ವಿಷಯಕ್ಕೆ ಹೋಗು

ಕಾನೂನಿನ ಕಲ್ಪನೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಳ್ಳು ಅಥವಾ ನಟನೆಗಳೆಂದು ತಿಳಿದೂ ಕಾನೂನಿನ ದೃಷ್ಟಿಯಲ್ಲಿ ನಿಜವೆಂಬಂತೆ ಸಾಮಾನ್ಯ ಒಪ್ಪಿಗೆಯಿಂದ ನೀಡಲಾದ ಹೇಳಿಕೆಗಳು ಅಥವಾ ಊಹೆಗಳು (ಲೀಗಲ್ ಫಿಕ್ಷನ್ಸ್). ಯಾವುದೋ ಸಂದರ್ಭ ಅಥವಾ ಸನ್ನಿವೇಶದ ಅಗತ್ಯದಿಂದಾಗಿ ಈ ಬಗೆಯ ಧೋರಣೆ ತಳೆಯಲಾಗುತ್ತದೆ.

ನಿತ್ಯಜೀವನದಲ್ಲಿ ಕಲ್ಪನೆ

[ಬದಲಾಯಿಸಿ]

ನಿತ್ಯಜೀವನದಲ್ಲಿ ಕಲ್ಪನೆಗಳಿಗೇನೂ ಕೊರತೆಯಲ್ಲ. ಅದೃಷ್ಟದೇವತೆಯ ಆಗಮನದ ನಿರೀಕ್ಷೆ ಮತ್ತು ಸ್ವಾಗತವನ್ನು ಕುರಿತ ಸಂಪ್ರದಾಯ ಒಂದು ದೃಷ್ಟಾಂತ. ಯಾವುದೋ ಒಂದು ಅಧಿಕೃತ ಸಂಧಾನ ವಾಸ್ತವವಾಗಿ ಯಶಸ್ವಿಯಾಗಿಲ್ಲದಿದ್ದರೂ ತತ್ಸಂಬಂಧವಾಗಿ ಏರ್ಪಟ್ಟ ಔತಣಕೂಟದಲ್ಲಿ ಉಭಯಪಕ್ಷಗಳೂ ಸದ್ಭಾವನೆಯ ಲಂಬಿತ ಭಾಷಣ ಮಾಡುವುದೂ ಸಂಧಾನ ಯಶಸ್ವಿಯಾಯಿತೆಂದು ಪರಸ್ಪರ ಹೊಗಳುವುದೂ ಸಂಯುಕ್ತ ಹೇಳಿಕೆ ನೀಡುವುದೂ ಕಲ್ಪನೆಗಳೇ. ಮುಂದುವರಿದ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ನೆರವು