ಮಂತ್ರಿ ಗುಣಸಾಗರನ(ಬಾಲಕೃಷ್ಣ) ಕುತಂತ್ರದಿಂದ ಸುಬಾಹು ರಾಜನ ಭಟ್ಟಿ ಮಹಾದೇವಪ್ಪ ಮಗಳಾದ ವಿದ್ಯಾಧರೆ (ಜಯಪ್ರದ) ಮತಿಹೀನನಾದ ಕುರುಬ ಲಕ್ಕ(ಡಾ.ರಾಜ್ ಕುಮಾರ್)ನನ್ನು ಮದುವೆಯಾಗಬೇಕಾಗುತ್ತದೆ.
ಮತಿಹೀನನಾದ ತನ್ನ ಪತಿಗೆ ಕಾಳಿಮಾತೆಯ ಅನುಗ್ರಹವಾಗುವಂತೆ ಮಾಡುವಲ್ಲಿ ವಿದ್ಯಾಧರೆಯು ಸಫಲಳಾಗುತ್ತಾಳೆ.
ಇತ್ತ ಕಾಳಿಮಾತೆಯಿಂದ ವರ ಪಡೆದ ಕಾಳಿದಾಸನು ತನ್ನ ಪೂರ್ವವನ್ನು ಮರೆತು ಕಾವ್ಯರಚನೆಯಲ್ಲಿ ಮಗ್ನನಾಗಿ ಧಾರಾನಗರಿಯ ಭೋಜರಾಜ(ಶ್ರೀನಿವಾಸಮೂರ್ತಿ)ನ ಆಶ್ರಯ ಪಡೆಯುತ್ತಾನೆ. ಪತಿಯನ್ನು ಹುಡುಕುತ್ತಾ ದೇಶಸಂಚಾರ ಮಾಡುವ ವಿದ್ಯಾಧರೆಯು ಧಾರಾನಗರಿಗೆ ಬಂದಾಗ ವೇಶ್ಯೆ ರತ್ನಕಲೆ(ಕೆ. ವಿಜಯ)ಯ ಆಶ್ರಯ ಪಡೆಯುತ್ತಾಳೆ.
ಆಕಸ್ಮಿಕವಾಗಿ ಪತಿ-ಪತ್ನಿಯರ ಭೇಟಿಯಾಗುತ್ತದೆ. ಆದರೆ ಕಾಳಿದಾಸನಿಗೆ ತನ್ನ ಮದುವೆಯ ವಿಚಾರ ಸ್ಮೃತಿಪಟಲದಿಂದ ಅಳಿಸಿ ಹೋಗಿರುತ್ತದೆ. ಅವನು ವಿದ್ಯಾಧರೆಯನ್ನು ತನ್ನ ಪ್ರೇಯಸಿಯಾಗಿ ಸ್ವೀಕರಿಸುತ್ತಾನೆ. ಇದೇ ಸ್ಫೂರ್ತಿಯಲ್ಲಿ ಅಭಿಜ್ಞಾನ ಶಾಕುಂತಲ ಕಾವ್ಯ ರಚನೆ ಮಾಡುತ್ತಾನೆ.
ಇದೇ ಸಮಯದಲ್ಲಿ ಮತ್ತೊಬ್ಬ ಆಸ್ಥಾನ ಕವಿ ಕವಿರಾಕ್ಷಸ(ಮುಸುರಿ ಕೃಷ್ಣಮೂರ್ತಿ)ನ ಕುತಂತ್ರದಿಂದ ಕಾಳಿದಾಸ ಮತ್ತು ಭೋಜರಾಜರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ನಂತರ ಕಾಳಿದಾಸ-ವಿದ್ಯ್ಯಾಧರೆಯ ಪುನರ್ಮಿಲನದೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.