ಕಾರಣಗಿರಿ ಶ್ರೀವರಸಿದ್ಧಿವಿನಾಯಕಸ್ವಾಮಿ
ಪುರಾಣ ಪ್ರಸಿದ್ಧ ಅಗಸ್ತ್ಯ ಮಹರ್ಷಿಗಳ ಶ್ರೀಕರಾರ್ಚನೆ ಮತ್ತು ರಾಮಾಯಣದ ಶ್ರೀರಾಮನಿಂದ ಎರಡೆರಡು ಸಲ ಪೂಜಿಸಲ್ಪಟ್ಟಿರುವ ಪ್ರತೀತಿಗಳಿಂದ ಕಾರಣಗಿರಿಯ ಶ್ರೀವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ ಮಲೆನಾಡು ಮತ್ತು ಉಡುಪಿ ಜಿಲ್ಲೆಯ ಭಕ್ತರ ಆರಾಧ್ಯ ಕೇಂದ್ರವಾಗಿ ಮುಗಿಲೆತ್ತರಕ್ಕೆ ರಾರಾಜಿಸುತ್ತಿದೆ.
ಎಲ್ಲಿದೆ ಕಾರಣಗಿರಿ?
ಕರ್ನಾಟಕದಲ್ಲಿ ಅತ್ಯುನ್ನತ ರಾಜಗೋಪುರ ಹೊಂದಿರುವ ದೇವಾಲಯಗಳು ಕೆಲವೇ ಕೆಲವು. ರಾಜಗೋಪುರದಿಂದ ವಿರಜಿಸುವ ಗಣಪತಿಯ ಸನ್ನಿಧಾನ ಬೇರೆಲ್ಲೂ ಇಲ್ಲವೆನ್ನಬಹುದು. ಭಕ್ತರರೊಬ್ಬರ ಮನದಭೀಷ್ಠ ನೆರವೇರಿದ ಕಾರಣ ತೀರಾ ಇತ್ತೀಚೆಗೆ ರಾಜಗೋಪುರ ನಿರ್ಮಾಣಗೊಂಡ ಈ ದೇಗುಲ ಶಿವಮೊಗ್ಗ ಜಿಲ್ಲೆ ಹೊಸನಗರ -ನಗರ ಮಾರ್ಗದ ಹೆದ್ದಾರಿಯಲ್ಲಿ ಯಾತ್ರಿಕರನ್ನು ಕೈಬೀಸಿ ಕರೆಯುವಂತಿದೆ.
ಪೌರಾಣಿಕ ಹಿನ್ನೆಲೆ
ಪುರಾಣ ಕಾಲದಲ್ಲಿ ಅಗಸ್ತ್ಯ ಮಹರ್ಷಿಗಳು ಈ ಸ್ಥಳದಲ್ಲಿ ಬಹುಕಾಲ ನೆಲೆನಿಂತು ಈಗಿನ ದೇಗುಲದ ಎದುರಿನ ಪುಷ್ಕರಣಿಯಲ್ಲಿ ವರಸಿದ್ಧಿವಿನಾಯಕ ಸ್ವಾಮಿಯ ವಿಗ್ರಹವನ್ನಿಟ್ಟು ಆರಾಧಿಸಿದ್ದರು ಎಂಬ ಐತಿಹ್ಯವಿದೆ. ನಂತರ ಪುಷ್ಕರಣಿಯಿಂದ ಮೇಲ್ಭಾಗಕ್ಕೆ ತಂದು ಈಗಿರುವ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ನಾಂದಿ ಹಾಕಿಕೊಟ್ಟರಂತೆ. ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲು ಲಂಕೆಗೆ ಹೋಗುವ ಮಾರ್ಗದಲ್ಲಿ ಇಲ್ಲಿಗೆ ಬಂದು ಅಗಸ್ತ್ಯ ಮಹರ್ಷಿಗಳ ದರ್ಶನ ಪಡೆದು ಇಲ್ಲಿನ ವಿನಾಯಕನನ್ನು ಪೂಜಿಸಿದನಂತೆ. ಸೀತೆಯೊಂದಿಗೆ ಹಿಂತಿರುಗಿ ಬರುವಾಗ ಮತ್ತೊಮ್ಮೆ ಬಂದು ಪೂಜಿಸಿ ಹೋಗುವಂತೆ ಅಗಸ್ತ್ಯರು ಶ್ರೀರಾಮನಿಗೆ ಸೂಚಿಸಿದರಂತೆ.
