ವಿಷಯಕ್ಕೆ ಹೋಗು

ಕಮಕೋಡು ನರಸಿಂಹಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಮಕೋಡು ನರಸಿಂಹಶಾಸ್ತ್ರಿ : ಕವಿತೆ, ವಿಮರ್ಶೆ, ನಾಟಕ, ಅನುವಾದ-ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿರುವ ನರಸಿಂಹಶಾಸ್ತ್ರೀಗಳು, ತೀರ್ಥಹಳ್ಳಿ ಸಮೀಪದ ಕಮಕೋಡಿನವರು. ತಂದೆ ಸುಬ್ಬರಾಯಶಾಸ್ತ್ರೀ. ತಾಯಿ ಫಣಿಯಮ್ಮ, ವೃತ್ತಿಯಲ್ಲಿ ಕೃಷಿಕರಾಗಿದ್ದ ನರಸಿಂಹಶಾಸ್ತ್ರೀಗಳು. (ಜನನ: ೧೯೦೩, ನಿಧನ: ೧೯೮೦), ಪ್ರವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಶಾಸ್ತ್ರೀಗಳ ದೊಡ್ಡ ತಂದೆ ಹಲಸಿನಹಳ್ಳಿ ನರಸಿಂಹಶಾಸ್ತ್ರೀಗಳು ಹಲವಾರು ಯಕ್ಷಗಾನ ಪ್ರಸಂಗಗಳ ಸೃಷ್ಟಿಕರ್ತರು. ದೊಡ್ಡ ತಂದೆಯವರಂತೆ ತಾನೂ ದೊಡ್ಡ ಕವಿ-ಲೇಖಕ ಆಗಬೇಕೆಂಬ ಬಾಲ್ಯದ ಬಯಕೆ, ಶಾಸ್ತ್ರೀಗಳಿಗೆ ಸಾಹಿತ್ಯಲೋಕ ಪ್ರವೇಶಿಸಲು ನೀಡಿದ ಪ್ರೇರಣೆ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ತೀರ್ಥಹಳ್ಳಿಯಲ್ಲಿ ಮಾಧ್ಯಮಿಕ ಶಾಲೆ ಓದುವಾಗ ಕುವೆಂಪು, ಕೂಡಲಿ ಚಿದಂಬರಂ, ಚಿತ್ರಶಿಲ್ಪಿ ಆರ್. ಎಸ್. ನಾಯ್ಡು, ನಿಟ್ಟೂರು ಶ್ರೀನಿವಾಸರಾಯರು, ಶಾಸ್ತ್ರೀಗಳ ಶಾಲೆಯ ಸಹಪಾಠಿಗಳು. ಹೈಸ್ಕೂಲ್ ಓದುವಾಗ ಶಾಸ್ತ್ರೀಗಳ ಬೆನ್ನು ತಟ್ಟಿ ಸಾಹಿತ್ಯಿಕವಾಗಿ ಬೆಳೆಯಲು ಪ್ರೋತ್ಸಾಹಿಸಿದವರು. ಹೆಡ್ ಮಾಸ್ಟರಾಗಿ ಅಲ್ಲಿಗೆ ಬಂದಿದ್ದ, ಕನ್ನಡ ಸಾಹಿತ್ಯದ ದಿಗ್ಗಜಗಲ್ಲೊಬ್ಬರಾದ ಎಂ. ಆರ್. ಶ್ರೀ ಅವರು. ಹದಿನೇಳನೆಯ ವರ್ಷದಲ್ಲಿ ಅಪ್ಪರ್ ಸೆಕೆಂಡರಿ ಪರೀಕ್ಷೆ ಪಾಸು ಮಾಡಿದ ಶಾಸ್ತ್ರೀಗಳು ಬಡತನದ ಕಾರಣದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗದೆ, ಅರ್ಜಿ ಗುಜರಾಯಿಸಿ, ಅನಂದಪುರದ ಪ್ರಾಥಮಿಕ ಶಾಲೆಯಲ್ಲಿ ಸಹ ಉಪಾಧ್ಯಾಯರಾಗಿ ನೇಮಕಗೊಂಡರು. ಅಪ್ಪರ್ ಸೆಕೆಂಡರಿ ಟೀಚರ್ಸ ಟ್ರೈನಿಂಗಿಗಾಗಿ ಮೈಸೂರಿಗೆ ಹೋದ ಅವರು, ಅಲ್ಲಿ ಪಂಡಿತ ಪರೀಕ್ಷೆ ಕಟ್ಟಿ ಉತ್ತೀರ್ಣರಾದರು. ಮುಂದೆ ತೀರ್ಥಹಳ್ಳಿಯ ಪ್ರೌಢಶಾಲೆಯಲ್ಲಿ ಸುಮಾರು ೧೫ ವರ್ಷ ಕಾಲ ಕನ್ನಡ ಅಧ್ಯಾಪಕರಾಗಿ ದುಡಿದು, ಆ ಮೇಲೆ ಮೈಸೂರಿನ ಟ್ರೈನಿಂಗ್ ಕಾಲೇಜಿನಲ್ಲಿ ಹಿರಿಯ ಕನ್ನಡ ಪಂಡಿತರಾಗಿ ನೇಮಕಗೊಂಡರು, ಸೇವೆ ಸಲ್ಲಿಸಿ ನಿವೃತ್ತರಾದರು. ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿದ್ದಾಗ ಶಾಸ್ತ್ರಿಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ದೇಶ ಪ್ರೇಮ (ಆಗ ಸ್ವಾತಂತ್ರ್ಯ ಚಳುವಳಿಯ ಕಾಲ) ಬೆಳೆಸುವಲ್ಲಿ ವಹಿಸಿದ ಪಾತ್ರ ಗಣನೀಯ.

ಸಾಹಿತ್ಯ ರಚನೆ

[ಬದಲಾಯಿಸಿ]

ಸೊಹ್ರಾಬ್ ಮತ್ತು ರುಸ್ತುಂ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿರುವ ಪರ್ಶಿಯನ್ ಕಥೆ. ಐತಿಹಾಸಿಕ ಹಿನ್ನೆಲೆಯ ಕಥುವಸ್ತುವಿನ ಈ ಕೃತಿ ಪ್ರಪಂಚದ ಬೇರೆ ಬೇರೆ ಭಾಷಾ ಸಾಹಿತ್ಯದ ಮೇಲೆ ಬೀರಿರುವ ಪ್ರಭಾವ ಅಪಾರ ಕನ್ನಡದಲ್ಲಿ ಈ ಕಥನ ಕವನ ರೂಪದಲ್ಲಿ ನೀಡಿದ ಹಿರಿಮೆಗೆ ಪಾತ್ರರಾದವರು ಕಮಕೋಡು ನರಸಿಂಹಶಾಸ್ತ್ರೀಗಳು. 'ಪ್ರಭಾತ ಭಾರತ' ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಕುದುರಿಸಲು ಶಾಸ್ತ್ರೀಗಳ ಸಂಪಾದಕತ್ವದಲ್ಲಿ ಹೊರತರುತ್ತಿದ್ದ ಕೈಬರಹದ ಶಾಲಾ ಪತ್ರಿಕೆ. 'ಸೊಹ್ರಾಬ್ ಮತ್ತು ರುಸ್ತುಂ' ಮಾತ್ರವಲ್ಲ; ಸರಳರಗಳೆಯಲ್ಲಿ ಶಾಸ್ತ್ರೀಗಳು ರಚಿಸಿರುವ ಮತ್ತೊಂದು ಕವನ 'ಸೀತಾವನವಾಸ', 'ಜ್ಯೋತಿಷ ಕಲ್ಪದ್ರುಮ' (ಮೂಲ: ಪಯಿನ್ನೂರು ಕುಮಾರ ಜೋಯಿಸ್) ಶಾಸ್ತ್ರೀಗಳು ಅನುವಾದಿಸಿರುವ ಜ್ಯೋತಿಷ ಗ್ರಂಥ. 'ಶಸ್ತ್ರ ಸಂನ್ಯಾಸ' (ನಾಟಕ), ಕಾಳಿದಾಸನ 'ಮೇಘ ಸಂದೇಶ', 'ಕನ್ನಡ ಹಿತೋಪದೇಶ', 'ಕನ್ನಡ ಪಂಚತಂತ್ರ' ಅನುವಾದಿತ ಕೃತಿಗಳು.'ಸತಿಗೀತೆ'-(ಹೊನ್ನಮ್ಮನ 'ಹದಿಬದೆಯ ಧರ್ಮ'ದ ಮುನ್ನೂರು ಪದ್ಯಗಳ ಸಂಗ್ರಹ). 'ಕುಮಾರ ಜೈಮಿನಿ'-(ಲಕ್ಷ್ಮೀಶನ 'ಜೈಮಿನಿ ಭಾರತ'ದ ಸಂಗ್ರಹಾನುವಾದ)-ಪ್ರಕಟವಾಗಿರುವ ಶಾಸ್ತ್ರೀಗಳ ಪ್ರಮುಖ ಕೃತಿಗಳು. 'ಛಂದ ಶಾಸ್ತ್ರಸಾರ', 'ಅಮರ ಕನ್ಯೆ ಮಾನಸಿ'(ನಾಟಕ), 'ಭಾವಗೀತೆಗಳು', 'ಕಾಳಿದಾಸನ ಮೇಘ ಸಂದೇಶ' (ಗದ್ಯಾನುವಾದ) 'ಸತ್ಯವೇ ದೇವರು' ( 'Truth is God' ಭಾಷಾಂತರ)-ಶಾಸ್ತ್ರೀಗಳ ಅಪ್ರಕಟಿತ ಕೃತಿಗಳು. ಮುದ್ದಣ, ಶಾಸ್ತ್ರೀಗಳಿಗೆ ಬಹುಪ್ರಿಯವಾದ ಕವಿ. ಮುದ್ದಣನ ಕಾವ್ಯ ಓದುಗರಿಗೆ ಸಹಾಯಕವಾಗಲೆಂದು ಶಾಸ್ತ್ರೀಗಳು ಸಿದ್ದಪಡಿಸಿರುವುದು 'ರಾಮಾಶ್ವಮೇಧದ ಅರ್ಥಕೋಶ'. ಗಾಂಧೀಜಿ ಬಗ್ಗೆಯೂ ಅವರಿಗೆ ವಿಶೇಷ ಗೌರವ. ಅಸ್ಪೃಶ್ಯತೆ ನಿವಾರಣೆಯತ್ತ ದಿಟ್ಟ ಹೆಜ್ಜೆಯಿಟ್ಟ ಹಿರಿಮೆಯೂ ಅವರದು. 'ಇವರು ಬಾಪು'( This was Bapu'-ಕೃತಿಯ ಭಾಷಾಂತರ) ಮತ್ತು 'ಬಾಪುವಿನ ಭೌತ ದೇಹಕ್ಕೆ ಭಾಷ್ಷಾಂಜಲಿ' - ಗಾಂಧೀಜಿ ಕುರಿತು ಚರಮ ಗೀತೆ ಶಾಸ್ತ್ರೀಗಳು ರಚಿಸಿದ ಕೃತಿಗಳು.

'ಸೊಹ್ರಾಬ್ ಮತ್ತು ರುಸ್ತುಂ' (ಮೂಲ: ಷಾನಾಮಾ ಮತ್ತು ಮಾಥ್ಯೂ ಅರ್ನಾಲ್ಡ್) ಕೃತಿಗೆ ಮದ್ರಾಸ್ ಕ್ರಿಶ್ಚಿಯನ್ ಲಿಟರೇಚರ್ ಸೊಸೈಟಿ ಅವರು ಬಹುಮಾನ ನೀಡಿ ಶಾಸ್ತ್ರೀಗಳನ್ನು ಗೌರವಿಸಿದ್ದಾರೆ.

ಉಲ್ಲೆಖ

[ಬದಲಾಯಿಸಿ]