುದು
[ಬದಲಾಯಿಸಿ]ಪಂಚಾಶತ್ ಕೋಟಿ ಭೂಮಂಡಲದ ಮಧ್ಯದಲ್ಲಿ ಪೃಥ್ವಿಗೆ ಕೈಲಾಸಮಪ್ಪ ಶ್ರೀ ಶೈಲದ ಮಲ್ಲಿಕಾರ್ಜುನ ದೇವರ ಮೂಡಲ ಬಾಗಿಲು ಮುಚ್ಚೀತು. ಮನುಷ್ಯರ ರಕ್ತಬಿದ್ದೀತು. ಸುರೆಯ ಗಡಿಗೆ ಮಾರೀತು. ವೇಶ್ಯೆಯರ ಗುಡಿಸಲು ಕಟ್ಟೀತು. ಅಲ್ಲಿ ನಾನಾವಿಕಾರಂಗಳಾದಾವು. ಎಪ್ಪತ್ತೇಳು ದುರ್ಗದವರು ಅಪವರ್ಗವಾದಾರು. ವಿರೂಪಾಕ್ಷ ಕೆಟ್ಟು ಮೂವತ್ತೆರಡು ಕೊಟ್ಟವಾದಾವು. ಮನ್ಮಥಕೊಂಡ ಹೂಳೀತು. ತುರುಕರ ಬಲವೆದ್ದೀತು. ಶಂಭು ತ್ರಿಪುರಾಂತಕ ದೇವರ ಮುಂದಣ ಅನುಭವ ಮಂಟಪದಲ್ಲಿ ಕಪಿಲೆಯ ಬಾಣಸವ ಮಾಡ್ಯಾರು. ನಂದಿ ಕುಂಭ ಮುರಿದಾರು. ಅಲ್ಲಿ ಗೋರಿಯನಿಕ್ಕಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಕುದುರೆ ಕುಮ್ಮಟದಲ್ಲಿ ಮಡಿದೀತು. ಆ ಬಲ ಆರಾದೀತು. ಆರು ಮೂರಾದೀತು. ಮೂರು ಎರಡಾದೀತು. ಎರಡು ಒಂದಾದೀತು, ಒಂದು ರಾಮೇಶ್ವರಕ್ಕೆ ನಡೆದೀತು. ಆ ಬಲ ಉತ್ತರ ಮಧ್ಯದಲ್ಲಿ ಅಳಿದೀತು. ಶಿವಸಮಯ ಕೆಟ್ಟೀತು. ಹಿರಿಯರ ಹಿರಿಯತನವಳಿದೀತು. ಭಕ್ತರು ಜಂಗಮದ ಕೈಸೇವೆಯ ಮಾಡಿಸಿಕೊಂಡಾರು. ನಿಜಭಕ್ತಿಯ ಮರೆತಾರು. ದಾಕ್ಷಿಣ್ಯ ಭಕ್ತಿಯ ಮಾಡ್ಯಾರು. ಕ್ರಿಯೆಗಳು ಬಿಟ್ಟಾರು. ಅನೇಕ ನೇಮಂಗಳಂ ಮಾಡ್ಯಾರು. ಪ್ರಸಾದವಂ ಮರೆತಾರು. ವಂಚನೆ, ಪಂತಿ ಭೇದವ ಮಾಡ್ಯಾರು. ಮನೆಯ ಹಿರಿಯರ ಮರೆತಾರು. ಕುಲದ ಹಿರಿಯರ ಪೂಜೆಯ ಮಾಡ್ಯಾರು. ಜಂಗಮರ ನಿಂದ್ಯವಂ ಮಾಡ್ಯಾರು. ಮತ್ತೆ ಜಂಗಮದ ಪ್ರಸಾದವಂ ಕೊಂಡಾರು. ಭಸಿತ ರುದ್ರಾಕ್ಷಿಯಂ ತೊಟ್ಟಾರು. ವಿಷಯಂಗಳೊಳಗೆ ಮುಳುಗಾಡ್ಯಾರು. ಹದಿನೆಂಟು ಜಾತಿ ಒಂದಾಗಿ ಉಂಡಾರು. ಕುಲಕ್ಕೆ ಹೋರಾಡ್ಯಾರು. ಅನೃತವ ನುಡಿದಾರು. ಅನೃತಕ್ಕೆ ಗುದ್ದಾಡ್ಯಾರು'. ಪೂರ್ಣ ಕಾವಿಯನ್ನು ಧರಿಸಿ ಭಸ್ಮಲೇಪನ ಮಾಡಿಕೊಂಡು ಕೈಯಲೊಂದು ಶುಭ್ರ ಲಾಟೀನನ್ನು ಹಿಡಿದು ಕಾಲಜ್ಞಾನ ವಚನಗಳನ್ನು ಹಾಡುತ್ತ ಬರುವ ಜಂಗಮರನ್ನು ಇಂದಿಗೂ ನೋಡಬಹುದು. ಉತ್ತರ ಕರ್ಣಾಟಕದಲ್ಲಿ ಈ ದೃಶ್ಯ ಸರ್ವಸಾಮಾನ್ಯ. ದಕ್ಷಿಣದಲ್ಲೂ ಆಗಾಗ ಇಂಥವರನ್ನು ನೋಡಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ http://kilarisamskruthi.blogspot.in/2014/09/blog-post_27.html
- ↑ http://www.kannadaprabha.com/districts/chikkamagalur/%E0%B2%B8%E0%B2%BE%E0%B2%B0%E0%B3%8D%E0%B2%B5%E0%B2%A4%E0%B3%8D%E0%B2%B0%E0%B2%BF%E0%B2%95-%E0%B2%AE%E0%B3%8C%E0%B2%B2%E0%B3%8D%E0%B2%AF-%E0%B2%B8%E0%B2%BE%E0%B2%B0%E0%B2%BF%E0%B2%A6-%E0%B2%B5%E0%B2%9A%E0%B2%A8-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF/176786.html