ಕವಿಚಕ್ರವರ್ತಿ ಜನ್ನನ ಆನೆಕೆರೆ ತಾಮ್ರಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಸಾಹಿತ್ಯಕವಾಗಿ ಹಾಗೂ ಐತಿಹಾಸಿಕವಾಗಿ ಅತ್ಯಂತ ಮಹತ್ವದ ದಾಖಲೆ ಈ ಶಾಸನ. ಕನ್ನಡ ಕವಿಚಕ್ರವರ್ತಿಗಳಲ್ಲಿ ಮೂರನೆಯವನಾದ ಜನ್ನನು ಈ ಶಾಸನವನ್ನು ರಚಿಸಿದ್ದಾನೆ. ಹೊಯ್ಸಳ ವಿಷ್ಣುವರ್ಧನನ ಮಗ ಒಂದನೆಯ ನರಸಿಂಹ ಮತ್ತು ಆತನ ಮಗ ವೀರಬಲ್ಲಾಳನ ಆಸ್ಥಾನದಲ್ಲಿಯೇ ಜನ್ನನು ಇದ್ದದ್ದು. ಜನ್ನನು ತನ್ನ ಸಾಹಿತ್ಯ ಕೃಷಿ ಆರಂಬಿಸುವ ಮೊದಲು ರಚಿಸಿರುವ ಎರಡು ಶಾಸನಗಳಲ್ಲಿ ಇದೂ ಒಂದು; ಇನ್ನೊಂದು ತರೀಕೆರೆ ತಾಲ್ಲೂಕು ಅಮೃತಾಪುರದ ಶಾಸನ. ಒಬ್ಬ ಶಾಸನ ಕವಿಯಾಗಿ ವೃತ್ತಿಯನ್ನಾರಂಬಿಸಿದ ಜನ್ನ ಹೊಯ್ಸಳ ದೊರೆಗಳ ಆಸ್ಥಾನಕವಿಯಾಗಿ ಬೆಳೆದದ್ದು ಹಾಗೂ ವೀರಬಲ್ಲಾಳನಿಂದ 'ಕವಿಚಕ್ರವರ್ತಿ' ಎಂದು ಪುರಸ್ಕೃತನಾಗಿದ್ದು ಕನ್ನಡ ಸಾಹಿತ್ಯದ ವಿಶೇಷಗಳಲ್ಲಿ ಒಂದು.