ರಾವಣಾದಿಗಳನ್ನು ಮರ್ದಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗುವ ಸಂತಸದಲ್ಲಿ ಇದೇ ದಾರಿಯಲ್ಲಿ ಹಿಂತಿರುಗುತ್ತಿದ್ದ ಶ್ರೀರಾಮ ಅಗಸ್ತ್ಯರ ಮಾತನ್ನು ಮರೆತನು. ಮುಂದಕ್ಕೆ ಪ್ರಯಾಣಿಸುತ್ತಿದ್ದಂತೆ ಶ್ರೀರಾಮ ಸಂಚರಿಸುತ್ತಿದ್ದ ಪುಷ್ಪಕ ವಿಮಾನಕ್ಕೆ ಬೃಹದಾಕಾರದ ಬೆಟ್ಟ(ಗಿರಿ)ಅಡ್ಡ ನಿಂತಿತು. ಆಗ ಶ್ರೀರಾಮನು ಕಿಂ ಕಾರಣಂ ಗಿರಿಃ (ಈ ಬೆಟ್ಟ ಅಡ್ಡವೇಕೆ) ಎಂದನಂತೆ. ಆಗ ಜೊತೆಗಿದ್ದ ಲಕ್ಷ್ಮಣ ಅಗಸ್ತ್ಯರ ಮಾತನ್ನು ನೆನಪಿಸಿ ಸಿದ್ಧಿವಿನಾಯಕನನ್ನು ಪೂಜಿಸಲು ತಿಳಿಸಿದನಂತೆ. ನಂತರ ಶ್ರೀರಾಮ ಸೀತಾ ಸಹಿತನಾಗಿ ಬಂದು ಈ ದೇವರಿಗೆ ಪೂಜೆ ಸಲ್ಲಿಸಿ ಮುಂದೆ ಪ್ರಯಾಣ ಬೆಳೆಸಿ ೨ ಕಿ.ಮೀ.ದೂರದ ಸ್ಥಳದಲ್ಲಿ ಶ್ರೀರಾಮಚಂದ್ರಾಪುರದಲ್ಲಿ ವಿಶ್ರಾಂತಿಗೆ ಉಳಿದನು. ಆತ ತಂಗಿದ್ದ ಆ ಸ್ಥಳ ಶ್ರೀರಾಮಚಂದ್ರಾಪುರ ಎಂದು ಪ್ರಸಿದ್ಧವಾಯಿತು. ಶಂಕಾರಾಚಾರ್ಯರ ಶಿಷ್ಯರಿಂದ ಈ ಸ್ಥಳದಲ್ಲಿ ಮಠ ಸ್ಥಾಪನೆಯಾಗಿ ಈಗ ಶ್ರೀರಾಮಚಂದ್ರಾಪುರ ಮಠ ಎಂದು ಪ್ರಸಿದ್ಧಿಯಾಗಿದೆ.
