ಕಲಾವಸ್ತು ವಿರಚನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲಾವಸ್ತು ವಿರಚನೆ:ಚಿತ್ರ, ವಿಗ್ರಹ, ದೇವಾಲಯ, ಸಂಗೀತಕೃತಿ ಅಥವಾ ಪದ್ಯಕಾವ್ಯ ಮೊದಲಾದವನ್ನು ಕಲಾವಸ್ತುಗಳೆನ್ನುತ್ತೇವೆ. ಇಂಥ ಕಲಾವಸ್ತುವಿನ ರಚನೆ ತನ್ನದೇ ಆದ ವೈಶಿಷ್ಟ್ಯವನ್ನೂ ಜವಾಬ್ದಾರಿಯನ್ನೂ ಹೊತ್ತು ಇತರ ಬಗೆಯ ವಸ್ತುಗಳ ರಚನೆಯಿಂದ ಬೇರೆಯಾಗಿದೆ. ಮೇಜು, ಪಾತ್ರೆ, ಉಡುಪು, ಒಡವೆ ಮುಂತಾದ ಉಪಯುಕ್ತ ಪದಾರ್ಥಗಳನ್ನು ಜನರಿಗೆ ಒದಗಿಸಿಕೊಡುವ ಕೆಲಸಗಾರರ ದೃಷ್ಟಿಯಿಂದ ಕಲೆಗಾರರ ಕೃಷಿ ವಿಭಿನ್ನ. ಅದು ತಯಾರಿಕೆ, ಇದು ನಿರ್ಮಾಣ. ಎರಡೂ ನಾಗರಿಕ ಮನುಷ್ಯನಿಗೆ ಅಗತ್ಯವಾಗಿ ಬೇಕಾದವು. ಆದರೆ ಒಂದು ನೆಮ್ಮದಿಯಾದ ಬಾಳಿಗೆ ಸಲ್ಲುವ ಸೌಕರ್ಯವಾದರೆ ಇನ್ನೊಂದು ಹೃದಯ ಮನಸ್ಸುಗಳನ್ನು ತಣಿಸುವ ಸಾಧನ. ಅದು ಹೆಚ್ಚೋ ಇದು ಹೆಚ್ಚೋ ಎಂಬ ಚರ್ಚೆ ಭಿನ್ನಾಭಿಪ್ರಾಯಗಳಿಗೆ ಎಡೆಗೊಡುತ್ತದೆ. ಅಲ್ಲದೆ ಅದು ತರ್ಕಸಮ್ಮತವಲ್ಲ. ವ್ಯತ್ಯಾಸವಿದೆಯೆಂಬ ಮಾತಿನ ಅರ್ಥ ಯಥಾರ್ಥ ಸಂಗತಿಯೆಂದಷ್ಟೆ. ಕಲಾವಸ್ತುವಿನ ನಿರ್ಮಾಣ ಹಲವು ಅಂಶಗಳುಳ್ಳ ಸಂಕೀರ್ಣ ವ್ಯವಸಾಯ. ಉಪಯುಕ್ತ ಪದಾರ್ಥದ ತಯಾರಿಕೆ ಸರಿಸುಮಾರಾಗಿ ನೆರವಾದ ಕಾರ್ಯ.

