ಕವಚ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:3ACRPatrol(OIF3).jpg
U.S. Army soldiers wearing ballistic vests, accompanied by an armoured M3 Bradley.
The Dendra panoply, Mycenaean Greek armour, circa 1400 BCE
Heavily armoured riders, 16th century
Warrior during her third commission between 1867 and 1871
An armoured train from 1915
The U.S. Military's M1 Abrams MBT uses composite, reactive, and cage armour

ಕವಚ ಯುದ್ಧ ಪ್ರಸಂಗಗಳಲ್ಲಿ ಶತ್ರುವಿನ ಹೊಡೆತದಿಂದ ದೇಹಕ್ಕೆ ರಕ್ಷಣೆ ಒದಗಿಸಲು ಯೋಧ ಧರಿಸುವ ವಿಶಿಷ್ಟ ರಚನೆ (ಆರ್ಮರ್). ಪೂರ್ವ ಕಾಲದಲ್ಲಿ ಯುದ್ಧಗಳೆಂದರೆ ವ್ಯಕ್ತಿಗಳು ಪರಸ್ಪರವಾಗಿ ಭರ್ಜಿ ಕತ್ತಿ ಕೊಡಲಿ ಮುಂತಾದ ಆಯುಧಗಳನ್ನು ಹಿಡಿದು ಹೋರಾಡುತ್ತಿದ್ದ ಪ್ರಸಂಗಗಳಾಗಿದ್ದುವು. ಆದ್ದರಿಂದ ಪ್ರತಿಯೊಬ್ಬ ಯೋಧನೂ ಪ್ರತಿಸ್ಪರ್ಧಿಯ ಏಟುಗಳನ್ನು ತಡೆಯಲು ಸಹಾಯಕವಾಗುವಂತೆ ತನ್ನ ತಲೆ, ಕತ್ತು, ಎದೆ ಇತ್ಯಾದಿ ಅಂಗಗಳನ್ನು ಇನ್ನೂ ಸ್ವಲ್ಪ ಕಾಲಾನಂತರ ತನ್ನ ಸಮಸ್ತಾಂಗಗಳನ್ನೂ ತಕ್ಕ ಹೊದಿಕೆಗಳಿಂದ ಮರೆ ಮಾಡಿಕೊಳ್ಳುತ್ತಿದ್ದ. ರಾಜರು ಮತ್ತು ರಣಶೂರರೇ ಮೊದಲಾದ ಜನನಾಯಕರಿಗಂತೂ ಇದು ಬಹಳ ಮುಖ್ಯವಾಗಿತ್ತು. ಏಕೆಂದರೆ ಇಡೀ ಸೈನ್ಯದ ಶರಣಾಗತಿಯಾಗಲೀ, ಸೋಲಾಗಲಿ ಅವರ ಉಳಿವು ಅಳಿವುಗಳನ್ನು ಅವಲಂಬಿಸಿತ್ತು. ತೊಡಲೂ ಏಟುಗಳನ್ನು ತಡೆಯಲೂ ಅನುಕೂಲವಾದ ರಕ್ಷಾಕವಚಗಳನ್ನು ಗ್ರೀಕರು ಮತ್ತು ರೋಮನ್ನರು ನಿರ್ಮಿಸಿಕೊಂಡಿದ್ದರು.

ಇತಿಹಾಸ[ಬದಲಾಯಿಸಿ]

  • ನಾರ್ಮನ್ನರು ಯುರೋಪನ್ನು ಜಯಿಸಿದ ತರುವಾಯ ರೋಮನ್ ಕವಚಗಳಿಗೆ ಬದಲಾಗಿ ಒಳಗೆ ಮೆತ್ತೆಯನ್ನು ಒತ್ತುಗೊಟ್ಟಿರುವ ಚರ್ಮದಿಂದ ಮಾಡಿದ ಕವಚಗಳು ರೂಢಿಗೆ ಬಂದವು. ಶ್ರೀಮಂತರ ಕವಚಗಳ ಒಳಗೆ ಉಕ್ಕಿನ ಸಣ್ಣ ಸರಪಳಿಗಳನ್ನೂ ಅಳವಡಿಸುತ್ತಿದ್ದರು. ಗುರಾಣಿಯನ್ನು ಚರ್ಮದಿಂದಾಗಲಿ ಗಟ್ಟಿಮರದ ಹಲಗೆಗಳಿಂದಾಗಲಿ ಮಾಡುತ್ತಿದ್ದರು. ನಾರ್ಮನರು ತಲೆ, ಕತ್ತು ಮತ್ತು ಮೂಗನ್ನು ಮುಚ್ಚುವಂತೆ ಕೋನಾಕೃತಿಯ ಶಿರಸ್ತ್ರಾಣವನ್ನು ಧರಿಸುತ್ತಿದ್ದರು. ಇದು ತೊಡಲು ಅಚ್ಚುಕಟ್ಟಾಗಿತ್ತಲ್ಲದೆ ಒಳ್ಳೆ ರಕ್ಷೆಯೂ ಆಗಿತ್ತು.
