ಕರ್ನಾಟಕ ಜನಪದ ಸಂಗೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕರ್ನಾಟಕ ಜನಪದ ಸಂಗೀತ : ಜನಪದ ಸಂಗೀತದ ವೈವಿಧ್ಯ, ಪ್ರಾಶಸ್ತ್ಯ, ಸೊಗಸು, ರೀತಿನೀತಿಗಳನ್ನು ಕುರಿತು ಇಲ್ಲಿ ಸಮಾಲೋಚಿಸಲಾಗಿದೆ. ಇಂದಿಗೂ ಹಳ್ಳಿಗಳಲ್ಲಿ ಮುಂಜಾನೆ ಹೆಣ್ಣುಮಕ್ಕಳು ರಾಗಿ ಬೀಸುತ್ತ ‘ಏಳುತಲೆ ನಾನೆದ್ದು ಯಾರ್ಯಾರ ನೆನೆಯಾಲಿ ಎಳ್ಳುಜೀರಿಗೆ ಬೆಳಿಯೋಳ- ಭೂತಾಯ ಎದ್ದೊಂದು ಗಳಿಗೆ ನೆನೆದೇನು’ ಎಂದು ಹಾಡಲು ಮೊದಲು ಮಾಡುತ್ತಾರೆ. ತಂಬೂರಿ ಹಿಡಿದ ಹರಿದಾಸರು ‘ಏಳು ನಾರಾಯಣ ಏಳು ಲಕ್ಷ್ಮೀರಮಣ’ ಎಂದು ಸುಪ್ರಭಾತ ಹಾಡಿಕೊಂಡು ಬರುತ್ತಾರೆ. ಏಕನಾದ ಹಿಡಿದ ಜಂಗಮಯ್ಯಗಳು ‘ನಂಬಿ ಕರೆದೆಡೆ ಓ ಎಂಬ ಶಿವನು’ ಎಂಬ ವಚನ ಹಾಡಿಕೊಂಡು ಬೀದಿಯಲ್ಲಿ ಅಡ್ಡಾಡುತ್ತಾರೆ. ತಾಯಂದಿರು ಎಳೆ ಮಗುವನ್ನು ಮಲಗಿಸುವಾಗ ‘ಯಾಕಳುವೆ ಎಲೆ ರಂಗ ಬೇಕಾದ್ದು ನಿನಗಿದೆ ನಾಕೆಮ್ಮೆ ಕರೆದ ನೊರೆಹಾಲುಸಕ್ಕರೆ ನೀ ಕೇಳಿದಾಗ ನಾ ಕೊಡುವೆ ಎಂದು ಜೋ ಜೋ ಜೋಗುಳವನ್ನು ಇಂಪಾಗಿ ಹಾಡಿ ಕೂಸನ್ನು ನಿದ್ದೆ ಹೋಗಿಸುತ್ತಾರೆ. ಬೆಳಗಿನಿಂದ ರಾತ್ರಿ ಮಲಗುವವರೆಗೂ ಧಾರ್ಮಿಕ ಲೌಕಿಕ ಕಾರ್ಯಗಳೆರಡಕ್ಕೂ ಸಮಯೋಚಿತ ಹಾಡುಗಳು ಇದ್ದೇ ಇವೆ. ಸಂಪ್ರದಾಯವಾಗಿ, ವಂಶಪಾರಂಪರ್ಯವಾಗಿ ಇವು ಬೆಳೆದು ಬಂದಿವೆ. ರೇಡಿಯೊ, ಸಿನಿಮಾಗಳು ಬಂದ ಮೇಲೆಯೂ ಪಟ್ಟಣದವರು ಈ ಬಗೆಯ ಹಾಡುಗಳನ್ನು ಕೇಳುವ ಆಸಕ್ತಿ ತೋರುತ್ತಿದ್ದಾರೆ.

