ವಿಷಯಕ್ಕೆ ಹೋಗು

ಕಲ್ಲುಂಡೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಲ್ಲುಂಡೆಗಳು : ಜಲಜ ಶಿಲೆಗಳು (ಸೆಡಿಮೆಂಟರಿ ರಾಕ್ಸ್‌) ಸಂಚಿತವಾದ ಮೇಲೆ ಅವುಗಳಲ್ಲಿ ಭೌತ, ರಾಸಾಯನಿಕ ಮತ್ತು ಜೈವಿಕ ವ್ಯತ್ಯಾಸಗಳಾಗಿ ಅವು ಗಟ್ಟಿಯಾಗುವಾಗ ಕೆಲವು ಖನಿಜಗಳು ಕರಗಿ ಮತ್ತೆ ಹರಳಿನ ರೂಪವನ್ನು ತಾಳುತ್ತವೆ. ಇವೇ ಕಲ್ಲುಂಡೆಗಳು (ಕಾಂಕ್ರಿಷನ್ಸ್‌; ಮಿನರಲ್ ನಾಡ್ಯೂಲ್ಸ್‌). ಈ ಕ್ರಿಯೆ ನಡೆಯುವಾಗ ಕಲ್ಲಿದ್ದಲು, ಕಲ್ಲೆಣ್ಣೆ ಮೊದಲಾದ ವಸ್ತುಗಳು ಸಹ ಉಂಟಾಗುತ್ತವೆ. ಕಲ್ಲುಂಡೆಗಳು ಸಾಮಾನ್ಯವಾಗಿ ಒಂದು ಖನಿಜ ಕಣದ ಅಥವಾ ಚಿಪ್ಪಿನ ಚೂರಿನ ಸುತ್ತಲೂ ಕೇಂದ್ರದಿಂದ ಅಂಚಿನವರೆಗೆ ಪದರಗಳ ರೂಪದಲ್ಲಿ (ಈರುಳ್ಳಿ ಸಿಪ್ಪೆಯಂತೆ) ಒಂದರ ಮೇಲೊಂದು ಶೇಖರವಾಗಿರುವ ಖನಿಜತಿಂತಿಣಿಗಳು. ಆಕಾರದಲ್ಲಿ ಇವು ಗುಂಡಾಗಿ ಮೊಟ್ಟೆಯಂತೆ, ದ್ರಾಕ್ಷಿ ಹಣ್ಣುಗಳ ಗೊಂಚಲಿನಂತೆ ಅಥವಾ ಮರದಂತೆ ಇರಬಹುದು. ಕಲ್ನಾರಿನ ಹಾಗೆ ರೇಷ್ಮೆಯಂತೆ ನೀಳವಾಗಿರುವ ಖನಿಜರಾಶಿಗಳೂ ಕಲ್ಲುಂಡೆಗಳಲ್ಲಿ ಸೇರಿವೆ. ಮಣ್ಣಿನಿಂದ ನಿರ್ಮಿತವಾದ ಶಿಲೆಗಳಲ್ಲಿ ಸಾಮಾನ್ಯವಾಗಿ ಸುಣ್ಣಕಲ್ಲಿನ ಉಂಡೆಗಳು (ಕ್ಯಾಲ್ಸೇನಿಯಸ್ ನಾಡ್ಯೂಲ್ಸ್‌) ಸಿಕ್ಕುತ್ತವೆ. ಕೆಲವು ವಿಶೇಷ ಕಾರಣಗಳಿಂದ ಕಬ್ಬಿಣದ ಅದುರು, ಕ್ಯಾಲ್ಸಿಯಂ ಫಾಸ್ಫೇಟ್ ಎಂಬ ರಂಜಕದ ಖನಿಜ ಮೊದಲಾದುವು ಕಲ್ಲುಂಡೆಗಳಲ್ಲಿ ತುಂಬಿರಬಹುದು. ಈ ಎರಡನೆ ವರ್ಗದ ಕಲ್ಲುಂಡೆಗಳು (ಫಾಸ್ಫ್ಯಾಟಿಕ್ ನಾಡ್ಯೂಲ್ಸ್‌) ರಾಸಾಯನಿಕ ಕೈಗಾರಿಕೆಯಲ್ಲಿ ವಿಶೇಷವಾಗಿ ಕೃತಕ ಗೊಬ್ಬರದ ಕೈಗಾರಿಕೆಯಲ್ಲಿ (ಉದಾಹರಣೆಗೆ ಸೂಪರ್ ಫಾಸ್ಫೇಟ್) ಅತ್ಯಮೂಲ್ಯ ಮೂಲವಸ್ತುಗಳು. ಕಲ್ಲುಂಡೆಗಳ ಬಿರುಕುಗಳಲ್ಲಿ ಆಗಾಗ ಕ್ಯಾಲ್ಸೈಟ್, ಸಿಕತ, ಪಿರೈಟಿಸ್ ಮೊದಲಾದ ಹರಳುಗಳು ತುಂಬಿರುವುದುಂಟು. ಆಗ ಅವನ್ನು ಜಿಯೋಡುಗಳೆಂದು ಕರೆಯುತ್ತಾರೆ. ಅಸಂಖ್ಯಾತ ಅಂಡಾಕಾರದ ಸಣ್ಣ ಸಣ್ಣ ಸುಣ್ಣಕಲ್ಲಿನ ಅಥವಾ ಕಬ್ಬಿಣದ ಅದುರಿನ ರಾಶಿಗಳಿಂದ ನಿರ್ಮಿತವಾದ ಊಲಿಟಿಕ್ ಸುಣ್ಣಕಲ್ಲು ಮತ್ತು ಕಬ್ಬಿಣಕಲ್ಲಿನ ನಿಕ್ಷೇಪಗಳು ಕೆಲವು ಯುಗಗಳಲ್ಲಿ ಸಂಚಿತವಾಗಿವೆ. (ಎ.ಎನ್.ಎಸ್.ಐ.)