  • ಆಮೇಲೆ ಹದಿಮೂರನೆಯ ಶತಮಾನದ ವೇಳೆಗೆ ಈ ಶಿರಸ್ತ್ರಾಣ ಮೇಲೆ ಚಪ್ಪಟೆಯಾಗಿ ಒಳಗೆ ಮೆತ್ತೆ ತುಂಬಿರುವ ಡ್ರಮ್ಮಿನಾಕಾರದ ಶಿರಸ್ತ್ರಾಣಕ್ಕೆ ದಾರಿ ಕೊಟ್ಟಿತು. ರಜಾಯಿಯ ರಕ್ಷಾಕವಚಗಳು, ಆಯುಧಗಳು ಅಷ್ಟು ನಾಜೂಕಾಗಿಲ್ಲದಿರುವ ತನಕ ಈ ಮೆತ್ತೆ ಉಪಯುಕ್ತವಾಗಿದ್ದವು. ಆದರೆ ಚರ್ಮವನ್ನಾಗಲೀ, ಮೆತ್ತೆಯನ್ನಾಗಲಿ ಚುಚ್ಚಿಕೊಂಡು ಒಳಕ್ಕೆ ತೂರುವ ಮೊನಚಿನ ಶಸ್ತ್ರಗಳು ತಯಾರಾದ ಬಳಿಕ, ಸಣ್ಣ ಸಣ್ಣ ಲೋಹದ ಫಲಕಗಳನ್ನು ಕವಚದೊಳಗೆ ಸೇರಿಸಲು ಪ್ರಾರಂಭಿಸಿದರು.
  • ಇದು ಎಷ್ಟರ ಮಟ್ಟಿಗಾಯಿತೆಂದರೆ ಪ್ರ.ಶ. ಸುಮಾರು ೧೪೦೦ರ ವೇಳೆಗೆ ತನಗೆ ಸಾಧ್ಯವಾದ ಪಕ್ಷದಲ್ಲಿ ಒಬ್ಬ ಯೋಧ ಕೀಲುಗಳುಳ್ಳ ಲೋಹದ ಹಾಳೆಗಳನ್ನು ದೇಹದ ಸುತ್ತ ಪಂಜರದಂತೆ ಕವಿಚಿಕೊಳ್ಳುತ್ತಿದ್ದನು. ಲೋಹ ಫಲಕ ಕವಚಗಳು ಸುಸ್ವರೂಪವನ್ನು ಪಡೆಯಲು ಬಹಳ ಕಾಲ ತೆಗೆದುಕೊಂಡಿರಬೇಕು. ಏಕೆಂದರೆ ತೊಡಲು ಅನುಕೂಲವಾಗಿಯೂ ಯೋಧ ತನ್ನ ಆಯುಧವನ್ನು ಪ್ರಯೋಗಿಸಲು ನಿರಾಂತರವಾಗಿರುವಂತೆಯೂ ಇವನ್ನು ಜೋಡಿಸಲು ಕಮ್ಮಾರನಿಗೆ ಅಸಾಧಾರಣ ಕೌಶಲ ಬೇಕಾಗುತ್ತದೆ.
  • ಹಾಗಿದ್ದರೂ ಕ್ರೂಸೇಡಿನ ವೀರ ಯೋಧರು ಪೂರ್ವ ದೇಶದ ಉರಿ ಬಿಸಿಲಿನಲ್ಲಿ ಇಷ್ಟು ದಪ್ಪವಾಗಿರುವ ಲೋಹಕವಚವನ್ನು ಹೇಗೆ ಧರಿಸುತ್ತಿದ್ದರೆಂಬುದೂ ಅಲ್ಲದೆ ಅದನ್ನು ದಿನಗಟ್ಟಲೆ ಬಿಚ್ಚದೆ ಹಾಕಿಕೊಂಡೇ ಇರುತ್ತಿದ್ದರೆಂಬುದೂ ಬೆರಗನ್ನು ತರುವ ವಿಷಯ. ಈ ಲೋಹ ಕವಚದ ಕೆಳಗೆ ಚರ್ಮದ ಮೆತ್ತೆಯಂಗಿಯನ್ನು ಮತ್ತು ಇವುಗಳ ಮೇಲೆ ಫರ್ ಎಂಬ ಚರ್ಮದ ನಿಲುವಂಗಿಯನ್ನು ಅವರು ಧರಿಸಿಕೊಳ್ಳುತ್ತಿದ್ದರೆಂದರೆ ಅವರ ಸಹನಾಶಕ್ತಿ ಎಷ್ಟರಮಟ್ಟಿನದೆಂಬುದನ್ನು ಊಹಿಸಿಕೊಳ್ಳಬಹುದು.
  • ಇನ್ನು ಸ್ವಲ್ಪ ಕಾಲಾನಂತರ, ಹೊಲಿಗೆ ಒಂದು ಕಲೆಯ ದರ್ಜೆಗೇರಿದ ಮೇಲೆ, ಕಮ್ಮಾರ ದರ್ಜಿಯನ್ನು ಅನುಸರಿಸಿ ಅವನು ಮಾಡಿದ ಅಂಗಿಯ ಮೇಲೆ ತನ್ನ ಲೋಹ ಫಲಕಗಳನ್ನು ಅಳವಡಿಸಿದುದಲ್ಲದೆ ಷರಾಯಿಯಂಥ ಉಕ್ಕಿನ ತ್ರಾಣಗಳಿಂದ ಕಾಲುಗಳನ್ನು ಮುಚ್ಚುವಂತೆ ಸಹ ಮಾಡಿಕೊಡುತ್ತಿದ್ದ. ವರ್ಷಗಳು ಕಳೆದ ಅನಂತರ ಈ ಕವಚಗಳ ನಿರ್ಮಾಣ ತುಂಬ ನಾಜೂಕಾಯಿತೆಂಬುದನ್ನು ಬ್ರಿಟಿಷ್ ಮ್ಯೂಸಿಯಮ್ ಕೋಟೆಯ ಶಸ್ತ್ರಾಗಾರದಲ್ಲಿ ಇಟ್ಟಿರುವ ಕವಚಗಳು ನಮಗೆ ತೋರಿಕೊಡುತ್ತವೆ.