ಶತಮಾನಗಳಿಂದ, ಬಾಯಿಂದ ಬಾಯಿಗೆ ಬಂದ ಹಳ್ಳಿಹಾಡು ಸರಳ, ಅತಿ ಮನೋಹರ, ಕಲಿಯಲು ಸುಲಭ. ಶಾಸ್ತ್ರೀಯ ಸಂಗೀತದ ಕಷ್ಟ ಇದಕ್ಕಿಲ್ಲ. ನಾಲ್ಕು ಬಾರಿ ಕೇಳಿದಲ್ಲಿ ಬಂದೇ ಬಿಡುವುದು. ಜನಸಾಮಾನ್ಯರು ಆಡುವ, ಅತಿ ಬಳಕೆಯಲ್ಲಿರುವ, ಪದಗಳನ್ನೇ ಉಪಯೋಗಿಸಿಕೊಂಡು ಮಲ್ಲಿಗೆಮೊಗ್ಗುಕಟ್ಟಿದಂತೆ ಇದನ್ನು ಕಟ್ಟಿರುವರು. ಯಾರು ರಚಿಸಿದರೋ ಎಂದು ರಚಿಸಿದರೋ ಒಬ್ಬರೇ ಬರೆದರೋ ಖಂಡಿತವಾಗಿ ಹೇಳುವುದಕ್ಕೆ ಆಧಾರ ಸಾಲದು. ಗಂಡಸರೂ ಕಟ್ಟಿರಬಹುದು, ಹೆಂಗಸರೂ ಕಟ್ಟಿರಬಹುದು, ಓದು ಬರೆಹ ಬಾರದವರೂ ಕಟ್ಟಿರಬಹುದು. ಪಾಮರರು ಹಾಡಿಕೊಳ್ಳಲಿ ಎಂದು ಕೊನೆಗೆ ಒಳ್ಳೆಯ ಪಂಡಿತರು ರಚಿಸಿದವೂ ಇಲ್ಲಿ ಸೇರಿರಬಹುದು. ಆಯಾ ಬುಡಕಟ್ಟಿನ ಆಯಾ ಪ್ರದೇಶದ ಜನಜೀವನದ ಎಲ್ಲ ಸಂದರ್ಭಕ್ಕೆ ಸೂಕ್ತವಾದ ಸಂಗೀತವನ್ನಿಲ್ಲಿ ಸಾದರಪಡಿಸಲಾಗಿದೆ. ಕೇವಲ ಓದಿಕೊಂಡಾಗ ಸಾಹಿತ್ಯ ಸಪ್ಪೆ ಎನಿಸಿದರೂ ಹಾಡಿದಾಗ ಮೈಮರೆವಂತಾಗುತ್ತದೆ, ರೋಮಾಂಚನವಾಗುತ್ತದೆ. ಒಮ್ಮೊಮ್ಮೆ ಜಗತ್ತಿನ ಶ್ರೇಷ್ಠ ಕವಿತೆಗೂ ಸಮತೂಗುವ ಭಾವನೆ, ಉಪಮೆ, ಅಲಂಕಾರವಸ್ತು ಇವುಗಳಲ್ಲಿ ಸಿಗುತ್ತವೆ. ಹಲಕೆಲವು ಅಶ್ಲೀಲ ಕೃತಿಗಳೆಂದು ಕಂಡುಬಂದರೂ ದನಿ ಎತ್ತಿದಾಗ ಮಹಾ ಒರಟು ಎಂದು ಕಿವಿಗೆ ಅನಿಸಿದರೂ ಕ್ಷಣಾರ್ಧದಲ್ಲಿ ಸನಾತನ ಗ್ರಾಮ್ಯಸೌಂದರ್ಯದ ಸತ್ಯಾಂಶದ ಗಂಗೆ ಭೋರ್ಗರೆದು ಹರಿದು ಬಂದ ಅನುಭವವಾಗುತ್ತದೆ. ಹಳ್ಳಿಯ ಸಮಸ್ತರೂ ಇದರ ಬೆಳವಣಿಗೆಗೆ ಪೋಷಕರಾಗಿದ್ದಾರೆ. ಸಕಲರ ಹಿತಕ್ಕಾಗಿ ಸಕಲರ ಆನಂದಕ್ಕಾಗಿ, ಸರ್ವತೋಮುಖವಾಗಿ ರಚನೆಯಾದ ಸಾಹಿತ್ಯಸಂಗೀತವಿದು. ಗಂಡಸರು ಹಾಡುವ ಪದಗಳೇ ಬೇರೆ. ಹೆಂಗಸರು ಹಾಡುವ ಪದಗಳೇ ಬೇರೆ. ಕೂಡಿ ಹಾಡುವ ಪದಗಳೇ ಬೇರೆ. ಗುಂಪು ಗುಂಪಾಗಿ, ತಂಡತಂಡವಾಗಿ ಹಾಡುವ ಪದಗಳೇ ಬೇರೆ. ಒಬ್ಬರೇ ಹಾಡುವ ಪದ ಬೇರೆ. ಸಾಮಾನ್ಯವಾಗಿ ಲಾವಣಿ, ಕೋಲಾಟದ ಪದ, ಬಂಡಿಪದ, ಕಂಸಾಳೆ ಪದ, ಕೊಡಗರ ಬೊಳಕಾಟದ ಪದ, ಕಾಡು ಜನರ ಪದ, ಸೋಲಿಗರ ಪದ- ಇವುಗಳಲ್ಲಿ ಕೇವಲ ಗಂಡಸರೇ ಭಾಗವಹಿಸುವರು. ಹೆಣ್ಣುಮಕ್ಕಳು ತ್ರಿಪದಿ, ಸಾಂಗತ್ಯ, ಜೋಗುಳ, ಸುವ್ವಿ ಪದ, ಸೋಭಾನೆ, ಕಳೆ ಕೀಳುವ ಪದ- ಮೊದಲಾದವನ್ನು ಹಾಡುತ್ತಾರೆ. ಇವುಗಳಲ್ಲದೆ ಡೊಳ್ಳಿನ ಪದ, ಹಂತಿ ಪದ, ಹಚ್ಚೆಯ ಪದ, ಕುಟ್ಟೋ ಪದ, ತಿಂಗಳುಮಾವನ ಪದ, ಬೀಗಿತಿ ಪದ, ಏಲ ಪದ, ಉರುಟಣೆ ಪದ, ಎಣ್ಣೆ ಒತ್ತೋ ಪದ, ಮಾರಿ ಪದ, ಬೇಟೆ ಪದ, ಸುಗ್ಗಿ ಪದ, ಮಕ್ಕಳ ಪದ, ದಾಸರ ಪದ, ತತ್ತ್ವದ ಪದ, ಬಯಲಾಟದ ಪದ, ಭೂತನ ಪದ ಮತ್ತು ಓಬೇಲೆ ಪದಗಳೂ ಉಂಟು.