ಕಲಾವಸ್ತುವನ್ನು ಕಲೆಗಾರ ನಿರ್ಮಿಸುತ್ತಾನೆ ಅಥವಾ ರಚಿಸುತ್ತಾನೆ_ಎಂದು ನುಡಿಯುವುದೇ ವಾಡಿಕೆ. ಅದು ಸರಿಯಾದ ಮಾತು. ಏತಕ್ಕೆಂದರೆ ಆ ಉದ್ಯಮ ಹಲವು ಮುಖಗಳಿಂದ ಕೂಡಿ ದೊಡ್ಡ ಹೊಣೆಗಾರಿಕೆ ಎನ್ನಿಸುವ ಜಟಿಲೋದ್ಯಮ. ಅದರಲ್ಲಿ ಬರೀ ಸಾಮಗ್ರಿ, ಉಪಕರಣ, ಕೆಲಸಗಳನ್ನೇ ಅಲ್ಲದೆ ಕಲೆಗಾರ, ಅವನ ಉದ್ದೇಶ, ಶಕ್ತಿ, ಸಾಮಥರ್ಯ್‌, ಜ್ಞಾನ, ಅನುಭವ, ಭಾವನೆ, ಸ್ಫೂರ್ತಿ_ ಇತ್ಯಾದಿ ವಿಚಾರಗಳನ್ನೂ ಪರಿಗಣಿಸಲೇಬೇಕು. ಬಡಗಿಯೊಬ್ಬ ಮಾಡಿದ ಸುಖಾಸನಕ್ಕೆ ಜೋಡಿಯಾದದ್ದನ್ನು ಇನ್ನೊಬ್ಬ ಬಡಗಿ ಮಾಡಬಹುದು. ಎರಡರಿಂದಲೂ ಉಂಟಾಗುವ ಸೌಖ್ಯ ಒಂದೇ ತರಹ. ಒಬ್ಬ ಗಾಯಕ ಹಾಡಿದಂತೆ ಇನ್ನೊಬ್ಬ ಹಾಡುವುದು ಅಸಾಧ್ಯ. ಒಬ್ಬ ಚಿತ್ರಕಾರನ ಸೂರ್ಯೋದಯ ವರ್ಣನೆಯಂತೆ ಇನ್ನೊಬ್ಬ ಚಿತ್ರಕಾರ ವರ್ಣಿಸಲಾರ. ಒಬ್ಬೊಬ್ಬ ಕಲೆಗಾರನೂ ಭಿನ್ನ ಭಿನ್ನ ವ್ಯಕ್ತಿತ್ವದಿಂದ ಕೂಡಿದ ಭಾವಜೀವಿ ಮತ್ತು ದಾರ್ಶನಿಕ. ಹೀಗಾಗಿ ಶಿಲ್ಪಿಯ ಕಟ್ಟಡವೇ ಆಗಲಿ, ಕವಿಯ ರೂಪಕವೇ ಆಗಲಿ ತನ್ನಷ್ಟಕ್ಕೆ ತಾನೇ ಅಸದೃಶವಾದದ್ದು. ಅದರ ಪ್ರತಿಯನ್ನು ಯಾರಾದರೂ ಮಾಡಿಕೊಡಬಹುದು. ಆದರೆ ಅದು ಜೀವವಿಲ್ಲದ ನಕಲು. ಕಲೆಗಾರ ತನ್ನನ್ನೇ ಪುರ್ತಿಯಾಗಿ ಮುಡಿಪಾಗಿಟ್ಟು ವಿಶೇಷ ಶ್ರದ್ಧೆಯಿಂದ ಒಂದು ಕಲಾಕೃತಿಯನ್ನು ಹೊರತರುತ್ತಾನೆ.

ಕಲೆಗಾರನನ್ನು ಕುರಿತು ಮೊದಲಲ್ಲೂ ಮಧ್ಯದಲ್ಲೂ ಕೊನೆಯಲ್ಲೂ ಆಲೋಚಿಸತಕ್ಕದ್ದು. ಕಲೆಗಾರನಂತೆ ಕಲಾವಸ್ತು, ಕಲೆಗಾರನೇ ಕಲಾವಸ್ತು. ಸುಮ್ಮನೆ ಆಸೆಪಟ್ಟು ಆರಾಮವಾಗಿ ಕುಳಿತುಕೊಂಡರೆ ಲಲಿತಕಲೆ, ಕೈಗೆ ಎಟುಕುವುದಿಲ್ಲ. ಕಲೆಗಾರನಾಗಲು ಕಷ್ಟಪಡಬೇಕು. ನಿದ್ರೆ, ಆಹಾರ ವಿನೋದ, ವಿಹಾರ ಮುಂತಾದವಕ್ಕೆ ಹೆಚ್ಚು ಗಮನಕೊಡಬಾರದು. ನಾನಾ ವಿಧದ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಲೋಕಾನುಭವ, ಮನುಷ್ಯರ ಸ್ವಭಾವ ವರ್ತನೆಗಳ ಪರಿಚಯ, ಗ್ರಂಥಾವಲೋಕನ ಮುಂತಾದವುಗಳಿಂದ ಮನಸ್ಸನ್ನು ವಿಶಾಲಗೊಳಿಸಿಕೊಳ್ಳುತ್ತಲೇ ಇರಬೇಕು. ಸಾಹಿತಿಯಾದರೆ ಹಿಂದಿನವರ ಮತ್ತು ಇಂದಿನವರ ಸಾಹಿತ್ಯವನ್ನು