ಪ್ರಸ್ತುತ ಶಾಸನವು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಆನೆಕೆರೆ ಗ್ರಾಮಕ್ಕೆ ಸೇರಿದ್ದಾಗಿದೆ. ಶಾಸನದಲ್ಲಿ ಆನೆಕೆರೆಯನ್ನು 'ಹಸ್ತಿತಟಾಕ'ವೆಂದೂ ಕರೆಯಲಾಗಿದೆ. ಊರಿನಲ್ಲಿ ದೊಡ್ಡ ಕೆರೆಯಿದ್ದು, ಬಹುಶಃ ಇಲ್ಲಿ ಹೊಯ್ಸಳ ಆನೆ ಸೈನ್ಯವಿದ್ದು, ಅವುಗಳ ಅನುಕೂಲಕ್ಕಾಗಿ ಈ ಕೆರೆ ನಿರ್ಮಾಣವಾಗಿದ್ದಿರಬಹುದು. ಆ ಊರಿನ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಹೊಯ್ಸಳರ ನಿರ್ಮಾಣವಾದ ಜನಾರ್ಧನ ದೇವಾಲಯ. ಅದು ಇತ್ತೀಚಿಗೆ ಜೀರ್ಣೋದ್ಧಾರಗೊಂಡು ಸುಸ್ಥಿತಿಯಲ್ಲಿದೆ. ಈ ದೇವಾಲಯವನ್ನು, ಜನಾರ್ಧನ ದೇವರನ್ನು, ಕೆರೆಯನ್ನು ಜನ್ನ ಈ ಶಾಸನದಲ್ಲಿ ವಿಶೇಷವಾಗಿ ವರ್ಣಿಸಿದ್ದಾನೆ.
ಏಳು ತಾಮ್ರಫಲಕಗಳಲ್ಲಿ ಬರೆಯಲ್ಪಟ್ಟಿರುವ ಈ ಶಾಸನ ೨೧೫ ಸಾಲುಗಳಿಂದ ಕೂಡಿದೆ. ಮೊದಲ ತಾಮ್ರಪಟದ ಮುಂಭಾಗ ಮತ್ತು ಏಳನೆಯ ತಾಮ್ರಪಟದ ಹಿಂಭಾಗದಲ್ಲಿ ಬರಹವಿಲ್ಲ. ಕಂದ, ವೃತ್ತ, ಗದ್ಯದಿಂದ ಕೂಡಿದ ಪುಟ್ಟ ಚಂಪೂಕಾವ್ಯದಂತೆ ಈ ಶಾಸನವಿದೆ. ಈ ಶಾಸನ ಜನ್ನನೊಳಗಿದ್ದ ಒಬ್ಬ ಮಹತ್ವದ ಕವಿಯನ್ನು ಮುಂಗಾಣಿಸುವ ದರ್ಶಿಕೆಯಾಗಿದೆ.
ಶಾಸನದ ಕಾಲ ಶಕವರ್ಷ ೧೧೧೩ ಸೌಮ್ಯ ಸಂವತ್ಸರ ಪುಷ್ಯ ಬಹುಳ ಏಕಾದಶಿ, ಭಾನುವಾರ ಉತ್ತರಾಯಣ ಸಂಕ್ರಮಣ ಈ ವಿವರಗಳು ಕ್ರಮಬದ್ಧವಾಗಿಲ್ಲ. ಇದನ್ನು ಕ್ರಿ.ಶ. ೧೧೮೯ ಡಿಸೆಂಬರ್ ೨೪ ಭಾನುವಾರಕ್ಕೆ ಸಮೀಕರಿಸಬಹುದು. ಆದರೆ ಉತ್ತರಾಯಣ ಸಂಕ್ರಮಣವಾದದ್ದು ಶಕ ೧೧೧೧ರಲ್ಲಿ ಮತ್ತು ತಿಥಿ ಪುಷ್ಯ ಬಹುಳ ಪಾಡ್ಯಮಿ - ಬಹುಳ ಏಕಾದಶಿ ಅಲ್ಲ.
ಲಕ್ಷ್ಮೀಕಾಂತಃ ಸ ವಃ ಪಾಯಾದ್ದೇವಸ್ಸುಂದರ ಕೇಶವಃ |
ಯಸ್ಯ ತ್ರೈಳೋಕ್ಯವಳಭೀರತ್ನಸ್ತಂಭನಿಭಾಭಜಾಃ||
ಎಂದು ಆನೆಕೆರೆಯ ಆರಾಧ್ಯ ದೈವ ಕೇಶವ(ಜನಾರ್ಧನ)ನನ್ನು ಜನ್ನ ಸ್ತುತಿಸಿದ್ದಾನೆ. ನಂತರ ಹೊಯ್ಸಳ ದೊರೆಗಳ ವಂಶಾವಳಿಯನ್ನು ನೀಡಿದ್ದಾನೆ. ವಿಷ್ಣುವರ್ಧನ ಮತ್ತು ಎರಡನೆಯ ವೀರಬಲ್ಲಾಳನ ಸಾಧನೆಗಳನ್ನು ಒಳಗೊಂಡು ಹೊಯ್ಸಳ ರಾಜರ ವಂಶಾವಳಿಯನ್ನು ತನ್ನ ಆಶ್ರಿತ ದೊರೆ ವೀರಬಲ್ಲಾಳನವರೆಗೆ ಈ ಶಾಸನದಲ್ಲಿ ದಾಖಲಿಸಲಾಗಿದೆ.
ಈ ಶಾಸನದಲ್ಲಿ ಉಲ್ಲೇಖವಾಗಿರುವ ಹಲವಾರು ಊರುಗಳು ಇಂದೂ ಅಸ್ತಿತ್ವದಲ್ಲಿವೆ.
ಈ ಶಾಸನದ ಮುಖ್ಯುದ್ದೇಶ, ಕಬ್ಬುಹುನಾಡಿನಲ್ಲಿದ್ದ, ಕೇಶವಾಪುರ ಎಂದೂ ಕರೆಯಲ್ಪಡುತ್ತಿದ್ದ ಅನೆಗೆನಕೆರೆ (ಆನೆಕೆರೆ) ಎಂಬ ಹಳ್ಳಿಯ ಮಹಾಜನರಿಗೆ ಶೇಷ ಮಾನ್ಯ ಮತ್ತು ದೇವತಾ ಕಾರುಣ್ಯ ಎಂದು ೩೫೦ ಗದ್ಯಾಣ ಸಿದ್ಧಾಯದಲ್ಲಿ ೧೦೦ ಗದ್ಯಾಣಗಳಿಗೆ ೨ ಹಣದಂತೆ, ದಾನ ನೀಡಿದ್ದನ್ನು ದಾಖಲಿಸುವುದಾಗಿದೆ. ದಾನ ನೀಡಿದವನು ವೀರಬಲ್ಲಾಳನ ಮಹಾ ಪ್ರಧಾನ, ಸರ್ವಾಧಿಕಾರಿ, ಶ್ರೀಕರಣದ ಹೆಗ್ಗಡೆ ಮಾಚಯ್ಯ. ಈತನ ವಂಶಾವಳಿಯನ್ನೂ ಕೊಡಲಾಗಿದೆ. ಈತನ ಹೆಂಡತಿ ಶಾಂತಲೆ, ಇಂದು ತಾಲ್ಲೂಕು ಕೇಂದ್ರವಾಗಿರುವ ಚನ್ನರಾಯಪಟ್ಟಣವನ್ನು ಆಳುತ್ತಿದ್ದ ಚಂದಿಮಯ್ಯನ ಮಗಳು. ಈಕೆ ಚನ್ನರಾಯಪಟ್ಟಣದ ಹಿರಿಯಕೆರೆಯನ್ನು ಕಟ್ಟಿಸಿದವಳೂ ಹೌದು. ಅದರ ಹೆಸರು ಶಾಂತಿಸಮುದ್ರವೆಂದಿತ್ತು. ಮಾಚಯ್ಯನು ಕೋರಿಕೆಯಂತೆ ದಾನವನ್ನು ವಜ್ರೇಶ್ವರ ದೇವರ ಸನ್ನಿಧಿಯಲ್ಲಿ ಹೊಯ್ಸಳ ರಾಜನು ಸ್ವಹಸ್ತದಿಂದ ವಿತರಿಸಿದನು. ಶಾಸನವನ್ನು ಜನ್ನಯ್ಯನು ರಚಿಸಿದನೆಂದು ಜನ್ನ ಅಧಿಕೃತವಾಗಿ ಘೊಷಿಸಿಕೊಂಡಿದ್ದಾನೆ. ಶಾಸನವನ್ನು ಕಲ್ಲಿನ ಮೇಲೆ ಬರೆದವನು ದಾವಣ್ಣ. ಅಕ್ಷರಗಳನ್ನು ಕಂಡರಿಸಿದವನು ಮಲ್ಲೋವಜ. ಶಾಸನದ ಕೊನೆಯಲ್ಲಿ 'ಶ್ರೀಮಲೆಪರೊಳಗಣ್ಡ' ಎಂದು ವೀರಬಲ್ಲಾಳನ ಅಂಕಿತವಿರುವುದು ಈ ಶಾಸನದ ವಿಶೇಷ.
ಶಾಸನದ ಪಾಠ:
ಒಂದನೆಯ ಹಲಗೆಯ ಹಿಂಭಾಗ

