ಕರಿಗೇರು

ವಿಕಿಪೀಡಿಯ ಇಂದ
Jump to navigation Jump to search

ಕರಿಗೇರು : ಅನಕಾರ್ಡಿಯೇಸೀ ಕುಟುಂಬಕ್ಕೆ ಸೇರಿದ ಮರ, ಇದರ ಶಾಸ್ತ್ರೀಯ ನಾಮ ಸೆಮಿಕಾರ್ಪಸ್ ಅನಕಾರ್ಡಿಯಮ್ ಭಾರತ, ಈಸ್ಟ್‌ ಇಂಡೀಸ್ ದ್ವೀಪಗಳು, ಉತ್ತರ ಆಸ್ಟ್ರೇಲಿಯಗಳಲ್ಲಿ ಹರಡಿದೆ. ಇದು ಚಳಿಗಾಲದಲ್ಲಿ ಎಲೆ ಉದುರುವ ಮಧ್ಯಮ ಎತ್ತರದ ಮರ. ಎಲೆಗಳು ಸರಳ, ಪರ್ಯಾಯವಾಗಿ ಜೋಡಣೆಗೊಂಡಿವೆ. ಇವುಗಳ ಉದ್ದ 7'-24", ಅಗಲ 4"-12". ಅಂಡಾಕಾರವಾಗಿವೆ; ತುದಿ ಗುಂಡಗಿದೆ. ತೊಗಲಿನಂತೆ ಗುಡುಸಾಗಿರುವ ಇವುಗಳ ಮೇಲ್ಭಾಗ ತುಪ್ಪುಳರಹಿತ; ತಳಭಾಗದಲ್ಲಿ ಬೂದುಬಣ್ಣದ ತುಪ್ಪುಳವಿದೆ. ಅಲಗಿನ ಮೇಲೆ 15-25 ಜೋಡಿಗಳ ನಾಳವಿನ್ಯಾಸವಿದೆ ಹೂಗಳು ರೆಂಬೆಗಳ ತುದಿಗಳಲ್ಲಿರುವ ಸಂಕೀರ್ಣ ಪುಷ್ಪಗುಚ್ಛಗಳಲ್ಲಿ ಸಮಾವೇಶಗೊಂಡಿವೆ. ಹೂಗಳು ಹಸಿರು ಮಿಶ್ರಿತ ಬಿಳಿ ಬಣ್ಣದವೂ ಏಕಲಿಂಗಿಗಳು ಆಗಿವೆ. ಗಂಡು ಹೂಗಳು ಹೆಣ್ಣು ಹೂಗಳಿಗಿಂತ ಚಿಕ್ಕವು. ಎರಡು ಬಗೆಯ ಹೂಗಳಲ್ಲೂ ಈಟಿಯಾಕಾರದ ಬ್ರ್ಯಾಕ್ಟುಗಳೂ ಪುಷ್ಪ ಪತ್ರದ ಹೊರಭಾಗದಲ್ಲಿ ಕೂದಲುಗಳೂ ಇವೆ. ಪುಷ್ಪಪಾತ್ರೆ 3 ಹಾಲೆಗಳಿಂದಾಗಿದೆ. ಹೂದಳಗಳು 5. ಗಂಡು ಹೂಗಳಲ್ಲಿ ಕೇಸರಗಳಿಗೂ ಹೂದಳಗಳಿಗೂ ನಡುವೆ ದುಂಡಾಗಿರುವ ತಟ್ಟೆಯಿದೆಯಲ್ಲದೆ ಅಪುರ್ಣಾವಸ್ಥೆಯಲ್ಲಿರುವ ಅಂಡಾಶಯವೊಂದಿದೆ. ಹೆಣ್ಣುಹೂವಿನಲ್ಲಿ ಉಚ್ಛಸ್ಥಾನದ ಗುಂಡಗಿನ ಅಂಡಾಶಯವಿದೆ, ಮೂರು ಕಾರ್ಪೆಲುಗಳಿಂದಾದ ಇದರಲ್ಲಿ ಒಂದೇ ಅಂಡಕವಿದೆ. ಶಲಾಕೆಗಳು 3. ಹೆಣ್ಣು ಅಷ್ಟಿಫಲ ಮಾದರಿಯದು; ಅದರ ಆಕಾರ ದೀರ್ಘವೃತ್ತದಂತೆ. ನಯವಾಗಿಯೂ ಹೊಳಪುಳ್ಳದ್ದೂ ಆಗಿದೆ. ಬಲಿತಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹಣ್ಣಿನ ಕೆಳಗಿರುವ ಅಕ್ಷಕಾಂಡ ಕಾಲಕ್ರಮೇಣ ಹಳದಿಬಣ್ಣಕ್ಕೆ ತಿರುಗಿ ರಸಭರಿತವಾಗುತ್ತದೆ. ಇದು ತಿನ್ನಲು ಯೋಗ್ಯ. ಇಂಗ್ಲಿಷಿನಲ್ಲಿ ಈ ಮರಕ್ಕೆ ಮಾರ್ಕಿಂಗ್ ನಟ್ ಎಂಬ ಹೆಸರಿದೆ. ಹಣ್ಣಿನಿಂದ ಒಂದು ಬಗೆಯ ಕಟುವಾದ ಸ್ಕಿಗ್ಧವಾದ ರಸವನ್ನು ತೆಗೆಯುತ್ತಾರೆ. ಅಗಸರು ಇದನ್ನು ಹತ್ತಿ ಬಟ್ಟೆಗಳಿಗೆ ಗುರುತುಮಾಡಲು ಉಪಯೋಗಿಸುತ್ತಾರೆ. ಅಲ್ಲದೆ ಮರುಗೆಣ್ಣೆ ತಯಾರಿಕೆಯಲ್ಲೂ ಬಳಸುತ್ತಾರೆ. ಅಕ್ಷಕಾಂಡವನ್ನು ಹುರಿದು ತಿನ್ನುವುದುಂಟು.

"https://kn.wikipedia.org/w/index.php?title=ಕರಿಗೇರು&oldid=639352" ಇಂದ ಪಡೆಯಲ್ಪಟ್ಟಿದೆ