ವಿಷಯಕ್ಕೆ ಹೋಗು

ಕಾನ್ಸ್ಟಾಂಟಿನ್ ಟ್ಸುಯುಲ್ಕೂವ್ಸ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾನ್ಸ್ಟಾಂಟಿನ್ ಎಡ್ವರ್ಡೋವಿಚ್ ಟ್ಸುಯುಲ್ಕೂವ್ಸ್ಕಿ (1857-1935). ರಷ್ಯದ ಭೌತವಿಜ್ಞಾನಿ. ಬಾಹ್ಯಾಕಾಶದ ದಿಗ್ವಿಜಯಕ್ಕಾಗಿ ರಾಕೆಟ್ಟಿನ ಬಳಕೆಯ ಬಗ್ಗೆ ಮೊತ್ತಮೊದಲು ಆಳವಾದ ವೈಜ್ಞಾನಿಕ ಸಂಶೋಧನೆ ನಡೆಸಿದಾತ. ವರ್ತಮಾನ ವಿಜ್ಞಾನದ ಮಟ್ಟಕ್ಕಿಂತ ಬಹಳ ಎತ್ತರದಲ್ಲಿದ್ದು ಅನೇಕ ದಶಕಗಳ ತರುವಾಯವೇ ಸಾಧ್ಯವಾದ ಬಾಹ್ಯಾಕಾಶ ಯಾನದ ಬಗ್ಗೆ ವಿಶ್ಲೇಷಣೆ ನಡೆಸಿ, ಅದರ ತತ್ವಗಳನ್ನು ನಿರೂಪಿಸಿದ ಪ್ರವಾದಿ.

ಬದುಕು

[ಬದಲಾಯಿಸಿ]

ಮಾಸ್ಕೋ ನಗರದ ಈಶಾನ್ಯ ದಿಕ್ಕಿನಲ್ಲಿರುವ ರಾಯಜಾನ್ ಪ್ರಾಂತ್ಯಕ್ಕೆ ಸೇರಿದ ಇಶೆವ್‍ಸ್ಕೊಯೆ ಎಂಬ ಹಳ್ಳಿಯಲ್ಲಿ 1857ರ ಸೆಪ್ಟೆಂಬರ್ 17ರಂದು ಟ್ಯುಯಲ್‍ಕೂವ್ಸ್ಕಿಯ ಜನನ. ಈತನ ತಂದೆ ಮೊದಲು ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ. ಬಳಿಕ ಶಾಲಾ ಅಧ್ಯಾಪಕ ಹಾಗೂ ಸರ್ಕಾರದ ಒಬ್ಬ ಕಿರಿಯ ಅಧೀಕಾರಿಯಾಗಿಯೂ ಕೆಲಸ ಮಾಡಿದ. ಅಣೂಗುಟ್ಸುಯುಲ್‍ಕೂವ್ಸ್ಕಿಗೆ ಕೆಂಜ್ವರ ತಾಗಿ ಅದರಿಂದ ಆತ ಕಿವುಡನಾದ. ವಿಜ್ಞಾನ ಮತ್ತು ಗಣಿತದಲ್ಲಿ ಇವನಿಗೆ ಅಪಾರಾಸಕ್ತಿ. 16ನೆಯ ವಯಸ್ಸಿನಲ್ಲಿ ತಂದೆ ಇವನನ್ನು ಮಾಸ್ಕೋಕೆ ಕಳುಹಿಸಿದ. ಹಣದ ಮುಗ್ಗಟ್ಟು ಹಾಗೂ ಕಿವುಡಿನಿಂದಾಗಿ ಶಿಷ್ಟವಾದ ಶಿಕ್ಷಣವನ್ನು ಪಡೆಯಲು ಈತನಿಗೆ ಸಾಧ್ಯವಾಗಲಿಲ್ಲ. ಸ್ವತಃ ತಾನೇ ರಚಿಸಿದ ಕಿವಿಹಳೆಯನ್ನು ಉಪಯೋಗಿಸಿಕೊಂಡು ಭಾಷಣಗಳನ್ನು ಆಲಿಸುತ್ತಿದ್ದುದ್ದೇ ಅಲ್ಲದೆ ಗ್ರಂಥಭಂಡಾರಗಳಲ್ಲಿ ಅಧ್ಯಯನ ನಡೆಸಿ ಸಂಪೂರ್ಣ ಸ್ವಪ್ರಯತ್ನದಿಂದ ಜ್ಞಾನವನ್ನು ಬೆಳಯಿಸಿಕೊಂಡ. ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಈತನ ಆಸಕ್ತಿ ಆಗಲೇ ಮೂಡಿದ್ದು. ಅದಕ್ಕೆ ಬೇಕಾಗುವ ವಾಹನಗಳ ಬಗ್ಗೆ ಕೂಡ ತೀವ್ರವಾಗಿ ಯೋಚಿಸತೊಡಗಿದ.