೧ ಲಕ್ಷ್ಮೀಕಾಂತಃ ಸ ವಃ ಪಾಯಾದ್ದೇವಸ್ಸುಂ
೨ ದರ ಕೇಶವಃ | ಯಸ್ಯ ತ್ರೈಳೋಕ್ಯ
೩ ವಳಭೀರತ್ನಸ್ತಂಭನಿಭಾಭಜಾಃ ||
೪ ಶ್ರೀವಧುವಿಂಗೆ ಪೀಲಿದೞಯಿರ್ಪ್ಪವೊಲಿ
೫ ರ್ದ್ದುದು ಕೋಡೊಳಿರ್ದ್ದ ಧಾತ್ರಿವಳಯಂ ಸ
೬ ಮುದ್ರಮದು ಝಲ್ಲರಿಯಿರ್ಪ್ಪವೊಲಿರ್ದ್ದು
೭ ದಾಂತದಂಷ್ಟ್ರಾವರಶೋಭೆ ತೆತ್ತಿಸಿದ ಮುತ್ತಿ
೮ ನಕಾವುವೊಲಿರ್ದ್ದುದಿಂತು ಸದ್ಭಾವಮನಾಳ್ದ
೯ ಸೂಕರವರಂ ಪೊರಗೀ ಗಿರಿದುರ್ಗ್ಗಮಲ್ಲನಂ ||
೧೦ ಉದಿಯಿಸಿದಂ ಗದಾಧರನನಾಭಿಸರೋ
೧೧ ಜದಿನಬ್ಜಂ ಚತುರ್ವ್ವದನನಿನತ್ರಿಯ
೧೨ ತ್ರಿಮುನಿಯಿಂ ಶಶಿಸೋಮನಿನಾ ಪು
೧೩ ರೂರವಂ ವಿದಿತಪುರೂರವಱ್ಪ್ರವರ
೧೪ ನಿಂ ನಹುಷಃ ನಹುಷಾಂಕನಿಂ ಯಯಾ
೧೫ ತಿದಲವನಿಂ ಯದುಕ್ಷಿತಿಭೂಜಂ ಯ
೧೬ ದುವಿಂಗಡ ಯಾದವಾನ್ವಯಂ|| ಅನ್ತುನೆ
೧೭ ಗೞ್ತೆಯಂ ತಳೆದ ಯಾದವವಂಶದೊಳತ್ಯು
೧೮ ದಗ್ರ ವಿಕ್ರಾಂತಭುಜಾಬಳಂ ಪೆಸರ್ಗೆ ಸಂದ
೧೯ ಸಳಂ ಸೊಸವೂರ್ಗ್ಗೆವನ್ದು ವಾಸನ್ತಿಕೆಯ

ಎರಡನೆಯ ಹಲಗೆಯ ಮುಂಭಾಗ

೨೦ ಸಮರ್ಚಿಪೆಡೆಯೊಳ್ಪುಲಿಪಾಯೆ ಮುನೀಂ
೨೧ ದ್ರನಿದುನಿಶ್ಚಿನ್ತದೆ ಪೊಯ್ಸಳೆಂದನೆನೆ ಪೊ
೨೨ ಯ್ವುದುವಾದುದು ಪೊಯ್ಸಳಾನ್ವಯಂ ||
೨೩ ಅಲಗಿಂ ಸಿಂಗಮನಿಱದನಕಲಿತನಮಂ ನಗು
೨೪ ವತೆಱದೆ ಮೆಱೆವುದು ಸೆಳೆಯಿಂ ಪುಲಿವೊ
೨೫ ಯ್ದ ಕುಱುಪು ಪೊಯ್ಸಳಕುಲತಿಲಕ
೨೬ ರ ಮತ್ತಗಜದಕೆಯದೊಳೀಗಳ್ || ವಿನ
೨೭ ಯಾದಿತ್ಯನೆ ಪೊಯ್ಸಳಕ್ಷಿತಿಪರೊಳ್ವಿಖ್ಯಾ
೨೮ ತಿಯಂ ಪೆತ್ತನಾತನಪುತ್ರಂಗೆಱೆಯಂಗ
೨೯ ಭೂಪತಿಗೆ ಪುತ್ರರ್ಸ್ಸಂದ ಬಲ್ಲಾಳದೇವನಿ
೩೦ ಳಾಹೃತ್ಪತಿ ಬಿಟ್ಟಿದೇವನುದಯಾದಿತ್ಯಾಂ
೩೧ ಕನಾ ಮೂವರೊಳ್ಜನತಾವಲ್ಲಭನಾದನೂ
೩೨ ರ್ಜ್ಜಿತಯಶಂ ಶ್ರೀವಿಷ್ಣುಭೂಪಾಳಕಂ || ಮಾ
೩೩ ಳವ ಚೇರಕೇರಳನೊಳಂಬಕದಂಬಕಳಿಂಗವಂ
೩೪ ಗಬಂಗಾಳವರಾಳಚೋಳಖಸಬರ್ಬ್ಬರಬ
೩೫ ಡ್ಡಹರಾದಿವೈರಿಭೂಪಾಳರ ಮೂಳೆ
೩೬ ಯಂಮುಱದ ಮುಣ್ಡಿಗೆಯೊಳ್ಸೆಱಗೆ

