ಕಲ್ಲೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಕಲ್ಲೇರಿ : ಕಲ್ಲು ಬಂಡೆಗಳಿಂದ ಕೂಡಿರುವಂಥ ಸ್ಥಳಗಳಲ್ಲಿ ಅಥವಾ ಬೇಕೆಂದೇ ಕಲ್ಲುಗಳನ್ನಿಟ್ಟು ಅವುಗಳ ಮಧ್ಯೆ ಇವಕ್ಕೆ ಹೊಂದಿಕೊಳ್ಳುವಂಥ ಕೆಲವು ಜಾತಿಯ ಸಸ್ಯಗಳನ್ನು ಬೆಳೆಸುವ ಒಂದು ವಿಶಿಷ್ಟ ಕ್ರಮ (ರಾಕರಿ). ತೋಟಗಾರಿಕೆಯ ಹಲವು ವಿಧಾನಗಳಲ್ಲೊಂದಾದ ಇದನ್ನು ಆಲ್ಪೈನ್ ಗಾರ್ಡನ್ ಅಥವಾ ರಾಕ್ಗಾರ್ಡನ್ ಎಂದೂ ಕರೆಯಲಾಗುತ್ತದೆ. ಉದ್ಯಾನವನದಲ್ಲಿ ಹಳ್ಳ, ದಿಣ್ಣೆ ಮತ್ತು ಕಲ್ಲುಬಂಡೆಗಳಿರುತ್ತವೆ. ಅನೇಕ ವೇಳೆ ಅವನ್ನು ಮಟ್ಟಸಮಾಡಿ ಹೂಗಿಡ, ಬಳ್ಳಿ ಮುಂತಾದವನ್ನು ಬೆಳೆಸುವುದು ಬಹಳ ಕಷ್ಟವಾದ ಕೆಲಸ. ಇಂಥಲ್ಲೆಲ್ಲ ಹಳ್ಳ, ದಿಣ್ಣೆ ಮತ್ತು ಕಲ್ಲುಬಂಡೆಗಳನ್ನು ಮಟ್ಟಸಮಾಡಿ ಒಂದೇ ರೀತಿಯ ತೋಟವನ್ನು ನಿರ್ಮಿಸುವ ಬದಲು, ಹೆಚ್ಚು ಶ್ರಮವಿಲ್ಲದೆ ಸುಂದರವಾಗಿ ಕಾಣುವ ವಿವಿಧ ರೀತಿಯ ಕಲ್ಲೇರಿಗಳನ್ನು ರೂಪಿಸುವುದು ಜಾಣ್ಮೆ. ಉದ್ಯಾನವನಗಳು ಒಂದೇ ರೀತಿ ಇದ್ದರೆ ಅಷ್ಟು ಚೆನ್ನಾಗಿ ಕಾಣದಿರಬಹುದು. ಆದ್ದರಿಂದ ಇಂಥಲ್ಲಿ ಸ್ವಾಭಾವಿಕ ಮತ್ತು ಸರಳವಾಗಿರುವ ಕಲ್ಲೇರಿಗಳು ಅಂದವನ್ನು ದ್ವಿಗುಣಗೊಳಿಸುತ್ತವೆ. ದೊಡ್ಡ ಮರಗಳ ಪಕ್ಕದಲ್ಲಿ ಖಾಲಿ ಸ್ಥಳವಿದ್ದರೆ ಅಲ್ಲಿ ಕಲ್ಲೇರಿಗಳನ್ನು ಬೆಳೆಸುವುದರಿಂದ ಅಲಂಕಾರಕ್ಕೆ ಮೆರುಗು ಕೊಟ್ಟಂತಾಗುವುದು. ಯಾವ ಅಲಂಕಾರ ಸಸ್ಯವನ್ನೂ ಬೆಳೆಸಲು ಸಾಧ್ಯವಾಗದೆ ಇರುವ ಕಡೆಗಳಲ್ಲಿಯೂ ಕಲ್ಲೇರಿ ಸಸ್ಯಗಳನ್ನು ಸುಲಭವಾಗಿ ಬೆಳೆಸಬಹುದು. ಕಲ್ಲೇರಿಗಳು ಬಿಸಿಲಿನ ಝಳ, ನೀರಿನ ಕೊರತೆ ಮುಂತಾದವನ್ನು ಸಹಿಸುವ ಸಾಮಥರ್ಯ್‌ವುಳ್ಳವು. ಉದ್ಯಾನವನದಲ್ಲಿ ಬೇರೆ ಸಾಧಾರಣ ಬಗೆಯ ಸಸ್ಯಗಳನ್ನು ಬೆಳೆಸಲಾಗದ ಸ್ವಲ್ಪವೇ ಮಣ್ಣು ಇರುವ ದೊಡ್ಡ ಬಂಡೆಗಳ ಮೇಲೆ ಮತ್ತು ಬಂಡೆಗಳ ಬಿರುಕುಗಳನ್ನು ಕಲ್ಲೇರಿ ಸಸ್ಯಗಳಿಂದ ಅಲಂಕರಿಸಬಹುದು. ಕಲ್ಲೇರಿ ಸಸ್ಯಗಳು ದೀರ್ಘಕಾಲವಿರುವುದರಿಂದ ವಾರ್ಷಿಕ ಹೂಗಿಡಗಳಂತೆ ಪ್ರತಿವರ್ಷವೂ ಬೇಸಾಯ ಮಾಡುವ ತೊಂದರೆ ಇರುವುದಿಲ್ಲ. ಮಣ್ಣು ಕೊಚ್ಚಿಹೋಗಿ ಭೂಮಿ ನಿಸ್ಸಾರವಾಗುವುದನ್ನು ಹಲವು ಕಲ್ಲೇರಿ ಸಸ್ಯಗಳು ದಷ್ಟಪುಷ್ಟವಾಗಿ ಬೇರು ಬಿಟ್ಟು ತಪ್ಪಿಸಬಲ್ಲವು. ಈ ಸಸ್ಯಗಳು ವಿವಿಧ ಬಣ್ಣಗಳಲ್ಲಿ ಸದಾ ಹಸುರಾಗಿರುವ ಮತ್ತು ಹೂ ಬಿಡುವ ಗುಣವುಳ್ಳವು. ಇವುಗಳ ಬೇರು, ಎಲೆ, ಕಾಂಡ ಮುಂತಾದವುಗಳು ಭೂಮಿಯ ಫಲವತ್ತನ್ನು ಕಾಪಾಡಲು ಸಹಾಯವಾಗುತ್ತವೆ. ಮರದ ಬುಡದಲ್ಲಿ ನಿರ್ಮಿಸಿದ ಕಲ್ಲೇರಿಗಳು ಮರದ ಬೇರುಗಳನ್ನು ಮಣ್ಣಿನ ಸವೆತದಿಂದ ತೇಲಿಹೋಗದಂತೆ ಕಾಪಾಡಿ ತಂಪನ್ನು ಕೊಡುತ್ತವೆ.