1876ರ ವೇಳೆಗೆ ಈತನ ಮನೆಯವರು ಉರಲ್ಸ್ ಪ್ರಾಂತ್ಯದ ವಯಾಟ್‍ಕ ಎಂಬ ಸ್ಥಳದಲ್ಲಿ ನೆಲೆಸಿದರು. ಟ್ಸುಯುಲ್‍ಕೂವ್ಸ್ಕಿ ಅಲ್ಲಿಗೆ ತೆರಳಿ ಭೌತ ಮತ್ತು ಗಣಿತ ಶಾಸ್ತ್ರಗಳ ಬಗ್ಗೆ ಒಬ್ಬ ಖಾಸಗಿ ಅಧ್ಯಾಪಕನಾಗಿ ಸಣ್ಣ ಕೋಣೆಯೊಂದರಲ್ಲಿ ಯಂತ್ರಗಳ ನಿರ್ಮಾಣ ಮಾಡಲು ತೊಡಗಿದ. ಮುಂದೆ ರಯಾಜಾನ್‍ಗೆ ಹಿಂತಿರುಗಿ (1878) ಅಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಅತ್ಯಂತ ಕೆಳಗಿನ ಸ್ಥಾನವಾದ ಜನತಾ ಶಾಲಾ ಅಧ್ಯಾಪಕ ಎಂಬ ಅರ್ಹತಾ ಪಾತ್ರವನ್ನು ಪಡೆದು ಅಂಕಗಣಿತ, ಜ್ಯಾಮಿತಿ ಮತ್ತು ಭೌತ ಶಾಸ್ತ್ರಗಳ ಅಧ್ಯಾಪಕನಾಗಿ ಮಾಸ್ಕೋ ಬಳಿಯಲ್ಲಿನ ಬೋರೋವ್ಸ್ಕ್ ಎಂಬ ತಾಲ್ಲೂಕಿನ ಶಾಲೆಯನ್ನು ಸೇರಿದ.

ವೈಜ್ಞಾನಿಕ ಸಾಧನೆ

[ಬದಲಾಯಿಸಿ]