ಎರಡನೆಯ ಹಲಗೆಯ ಹಿಂಭಾಗ

೩೭ ಯ್ದ ವೀರಶಾರ್ದ್ದೂಳಮನೊತ್ತಿ ಬಿಟ್ಟಣಕ
೩೮ ದಗ್ಗದಮೆಯ್ಗಲಿ ವಿಷ್ಣುವರ್ದ್ಧನಂ || ಶತಮಖ
೩೯ ನಳ್ಕೆಮಾಡುವಮಖಂಗಳ | ಮೇರುಗ
೪೦ ಳೆಂದೆತಾರಾಕಪ್ರತತಿಗಳಾರಯಲ್ಪ
೪೧ ದೆವದೇವಕುಲಂಗಳ | ವಾರ್ದ್ಧಿಗೆತ್ತಹರ್ಪ್ಪ
೪೨ ತಿಪೊಲಗೆಟ್ಟುನಿಟ್ಟಿಪ ತಟಾಕಚಯಂಗಳ
೪೩ ಪೆಮ್ಮೆಯಿಂದಮೂರ್ಜಿತಮೆನಿಪಗ್ರಹಾ
೪೪ ರಮವು ವಿಷ್ಣುನೃಪಾಳಕನಿತ್ತದತ್ತಿಗಳ್ ||
೪೫ ಆ ನರನಾಥಸೂನು ಯದುವಂಶವನೇ
೪೬ ರುಹಭಾನು ಗೋಮಿನೀಮಾನಸರಾ
೪೭ ಜಹಂಸಿಯೆನಿಪೇಚಲದೇವಿಯ ಕಾನ್ತ
೪೮ ನಾನತೋದ್ಯಾನವಸನ್ತನುದ್ಧತ ವಿರೋಧಿ
೪೯ ನೃಪಾಳಮದೇಭಸಿಂಹನಂತಾ ನರಸಿಂ
೫೦ ಹನಾನೃಪನನಂದನನರ್ತ್ಥೀಜನಾಭಿನನ್ದನಂ ||
೫೧ ಮಾಳವರಾಯಮತ್ತಗಜಕೇಸರಿ
೫೨ ಗೂರ್ಜ್ಜರರಾಯರಾಜ್ಯನಿಮ್ಮೂಳನನಂ
೫೩ ಧ್ರರಾಯಮದಮರ್ದ್ದನನಾಹಿರ
೫೪ ರಾಯಶೈಳದಂಭೋಳಿವರಾಳರಾ

ಮೂರನೆಯ ಹಲಗೆಯ ಮುಂಭಾಗ

೫೫ ಯರಣಭೈರವನಾವುಟರಾ . .
೫೬ ರುಬಲ್ಲಾಳಧರಾಧಿಪತಿ ಪೊಯ್ಸ
೫೭ ಳರಾಯ ಕುಳಪ್ರದೀಪಕಂ || ಕದನಪ್ರೋ
೫೮ ಚ್ಚಂಡಭೂಮಂಡಳಪತಿಗಳಬೇರ್ವ್ವೇರ್ಗ್ಗೆ ಬೆಂನೀರ
೫೯ ಪೊಯ್ಯಾದುದು ಕಾಯ್ಪಿಂ ಬಾಳನೀರ್ ಸಂ
೬೦ ಗರಸಮಯದೊಳಿಂತವಷ್ಟಂಭದಿಂ ತೂ
೬೧ ಗಿದಬಾಳೆ ಬಾಳ್ವೊತ್ತು ಬಾಳ್ವುಗ್ಗಡದಬಿರು
೬೨ ದರಂ ತೂಗಿ ತುತ್ತಿಟ್ಟುದೇಂ ತಾಳ್ದಿದನೋ ವಿಕ್ರಾಂ
೬೩ ತಮಂ ಯಾದವಕುಳತಿಳಕಂ ವೀರಬಲ್ಲಾ
೬೪ ಳದೇವಂ || ಇಂನುಂ ಬೀರದ ತೋರಬಿತ್ತನಗೆವೊ
೬೫ ಯ್ದಂತಿರ್ಪ್ಪುದಾರೂಢಸಂಪಂನಂ ದಕ್ಷಿಣಚ
೬೬ ಕ್ರಿಗೆಲ್ದ ಸೊಱಟೂರಿಂ ಬೆಳ್ವೊಲಂ ಮುಟ್ಟೆ ಸಂ
೬೭ ಛಂನೋದ್ಘೃಷ್ಟಕಷೀವಳಾವಳಿಹಳಪ್ರಾ
೬೮ ಗ್ಭಾಗನಿಃಕೀಲಿತೋತ್ಪನ್ನಂ ಸೇವುಣಸೈನ್ಯಂ
೬೯ ಸದ್ಭಟಕೋಟೀಕೋಟೀ ಸಂಘಟ್ಟನಂ ||
೭೦ ಅರಿಗಿರಿದುರ್ಗ್ಗಮಲ್ಲನೃಪನೆತ್ತಿದ ಬೇಗ
೭೧ ದೆಕೊಂಡದುರ್ಗ್ಗವೊಂದೆರೆಡೆ ವಿರಾಟರಾಜನ
೭೨ ಗರಂ ಕುಱುಗೋಡು ಮತಂಗಭೂಧರಂ
೭೩ ಧೋರೆವದಿಗುತ್ತಿಗುತ್ತವೊೞಲುದ್ಧರೆ

