ಕಪೈಬರಾ
| ಕಪೈಬರಾ | |
|---|---|
| Conservation status | |
| Scientific classification | |
| ಸಾಮ್ರಾಜ್ಯ: | animalia |
| ವಿಭಾಗ: | ಕೋರ್ಡಾಟಾ |
| ಉಪವಿಭಾಗ: | |
| ವರ್ಗ: | |
| ಗಣ: | |
| ಉಪಗಣ: | |
| ಕುಟುಂಬ: | |
| ಉಪಕುಟುಂಬ: | |
| ಕುಲ: | |
| ಪ್ರಜಾತಿ: | H. hydrochaeris |
| Binomial name | |
| Hydrochoerus hydrochaeris (Linnaeus, 1766) | |
| ಸ್ವಾಭಾವಿಕ ನಿವಾಸ | |
ಕಪೈಬರಾವು ದಂಶಕಗಳಲ್ಲಿಯೇ ಅತಿ ದೊಡ್ಡದಾದ ಪ್ರಾಣಿ. ಅಗೌಟಿ, ಚಿಂಚಿಲ್ಲಾ, ಗಿನಿ ಹಂದಿ ಮೊದಲಾದವು ಈ ಪ್ರಾಣಿಯ ಅತ್ಯಂತ ಸಮೀಪ ಸಂಬಂಧಿಗಳು. ಇದರ ಸ್ವಾಭಾವಿಕ ಆವಾಸ ಸ್ಥಾನ ದಕ್ಷಿಣ ಅಮೆರಿಕಾ ಆಗಿದ್ದು, ಸವನ್ನಾ ಹುಲ್ಲುಗಾವಲು, ಅರಣ್ಯ ಪ್ರದೇಶ ಮೊದಲಾದೆಡೆಗಳಲ್ಲಿ ಜಲಮೂಲದ ಸಮೀಪ ವಾಸಿಸುತ್ತವೆ. ಇವು ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುವುದಾಗಿದ್ದು, ಕೆಲವೊಂದು ಗುಂಪುಗಳಲ್ಲಿ ಸುಮಾರು ೧೦೦ರಷ್ಟು ಪ್ರಾಣಿಗಳನ್ನೂ ಕಾಣಬಹುದಾಗಿದೆ. ಆದರೆ ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ೧೦ರಿಂದ ೧೫ ಪ್ರಾಣಿಗಳು ಇರುವುದು ವಾಡಿಕೆ. ಅವುಗಳ ಚರ್ಮ ಹಾಗೂ ಮಾಂಸಕ್ಕಾಗಿ ಬೇಟೆಯಾಡುತ್ತಿದ್ದರೂ, ಅವು ಅಪಾಯದಂಚಿನಲ್ಲಿರುವ ಪ್ರಾಣಿಗಳಾಗಿಲ್ಲ.
ವೈಜ್ಞಾನಿಕ ನಾಮ ಮತ್ತು ಆವಾಸ
[ಬದಲಾಯಿಸಿ]ದಂಶಕವರ್ಗಕ್ಕೆ ಸೇರಿದ ಪ್ರಾಣಿಗಳಲೆಲ್ಲ ಅತ್ಯಂತ ದೊಡ್ಡದು. ಹೈಡ್ರೊಕೀರಿಡೀ ಕುಟುಂಬಕ್ಕೆ ಸೇರಿದೆ. ಹೈಡ್ರೋಕೀರಸ್ ಎಂಬುದು ಇದರ ಶಾಸ್ತ್ರೀಯನಾಮ. ದಕ್ಷಿಣ ಅಮೆರಿಕದ ಮೂಲವಾಸಿ. ಮಧ್ಯ ಅಮೆರಿಕದಲ್ಲೂ ಕಾಣಬರುತ್ತದೆ. ಅರೆಜಲವಾಸಿಯಾದ ಇದು ಕೆರೆ, ಕೊಳ, ನದಿಗಳಲ್ಲೂ ಅವುಗಳ ಸುತ್ತಲಿನ ದಟ್ಟವಾದ ಕಾಡುಗಳಲ್ಲೂ ಜೀವಿಸುತ್ತದೆ.
ಲಕ್ಷಣಗಳು
[ಬದಲಾಯಿಸಿ]ಕ್ಯಾಪಿಬಾರ ನೋಡಲು ಗಿನಿಹಂದಿಯಂತೆಯೆ ಕಾಣುವುದಾದರೂ ಗಾತ್ರದಲ್ಲಿ ಅದಕ್ಕಿಂತ ಬಲು ದೊಡ್ಡದು. ಸಾಧಾರಣವಾಗಿ ಪೂರ್ಣ ಬೆಳೆದ ಪ್ರಾಣಿ ಸುಮಾರು 4' ಉದ್ದ ಇರುತ್ತದೆ. ತೂಕ 100-120 ಪೌಂ. ಇರುವುದುಂಟು. ಜಾಲವಿರುವ ಕಾಲ್ಬೆರಳುಗಳು(ಮುಂಗಾಲಿನಲ್ಲಿ ನಾಲ್ಕು ಮತ್ತು ಹಿಂಗಾಲಿನಲ್ಲಿ ಮೂರು ಬೆರಳುಗಳಿವೆ), ಗೊರಸಿನಂಥ ಉಗುರು, ವಿರಳವಾದ ಮೈಗೂದಲು, ಮೊಟಕಾದ ಕಿವಿಗಳು, ಸೀಳಿದ ಮೇಲ್ದುಟಿ, ಬಲು ಮೊಟಕಾದ ಬಾಲ, ಮೊಂಡುಮೂತಿ- ಇವು ಕ್ಯಾಪಿಬಾರದ ಪ್ರಮುಖ ಲಕ್ಷಣಗಳು. ಕ್ಯಾಪಿಬಾರ ಸಂಘಜೀವಿ: ಸಾಮಾನ್ಯವಾಗಿ 10-20 ಪ್ರಾಣಿಗಳು ಗುಂಪುಗುಂಪಾಗಿ ವಾಸಿಸುತ್ತವೆ.
ಆಹಾರ
[ಬದಲಾಯಿಸಿ]ಇದು ಹಗಲೆಲ್ಲ ಮರೆಗಳಲ್ಲಿ ಅಡಗಿದ್ದು ಬೆಳಗಿನ ಜಾವ ಮತ್ತು ಸಂಜೆಯ ಹೊತ್ತು ಹೊರಬಂದು ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಜಲಸಸ್ಯಗಳು ಮತ್ತು ಎಳೆಯ ಮರಗಳ ತೊಗಟೆ ಇದರ ಪ್ರಧಾನ ಆಹಾರ. ಕೆಲವೊಮ್ಮೆ ಹೊಲಗಳಿಗೆ ದಾಳಿ ಮಾಡುವುದೂ ಉಂಟು. ಕ್ಯಾಪಿಬಾರ ನೆಲದ ಮೇಲೆ ಅಷ್ಟು ಚುರುಕಾಗಿ ನಡೆಯಲಾರದು. ಶತ್ರುಗಳು ಬೆನ್ನಟ್ಟಿದಾಗ ಕೊಂಚಮಟ್ಟಿಗೆ ಓಡುವುದಾದರೂ ಬಲುಬೇಗ ನೀರಿಗೆ ಹಾರಿಬಿಡುತ್ತದೆ; ನೀರಿನಲ್ಲಿ ಮಾತ್ರ ವೇಗವಾಗಿ ಈಜಬಲ್ಲುದು. ನೀರಿನೊಳಗೆ 7-8 ಮಿನಿಟುಗಳ ಕಾಲ ಮುಳುಗಿರಲೂ ಬಲ್ಲುದು.
ಸಂತಾನಾಭಿವೃದ್ಧಿ
[ಬದಲಾಯಿಸಿ]ಸ್ವಭಾವತಃ ಇದು ಬಲು ಸಾಧುಪ್ರಾಣಿ. ಆದರೆ ಬೆಳೆಗಳನ್ನು ನಾಶ ಮಾಡುತ್ತದೆ. ಹೊಟ್ಟೆ ತುಂಬಿದಾಗ ಹಂದಿಯಂತೆ ಗುಟುರುಹಾಕುತ್ತ ತಿರುಗಾಡುತ್ತದೆ. ಇದು ವರ್ಷಕ್ಕೆ ಒಂದುಬಾರಿ ಮಾತ್ರ ಮರಿ ಹಾಕುತ್ತದೆ. ಮರಿಗಳ ಸಂಖ್ಯೆ ಒಂದು ಸೂಲಿಗೆ 2-8; ಗರ್ಭಧಾರಣೆಯ ಕಾಲ 15-18 ವಾರಗಳು. ಹುಟ್ಟುವಾಗಲೆ ಚೆನ್ನಾಗಿ ಬೆಳೆದಿರುವ ಮರಿಗಳು ಬಹಳ ಕಾಲ ತಾಯಿಯೊಡನೆ ಇರುತ್ತವೆ. ಕ್ಯಾಪಿಬಾರ ಸುಮಾರು 8-10 ವರ್ಷ ಬದುಕಿರುತ್ತದೆ.
ಉಪಯೋಗ
[ಬದಲಾಯಿಸಿ]ಮಾಂಸಕ್ಕಾಗಿ ಈ ಪ್ರಾಣಿಯನ್ನು ಬೇಟೆಯಾಡುವುದುಂಟು.
ಉಲ್ಲೇಖಗಳು
[ಬದಲಾಯಿಸಿ]- ↑ Queirolo, D., Vieira, E. & Reid, F. (2008). "Hydrochoerus hydrochaeris". IUCN Red List of Threatened Species. Version 2011.1. International Union for Conservation of Nature. Retrieved 17 June 2011.
{{cite web}}: Invalid|ref=harv(help)CS1 maint: multiple names: authors list (link)

}