  • ಮನುಷ್ಯನಿಗೆ ಹೇಗೆಯೋ ಹಾಗೆ ಅವನ ಕುದುರೆಗೂ ಕೂಡ ಮೊದಮೊದಲು ಅದರ ತಲೆ ಕೊರಳು ಮತ್ತು ಮುಖಗಳನ್ನು ಮುಚ್ಚುವಂತೆ ಉಕ್ಕಿನ ಹಲಗೆಗಳನ್ನು ತೊಡಿಸುತ್ತಿದ್ದರು. ಮಿಕ್ಕ ಮರ್ಮಾಂಗಗಳಿಗೆ ಯಾವ ರಕ್ಷಣೆಯೂ ಇರುತ್ತಿರಲಿಲ್ಲ. ಉದಾಹರಣೆಗೆ ಯಾವ ಕಾಲಾಳಾಗಲಿ ಕುದುರೆಯ ಕಾಲುಗಳನ್ನು ಸುಲಭವಾಗಿ ಕೊಚ್ಚಿ ಹಾಕಬಹುದಾಗಿತ್ತು. ಮುಂದೆ ಕತ್ತಿನ ಜುಲ್ಪಿಯವರೆಗೂ ದಪ್ಪ ಕೊರಲು ಪಟ್ಟಿಯನ್ನು ಕುದುರೆಗೆ ಹಾಕುತ್ತಿದ್ದರು.
  • ಪ್ರ.ಶ.೧೨೩೭ರಲ್ಲಿ ನಡೆದ ನೆವಗ್ರೋಚೆಯ ಯುದ್ಧವೊಂದರಲ್ಲಿ ದಪ್ಪ ಕವಚಗಳಿಂದ ಸಜ್ಜಾದ ಆರು ಸಾವಿರ ಕುದುರೆಗಳಿದ್ದುದು ಕಂಡುಬಂದಿತು. ಪ್ರ.ಶ. ಹದಿನಾರನೆಯ ಶತಮಾನದ ವೇಳೆಗೆ ಕುದುರೆ ಮನುಷ್ಯನಂತೆ ಆಕ್ರಮಣಕ್ಕಾಗಲಿ ಆತ್ಮರಕ್ಷಣೆಗಾಗಲಿ ತನ್ನ ಅಂಗಗಳನ್ನು ಆಡಿಸಲು ಅನುಕೂಲವಾಗಿಯೂ ಒಳ್ಳೆ ರಕ್ಷೆಯನ್ನು ಕೊಡಲು ಅರ್ಹವಾಗಿಯೂ ಇದ್ದ ಲೋಹಕವಚ ಸಿದ್ಧವಾಯಿತು.
  • ಆ ಕವಚ ಸರಳವಾಗಿರುವ ಬದಲು ಅಂಚುಗಳು, ಉಬ್ಬುತಗ್ಗುಗಳು ಕೆತ್ತನೆಯ ಕೆಲಸಗಳು, ಕೊರೆದು ಮಾಡಿರುವ ಚಿತ್ರಗಳು ಹೀಗೆ ಎಲ್ಲ ವಿಧದಲ್ಲೂ ಅಕ್ಷರಶಃ ಹೊಲಿಗೆ ಬಟ್ಟೆಗಳನ್ನೇ ಹೋಲುತ್ತಿತ್ತು. ಆದರೆ ಹದಿನೇಳನೆಯ ಶತಮಾನದಲ್ಲಿ ಮದ್ದಿನ ಶಸ್ತ್ರಗಳು ಬಳಕೆಗೆ ಬಂದಾಗ, ಅದರಿಂದ ರಕ್ಷೆ ಪಡೆಯುವ ಸಾಧನವನ್ನೊದಗಿಸಲು ಕಮ್ಮಾರ ನಿರತನಾಗಬೇಕಾಯಿತು.
  • ಆದ ಪ್ರಯುಕ್ತ ಈ ಶೃಂಗಾರಗಳನ್ನೆಲ್ಲ ತೊರೆದು ದಪ್ಪನಾಗಿರುವ ಲೋಹಫಲಕಗಳನ್ನು ನಿರ್ಮಿಸಬೇಕಾಯಿತು. ಈ ಪ್ರಕಾರ ಬಂದೂಕದವನಿಗೂ ಕಮ್ಮಾರನಿಗೂ ಒಂದು ಸ್ಪರ್ಧೆಯೇ ಏರ್ಪಟ್ಟಿತೆನ್ನಬಹುದು. ಈ ಸ್ಪರ್ಧೆ ಜಗದ್ಯುದ್ಧದಲ್ಲಿ ಬ್ರಿಟಿಷರೂ ಜರ್ಮನರೂ ಗುಂಡು ತೂರದ ಕವಚವನ್ನು ಕಂಡು ಹಿಡಿಯುವವರೆಗೂ ನಡೆಯಿತು.