ಶ್ರೀರಾಮನಿಂದ ಕಿಂ ಕಾರಣಂ ಗಿರಿಃ ಎಂಬ ಉಧ್ಘಾರದಿಂದ ಈ ಸ್ಥಳಕ್ಕೆ ಕಾರಣಗಿರಿ ಎಂಬ ಹೆಸರು ಉಳಿದುಕೊಂಡಿತು. ಪ್ರತಿ ವರ್ಷ ರಾಮ ನವಮಿಯಂದು ರಾಮಚಂದ್ರಾಪುರ ಮಠದಲ್ಲಿ ಮಹಾರಥೋತ್ಸವ ಜರುಗುತ್ತದೆ. ರಥೋತ್ಸವದ ಹಿಂದಿನ ದಿನ ಶ್ರೀರಾಮ ದೇವರ ಉತ್ಸವ ಮೂರ್ತಿಯ ಪಲ್ಲಕ್ಕಿ ೨ ಕಿ.ಮೀ.ದೂರದ ಈ ದೇಗುಲಕ್ಕೆ ಆಗಮಿಸಿ ಪೂಜೆ ನಡೆಯುತ್ತದೆ. ಇದು ಶ್ರೀರಾಮನಿಗೂ ಇಲ್ಲಿನ ವಿನಾಯಕನಿಗೂ ಇರುವ ಸಂಬಂಧದ ಕುರುಹಾಗಿದೆ.
ಇತ್ತೀಚೆಗೆ ವರ್ಷಾನುವರ್ಷ ಸತತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಈ ದೇಗುಲ ದಿನಂಪ್ರತಿ ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿದೆ. ಪ್ರತಿ ಸಂಕಷ್ಠಿಯಂದು ೪೮ ಕಾಯಿಗಳಿಗೆ ಕಡಿಮೆಯಿಲ್ಲದಷ್ಟು ಸಾಮೂಹಿಕ ಗಣ ಹವನ ನಡೆಯುತ್ತದೆ. ದೇಗುಲದ ಆವರಣದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವಿದ್ದು ಹಲವು ಶುಭ ಸಮಾರಂಭಗಳು ಜುರುಗುತ್ತಿರುತ್ತವೆ. ದೇಗುಲದ ಸುತ್ತಲೂ ಸುಮಾರು ೫೦ ಲಕ್ಷ ರೂ.ಅಂದಾಜು ವೆಚ್ಚದಲ್ಲಿ ಚಂದ್ರಶಾಲೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಇಲ್ಲಿನ ಸಿದ್ಧಿವಿನಾಯಕ ಭಕ್ತರ ಅಭೀಷ್ಠಗಳನ್ನು ಸಿದ್ಧಿಸುತ್ತಾನೆಂಬ ಬಲವಾದ ನಂಬಿಕೆಯಿದೆ. ಹಲವು ಭಕ್ತರು ತಮ್ಮ ಕೋರಿಕೆ ಈಡೇರಿದ್ದಕ್ಕಾಗಿ ಹರಕೆ ಒಪ್ಪಿಸುತ್ತಿರುತ್ತಾರೆ. ಈಗ ಎರಡು ವರ್ಷಗಳ ಹಿಂದೆ ಇಲ್ಲಿನ ಸ್ಥಳಿಯರಾದ ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲಿ ವೃತ್ತಿ ನಡೆಸುತ್ತಿರುವ ಗಂಗಾಧರ ಐತಾಳ ಒಂದು ಕೋಟಿ ರೂ.ವೆಚ್ಚದಲ್ಲಿ ೧೦೦ ಅಡಿ ಎತ್ತರದ ರಾಜಗೋಪುರ ನಿರ್ಮಿಸಿ ಹರಕೆ ಸಮರ್ಪಿಸಿದರು. ರಾಜ್ಯ ಹೆದ್ದಾರಿಯಲ್ಲಿನ ಈ ರಾಜಗೋಪುರದ ವೈಭವದ ನಡುವೆ ಭಕ್ತರನ್ನು ಹರಸುತ್ತುರುವ ಸಿದ್ಧಿವಿನಾಯಕನ ದರ್ಶನ ಪಡೆದು ಭಕ್ತರು ಧನ್ಯತೆ ಅನುಭವಿಸುತ್ತಿದ್ದಾರೆ.