ಕಲ್ಲುಗಾರೆಯ ಕೆಲಸ
ಕಲ್ಲುಗಾರೆಯ ಕೆಲಸ : ಪ್ರಧಾನವಾಗಿ, ಕಲ್ಲಿನ ಕಟ್ಟಡಗಳಲ್ಲಿ ಗಾರೆಯಿಂದ ಕಲ್ಲುಗಳನ್ನು ಬಂಧಿಸುವ ತಂತ್ರ. ಕಟ್ಟಡದ ಸಾಮಗ್ರಿಗಳಲ್ಲೆಲ್ಲ ಕಲ್ಲು ಉತ್ಕೃಷ್ಟವಾದದ್ದು. ಅದನ್ನು ಅಳತೆಗೆ ಸರಿಯಾಗಿ ಕತ್ತರಿಸಬಹುದು. ಅದರ ಮೇಲ್ಮೈಯನ್ನು ನಯವಾಗಿ ಮಾಡಬಹುದು. ಅದರ ಬಾಳ್ವಿಕೆ ಬಹುಕಾಲ. ಮಳೆಯಲ್ಲಾಗಲಿ ಬಿಸಿಲಿನಲ್ಲಾಗಲಿ ಕೆಡುವುದಿಲ್ಲ. ಬಹಳ ಗಟ್ಟಿಯಾದ ಗ್ರಾನೈಟಿನಿಂದ ಹಿಡಿದು ನಯವಾದ ಅಮೃತಶಿಲೆ ಮತ್ತು ಮೆದುವಾದ ಸೀಮೆಸುಣ್ಣದ ಕಲ್ಲಿನವರೆಗೆ ಅದರ ಗಡಸಿನಲ್ಲಿ (ಹಾರ್ಡ್ನೆಸ್) ಅಪಾರವಾದ ವ್ಯತ್ಯಾಸವಿದೆ. ಈಚೆಗೆ ದೊಡ್ಡ ಕಟ್ಟಡಗಳಲ್ಲಿ ಉಕ್ಕನ್ನೂ ಕಾಂಕ್ರೀಟನ್ನೂ ಹೆಚ್ಚು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಈ ಸಾಮಗ್ರಿಗಳ ಬಲ ಹೆಚ್ಚಾಗಿರುವುದರಿಂದ ಗೋಡೆಗಳನ್ನು ತೆಳುವಾಗಿ ಮಾಡಬಹುದು. ಬಾಗಿಲುಗಳನ್ನೂ ಕಿಟಕಿಗಳನ್ನೂ ಅಗಲವಾಗಿ ಇಡಬಹುದು. ಈ ಚೌಕಟ್ಟಿನ ಕಟ್ಟಡಗಳಿಗೂ ನಯವಾದ ಮೇಲ್ಮೈಯನ್ನು ಕೊಡುವುದಕ್ಕಾಗಿ ಕಲ್ಲನ್ನು ಜೋಡಿಸುತ್ತಾರೆ. ಗ್ರಾನೈಟ್, ಅಮೃತಶಿಲೆ, ಮರಳುಕಲ್ಲು, ಸುಣ್ಣದ ಕಲ್ಲು-ಇವು ಕಲ್ಲಿನ ಮುಖ್ಯ ಪ್ರಭೇದಗಳು. ಗ್ರಾನೈಟ್ ಬಹಳ ಗಟ್ಟಿಯಾದ ಕಲ್ಲು. ಅದು ಸಿಕ್ಕುವ ಕಡೆ ಸರ್ವತ್ರ ಬಳಕೆಯಲ್ಲಿದೆ. ಅದರಲ್ಲಿ ಉಳಿಯ ಕೆಲಸ ಕಷ್ಟ. ಆದರೆ ಅದರ ಮೇಲ್ಮೈಯನ್ನು ಉಜ್ಜಿ ನಯವಾಗಿ ಮಾಡಬಹುದು.