ಕವಚರಕ್ಷಿತ ರಥ (ಆರ್ಮರ್ಡ್‌ ಕಾರ್)[ಬದಲಾಯಿಸಿ]

  • ದ್ವಂದ್ವ ಯುದ್ಧಗಳ ಕಾಲ ಮುಗಿದು ರಥಗಳು ಬಳಕೆಗೆ ಬಂದ ಮೇಲೆ ಅವುಗಳ ರಕ್ಷಣೆಗೆ ಲೋಹದ ಕವಚಗಳು ಬೇಕಾದುವು. ಈ ಪ್ರಕಾರವಾಗಿ ಭಾರವಾದ ಲೋಹಗಳ ಫಲಕಗಳಿಂದ ಸಜ್ಜುಗೊಳಿಸಿದ ರಥಗಳೂ ಹಡಗುಗಳೂ ತಯಾರಾದುವು. ಕರ್ನಲ್ ಡೇವಿಡ್ಸನ್ ಎಂಬಾತ ೧೮೯೬ರಲ್ಲಿ ಅದನ್ನು ಪೆಟ್ರೋಲಿನಿಂದೋಡುವ ಮೂರು ಸಿಲಿಂಡರುಗಳ ಕಾರಿನ ಮೇಲೆ ಕಟ್ಟಿ ಅದಕ್ಕೆ ಕೋಲ್ವ ಮೆಷೀನ್ ಗನ್ನನ್ನು ಅಳವಡಿಸಿದಾಗ (ಅಮೆರಿಕದಲ್ಲಿ) ಈ ರಥ ಮೊದಲ ಬಾರಿಗೆ ನಿರ್ಮಿತವಾಯಿತು.
  • ಮೇಲಿನ ಅಧಿಕಾರಿಗಳು ಇದರಿಂದ ಎಷ್ಟು ಪ್ರೀತರಾದರೆಂದರೆ ತತ್ಕ್ಷಣ ಅಮೆರಿಕನ್ ರಾಹುತ ಸೈನ್ಯದ ಐದು ರೆಜಿಮೆಂಟುಗಳಿಗೆ ಇವನ್ನು ಒದಗಿಸಿಕೊಡಬೇಕೆಂದು ಆಜ್ಞೆಯನ್ನಿತ್ತರು. ಮತ್ತು ಈ ಹೊಸ ಸಲಕರಣೆಯನ್ನು ಸ್ಥಳ ಶೋಧನೆ ಮತ್ತು ಇತರ ಕರ್ತವ್ಯಗಳಿಗೆ ಹೇಗೆ ಬಳಸಬೇಕೆಂಬುದಕ್ಕೆ ನಿಯಮಗಳನ್ನು ರಚಿಸಿದರು. ತದನಂತರ ಇಂಗ್ಲೆಂಡ್ ದೇಶ ಸಹ ಬೇಗನೆ ತನ್ನ ಪ್ರಥಮ ಕವಚರಕ್ಷಿತ ರಥವನ್ನು ನಿರ್ಮಿಸಿತು. ಇದರ ಮಾದರಿಗಳು ಹೆಚ್ಚು ಹೆಚ್ಚು ನಾಜೂಕಾದವು.
  • ಇದು ಗುಪ್ತ ಶಸ್ತ್ರವಾಗಿರುವ ಘಟ್ಟವನ್ನು ಮೀರಿ ಯುದ್ಧದ ಸನ್ನಾಹದಲ್ಲಿದ್ದ ಎಲ್ಲ ರಾಷ್ಟ್ರಗಳೂ ನಿರ್ಮಿಸುವ ಹಂತ ತಲುಪಿತು. ಒಂದನೆಯ ಮಹಾಯುದ್ಧದಲ್ಲಿ ಇಟಲಿ ದೇಶದಲ್ಲಿ ಮೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಘನತರವಾದ ಕವಚರಕ್ಷಿತ ರಥಗಳಿದ್ದುವು. ಇಂದಿನ ಕವಚರಕ್ಷಿತ ರಥ ನಾಲ್ಕು ಚಕ್ರಗಳ ಮೇಲುರುಳುತ್ತದೆ ಮತ್ತು ಅದರಲ್ಲಿ ಎರಡು ಭಿನ್ನ ಒಳವ್ಯಾಸಗಳ (ಕ್ಮಾಲಿಬರ್) ಎರಡು ಮೆಷೀನ್ಗನ್ನುಗಳಿವೆ. ಮೊದಲು ಉದ್ದೇಶಪಟ್ಟಿದ್ದಂತೆ, ಇದನ್ನು ಈಗಲೂ ಸ್ಥಳ ಸಮೀಕ್ಷೆಗೆ ಉಪಯೋಗಿಸುತ್ತಾರೆ. ಆದರೆ ಸಣ್ಣ ಸಣ್ಣ ಶತ್ರುಸೈನ್ಯವನ್ನು ಎದುರಿಸಲೂ ಇದನ್ನು ಬಳಸಬಹುದು.