ನಕ್ಷೆಗಳ ಮೂಲಕ ಇಂದ್ರಿಯಾನುಭವಗಳ ಚಿತ್ರಣ ಎಂಬ ಪ್ರಬಂಧದೊಡನೆ ವೈಜ್ಞಾನಿಕ ಸಂಶೋಧನೆಗಳ ಪ್ರಕಟಣೆಯನ್ನು ಆರಂಭಿಸಿದ. (1880) ಅನಿಲಗಳ ಸಿದ್ಧಾಂತ ಪ್ರಕಟಣೆಯ ತರುವಾಯ ಬರೆದ ಜೀವಂತ ವಸ್ತುಗಳ ಸೈದ್ಧಾಂತಿಕ ಬಲವಿಜ್ಞಾನ ಎಂಬ ಪ್ರಬಂಧಕ್ಕಾಗಿ ಈತನನ್ನು ಸೆಂಟ್ ಪೀಟರ್ಸ್ ಬರ್ಗ್‍ನ ಭೌತ ಮತ್ತು ರಸಾಯನ ಶಾಸ್ತ್ರಗಳ ಸಂಘದ ಸದಸ್ಯನನ್ನಾಗಿ ಚುನಾಯಿಸಿದರು. ಗುರುತ್ವಾಕರ್ಷಣೆ ಮತ್ತು ಜಲನವಿರೋಧಕವಾದ (ಅನಿಲ ಇತ್ಯಾದಿ). ಯಾವ ಪದಾರ್ಥವೂ ಇಲ್ಲದ ಜಾಗದಲ್ಲಿ ವಸ್ತುಗಳ ಚಲನೆಯ ಬಗ್ಗೆ ಮುಕ್ತಾಕಾಶ ಎಂಬ ಹೊತ್ತಗೆಯಲ್ಲಿ (1883) ವಿಮರ್ಶಿಸಿದ. ಈ ಪ್ರಕಟಣೆಯಲ್ಲಿ ರಾಕೆಟ್ಟಿನ ಶಕ್ತಿಯಿಂದ ಚಲಿಸುವ ಬಾಹ್ಯಾಕಾಶ ನೌಕೆಯ ಚಕ್ರವನ್ನು ತೋರಿಸಲಾಗಿತ್ತು. ವಾಯುಯಾನಶಾಸ್ತ್ರದ ಏರೋನಾಟಿಕ್ಸ್ ಬಗ್ಗೆ ಅತ್ಯಂತ ಆಸಕ್ತಿ ಹೊಂದಿದ್ದ ಟ್ಸುಯುಲ್‍ಕೂವ್ಸ್ಕಿಯನ್ನು ವಿಮಾನ ಮತ್ತು ಲೋಹದಲ್ಲಿ ತಯಾರಿಸಿದ ಆಕಾಶ ಬುಟ್ಟಿಗಳನ್ನು ಕುರಿತ ತಾತ್ತ್ವಿಕ ಸಂಶೋಧನೆ ನಡೆಸಿ, ಈ ವಿಷಯಗಳ ಬಗ್ಗೆ ಮಾಸ್ಕೋದಲ್ಲಿ ಭಾಷಣ ಮಾಡಲು ಆಹ್ವಾನಿಸಿದರು. ಲೋಹದ ಆಕಾಶನೌಕೆ ಏರುವಾಗ ಅದರ ಎತ್ತರ ಮತ್ತು ಶಾಖವನ್ನು ಅವಲಂಬಿಸಿದಂತೆ ಗಾತ್ರವನ್ನು ಬದಲಾಯಿಸಿ ಅದರ ಪ್ಲವನತೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿರುವಂತೆ ಮಾಡಲು ಸಾಧ್ಯವೆಂದು ಲೆಕ್ಕಾಚಾರಗಳಿಂದ ಈತ ತೋರಿಸಿಕೊಟ್ಟ. ಇಂಥ ವಾಯುನೌಕೆಯನ್ನು ಮೇಲಕ್ಕೆತ್ತುವ ಹೈಡ್ರೋಜನನ್ನು ಬಿಸಿಮಾಡುವುದಕ್ಕೆ ನೌಕೆಯಲ್ಲಿರುವ ಯಂತ್ರದಿಂದ ಹೊರಬರುವ ಬಿಸಿ ಅನಿಲಗಳನ್ನು ನೌಕೆಯ ಮೇಲ್ಮೈಯ ಸುತ್ತಲೂ ಹರಿಸುವ ವ್ಯವಸ್ಥೆಯನ್ನೂ ಸೂಚಿಸಿದ್ದ. ಆದರೆ ಆ ಕಾಲದ ಯಂತ್ರಜ್ಞಾನದ ನೆರವಿನಿಂದ ಇಂಥ ನೌಕೆಯ ನಿರ್ಮಾಣ ಅಸಾಧ್ಯವಾಗಿತ್ತು.