ಕಲ್ಕಟ್ಟಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

Incomplete list.png This page or section is incomplete.

ಕಲ್ಕಟ್ಟಣೆ : ಕೆರೆಗಳ ಏರಿಯ ಕೆಳಭಾಗದಲ್ಲಿ ಸಾಮಾನ್ಯವಾಗಿ ನಿರ್ಮಿಸಲಾಗುವ ಒಂದು ಬಗೆಯ ತಡೆಗೋಡೆ (ರಿವೆಟ್ಮೆಂಟ್). ಕೆಲವೆಡೆ ನದಿಯ ಅಕ್ಕಪಕ್ಕಗಳಲ್ಲೂ (ದಂಡೆ-ಕಡೆಯಲ್ಲಿ) ಇಂಥ ತಡೆಗೋಡೆಯನ್ನು ಹಾಕುತ್ತಾರೆ. ಕೆರೆ ಅಥವಾ ನದಿ ದಂಡೆಯ ಸವೆತವನ್ನು ತಡೆಗಟ್ಟುವುದೇ ಇದರ ಉದ್ದೇಶ. ಪ್ರವಾಹದ ಅಥವಾ ಅಲೆಗಳ ಹೊಡೆತವನ್ನು ಎದುರಿಸಿ ನಿಲ್ಲಬಲ್ಲಂಥ ಕಾಡುಗಲ್ಲುಗಳಿಂದ ಇಂಥ ರಚನೆ ಸಾಧ್ಯ. ಕಲ್ಕಟ್ಟಣೆಯ ಓಟ ನೀರಿನ ಕಡೆಗೆ ಇದ್ದು ಭಯಾನಕ ಪ್ರವಾಹಗಳನ್ನು ಅಥವಾ ಅಲೆಗಳನ್ನು ಮತ್ತೆ ಕೆರೆಯೊಳಕ್ಕೆ ನಿರ್ದೇಶಿಸುವಂತಿರುತ್ತದೆ. ಇದರ ದಪ್ಪ ಮತ್ತು ಉದ್ದವನ್ನು ನಿರ್ಮಾಣ ಸ್ಥಳದ ಮಣ್ಣಿನ ಗುಣವನ್ನು ಅರಿತು ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಏರಿಯ ಮುಂದುಗಡೆ ೧ಳಿ' ದಪ್ಪದ ಕಾಡುಗಲ್ಲಿನ ಕಲ್ಕಟ್ಟಣೆಯನ್ನು ಕಟ್ಟಿ ಅದರ ಹಿಂದೆ ೬" ದಪ್ಪದ ಒಡೆದ ಕಲ್ಲು ಮತ್ತು ಗರಸನ್ನು (ಗ್ರಾವೆಲ್) ತುಂಬುವುದು ಕಲ್ಕಟ್ಟಣೆಯನ್ನು ನಿರ್ಮಿಸುವಲ್ಲಿ ಅನುಸರಿಸುವ ಕ್ರಮ. ಸಣ್ಣ ಕೆರೆಗಳ ಏರಿಯ ಮೇಲೆ ನೀರಿನ ಹೊಡೆತ ಹೆಚ್ಚಾಗಿಲ್ಲದ ಕಡೆಗಳಲ್ಲಿ ಇದರ ದಪ್ಪ ೧' ಇದ್ದರೆ ನೀರಿನ ಹೊಡೆತ ಹೆಚ್ಚಾಗಿರುವೆಡೆ ೨’ಗಿಂತಲೂ ಹೆಚ್ಚು ದಪ್ಪವಿರುತ್ತದೆ. ಕಲ್ಕಟಣೆಯ ಹಿಂದೆ ತುಂಬುವ ಮಣ್ಣು ಕೆರೆಯಲ್ಲಿ ನೀರು ತುಂಬಿದ್ದರಿಂದ ಮೆತುವಾಗದಂತಿರಬೇಕಾಗುತ್ತದೆ. ಅಲ್ಲದೆ ಚಿಕ್ಕ ಪ್ರಾಣಿಗಳು ಬಿಲಗಳನ್ನು ತೋಡಿಕೊಳ್ಳಲು ಅವಕಾಶವಿರದಂತಿರಬೇಕು. ಮಣ್ಣಿನ ಬದಲಿಗೆ ಕಲ್ಲಿನ ಜಲ್ಲಿ, ಕ್ವಾರಿಯಲ್ಲಿ ಸಿಕ್ಕುವ ಚಕ್ಕೆಗಳು, ಒಡೆದ ಜಮ್ಮಿಟ್ಟಿಗೆ (ಲ್ಯಾಟರೈಟ್) ಮತ್ತು ಗರಸನ್ನು ಕಲ್ಕಟ್ಟಣೆಯ ಹಿಂದೆ ತುಂಬುವುದು ನವೀನ ಕ್ರಮ. ಕಲ್ಕಟ್ಟಣೆಯ ತಳಭಾಗ ನೀರಿನ ಕನಿಷ್ಠ ಮಟ್ಟಕ್ಕೆ ೨'-೩' ಕೆಳಗಿದ್ದು ಮೇಲ್ಮಟ್ಟ ನೀರಿನ ಗರಿಷ್ಠಮಟ್ಟಕ್ಕೆ ಮೇಲಕ್ಕಿರುತ್ತದೆ. ಕಲ್ಕಟ್ಟಣೆಯ ನಿರ್ಮಾಣದಲ್ಲಿ ಏಕರೀತಿ ಮಂದವಿರುವ ಕಲ್ಲುಗಳನ್ನು ಬಳಸುವುದು ರೂಢಿ.

ಕಲ್ಕಟ್ಟಣೆಯ ನಿರ್ಮಾಣದಲ್ಲಿ ಕೆರೆಯ ದಂಡೆಯಲ್ಲಿ ಮರದ ದಿಮ್ಮಿಗಳನ್ನು ನೆಟ್ಟು ಅವುಗಳ ಮಧ್ಯೆ ಒಡೆದ ಕಲ್ಲುಗಳನ್ನು ಹಾಕುವುದು ಮತ್ತೊಂದು ಕ್ರಮ. ಇದರಲ್ಲಿ ನೀರಿನ ಹೊಡೆತ ಹಿಂದೆ ಸರಿಯುವುದಲ್ಲದೆ ದಂಡೆಯ ಮೇಲೆ ಮಣ್ಣು, ಮರಳು ಇತ್ಯಾದಿಗಳು ಸೇರಿ ದಂಡೆಯ ಬೆಳವಣಿಗೆಗೆ ಅವಕಾಶವಾಗುತ್ತದೆ. (ಎಚ್.ಸಿ.ಕೆ.)