ಮೂರನೆಯ ಹಲಗೆಯ ಹಿಂಭಾಗ

೭೪ ಕಾಲಡಿ ಬಂದಣಿಕ್ಕೆ ಬಳ್ಳರೆ ಸೂಱಟೂರೆ
೭೫ ರಮಮ್ಬರಗೆ ಹಾಲುವೆ ಮಾನುವೆ ಲೊಕ್ಕಿಗುಂ
೭೬ ಡಿಗಳ್ || ಸ್ವಸ್ತಿ ಸಮಸ್ತಭುವನಾಶ್ರಯ
೭೭ ಶ್ರೀಪೃಥ್ವೀವಲ್ಲಭ ಮಹಾರಾಜಾಧಿರಾಜ
೭೮ ಪರಮೇಶ್ವರಂ ದ್ವಾರಾವತೀಪುರವರಾಧೀ
೭೯ ಶ್ವರಂ | ಯಾದವಕುಳಾಂಬರದ್ಯುಮಣಿ |
೮೦ ಸಮ್ಯಕ್ತ್ವಚೂಡಾಮಣಿ | ಮಲೆರಾಜ
೮೧ ರಾಜನತ್ಯತುಳತೇಜಂ | ಮಲೆಪರೊಳ್ಗಂಡಂ
೮೨ ಕದನಪ್ರಚಂಡ | ನಸಹಾಯಶೂರ
೮೩ ನೇಕಾಂಗಿವೀರಂ | ಸನಿವಾರಸಿದ್ಧಿ ಶರಣಾಗ
೮೪ ತವಾರ್ದ್ಧಿ | ಗಿರಿದುರ್ಗ್ಗಮಲ್ಲನದಟಹೃತ್ಸೆ
೮೫ ಲ್ಲಂ | ಚಲದಂಕರಾಮ ಬಿರುದಂಕಭೀಮಂ |
೮೬ ನಿಶ್ಯಂಕಪ್ರತಾಪಚಕ್ರವರ್ತ್ತಿ ಶ್ರೀಮತ್ಪೊ
೮೭ ಯ್ಸಳ ವೀರಬಲ್ಲಾಳದೇವರ್ ಶ್ರೀಮದ್ದ್ರಾ
೮೮ ಜಧಾನಿ ಧೋರಸಮುದ್ರದನೆಲೆವೀಡಿ
೮೯ ನೊಳ್ಸುಖಸಂಕಥಾವಿನೋದದಿಂ ಪೃಥ್ವೀ

ನಾಲ್ಕನೆಯ ಹಲಗೆಯ ಮುಂಭಾಗ

೯೦ ರಾಜ್ಯಂಗೆಯ್ವುತ್ತುಮಿರೆ ತತ್ಪಾದಪದ್ಮೋ
೯೧ ಪಜೀವಿ || ಸ್ವಸ್ತಿ ಶ್ರೀಮದಗಣ್ಯಪುಣ್ಯ
೯೨ ಭವನಂ ಶಿಷ್ಟೇಷ್ಟತುಷ್ಟಿಪ್ರಭಾಹಸ್ತಂ ದಕ್ಷಿ
೯೩ ಣಚಕ್ರವಲ್ಲಭಸಭಾರತ್ನಪ್ರದೀಪಂ ಜಗತ್ಪ್ರ
೯೪ ಸ್ತುತ್ಯಾಕೃತಿಮಂತ್ರಿಮಂಡಳಿಕದಂಡಾಧೀ
೯೫ ಶತತ್ತನ್ಮಹಾನಿಸ್ತಾರೈಕಶರಣ್ಯನೂರ್ಜ್ಜಿತ
೯೬ ಯಶೋರಾಮಾಚಣಂ ಮಾಚಣಂ || ಸಿರಿ
೯೭ ಗದ್ಯದ್ಯೌವನಂ ವಾಣಿಗೆ ಸೊಬಗು ಕುಲಶ್ರೀ
೯೮ ಗೆ ನಿತ್ಯೀತ್ಸವಂ ಸಚ್ಚರಿತಕ್ಕಾಲಂಬನಂ ಸ್ವಾಮಿಗೆ
೯೯ ಬಲದಭುಜಂ ರಾಜ್ಯಸಂತುಷ್ಟಿಗಾಯುಂ ಸಿ
೧೦೦ ರಿಗೋತ್ರಕ್ಕೆಯ್ದೆ ಕಣ್ಣುಂಗತಿಪರಹಿತಮಾ
೧೦೧ ರ್ಗ್ಗಕ್ಕೆ ಜನ್ಮಾಕರಂ ಶ್ರೀಕರಣಪ್ರೌಢಪ್ರಧಾನಂ ಸ
೧೦೨ ಕಳಬುಧಮರುದ್ಭೂಜನೀ ಮಾಚಿರಾಜಂ ||
೧೦೩ ತ್ರಿಭೂವನಕರ್ಣ್ಣಾಭರಣಪ್ರಭದೊಳ್ ಕ
೧೦೪ ರ್ಣ್ನಾಟಕುಲದೊಳವರಿವರುವರೆಂದು ಭ
೧೦೫ ಯಕುಲಶುದ್ಧಿಗಾರುಮನಭಿವರ್ಣ್ನಿಸ
೧೦೬ ವೇಡ ಮಾಚಿರಾಜನ ಸಭೆಯೊಳ್ || ಆತ
೧೦೭ ನ ಕುಳಕ್ರಮವೆಂತೆಂದಡೆ || ತಳೆ