  • ಸೈನಿಕರನ್ನು ಮತ್ತು ನಾವಿಕರನ್ನು ಒಯ್ಯುವುದಕ್ಕೂ ಇತರ ಕೆಲಸಗಳಿಗೂ ಫಲಕಗಳಿಂದ ಸಜ್ಜುಗೊಳಿಸಿದ ಟ್ರಕ್ಕುಗಳು ಇವೆ. ಇದೇ ಪರಿಯಲ್ಲಿ, ಪ್ರಯಾಣಿಕರ ಬಂಡಿಗಳನ್ನು ದಾರಿಹೋಕರ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಸಜ್ಜುಗೊಳಿಸುತ್ತಾರೆ. ದಾರಿಗಳ್ಳರ ಮತ್ತು ಪುಂಡರ ಗುಂಪುಗಳ ಹಾವಳಿ ಈವರೆಗೆ ಅಮೆರಿಕದಲ್ಲಿ ಸರ್ವೇಸಾಧಾರಣವಾಗಿತ್ತು.
  • ಇದೇ ಲೋಹ ಫಲಕಗಳಿಂದ ರಕ್ಷಿತವಾಗಿ ರೈಲ್ವೆ ಟ್ರೇನುಗಳೂ ಇವೆ. ತುಪಾಕಿ ಗುಂಡುಗಳು ಮತ್ತು ಷಾರ್ಪ್ನೆಲ್ಲುಗಳ ಹೊಡೆತವನ್ನು ತಡೆಯಲು ತಕ್ಕವಾಗಿರುವ ಹಗುರವಾಗಿ ಲೋಹ ಫಲಕಗಳನ್ನು ಇವಕ್ಕೆ ಜೋಡಿಸಿರುತ್ತಾರೆ. ಮತ್ತು ಸಮಯ ಬಂದಾಗ ಶತ್ರುಗಳನ್ನು ಹೊಡೆಯುವುದಕ್ಕೆ ಅನುಕೂಲವಾಗಿರುವಂತೆ ಗನ್ನುಗಳನ್ನು ತಕ್ಕ ತಕ್ಕ ಎಡೆಗಳಲ್ಲಿ ಜೋಡಿಸಿರುತ್ತಾರೆ.

ಕವಚ ಫಲಕಗಳು (ಆರ್ಮರ್ಡ್‌ ಪ್ಲೇಟ್ಸ್‌)[ಬದಲಾಯಿಸಿ]

  • ಷಾರ್ಕ್ ಜಲಚರಗಳಿಂದಾಗಲಿ ಇರಿತವೇ ಮುಂತಾದ ಶತ್ರುವಿನ ಹೊಡೆತಗಳಿಂದಾಗಲಿ ಶಸ್ತ್ರ ಪ್ರಯೋಗದಿಂದಾಗಲಿ ಒಡೆದುಹೋಗದಂತೆ ಹಡಗುಗಳ ಹೊರಮೈಗೆ ತಕ್ಕ ರಕ್ಷಣೆಗಳನ್ನು ಒದಗಿಸುವ ವಿಧಾನ ಪೂರ್ವಕಾಲದವರಿಗೂ ಗೊತ್ತಿತ್ತು. ಪ್ರ.ಶ.ಪೂ. ೨೫೦ರಷ್ಟು ಹಿಂದೆ ಸಹ ಚಾಪೆಗಳನ್ನು ಮತ್ತು ದಪ್ಪ ಹಗ್ಗಗಳನ್ನು ಹಡಗಿನ ಸುತ್ತ ಇಳಿಯಬಿಡುತ್ತಿದ್ದರು. ಆ ಬಳಿಕ ಕಂಚಿನ ಸರಪಣಿಗಳನ್ನು ತೂಗುಬಿಡುತ್ತಿದ್ದರು. ಇನ್ನೂ ಸ್ವಲ್ಪ ಕಾಲದ ಮೇಲೆ ಚರ್ಮವನ್ನು ಹೊದೆಸುತ್ತಿದ್ದರು.
  • ನೆಪೋಲಿಯನ್ನನ ಯುದ್ಧಗಳ ಕಾಲಕ್ಕೆ ಬುಲೆಟ್ಟುಗಳೂ ಷೆಲ್ಲೂಗಳೂ ಹಡಗಿನ ಗೋಡೆಗಳನ್ನು ಕೊರೆದು ಒಳಕ್ಕೆ ತೂರದ ಹಾಗೆ ಮಾಡಲು ಸಮರ ನೌಕೆಗಳಿಗೆ ಎರಡು ಅಡಿಗಳ ದಪ್ಪದ ಓಕ್ ಹಲಗೆಗಳನ್ನು ಜೋಡಿಸುತಿದ್ದರು. ಉತ್ತಮವಾದ ಫಿರಂಗಿಗಳು ಉಪಯೋಗಕ್ಕೆ ಬಂದ ತರುವಾಯ ಲೋಹ ಫಲಕಗಳು ಬೇಕಾದವು. ೧೮೫೯ರ ಹೊತ್ತಿಗೆ ಲೋಹ ಫಲಕಗಳನ್ನು ಹೆಚ್ಚು ಅಭೇಧ್ಯವಾಗುವಂತೆ ಮಾಡಲು ಪ್ರಯೋಗಗಳು ನಡೆದವು.
  • ಉತ್ತಮಗೊಳಿಸಿದ ಫಿರಂಗಿಗಳ ಗುಂಡು ಮತ್ತು ಷೆಲ್ಲುಗಳ ಹೊಡೆತವನ್ನು ತಡೆಯಲು ಮೆದು ಕಬ್ಬಿಣದ ಅಥವಾ ಉಕ್ಕಿನ ಹಲಗೆಗಳು ಸಾಕಾಗದೆ ಹೋದವು. ಬಡಿದ ಹಲಗೆಗಳಿಗಿಂತ ಮೆತ್ತಗಿದ್ದು ಗಟ್ಟಿಯಾಗಿರುವ ಸುತ್ತಿದ ಹಲಗೆಗಳು ಹೆಚ್ಚು ಉಪಯುಕ್ತವಾಗಿ ಕಂಡವು. ಗ್ಲೋಯರೇ ಎಂಬ ಫ್ರೆಂಚ್ ಹಡಗನ್ನು ಮೊದಲನೆಯದರಿಂದ ಮಾಡಿದ್ದರು.
  • ಅದಕ್ಕೆ ೪ ೩/೪'’ ದಪ್ಪದ ಕಬ್ಬಿಣದ ಪಕ್ಕಗಳಿದ್ದವು. ಸಮುದ್ರದಲ್ಲಿ ಮೊದಲು ತೇಲಿದ ಕವಚರಕ್ಷಿತ ನೌಕೆಯಿದು. ೧೮೬೧ರಲ್ಲಿ ಕಾರ್ಯರಂಗಕ್ಕಿಳಿದ ವಾರಿಯರ್ ಎಂಬ ಬ್ರಿಟಿಷ್ ಹಡಗು ಎರಡನೆಯದು; ಇವುಗಳ ಅನಂತರ ದೊಡ್ಡ ಒಳವ್ಯಾಸವುಳ್ಳ ಫಿರಂಗಿಗಳನ್ನು ಅಳವಡಿಸಿದ ಕವಚರಕ್ಷಿತ ನೌಕೆಗಳು ರೂಪಗೊಂಡವು.

ಕವಚ (ಭಾರತದಲ್ಲಿ)[ಬದಲಾಯಿಸಿ]

  • ಕವಚ ಧಾರಣೆ ಭಾರತದಲ್ಲಿ ಇತಿಹಾಸಪೂರ್ವ ಕಲ್ಪದಲ್ಲೂ ವಾಡಿಕೆಯಲ್ಲಿತ್ತೆಂಬುದು ಋಗ್ವೇದದಲ್ಲಿ (೧-೨೫-೧೩) ವರುಣನನ್ನು ಹಿರಣ್ಯಯದ್ರಾಪಿ ಅಂದರೆ ಬಂಗಾರದ ಕವಚವನ್ನು ತೊಟ್ಟವನೆಂದು ವರ್ಣಿಸಿರುವುದರಿಂದ ವಿಶದವಾಗುತ್ತದೆ. ನಮ್ಮ ಪುರಾಣಗಳಲ್ಲಿ ಹಾಗೂ ಮಹಾಕಾವ್ಯ ಗಳಲ್ಲಿ ಕವಚದ ಸಮಾನವಾಚಕಗಳಾದ ವರೂಥ, ಚರ್ಮ, ವರ್ಮ, ತ್ರಾಣ, ಇತ್ಯಾದಿ ಶಬ್ದಗಳು ಮೇಲಿಂದ ಮೇಲೆ ಉಕ್ತವಾಗಿವೆಯಷ್ಟೇ ಅಲ್ಲದೆ ಆ ಕಾಲದ ಭಾರತೀಯರು ಅಯಸ್, ಪಾರಸವ, ಕಾಂಚನ, ವಜ್ರ, ಚರ್ಮ ಇತ್ಯಾದಿಗಳಿಂದಾದ ದೃಢ ಅಥವಾ ಮೃದುವಾದ ಕವಚಗಳನ್ನು ಧರಿಸುತ್ತಿದ್ದರೆಂದು ಅದೇ ಮೂಲಗಳಿಂದ ತಿಳಿದುಬರುತ್ತದೆ.

ಕವಚ ವಿಶೇಷತೆಗಳು[ಬದಲಾಯಿಸಿ]

  • ಇತಿಹಾಸ ಕಲ್ಪದ ಬೇರೆ ಬೇರೆ ಯುಗಗಳಲ್ಲಿ ಭಾರತದಲ್ಲಿ ಬಳಸಲಾಗುತ್ತಿದ್ದ ವಿವಿಧ ಕವಚಗಳನ್ನು ಕುರಿತು ತಿಳಿದುಕೊಳ್ಳುವಲ್ಲಿ ಸಾಹಿತ್ಯ ಕೃತಿಗಳು ಹಾಗೂ ಪ್ರಾಚೀನ ನಾಣ್ಯಗಳು ಸ್ವಲ್ಪ ಮಟ್ಟಿಗೆ ಸಹಾಯ ನೀಡುತ್ತವೆ. ಆಯುಧಾಗಾರದ ಅಧ್ಯಕ್ಷರು ಆವರಣಗಳನ್ನು (ಅಂದರೆ ಕವಚ) ಶಸ್ತ್ರ ಕಲಾನಿಪುಣರಿಂದ ತಯಾರಿಸಿಡಬೇಕೆಂದು ಸೂಚನೆ ನೀಡುವ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ರಕ್ಷಿಸುವಂಥ ಕಬ್ಬಿಣವೇ ಮೊದಲಾದ ಲೋಹಗಳಿಂದ ಇಡಿಯ ದೇಹವನ್ನೂ ರಕ್ಷಿಸುವಂಥ ಪಟ್ಟ: ತಲೆ, ಎದೆ, ಬೆನ್ನು ಮತ್ತು ಕೈಗಳ ಬಿಡಿ ಬಿಡಿ ಭಾಗಗಳಿಂದ ಕೂಡಿದ ಕವಚ; ಸೊಂಟ ಮತ್ತು ಬೆನ್ನನ್ನು ಮಾತ್ರ ಮರೆ ಮಾಡುವಂಥ: ಸೂತ್ರಕ, ಶಿರಸ್ತ್ರಾಣ, ಕಂಠತ್ರಾಣ; ಎದೆ, ಬೆನ್ನನ್ನುಗಳಿಗೆ ಕವಚವಾದ ಕೂರ್ಪಾಸ; ಮೊಳಕಾಲಿನ ವರೆಗಿನ ಕಂಚುಕ; ಹಿಂಗಾಲ ಹಿಮ್ಮಡಿ ವರೆಗಿನ ವಾರವಾಣ; ಕೈಗಳ ರಕ್ಷಣೆಗಾದ; ನಾಗೋದಾರಿಕಾ ಎಂಬೀ ನಾನಾ ಬಗೆಯ ಕವಚಗಳ ಪ್ರಸ್ತಾಪ ದೊಂದಿಗೆ ಕಬ್ಬಿಣವೇ ಮೊದಲಾದ ಲೋಹಗಳಿಂದಾದ, ಕೋಷ್ಠವಲ್ಲಿ ಇತ್ಯಾದಿ ಬಳ್ಳಿಗಳಿಂದಾದ, ಚರ್ಮ, ಮರ, ಕೊಂಬುಗಳಿಂದಾದ ಇನ್ನೂ ಹಲವು ಬಗೆಯ ಕವಚಗಳ ಪ್ರಸ್ತಾಪವೂ ಕಂಡುಬರುತ್ತದೆ. ಯುದ್ಧಾಶ್ವಗಳಿಗೂ ಆನೆಗಳಿಗೂ ಚರ್ಮದಿಂದಾದ ಕವಚಗಳನ್ನು ತೊಡಿಸಲಾಗುತ್ತಿತ್ತೆಂದು ಶುಕ್ರನೀತಿಯಿಂದ ತಿಳಿದುಬರುತ್ತದೆ.
  • ಪ್ರ.ಶ. ೧೧೨೬ರಿಂದ ೧೧೩೮ರ ವರೆಗೆ ಕರ್ನಾಟಕದ ಚಕ್ರವರ್ತಿಯಾಗಿ ಮೆರೆದ ಭೂಲೋಕಮಲ್ಲ ೩ನೆಯ ಸೋಮೇಶ್ವರ ತನ್ನ ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥ ಚಿಂತಾಮಣಿ ಎಂಬ ಬೃಹದ್ಗ್ರಂಥದಲ್ಲಿ ಸೈನಿಕರ ಪಕ್ಷರಕ್ಷೆ, ತನುತ್ರಾಣ, ಅಂಗರಕ್ಷೆ, ಕೃತ್ತಿಕಾಚರ್ಮ ಎಂಬ ಕವಚಗಳನ್ನಷ್ಟೇ ಅಲ್ಲದೆ, ಆನೆಗಳ, ಅಶ್ವಗಳ ತನ್ನು (ಅಥವಾ ಗಾತ್ರ) ತ್ರಾಣಗಳನ್ನೂ ಪ್ರಸ್ತಾಪಿಸಿರುತ್ತಾನೆ. ಸಾಹಿತ್ಯ ಕೃತಿಗಳಿಂದ ಕವಚಗಳ ಬಗ್ಗೆ ಇಷ್ಟೆಲ್ಲ ವಿಷಯಗಳು ತಿಳಿದುಬರುತ್ತವೆಯಾದರೂ ಆಗಿಂದಾಗ್ಗೆ ನಡೆದು ಹೋದ ಕಾಳಗಗಳಿಗೆ ನೇರ ಸಂಬಂಧವಿರುವ ವೀರಗಲ್ಲುಗಳ ಮೇಲೆ ಚಿತ್ರಣಗಳು ಈ ಅಂಶಕ್ಕೆ ಪೋಷಕವಾಗಿಲ್ಲವೆಂದೇ ಹೇಳಬಹುದು. ಸಾಮಾನ್ಯವಾಗಿ ವೀರಗಲ್ಲುಗಳಲ್ಲಿ ಚಿತ್ರಿತವಾಗಿರುವ ಯೋಧರು ತುಂಡು ದಟ್ಟಿಯನ್ನಷ್ಟೇ ಧರಿಸಿರುತ್ತಾರೆ.
  • ಇದರಿಂದಾಗಿ ಸಾಹಿತ್ಯ ಕೃತಿಗಳಲ್ಲಿ ಪ್ರಸ್ತಾಪಿಸಲಾಗಿರುವ ಕವಚಗಳನ್ನು ಕೇವಲ ಅರಸುಗಳೂ ಇತರ ಸೇನಾಮುಖಂಡರೂ ಮಾತ್ರ ಧರಿಸುತ್ತಿದ್ದರೆಂದು ಊಹಿಸಲು ಆಸ್ಪದವಿದೆ. ಭಾರತದ ಕೆಲವು ಪ್ರಾಚೀನ ನಾಣ್ಯಗಳಲ್ಲಿ ಕಂಡುಬರುವ ಅರಸುಗಳ ಚಿತ್ರಣ ಮೇಲಿನ ಊಹೆಯನ್ನು ಸಮರ್ಥಿಸುತ್ತದೆ. ಉದಾಹರಣೆಗೆ ೨ನೆಯ ಶತಮಾನದಲ್ಲಿ ಹೊರಡಿಸಲಾದ ಕುಷಾಣ ಮನೆತನದ ವಾಸುದೇವನ ನಾಣ್ಯಗಳಲ್ಲಿ ಶಿರಸ್ತ್ರಾಣ ಮತ್ತು ಉಕ್ಕಿನ ಉಂಗುರಗಳಿಂದ ಹೆಣೆದ ಮೈಜೋಡನ್ನು ಧರಿಸಿರುವ ರಾಜನ ಚಿತ್ರಣವಿದೆ.
  • ಮುಸ್ಲಿಮರು ಭಾರತದಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಿದ ಮೇಲೆ ಬಳಸಲಾಗುತ್ತಿದ್ದ ಕವಚಗಳನ್ನು ಕುರಿತು ನಮಗೆ ಹೆಚ್ಚಿನ ವಿಷಯಗಳು ಲಭ್ಯವಾಗಿವೆ. ಅಂದಿನಿಂದ ಭಾರತದಲ್ಲಿ ಹಲವು ಹೊಸ ಬಗೆಯ ಶಿರಸ್ತ್ರಾಣಗಳಷ್ಟೇ ಅಲ್ಲದೆ ಚಹರ್ ಐನಾಹ್ಜಿ, ರಿಹ್, ಜೈಬಾಹ್, ಜೋಷನ್, ಅಂಗ್ರಖಾ (ಅಂಗರಕ್ಷೆ), ಜಮಾ-ಇ-ಪತಹಿ, ಭಂಜು, ಕೋಠಿ, ಕಮಲ್, ಕಂಠಶೋಭಾ ಮುಂತಾದ ಸಾಮಾನ್ಯವಾಗಿ ಬಖ್ತರ್ ಅಥವಾ ಬಕ್ತರ್ ಎಂದು ಹೆಸರಿಸಲಾಗುವ ಮೈಕವಚಗಳೂ ಲೋಹದಿಂದಾದ ದಸ್ತಾನಾಹ್ ಎಂಬ ಕರತ್ರಾಣಗಳೂ ಮೊಜಾಹ್-ಇ-ಅಚನಿ ಎಂಬ ಪಾದರಕ್ಷೆಗಳೂ ಬಳಕೆಗೆ ಬಂದವು. ಬೆನ್ನಿನ ಕವಚಗಳು ಚೂಪಾದ ಕಬ್ಬಿಣದ ಮೊಳೆಗಳಿಂದಕೂಡಿದ್ದವು.
  • ಮೊಗಲ್ ಯುಗಕ್ಕೆ ಸೇರಿದ ಹಲವು ವರ್ಣಚಿತ್ರಗಳಲ್ಲಿ ಕಾಜಿಂ, ಗರ್ದನಿ, ಪಟ್ಟಾ, ಇನಾಂ, ಜೇರ್ಬಂದ್, ದುಮ್ಚಿ, ಖೋಗಿ, ಉಸ್ತಕ್, ಬಲತಂಗ್, ಮೊಹ್ರಾ, ಅಂಧಿ, ಆರಿ, ಪಖರಾ ಇತ್ಯಾದಿ ಕವಚಗಳಿಂದ ಕೂಡಿದ ಕುದುರೆಗಳ ಚಿತ್ರಣಗಳಿವೆ. ಲೋಹದ ಅನೇಕ ಪಟ್ಟಿಗಳನ್ನು ಜಮಖಾನದ ಮೇಲೆ ಹೊಲೆದು ಅದನ್ನು ಆನೆಗಳ ತನುತ್ರಾಣಗಳನ್ನಾಗಿ ಉಪಯೋಗಿಸುವುದೂ ವಾಡಿಕೆಯಲ್ಲಿತ್ತು. ಆನೆಗಳ ಪೃಷ್ಠಭಾಗವನ್ನು ರಕ್ಷಿಸಲು ಸರಪಳಿಗಳಿಂದಾದ ಕವಚಗಳಿದ್ದವು.

ಛಾಯಾಚಿತ್ರಶಾಲೆ[ಬದಲಾಯಿಸಿ]

"https://kn.wikipedia.org/w/index.php?title=ಕವಚ&oldid=959928" ಇಂದ ಪಡೆಯಲ್ಪಟ್ಟಿದೆ