ವಿಷಯಕ್ಕೆ ಹೋಗು

ಕಲ್ಲುಮಠದ ಪ್ರಭುದೇವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲ್ಲುಮಠದ ಪ್ರಭುದೇವರು
ಜನನಸು. ೧೪೩೦


ಕಲ್ಲುಮಠದ ಪ್ರಭುದೇವರು : ಸು. ೧೪೩೦. ವಿಜಯನಗರದ ಪ್ರೌಢ ದೇವರಾಯನ ಆಳ್ವಿಕೆಯ ಕಾಲದಲ್ಲಿ ಆಗಿಹೋದ ನೂರೊಂದು ಜನ ವೀರಶೈವ ವಿರಕ್ತರಲ್ಲಿ ಒಬ್ಬ. ಅದೃಶ್ಯಕವಿ (ಸು. ೧೫೮೦) ತನ್ನ ಪ್ರೌಢರಾಯನ ಕಾವ್ಯದಲ್ಲಿ, ಸಿದ್ಧ ನಂಜೇಶ (ಸು. ೧೬೦೦) ತನ್ನ ರಾಘವಾಂಕ ಚರಿತೆಯಲ್ಲಿ, ಶಾಂತಲಿಂಗ ದೇಶಿಕ (೧೬೭೨) ತನ್ನ ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರದಲ್ಲಿ ಈತನನ್ನು ಹೆಸರಿಸಿದ್ದಾರೆ.

  • ಕವಿ ಚರಿತೆಕಾರರು ಈತನ ಕಾಲ ಸು. ೧೪೩೦ ಎಂದು ತಿಳಿಸಿದ್ದಾರೆ. ಈತ ೧೫ನೆಯ ಶತಮಾನದ ಪುರ್ವಾರ್ಧದಲ್ಲಿ ಪ್ರೌಢದೇವರಾಯನ ವಿಜಯನಗರದ ಆಳ್ವಕೆಯಲ್ಲಿ ಬಾಳಿ ಬದುಕಿದ್ದನೆಂಬುದು ಖಚಿತ. ಹನ್ನೆರಡನೆಯ ಶತಮಾನದಲ್ಲಿ ತುಂಬು ಹೊಳೆಯಾಗಿ ಹರಿದು ಬಂದ ವಚನಗಳ ಪ್ರವಾಹ ಒಮ್ಮಿಂದೊಮ್ಮೆಲೆ ಒಡೆದು ಹತ್ತೂ ಕಡೆಗೆ ಹರಿದು ತಡಸಲಾಗಿ ಬೀಳತೊಡಗಿತ್ತು; ರೂಪುಗೊಂಡಿದ್ದ ಸಂಘಟನೆ ಸಡಿಲವಾಗುತ್ತಿತ್ತು.
  • ತೇಜೋಗರ್ಭವಾದ ಈ ಜಲವನ್ನು ಸಂಗ್ರಹಿಸಿ ತೇಜಸ್ಸನ್ನು ಹೊರಗೆಡಹುವ ಕಾರ್ಯ ವಿಜಯನಗರ ಕಾಲದ ಶಿವಶರಣರಿಗೆ ಮೀಸಲಾಗಿತ್ತು. ಅವರಲ್ಲಿ ಮಹಲಿಂಗದೇವ. ಜಕ್ಕಣಾಚಾರ್ಯ, ಗೂಳೂರು ಸಿದ್ಧವೀರಣಾಚಾರ್ಯ ಮುಂತಾದ ಪ್ರಮುಖರಲ್ಲಿ ವಿದ್ಯಾನಗರ ಅಥವಾ ವಿಜಯನಗರದ ಕಲ್ಲುಮಠದ ಪ್ರಭುದೇವನೂ ಒಬ್ಬ.

ಸಾಹಿತ್ಯ ಸಾಧನೆ

[ಬದಲಾಯಿಸಿ]
  • ಈತ 'ಲಿಂಗಲೀಲಾ ವಿಲಾಸ ಚಾರಿತ್ರ್ಯ', 'ಪ್ರಭುದೇವರ ಮಂತ್ರಗೋಪ್ಯದ ಟೀಕೆ' ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಲಿಂಗಲೀಲಾ ವಿಲಾಸ ಚಾರಿತ್ರದಲ್ಲಿ ೧೬ ಸ್ಥಲ ಕಟ್ಟುಗಳಿವೆ. ಸುಮಾರು ಮೂವತ್ತಾರು ವಚನಕಾರರಿಂದ ಆಯ್ದುಕೊಂಡ ೭೨೯ ವಚನಗಳಿವೆ, ೧೩೫ ಸಂಸ್ಕೃತ ಶ್ಲೋಕಗಳಿವೆ. ಪ್ರಭುದೇವ ಸ್ಥಲಾನುಗುಣವಾಗಿ ಬಸವ, ಚೆನ್ನಬಸವ, ಮಹಾದೇವಿಯಕ್ಕ ಮುಂತಾದ ಪುರಾತನರ ವಚನಗಳನ್ನು ಆಯ್ದುಕೊಂಡು ಷೊಡಶ ಸ್ಥಲ ಪರಿಕ್ರಮದಿಂದ ಅವನ್ನು ಸೇರಿಸಿ ವ್ಯಾಖ್ಯಾನ ಮಾಡಿದ್ದಾನೆ.
  • ಭಕ್ತಿ ಕಾಂಡವೆ ಷಟ್ಸ್ಥಲಮಾರ್ಗ, ಈ ಮಾರ್ಗವೇ ಲಿಂಗಲೀಲಾ ವಿಲಾಸ ಚಾರಿತ್ರ ಎಂದು ಕವಿ ಗ್ರಂಥಾರಂಭದಲ್ಲಿ ಹೇಳಿದ್ದಾನೆ. ಅಂದರೆ ಇದು ಷಟ್ಸ್ಥಲವನ್ನು ಬೋಧಿಸುವ ವಚನ ಗ್ರಂಥ. ಮಂತ್ರಗೋಪ್ಯದ ಟೀಕೆಯಲ್ಲಿ ಸೀಸ ಪದ್ಯದಂತಿರುವ ೨೭ ಪದ್ಯಗಳಿವೆ. ಒಂದೊಂದು ಪದ್ಯಕ್ಕೂ ವಿಸ್ತಾರವಾದ ಟೀಕೆ ಇದೆ. ಈ ಗ್ರಂಥಗಳಿಂದ ಪುರಾತನರ ವಚನಗಳಲ್ಲಿ ಹುದುಗಿರಬಹುದಾದ ಗೂಢಾರ್ಥವನ್ನು ತಿಳಿಯುವುದು ಸುಲಭವಾಗುತ್ತದೆ. ಲಿಂಗಲೀಲಾವಿಲಾಸ ಚಾರಿತ್ರ ಸಂ. ಶಿ. ಭೂಸನೂರಮಠರ ಸಂಪಾದನೆಯಲ್ಲಿ ಪ್ರಕಟವಾಗಿದೆ (೧೯೫೬).