ಕಾಡುಮಲ್ಲೇಶ್ವರ ದೇವಸ್ಥಾನ

ವಿಕಿಪೀಡಿಯ ಇಂದ
Jump to navigation Jump to search

ಕಾಡುಮಲ್ಲೇಶ್ವರ ದೇವಸ್ಥಾನ[ಬದಲಾಯಿಸಿ]

ಕಾಡುಮಲ್ಲೇಶ್ವರ ದೇವಸ್ಥಾನ ಬೆಂಗಳೂರಿನ ಮಲ್ಲೇಶ್ವರ ಬಡಾವಣೆಯ ಸಂಪಿಗೆ ರಸ್ತೆಯಲ್ಲಿರುವ ಪುರಾತನ ದೇವಾಲಯ. ಈ ದೇವಾಲಯದಿಂದಾಗಿಯೇ ಮಲ್ಲೇಶ್ವರ ಬಡಾವಣೆಗೆ ಆ ಹೆಸರು ಬಂದಿದೆ.

ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಾಡು ಮಲ್ಲೇಶ್ವರ ಎಂದೇ ಪ್ರಸಿದ್ಧ. ಇದು ಉದ್ಭವ ಲಿಂಗ (ಸ್ವಯಂಭೂ). ಇಲ್ಲಿ ಗಣಪತಿ, ಕಾಶಿ ವಿಶ್ವನಾಥ, ಮಹಾ ವಿಷ್ಣು, ಸೂರ್ಯನಾರಾಯಣ, ಆಂಜನೇಯ, ಕಾಲಭೈರವ, ಅರುಣಾಚಲೇಶ್ವರ, ಪಾರ್ವತಿ, ದಕ್ಷಿಣಾಮೂರ್ತಿ, ನವಗ್ರಹ, ಸುಬ್ರಹ್ಮಣ್ಯೇಶ್ವರ, ದುರ್ಗಾ ದೇವತೆಯ ಮೂರ್ತಿಗಳೂ ಇವೆ.


ದೇವಸ್ಥಾನವನ್ನು ಶಿಲೆಗಳಿಂದ ನಿರ್ಮಿಸಲಾಗಿದೆ. ಮೇಲೆ ಆಕರ್ಷಕ ವಿಮಾನ ಗೋಪುರ ಹಾಗೂ ಮುಂಭಾಗದಲ್ಲಿ ಧ್ವಜ ಸ್ತಂಭವಿದೆ. ದೇವಸ್ಥಾನದ ಪರಿಸರದಲ್ಲಿ ಬಿಲ್ವ ಪತ್ರೆ, ಪಾರಿಜಾತ, ಶ್ರೀಗಂಧ, ಬೇವು ಸೇರಿದಂತೆ ಹಲವು ಜಾತಿಯ ಮರಗಿಡಗಳನ್ನು ಬೆಳೆಸಿ ದೇವಸ್ಥಾನದ ಪರಿಸರವನ್ನು ಸುಂದರಗೊಳಿಸಲಾಗಿದೆ. ಮಲ್ಲೇಶ್ವರ ಬಡಾವಣೆಯಲ್ಲಿ ಜನದಟ್ಟಣೆ ಇದ್ದರೂ ದೇವಸ್ಥಾನದ ಸುತ್ತ ಪ್ರಶಾಂತ ವಾತಾವರಣವಿದೆ

ಹಿನ್ನೆಲೆ[ಬದಲಾಯಿಸಿ]