ಕಲ್ಲೇರಿಗಳಿಗೆ ಸ್ಥಳ ಆರಿಸುವಿಕೆ[ಬದಲಾಯಿಸಿ]

ಕಲ್ಲೇರಿಗಳಿಗೆ ಅಡಚಣೆ ಇಲ್ಲದ ಶುದ್ಧವಾದ ಗಾಳಿ, ಒಣಹವೆ ಮತ್ತು ಬಿಸಿಲು ಬೇಕಾದ ಮುಖ್ಯ ಅಂಶಗಳು. ಕಲ್ಲೇರಿಗಳನ್ನು ನಿರ್ಮಿಸಲು ಆರಿಸುವ ಭೂಮಿ ಸುಲಭವಾಗಿ ನೀರು ಬಸಿದು ಹೋಗುವಂತಿಬೇಕು. ಇತರ ಅಲಂಕಾರಸಸ್ಯಗಳು ಕಲ್ಲೇರಿಗಳ ಅತಿ ಸಮೀಪದಲ್ಲಿದ್ದರೆ ಇವು ಅವುಗಳ ಆಹಾರಾಂಶಗಳನ್ನು ಲೂಟಿ ಮಾಡುವ ಅವಕಾಶವಿರುವುದರಿಂದ ಇವನ್ನು ಹತ್ತಿರ ಹತ್ತಿರ ಬೆಳೆಸಬಾರದು. ಕಲ್ಲೇರಿಯನ್ನು ನಿರ್ಮಿಸಲು ಬೇಕಾಗುವ ಸಾಮಗ್ರಿಗಳು : ಕಲ್ಲೇರಿಗಳು ಯಶಸ್ವಿಯಾಗಬೇಕಾದರೆ ಯಾವುದೆ ಕೃತಕ ವಸ್ತುಗಳನ್ನು ಬಳಸಬಾರದು. ಮುಖ್ಯವಾಗಿ ಬೇಕಾಗುವ ವಸ್ತುವೆಂದರೆ ಕಲ್ಲುಗಳು. ಕಲ್ಲುಗಳು ಯಾವ ಆಕಾರದಲ್ಲಿದ್ದರೆ ಅದೇ ಆಕಾರದಲ್ಲಿ ಜೋಡಿಸಬೇಕು. ಜೋಡಿಸಿದ ಕಲ್ಲುಗಳು ಜರುಗದಂತೆ ಭದ್ರವಾಗಿರಲು ಸಿಮೆಂಟ್ ಹಾಕುವುದು ಅಗತ್ಯ. ಕಲ್ಲುಗಳ ಮಧ್ಯದಲ್ಲಿ ಮಣ್ಣು ಹಾಕುವುದು ಕಲ್ಲೇರಿಗಳನ್ನು ನೆಡಲು ಸಹಾಯವಾಗುತ್ತದೆ.

ಕಲ್ಲೇರಿಗಳನ್ನು ನಿರ್ಮಿಸುವ ವಿಧಾನ[ಬದಲಾಯಿಸಿ]

ಕಲ್ಲೇರಿಗಳನ್ನು ನಿರ್ಮಿಸುವಾಗ ಈ ಕೆಳಗೆ ಕಾಣಿಸಿರುವ ಅಂಶಗಳನ್ನು ಗಮನಿಸಬೇಕು-

  • ೧ ಅತಿ ಹೆಚ್ಚು ಕಲ್ಲುಗಳನ್ನು ಹಾಕಬಾರದು.
  • ೨ ಕಲ್ಲುಗಳನ್ನು ಅವ್ಯವಸ್ಥಿತವಾಗಿ ಜೋಡಿಸಬಾರದು.
  • ೩ ನೀರು ಸರಾಗವಾಗಿ ಬಸಿದು ಹೋಗಲು ಆರಿಸಿದ ಭೂಮಿಯ ಮೇಲು ಮಣ್ಣನ್ನು ತೆಗೆದು ತಳಭಾಗಕ್ಕೆ ಮರಳು ಮತ್ತು ಸುಣ್ಣದ ಕಲ್ಲುಗಳನ್ನು ಹಾಕುವುದು ಉತ್ತಮ. ಮೇಲು ಭಾಗವನ್ನು ಕಲ್ಲುಗಳಿಂದ ಬೆಟ್ಟದ ಆಕಾರದಲ್ಲಿ ಜೋಡಿಸಿ ಸಿಮೆಂಟಿನಿಂದ ಕಟ್ಟಿಸಬೇಕು. ಸರಿಯಾಗಿ ಹೊಂದದೆ ಇರುವ ಕಲ್ಲುಗಳಿಗೆ ಹೊಂದಿಕೊಳ್ಳುವಂತೆ ಸಣ್ಣ ಸಣ್ಣ ಕಲ್ಲುಗಳನ್ನು ಉಪಯೋಗಿಸುವುದು ಉತ್ತಮ. ಕಲ್ಲುಗಳನ್ನು ಜೋಡಿಸುವುದು ಒಂದು ಕಲೆ.

ಕಲ್ಲೇರಿಗೆ ಮಣ್ಣು[ಬದಲಾಯಿಸಿ]

ಕಲ್ಲೇರಿಗೆ ಉಪಯೋಗಿಸುವ ಮಣ್ಣಿನಲ್ಲಿ ನೀರು ಸುಲಭವಾಗಿ ಬಸಿದು ಹೋಗುವ ಗುಣವಿರಬೇಕು, ದಪ್ಪ ಮರಳು, ಕೊಳೆತ ಎಲೆಯ ಗೊಬ್ಬರ ಶ್ರೇಷ್ಠವಾದದ್ದು. ವರ್ಷಕ್ಕೊಂದು ಸಾರಿ ಕಲ್ಲೇರಿ ಸಸ್ಯಗಳ ಸುತ್ತಲೂ ಇರುವ ಮಣ್ಣನ್ನು ತೋಡಿ ತೆಗೆದು ಹೊಸ ಮಣ್ಣಿನ ಮಿಶ್ರಣವನ್ನು ಕೊಡುವುದು ಅಗತ್ಯ. ವರ್ಷಕ್ಕೆ ಒಂದು ಬಾರಿ ಮಣ್ಣನ್ನು ಬದಲಾಯಿಸಿ ಹಾಕುವುದರಿಂದ ಭೂಮಿಯ ತೇವಾಂಶವನ್ನು ಕಾಪಾಡಲು ಅನುಕೂಲವಾಗುತ್ತದೆ.