ನೀಡಿದಾಗ ಹಾಗೆಂದೇ ಸ್ವೀಕರಿಸುವುದು ಬೆಳೆಯುತ್ತಿರುವ ರಾಷ್ಟ್ರಗಳ ಮರ್ಯಾದೆಗೆ ಒಪ್ಪುವುದಿಲ್ಲವಾದ್ದರಿಂದ ಅದನ್ನು ಪರಸ್ಪರ ಆರ್ಥಿಕ ಸಹಕಾರವೆಂದು ಕರೆಯುವುದು ಕೂಡ ಕಲ್ಪನೆಯ ಒಂದು ಉದಾಹರಣೆ. ರಾಜರು, ರಾಜಕಾರಣಿಗಳು, ಶ್ರೀಮಂತ ಪ್ರಭುಗಳು ಮುಂತಾದವರ ಅಧಿಕಾರ ಸ್ಥಾನಗಳು ಲುಪ್ತವಾದ ಮೇಲೂ ಅವರ ಗೌರವದ ಬಿರುದುಗಳನ್ನು ಹಾಗೆಯೇ ಉಳಿಸಿಕೊಂಡು ಅವರನ್ನು ಹಾಗೆಯೇ ಸಂಬೋಧಿಸುವುದುಂಟು. ಇದೂ ಸಾಮಾನ್ಯವಾಗಿ ಅವಿರೋಧಿಯಾದ ಕಲ್ಪನೆ, ಔಪಚಾರಿಕ ಮಿಥ್ಯೆ. ವಿಜ್ಞಾನದ ಎಷ್ಟೋ ಸೂತ್ರಗಳನ್ನು ಕಂಡು ಹಿಡಿಯಲು ಸಾಧ್ಯವಾಗಿರುವುದು ಕಲ್ಪನೆಗಳ ಅಥವಾ ಊಹೆಗಳ ತಳಹದಿಯ ಮೇಲೆ. ಅರ್ಥಶಾಸ್ತ್ರದಲ್ಲಿ ಮಾರುಕಟ್ಟೆ, ಆರ್ಥಿಕ ಮಾನವ, ಬೇಡಿಕೆ ಸರಬರಾಯಿಗಳೇ ಮುಂತಾದ ಬಲಗಳ ಪರಿಣಾಮ-ಈ ಎಲ್ಲ ವಿವೇಚನೆಗಳೂ ವಾಸ್ತದ ಪರಿಸ್ಥಿತಿಯನ್ನು ಸರಳಗೊಳಿಸುವ ಕೆಲವು ಊಹೆಗಳನ್ನೇ ಅವಲಂಬಿಸಿರುತ್ತವೆ. ಹೀಗೆ ಸರ್ವಸಮ್ಮತ ಊಹೆ ಅಥವಾ ಕಲ್ಪನೆಗಳೇ ಅನೇಕ ಶಾಸ್ತ್ರಗಳ ಮಹೋನ್ನತ ಸೂತ್ರಗಳಿಗೆ ಮೆಟ್ಟಲುಗಳಾಗಿವೆ.

 

ಕಾನೂನಿನ ಕಲ್ಪನೆಗಳ ಉದ್ದೇಶ

[ಬದಲಾಯಿಸಿ]

ಕಾನೂನಿನ ಕಲ್ಪನೆಗಳ ಉದ್ದೇಶ ಕೂಡ ಭಿನ್ನವಾದವಲ್ಲ. ಅಗತ್ಯವಾದ ಹಲವಾರು ಬದಲಾವಣೆಗಳು ಸುಸೂತ್ರವೂ ಮರ್ಯಾದಾಪೂರಿತವೂ ಆಗುವಂತೆ ಮಾಡಲು ಕಲ್ಪನೆಗಳು ಒಂದು ಸಾಧನ. ವಿಜ್ಞಾನದ ಕಲ್ಪನೆಗಳ ಅಥವಾ ಊಹೆಗಳ ಹಾಗೆ ಇವು ಕೂಡ ನಿಜವಲ್ಲವೆಂದು ತಿಳಿದಿದ್ದೂ ಉಂಟೆಂದು ಭಾವಿಸಿಕೊಂಡು ಯಾವುದೋ ಒಂದು ಗುರಿಯನ್ನು ನಿಲುಕುವಂಥವು.ಕಾನೂನಿನ ಕಲ್ಪನೆಗೆ ಗುರಿಯಾಗುವವುಗಳಲ್ಲಿ ಮುಖ್ಯವಾದ್ದೆಂದರೆ ಕಾಲ. ಒಂದು ದೇಶದ ಸಂಸತ್ತಿನ ಅಧಿವೇಶನ ನಡೆಯುತ್ತಿದ್ದು. ಅಂದು ಮಧ್ಯರಾತ್ರಿಯಿಂದಾಚೆಗೆ ಕೂರಲು ಅದಕ್ಕೆ ಅಧಿಕಾರವಿಲ್ಲದಿರಬಹುದು. ಆದರೆ ಅದರ ಕಲಾಪ ಇನ್ನೂ ನಾಲ್ಕಾರು ಗಂಟೆ ಹಿಡಿಸಬಹುದು. ಅವೆಲ್ಲವೂ ಅತಿ ಮುಖ್ಯವಾದವು. ಆಗ ಅದು ಮಾಡಬಹುದಾದ್ದು ಇಷ್ಟೆ : ಗಡಿಯಾರದ ಮುಳ್ಳನ್ನು ಹಿಂದೆ ತಿರುಗಿಸುವುದು. ಕಲಾಪಗಳೆಲ್ಲ ಮುಕ್ತಾಯವಾಗುವವರೆಗೂ ಸಂಸತ್ತಿನ ಸಭೆಯ ಗಡಿಯಾರ 12 ಗಂಟೆ ತೋರಿಸದಿದ್ದರಾಯಿತು. ಎಂದರೆ ಅದು ನಿಯಮೋಲ್ಲಂಘನೆ ಮಾಡಿದಂತಾಗುವುದಿಲ್ಲ. ಸದುದ್ದೇಶದಿಂದ ಕೈಕೊಂಡ ಈ ಕ್ರಮಕ್ಕೆ ಎಲ್ಲರ ಒಪ್ಪಿಗೆಯುಂಟು. ಇದೊಂದು ಕಲ್ಪನೆ. ರಾಷ್ಟ್ರ ಸಂವಿಧಾನವನ್ನು ಬದಲಾಯಿಸದೆಯೂ ಉದ್ದಿಷ್ಟ ಗುರಿ ಸಾಧಿಸಲು ಕೈಕೊಂಡ ಉಪಾಯ.ಇಂಥ ಅನೇಕ ಕಲ್ಪನೆಗಳನ್ನು ಕಾನೂನಿನ ಕ್ಷೇತ್ರದಲ್ಲಿ ಕಾಣಬಹುದು. ಸಂತಾನ ಇಲ್ಲದವನು ಇನ್ನೊಬ್ಬನ ಮಗ ತನ್ನ ಆಸ್ತಿಯ ಉತ್ತರಾಧಿಕಾರಿಯಾಗಿ ತನ್ನ ಮಗನಂತೆ ನಡೆದುಕೊಳ್ಳಲು ಅವನನ್ನು ದತ್ತು ತೆಗೆದುಕೊಳ್ಳಬಹುದು. ತನಗೇ ಹುಟ್ಟಿದ ಮಗನಾಗಿದ್ದರೆ ಹೇಗೋ ಹಾಗೆ ಕಾನೂನಿನ ಪ್ರಕಾರ ಅವನಿಗೆ ಎಲ್ಲ ಹಕ್ಕುಬಾಧ್ಯತೆಗಳೂ ಪ್ರಾಪ್ತವಾಗುತ್ತದೆ. ಅವನು ತನ್ನ ಮಗನೆಂಬುದೂ ಕಾನೂನಿನ ಒಂದು ಕಲ್ಪನೆ.[]

ಹಿಂದೂ ಅವಿಭಾಜ್ಯ ಕುಟುಂಬ

[ಬದಲಾಯಿಸಿ]