ಪಠಿಸಿ ಅಮೂಲ್ಯವಾದದ್ದನ್ನು ಸುಂದರವಾದದ್ದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಚಿತ್ರಕಾರನಾದರೆ ಅದೇ ರೀತಿ ನಾನಾ ಚಿತ್ರಕಾರರ ಕೃತಿಗಳನ್ನು ನೆಟ್ಟ ದೃಷ್ಟಿಯಿಂದ ನೋಡಿ ಕಲಾಸೂಕ್ಷ್ಮತೆಗಳನ್ನು ಮನವರಿಕೆ ಮಾಡಿಕೊಳ್ಳಬೇಕು. ಯಾವೊಬ್ಬ ಕಲೆಗಾರನೂ ಇತರರನ್ನು ದಾಸನಂತೆ ಹಿಂಬಾಲಿಸಬೇಕಾದ್ದಿಲ್ಲ. ಅವರ ಬಗೆಬಗೆಯ ಕಲಾಕೌಶಲವನ್ನು ಮೆಚ್ಚಿ ಉತ್ತೇಜನ ಪಡೆದು. ತನ್ನಲ್ಲೇ ಹೊಮ್ಮಿದ ಸ್ವಂತಿಕೆಯನ್ನು ರೂಢಿಸಿಕೊಂಡು ತನ್ನದೇ ಆದ ಸ್ಥಾನಮಾನಕ್ಕೆ ಯೋಗ್ಯನಾಗಬೇಕು. ವ್ಯಕ್ತಿತೇಜಸ್ಸು, ಸ್ವಂತಿಕೆ ಎಂಬ ಶಬ್ದಗಳಿಗೆ ಇದೇ ತಾತ್ಪರ್ಯ.

ಕಲಾವಸ್ತು ರಚನೆಗೆ ಕೈಹಾಕುವ ಮುನ್ನ ಕಲೆಗಾರ ತನ್ನ ಮನಸ್ಸನ್ನೂ ಹೃದಯವನ್ನೂ ಚೊಕ್ಕಟಗೊಳಿಸಿಕೊಂಡು ನಿರ್ಮಲವೂ ಉದಾತ್ತವೂ ಆದ ಉದ್ದೇಶ ತನ್ನನ್ನು ನಡೆಸಿಕೊಳ್ಳುವಂತೆ ಅತ್ಯಂತ ಜಾಗ್ರತನಾಗಬೇಕು. ಯಾರೋ ಒಬ್ಬರ ಅಪ್ಪಣೆಯನ್ನು ಶಿರಸಾವಹಿಸಿಯೋ ಹಣ ಸಂಪಾದನೆಗೋಸ್ಕರವೋ ಬೇರೊಬ್ಬ ಕಲೆಗಾರನ ಮೇಲಣ ಹುರುಡಿನ ಪೈಪೋಟಿಯಿಂದಲೋ, ಕೀರ್ತಿಕಾಮನೆಯ ಒತ್ತಾಯಕ್ಕೆ ಸಿಕ್ಕಿಯೋ ಕಾವ್ಯ, ಶಿಲ್ಪ ಅಥವಾ ಚಿತ್ರಣಕ್ಕೆ ಆತುರಗೊಂಡರೆ ಪರಿಣಾಮ ಸೊಗಸಾಗದು. ಹಾಗಾದರೆ ಕಲೆಯ ಕಾರ್ಯ ತೀರ ಉದ್ದೇಶರಹಿತವೇ? ಸ್ಪಷ್ಟವಾಗಿ ಉದ್ದೇಶವೆಂದು ಕರೆಯಲಾಗದ ಸಂಕಲ್ಪ ಒಂದಿದೆ; ಅದೇ ಕಲೆಗಾರನಿಗೆ ಚಾಲಕಶಕ್ತಿ. ಅವನಿಗೆ ಆದ ಭಾವಾವೇಶ, ಅವನ ದೃಷ್ಟಿಗೆ ಗೋಚರಿಸಿದ ದರ್ಶನ_ಇವು ಕಲೆಗಾರನ ಆಂತರ್ಯದಲ್ಲಿ ಕೂಡಿಕೊಂಡು ಅವನ ಎದೆಯ ಮೇಲೆ ಯಾವುದೋ ಭಾರವನ್ನಿಟ್ಟಂತೆ, ಕಷ್ಟಕರವಾಗುತ್ತದೆ. ಆ ಹೊರೆಯನ್ನು ಇಳಿಸಿಕೊಳ್ಳದಿದ್ದರೆ ಅವನಿಗೆ ಆತಂಕ, ಕಳವಳ, ಕಷ್ಟಗಳಿಂದ ವಿಮೋಚನೆಯಿಲ್ಲ. ಒಂದು ಕಲಾಕೃತಿಯನ್ನು ಏಕಾಗ್ರತೆಯಿಂದ ಶಕ್ತಿಯುಕ್ತಿ ಎಲ್ಲವನ್ನೂ ಉಪಯೋಗಿಸಿಕೊಂಡು ನಿರ್ಮಾಣ ಮಾಡಿದ ಕೂಡಲೇ ಅವನಿಗೆ ನೆಮ್ಮದಿ. ಆದ್ದರಿಂದ ಅವನಿಗೆ ದ್ರವ್ಯ ಯಶಸ್ಸು ಇತ್ಯಾದಿ ಲೌಕಿಕ ಪ್ರಯೋಜನ ಲಭಿಸಬಹುದು. ಅದೆಲ್ಲ ಅವನ ಕಲಾಸಂಕಲ್ಪಕ್ಕೆ ಹೊರತಾದ ಗೌಣ ವಿಚಾರ.

ಪ್ರತಿಯೊಂದು ಲಲಿತಕಲೆಗೂ ಅದರವೇ ಆದ ಸಾಮಾನು ಸಲಕರಣೆ ಸಾಧನಗಳು ಗೊತ್ತಾಗಿವೆ. ಸಂಗೀತಗಾರನಿಗೆ ಸ್ವರ ಅಥವಾ ವಾದ್ಯದ ಮೂಲಕವೂ ಶಿಲ್ಪಿಗೆ ಶಿಲೆ, ಮರ, ಚಾಣ, ಕೊಡತಿ ಮುಂತಾದವುಗಳ ಮೂಲಕವೂ ಕವಿಗೆ ಭಾವ, ಭಾವನೆ, ಪದಜಾಲಗಳ ಮೂಲಕವೂ, ವ್ಯವಹಾರ. ಅವೇ ಕಲೆಗಾರನ ಒಳಗಿರುವುದನ್ನು ಹೊರತಂದು ರಸಿಕರಿಗೆ ರಸದೌತಣವೀಯುವ ವಾಹಕ ಅಥವಾ ಮಾಧ್ಯಮ. ಅವನ್ನು ಯುಕ್ತರೀತಿಯಲ್ಲಿ ಬಳಸುವುದಕ್ಕೆ ಕಲೆಗಾರನಿಗೆ ಒಳ್ಳೆಯ ಶಿಕ್ಷಣವೂ ಸಂತತ ಅಭ್ಯಾಸವೂ ಅತ್ಯಾವಶ್ಯಕ. ಯಾವ ಬಣ್ಣವನ್ನು ಎಂಥ ಕುಂಚದಿಂದ ಹೇಗೆ ಬಳಿಯಬೇಕು, ನೆರಳು-ಬೆಳಕನ್ನು ಎಷ್ಟರಮಟ್ಟಿಗೆ ವಿಂಗಡಿಸಬೇಕು_ಮುಂತಾದ ವಿವೇಚನೆ ಚಿತ್ರಗಾರನಿಗೆ ಚೆನ್ನಾಗಿ ಕಲಿತಲ್ಲದೆ ಬರುವುದಿಲ್ಲ. ಒಂದು ಅಂಕಕ್ಕೆ ಎಷ್ಟು ವಿಷಯ ಬರಬೇಕು, ಯಾವ ಪಾತ್ರ ಯಾವ ಕಾರ್ಯ ಮಾಡಬೇಕು, ಏನು ಮಾತು ಆಡಬೇಕು ಮುಂತಾದ ವಿವೇಚನೆ ನಾಟಕಕಾರನಿಗೆ ಚೆನ್ನಾಗಿ ಕಲಿತಲ್ಲದೆ ಬರುವುದಿಲ್ಲ. ಶಬ್ದಗಳನ್ನು ಅಸಮರ್ಪಕವಾಗಿ ಉಪಯೋಗಿಸಿದರೆ ಅಂಥ ಕವಿಯಿಂದ ಆಗುವುದು ಬರೀ ವ್ಯಾಕರಣದ ತಪ್ಪಲ್ಲ, ಕಲಾಧರ್ಮದ ಭಂಗ ಎಂದು ಪ್ಲೇಟೋ ಬಲು ಹಿಂದೆಯೇ ಸಾರಿದ. ಮೊದಮೊದಲು ಕಲೆಗಾರ ಸಹಿಸಬೇಕಾದ ಶ್ರಮ ಅಷ್ಟಿಷ್ಟಲ್ಲ. ಬರಬರುತ್ತ ಅವನ ಕೈ ಪಳಗಿ ಕೌಶಲ ಹೆಚ್ಚಿ ಆ ಕಷ್ಟ ಕಡಿಮೆಯಾಗುತ್ತದೆ. ಹೆಸರಾಂತ ಕಲೆಗಾರರು ಹೆಚ್ಚು ಕಡಿಮೆ ಒಮ್ಮತದಿಂದ ಒಪ್ಪಿಕೊಂಡಿರುವಂತೆ ಕಲಾಕೃತಿ ಸೃಷ್ಟಿಸುವ ಕೆಲಸದಿಂದ ಉತ್ಪನ್ನವಾಗುವ ಶ್ರಮ ದುಃಖ ಕಾರಕವಲ್ಲ, ಸುಖಕಾರಕ. ಅದು ನಲಿವು ಕೊಡುವ ನೋವು_ಎಂಬ ಹೇಳಿಕೆ ಅಂಗೀಕೃತ ತಥ್ಯವಾಗಿದೆ. ಉದಾತ್ತ ಸಂಕಲ್ಪದ ಸಾಧನೆ ಆನಂದಕ್ಕೆ ಮಾರ್ಗ.

