ವಿಷಯಕ್ಕೆ ಹೋಗು

ಕಲ್ಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕಲ್ಯಾ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿ ಕಸಬೆಯಿಂದ ವಾಯವ್ಯಕ್ಕೆ ೫ಕಿಮೀ ದೂರದಲ್ಲಿರುವ ಗ್ರಾಮ. ಐತಿಹಾಸಿಕ ಸ್ಥಳ. ಶಾಸನ ಹಾಗೂ ಕಾವ್ಯಗಳಲ್ಲಿ ಇದನ್ನು ಕಲ್ಯ, ಕಲ್ಲೆಹ ಎಂದು ಕರೆಯಲಾಗಿದೆ. ಇದು ಜೈನ ಹಾಗೂ ವೀರಶೈವರ ಪವಿತ್ರ ಸ್ಥಳವಾಗಿತ್ತು. ಬಸದಿಯ ಮತ್ತು ಇತರ ಜೈನ ಅವಶೇಷಗಳೂ ಅನೇಕ ಶಿಲಾಶಾಸನಗಳೂ ಇಲ್ಲಿವೆ. ೧೩೬೮ರ ಒಂದು ಶಾಸನದಲ್ಲಿ ೧ನೆಯ ಬುಕ್ಕರಾಯ ಜೈನರು ಮತ್ತು ವೈಷ್ಣವರಲ್ಲಿ ರಾಜಿ ಮಾಡಿಸಿದ ಪ್ರಸ್ತಾಪವಿದೆ. ಗ್ರಾಮದ ಪಶ್ಚಿಮಕ್ಕಿರುವ ಸಣ್ಣ ಬೆಟ್ಟದ ಮೇಲೆ ವೀರಶೈವರ ಒಂದು ಮಠವೂ ಕಲ್ಲೇಶ್ವರ ದೇವಸ್ಥಾನವೂ ಇವೆ. ಮಠ ವಿಶಾಲವಾದ ಪ್ರಾಂಗಣ ಮತ್ತು ಒಂದು ಗುಹಾ ಕೋಣೆ ಇರುವ ಕಟ್ಟಡ. ಮಠದ ಹೊರಗೆ ಗದ್ದುಗೆಗಳಿರುವ ಮೂರು ನಾಲ್ಕು ಮಂಟಪಗಳಿವೆ. ಒಂದರ ಮೇಲೆ ಬಸವನ ಪ್ರತಿಮೆಯಿದೆ. ಆ ಗದ್ದುಗೆ ಪಾಲ್ಕುರಿಕೆ ಸೋಮನಾಥನದೆಂದು ಪ್ರಸಿದ್ಧವಾಗಿದೆ. ಚೆನ್ನಬಸವಪುರಾಣದ ಪ್ರಕಾರ ಸೋಮನಾಥ ಸತ್ತದ್ದು ಇಲ್ಲೇ. ವೀರಶೈವರು ವರ್ಷಕ್ಕೊಮ್ಮೆ ಇಲ್ಲಿ ಸೋಮನಾಥನ ಪರ್ವವನ್ನು ಆಚರಿಸುತ್ತಾರೆ. ೧೩ನೆಯ ಶತಮಾನದ ಕಡೆಯಲ್ಲಿ ಸರ್ವಶೀಲೆ ಚನ್ನಮ್ಮ ಎಂಬ ಶರಣೆ ಇಲ್ಲಿ ಆಗಿಹೋಗಿದ್ದಳೆಂದು ಪಾಲ್ಕುರಿಕೆ ಸೋಮೇಶ್ವರ ಪುರಾಣದಿಂದಲೂ ೧೨ನೆಯ ಶತಮಾನದಲ್ಲಿದ್ದ ಜ್ಞಾನಿ ಚೆನ್ನಬಸವಣ್ಣ ಇಲ್ಲಿ ಸಾಯುಜ್ಯ ಹೊಂದಿದನೆಂದು ಚೆನ್ನಬಸವಪುರಾಣದಿಂದಲೂ ತಿಳಿದುಬರುತ್ತವೆ. ಇಲ್ಲಿರುವ ಕಲ್ಲೇಶ್ವರ ಗುಡಿ ಒಂದು ಗುಹಾದೇವಾಲಯ. ಕಲ್ಯದಲ್ಲಿ ಶ್ರೀವೈಷ್ಣವರ ದೇವಾಲಯಗಳೂ ಇದ್ದ ಬಗ್ಗೆ ಕೆಲವು ಸುಳಿವುಗಳಿವೆ. ಹಿಂದೆ ಇಲ್ಲಿ ಒಂದು ವರದರಾಜ ದೇವಾಲಯವಿತ್ತು. ಈಗ ಅದರ ಮುಂದಿನ ಗರುಡಗಂಬ ಮಾತ್ರ ನಿಂತಿದೆ. ಆಂಜನೇಯ ದೇವಾಲಯದಲ್ಲಿ ಕೆಲವು ಆಳ್ವಾರರುಗಳ ವಿಗ್ರಹಗಳಿವೆ.

ಕಲ್ಲೇಶ್ವರ ಗುಡಿಯ ಬಳಿಯ ಒಂದು ಕಂಬದ ಮೇಲೆ ಕುಂಬಳಕಾಯಜ್ಜಿಯದು ಎನ್ನುವ ಸ್ತ್ರೀಯ ತಲೆಯೊಂದನ್ನು ಕೆತ್ತಿರುವ ಶಿಲ್ಪವಿದೆ. ಹಿಂದೆ ಈ ಊರು ಕಲಾವತಿ ಎಂಬ ಪಟ್ಟಣವಾಗಿತ್ತು. ಈಕೆ ಒಮ್ಮೆ ಕುಂಬಳಕಾಯಿಗಳನ್ನು ಮಾರಲು ತಂದಾಗ ಅದನ್ನು ಕೊಳ್ಳುವ ವಿಷಯದಲ್ಲಿ ಜೈನರು ಮತ್ತು ಇತರರಲ್ಲಿ ವಿರಸ ಉಂಟಾಗಿ ಕೊನೆಗೆ ಈ ಊರು ಹಾಳಾಯಿತೆಂದು ಪ್ರತೀತಿ. ೧೫೩೩ರ ಒಂದು ಶಾಸನದಲ್ಲಿ ಕಲಾವತಿ ಎಂಬ ಒಂದು ಪಟ್ಟಣದಲ್ಲಿ ಬೌದ್ಧಧರ್ಮೀಯರು ವಾಸವಾಗಿದ್ದ ಪ್ರಸ್ತಾಪವಿದೆ. ಈ ಕಲಾವತಿಯೇ ಕಲ್ಯ ಎಂಬ ಅಭಿಪ್ರಾಯವಿದೆ. *

"https://kn.wikipedia.org/w/index.php?title=ಕಲ್ಯಾ&oldid=919626" ಇಂದ ಪಡೆಯಲ್ಪಟ್ಟಿದೆ