ಇನ್ನೊಂದು ಬಗೆಯ ಕಲ್ಪನೆಯುಂಟು. ಹಿಂದೂ ಅವಿಭಾಜ್ಯ ಕುಟುಂಬದ ಸದಸ್ಯನೊಬ್ಬ ಮಕ್ಕಳಿಲ್ಲದೆ ಸತ್ತರೆ, ಹಿಂದೆ ಇದ್ದ ಹಿಂದೂ ವಾರಸು ಕಾಯಿದೆಯ ಪ್ರಕಾರ ಅವನ ಭಾಗದ ಆಸ್ತಿ ಅವನ ವಾರಸುದಾರರಿಗೆ ಹೋಗುತ್ತಿತ್ತು. ಅವನ ವಿಧವೆಗೆ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರವಿರಲಿಲ್ಲ. ವಿಧವೆಯರು ಜೀವನಾಂಶಕ್ಕೆ ಮಾತ್ರ ಅರ್ಹರಾಗಿದ್ದರು. ಈ ಪರಿಸ್ಥಿತಿಯನ್ನು ತಪ್ಪಿಸಿಲೆಂದು ಒಂದು ಕಾಯಿದೆ ಮಾಡಲಾಯಿತು. ಗಂಡ ಸತ್ತರೂ ಅವನು ಬದುಕಿದ್ದರೆ ಯಾವ ಹಿಸ್ಸೆ ಸಿಗುತ್ತಿತ್ತೋ ಅಷ್ಟೇ ಪಾಲನ್ನು ಹೆಂಡತಿಗೆ ಕೊಡಬೇಕೆಂದು. ಅವನಿಗೆ ಮಗನಿದ್ದಿದ್ದರೆ ಎಷ್ಟು ಪಾಲು ಸಿಗಬಹುದಿತ್ತೋ ಅಷ್ಟನ್ನೂ ವಿಧವೆಗೆ ಕೊಡಬೇಕೆಂದು ವಿಧಿಸಲಾಯಿತು. ಇಂಥ ಸಂದರ್ಭದಲ್ಲಿ ಸತ್ತವನು ಬದುಕಿದ್ದಂತೆ, ಇಲ್ಲದ ಮಗ ಹುಟ್ಟಿದಂತೆ ಭಾವಿಸುವುದಕ್ಕೆ ಕಾನೂನಿನ ಮನ್ನಣೆಯಿದೆ.ವಿಧಿಸಲಾದ ಒಂದು ತೆರಿಗೆ, ತತ್ಸಂಬಂಧವಾದ ಕಾಯಿದೆಗೆ ಅನುಸಾರವಾಗಿಲ್ಲವೆಂದು ನ್ಯಾಯಾಲಯ ತೀರ್ಪು ನೀಡಿ. ವಸೂಲಾದ ಹಣವನ್ನು ವಾವಸು ಕೊಡಬೇಕೆಂದು ಸರ್ಕಾರಕ್ಕೆ ಆದೇಶ ನೀಡಿದಾಗ, ರಾಜ್ಯದ ವಿಧಾನ ಸಭೆ ಹೊಸದೊಂದು ಕಾಯಿದೆಗೆ ಅಂಗೀಕಾರ ನೀಡಿ ಅ ತೆರಿಗೆಯನ್ನು ಕ್ರಮಬದ್ಧಗೊಳಿಸಬಹುದು. ಆ ತೆರಿಗೆಯನ್ನು ವಸೂಲಿ ಮಾಡಿದಂದಿಗೂ ಹಿಂದಣ ಗೊತ್ತಾದ ಒಂದು ದಿನದಿಂದಲೇ ಅದು ಜಾರಿಗೆ ಬಂದಂತೆ ಭಾವಿಸತಕ್ಕದ್ದೆಂದು ಕಾಯಿದೆಯಲ್ಲಿ ವಿಧಿಸಬಹುದು. ಸಂಸತ್ತಿನ ಸಭೆಯ ಕಲಾಪವನ್ನು ಕಾನೂನುಬದ್ಧಗೊಳಿಸಲು ಗಡಿಯಾರದ ಮುಳ್ಳನ್ನು ಹಿಂತಳ್ಳಿದಂತೆಯೇ ಇದು ಕೂಡ.[]

ಕಲ್ಪನೆಯ ತತ್ತ್ವ

[ಬದಲಾಯಿಸಿ]

ಸಾಧಾರಣ ರೀತಿಯಿಂದ ಉತ್ತರಿಸಲಾಗದ ಬಿಕ್ಕಟ್ಟು ಅಥವಾ ಇಕ್ಕಟ್ಟಿನ ಸಂದರ್ಭಗಳಲ್ಲಿ ಕಲ್ಪನೆಯ ವಿಧಾನವನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಕಾನೂನಿನಿಂದಲೇ ನಿರ್ಮಿತವಾದ ಸಂದಿಗ್ಧ ಸಂದರ್ಭಗಳಿಗೆ ಪರಿಹಾರ ಪಡೆಯಲೋಸುಗ ಕಲ್ಪನೆಯ ತತ್ತ್ವವನ್ನು ಬಳಕೆ ಮಾಡಿಕೊಳ್ಳಬೇಕು. ಹಾಗೆ ಮಾಡದಿದ್ದರೆ ಅನೇಕ ಸಾರಿ ಆಡಳಿತ ವ್ಯವಸ್ಥೆಗೆ ಆತಂಕ ಉಂಟಾಗಬಹುದು. ಹಾನಿಯೂ ಉಂಟಾಗಬಹುದು. ಒಮ್ಮೊಮ್ಮೆ ಉಚ್ಚ ನ್ಯಾಯಾಲಯ ಅಥವಾ ಪರಮೋಚ್ಚ ನ್ಯಾಯಾಲಯ ನೀಡಿದ ತೀರ್ಪಿನಿಂದ ಉದ್ಭವಿಸಿದ, ಸಾಧಾರಣ ರೀತಿಯಿಂದ ಉತ್ತರಿಸಲಾಗದ ವಿಪರೀತ ಸಂದರ್ಭಗಳಲ್ಲಿ ಕಲ್ಪನೆಗೆ ಶರಣು ಹೋಗಬೇಕು. ಇಲ್ಲದಿದ್ದರೆ ರಾಜ್ಯದ ಆರ್ಥಿಕ, ರಾಜಕೀಯ, ಸಾಮಾಜಿಕ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಒಮ್ಮೊಮ್ಮೆ ಅನ್ಯಾಯಗಳೂ ಕಾನೂನಿನ ಹೆಸರಿನಲ್ಲಿ ನಡೆಯುವುದುಂಟು. ಇಂಥ ಅನ್ಯಾಯಗಳನ್ನು ತಪ್ಪಿಸಲು ಶಾಸಕಾಂಗ ಈ ತತ್ತ್ವವನ್ನು ಅವಲಂಬಿಸಿ ರಾಜ್ಯರಥವನ್ನು ಸುಗಮವಾಗಿ ನಡೆಸುತ್ತದೆ.ಆಧುನಿಕ ಕಾನೂನು ಕಲ್ಪನೆಗಳು ನಾನಾ ತೆರನಾದವು. ಇಲ್ಲದ್ದು ಇದ್ದಂತೆ ಭಾವಿಸುವುದನ್ನೂ ಅನೇಕ ವೇಳೆ ಕ್ರಮಬದ್ಧಗೊಳಿಸಲಾಗಿದೆ. ಒಬ್ಬ ಇನ್ನೊಬ್ಬನಿಂದ ತಪ್ಪಾಗಿ ಹಣ ಪಡೆದು, ಅದನ್ನು ವಿವೇಚನಾಯುಕ್ತವಾದ ರೀತಿಯಲ್ಲಿ ನಿಯೋಜಿಸಿದ್ದ ಪಕ್ಷದಲ್ಲಿ, ವಾಸ್ತವವಾಗಿ ಹಾಗೆಂದು ನಿಯುಕ್ತನಾಗಿಲ್ಲದಿದ್ದರೂ ಕಾರ್ಯತಃ ಅವನು ಆ ಹಣದ ನ್ಯಾಸಧಾರಿಯಾಗಿ (ಟ್ರಸ್ಟೀ) ವರ್ತಿಸಿದ್ದಾನೆಂದು ನ್ಯಾಯಾಲಯ ಪರಿಭಾವಿಸಬಹುದು.

ಕಾಯಿದೆಯ ರೀತ್ಯಾ ಸ್ಥಾಪಿಸಲಾದ ಸಂಘ

[ಬದಲಾಯಿಸಿ]

ಕಾನೂನಿನ ಕಲ್ಪನೆಯ ಇನ್ನೊಂದು ಉದಾಹರಣೆಯೆಂದರೆ ಯಾವುದಾದರೊಂದು ಕಾಯಿದೆಯ ರೀತ್ಯಾ ಸ್ಥಾಪಿಸಲಾದ ಸಂಘ. ಸಂಸ್ಥೆ ಅಥವಾ ಕಂಪನಿ. ಹಲವು ಜನರು ಕೂಡಿದ ಒಂದು ಸಂಘ, ಸಂಸ್ಥೆ ಅಥವಾ ಕಂಪನಿಯೂ ಕಾನೂನಿನ ದೃಷ್ಟಿಯಲ್ಲಿ ಒಂದು ವ್ಯಕ್ತಿ. ಇದೊಂದು ಕಲ್ಪನೆ. ಇದರಲ್ಲಿ ಸಮಾವೇಶಗೊಂಡ ಸದಸ್ಯರು ತಾತ್ಕಾಲಿಕವಾಗಿ ಇಲ್ಲವೆಂದೇ ಕಾನೂನು ಪರಿಭಾವಿಸುತ್ತದೆ. ಬಿಡಿ ವ್ಯಕ್ತಿಗಳನ್ನು ಬಿಟ್ಟು ಇಡಿಯ ಸಂಸ್ಥೆಯನ್ನೇ ವ್ಯಕ್ತಿಯೆಂದು ವ್ಯವಹರಿಸುವುದು ಅನೇಕ ವೇಳೆ ಅನುಕೂಲಕರ. ಆದರೆ ಕಂಪನಿಯ ತೆರೆಯ ಮರೆಯಲ್ಲಿ ಅನ್ಯಾಯಗಳು ಜರುಗಿದಾಗ ಕಾನೂನು ಅದರ ಹಿಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ಕ್ರಮ ಕೈಕೊಳ್ಳುವುದೂ ಉಂಟು. ಆಗ ಕಲ್ಪನೆಯನ್ನು ತಳ್ಳಿಡಲಾಗುತ್ತದೆ.ಕಾನೂನನ್ನು ನಿರ್ಮಿಸುವ ಸಂಸತ್ತು ಅಥವಾ ವಿಧಾನಸಭೆ ಸೃಷ್ಟಿಸುವ ಕಲ್ಪನೆಯಾಗಲಿ, ಕಾನೂನಿನ ಕ್ಷೇತ್ರದಲ್ಲಿ ಸಂದರ್ಭಾನುಗುಣವಾಗಿ ಸಂಭವಿಸುವ ಇತರ ಸೃಷ್ಟಿ ಕ್ರಿಯೆಗಳಾಗಲಿ ಎಷ್ಟರ ಮಟ್ಟಿಗೆ ಸೂಕ್ತವೆಂಬುದು ವಿಚಾರಿಸಬೇಕಾದ ಪ್ರಶ್ನೆ. ಕಲ್ಪನೆಯಿಂದ ಯಾರಿಗೂ ಅನ್ಯಾಯವಾಗದಾಗ, ಅದರಿಂದ ಯಾವುದೋ ಅನ್ಯಾಯವೊಂದನ್ನು ಸರಿಪಡಿಸುವುದು ಸಾಧ್ಯವಾಗುವಾಗ, ನ್ಯಾಯಸ್ಥಾಪನೆಯಾಗಬೇಕೆಂದಾಗ ಅದು ಸ್ವೀಕಾರಾರ್ಹವೇ. ಸಾಮಾನ್ಯ ಒಪ್ಪಿಗೆಯೇ ಇದರ ತಳಹದಿ. ವಿವೇಚನೆಯೇ ಇದರ ಜೀವಸತ್ತ್ವ. ಬ್ರಿಟಿಷ್ ಪಾರ್ಲಿಮೆಂಟು ಲಿಂಗ ಪರಿವರ್ತನೆಯೊಂದನ್ನುಳಿದು ಮಿಕ್ಕ ಏನನ್ನಾದರೂ ಮಾಡಬಲ್ಲುದು-ಎಂಬ ಹೇಳಿಕೆಯೊಂದುಂಟು. ಕಾನೂನು ಪಾಲನೆಗೆ ಕಲ್ಪನೆಯ ನೆರವನ್ನು ಅದು ಎಷ್ಟರಮಟ್ಟಿಗೆ ಪಡೆದುಕೊಳ್ಳುತ್ತದೆಯೆಂಬುದಕ್ಕೆ ಈ ಹೇಳಿಕೆಯೊಂದು ಸಾಕ್ಷಿ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: