ಕರುಳುವಾಳುರಿತ(ಅಪೆಂಡಿಕ್ಸ್‌)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
Acute Appendicitis.jpg

ಕರುಳುವಾಳುರಿತ (ಅಪೆಂಡಿಕ್ಸ್‌): ಸಣ್ಣ ಕರುಳೂ ದೊಡ್ಡಕರುಳೂ ಕೂಡುವೆಡೆ ಮೋಟು ಬಾಲದಂತಿರುವ ಕರುಳುವಾಳದಲ್ಲಿ (ಅಪೆಂಡಿಕ್ಸ್‌) ಆಗುವ ಉರಿತ (ಅಪೆಂಡಿಸೈಟಿಸ್). ಇದರೊಂದಿಗೆ ಒಳಗಡೆ ತಡೆಯಾಗಿರಲೂಬಹುದು ಇಲ್ಲದಿರಲೂಬಹುದು.

ಪ್ರಾಚೀನ ಕಾಲದಲ್ಲಿ[ಬದಲಾಯಿಸಿ]

ಪ್ರಾಚೀನ ಈಜಿಪ್ಷಿಯನರಲ್ಲಿ ಮಮ್ಮಿಗಳಾಗಿ ಹೆಣಗಳನ್ನು ಶತಮಾನಗಳ ಕಾಲ ಕೆಡದಂತಿರಿಸುವವರಿಗೆ ಕರುಳುವಾಳ ಗೊತ್ತಿತ್ತು. ಲಿಯೋನಾರ್ಡೊ ಡ ವಿಂಚಿ ಇದನ್ನು ಚಿತ್ರಿಸಿ ವಿವರಿಸಿದ್ದ. ಕರುಳುವಾಳುರಿತವನ್ನು ಸತ್ತ ರೋಗಿಯಲ್ಲಿ ಹೀಸ್ಟರ್ ಮೊಟ್ಟಮೊದಲು ಕಂಡು ಗುರುತಿಸಿ ವರದಿ ಮಾಡಿದವ (1755). ಇದಕ್ಕೆ ಮೊದಲು ಚಿಕಿತ್ಸೆ ಮಾಡಿದ ಕ್ಲಾಡಿಯಸ್ (1735). ಕರುಳುವಾಳುರಿತದ ಗುಣಲಕ್ಷಣಗಳು 19ನೆಯ ಶತಮಾನದ ಕೊನೆಯೆರಡು ದಶಕಗಳ ತನಕ ಸರಿಯಾಗಿ ತಿಳಿದಿರಲಿಲ್ಲ.

ರೋಗದ ಕುರಿತು[ಬದಲಾಯಿಸಿ]

ಬೇರೆ ರೋಗಗಳೊಂದಿಗೆ ಹೋಲಿಸಿದರೆ ಇದನ್ನು ಒಂದು ಸಾಮಾನ್ಯ ರೋಗ ಎನ್ನಬಹುದು. ಇಂಗ್ಲೆಂಡಿನಲ್ಲಿ 200 ಮಂದಿಗೊಬ್ಬರು ಈ ರೋಗಕ್ಕೆ ಬಲಿಯಾಗುವರು. ಹೆಂಗಸರಿಗಿಂತ ಗಂಡಸರಲ್ಲೇ ಹೆಚ್ಚು. ಪ್ರೋಟೀನುಗಳೇ ಬಹುವಾಗಿದ್ದು ರಕ್ತಗತವಾಗದೆ, ಅರಗದೆ ಉಳಿದ ಪದಾರ್ಥಗಳು ಆಹಾರದಲ್ಲಿ ಹೆಚ್ಚಿದ್ದರೆ ಕರುಳುವಾಳುರಿತ ಆಗುವುದೆಂದೂ ಆಹಾರದಲ್ಲಿ ನಾರಿನಂಥ ಮರದೆಳೆ (ಸೆಲ್ಯುಲೋಸ್) ಹೆಚ್ಚಿಗಿದ್ದರೆ ಈ ರೋಗ ಬಾರದೆಂದೂ ಅಭಿಪ್ರಾಯವಿದೆ. ಯಾವ ವಯಸ್ಸಿನವರಿಗಾದರೂ ಇದು ಬರುವುದಾದರೂ 2 ವರ್ಷಗಳ ಕೆಳಗೂ 40 ಮೀರಿದವರಲ್ಲೂ ಬರುವುದು ಕಡಿಮೆ.

ಕರುಳುವಾಳದಲ್ಲಿ ಹಾಲು ರಸ (ಲಿಂಫ್) ಊತಕಗಳು ತುಂಬ ಇರುವುದರಿಂದ ಮೆಂಡಿಕೆಯಂತೆ (ಟಾನ್ಸಿಲ್) ಇದಕ್ಕೂ ಆಗಾಗ್ಗೆ ಸೋಂಕು ಹತ್ತಿ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಇದೊಂದು ಸಣ್ಣ ಕೊಳವೆಯಂತೆ ಇರುವುದರಿಂದ ಹಾಲು ರಸ ಊತಕ ಊದಿಕೊಂಡರೆ, ಹೆರ ವಸ್ತುಗಳೋ ಹುಳು, ಕ್ರಿಮಿಗಳೋ ಒಳಸೇರಿ ಸಿಕ್ಕಿಕೊಂಡರೆ ಕರುಳುವಾಳಕ್ಕೆ ಬಿರಟೆ ಹಾಕಿ ಮುಚ್ಚಿ ತಡೆದಂತಾಗುವುದು. ಇಲ್ಲಿನ ಸೊಂಕುಗಳಿಗೆ ಮುಖ್ಯ ಕಾರಕಗಳು ಕರುಳು ಕಾಯ್ಜೀವಿಗಳು (ಎಂಟ ರೋಕಾಕೈ), ಸರಕಾಯ್ಜೀವಿಗಳು (ಸ್ಟ್ರೆಪ್ಟೊಕಾಕೈ).

ಕರುಳುವಾಳುರಿತದಲ್ಲಿ ಒಳಗಿನ ಲೋಳೆಪೊರೆ ಬಿರಿದು ಸೋಂಕುಹತ್ತಿರುವುದು. ಇದರಿಂದೇಳುವ ಹೊಟ್ಟೆನೋವಿನ ಜೋರು, ಒಳಗಡೆ ಕರುಳುವಾಳಕ್ಕೆ ತಡೆ ಆಗಿರುವುದೋ ಇಲ್ಲವೋ ಎನ್ನುವಂತಿರುವುದು. ತಡೆ ಆಗಿಲ್ಲವಾದರೆ, ಒಳಗಿನ ಉರಿತ ತಾನಾಗಿ ಶಮನವಾಗಿ ಇಳಿದುಹೋಗಬಹುದು. ಆದರೆ ಉರಿತ ಕೇವಲ ಲೋಳೆ ಪೊರೆಯಲ್ಲೇ ಉಳಿಯದೆ ಉಳಿದ ಪದರಗಳಿಗೂ ಹರಡಬಹುದು. ಆಗ ಇಡೀ ಕರುಳುವಾಳ ದಪ್ಪಗೆ ಕೆಂಪಗೆ ಊದಿ ರಕ್ತಗಟ್ಟಬಹುದು. ಕೊನೆಗೆ ಒಂದೆಡೆ ಕೊಳೆತು ಮೆತುವಾಗಿಬಿಟ್ಟು ತೂತುಬಿದ್ದರೆ ತೀರ ಅಪಾಯಕರ. ಕೆಲವೇಳೆ ಒಂದೆಡೆ ಹುಣ್ಣಾಗಿ ವಾಸಿಯಾಗುವಾಗ ಕಲೆಗಟ್ಟಿ ಮುದುರಿಕೊಳ್ಳುವುದ್ದರಿಂದ ಕರುಳುವಾಳದಬಾಯಿ ಮುಚ್ಚಿದಂತೆ ಕಿವುಚಿಕೊಂಡು ತಡೆಯಾಗಬಹುದು.

ಕರುಳುವಾಳದಲ್ಲಿ ತಡೆಯಾದರೆ, ಉರಿತ ಇನ್ನಷ್ಟು ಹೆಚ್ಚಿಕೊಂಡು ಬೇಗನೆ ಮೆತ್ತಗಾಗಿ ಕೊಳೆತು ತೂತಿಟ್ಟುಕೊಂಡು ಒಡೆಯುತ್ತದೆ. ಕೇವಲ 12-18 ತಾಸುಗಳೊಳಗಾಗಿ ಹೀಗಾಗಿಬಿಡಬಹುದು. ಇದರಿಂದ ಹೊಟ್ಟೆಯಲ್ಲಿ ಹೊದ್ದಿಸಿದಂತಿರುವ ಹೊರಬಿಗಿ ಪೊರೆಗೆ (ಪೆರಿಟೋನಿಯಂ) ತಾಕಿ ಇಡೀ ಒಡಲಲ್ಲೆಲ್ಲ ಹರಡಿಬಿಡಬಹುದು. ಹೊರಬಿಗಿ ಪೊರೆ ಇಲ್ಲಿ ಅಂಟಿಕೊಂಡಿದ್ದರೆ ಸೋಂಕು ಒಂದೆಡೆಯಲ್ಲಿ ಉಳಿವ ಅನುಕೂಲವಿದೆ.

ಕರುಳುವಾಳುರಿತ ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ಆದರೂ ಬೆಳೆಗಿನ ಹೊತ್ತಿನಲ್ಲಿ ತಲೆದೋರುವುದೇ ಹೆಚ್ಚು. ಮೊದಲು ಇಡೀ ಒಡಲೆಲ್ಲ ನೋವು ತೋರುತ್ತಿದ್ದು ಕೊನೆಗೆ ಹೊಕ್ಕುಳಿನ ಸುತ್ತ ಉಳಿವುದು. ಮೊದಲೇ ವಾಂತಿಯಾಗಬಹುದು. ಸಾಮಾನ್ಯವಾಗಿ ಇದರಿಂದೇಳುವ ಹೊಟ್ಟೆನೋವು ಬಲಗಡೆಯ ಕೆಳಹೊಟ್ಟೆಯಲ್ಲಿ ಕರುಳುವಾಳ ಇರುವ ಜಾಗದಲ್ಲಿ ನೆಲೆಸಿರುತ್ತದೆ. ಮೊದಲ 6 ತಾಸುಗಳಲ್ಲಿ ಜ್ವರವಾಗಲಿ, ನಾಡಿ ಏರುವುದಾಗಲಿ ಇರದು. ಬರು ಬರುತ್ತ ನಿಧಾನವಾಗಿ ಜ್ವರ 101o ಫ್ಯಾ. ಮಟ್ಟಕ್ಕೇರಬಹುದು. ಕರುಳುವಾಳ ಇರುವೆಡೆ ಹೊಟ್ಟೆ ಗಡುಸಾಗಿ ಬಿಗಿತುಕೊಂಡಿದ್ದು ಮುಟ್ಟಿದರೆ ನೋಯುತ್ತದೆ. ಎಡಗಡೆಯ ಕೆಳಹೊಟ್ಟೆಯನ್ನು ಒತ್ತಿದರೆ ಬಲಗಡೆ ಅಲ್ಲಿ ನೋವೇಳುತ್ತದೆ. ಕರುಳುವಾಳದ ತಡೆಯಾಗದೆ ಉರಿತವಾಗಿದ್ದರೆ ಬಿಳಿ ರಕ್ತಕಣಗಳು ಹೆಚ್ಚಿರುವುದು ರಕ್ತಕಣಗಳ ಎಣಿಕೆಯಿಂದ ತಿಳಿಯುತ್ತದೆ. ತಡೆಯಾಗಿರುವ ಕರುಳುವಾಳುರಿತ ತೀರ ಕಟ್ಟುನಿಟ್ಟಿನದು, ಬಲು ಅಪಾಯಕರ. ಹೊಟ್ಟೆಶೂಲೆ ಜೋರಾಗಿರುತ್ತದಲ್ಲದ ಕೂಡಲೇ ಶಸ್ತ್ರಕ್ರಿಯೆ ಆಗದಿದ್ದರೆ ಪ್ರಾಣಾಪಾಯವಿದೆ.

ಕರುಳುವಾಳುರಿತದಿಂದ ಹಲವಾರು ತಾಕು ತೊಡಕುಗಳು ಏಳಬಹುದು. ಕರುಳುವಾಳದ ಸುತ್ತಲೂ ಮುದ್ದೆಗಟ್ಟಿದಂತಾಗಿ ಗಂಟುಗಂಟಾಗಬಹುದು. ಕರುಳುವಾಳದಲ್ಲಿ ಕೀವುಗೂಡಿ ಕುರು ಏಳಬಹುದು. ಹೊರಬಿಗಿಪೊರೆಯಲ್ಲಿ ಒಂದೆಡೆಯಲ್ಲೋ ಎಲ್ಲೆಲ್ಲೂ ಹರಡಿಯೋ ಸೋಂಕಿನ ಉರಿತವಾಗಬಹುದು. ಕರುಳುವಾಳ ಬಿರಿದು ತೂತಿಟ್ಟುಕೊಳಬಹುದು. ಕೊನೆಯದಾಗಿ ರಕ್ತ ಸರಬರಾಜಿಲ್ಲದೆ ಕರುಳುವಾಳ ಕೊಳೆಯಬಹುದು. ಕರುಳುವಾಳುರಿತ ಸುಮಾರು ಕೂರಾಗಿದ್ದರೆ (ಸಬಕ್ಯೂಟ್) ಶಸ್ತ್ರಕ್ರಿಯೆಗೆ ಅವಸರವಿಲ್ಲ.

ಇದ್ದಕ್ಕಿದ್ದ ಹಾಗೆ ಜೋರಾಗಿದ್ದು ರೋಗಿಗೆ ಕೆಡುಕಾಗುವಂತಿದ್ದರೆ ಕೂಡಲೇ ಶಸ್ತ್ರಕ್ರಿಯೆಯಿಂದ ಕರುಳುವಾಳವನ್ನು ಕೊಯ್ದು ತೆಗೆಯಬೇಕು. ಆದರೆ ಕರುಳುವಾಳುರಿತವಾಗಿ ಗಂಟು ಕಟ್ಟಿಕೊಂಡಿದ್ದರೆ, ಸೋಂಕು ಇಳಿಸುವ ಜೀವಿರೋಧಕ ಮದ್ದುಗಳನ್ನು ಕೊಡುತ್ತ ಕಾದು ನೋಡುವುದು ಒಳ್ಳೆಯದು. ರೋಗಿಯನ್ನು ಹಾಸಿಗೆಯಲ್ಲಿ ಮಲಗಿಸಿ, ಮೊಣಕಾಲು ಕೊಂಚ ಮಡಿಸಿಟ್ಟು ತಲೆ ಎದೆಗಳನ್ನು ಎತ್ತರಿಸಿಟ್ಟಿರಬೇಕು. ಬಾಯಿ ಮೂಲಕ ಏನೂ ಕೊಡಬಾರದು. ನಾಡಿ, ಮೈ ಕಾವುಗಳನ್ನು ಗುರುತಿಸಿಡುತ್ತಿರಬೇಕು. ನೀರು ಲವಣಗಳು, ಪುಷ್ಟಿಕಾರಿಗಳು, ದ್ರಾಕ್ಷಿಸಕ್ಕರೆಗಳನ್ನು ಸಿರದ ಮೂಲಕ ಚುಚ್ಚಿ ಹೊಗಿಸುತ್ತಿರಬೇಕಾಗುವುದು. ಸಾಧಾರಣವಾಗಿ ಗಂಟುಕಟ್ಟಿದ್ದು 2-3 ವಾರಗಳಲ್ಲಿ ಕರುಗುತ್ತದೆ. 3 ತಿಂಗಳು ಬಿಟ್ಟು ಶಸ್ತ್ರಕ್ರಿಯ ಮಾಡಬಹುದು.

ಇಂದಿನ ದಿನಗಳಲ್ಲಿ ಕರುಳುವಾಳುರಿತ ಶಸ್ತ್ರ ಚಿಕಿತ್ಸೆಯನ್ನು ಅಂತರ್ದಶಕದ ಮೂಲಕವೂ ನಡೆಸಬಹುದು.