ಕಲ್ಲೇರಿಗಳ ಮಧ್ಯೆ ದಾರಿ[ಬದಲಾಯಿಸಿ]

ಕಲ್ಲೇರಿಗಳ ಮಧ್ಯೆ ಹಾದುಹೋಗುವುದಕ್ಕೆ ದಾರಿಗಳು ಸ್ವಾಭಾವಿಕವಾಗಿರಬೇಕು. ದಾರಿಗಳಿಗೆ ಚಪ್ಪಟೆಯಾಗಿರುವ ಸಣ್ಣ ಸಣ್ಣ ಕಲ್ಲುಗಳನ್ನು ಹಾಸುವುದು ವಾಡಿಕೆ. ದಾರಿಯ ಎರಡು ತುದಿಗಳಲ್ಲಿ ಕುಳ್ಳಾಗಿ ಬೆಳೆಯುವ ಚಿಕ್ಕ ಕಲ್ಲೇರಿ ಸಸ್ಯಗಳನ್ನು ಬೆಳೆಸುವುದು ಉತ್ತಮ. ನೆಲ ಕಾಣದಂತೆ ಕಲ್ಲೇರಿ ಸಸ್ಯಗಳನ್ನು ಬೆಳೆಸುವುದು ಕಲ್ಲೇರಿ ತೋಡದ ಮುಖ್ಯಲಕ್ಷಣ.

ಕಲ್ಲೇರಿ ಸಸ್ಯಗಳ ವೃದ್ಧಿ[ಬದಲಾಯಿಸಿ]

ಕಲ್ಲೇರಿ ಸಸ್ಯಗಳನ್ನು ಬೀಜ, ಎಲೆ, ಕಾಂಡ, ಬೇರುಗಳ ತುಂಡು ಮತ್ತು ಗೂಟ ಕಟ್ಟುವುದು ಮುಂತಾದ ವಿಧಾನಗಳಿಂದ ವೃದ್ಧಿ ಮಾಡಬಹುದು.

ಕಲ್ಲೇರಿ ಸಸ್ಯಗಳ ಆರಿಸುವಿಕೆ[ಬದಲಾಯಿಸಿ]

