ಕಾರ್ಲ್ ಯೋನಾಸ್ ಲೂಡ್ವಿಗ್ ಆಲ್ಮ್ ಕ್ವಿಸ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಯೋನಾಸ್ ಲೂಡ್ವಿಗ್ ಆಲ್ಮ್ ಕ್ವಿಸ್ಟ್
ಆಲ್ಮ್ ಕ್ವಿಸ್ಟ್ ಚಿತ್ರಿಸಿದ ಚಿತ್ರ, 1823


ಕಾರ್ಲ್ ಯೋನಾಸ್ ಲೂಡ್ವಿಗ್ ಆಲ್ಮ್ ಕ್ವಿಸ್ಟ್ (28 ನವಂಬರ್ 1793, ಸ್ಟಾಕ್‍ಹೋಮ್,ಸ್ವೀಡನ್ – 26 ಸೆಪ್ಟೆಂಬರ್ 1866, ಬ್ರೇಮೆನ್,ಜರ್ಮನಿ) 19ನೆಯ ಶತಮಾನದ ಪುರ್ವಾರ್ಧದಲ್ಲಿದ್ದ ಸ್ವೀಡನ್ನಿನ ಸಾಹಿತಿ. ಕಥೆ, ಕಾದಂಬರಿ, ನಾಟಕ ಹಾಗೂ ಕವನ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೆಲಸಮಾಡಿದ್ದಾನೆ. ಬಾಲ್ಯದಿಂದಲೂ ಮೊರೇವಿಯನ್ ಸೋದರರು ಪ್ರತಿಪಾದಿಸಿದ ಧರ್ಮತತ್ತ್ವದ ಪ್ರಭಾವದಲ್ಲಿ ಬೆಳೆದ. ಸ್ವೀಡನ್ನಿನ ಲೊಥೇರಿಯನ್ ಸಂಪ್ರದಾಯದ ಮಠಕ್ಕೆ ಸೇರಿದ ಅನಂತರವೂ ಸ್ವೀಡನ್ಬರ್ಗ್ನ ಅನುಭಾವ ಸಿದ್ಧಾಂತವನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾನಮಾಡಿ ಅದರಂತೆ ತನ್ನ ತಾತ್ತ್ವಿಕ ದೃಷ್ಟಿಯನ್ನು ರೂಪಿಸಿಕೊಂಡ. ಆರ್ಥಿಕ ಮುಗ್ಗಟ್ಟು ಹಾಗೂ ಹಲವಾರು ತೊಂದರೆಗಳಿಗೆ ಸಿಕ್ಕಿದ ಇವನ ಜೀವನ ತಳಮಳದಿಂದ ತುಂಬಿತ್ತು. ಸರ್ಕಾರಿ ಅಧಿಕಾರಿಯಾಗಿ, ರೈತನಾಗಿ, ಅಧ್ಯಾಪಕನಾಗಿ, ಪಾದ್ರಿಯಾಗಿ, ಪ್ರಗತಿಶೀಲ ಪತ್ರಿಕೋದ್ಯಮಿಯಾಗಿ-ಹತ್ತಾರು ರೀತಿಯ ಉದ್ಯಮಗಳಲ್ಲಿ ಕೆಲಸಮಾಡಿದ. ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ಬರೆದ ತನ್ನ ಕಾದಂಬರಿಗಳಲ್ಲಿ ವ್ಯಕ್ತಿಸಹಜವಾದ, ವಿಚಿತ್ರವಾದ ಸಂಕೀರ್ಣ ವಿಚಾರಗಳನ್ನು ಪ್ರತಿಪಾದಿಸಿದ್ದಾನೆ. ಇವನ ಕಾದಂಬರಿಗಳಲ್ಲಿ ವಾಸ್ತವಿಕತೆ ಹಾಗೂ ವಿಲಕ್ಷಣ ಅಂಶಗಳನ್ನು ಗುರುತಿಸಬಹುದು. ಇವನು 14 ಸಂಪುಟಗಳ ಮೇರುಕೃತಿ ಟಾರ್ನ್ರೋಸೆನ್ಸ್ ಬೊಕ್ (1832-35) ಅನ್ನು 1832ರಲ್ಲಿ ಬರೆಯಲುಪಕ್ರಮಿಸಿದ. ಬೇರೆ ಬೇರೆ ಕಾಲದಲ್ಲಿ ಬರೆದ ಐತಿಹಾಸಿಕ ಕಾದಂಬರಿಗಳು, ಸಣ್ಣ ಕಥೆಗಳು, ರಮ್ಯ ಕಥನ ಕವನಗಳು, ನಾಟಕಗಳು, ಭಾವಗೀತೆಗಳು-ಮೊದಲಾದುವು ಈ ಬೃಹತ್ ಸಂಪುಟಗಳಲ್ಲಿ ಅಡಗಿವೆ. ನೀಳ್ಗತೆಗಳ ರಚನೆಯಲ್ಲಿ ಇವನ ಪ್ರತಿಭೆ ಅಸಾಮಾನ್ಯ. 1839ರಲ್ಲಿ ಬರೆದ ಡೆಟ್ಗಾರ್ ಅನ್ ಎಂಬ ಇವನ ಅತ್ಯುತ್ತಮ ಕಥೆ ಇವನ ಸಮಕಾಲೀನ ಸಮಾಜದ ಚಿತ್ರಣವನ್ನೊಳಗೊಂಡಿದೆ. ವಿವಾಹ ಸಮಸ್ಯೆಯನ್ನು ಕುರಿತ ಸಾಂಪ್ರದಾಯಿಕ ದೃಷ್ಟಿಯನ್ನು ಅಲ್ಲಗಳೆಯುವ ಈ ನೀಳ್ಗತೆ ಬಹುದೊಡ್ಡ ವಿವಾದವೆಬ್ಬಿಸಿತು. ಲೇವಾದೇವಿ ವ್ಯಾಪಾರಿಯೊಬ್ಬನನ್ನು ವಿಷಹಾಕಿ ಕೊಂದನೆಂಬ ಆಪಾದನೆಗೆ ಗುರಿಯಾದ ಈತ 1851ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ತೆರಳಿದ. ಇವನ ಮೇಲಿನ ಗುಮಾನಿಯಲ್ಲಿ ತಥ್ಯಾಂಶ ಸ್ವಲ್ಪ ಇದೆಯೆಂಬ ವಿಷಯ ಅನಂತರ ಖಚಿತವಾಯಿತು. ಅಲ್ಲಿನ ಟೆಕ್ಸಸ್ ಪ್ರಾಂತ್ಯದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಇವನ ಬಳಿ ಇದ್ದುವೆಂದು ಹೇಳಲಾದ ಹಲವು ಅತ್ಯಮೂಲ ಹಸ್ತಪ್ರತಿಗಳನ್ನು ದರೋಡೆಕೋರರು ಅಪಹರಿಸಿದರು. ಅಧ್ಯಕ್ಷ ಲಿಂಕನ್ನನಿಗೆ ದೂರಿತ್ತರೂ ಅವು ಪತ್ತೆಯಾಗಲಿಲ್ಲ. ಆ ವೇಳೆಗಾಗಲೇ ಪ್ರಕಟವಾಗಿದ್ದ ರಮ್ಯ ಕಾದಂಬರಿಗಳಿಂದ ಇವನ ಕೀರ್ತಿ ಅಪಾರವಾಗಿ ಬೆಳೆಯಿತಾದರೂ ರಮ್ಯ ಕಥೆಯಂತಿರುವ ಇವನ ರೋಮಾಂಚಕಾರಿ ಜೀವನವೇ ಈತನಿಗೆ ಎಲ್ಲದಕ್ಕಿಂತ ಮಿಗಿಲಾದ ಖ್ಯಾತಿ ದೊರಕಿಸಿತು. ಹಲವಾರು ಬಾರಿ ನಾನಾ ಅಪರಾಧಗಳ ಆಪಾದನೆಗೆ ಸಿಲುಕಿಕೊಂಡರೂ ಅವುಗಳಿಂದ ತಪ್ಪಿಸಿಕೊಂಡು ತಿರುಗಿದ ಇವನ ಸ್ವಾರಸ್ಯಮಯವಾದ ಜೀವನ ಕಥೆಯನ್ನು ಸ್ವೀಡನ್ನಿನ ಜನ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]