ಕರ್ನಾಟಕ ಗ್ರಂಥಮಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಕರ್ನಾಟಕ ಗ್ರಂಥಮಾಲೆ : ಮೈಸೂರಿನಿಂದ ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಸುಮಾರು 1893ರ ಹೊತ್ತಿಗೆ ಪ್ರಕಟಣೆ ಪ್ರಾರಂಭಿಸಿ ಇಪ್ಪತ್ತನೆಯ ಶತಮಾನದ ಮೂರನೆಯ ದಶಕದ ಮಧ್ಯದವರೆಗೆ ನಡೆದು ಸುಮಾರು ಮೂರು ದಶಕಗಳವರೆಗೆ ಕನ್ನಡ ಸಾಹಿತ್ಯಸೇವೆ ಸಲ್ಲಿಸಿದ ಒಂದು ಮಾಸಪತ್ರಿಕೆ.

ಹೆಸರೇ ಹೇಳುವಂತೆ ಇದು ಗ್ರಂಥಗಳ ಮಾಲೆ. ಪ್ರತಿಯೊಂದು ಸಂಚಿಕೆಯಲ್ಲಿಯೂ ನಾಟಕ, ಕಾದಂಬರಿಗಳ ಒಂದೊಂದು ಭಾಗವನ್ನೂ ಸಾಮಾಜಿಕ ಆಧ್ಯಾತ್ಮಿಕ ಗ್ರಂಥಗಳ ಭಾಗಗಳನ್ನೂ ಪ್ರತಿ ತಿಂಗಳೂ ಕ್ರಮವಾಗಿ ಪ್ರಕಟಿಸಲಾಗುತ್ತಿತ್ತು. ಅಲ್ಲದೆ ಅನೇಕ ಸಂಸ್ಕೃತ ಗ್ರಂಥಗಳ ಅನುವಾದಗಳನ್ನು ಟಿಪ್ಪಣಿಗಳೊಂದಿಗೆ ಅನುಕ್ರಮವಾಗಿ ಕೊಡಲಾಗುತ್ತಿತ್ತು. ಕಾದಂಬರಿಗಳಿಗೂ ಅವಶ್ಯವಾದ ಅಡಿಟಿಪ್ಪಣಿ ಒದಗಿಸುವ ಪದ್ಧತಿ ಇಲ್ಲಿ ಕಂಡುಬರುತ್ತದೆ. ಸಂಚಿಕೆಯಲ್ಲಿ ಆಯಾ ಗ್ರಂಥಗಳ ಕ್ರಮವಾದ ಪುಟಸಂಖ್ಯೆ ಹಾಕುವ ಏರ್ಪಾಡಿತ್ತು. ಬಿಡಿ ಬಿಡಿಯಾಗಿ ಸಂಚಿಕೆಗಳಲ್ಲಿ ಬಂದ ಗ್ರಂಥಭಾಗಗಳನ್ನೆಲ್ಲ ಕೂಡಿಸಿ ಒಟ್ಟುಗೊಳಿಸಿಕೊಳ್ಳುವುದಕ್ಕೆ ಓದುಗರಿಗೆ ಸೌಲಭ್ಯ ಕಲ್ಪಿಸುವುದು ಈ ಕ್ರಮದ ಉದ್ದೇಶ. ಪ್ರಕಟವಾದ ಲೇಖನ ಮತ್ತು ಗ್ರಂಥಗಳನ್ನು ಗಮನಿಸಿದಾಗ ವಿದ್ವಾಂಸರಿಗೆ ಪ್ರಾಧಾನ್ಯವಿರುವುದು ಕಂಡುಬರುತ್ತದೆ. ಪ್ರತಿ ಸಂಚಿಕೆಯೂ ರಾಯಲ್ ಆಕಾರದ 92 ಪುಟಗಳನ್ನು ಒಳಗೊಂಡಿರುತ್ತಿತ್ತು. ಬಿಡಿ ಸಂಚಿಕೆಯ ಬೆಲೆ 4 ಆಣೆ. ವಾರ್ಷಿಕ ಚಂದಾ ಅಂಚೆ ಹಾಸಲು ಸೇರಿಸಿ ರೂ 2- 8-0. ಸಂಪಾದಕರು, ಪ್ರಕಾಶಕರು, ವ್ಯವಸ್ಥಾಪಕರು: ಬಿ. ಸುಬ್ಬರಾವ್, ಮೈಸೂರಿನ ಜಿ.ಟಿ.ಎ. ಪ್ರೆಸ್ಸಿನಲ್ಲಿ ಇದು ಮುದ್ರಣವಾಗುತ್ತಿತ್ತು. ಅನೇಕ ಉತ್ತಮ ಗ್ರಂಥಗಳನ್ನು ಪ್ರಕಟಗೊಳಿಸಿದ ಕೀರ್ತಿ ಇದರದು.