ಕಲ್ಲುಕಟ್ಟಡಗಳ ನಮೂನೆಗಳು
[ಬದಲಾಯಿಸಿ]ಕಟ್ಟಡದಲ್ಲಿ ಬಳಸುವ ಕಲ್ಲನ್ನು ಸುತ್ತಿಗೆಯಿಂದ ಒರಟಾಗಿ ತುಂಡು ಮಾಡಿರಬಹುದು. ಇಲ್ಲವೆ ಉಳಿಯಿಂದ ನಯ ಮಾಡಿರಬಹುದು. ಈಚೆಗೆ ಈ ಕೆಲಸವನ್ನು ಯಂತ್ರಗಳಿಂದ ನಾಜೂಕಾಗಿ ಮಾಡುತ್ತಾರೆ. ಬೆಲೆಬಾಳುವ ಕಟ್ಟಡಗಳಲ್ಲಿ ಕೆತ್ತಿ ನಯ ಮಾಡಿದ ಕಲ್ಲುಗಳಿಂದಲೇ ಕಟ್ಟುತ್ತಾರೆ. ಇತರ ಕಡೆಗಳಲ್ಲಿ ಒಳಗಡೆ ಒರಟಾದ ಕಲ್ಲುಗಳನ್ನು ತುಂಬಿ ಮೂಲೆಗಳಲ್ಲೂ ಬಾಗಿಲು, ಕಿಟಕಿಗಳ ಪಕ್ಕದಲ್ಲಿಯೂ ಕೆತ್ತಿ ನಯಮಾಡಿದ ಕಲ್ಲುಗಳನ್ನು ಉಪಯೋಗಿಸುತ್ತಾರೆ.
ಕಲ್ಲಿನ ಗೋಡೆಯನ್ನು ಸುಣ್ಣದ ಗಾರೆ ಇಲ್ಲವೆ ಸಿಮೆಂಟ್ ಗಾರೆಯಿಂದ ಕಟ್ಟಬಹುದು. ಕಟ್ಟಡದ ಗಾರೆಯಲ್ಲಿ (೧) ಭಾಗ ಸುಣ್ಣಕ್ಕೆ (೩) ಭಾಗ ಮರಳನ್ನು ಸಾಮಾನ್ಯವಾಗಿ ಸೇರಿಸಿರುತ್ತಾರೆ. ಪ್ರಾಚೀನ ಗ್ರೀಕರು ಗಾರೆಗೆ ಬದಲಾಗಿ ಕಬ್ಬಿಣದ ಪಟ್ಟಿಗಳಿಂದ ಅಮೃತಶಿಲೆಯ ಎಳೆಗಳನ್ನು ಜೋಡಿಸುತ್ತಿದ್ದರು. ಆದರೆ ರೋಮನ್ನರು ಒಂದು ವಿಧವಾದ ಸಿಮೆಂಟನ್ನು ಉಪಯೋಗಿಸುತ್ತಿದ್ದರು. ಇವರ ಕಾಲದಲ್ಲಿ ಕಲ್ಲಿನ ಕಮಾನುಗಳು ಮೇಲುಗಾಲುವೆಗಳಲ್ಲಿಯೂ (ಆಕ್ವಿಡಕ್ಸ್) ಕಟ್ಟಡಗಳಲ್ಲಿಯೂ ಹೆಚ್ಚಾಗಿ ಬಳಕೆಗೆ ಬಂದವು. ಪುರಾತನ ಈಜಿಪ್ಟ್ ಮತ್ತು ಪೆರು ದೇಶಗಳಲ್ಲಿ ದೊಡ್ಡ ಕಲ್ಲುಗಳನ್ನು ಕರಾರುವಕ್ಕಾಗಿ ಕತ್ತರಿಸಿ ಗಾರೆಯೇ ಇಲ್ಲದೆ ಒಂದಕ್ಕೊಂದು ಹೊಂದಿಕೊಳ್ಳುವಂತೆ ನಾಜೂಕಾಗಿ ಕಟ್ಟುತ್ತಿದ್ದರು.
ಭಾರತದ ದೇವಸ್ಥಾನಗಳಲ್ಲಿ ಕೆತ್ತಿ ನಯಮಾಡಿದ ಕಲ್ಲುಗಳನ್ನು ಗಾರೆಯೇ ಇಲ್ಲದೆ ಕೂಡಿಸುತ್ತಿದ್ದರು. ಗಾರೆಯನ್ನು ಉಪಯೋಗಿಸುವುದು ಅವರ ಹಸ್ತ ಕೌಶಲ್ಯಕ್ಕೆ ಅವಮಾನವೆಂಬ ಭಾವನೆಯಿತ್ತು. ಅಲ್ಲಲ್ಲಿ ಕಬ್ಬಿಣದ ಪಟ್ಟಿಗಳನ್ನು ಎಸೆಗಳಲ್ಲಿ ಇಡುತ್ತಿದ್ದರು. ಬೇಲೂರಿನ ಸುತ್ತಮುತ್ತಲಿನ ದೇವಸ್ಥಾನಗಳಲ್ಲಿ ಮೆತುವಾದ ಬಳಪದ ಕಲ್ಲುಗಳಿಂದ ಸುಂದರವಾದ ವಿಗ್ರಹಗಳನ್ನು ಕೊರೆದಿದ್ದಾರೆ.
ಕಟ್ಟಡದ ಕ್ರಮಗಳು
[ಬದಲಾಯಿಸಿ]ಕಲ್ಲುಕುಟಿಗ ಬಳಸುವ ಹತ್ಯಾರುಗಳಲ್ಲಿ ಪುರಾತನ ಕಾಲದಿಂದಲೂ ಹೆಚ್ಚಿನ ಬದಲಾವಣೆಯಾಗಿಲ್ಲ. ಮರದ ಕೊಡತಿಯಿಂದ ಇಲ್ಲವೆ ಕಬ್ಬಿಣದ ಸುತ್ತಿಗೆಯಿಂದ ಕಲ್ಲಿನ ಮೇಲೆ ಇಟ್ಟ ಉಕ್ಕಿನ ಉಳಿಯನ್ನು ಹೊಡೆದು ಕಲ್ಲನ್ನು ನಯವಾಗಿ ಮಾಡುತ್ತಾರೆ. ಉಳಿಗಳ ಅಂಚು ಅಗಲವಾಗಿರಬಹುದು ಇಲ್ಲವೆ ಚೂಪಾಗಿರಬಹುದು. ಗಟ್ಟಿ ಕಲ್ಲನ್ನು ಕೆತ್ತುವಾಗ ಕೊಡತಿಗಳು ಭಾರವಾಗಿರುತ್ತವೆ. ಉಳಿಯ ಬಾಯನ್ನು ಹದಮಾಡಿರುತ್ತಾರೆ. ಈಚೆಗೆ ಒತ್ತಡದ ಗಾಳಿಯಿಂದ ಚಲಿಸುವ ಹತ್ಯಾರುಗಳನ್ನು ಗಟ್ಟಿಕಲ್ಲನ್ನು ಕೆತ್ತುವಾಗ ಉಪಯೋಗಿಸುತ್ತಿದ್ದಾರೆ. ಕಲ್ಲನ್ನು ನಯಮಾಡುವುದಕ್ಕೂ ಈಗ ಯಂತ್ರಗಳು ಬಂದಿವೆ. ಇವು ಗರಗಸದಿಂದ ಮರವನ್ನು ಕೊಯ್ಯುವ ಹಾಗೆ ಕಲ್ಲನ್ನು ಹಲಗೆ ಹಲಗೆಯಾಗಿ ಸೀಳುತ್ತವೆ. ಈ ಚಪ್ಪಡಿಗಳನ್ನು ಗುಂಡಾದ ಯಂತ್ರದ ಗರಗಸಗಳಿಂದ ಸಣ್ಣದಾಗಿ ಕತ್ತರಿಸುತ್ತಾರೆ. ಮರವನ್ನು ಉಜ್ಜುಗೊರಡು ಹೊಡೆದು ನಯಮಾಡಿದ ಹಾಗೆ ಕಲ್ಲನ್ನು ನಯಮಾಡುತ್ತಾರೆ.