ಕಲಾವಸ್ತುವಿನ ಸಂಪರ್ಕದಿಂದ ಜನರಿಗೆ ಏನು ಉಪಕಾರ? ಜನರನ್ನು ಸಾಮಾನ್ಯರು, ರಸಿಕರು, ವಿಮರ್ಶಕರು ಎಂದು ಮೂರು ಗುಂಪಾಗಿ ವಿಭಾಗಿಸಬಹುದು. ಉತ್ತಮ ಕಲಾವಸ್ತು ಎಲ್ಲರಿಗೂ ಚಿತ್ತಾಹ್ಲಾದ, ಮನೋವೈಶಾಲ್ಯ, ಆತ್ಮಸಂಸ್ಕಾರ_ಈ ಮೂರನ್ನೂ ಒದಗಿಸಬಲ್ಲದು. ಎಂದರೆ ಅವುಗಳ ಪರಿಮಾಣ ಸರಿಸುಮಾರಾಗಿ ಒಂದೇ ಆದರೂ ತಮ್ಮತಮ್ಮಲ್ಲಿ ಉಂಟಾದ ಕಲಾನುಭವವನ್ನು ಅರಗಿಸಿಕೊಳ್ಳುವ ಕಾರ್ಯದಲ್ಲಿ ಸಾಮಾನ್ಯರಿಗಿಂತ ರಸಿಕರು ಹೆಚ್ಚು ನಿಪುಣರು, ರಸಿಕರಿಗಿಂತ ವಿಮರ್ಶಕರು ಹೆಚ್ಚು ನಿಪುಣರು. ಕಲೆಯ ಸ್ವಾರಸ್ಯವನ್ನು ಗ್ರಹಿಸುವುದಕ್ಕೆ ಅಭಿರುಚಿಯೊಂದೇ ಸಾಲದು. ಆ ಕಲೆಗೆ ಸಂಬಂಧಿಸಿದ ಹಲವು ಮಟ್ಟದ ಪರಿಜ್ಞಾನವೂ ಬೇಕೇಬೇಕು. ಅದೂ ಅಲ್ಲದೆ ಒಂದು ವಿಗ್ರಹವನ್ನೊ ಚಿತ್ರವನ್ನೊ ಮತ್ತೆ ಮತ್ತೆ ವೀಕ್ಷಿಸಿದರೆ ಅದರ ಅಂದದ ಸ್ವರೂಪ ಹೆಚ್ಚುಹೆಚ್ಚಾಗಿ ಅರಿವಾಗುತ್ತದೆ. ಷೇಕ್ಸ್‌ಪಿಯರನ ನಾಟಕವನ್ನು ನಲವತ್ತರ ಮೊದಲು ಓದಿದರೆ ಪ್ರಯೋಜನ ಕಡಿಮೆ ಎಂಬ ನುಡಿಯಿದೆ. ಅದರಿಂದ ಕಲಾವಸ್ತು ಯಾವಾಗಲೂ ಆಮುಷ್ಮಿಕ ಫಲವನ್ನು ಒದಗಿಸುವ ಕಲ್ಪತರು. (ಎಸ್.ವಿ.ಆರ್.)