ಕಲ್ಕತ್ತ ಜರ್ನಲ್

ವಿಕಿಪೀಡಿಯ ಇಂದ
Jump to navigation Jump to search

ಕಲ್ಕತ್ತ ಜರ್ನಲ್ : ೧೮೧೮ರ ಅಕ್ಟೋಬರ್ ೨ರಂದು ಕಲ್ಕತ್ತದಲ್ಲಿ ಪ್ರಕಟಣೆ ಆರಂಭವಾಗಿ ಶೀಘ್ರಕಾಲದಲ್ಲೇ ಅತ್ಯಂತ ಪ್ರಸಿದ್ಧಿ ಪಡೆದು ಸಾಹಸ ಮೆರೆದು ನಾಗರಿಕರ ಹಿತರಕ್ಷಣೆಗಾಗಿ ಹೋರಾಡಿದ ದ್ವಿವಾರಪತ್ರಿಕೆ.

ಆರಂಭದಲ್ಲಿ ೮ ಪುಟಗಳನ್ನೊಳಗೊಂಡಿತ್ತು. ಪ್ರತಿಯ ಬೆಲೆ ೧ ರೂ. ಯಾರೇ ತಪ್ಪುಮಾಡಲಿ, ಅದನ್ನು ಖಂಡಿಸುವುದೂ ಕರ್ತವ್ಯಪಾಲನೆಯ ಬಗ್ಗೆ ಸೂಕ್ತ ಎಚ್ಚರಿಕೆ ನೀಡುವುದೂ ಸತ್ಯೈಕ ಪಕ್ಷಪಾತದಿಂದ ಸುದ್ದಿಗಳನ್ನು ಪ್ರಕಟಿಸುವುದೂ ಇದರ ಕೆಲವು ಮುಖ್ಯೋದ್ದೇಶಗಳು.

ಆರಂಭ[ಬದಲಾಯಿಸಿ]

ಜೇಮ್ಸ್‌ ಸಿಲ್ಕ್‌ ಬಂಕಿಗ್ಹ್ಯಾಂ ಇದರ ಪ್ರಥಮ ಸಂಪಾದಕ. ಈತ ಬ್ರಿಟಿಷ್ ಪ್ರಜೆ, ಸಾಹಸಿ, ಪ್ರಗತಿಪರದೃಷ್ಟಿ ತಳೆದಿದ್ದಾತ. ಸಂಪಾದಕನಾಗುವ ಮೊದಲು ಈತ ಹುಮಾಯೂನ್ ಷಹ ಎಂಬ ನೌಕೆಯ ಕಪ್ತಾನನಾಗಿದ್ದ. ಮಸ್ಕಾಟಿನ ಇಮಾಮರ ಆಜ್ಞೆಯಂತೆ ಹಡಗಿನಲ್ಲಿ ಗುಲಾಮರನ್ನು ಮಡಗಾಸ್ಕರ್ ತೀರಕ್ಕೆ ಕೊಂಡೊಯ್ಯಲು ನಿರಾಕರಿಸಿ ತನ್ನ ಹುದ್ದೆಗೆ ರಾಜೀನಾಮೆಯಿತ್ತ. ಇದರಿಂದಾಗಿ ಗವರ್ನರ್-ಜನರಲ್ ಮತ್ತು ಲಾರ್ಡ್ ಬಿಷಪ್ ಮೊದಲಾದವರ ಪ್ರಶಂಸೆ ಗಳಿಸಿದ.