ಕಲ್ಲೇರಿ ತೋಟ ತೋಟಗಾರಿಕೆಯ ಒಂದು ಭಾಗ. ಆದ್ದರಿಂದ ಕಲ್ಲೇರಿಗಳಿಗೆ ಸಸ್ಯಗಳನ್ನು ಆರಿಸುವುದು ಸುಲಭ ಕೆಲಸವಲ್ಲ. ದೀರ್ಘಾವಧಿಯ ಸಸ್ಯಗಳನ್ನು ಆರಿಸುವುದು ಉತ್ತಮ. ದೀರ್ಘಾವಧಿಯ ಸಸ್ಯಗಳು ಕೂಡ ವರ್ಷದಲ್ಲಿ ಹೆಚ್ಚು ಕಾಲ ಪುಷ್ಪಭರಿತವಾಗಿದ್ದರೆ ಒಳ್ಳೆಯದು. ಕೆಲವು ಕಲ್ಲೇರಿಗಳು ಹೂ ಬಿಡದೆ ಇದ್ದರೂ ಅವುಗಳ ಎಲೆಗಳು ಬಣ್ಣಬಣ್ಣಗಳಿಂದ ಕೂಡಿದ್ದು ನೋಡುವವರಿಗೆ ಆಕರ್ಷಕವಾಗಿರುವುದರಿಂದ ಅಂಥ ಸಸ್ಯಗಳನ್ನು ಆರಿಸುವುದು ಉತ್ತಮ. ಹಲವು ಲಶುನಗಳು ಗಾತ್ರದಲ್ಲಿ ಸಣ್ಣದಾಗಿರುವುದರಿಂದ ಕಲ್ಲೇರಿಗೆ ಆರಿಸಬಹುದು. ಒಂದೇ ಜಾತಿಯ ಸಸ್ಯದಿಂದ ಕಲ್ಲೇರಿಯನ್ನು ತುಂಬಿಸುವುದು ಸೂಕ್ತವಲ್ಲ. ಕಲ್ಲೇರಿಗಳನ್ನು ನೆಡುವಿಕೆ: ಕೆಲವು ಕಲ್ಲೇರಿ ಸಸ್ಯಗಳು ಲಶುನಗಳಿಂದ, ಮತ್ತೆ ಕೆಲವು ಗುಪ್ತ ಕಾಂಡುಗಳಿಂದ ವೃದ್ಧಿಯಾಗುತ್ತವೆ. ಹಲವು ತಂಪಾದ ಹವಾಗುಣಕ್ಕೆ ಹೊಂದಿಕೊಳ್ಳುತ್ತವೆ. ಇನ್ನು ಕೆಲವು ಒಣಹವಾಗುಣದಲ್ಲಿ ಸಮೃದ್ಧಿಯಾಗಿ ಬೆಳೆಯುತ್ತವೆ. ಆದ್ದರಿಂದ ಕಲ್ಲೇರಿಸಸ್ಯಗಳನ್ನು ನೆಡುವುದು ಸಸ್ಯಗಳ ಗುಣಗಳನ್ನು ಅವಲಂಬಿಸಿದೆ. ಅತಿ ಶೀಘ್ರವಾಗಿ ಬೆಳೆದು ಹರಡುವ ಕಲ್ಲೇರಿ ಸಸ್ಯಗಳನ್ನು ಇತರ ಸಸ್ಯಗಳಿಂದ ಸ್ವಲ್ಪ ದೂರ ಮತ್ತು ಕಡಿಮೆ ಸಂಖ್ಯೆಯಲ್ಲಿ ನೆಡುವುದನ್ನು ಮರೆಯಬಾರದು. ಕಲ್ಲೇರಿ ಸಸ್ಯಗಳನ್ನು ಚಳಿಗಾಲದ ಕೊನೆಯಲ್ಲಿ ಅಥವಾ ಬೇಸಿಗೆಯಲ್ಲಿ ನೆಡುವುದು ಯೋಗ್ಯ. ಕಲ್ಲೇರಿಗಳನ್ನು ನೆಡುವಾಗ, ಬೇರುಗಳನ್ನು ಪುರ್ತಿಯಾಗಿ, ಭದ್ರವಾಗಿ ಮುಚ್ಚುವುದು ಅಗತ್ಯ. ಕುಂಡಗಳಲ್ಲಿ ಕಲ್ಲೇರಿಗಳನ್ನು ಮಳೆ, ಚಳಿ ಮತ್ತು ಬೇಸಗೆ ಕಾಲಗಳಲ್ಲಿ ನೆಡಬಹುದು. ಇವುಗಳನ್ನು ನೆಟ್ಟಮೇಲೆ ಸರಿಯಾಗಿ ಬೇರು ಬಿಟ್ಟು ಚಿಗುರುವವರೆಗೂ ಕಾಲಕ್ಕೆ ಸರಿಯಾಗಿ ನೀರು ಕೊಟ್ಟು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಕೆಲವು ಕಲ್ಲೇರಿಗಳನ್ನು ನೆಟ್ಟ ಅನಂತರ ಬುಡದ ಸುತ್ತಲೂ ಸಣ್ಣ ಸಣ್ಣ ಕಲ್ಲುಗಳನ್ನು ಹಾಕುವುದರಿಂದ ಭೂಮಿಯ ತೇವಾಂಶ ಹೆಚ್ಚು ಕಾಲ ಇರುವಂತೆ ಮಾಡುತ್ತದೆ. ಬಂಡೆಗಳ ಇರುಕು ಮತ್ತು ಸಂದಿಗಳಲ್ಲಿ ಕಲ್ಲೇರಿಗಳನ್ನು ನೆಡುವಾಗ ಸಂದಿಗಳ ಕೆಳಭಾಗಕ್ಕೆ ಜಲ್ಲಿ ಮತ್ತು ಇತರ ಕಲ್ಲುಗಳನ್ನು ಹಾಕುವುದು ಬಹುಮುಖ್ಯ. ಕಲ್ಲೇರಿಗಳಲ್ಲಿ ಸಾಮಾನ್ಯವಾಗಿ ದೀರ್ಘಾವಧಿಯ ಕಳೆಗಳು ಕಾಣಿಸಿಕೊಂಡು ಅಲಂಕಾರವನ್ನು ಕೆಡಿಸುತ್ತವೆ. ಆದ್ದರಿಂದ ಕಲ್ಲೇರಿಗಳಲ್ಲಿ ಬೆಳೆಯುವ ಕಳೆಯನ್ನು ತೆಗೆದು ಭೂಮಿಯನ್ನು ಚೊಕ್ಕಟವಾಗಿಟ್ಟಿರಬೇಕು. (ಎಂ.ಎಚ್.ಎಂ.)

"https://kn.wikipedia.org/w/index.php?title=ಕಲ್ಲೇರಿ&oldid=640007" ಇಂದ ಪಡೆಯಲ್ಪಟ್ಟಿದೆ