ನಾಲ್ಕನೆಯ ಹಲಗೆಯ ಹಿಂಭಾಗ

೧೦೮ ದಂ ತೇಜಮನದ್ವಿತೀಯಮಹಿಮಂ ಚಾಳು
೧೦೯ ಕ್ಯರಾಜ್ಯಾಂಗನಾಪುಳಕಂ ಶ್ರೇಷ್ಠವಶಿಷ್ಠಗೋತ್ರ
೧೧೦ ತಿಳಕಂ ಗೌರೀವಧೂಲೋಚನೋತ್ಪಳಚಂ
೧೧೧ ದ್ರಂ ವಿಭು ರುದ್ದಿಮಯ್ಯರಥಿನೀಂದ್ರಂ ತತ್ಸು
೧೧೨ ತಂ ಪೆರ್ಮ್ಮತಂನೊಳೆ ತಳ್ಪೊಯ್ದಿರೆ ರಾಮದೇ
೧೧೩ ವನೆಸೆದಂ ಸೌಜನ್ಯಸಾರೋದಯಂ || ಆ ವಿ
೧೧೪ ಭುವಿನ ಸತಿ ರಾಜಲದೇವಿ ಪತಿಬ್ರತೆ ಜಗಕ್ಕೆ
೧೧೫ ರಾಮನ ಸೀತಾದೇವಿಯವೊಲ್ | ಸೋಮನು
೧೧೬ ಮಾದೇವಿಯವೊಲ್ ಸೊಬಗೆಯವರ್ಗೆ ಪು
೧೧೭ ಟ್ಟಿದತನಯರ್ || ಪುರುಷಾರ್ತ್ಥತ್ರಿತಯಂ
೧೧೮ ಸಹೋದರತೆಯಂ ತಾಳ್ದಿತ್ತು ವೇದತ್ರಯಾ
೧೧೯ ಚರಣಂ ಪೆಂಪಳವಟ್ಟಗಂಡವರಿಜಂ ಕೈಕೊಂಡುದೆಂ
೧೨೦ ಬಂತೆ ಮಾಚರಸಂ ನಾರಣದೇವನಾಶ್ರೀತಸ
೧೨೧ ಮುದ್ರಂ ರುದ್ರನುದ್ಯದ್ಧರಾಮರರಾಶೀರ್ವ್ವ
೧೨೨ ಚನಂಗಳಿಂದಮೆಸೆದಾಚಂದ್ರಾರ್ಕ್ಕಮೊಪ್ಪಿರ್ದ್ದರ್ ||
೧೨೩ ಪುರುಷರ್ಮ್ಮೂವರೆ ಲೋಕವಂದ್ಯರವರಾರೆಂ
೧೨೪ ದಪ್ಪ ಕೇಳಬ್ಜವಿಷ್ಟರನಬ್ಜೋದರನಬ್ಜನೇತ್ರನಿವ
೧೨೫ ರೆನ್ತುಂ ಖ್ಯಾತರೇನ್ ಮತ್ತೆ ಕೇಳ್ ಪುರುಷ

ಐದನೆಯ ಹಲಗೆಯ ಮುಂಭಾಗ

೧೨೬ ರ್ಮ್ಮೂವರೆ ಮಾಚಿರಾಜನೆಸವೀ ನಾರಾಯ
೧೨೭ ಣಂ ದಂಡನಾಥರದೇವಂ ವಿಭುರುದ್ರನಿಂ ಪೆ
೧೨೮ ಸರಿಸಭೂದೇವರೊಳ್ ದೇವರೊಳ್ || ತನಯ
೧೨೯ ಸಮೂಹದೊಳ್ಕಿಱಯ ರಾಮನ ದೇಸೆ
೧೩೦ ಗೆ ಸಂದ ವಿದ್ದೆ ಪೆಂಪಿನ ಸಿರಿಪಯ್ಯನುಂತಿಕೆ
೧೩೧ ನಾರಣದೇವನ ಮೈಮೆ ಕೇಸಿರಾಜನ
೧೩೨ ವಿನಯಂ ಮನಂಗೊಳಿಸೆ ಪೂತಕೊಳಕ್ಕೆ ಸ
೧೩೩ ಹಸ್ರಶಾಖೆಯಾದನಿಮಿಷಭೂರು
೧೩೪ ಹಕ್ಕೆ ದೊರೆಯಾದುದು ಮಾಚನವಂಶವರ್ದ್ಧ
೧೩೫ ನಂ || ಶ್ರೀಮನ್ಮಹಪ್ರಧಾನನ ಧನಬು
೧೩೬ ಧನಿಧಾನಂ | ಸರ್ವ್ವಾಧಿಕಾರಿಸಕಳೋಪಕಾರಿ |
೧೩೭ ಕರಣಾಗ್ರಗಣ್ಯಂ | ಸಾಕ್ಷರಶರಣ್ಯಂ | ರುಗ್ವೇ
೧೩೮ ದಚೂಡಾಮಣಿ ಸತ್ಕುಲನಭೋಮಣಿ |
೧೩೯ ಗೋತ್ರಪವಿತ್ರಂ ಕವಿಜನಮಿತ್ರಂ | ಶ್ರೀಮ
೧೪೦ ತ್ಪ್ರಸಂನಕೇಶವದೇವದಿವ್ಯಶ್ರೀಪಾದಪಲ್ಲ
೧೪೧ ವೋತ್ತಂಸಂ ಸುಜನಾವತಂಸಂ ಶ್ರೀಕರಣ
೧೪೨ ದ ಹೆಗ್ಗಡೆ ಮಾಚಯ್ಯಂಗಳು ಸಕವರ್ಷ
೧೪೩ ೧೧೧೩ನೆಯ ಸೌಮ್ಯಸಂವತ್ಸರದ
೧೪೪ ಪುಷ್ಯ ಬಹುಳ ೧೧ ಆದಿತ್ಯವಾ