ಕಲ್ಕತ್ತ ಜರ್ನಲ್ ಪ್ರಾರಂಭವಾದ ಅಲ್ಪಕಾಲದಲ್ಲೇ ಅದು ಅತ್ಯಂತ ದಕ್ಷತೆಯಿಂದ ನಿರ್ವಹಿಸಲಾದ ಸ್ವತಂತ್ರವೂ ಚುರುಕೂ ಆದ ಪತ್ರಿಕೆಯೆಂದು ಹೆಸರು ಗಳಿಸಿತು. ಅದರಲ್ಲಿ ಎಲ್ಲ ರೀತಿಯ ಸುದ್ದಿಗಳಿಗೂ ಪ್ರಾತಿನಿಧ್ಯವಿತ್ತು. ಪೊಲೀಸರ ಅದಕ್ಷತೆ, ಐರೋಪ್ಯ ಉಡುಪು ತೊಟ್ಟ ಕೆಲವರು ಕೋಲ್ಕತದ ಬೀದಿಗಳಲ್ಲಿ ತೋರಿಸುತ್ತಿದ್ದ ಅಸಭ್ಯ ನಡೆವಳಿಕೆ ಮುಂತಾದವುಗಳ ಬಗ್ಗೆ ಗಮನ ಸೆಳೆಯುವ ಲೇಖನಗಳಿರುತ್ತಿದ್ದುವು. ಸಾಹಿತ್ಯದ ಅಭಿರುಚಿಯನ್ನು ಪ್ರೋತ್ಸಾಹಿಸುವ ಪ್ರಯತ್ನವನ್ನು ಈ ಪತ್ರಿಕೆಯೇ ಆರಂಭ ಮಾಡಿತೆನ್ನಬಹುದು.

ಆಂಗ್ಲಕವಿ ಬೈರನ್ನನ ‘ಡಾನ್ ವಾನ್’ ಮತ್ತು ಸರ್ ವಾಲ್ಟರ್ ಸ್ಕಾಟನ ‘ಇವಾನ್ ಹೋ’ ಮುಂತಾದ ಕೃತಿಗಳನ್ನು ಈ ಪತ್ರಿಕೆ ಪರಿಚಯ ಮಾಡಿಸಿಕೊಟ್ಟಿತು. ೨೦೭ ಚಂದಾದಾರರಿಂದ ಆರಂಭವಾದ ಪತ್ರಿಕೆ ಕೇವಲ ಒಂದು ವರ್ಷದಲ್ಲಿ ತನ್ನ ಪ್ರಸಾರಸಂಖ್ಯೆಯನ್ನು ದ್ವಿಗುಣಗೊಳಿಸಿತು. ೧೮೨೨ರ ಹೊತ್ರಿಗೆ ಬಹಳ ಪ್ರಸಾರವುಳ್ಳ ಭಾರತೀಯ ಪತ್ರಿಕೆಯೆನಿಸಿಕೊಂಡಿತು. ಆಧುನಿಕ ಭಾರತದ ಪ್ರತಿಕೋದ್ಯಮದ ಇತಿಹಾಸದಲ್ಲಿ ಕಲ್ಕತ್ತ ಜರ್ನಲ್ ಪತ್ರಿಕೆ ಅತಿ ಹೆಚ್ಚು ಚಂದಾದಾರರನ್ನುಳ್ಳ, ಅತಿ ಜನಪ್ರಿಯವಾದ ಮತ್ತು ಹೆಚ್ಚು ಲಾಭ ಗಳಿಸುವ ಶಕ್ತಿಯುಳ್ಳ ಪತ್ರಿಕೆಯೆಂದೇ ಪ್ರಸಿದ್ಧಿಗಳಿಸಿದ್ದು ಗಮನಾರ್ಹವಾದ ಸಂಗತಿ.

ಜನಪ್ರಿಯತೆ ಮತ್ತು ಸಾಧನೆ[ಬದಲಾಯಿಸಿ]