ಬೇಲೂರು ಮತ್ತು ಹಳೇಬೀಡು ಮೊದಲಾದ ಹೊಯ್ಸಳಶೈಲಿಯ ನಯವಾದ ಗುಂಡಾದ ಕಂಬಗಳನ್ನು ಮಾಡುವುದಕ್ಕೆ ಒಂದು ವಿಧವಾದ ಚರಿಕೆಯ ಯಂತ್ರವನ್ನು (ಲೇತ್) ಉಪಯೋಗಿಸುತ್ತಿದ್ದರು. ಈಗ ವಿದ್ಯುತ್ತಿನ ಯಂತ್ರಗಳಿಂದ ತಿರುಗುವ ಚರಿಕೆಯ ಯಂತ್ರಗಳು ಬಂದಿವೆ. ಕಲ್ಲಿನಲ್ಲಿ ನಯಗೆಲಸವನ್ನು ಮಾಡುವುದಕ್ಕೆ ಈ ಯಂತ್ರಗಳನ್ನು ವಿಶೇಷವಾಗಿ ಉಪಯೋಗಿಸುತ್ತಿದ್ದಾರೆ. ಕಲ್ಲಿನ ಕಮಾನುಗಳನ್ನು ಆಕಾರಕ್ಕೆ ಸರಿಯಾಗಿ ಮಾಡಿದ ಮರದ ಚೌಕಟ್ಟಿನ (ಸೆಂಟರಿಂಗ್) ಮೇಲೆ ಕಟ್ಟುತ್ತಾರೆ. ಕಮಾನಿನ ನಡುಗಲ್ಲನ್ನು ಕೂಡಿಸಿದ ಮೇಲೆ ಈ ಚೌಕಟ್ಟನ್ನು ತೆಗೆಯುತ್ತಾರೆ.
ಕಟ್ಟೆಯ ಕಲ್ಲುಗಾರೆಯ ಕೆಲಸ
[ಬದಲಾಯಿಸಿ]ಕರ್ನಾಟಕದಲ್ಲಿ ಕೃಷ್ಣರಾಜಸಾಗರ, ತಿಪ್ಪಗೊಂಡನಹಳ್ಳಿ, ಹಿರೇಭಾಸ್ಕರ ಮೊದಲಾದ ಕಡೆ ತಮ್ಮ ಭಾರದ ಬಲದಿಂದಲೇ ನಿಂತಿರುವ ಕಟ್ಟೆಗಳನ್ನು ಹೊರಮುಖದಲ್ಲಿ ಮಾವಾಳಿ ಅಥವಾ ಮುಖದ ಕಲ್ಲುಗಳಿಂದಲೂ ಒಳಗಡೆ ಭರ್ತಿಕಲ್ಲಿನಿಂದಲೂ ಸುರ್ಕಿಗಾರೆಯಲ್ಲಿ ಕಟ್ಟಿದ್ದಾರೆ. ತಮಿಳುನಾಡಿನ ಮೆಟ್ಟೂರು ಕಟ್ಟೆಯಲ್ಲಿ ಸಿಮೆಂಟ್ ಗಾರೆಯನ್ನು ಉಪಯೋಗಿಸಿದ್ದಾರೆ. ಕಲ್ಲುಗಾರೆಯ ಕಟ್ಟೆಯ ಅಗಲ ಮನೆಯ ಗೋಡೆಯ ಹಾಗೆ ಕೆಳಗಿನಿಂದ ಮೇಲಿನವರೆಗೂ ಒಂದೇ ಸಮನಾಗಿರುವುದಿಲ್ಲ. ಕಟ್ಟೆಯ ತಳದಲ್ಲಿ ಆಳವಾದ ನೀರಿನ ಒತ್ತಡ ಹೆಚ್ಚಾಗಿರುವುದರಿಂದ ಅದನ್ನು ತಡೆಯಲು ಅಗಲವೂ ಹೆಚ್ಚಾಗಿರುತ್ತದೆ. ಮೇಲಕ್ಕೆ ಹೋದಹಾಗೆ ನೀರಿನ ಆಳ ಕಡಿಮೆಯಾಗುತ್ತದೆ. ಅದಕ್ಕೆ ತಕ್ಕಂತೆ ಕಟ್ಟೆಯ ಅಗಲವೂ ಕಡಿಮೆಯಾಗಿ ಮೇಲುಗಡೆ ಒಂದು ರಸ್ತೆ ಹೋಗುವಷ್ಟಕ್ಕೆ ಇಳಿಯುತ್ತದೆ. ಕೆಲಸವನ್ನು ಪ್ರಾರಂಭಿಸುವ ಮೊದಲು ಅಡಿಪಾಯದಿಂದ ಮೇಲಿನ ವರೆಗೂ ಕಟ್ಟೆಯ ನೆತ್ತಿಯ ಮಧ್ಯ ರೇಖೆಯಿಂದ ಎಡಕ್ಕೂ ಬಲಕ್ಕೂ ಸಂವಿಧಾನದ ಪ್ರಕಾರ ಅಗಲವನ್ನು ಗುರುತು ಮಾಡಿರುವ ನಕ್ಷೆಯನ್ನು ತಯಾರಿಸಿ ಈ ನಕ್ಷೆಯಂತೆ ಒಂದು ಅಡಿಯ ಪ್ರತಿ ವರಸೆಗೂ ಮಧ್ಯರೇಖೆಯಿಂದ ಅಗಲವನ್ನು ಲೆಕ್ಕ ಹಾಕಿ ಬರೆದಿಡಬೇಕು.
ಯಾವ ದೊಡ್ಡ ಕಟ್ಟೆಯಲ್ಲಾದರೂ ಹೊಳೆಯ ಎರಡು ದಡಗಳಲ್ಲಿಯೂ ಕಟ್ಟೆಯ ಅಡಿಪಾಯ ಮೊದಲು ಸಿದ್ಧವಾಗುತ್ತದೆ. ಅಲ್ಲಿ ಕಲ್ಲುಗಾರೆಯ ಕಟ್ಟಡವನ್ನು ಪ್ರಾರಂಭಿಸುವಾಗ ನಡುಹೊಳೆಯಲ್ಲಿ ನೀರು ಹರಿಯುತ್ತಿರುತ್ತದೆ. ಕಟ್ಟೆ ಮೇಲಕ್ಕೆ ಬಂದ ಹಾಗೆ ಸ್ಥಳದ ವಿನ್ಯಾಸಕ್ಕೆ ಅನುಸಾರವಾಗಿ ಕಟ್ಟೆಯ ಒಂದು ಭಾಗದಲ್ಲಿ ಹೊಳೆಯ ನೀರನ್ನು ತಿರುಗಿಸಿ ನಡುಹೊಳೆಯಲ್ಲಿ ಕಲ್ಲನ್ನು ಸೀಳಿ ತಳಪಾಯವನ್ನು ಸಿದ್ಧಪಡಿಸಿ ಅದರ ಮೇಲೆ ಕಾಂಕ್ರೀಟನ್ನು ಸೂಕ್ತವಾದ ಅಗಲಕ್ಕೆ ತುಂಬುತ್ತಾರೆ. ಏತನ್ಮಧ್ಯೆ ದಡಗಳಲ್ಲಿ ಕಲ್ಲುಗಾರೆಯ ಕೆಲಸ ಮುಂದುವರೆಸುತ್ತಾರೆ.
ಥಿಯೊಡೊಲೈಟಿನ ಸಹಾಯದಿಂದ ಎರಡು ದಡಗಳಲ್ಲಿಯೂ ಕಾಂಕ್ರೀಟಿನ ಅಡಿಪಾಯದ ಮೇಲೂ ಏರುತ್ತಿರುವ ಕಲ್ಲುಗಾರೆಯ ಮೇಲೂ ಕಟ್ಟೆಯ ನೆತ್ತಿಯ ಮಧ್ಯ ರೇಖೆ ಮತ್ತು ಮುಂದಿನ (ಜಲಾಶಯದ ಕಡೆ) ಮತ್ತು ಹಿಂದಿನ ಮುಖಗಳು ಇವನ್ನು ಆಯಾ ಮಟ್ಟಕ್ಕೆ ಸರಿಯಾಗಿ ಗುರುತು ಮಾಡಿ ಕಟ್ಟೆಯ ಕೆಲಸವನ್ನು ಪ್ರಾರಂಭಿಸುತ್ತಾರೆ. ಎರಡು ಮುಖಗಳಲ್ಲಿಯೂ ಮಾವಾಳಿಗಳನ್ನು (ಫೇ಼ಸ್ ಸ್ಟೋನ್ಸ್) ಸುರ್ಕಿಗಾರೆಯ ಗಾದಿಯ ಮೇಲೆ ಕೂರಿಸಿ ಇವುಗಳ ನಡುವೆ ಸಣ್ಣಕಲ್ಲುಗಳೊಂದಿಗೆ ಗಾರೆಯನ್ನು ತುಂಬುತ್ತಾರೆ. ಮೊದಲು ಎರಡು ಕೊನೆಗಳಲ್ಲಿಯೂ ಐದೋ ಆರೋ ವರಸೆಗಳನ್ನು ಮೇಲಕ್ಕೆ ಎತ್ತಿಕೊಂಡಿದ್ದರೆ ಆಮೇಲೆ ಮಧ್ಯದಲ್ಲಿ ಕೆಲಸವನ್ನು ಮುಂದುವರಿಸುವುದು ಸುಲಭವಾಗುತ್ತದೆ. ಮುಖದ ವರಸೆಯ ಹಿಂದೆ ಗಾರೆಯ ಗಾದಿಯ ಮೇಲೆ ಭರ್ತಿಕಲ್ಲುಗಳನ್ನು ಕೂರಿಸಿ ನಡುವೆ ಚಕ್ಕೆಗಳನ್ನು ಸುತ್ತಿಗೆಯಿಂದ ಹೊಡೆದು ಕೂರಿಸಿ ಆ ವರಸೆಯನ್ನು ಪುರೈಸುತ್ತಾರೆ. ಆಮೇಲೆ ಮಧ್ಯರೇಖೆಯಿಂದ ಎರಡು ಕಡೆಗೂ ಅಗಲವನ್ನು ಆ ಮಟ್ಟಕ್ಕೆ ಸರಿಯಾಗಿ ಗುರುತುಮಾಡಿ ಮೇಲಿನ ವರಸೆಯ ಮಾವಾಳಿಗಳನ್ನಿಟ್ಟು ನಡುವೆ ಭರ್ತಿಕಲ್ಲುಗಳನ್ನೂ ಚಕ್ಕೆಗಳನ್ನೂ ಗಾರೆಯೊಂದಿಗೆ ತುಂಬುತ್ತಾರೆ. ಒಳಗಿನ ಭರ್ತಿಯಲ್ಲಿ ವರಸೆಗಳೇ ಇಲ್ಲದೆ ಕಲ್ಲುಗಳು ಅಡ್ಡಾದಿಡ್ಡಿಯಾಗಿರುವುದರಿಂದ ಕಟ್ಟೆಯ ನೀರು ಇದರೊಳಗೆ ನುಸುಳಿ ಆಚೆಗೆ ಹೋಗುವುದು ಸಾಧ್ಯವಾಗುವುದಿಲ್ಲ. ಇದನ್ನು ಸಂಧಿಗಳೇ ಇಲ್ಲದ (ಜಾಯಿಂಟ್ಲೆಸ್) ಕಲ್ಲುಗಾರೆಯೆನ್ನುತ್ತಾರೆ. ನೀರಿನಲ್ಲಿ ಇದ್ದಷ್ಟೂ ಕಲ್ಲಾಗುವ ಸುರ್ಕಿಗಾರೆಯನ್ನು ಉಪಯೋಗಿಸುವುದರಿಂದ ಕಟ್ಟೆ ತುಂಬಿದಾಗಲೂ ಇದರಲ್ಲಿ ನೀರು ಜಿನುಗುವುದಿಲ್ಲ. ಇದು ಇಲ್ಲಿಯೇ ಹೇರಳವಾಗಿ ದೊರೆಯುವ ಕಲ್ಲು, ಇಟ್ಟಿಗೆ, ಸುಣ್ಣ-ಇವುಗಳಿಂದ ನಮ್ಮ ಜನರೇ ಕಟ್ಟುವ ಅಗ್ಗವಾದ ಉತ್ಕೃಷ್ಟವಾದ ಸಂವಿಧಾನ. (ಎಚ್.ಸಿ.ಕೆ.)