ವಿಷಯಕ್ಕೆ ಹೋಗು

ಕಲ್ಲುಸಬ್ಬಸಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಲುಸಬ್ಬಸಿಗೆ : ರೂಬಿಯೇಸಿ ಕುಟುಂಬಕ್ಕೆ ಸೇರಿದ ಓಲ್ಡನ್ಲ್ಯಾಂಡಿಯ ಕೊರಿಂಬೋಸ ಎಂಬ ವೈಜ್ಞಾನಿಕ ಹೆಸರಿನ, ನೆಲದ ಮೇಲೆ ಹರಡಿಕೊಂಡು ಬೆಳೆಯುವ ಏಕವಾರ್ಷಿಕ ಸಣ್ಣ ಕಳೆ ಸಸ್ಯ. ಕ್ಷೇತ್ರ ಪರಪಟ ಎಂಬುದು ಸಂಸ್ಕೃತದಲ್ಲಿ ಇದರ ಹೆಸರು. ಇದು ಭಾರತದ ಆದ್ಯಂತ ಹೊಲ ಗದ್ದೆ ಬಯಲುಗಳಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಕಿರಿದಾಗಿರುವ ನೀಳಾಕಾರದ ಇದರ ಎಲೆಗಳು ಅಭಿಮುಖವಾಗಿ ಜೋಡಿಸಿಕೊಂಡಿವೆ. ಎರಡು ಎಲೆ ತೊಟ್ಟುಗಳ ಪಕ್ಕದಲ್ಲಿ ಅಭಿಮುಖವಾಗಿ ಎರಡು ವೃಂತಪತ್ರಗಳಿವೆ. ತುದಿಯಲ್ಲಿ ಮತ್ತು ಕಂಕುಳಲ್ಲಿರುವ ಮಧ್ಯಾರಂಭಿ ಹೂ ಗೊಂಚಲುಗಳಲ್ಲಿ ೧ರಿಂದ ೪ ತೊಟ್ಟಿರುವ ಹೂಗಳಿವೆ. ಅದರಲ್ಲಿ ೪ ಪುಷ್ಪಪತ್ರಗಳೂ ೪ ಕೂಡು ಹೂ ದಳಗಳೂ ಹೂದಳಗಳ ಮೇಲೆ ಅಂಟಿರುವ ನಾಲ್ಕು ಕೇಸರಗಳೂ ಇವೆ. ಎರಡು ಕೋಶದ ಅಂಡಾಶಯವೂ ಪ್ರತಿ ಕೋಶದಲ್ಲಿ ಅನೇಕ ಅಂಡಗಳೂ ಇವೆ. ಅಂಡಾಶಯ ನೀಚಸ್ಥಾನದ್ದು (ಇನ್ಫೀರಿಯರ್ ಓವರಿ). ಹಣ್ಣು ಚಿಕ್ಕದು ಮತ್ತು ಕೋನಗಳಿಂದ ಕೂಡಿರುವ ಬಹು ಬೀಜವಿರುವ ಸಂಪುಟ ಮಾದರಿಯದು.

ಈ ಸಸ್ಯ ಶರೀರಕ್ಕೆ ತಂಪುಕಾರಿ. ಇದನ್ನು ಉಷ್ಣದ ಅತೀರೇಕದಿಂದ ನರಳುವವರು ತರಕಾರಿಗಾಗಿ ಬಳಸುವರು. ಇದರ ಕಷಾಯವನ್ನು ವಾಯಿದೆಯಾಗಿ ಬರುವ ಜ್ವರಕ್ಕೆ ಔಷಧಿಯಾಗಿ ಕೊಡುವರು. ಜಠರದ ನವೆ, ನರಗಳ ನಿರ್ವೀರ್ಯತೆ, ಪಿತ್ತವಿಕಾರ, ಅರಿಸಿನಕಾಮಾಲೆ ಇತ್ಯಾದಿ ರೋಗಗಳಲ್ಲೂ ಬಳಸುವುದುಂಟು. ಜ್ವರದ ಉರಿಯನ್ನು ಶಮನ ಮಾಡಲು ಇದರ ಎಲೆಯನ್ನು ಅರೆದು ಅಂಗೈ ಅಂಗಾಲುಗಳಿಗೆ ಹಚ್ಚುವರು. ಜಂತುಹುಳುಗಳ ನಿವಾರಣೆಯಲ್ಲೂ ಇದರ ಸೊಪ್ಪನ್ನು ಸೇವಿಸುವರು; ಬಾಯಿಮುಕ್ಕಳಿಸಿ ಸ್ವಚ್ಛಗೊಳಿಸಲೂ ಈ ಸೊಪ್ಪಿನ ರಸವನ್ನು ಬಳಸುವರು. ಇದರಲ್ಲಿ ಶೇ. ೧೩.೭೬ ರಷ್ಟು ಭಾಗ ನಿರವಯವ (ಇನಾರ್ಗ್ಯಾನಿಕ್) ಲವಣಗಳಿವೆ.