ಕಲ್ಲೂರು(ರಾಯಚೂರು ಜಿಲ್ಲೆ , ಮಾನ್ವಿ ತಾಲೂಕು)

ವಿಕಿಪೀಡಿಯ ಇಂದ
Jump to navigation Jump to search

ಕಲ್ಲೂರು : ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ರಾಯಚೂರು ಮಾನ್ವಿ ಗ್ರಾಮದಲ್ಲಿ ರಾಯಚೂರಿನಿಂದ ೨೦ ಕಿಮೀ ದೂರದಲ್ಲಿರುವ ಗ್ರಾಮ. ಅನೇಕ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಅವಶೇಷಗಳು ಇಲ್ಲಿವೆ. ಸುತ್ತಲೂ ಕಲ್ಲುಗುಡ್ಡಗಳಿರುವುದರಿಂದ ಈ ಊರಿಗೆ ಈ ಹೆಸರು ಬಂದಿರಬೇಕು.

ಈಗಿನ ಹಳ್ಳಿಯ ಸುತ್ತ ಸು. ೧೩-೧೪ನೆಯ ಶತಮಾನಗಳಲ್ಲಿ ಕಟ್ಟಿರಬಹುದಾದ ಕೋಟೆ ಇದೆ. ಕೋಟೆಗೆ ಮಾನ್ವಿ ದರ್ವಾಜಾ, ಕಲ್ಮಲ ದರ್ವಾಜಾ, ರಾಯಚೂರು ದರ್ವಾಜಾ ಮುಂತಾದ ಐದು ದ್ವಾರಗಳಿವೆ. ಇವು ಮುಸಲ್ಮಾನರ ಆಳ್ವಿಕೆಯ ಕಾಲದವು. ರಾಯಚೂರು ದರ್ವಾಜಾದಲ್ಲಿ ಮರದ ತೊಲೆಯ ಮೇಲಿದ್ದ ಕನ್ನಡ ಶಾಸನವೊಂದು ಆದಿಲ್ಶಾಹೀ ಕಾಲದ ಪ್ರಮುಖನೊಬ್ಬನಾದ ಆಘಾಖುಸ್ರು ಇದನ್ನು ಕಟ್ಟಿಸಿದನೆಂದು ತಿಳಿಸುತ್ತದೆ. ಈ ಊರಿನಲ್ಲಿ ಮತ್ತು ಪರಿಸರದಲ್ಲಿ ೬ ದೇವಾಲಯಗಳಿವೆ. ಅವುಗಳಲ್ಲಿ ಮಾರ್ಕಂಡೇಶ್ವರನ ದೇವಾಲಯ ಬಹು ಹಳೆಯದು. ಕಲ್ಯಾಣದ ಚಾಳುಕ್ಯ ಶೈಲಿಯ ಕಂಬಗಳು ಈ ದೇವಾಲಯದಲ್ಲಿವೆ. ಗ್ರಾಮದಲ್ಲಿ ಹಲವು ಕಲ್ಯಾಣ ಚಾಳುಕ್ಯ ಶಾಸನಗಳೂ ದೊರಕಿವೆ. ಇಲ್ಲಿರುವ ಮಾರುತೀಶ್ವರ ದೇವಾಲಯವೂ ಪುರಾತನವಾದದ್ದೇ. ದೇವಾಲಯದ ಗರುಡಗಂಬವನ್ನು ಸಿಂಘಣವೆಂಬ ನಿಲ್ಲಿಸಿದನೆಂದೂ ಈ ಗ್ರಾಮ ಹಿಂದೆ ಒಂದು ಅಗ್ರಹಾರವಾಗಿತ್ತೆಂದೂ ಇಲ್ಲಿಯ ಒಂದು ಶಾಸನದಿಂದ ತಿಳಿದುಬರುತ್ತದೆ.

ಕಲ್ಲೂರಿನ ಸಮೀಪದ ಬೆಟ್ಟ ಪ್ರದೇಶಗಳಲ್ಲಿ ಮತ್ತು ಕಣಿವೆಗಳಲ್ಲಿ ನವಶಿಲಾಯುಗ ಮತ್ತು ಶಿಲಾ-ತಾಮ್ರಯುಗ ಕಾಲಗಳಿಗೆ ಸೇರಿದ ಶಿಲೋಪಕರಣಗಳು, ಮಡಕೆ ಚೂರುಗಳು, ಕಲ್ಲಿನ ಕೂರಲಗು ಫಲಕಗಳು (ಬ್ಲೇಡ್ಸ್‌) ದೊರಕುತ್ತವೆ. ಇಲ್ಲಿನ ಎಮ್ಮಿಗುಡ್ಡ ಎಂಬ ಚಿಕ್ಕ ಬೆಟ್ಟವೊಂದರ ಗುಹೆಯಲ್ಲಿ ಹಿಂದಿನ ಹೈದರಾಬಾದು ಸರ್ಕಾರದವರು ಉತ್ಖನನ ನಡೆಸಿದಾಗ ಅನೇಕ ತಾಮ್ರದ ವಸ್ತುಗಳು ದೊರಕಿದುವು. ಅಲ್ಲದೆ ತಾಮ್ರವನ್ನು ಕರಗಿಸಿ, ಎರಕ ಹುಯ್ಯುವ ಉದ್ಯಮ ಇಲ್ಲಿತ್ತೆಂದು ಸೂಚಿಸುವ ತಾಮ್ರವನ್ನು ಕರಗಿಸಿ, ಎರಕ ಹುಯ್ಯುವ ಉದ್ಯಮ ಇಲ್ಲಿತ್ತೆಂದು ಸೂಚಿಸುವ ಮೂಸೆಗಳು, ಒಲೆಗಳು ಸಹ ಬೆಳಕಿಗೆ ಬಂದುವು. ಇದೇ ಪ್ರದೇಶದಲ್ಲಿ ಹಿಂದೆ ಕತ್ತಿ ಮೊದಲಾದ ತಾಮ್ರದ ವಸ್ತುಗಳು ಸಹ ದೊರಕಿದ್ದುವು. ಇವುಗಳನ್ನು ಅಧ್ಯಯನ ಮಾಡಿರುವ ಪ್ರಾಗಿತಿಹಾಸಜ್ಞರು ಈ ವಸ್ತುಗಳು ಉತ್ತರ ಭಾರತದಲ್ಲಿ ದೊರೆಯುವ ತಾಮ್ರಯುಗದ ವಸ್ತುಗಳ ವರ್ಗದವೇ ಎಂದು ಊಹಿಸಿದ್ದಾರೆ. ಶಿಲಾ-ತಾಮ್ರಯುಗದ ಕಾಲದಲ್ಲಿ ಈ ಊರು ತಾಮ್ರ ಕೈಗಾರಿಕಾ ಕೇಂದ್ರವಾಗಿರಬಹುದು. ಎಮ್ಮಿಗುಡ್ಡದಲ್ಲಿ ಎಮ್ಮೆ ಮತ್ತು ದನದ ಚಿತ್ರಗಳನ್ನು ಬಂಡೆಗಳಲ್ಲಿ ಕೊರೆದಿರುವುದೂ ಬೆಳಕಿಗೆ ಬಂದಿದೆ. ಇವೂ ಪ್ರಾಗಿತಿಹಾಸ ಕಾಲದವೇ. ಇವು ಪ್ರಾಯಶಃ ಕರ್ನಾಟಕದ ಕಲೆಯ ಬಹು ಪ್ರಾಚೀನ ಉದಾಹರಣೆಗಳು. (ಎಸ್.ಎನ್.)