ಕರ್ಣ (ಸೇವುಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಣ (ಸೇವುಣ)ದೇವಗಿರಿಯ ಸೇವುಣ ರಾಜವಂಶದ ಐದನೆಯ ಭಿಲ್ಲಮನ (1173-1192) ತಂದೆಯೆಂದು ಹೇಳಲಾಗಿದೆ. ಇವನ ವಿಷಯವಾಗಿ ಹೆಚ್ಚಿನ ವಿವರಗಳೇನೂ ತಿಳಿದುಬಂದಿಲ್ಲ. ಹೇಮಾದ್ರಿಯ ಚತುರ್ವರ್ಗ ಚಿಂತಾಮಣಿ ಗ್ರಂಥದಲ್ಲಿರುವ ಸೇವುಣರ ರಾಜಪ್ರಶಸ್ತಿಯಲ್ಲಿ ಇವನ ಹೆಸರು ಕಾಣಬರುವುದಿಲ್ಲ. ಆದರೆ ಐದನೆಯ ಭಿಲ್ಲಮನಿಂದಲೇ ಹೊರಡಿಸಲಾದ ಗದಗ್ ಶಾಸನದಲ್ಲಿ ಈತ ಭಿಲ್ಲಮನ ತಂದೆಯೆಂದು ಹೇಳಿದೆ. ಮೇಥಿ ಮತ್ತಿತರ ಶಾಸನಗಳಲ್ಲಿ ಇವನ ಹೆಸರು ಕೃಷ್ಣ ಎಂದಿದೆ. ಈ ಎಲ್ಲ ಅಂಶಗಳನ್ನೂ ಗಮನಿಸಿ ಕೆಲವು ಚರಿತ್ರಕಾರರು ಕರ್ಣನನ್ನು ಸೇವುಣರ ವಂಶವೃಕ್ಷದಲ್ಲಿ ಕೈಬಿಟ್ಟಿದ್ದಾರೆ. ಕರ್ಣ ರಾಜ್ಯಭಾರ ಮಾಡಿದಂತೆ ಕಾಣುವುದಿಲ್ಲ. ಎರಡನೆಯ ಮಲ್ಲುಗಿಯ ಅನಂತರ ಐದನೆಯ ಭಿಲ್ಲಮ ರಾಜ್ಯಭಾರ ಮಾಡಿದನೆಂದು ಸ್ಪಷ್ಟವಾಗುತ್ತದೆ. ಭಿಲ್ಲಮ ಮಲ್ಲುಗಿಯ ಮಗನೆಂದೇ ಪಿ. ಬಿ. ದೇಸಾಯಿ ಸಂಪಾದಿತ ಎ ಹಿಸ್ಟರಿ ಆಫ್ ಕರ್ನಾಟಕದಲ್ಲೂ ಹೇಳಲಾಗಿದೆ. ಕರ್ಣ ರಾಜ್ಯಭಾರವನ್ನು ವಹಿಸಿಕೊಳ್ಳುವ ಮೊದಲೇ ಮರಣ ಹೊಂದಿರಬೇಕು ಎಂಬುದೂ ಒಂದು ಊಹೆ.