ಕಲಚೂರಿ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲಚೂರಿ ರಾಜವಂಶ ಪಶ್ಚಿಮ-ಮಧ್ಯ ಭಾರತದಲ್ಲಿ ೬ನೇ ಮತ್ತು ೭ನೇ ಶತಮಾನಗಳ ನಡುವೆ ಆಳಿದ ಒಂದು ಭಾರತೀಯ ರಾಜವಂಶವಾಗಿತ್ತು. ಇವರನ್ನು ಇವರ ನಂತರದ ಸಮಾನ ನಾಮಧಾರಿಗಳಿಂದ ಭೇದ ಮಾಡಲು ಇವರನ್ನು ಹೈಹಯರು ಅಥವಾ ಮುಂಚಿನ ಕಲಚೂರಿಗಳು ಎಂದೂ ಕರೆಯಲಾಗುತ್ತದೆ.

ಕಲಚೂರಿ ಪ್ರಾಂತ್ಯ ಇಂದಿನ ಗುಜರಾತ್, ಮಧ್ಯ ಪ್ರದೇಶ, ಮತ್ತು ಮಹಾರಾಷ್ಟ್ರದ ಭಾಗಗಳನ್ನು ಒಳಗೊಂಡಿತ್ತು. ಇವರ ರಾಜಧಾನಿ ಬಹುಶಃ ಮಾಹಿಷ್ಮತಿಯಲ್ಲಿ ಸ್ಥಿತವಾಗಿತ್ತು. ಎಲ್ಲೋರಾ ಮತ್ತು ಎಲಿಫೆಂಟಾ ಗುಹಾ ರಚನೆಗಳಲ್ಲಿ ಅತ್ಯಂತ ಮುಂಚಿನವು ಕಲಚೂರಿ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟಿದ್ದವು ಎಂದು ಶಿಲಾಶಾಸನ ಮತ್ತು ನಾಣ್ಯಶಾಸ್ತ್ರೀಯ ಸಾಕ್ಷ್ಯಗಳು ಸೂಚಿಸುತ್ತವೆ.

ಈ ರಾಜವಂಶದ ಮೂಲ ಅನಿಶ್ಚಿತವಾಗಿದೆ. ೬ನೇ ಶತಮಾನದಲ್ಲಿ, ಕಲಚೂರಿಗಳು ಹಿಂದೆ ಗುಪ್ತರು, ವಾಕಾಟಕರು ಮತ್ತು ವಿಷ್ಣುಕುಂದಿನರಿಂದ ಆಳಲ್ಪಡುತ್ತಿದ್ದ ಪ್ರಾಂತ್ರ್ಯಗಳ ನಿಯಂತ್ರಣ ಪಡೆದರು. ಶಾಸನಗಳ ಸಾಕ್ಷ್ಯದಿಂದ ಕೇವಲ ಮೂರು ಕಲಚೂರಿ ರಾಜರು ಪರಿಚಿತರಿದ್ದಾರೆ: ಶಂಕರಗಣ, ಕೃಷ್ಣರಾಜ, ಮತ್ತು ಬುದ್ಧರಾಜ. ೭ನೇ ಶತಮಾನದಲ್ಲಿ ಕಲಚೂರಿಗಳು ತಮ್ಮ ಅಧಿಕಾರವನ್ನು ವಾತಾಪಿ ಚಾಳುಕ್ಯರಿಗೆ ಕಳೆದುಕೊಂಡರು. ಒಂದು ಸಿದ್ಧಾಂತವು ತ್ರಿಪುರಿ ಮತ್ತು ಕಲ್ಯಾಣಿಯ ನಂತರದ ಕಲಚೂರಿ ರಾಜವಂಶಗಳನ್ನು ಮಾಹಿಷ್ಮತಿಯ ಕಲಚೂರಿಗಳಿಗೆ ಸಂಬಂಧಿಸುತ್ತದೆ.

ಕಲಚೂರಿ ಶಾಸನಗಳ ಪ್ರಕಾರ, ಈ ರಾಜವಂಶ ಉಜ್ಜಯಿನಿ, ವಿದೀಶಾ ಮತ್ತು ಆನಂದಪುರವನ್ನು ನಿಯಂತ್ರಿಸುತ್ತಿತ್ತು. ಮಾಲ್ವಾ ಪ್ರದೇಶದಲ್ಲಿದ್ದ ಮಾಹಿಷ್ಮತಿ ಇವರ ರಾಜಧಾನಿಯಾಗಿತ್ತು ಎಂದು ಸಾಹಿತ್ಯಿಕ ಉಲ್ಲೇಖಗಳು ಸೂಚಿಸುತ್ತವೆ.[೧] ಈ ರಾಜವಂಶ ವಿದರ್ಭವನ್ನೂ ನಿಯಂತ್ರಿಸುತ್ತಿತ್ತು, ಇದನ್ನು ಇವರು ವಾಕಾಟಕ ಮತ್ತು ವಿಷ್ಣುಕುಂದಿನ ರಾಜವಂಶಗಳ ನಂತರ ಪಡೆದುಕೊಂಡರು. ಜೊತೆಗೆ ಕಲಚೂರಿಗಳು ಉತ್ತರ ಕೊಂಕಣವನ್ನು (ಎಲಿಫೆಂಟಾ ಸುತ್ತ) ೬ನೇ ಶತಮಾನದ ಮಧ್ಯದ ವೇಳೆಗೆ ವಶಪಡಿಸಿಕೊಂಡರು. ಇಲ್ಲಿ, ಅವರು ತ್ರೈಕೂಟಕ ರಾಜವಂಶದ ನಂತರ ಬಂದರು.

ಕೃಷ್ಣರಾಜನ ಬೆಳ್ಳಿ ನಾಣ್ಯ

ಕೃಷ್ಣರಾಜನು (ಸು. 550-575) ಈ ರಾಜವಂಶದ ಪರಿಚಿತವಿರುವ ಅತ್ಯಂತ ಮುಂಚಿನ ರಾಜ. ಇವನು ಬ್ರಾಹ್ಮಿ ಲಿಪಿಯ ಆಲೇಖಗಳಿರುವ ನಾಣ್ಯಗಳನ್ನು ಹೊರಡಿಸಿದ. ಇವು ತ್ರೈಕೂಟಕ ಮತ್ತು ಗುಪ್ತ ರಾಜರು ಹೊರಡಿಸಿದ ಮುಂಚಿನ ನಾಣ್ಯಗಳ ವಿನ್ಯಾಸವನ್ನು ಅನುಕರಿಸಿದ್ದವು. ಗೂಳಿಯನ್ನು ಹೊಂದಿರುವ ಇವನ ನಾಣ್ಯಗಳು ಸ್ಕಂದಗುಪ್ತನು ಹೊರಡಿಸಿದ ನಾಣ್ಯಗಳನ್ನು ಆಧರಿಸಿವೆ. ಇವನ ಬೆಳ್ಳಿ ನಾಣ್ಯಗಳು ಇವನ ಆಳ್ವಿಕೆಯ ನಂತರ ಸುಮಾರು ೧೫೦ ವರ್ಷಗಳವರೆಗೆ ವ್ಯಾಪಕವಾಗಿ ಪ್ರಸಾರದಲ್ಲಿದ್ದವು. ಕೃಷ್ಣರಾಜನ ನಾಣ್ಯಗಳು ಅವನನ್ನು ಪರಮ ಮಹೇಶ್ವರನೆಂದು ವರ್ಣಿಸುತ್ತವೆ. ಬಾಲ್ಯದಿಂದ ಅವನು ಪಶುಪತಿಯ ಭಕ್ತನಾಗಿದ್ದನು ಎಂದು ಅವನ ಮಗ ಶಂಕರಗಣನ ಒಂದು ಶಾಸನ ಹೇಳುತ್ತದೆ. ಇವನು ಎಲಿಫೆಂಟಾ ಗುಹೆಗಳಲ್ಲಿನ ಶೈವ ಶಿಲಾರಚನೆಗಳು ಮತ್ತು ಎಲ್ಲೋರಾದಲ್ಲಿನ ಬ್ರಾಹ್ಮಣ ಗುಹೆಗಳ ಅತ್ಯಂತ ಮುಂಚಿನವುಗಳ ರಚನಾಕಾರ್ಯವನ್ನು ನಿಯೋಜಿಸಿದ್ದನು ಎಂದು ಐತಿಹಾಸಿಕ ಸಾಕ್ಷ್ಯಗಳು ಸೂಚಿಸುತ್ತವೆ. ಇಲ್ಲಿ ಇವನ ನಾಣ್ಯಗಳು ಪತ್ತೆಯಾಗಿವೆ.[೨][೩]

ಉಲ್ಲೇಖಗಳು[ಬದಲಾಯಿಸಿ]

  1. Charles Dillard Collins 1988, p. 9.
  2. Charles Dillard Collins 1988, pp. 9–10.
  3. Geri Hockfield Malandra 1993, p. 6.