ಬಕಿಂಗ್ ಹ್ಯಾಮನ ಧಾರಾವಾಹಿ ಬರೆಹಗಳಿಂದ ಕಲ್ಕತ್ತ ಜರ್ನಲ್ ಜನಪ್ರಿಯತೆಯನ್ನೂ ಜನಸಂಪರ್ಕವನ್ನೂ ಹೆಚ್ಚಿಸಿಕೊಂಡಿತು. ಆತ ತನ್ನ ಅಗಾಧವಾದ ಅನುಭವದ ಆಧಾರದ ಮೇಲೆ ಸಮುದ್ರಯಾನಕ್ಕೆ ಹೊಸ ಮಾರ್ಗಗಳನ್ನು, ಹೊಸ ಸಂಪರ್ಕಸಾಧನಗಳನ್ನು ಮತ್ತು ಮುಂಬಯಿಯಿಂದ ಲಂಡನ್ನಿಗೆ ಸ್ಥಳೀಯ ಸೌಲಭ್ಯಗಳ ಸಹಾಯದಿಂದ ಸಾಧ್ಯವಾಗುವ ವಾಯುಮಾರ್ಗವನ್ನು ಕೂಡ ಸೂಚಿಸಿದ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚಾಗಿ ಸಂಚರಿಸಿದ್ದನಲ್ಲದೆ ಪೌರಸ್ತ್ಯ ಜನತೆಯ ಸಂಪ್ರದಾಯ ಮತ್ತು ಸ್ವಭಾವಗಳನ್ನು ಬಕಿಂಗ್ಹ್ಯಾಂ ಬಹಳ ಚೆನ್ನಾಗಿ ಅರಿತುಕೊಂಡಿದ್ದ. ಸಾಹಿತ್ಯದಲ್ಲಿ ಆಳವಾದ ಆಸಕ್ತಿಯನ್ನಿಟ್ಟುಕೊಂಡಿದ್ದ ಆತನಿಗೆ ಮಾನವಶಾಸ್ತ್ರದಲ್ಲಿ ಕೂಡ ವಿಶೇಷವಾದ ಅಭಿರುಚಿಯಿತ್ತು.