ಐದನೆಯ ಹಲಗೆಯ ಹಿಂಭಾಗ

೧೪೫ ರದುತ್ತರಾಯಣ ಸಂಕ್ರಮಣದಂದು ಕ
೧೪೬ ಬ್ಬು ಹುನಾಡಳೊಗಣ ಕೇಶವಪುರಾಪ
೧೪೭ ರನಾಮಧೇಯಗ್ರಾಹಾರಮಪ್ಪಾನೆಗನ
೧೪೮ ಕೆಱೆಯಂ ಸರ್ವ್ವಬಾಧಾಪರಿಹಾರಮಾಗಿ
೧೪೯ ಗದ್ಯಾ ೧೦೦ಕ್ಕಂ ೩೫೦ಱ ಮೊದಲಸಿದ್ಧಾ
೧೫೦ ಯದ ಕುಳದೊಳಗೆ ಹಣವೆರಡಱ ಸೇ
೧೫೧ ಸೆಮಾನ್ಯವೋವತಕಾರುಣ್ಯ ಯೀ ಕ್ರಮ
೧೫೨ ದಿನೆಂದೆದಿಗಂ ಸಲುವನ್ತಾಗಿ ಸ್ವಸ್ತಿ ಯಮನಿ
೧೫೩ ಯಮಸ್ವಾಧ್ಯಾಯಧ್ಯಾನಧಾರಣಮೌ
೧೫೪ ನಾನುಷ್ಠಾನಜಪಸಮಾಧಿಶೀಲಗುಣಸಂ
೧೫೫ ಪಂನರುಂ ಯಜನಾಧ್ಯಯನಾ
೧೫೬ ಧ್ಯಾಪನದಾನಪ್ರತಿಗ್ರಹಾನೂನಷಟ್ಕ
೧೫೭ ರ್ಮ್ಮಪ್ರಸಂನರುಂ | ಶ್ರೀಮತ್ಪ್ರಸಂನಕೇಶವದೇವ
೧೫೮ ದಿವ್ಯಶ್ರೀಪಾದಕಳ್ಪಪಾದಪಚ್ಛಾಯಾಸ
೧೫೯ ನರುಂ | ನಾನಾಗೋತ್ರಸಮುತ್ಪಂನರುಮ
೧೬೦ ಪ್ಪ ಮಹಾಜನಂಗಳ್ಗೆ ಶ್ರೀಮದ್ವಜ್ರೇಶ್ವ
೧೬೧ ರದೇವರ ಸಂನಿಧಾನದೊಳು ಪಾದಪೂ
೧೬೨ ಜಾಪುರಸ್ಸರಂ ಶ್ರೀವೀರಬಲ್ಲಾಳದೇವರ

ಆರನೆಯ ಹಲಗೆಯ ಮುಂಭಾಗ

೧೬೩ ಶ್ರೀಹಸ್ತದಿಂ ಧಾರಾಪೂರ್ವ್ವಕಂ ಮಾಡಿಸಿ ಬಿ
೧೬೪ ಡಿಸಿ ಕೊಟ್ಟರ್ | ಇಂತೀ ಧರ್ಮ್ಮಮಾಚಂದ್ರಾರ್ಕ್ಕತಾ
೧೬೫ ರಾಮುತ್ತರೋತ್ತರಾಭಿವೃದ್ಧಿಯಿಂ ಸಲುತ್ತು
೧೬೬ ಮಿರ್ಕ್ಕೆ ಮಂಗಳಮಹಾ ಶ್ರೀ ಶ್ರೀ ಶ್ರೀ
೧೬೭ ಆ ಮಹಾಗ್ರಹಾರದ ಸ್ಥಾನಮಾನ್ಯಂಗ
೧೬೮ ಳೆಂತೆಂದೊಡೆ ಮೂಲಸ್ಥಾನದ ಸೋಮನಾಥ
೧೬೯ ದೇವರ್ಗ್ಗೆ ಗರ್ದ್ದೆ ಸಲಗೆ ೪ ಬೆಳ್ದಲೆ ಕಂಬಂ ೩೦೦ ಆ
೧೭೦ ಸ್ವಯಂಭುದೇವರ್ಗ್ಗೆ ಗರ್ದ್ದೆ ಸಲಗೆ ೪ ಬೆಳ್ದಲೆ
೧೭೧ ಕಂಬ ೩೦೦ | ಅಲ್ಲಿಯ ಯಿಂಮಡಿಗೌಡಂಗೆ ಕೊ
೧೭೨ ಡಗಿ ಗರ್ದ್ದೆ ಸ ೩ ಆತನ ಮಗಳ್ ರಾಮಕ್ಕಂಗೆ
೧೭೩ ಗರ್ದ್ದೆ ಸ ೧ ಆ ರಾಮಕಂಗೊಳಗಾಘಿ ಬೆಳ್ದಲೆ
೧೭೪ ಕಂಬಂ ೪೦೦ | ಆ ಸೆಟ್ಟಿಗೌಡಂಗೆ ಗರ್ದ್ದೆ ಸ ೩ ಬೆ
೧೭೬ ಳ್ದಲೆ ಕಂಬಂ ೩೦೦ || ಆ ಆನೆಗನಕೆಱೆಯ
೧೭೭ ಚತುಸ್ಸೀಮಾಸಂಬಂಧವೆಂತೆಂದೊಡೆ ಮೂಡ
೧೭೮ ಲ್ ಮೊದಲ್ಗೊಂಡು ಆ ವೂರ ಬೆಲ್ಲದಸಿಂದ
೧೭೯ ನಸೀಮೆ ದದ್ದವಾಡಿಯ ಮೊಱಡಿಮು

ಆರನೆಯ ಹಲಗೆಯ ಹಿಂಭಾಗ

೧೮೦ ಗ್ಗುಡ್ಡೆಯಾಲಂ | ಆ ವೂರ ಕೊಳತೂರಸೀ
೧೮೧ ಮೆ ಬೆಂತೆವರ ಮೇಗಣ ತರವಳಿಯಾಲಂ ಕಿಂ
೧೮೨ ನರಿಗಲ್ಲ ಮೊಱಡಿ ಬಳಹದ ಮೊಱಡಿ ಸುಂ
೧೮೩ ಡೆಯಕೆಱೆಯೊಳಕೋಹು ತೆಂಕಣ ಕಿಱು
೧೮೪ ಮೊಱಡಿ | ಆ ವೂರ ಗುೞಯಹಳ್ಳಿಯ
೧೮೫ ಸೀಮೆ ಬಂಣದ ಮೊಱಡಿ ಕಪ್ಪುರಸೆಟ್ಟಿಯಾ
೧೮೬ ಲಂ | ತೆಂಕಲ್ ಕಾಳಮಾರನ ಕೆಯ್ಯ ಮೂಡ
೧೮೭ ಣ ಮೊಱಡಿಯಾಲಂ ಸೀಗೆಯೊಬ್ಬೆ | ಆ ವೂ
೧೮೮ ರ ಹೊಂನಿಸೆಟ್ಟಿಯಹಳ್ಳಿಯ ಸೀಮೆ ಮೇದಜಗ
೧೮೯ ಲಿಯಾಲಂ ಮೋರಿಯರಂಕದ ಕಳಂ | ಆ ವೂರ ತಿ
೧೯೦ ಬ್ಬನಹಳ್ಳಿಯ ಸೀಮೆ ದೊಡ್ಡಗೇತನಾಲವರ ಸಜ್ಜಿ
೧೯೧ ಯ ಕೊಳಂ | ಪಡುವಲಾವೂರ ಕುಂಚಿಯದ
೧೯೨ ಸೀಮೆ ಬಡಗ ಹರಿದಡಡ್ದಾರಿಗೂಸುಗಲ್
೧೯೩ ವೊಂದೆವೆಟ್ಟದ ಬಡಗಣ ಹೆದ್ದಾರಿ | ಆ ವೂರ ಸಾ
೧೯೪ ಗತವಳ್ಳಿಯ ಸೀಮೆ ಸರಡಿಯಕೆಱೆಯೊ
೧೯೫ ಬ್ಬೆ ಹೆಟ್ಟೆಯನೆತ್ತಿದ ಬಾರಲ್ ತಿರಚನಕಟ್ಟ
೧೯೬ ದ ಬಡಗಣ ಕೋಡಿ ತುಗ್ಗಿಲ ಬಿಳಿಯಕಲ್ಲು
೧೯೭ ಮೊಱಡಿ ವೊಬ್ಬೆಯೊಳಗಣಾಲ ವಾಯಾ

ಏಳನೆಯ ಹಲಗೆಯ ಮುಂಭಾಗ

೧೯೮ ಬ್ಯದ ಗೋಂಟಿನನವಿಲಡಿಯಮರಂ | ಬಡಗಲಾ
೧೯೯ ವೂರ ಕತ್ತರಿಗಟ್ಟದ ಸೀಮೆ ಬಿಳಿಯಕಲ್ಲಮೊ
೨೦೦ ಱಡಿ ಬಳರಿಯ ಬನದ ಮಧ್ಯಂ ವಾಜಕಟ್ಟದೇರಿ
೨೦೧ ಯ ಮಧ್ಯಂ | ಆ ವೂರ ಬರಗೂರಸೀಮೆ
೨೦೨ ಮೂಡಣಿಂದಿೞದು ಬಂದ ಪೆರ್ಬ್ಬಳ್ಳದ ಮಧ್ಯಂ |
೨೦೩ ಆ ವೂರ ಮತ್ತಿಕಟ್ಟದ ಸೀಮೆ ದಡದಮೇ
೨೦೪ ಗಣ ಕಿಂನರಿಗಲ್ ಕರ್ಗ್ಗಲ್ಲ ಮೊಱಡಿ ಕೊಡೆ
೨೦೫ ಯಾಲಂ || ಇಂತಿದಾಸಂನ ಚತುರ್ಗ್ಗ್ರಾಮಾ
೨೦೬ ನುಮತಿಯಿಂ ಬರೆದ ಕ್ರಮಂ || ಸಾ
೨೦೭ ಮಾನ್ಯೋಯಂ ಧರ್ಮ್ಮಸೇತುರ್ನ್ನಋಪಾಣಾಂ
೨೦೮ ಕಾಲೇ ಕಾಲೇ ಪಾಲನೀಯೋ ಭವದ್ಭಿಃ
೨೦೯ ಸರ್ವ್ವಾನೇತಾನ್ ಭಾವಿನಃ ಪಾರ್ತ್ಥೀವೇಂದ್ರಾನ್
೨೧೦ ಭೂಯೋ ಭೂಯೋ ಯಾಚತೇ ರಾಮ
೨೧೧ ಚಂದ್ರಃ || ಸ್ವದತ್ತಾಂ ಪರದತ್ತಾಂ ವಾ ಯೋ ಹ
೨೧೨ ರೇತ ವಸುಂನ್ಧರಾಂ | ಷಷ್ಟಿರ್ವ್ವರ್ಷಸಹಸ್ರಾ
೨೧೩ ಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ ||
೨೧೪ ಜಂನಯ್ಯನ ಕವಿತೆ ದಾವಣ್ನನ ಬರಪ ಮ
೨೧೫ ಲ್ಲೋವಜನ ಕಂಡರಣಿ ||

ಶ್ರೀಮಲೆಪರೊಳಗಣ್ಡ

ಆಧಾರ: ಎ.ಕ. ೧೦ ಶಾಸನ ಸಂಖ್ಯೆ ೩೩