ಬಹಳ ಹಿಂದೆ ವೀಳ್ಯದೆಲೆ ವ್ಯಾಪಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಮಲ್ಲಪ್ಪ ಶೆಟ್ಟಿ ಎಂಬ ವರ್ತಕರು ಒಂದು ದಿನ ತಮ್ಮ ಊರಿಗೆ ಹಿಂದಿರುಗಲಾಗದೆ ಈಗಿನ ಮಲ್ಲೇಶ್ವರ ದೇವಸ್ಥಾನ ಇರುವ ಸ್ಥಳದಲ್ಲಿ ತಂಗಿದ್ದರು. ಅಲ್ಲಿ ಎರಡು ಕಲ್ಲುಗಳನ್ನು ಹೂಡಿ ಅನ್ನ ಮಾಡುತ್ತಿದ್ದರು. ಆಗ ಅನ್ನ ರಕ್ತದ ಬಣ್ಣಕ್ಕೆ ತಿರುಗಿತು. ಅದನ್ನು ಕಂಡು ಹೆದರಿದ ಮಲ್ಲಪ್ಪ ಶೆಟ್ಟರು ಪ್ರಜ್ಞೆ ತಪ್ಪಿ ಬಿದ್ದರು. ಒಲೆಗೆ ಬಳಸಿದ್ದ ಕಲ್ಲುಗಳಲ್ಲಿ ಒಂದು ಕಲ್ಲು ಶಿವ ಲಿಂಗದ ಆಕಾರ ಪಡೆದುಕೊಂಡಿತ್ತು. ತಮ್ಮ ತಪ್ಪಿನ ಅರಿವಾದ ನಂತರ ಪರಿಹಾರವಾಗಿ ಶೆಟ್ಟರು ಅಲ್ಲಿಯೇ ದೇವಸ್ಥಾನ ನಿರ್ಮಿಸಿದರು ಎಂಬ ಐತಿಹ್ಯವಿದೆ.ಪುರಾಣ ಕಾಲದಲ್ಲಿ ಗೌತಮ ಋಷಿಗೆ ಶಿವ ಇಲ್ಲಿ ಪ್ರತ್ಯಕ್ಷನಾಗಿ ದರ್ಶನ ನೀಡಿದ ಸ್ಥಳ ಇದೆಂದು ಹೇಳಲಾಗಿದೆ. ಈ ಪ್ರದೇಶ ಹಿಂದೆ ಕಾಡಾಗಿತ್ತು. ಇಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣವಾದನಂತರ ಈ ಪ್ರದೇಶಕ್ಕೆ ಕಾಡು ಮಲ್ಲೇಶ್ವರ ಎಂಬ ಹೆಸರು ಬಂತು ಎನ್ನಲಾಗಿದೆ. ಮಲ್ಲೇಶ್ವರ ಈಗ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ.

ದೇವಸ್ಥಾನದಲ್ಲಿ ನಿತ್ಯ ಬೆಳಿಗ್ಗೆ 9ರಿಂದ ರಾತ್ರಿ 10.30ರ ವರೆಗೆ ರುದ್ರಾಭಿಷೇಕ ನಡೆಯುತ್ತದೆ. ದಿನವಿಡೀ ದರ್ಶನಕ್ಕೆ ಅವಕಾಶವಿದೆ. ಮಹಾ ಶಿವರಾತ್ರಿ ಹಬ್ಬದಂದು ಸಾವಿರಾರು ಜನರು ಮಲ್ಲೇಶ್ವರ ಸ್ವಾಮಿ ದರ್ಶನಕ್ಕೆ ಬರುತ್ತಾರೆ.ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜೆ ಬ್ರಹ್ಮರಥೋತ್ಸವ ಇತ್ಯಾದಿಗಳು ಹತ್ತು ದಿನಗಳ ಕಾಲ ನಡೆಯುತ್ತವೆ.

ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಇತ್ಯಾದಿಗಳು ನಡೆಯುತ್ತವೆ. ಕನ್ನಡ ಚಲನಚಿತ್ರಗಳ ಮಹೂರ್ತ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಅನೇಕ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೆ ಮೊದಲು ಇಲ್ಲಿ ಪೂಜೆ ಸಲ್ಲಿಸುವ ಪರಿಪಾಠವಿದೆ.

ಈ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ.

ಹೆಚ್ಚಿನ ಮಾಹಿತಿ ಹಾಗೂ ಚಿತ್ರ ಕನ್ನಡರತ್ನ.ಕಾಂನ ಅವರ್ ಟೆಂಪಲ್ಸ್.ಇನ್ ನಲ್ಲಿ ಲಭ್ಯ. http://ourtemples.in/kadumalleswara.html