ಈಸ್ಟ್‌ ಇಂಡಿಯ ಕಂಪನಿಯ ಏಕಸ್ವಾಮ್ಯವನ್ನು ಬಹಿರಂಗವಾಗಿ ವಿರೋಧಿಸಿದ್ದು ಕಲ್ಕತ್ತ ಜರ್ನಲ್ ಪತ್ರಿಕೆಯೇ. ಇಡೀ ಏಷ್ಯ ಖಂಡವನ್ನೇ ಸ್ವತಂತ್ರ ಮಾರುಕಟ್ಟೆಯನ್ನಾಗಿಸ ಬೇಕೆಂದು ಈ ಪತ್ರಿಕೆ ಬಹಳ ಶ್ರದ್ಧೆಯಿಂದ ಹೋರಾಡಿತು. ಸೂಕ್ತಶಾಸಕಾಂಗವಿಲ್ಲದ ಸರ್ಕಾರದ ಬೇಜವಾಬ್ದಾರಿ ನಡವಳಿಕೆಯನ್ನು ಇದರ ಸಂಪಾದಕೀಯಗಳು ತುಂಬಾ ಕಟುವಾಗಿ ಟೀಕಿಸುತ್ತಿದ್ದುವು. ಅಂದು ಭಾರತದಲ್ಲಿ ಪ್ರಚಲಿತವಿದ್ದ ಸತಿ ಪದ್ಧತಿಯನ್ನು ಖಂಡಿಸಿ ಅನೇಕ ಅಗ್ರಲೇಖನಗಳು ಇದರಲ್ಲಿ ಪ್ರಕಟವಾದುವು. ಅದನ್ನು ಕೊನೆಗೊಳಿಸುವ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಅವು ಎತ್ತಿ ತೋರಿಸಿದುವು. ಭಯ ಪಕ್ಷಪಾತಗಳಿಲ್ಲದ ಬರೆಹವೇ ಬಕಿಂಗ್ಹ್ಯಾಮನ ಗುರಿಯಾಗಿತ್ತು. ಸಾರ್ವಜನಿಕರ ಕುಂದುಕೊರತೆಗಳ ಸಾರ್ವಜನಿಕ ಸಮಸ್ಯೆಗಳ ಚರ್ಚೆಗೆ ಪತ್ರಿಕೆಯಲ್ಲಿ ಯಾವಾಗಲೂ ಸ್ವಾಗತವಿತ್ತು. ಪತ್ರಿಕೆಯ ನಿರ್ದಾಕ್ಷಿಣ್ಯನೀತಿಯಿಂದಾಗಿ ಬಕಿಂಗ್ಹ್ಯಾಂ ಅಧಿಕಾರಿಗಳ ವಿರೋಧ ಗಳಿಸಿಕೊಂಡ. ಆದರೂ ಅದಕ್ಕೆ ಜನಮೆಚ್ಚುಗೆಯಿತ್ತು. ಅದು ತನ್ನ ವಿರೋಧಿ ಪತ್ರಿಕೆಗಳನ್ನು ಸೋಲಿಸಿ ಮುಂದುವರಿಯಿತು. ಅಧಿಕಾರಿಗಳಿಗೆ ಅದರ ವ್ಯಂಗ್ಯ ಬರೆಹಗಳನ್ನು ಕಂಡರೆ ಆಗುತ್ತಿರಲಿಲ್ಲ. ಅವರು ಯಾವುದೋ ಕಾನೂನಿನ ಜಗಳದಲ್ಲಿ ಬಕಿಂಗ್ಹ್ಯಾಮನನ್ನು ತೊಡಗಿಸಿ, ಆತನ ಅನುಮತಿಪತ್ರವನ್ನು ಹಿಂತೆಗೆದುಕೊಂಡರಲ್ಲದೆ, ೧೮೨೩ರಲ್ಲಿ ಅವನನ್ನು ಗಡಿಪಾರು ಮಾಡಿದರು. ಮುಂದೆ ಕಲ್ಕತ್ತ ಜರ್ನಲ್ ಸ್ಯಾಂಡಿಸನ ಸಂಪಾದಕತ್ವದಲ್ಲಿ ಮುಂದುವರಿಯಿತಾದರೂ ಭಾರತಸರ್ಕಾರದ ಕಿರುಕುಳವನ್ನೆದುರಿಸಲಾರದೆ ನಿಂತಿತು. ಭಾರತೀಯ ಪತ್ರಿಕೋದ್ಯಮಕ್ಕೆ ಸ್ಫೂರ್ತಿ ನೀಡಿದ ಬಕಿಂಗ್ಹ್ಯಾಮನ ಹೆಸರು ಚಿರಸ್ಥಾಯಿಯಾಗಿರುತ್ತದೆ. ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸುವ ಮತ್ತು ಅಧಿಕಾರಿಗಳ ನಡವಳಿಕೆಯನ್ನು ಗಮನಿಸುವ ಪದ್ಧತಿ ಆರಂಭವಾದದ್ದು ಅವನ ಪತ್ರಿಕೆಯಿಂದ.

ಭಾರತೀಯ ಪತ್ರಿಕೋದ್ಯಮಕ್ಕೆ ಕೊಡುಗೆಗಳು[ಬದಲಾಯಿಸಿ]

ಭಾರತೀಯ ಪತ್ರಿಕೋದ್ಯಮಕ್ಕೆ ಕಲ್ಕತ್ತ ಜರ್ನಲ್ನ ಕೊಡುಗೆಗಳು ಮೂರು: ೧ ಅದು ಪತ್ರಿಕೆಯನ್ನು ಜನತೆಯ ಕನ್ನಡಿಯನ್ನಾಗಿಸಿತು; ೨ ನಿಷ್ಪಕ್ಷಪಾತ ಹಾಗೂ ಸತ್ಯದಿಂದ ಕೂಡಿದ ಚರ್ಚೆಯ ಯುಗವನ್ನಾರಂಭಿಸಿತು; ಮತ್ತು ೩ ಪತ್ರಿಕೋದ್ಯಮಕ್ಕೆ ಜನತೆಯ ಮುಂಚೂಣಿಯ ಸ್ಥಾನ ದೊರಕಿಸಿಕೊಟ್ಟಿತು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: