ವಿಷಯಕ್ಕೆ ಹೋಗು

ಕನ್ನಡದಲ್ಲಿ ವಚನ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಚನಕಾರರು ಕನ್ನಡಕ್ಕೆ ನೀಡಿದ ವಿಶಿಷ್ಟ ಸಾಹಿತ್ಯಪ್ರಕಾರ ವಚನ[][][] : ಲಿಂಗಾಯತ ಧರ್ಮ ಸಾಹಿತ್ಯದ ಮೊದಲ ಬೆಳೆ. ಈ ಸಾಹಿತ್ಯವನ್ನು ಐತಿಹಾಸಿಕವಾಗಿ ಬಸವ ಪೂರ್ವಯುಗ, ಬಸವಯುಗ, ಬಸವೋತ್ತರಯುಗ ಎಂದು ವಿಭಾಗಿಸುತ್ತಾರೆ.

ಇತಿಹಾಸ

[ಬದಲಾಯಿಸಿ]
  • ಶಂಕರದಾಸಿಮಯ್ಯ, ಜೇಡರದಾಸಿಮಯ್ಯ, ಕೊಂಡಗುಳಿ ಕೇಶಿರಾಜ ಮೊದಲಾದವರು ಬಸವಪೂರ್ವಯುಗದ ಶರಣರು. ಇವರಲ್ಲಿ ಚಾಳುಕ್ಯ ಜಯಸಿಂಹನ (1015-1042) ಅರಸಿ ಸುಗ್ಗಲೆಯ ಗುರುವಾದ ಜೇಡರದಾಸಿಮಯ್ಯನ ವಚನಗಳು ಲಭಿಸಿವೆ. 10ನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿರಬಹುದಾದ ಈತನ ಗುರು ಶಂಕರದಾಸಿಮಯ್ಯನೂ ವಚನಗಳನ್ನು ರಚಿಸಿರಬಹುದು.
  • ಜೇಡರ ದಾಸಿಮಯ್ಯನ ಹದಗೊಂಡ ಶೈಲಿಯೂ, ಈ ಹೇಳಿಕೆಗೆ ಪುಷ್ಟಿ ನೀಡುತ್ತದೆ. ಅದಕ್ಕಾಗಿ ಈ ಸಾಹಿತ್ಯಪ್ರಕಾರದ ಪ್ರಾಚೀನತೆ 10ನೆಯ ಶತಮಾನದಷ್ಟು ಹಿಂದೆ ಸರಿಯಬಹುದಾಗಿದೆ. ಈ ಕಾಲದ ವಚನಗಳು ಅಲ್ಲಲ್ಲಿ ಅಂಶ, ಲಯ ಒಳಪ್ರಾಸ ಯುಕ್ತವಾಗಿದ್ದು ಗಾತ್ರದಲ್ಲಿ ಚಿಕ್ಕವಾಗಿವೆ.

ಕಡೆಗೀಲಿಲ್ಲದ ಬಂಡಿ ಹೊಡೆಗಡೆಯ ದಿಪ್ಪುದೆ,
ಎತ್ತಪ್ಪೆ ಶರಣಂಗೆ ತೂತ್ತೆಪ್ಪೆ ಶರಣಂಗೆ,

ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ,

ನಾನೊಂದು ಸುರಿಗೆಯನೇನೆಂದು ಹಿಡಿಯುವೆನು-

ಇತ್ಯಾದಿಯಾದ ಜೇಡರ ದಾಸಿಮಯ್ಯನ ವಚನಗಳು ಇದಕ್ಕೆ ನಿದರ್ಶನ. ಮುಂದಣ ಯುಗದ ವಚನ ಸಾಹಿತ್ಯದ ಮೇಲೆ ಇವುಗಳ ಪ್ರಭಾವ ಕೆಲಮಟ್ಟಿಗೆ ತೋರಿಬರುತ್ತದೆ. ಈ ಯುಗದ ವಚನ ಸಾಹಿತ್ಯ ಈಗ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದರೂ ಶೋಧಿಸಿದಲ್ಲಿ ಹೊಸ ವಚನಗಳು, ವಚನಕಾರರು ಹೊರಬರುವ ಸಂಭವವಿದೆ.

ವಚನಸಾಹಿತ್ಯದ ಸುವರ್ಣಯುಗ

[ಬದಲಾಯಿಸಿ]
  • ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯಭಾಗದಲ್ಲಿ ಮೈಮುರಿದು ಎದ್ದ ಲಿಂಗಾಯತ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ[], ಚನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ , ಮಡಿವಾಳ ಮಾಚಿದೇವ ಇವರು ಸುಪ್ರಸಿದ್ಧ ವಚನಕಾರರು. ಈ ಕಾಲದ ವಚನ ಸಂಖ್ಯೆ ಹಲವು ಸಾವಿರ, ಹಲವು ಲಕ್ಷ, ಕೋಟಿ ಎಂಬ ಹೇಳಿಕೆಗಳಿವೆ.
  • ಕನ್ನಡಭಾಷೆಯ ಅಭಿವ್ಯಕ್ತಿ ಸಾಧ್ಯತೆಯನ್ನು ತಳಮಟ್ಟ ಕೈವಶ ಮಾಡಿಕೊಂಡ ವಚನಕಾರರು ಆ ಸಾಧ್ಯತೆಯನ್ನು ಇನ್ನೂ ಹಿಗ್ಗಿಸಿದರು. ಅನುಭವ ಅಭಿವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧ್ಯ ಮಾಡಿ ತೋರಿಸಿದರು. ಈ ಆಂದೋಲನದ ಅಧಿನಾಯಕ ಬಸವಣ್ಣ. ಕಾರ್ಯಚಟುವಟಿಕೆಗಳ ಕೇಂದ್ರ ಸ್ಥಳ ಕಲ್ಯಾಣ.
  • ಅಂದಿನ ಅನುಭವಮಂಟಪದ ಅಧ್ಯಕ್ಷನಾಗಿ ಮೆರೆದವನೆಂದರೆ ಅಲ್ಲಮಪ್ರಭು. ಈತ ಹಿರಿಯ ಆತ್ಮಜ್ಞಾನಿ. ನಿಜವಾದ ವೈರಾಗ್ಯವನ್ನು ಪಡೆದವ. ತನಗಿಂತ ಕಿರಿಯರಾದ ಅಕ್ಕಮಹಾದೇವಿ. ಬಸವಣ್ಣ, ಸಿದ್ಧರಾಮ ಮೊದಲಾದವರ ಧ್ಯೇಯ ಧೋರಣೆ ಗಳಲ್ಲಿನ ಇತಿಮಿತಿಗಳನ್ನು ಎತ್ತಿ ತೋರಿಸಿ ಅವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ದು ಹಿರಿಯ.
  • ಈತ ತನ್ನ ವಚನಗಳಲ್ಲಿ ತಾನು ಕಂಡ ಸತ್ಯವನ್ನು ತನಗೆ ಹಿಡಿಸದ ಆಚಾರವಿಚಾರಗಳನ್ನು ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾನೆ. ಇವನಿಗೆ ತನ್ನವರು ಪರರು ಎಂಬ ಹಂಗಿಲ್ಲ. ಅನಾಚಾರವನ್ನು ಎಲ್ಲೇ ಕಾಣಲಿ ಈತ ಟೀಕಿಸುತ್ತಾನೆ. ವಚನ ಸಾಹಿತ್ಯದಲ್ಲೆಲ್ಲ ಈತನ ಅತಿ ವಚನಗಳು ಅತಿ ಕಠಿಣವೆನಿಸಿವೆ. ಈತನ ಬೆಡಗಿನ ವಚನಗಳಂತೂ ಪಾರಿಭಾಷಿಕ ಸಂಕೇತಗಳಿಂದ ಕೂಡಿ, ಭೇದಿಸಲಸಾಧ್ಯವಾಗಿವೆ.

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದೊಡೇನು ?
ಹಸಿವು ಹೋಹುದೇ ? ಅಂಗದ ಮೇಲೆ ಲಿಂಗಸ್ವಾಯತವಾದರೇನು ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ ಆ ಕಲ್ಲು ಲಿಂಗವೆ ?
ಆ ಮೆಳೆ ಭಕ್ತನೆ ? ಇಟ್ಟಾತ ಗುರುವೆ ? ಇಂತಪ್ಪವರ
ಕಂಡಡೆ ನಾನು ನಾಚುವೆನಯ್ಯ ಗುಹೇಶ್ವರ.

ಮುನಿಯದಿರಿ, ಮುನಿಯನಿದಿರಿ, ನಿಮಗೊಂದು ಯುಕ್ತಿಯ
ಹೇಳುವನು, ಅದೆಂತೆಂದೊಡೆ ನೀವೆನ್ನ ವಂಶೀಭೂತರಾದ
ಕಾರಣ ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಆಸ್ತಿ ನಾಸ್ತಿ
ಎನ್ನದಾಗಿ, ನಿಮ್ಮ ಹಾನಿ ವೃದ್ಧಿ ಎನ್ನದಾಗಿ. ಹಾವ ಹಿಡಿವರು
ಬೇಲಿಯ ಹೊಗದೆ ಹೋಹರೇ ಅಯ್ಯ ? ವ್ಯಾಧನು ಸೂಸಲ
ಚೆಲ್ಲಿ, ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದ ಬಳಿಕ,
ಸೂಸಲ ಕಂಪಿಂಗೆ ಹೆಗ್ಗಣ ಬಂದುಬಿದ್ದಂತೆ ಬಿದ್ದಿರಲ್ಲಾ
ಮಾಯದ ಬಲೆಯಲ್ಲಿ ! ಕೋಪವೆಂಬ ರಾಡನೊಡ್ಡ, ತಾಪವೆಂಬ
ಅಡಿಗಲ್ಲನಿರಿಸಿ, ಹುಸಿ ಎಂಬ ಮೀಟುಗಣೆಯ ಜಂತ್ರಿಸಿ,
ಹೊನ್ನು ಹೆಣ್ಣು ಮಣ್ಣೆಂಬ ಸೂಸಲ ಚೆಲ್ಲಿ ಕೆಡಹಿದನಲ್ಲಾ
ನಿಃಕರುಣೆ ಮುಕ್ಕಣ್ಣವ್ಯಾಧನು ! ಹೊನ್ನು ಹೆಣ್ಣು ಮಣ್ಣಿ
ನಾಶೆಯ ಬಿಟ್ಟು, ಕೋಪ ತಾಪವಂ ಬಿಟ್ಟು, ಭ್ರಾಂತಿ
ಭ್ರಮೆಯಂ ಬಿಟ್ಟು, ಜಂಗಮವಾಗಬೇಕು ಕಾಣಿರೋ
ಮರುಳುಗಳಿರಾ ! ಇಂತೀ ಷಡುಲೋಭದ ರುಚಿಯ
ಹಿಂಗಿ ಜಂಗಮನಾದಲ್ಲದೆ ಭವ ಹಿಂಗದು ಕರ್ಣ ಗುಹೇಶ್ವರಾ !

  • ಅಲ್ಲಮನ ವಚನಗಳು ಬಸವಣ್ಣ ಅಥವಾ ಮಹದೇವಿಯಕ್ಕನ ವಚನಗಳಷ್ಟು ಜನಪ್ರಿಯವಾಗಿರದಿದ್ದರೂ ತಮ್ಮ ಆಳವಾದ ತತ್ತ್ವಸಾರದಿಂದ, ಶೈಲಿಯಿಂದ, ಕಾವ್ಯತೆಯಿಂದ ಬಹು ಚೆನ್ನಾಗಿವೆ. ಉಳಿದವರಲ್ಲಿನ ಅತಿರೇಕಗಳಾವುವೂ ಅಲ್ಲಮನಲ್ಲಿ ಕಾಣವು. ಇದೊಂದೇ ದೃಷ್ಟಿಯಿಂದಲಾದರೂ ಇವನ ವಚನಗಳು ವ್ಯಾಸಂಗ ಯೋಗ್ಯವಾಗುತ್ತವೆ. ಭಕ್ತಿಭಂಡಾರಿ ಎಂಬ ಕೀರ್ತಿಗೆ ಭಾಜನನಾದ ಬಸವಣ್ಣನ ವಚನಗಳಲ್ಲಿ ಭಕ್ತಿಯ ಅತಿರೇಕವನ್ನು ಕಾಣುತ್ತೇವೆ.
  • ಹೆಂಗರುಳಿನ ಸಹಾನುಭೂತಿಯನ್ನು ಕಾಣುತ್ತೇವೆ. ಒಂದು ದೇಶದ ಮಹಾಮಂತ್ರಿಯಾಗಿದ್ದರೂ ಆತ ಅಹಂಕಾರಪಟ್ಟವನಲ್ಲ. ಜಂಗಮಸೇವೆಯೇ ಲಿಂಗದ ಸೇವೆ ಎಂದು ತನ್ನ ತನು,ಮನ, ಧನಗಳನ್ನು ಜಂಗಮ ದಾಸೋಹಕ್ಕಾಗಿ ಮುಡಿಪಾಗಿಟ್ಟ ಭಕ್ತ ಶ್ರೇಷ್ಠನೀತ. ಅನುಕಂಪ, ಜೀವನಾನುಭವದ ಸಾರ ರಸಾದ್ರ್ರಹೃದಯ, ಲೋಕಹಿತಸಾಧನೆಯ ಉದ್ದೇಶ-ಇವು ಕ್ಷಣ ಕ್ಷಣಕ್ಕೂ ಈತನ ವಚನಗಳಲ್ಲಿ ಕಾಣುತ್ತವೆ. ಮತೋಪದೇಶಕ್ಕೆಂದೇ ಕಟ್ಟಿದವಾದರೂ ಈತನ ವಚನಗಳಲ್ಲಿ ಹೃದ್ಯವಾದ, ರಸಭಾವಗಳನ್ನು ಮಿಡಿವ ಮಾತುಗಳು ಉದ್ದಕ್ಕೂ ಬರುತ್ತವೆ.

ವಚನಗಳು

[ಬದಲಾಯಿಸಿ]

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ !
ಸುತ್ತಿಸುಳಿದುನೋಡದಂತೆಅಂಧಕನಮಾಡಯ್ಯತಂದೆ !
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ !
ನಿಮ್ಮ ಶರಣರ ಪಾದವಲದೆ ಅನ್ಯವಿಷಯಕ್ಕೆಳಸದಂತೆ ಇರಿಸು ಕೂಡಲಸಂಗಮದೇವಾ.
ನಾದಪ್ರಿಯನಲ್ಲ, ವೇದಪ್ರಿಯನಲ್ಲ ಭಕ್ತಿಪ್ರಿಯ ನಮ್ಮ
ಕೂಡಲಸಂಗಮದೇವ.

ಸಂಸಾರಸಾಗರ ತೆರೆಕೊಬ್ಬಿ, ಮುಖದ ಮೇಲೆ ಅಲೆವುತ್ತಲಿದ್ದುದೇ ?
ಸಂಸಾರಸಾಗರ ಉರದುದ್ದವೇ ಹೇಳಾ ?
ಸಂಸಾರಸಾಗರ ಕೊರಳುದ್ದವೇ ಹೇಳಾ ?
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ? ಅಯ್ಯಾ,
ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ ಕೂಡಲ ಸಂಗಮದೇವಯ್ಯ
ನಾನೇವೆನಯ್ಯ
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯ !
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ. ಹಡಕಿಗೆ
ಮೆಚ್ಚಿದ ಸೊಣಗನು ಅಮೃತದ ರುಚಿಯ ಬಲ್ಲುದೇ
ಕೂಡಲ ಸಂಗಮದೇವಾ.

ಹೀಗೆ ಬಸವಣ್ಣನಿಂದ ನೂರಾರು ಉತ್ತಮ ವಚನಗಳನ್ನು ಎತ್ತಿ ತೋರಿಸಬಹುದು. ಷಟ್ಪದಿಕಾರರಲ್ಲಿ ಕುಮಾರವ್ಯಾಸ, ದಾಸರಲ್ಲಿ ಪುರಂದರದಾಸ-ಇವರಂತೆ ವಚನಕಾರರಲ್ಲಿ ಬಸವಣ್ಣ ಬಹುಜನಪ್ರಿಯ. ವಚನಸಾಹಿತ್ಯ ಪ್ರಧಾನವಾಗಿ ಅನುಭಾವಿಸಾಹಿತ್ಯ, ಭಕ್ತಿಸಾಹಿತ್ಯ. ಅಂಥದರಲ್ಲಿ ಜ್ಞಾನಮಾರ್ಗವನ್ನೇ ಹೆಚ್ಚಾಗಿ ಎತ್ತಿಹಿಡಿದವನೆಂದರೆ ಚೆನ್ನಬಸವಣ್ಣ. ಮುಕ್ತಿ ಸಾಧನೆಯ ಮಾರ್ಗಗಳೆಲ್ಲೆಲ್ಲ ಇದು ಕಠಿಣತಮವಾದುದು.

ಹೆಗ್ಗಣವನಿಕ್ಕಿ ನೆಲಗಟ್ಟು ಕಟ್ಟಿದಂತೆ ಆಯೆತೆನ್ನ ಕಾಯಗುಣ.
ಅಹಂಕಾರ ಪ್ರಬೋಧೆಗಳೇಕಯ್ಯ ? ಕಾಮ ಕ್ರೋಧ ಲೋಭ.
ಮೋಹ ಮದ ಮತ್ಸರಂಗಳನಿಕ್ಕಿ ಎನ್ನ ಮಾಡಿದಿರಿ, ಎನ್ನ
ಬಾಧಿಸಲಿಂತು ಲಿಂಗಯ್ಯ ತಂದೆ ? ಆದಿ ವ್ಯಾಧಿಗಳೆಲ್ಲವ
ಕಳೆದು ನಿರ್ವಾಣವಪ್ಪ ಪದವ ಕರುಣಿಸಯ್ಯ ಕೂಡಲ
ಚೆನ್ನಸಂಗಮದೇವಾ.

ತಾಳು ಬೋಳು ಕಪ್ಪರವೆಂತೆಂಬರು. ತಾಳಾವುದು, ಬೋಳಾವುದು,
ಕಪ್ಪರವಾವುದೆಂದರಿಯರು. ಕಾಯದ ಕಳವಳದ ಗುಣವ
ತಾಳಬಲ್ಲಡೆ ತಾಳು, ಸಂಸಾರವಿಷಯವ ಬೋಳಿಸಬಲ್ಲಡೆ
ಬೋಳು. ಪರದಲ್ಲಿ ಪರಿಣಾಮಿಸಬಲ್ಲಡೆ ಕಪ್ಪರ, ಇಂತಿಲ್ಲ
ದಿದ್ದಡೆ ನಮ್ಮ ಕೂಡಲ ಚೆನ್ನಸಂಗಯ್ಯನಲಿ ಡೊಂಬರ ಬೋಳು.

ಬಸವಣ್ಣನವರೇ ತನ್ನ ಗುರುವೆಂದೂ ಇಷ್ಟಲಿಂಗವನ್ನು ದಯಪಾಲಿಸಿ ತನ್ನನ್ನು ಉದ್ಧರಿಸಿದ ಮಹಾತ್ಮರೆಂದೂ ಹೇಳಿಕೊಂಡ ಚೆನ್ನಬಸವಣ್ಣ ಶುದ್ಧ ಜ್ಞಾನಮಾರ್ಗದ ಬೋಧಕನಾಗಿ ಹೆಸರು ಪಡೆದಿದ್ದಾನೆ. ಸಿದ್ಧರಾಮಯೋಗಿ ಕರ್ಮಯೋಗಿ, ಪರೋಪಕಾರ, ವಿದ್ಯಾಪ್ರಸಾರ ಮೊದಲಾದ ಸಮಾಜಸೇವೆಯೇ ತನ್ನ ಜೀವನದ ಧ್ಯೇಯವೆಂದು ಸಾರಿದಾತ. ಕೆರೆ ಕಟ್ಟಿಸುವುದು, ಮಠಾದಿಗಳನ್ನು ನಿರ್ಮಿಸುವುದು ಮುಂತಾದ ಕೆಲಸಗಳಲ್ಲಿ ನಿರತನಾಗಿ ಇದ್ದವ. ಇವರ ಉಪದೇಶವನನು ಮೆಚ್ಚಿದ ಸಹಸ್ರಾರು ಶಿಷ್ಯರು ಇವನೊಡನೆ ಸೇರಿ ಕಾಯಕನಿರತರಾಗಿದ್ದರು.

ಕೃಷಿಯ ಮಾಡಿ ಉಣ್ಣದೆ, ಹಸಿವು ಹರಿವ ಪರಿ ಇನ್ನೆಂತೋ ?
ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತೋ ?
ಬೇಯದೆ ಅಶನನುಂಬ ಠಾವಾವುದು ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗಕ್ಕೆ ?

ಮಹದೇವಿಯಕ್ಕ ಬಸವಣ್ಣನಂತೆ ಬಹು ಜನಪ್ರಿಯಳಾದ ವಚನಕಾರ್ತಿ. ವೈರಾಗ್ಯವನ್ನೂ ಶರಣಸತಿ, ಲಿಂಗಪತಿ ಎಂಬ ತತ್ತ್ವವನ್ನೂ ಜೀವನದಲ್ಲಿ ಅನುಸರಿಸಿದಳಲ್ಲದೆ ವಚನಗಳಲ್ಲಿ ಬೋಧಿಸಿದಳು. ದೇವರ ಹಂಬಲವನ್ನೇ ವಸ್ತುಪನ್ನಾಗುಳ್ಳ ಈಕೆಯ ವಚನಗಳು ಉತ್ತಮ ಕಾವ್ಯಗುಣವನ್ನು ಪಡೆದಿವೆ.


ಹಸಿವಾದಡೆ ಭಿಕ್ಷಾನ್ನಗಳುಂಟು.
ತೃಷೆಯಾದಡೆ ಕೆರೆ ಹಳ್ಳಬಾವಿಗಳುಂಟು.
ಶಯನಕ್ಕೆ ಹಾಳು ದೇಗುಲಗಳುಂಟು.
ಚೆನ್ನಮಲ್ಲಿಕಾರ್ಜುನಯ್ಯ, ಆತ್ಮಸಂಗಾತಕ್ಕೆ ನೀನೆನಗುಂಟು.

ವನವೆಲ್ಲ ನೀವೆ
ವನದೊಳಗಣ ದೇವ ತರುವೆಲ್ಲ ನೀವೆ.
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ.
ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರ.

ವಚನಸಾಹಿತ್ಯದ ಹಿರಿಮೆಯನ್ನು ಶ್ರುತಪಡಿಸಲು ಇಲ್ಲಿ ಹೀಗೆ ಕೆಲವು ಉದಾಹರಣೆಗಳನ್ನು ಮಾತ್ರ ಕೊಡಲಾಯಿತು. ನಿಜವಾಗಿ ವಚನಸಾಹಿತ್ಯದ ಮುತ್ತು ರತ್ನಗಳನ್ನೆಲ್ಲ ಆಯ್ದು ಒಂದೆಡೆ ಇಟ್ಟು ನೋಡಿದಲ್ಲಿ ಅವುಗಳ ಯೋಗ್ಯತೆ, ಹಿರಿಮೆ ತಿಳಿಯುತ್ತದೆ. ಅಂದಿನಿಂದ ಇಂದಿನ ವರೆಗೂ ಅವುಗಳ ಕಾಂತಿ ಮಾಸಿಲ್ಲ.

13-14ನೆಯ ಶತಮಾನ

[ಬದಲಾಯಿಸಿ]
  • ಲಿಂಗಾಯತ ಶರಣರು ಆಂಧ್ರ ಪ್ರದೇಶ ಓರಂಗಲ್ಲು, ಶ್ರೀಶೈಲ, ಮಧ್ಯಕರ್ನಾಟಕದ ಉಳಿವಿ, ಹಂಪೆ, ದ್ವಾರಸಮುದ್ರಗಳಲ್ಲಿ ನೆಲೆನಿಂತರು. ವಚನರಚನೆ ಇಳಿಮುಖವಾಯಿತು. ವಚನಕಾರರ ಬದುಕನ್ನು ಬರಹಕ್ಕೆ ಇಳಿಸುವ ಕೆಲಸ ಪ್ರಾರಂಭವಾಯಿತು. ಲಿಂಗಾಯತ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣಗಳ ಯುಗ ಪ್ರಾರಂಭವಾಯಿತು.
  • ಆದರೂ ಲಿಂಗಾಯತಕ್ಕೆ ಸ್ಥಿರನೆಲೆ ಸಿಕ್ಕಿದ್ದು ನೂರೊಂದು ವಿರಕ್ತರು ಬಾಳಿದ ಪ್ರೌಢದೇವರಾಯನ ಕಾಲದಲ್ಲಿ, ವಿಪ್ಲವಕ್ಕೆ ಗುರಿಯಾಗಿ ನಷ್ಟಗೊಳ್ಳುತ್ತಿದ್ದ ಮತ್ತು ಪುರಾಣರಚನೆಯಿಂದ ಅಲಕ್ಷಿಸಲ್ಪಟ್ಟ ಹಿಂದಣ ವಚನ ಸಾಹಿತ್ಯದ ಸಂಗ್ರಹ, ಸಂಕಲನ, ಸಂಪಾದನಕಾರ್ಯ ಪ್ರಾರಂಭವಾಯಿತು. ಈ ಕಾರ್ಯವನ್ನು ನಿರ್ವಹಿಸಿದವರಲ್ಲಿ ಮಹಲಿಂಗ ಮೊದಲಾದವರೂ ಪ್ರೇರಣೆ ಕೊಟ್ಟವರಲ್ಲಿ ಲಕ್ಕಣದಂಡೇಶ ಮುಂತಾದವರೂ ಪ್ರಮುಖರು.
  • ಇವರ ಪ್ರಯತ್ನದಿಂದಾಗಿ ಸಕಲಪುರಾತನರ ವಚನ, ಏಕೋತ್ತರಶತಸ್ಥಲ, ಲಿಂಗಲೀಲಾ ವಿಲಾಸಚಾರಿತ್ರ ಮೊದಲಾದ ಗ್ರಂಥಗಳಲ್ಲಿ ವಚನಗಳು ತತ್ತ್ವದ ತಳಹದಿಯ ಮೇಲೆ ಸೂತ್ರಬದ್ದವಾಗಿ ಹೆಣೆಯಲ್ಪಟ್ಟವು. ಹೀಗೆ ವಚನಸಾಹಿತ್ಯ ಹೊಸ ರೂಪವನ್ನು ರೂಪಿಸಿಕೊಂಡು ಮುನ್ನಡೆಯಿತು. ಶಿವನಿಷ್ಠೆಯ ಸಂಗವಂಶ ಕೊನೆಗೊಂಡ ಹದಿನೈದನೆಯ ಶತಮಾನದಲ್ಲಿ ನಡೆದ ವಚನ ಸಾಹಿತ್ಯ ಸಂಬಂಧವಾದ ಆಂದೋಲನೆಯ ಕೇಂದ್ರವ್ಯಕ್ತಿ ತೋಂಟದ ಸಿದ್ಧಲಿಂಗ.
  • ಷಟ್‍ಸ್ಥಲದ ಇತಿಹಾಸದಲ್ಲಿ ಎರಡನೆಯ ಚೆನ್ನಬಸವಣ್ಣನೆನಿಸಿದ ಈತನ ದೈವೀ ಬೆಂಬಲದಿಂದ ವಚನಗಳ ಸಂಕಲನ, ಸಂಪಾದನೆ ಇನ್ನೂ ತೀವ್ರಗೊಂಡಿತು. ಈ ಜಾಗ್ರತ ಸಮಯದಲ್ಲಿ ಹುಟ್ಟಿದ ನಾಲ್ಕು ಶೂನ್ಯ ಸಂಪಾದನೆಗಳಲ್ಲಿ ಕೊನೆಯವೆರಡು ಈತನ ಶಿಷ್ಯವರ್ಗದವರಿಂದ ರಚನೆಗೊಂಡುದು ಗಮನಿಸಬೇಕಾದ ಸಂಗತಿ. ಸಾಲದುದಕ್ಕೆ ಈತನ ಶಿಷ್ಯರಲ್ಲಿ ಸಂಪಾದನೆಯ ಒಂದು ಶಿಷ್ಯ ಪರಂಪರೆಯೇ ಮುಂದುವರಿಯಿತು.
  • ಈ ಸಂಪ್ರದಾಯಕ್ಕೆ ಸಂಬಂಧಿಸಿದ ಸಂಪಾದನೆಯ ಚೆನ್ನಂಜೆದೇವ, ಸಂಪಾದನೆಯ ಬೋಳಬಸವದೇವ, ಸಂಪಾದನೆಯ ಗುರುಶಾಂತದೇವ, ಸಂಪಾದನೆ ಸಿದ್ಧವೀರಣಾರ್ಯ ಮುಂತಾದವರು ಕಾರಣವಾಗಿ ಲಿಂಗವಿಕಳಾವಸ್ಥೆಯ ವಚನ, ಮಿಶ್ರ ಸ್ತೋತ್ರದ ವಚನ, ಆಚರಣೆಯ ವಚನ, ಬಸವಸ್ತೋತ್ರದ ವಚನ, ಶರಣಸ್ತೋತ್ರದ ವಚನ-ಇತ್ಯಾದಿ ಹೊಸ ಹೊಸ ವಚನಸಂಕಲನ ಗ್ರಂಥಗಳು ಹೊಬಂದುವು.
  • ಹೀಗೆ ಬಸವಣ್ಣನ ತರುವಾಯದ ಅವಧಿ ವಚನಗಳ ಸಂಕಲನ, ಸಂಪಾದನೆಗಳ ಯುಗವೆನಿಸಿದರೂ ತೋಂಟದ ಸಿದ್ಧಲಿಂಗ, ಘನಲಿಂಗಿದೇವ, ಕಾಡಸಿದ್ಧ, ಷಣ್ಮುಖಸ್ವಾಮಿ ಮೊದಲಾದವರು ವಚನಗಳನ್ನು ರಚಿಸಿದ್ದಾರೆ. ಗುಣ, ಗಾತ್ರ ಎರಡು ದೃಷ್ಟಿಯಿಂದಲೂ ಇವರ ವಚನಗಳು ಬಸವಯುಗದ ವಚನಗಳ ಎತ್ತರಕ್ಕೆ ಬಾರವು.[]
  • ಶರಣರು ತ್ರಿವಿಧಿ, ಮಂತ್ರಗೋಪ್ಯ, ಕರಣಹಸಿಗೆ, ವಿವಿಶ್ರಾರ್ಪಣ ಇತ್ಯಾದಿ ಪ್ರಕಾರಗಳನ್ನು ನಿರ್ಮಿಸಿದ್ದರೂ ವಚನ ಪ್ರಕಾರ ಅವರ ವ್ಯಕ್ತಿಸಿದ್ಧಿಯ ಪತಾಕೆ. ಇದರಲ್ಲಿ ವಚನ, ಸ್ವರವಚನವೆಂದು ಎರಡು ವಿಧಗಳುಂಟು. ಒಂದು ಅನುಭಾವದ ಗದ್ಯ ಪ್ರಕಾರ, ಇನ್ನೊಂದು ಅನುಭಾವದ ಗೀತಪ್ರಕಾರ. ವಚನಗಳು ತಮ್ಮ ಉಜ್ಜ್ವಲ ಸಾಹಿತ್ಯದಿಂದ, ಸ್ವರವಚನಗಳು ತಮ್ಮ ಗೇಯ ಗುಣದಿಂದ ಸಮಸ್ತ ಸಹೃದಯರನ್ನೂ ಆಕರ್ಷಿಸಿವೆ.
  • ಪ್ರತಿಯೊಬ್ಬ ಶರಣನ ವಚನ ಮತ್ತು ಸ್ವರವಚನಗಳ ಕೊನೆಗೆ ಕೃತಿಕಾರನನ್ನು ಸೂಚಿಸುವ, ಆರಾಧ್ಯದೈವನಾಮಾಂಕಿತವಾದ, ಮುದ್ರೆ ಇರುತ್ತದೆ. ಕೂಡಲಸಂಗಮದೇವ, ಕೂಡಲಚೆನ್ನಸಂಗಮದೇವ ಹೀಗೆ ಒಂದೊಂದು ದೇವತೆಯ ಸುತ್ತ ಇರುವ ಕೆಲವು ಅಂಕಿತಗಳು ಒಂದೊಂದು ಮಾರ್ಗವನ್ನು ನಿರ್ಮಿಸುತ್ತವೆ. ಗಾತ್ರದೃಷ್ಟಿಯಿಂದ ವಚನ ಒಂದು ಬಿಡಿ ಮುಕ್ತಕ.
  • ಸ್ವರವಚನ 3-5, 7-9 ನುಡಿಗಳ ಒಂದು ಪುಂಜ. ಹಾಡುಗಬ್ಬಗಳಾದ ಈ ಸ್ವರವಚನಗಳು ಬಸವ ಮುಂತಾದವರಿಂದ ಪ್ರವೃತ್ತವಾಗಿದ್ದು ಮುಂದೆ ಬಂದ ನಿಜಗುಣಶಿವಯೋಗಿ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಬೀಲಾಮಹಾಂತ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಮೈಲಾರದ ಬಸವಲಿಂಗ ಶರಣ ಮೊದಲಾದವರ ಕೈಯಲ್ಲಿ ಉಚ್ಛ್ರಾಯಸ್ಥಿತಿಗೇರಿದುವು.
  • ವಚನಸಾಹಿತ್ಯದ ಈ ರಮ್ಯ ಮಾರ್ಗ ವಿಕಾಸಗೊಂಡು ಹಲವು ಬಗೆಯಾಗಿ ಬೆಳೆದಿರುವುದನ್ನು ಮುಂದಿನ ದಾಸಸಾಹಿತ್ಯದಲ್ಲೂ ಇಸ್ಲಾಮೀ ಅನುಭಾವಿ ಸಾಹಿತ್ಯದಲ್ಲೂ ಕಾಣಬಹುದಾಗಿದೆ. ವಚನಗಳು ಚರಿತ್ರೆ, ತತ್ವ್ತ, ಸಾಹಿತ್ಯ ದೃಷ್ಟಿಗಳಿಂದ ಅಮೂಲ್ಯವೆನಿಸಿವೆ. ತಾವು ಸತ್ಯವನ್ನು ಕಂಡ ಉಂಡ ಅನುಭವವನ್ನು ಅಭಿವ್ಯಕ್ತಗೊಳಿಸುವಲ್ಲಿ ಕೆಲವು ಸಲ ಶರಣರ ವ್ಯಕ್ತಿಗತ ಅಂಶಗಳೂ ವಚನಗಳಲ್ಲಿ ನುಸುಳಿಬಂದಿವೆ.
  • ಆರು ಜನ್ಮದವ ಬಸವಣ್ಣನೆಂಬರು ಈ ಗಾರುಮಾತ ಕೇಳಲಾಗದು. ಅನು ಹಾರುವನೆಂದರೆ ಕೂಡಲ ಸಂಗಯ್ಯ, ನಗುವನಯ್ಯ, ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ ಒಬ್ಬ ಜಂಗಮದ ಅಭಿಮಾನದಿಂದ, ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳ ಚಲುವೆ-ಇಂಥ ಅಂಶಗಳು ಶರಣರ ಚರಿತೆ ಬರೆಯುವಲ್ಲಿ ಪ್ರಮಾಣಗಳಾಗಿ ನಿಲ್ಲುತ್ತವೆ. ವಚನಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಸಮಕಾಲೀನ ಸಮಾಜ ಚಿತ್ರ ಮೂಡಿದೆ.

ಮಾರಿಕವ್ವೆಯನೋಂತು ಕೊರಳಲ್ಲಿ ಕಟ್ಟಿಕೊಂಬರು,
ಮರನ ಗೋಟಿಗೆ ಬರ್ಪ ಕರಿಕುಳದೈವಕ್ಕೆ ಕುರಿಯನಿತ್ತಿಹವೆಂದು ನಲಿನಲಿದಾಡುವರು,
ವಿಷ್ಣುವ ಪೂಜಿಸಿ ಮುಡಿಹ ಸುಡಿಸಿಕೊಂಬುದ ಕಂಡೆ,
ಜಿನನ ಪೂಜಿಸಿ ಬತ್ತಲೆಯಪ್ಪುದ ಕಂಡೆ,
ಮೈಲಾರನ ಪೂಜಿಸಿ ನಾಯಾಗಿ ಬೊಗಳುವುದ ಕಂಡೆ-

  • ಇಂಥ ಈ ವ್ಯಕ್ತಿಗತ ಸಂಗತಿ ಮತ್ತು ಸಮಾಜ ಚಿತ್ರಣಗಳಿಗಿಂತ ಶರಣರಿಗೆ ಮುಖ್ಯವಾದುದು ಲಿಂಗಾಯತ ಧರ್ಮದ ತತ್ತ್ವ ಮತ್ತು ಆಚರಣೆಗಳ ಪ್ರತಿಪಾದನೆ. ಹೀಗಾಗಿ ಷಟ್‍ಸ್ಥಲ, ಅಷ್ಟಾವರಣ. ಪಂಚಾಚಾರ ಇತ್ಯಾದಿಗಳ ತಾತ್ತ್ವಿಕ ವಿವೇಚನೆ ಅಲ್ಲಿ ವಸ್ತುವಾಗಿ ನಿಂತಿತು. ಕಾಯಕ, ಜಾತಿಭೇದ ನಿರ್ಮೂಲನ, ಸ್ತ್ರೀಪುರುಷ ಸಮಾನತೆ-ಮುಂತಾದ ಆಚರಣೆಗಳು ಅಲ್ಲಿ ಪ್ರತಿಪಾದಿಸಲ್ಪಟ್ಟಿವೆ.
  • ಕಾಯಕವೇ ಕೈಲಾಸ, ಸಕಲ ಜೀವಾತ್ಮರಿಗೆ ಲೇಸ ಬಯಸುವಲ್ಲಿಂ ಕುಲಜ, ದಯವೇ ಧರ್ಮದ ಮೂಲ ಅರಿವೇ ಗುರು, ದೇವನೊಬ್ಬ ನಾಮ ಹಲವು ಕೂಡಲಸಂಗನ ಒಲಿಸಲು ಬಂದ ಪ್ರಸಾದಕಾಯವ ಕೆಡಿಸಲಾಗದು. ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ, ಆಚಾರ ಸ್ವರ್ಗ ಅನಾಚಾರವೇ ನರಕ-ಎಂಬ ಲೋಕಮಾನ್ಯ ವಿಚಾರಗಳು ಆವಿರ್ಭವಿಸಿದುವು.
  • ಹೀಗೆ ಹೊಸ ಆಚಾರ ಹೊಸ ವಿಚಾರಗಳನ್ನು ತುಂಬಿಕೊಂಡ ವಚನಗಳು ಹೊಸ ಬಾಷೆ ಹೊಸ ಸಾಮಗ್ರಿ ಹೊಸ ಸಂವೇದನೆಗಳನ್ನು ಹೊತ್ತು ಹೊರಬಂದುವು. ಇದರ ಫಲವಾಗಿ ಕಮ್ಮಟ, ಗಂಜಳ, ಹನ್ನಿಬ್ಬರು, ಉಳ್ಳವರು, ಮೇಳಾಪ, ತುಯ್ಯಲ ಇತ್ಯಾದಿ ದೇಶೀಪದಗಳು ಸಾಹಿತ್ಯದಲ್ಲಿ ಸಾರ್ಥಕಗೊಂಡುವು. ಬದುಕಿನ ಹಂಚು ಹರಳು ಇತ್ಯಾದಿ ವಸ್ತುಕೋಟಿಯೆಲ್ಲ ಅವರ ಕೈಯಲ್ಲಿ ಹದವಾಗಿ ಬಳಕೆಗೊಂಡುವು.
  • ಅವರವರ ಕಾಯಕಗಳು ವಚನಗಳಲ್ಲಿ ರೂಪಕ ರೂಪತಾಳಿ ಶೋಭಿಸಿದವು. ಇದರಿಂದ ಕನ್ನಡ ಭಾಷೆಯ ಅಭಿವ್ಯಕ್ತಿ ಸತ್ತ್ವ ಸಾವಿರ ಪಾಲು ವಿಸ್ತಾರಗೊಂಡಿತು. ಸಾಮಾನ್ಯವಾಗಿ ವಚನ ಸಾಹಿತ್ಯವೆಂದರೆ ಸ್ವಾನುಭವ ಲೋಕಾನುಭವಗಳ ಸಂಗಮ. ಶೈಲಿ ದೃಷ್ಟಿಯಿಂದ ಈ ಸಾಹಿತ್ಯವನ್ನು ಪ್ರಸನ್ನ ಶೈಲಿ, ಬೆಡಗಿನ ಶೈಲಿ, ಶಾಸ್ತ್ರಶೈಲಿಯೆಂದು ವಿಭಾಗಿಸಬಹುದು.
  • ಪ್ರಸನ್ನಕ್ಕೆ ಬಸವ, ಬೆಡಗಿಗೆ ಪ್ರಭುದೇವ, ಶಾಸ್ತ್ರಕ್ಕೆ ಚೆನ್ನಬಸವ ಇವರ ವಚನಗಳು ಮಾದರಿ. ಆಡುಮಾತಿನ ಕೆಚ್ಚು. ಕಮನೀಯತೆ, ಅನುಭವದ ಪ್ರಾಮಾಣಿಕತೆ, ಅಭಿವ್ಯಕ್ತಿಯ ತೀವ್ರಪರಿಣಾಮ-ಇವು ಇದರ ಗುಣವಿಶೇಷಗಳು, ಹೀಗಾಗಿ ಇದು ಕನ್ನಡದ ಅನುಪಮ ಅನುಭಾವಸಾಹಿತ್ಯ. ವಿಶ್ವವಾಙ್ಮಯಕ್ಕೆ ಕನ್ನಡ ನೀಡಿದ ವಿಶಿಷ್ಟ ಸಾಹಿತ್ಯ ಎಂಬ ಕೀರ್ತಿ ಗಳಿಸಿದೆ.
  • ವಚನಶಾಸ್ತ್ರ ಪಿತಾಮಹರೆನಿಸಿದ ಫ. ಗು. ಹಳಕಟ್ಟಿಯವರು ಪ್ರಥಮತಃ ವಚನ ಸಾಹಿತ್ಯವನ್ನು ಸಂಗ್ರಹಿಸಿ ಮುದ್ರಿಸಿದರು. ಉತ್ತಂಗಿ ಚೆನ್ನಪ್ಪನವರ ಕೊಡುಗೆ ಅಗಾಧವಾದದ್ದು. ಇದಾದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯವೂ,ಲಿಂಗಾಯತ ಅಧ್ಯಯನ ಸಂಸ್ಥೆ ಗದಗ, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಬಸವ ಸಮಿತಿ, ಕೂಡಲಸಂಗಮದ ಬಸವ ಧರ್ಮ ಪೀಠ, ಇನ್ನಿತರ ಸಂಸ್ಥೆಗಳು ವಚನ ಸಾಹಿತ್ಯವನ್ನು ಪರಿಷ್ಕರಿಸಿ ಮುದ್ರಿಸುವ ಕೆಲಸವನ್ನು ಮಾಡುತ್ತಿವೆ. ಎಂ. ಆರ್. ಶ್ರೀನಿವಾಸಮೂರ್ತಿಗಳು, ಬಿ. ಶಿವಮೂರ್ತಿಶಾಸ್ತ್ರಿಗಳು, ಆರ್. ಸಿ. ಹಿರೇಮಠ, ಭೂಸನೂರುಮಠ, ಸ. ಸ. ಮಾಳವಾಡ, ಎಲ್. ಬಸವರಾಜು, ಎಂ ಎಂ ಕಲಬುರ್ಗಿ, ವೀರಣ್ಣ ದಂಡೆ, ವೀರಣ್ಣ ರಾಜೂರ ಮೊದಲಾದ ವಿದ್ವಾಂಸರು ಈ ಕ್ಷೇತ್ರದಲ್ಲಿ ಗಣ್ಯ ಕೆಲಸ ಮಾಡಿದ್ದಾರೆ.

ಇಪ್ಪತ್ತನೆಯ ಶತಮಾನದಲ್ಲಿ

[ಬದಲಾಯಿಸಿ]
  • ವಚನ ಕನ್ನಡ ಸಾಹಿತ್ಯಕ್ಕೇ ವಿಶಿಷ್ಟವಾದ ಒಂದು ಸಾಹಿತ್ಯ ಪ್ರಕಾರ, ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಶಿವಶರಣರ ವಚನ ವಾಙ್ಮಯ ಲೋಕದ ಅನುಭಾವ ಸಾಹಿತ್ಯಕ್ಕೆ ಒಂದು ಶ್ರೀಮಂತ ಕೊಡುಗೆ, ಸುಮಾರು ಹನ್ನೆರಡು ಶತಮಾನದ ಹೊತ್ತಿಗೆ ಯಶಸ್ಸಿನ ತುದಿಯನ್ನೇರಿದ ಈ ಸಾಹಿತ್ಯ ಪ್ರಕಾರ ಬರಬರುತ್ತಾ ತನ್ನ ಉಜ್ಜ್ವಲ ಕಾಮತಿಯನ್ನು ಕಳೆದುಕೊಂಡು ಕೊನೆಗೊಮ್ಮೆ ನಿಂತೇ ಹೋಯಿತು.
  • ನಡುವೆ ಒಂದು ಸಲ ಅದರ ಪುರುಜ್ಜೀವನದ ಪ್ರಯತ್ನ ನಡೆದಿರುವುದಕ್ಕೇನೋ ಸಾಹಿತ್ಯ ಚರಿತ್ರೆಯಲ್ಲಿ ಉಲ್ಲೇಖಗಳಿವೆ ; ಆದರೆ ಯಶಸ್ಸಿನ ದಾಖಲೆಗಳಿಲ್ಲ. ಬಸವಣ್ಣ, ಅಕ್ಕಮಹಾದೇವಿ ಮೊದಲಾದವರು ಈ ಅಭಿವ್ಯಕ್ತಿ ಮಾಧ್ಯಮದಲ್ಲಿ ತೋರಿದ ಕೌಶಲವೇ ಒಂದು ಜಲಚಿಹ್ನೆಯಾಗಿ ನಿಂತು ಹೋಯಿತು. ಇದನ್ನು ಅನುಸರಿಸಿದವರು ಅನುಕರಿಸಿದವರು ಅನೇಕರು; ಆದರೆ ಮೀರಿದವರು ಮಾತ್ರ ಒಬ್ಬರೂ ಇಲ್ಲ.
  • ಸರಳವಾದ ಮಾತುಗಳಲ್ಲಿ ಅನುಭವ ತೀವ್ರತೆಯನ್ನು, ಪ್ರಾಮಾಣಿಕ ಆತ್ಮವಿಮರ್ಶೆಯಲ್ಲಿ ದಿಟ್ಟತನವನ್ನು ಅಲಂಕಾರ ಭಾರವಿಲ್ಲದ ರಚನೆಯಲ್ಲಿ ಕಲೆಗಾರಿಕೆಯನ್ನು ಹೊಮ್ಮಿಸುವುದು ಮುಂದಿನವರಿಗೆ ಸಾಧ್ಯವಾಗಲಿಲ್ಲ. ಆದರೂ ಪ್ರಯೋಗಪ್ರಿಯರಿಗೆ ವಚನಗಳ ಮಾದರಿ ಯಾವಾಗಲೂ ಒಂದು ಆಹ್ವಾನವಾಗಿ ಉಳಿದದ್ದರಲ್ಲಿ ಆಶ್ಚರ್ಯವಿಲ್ಲ.
  • ವಿಚಾರಧಾರೆ, ಆವೇಶ, ಉತ್ಸಾಹಗಳು ಛಂದಸ್ಸಿನ ಚೌಕಟ್ಟನಲ್ಲಿ ಸಿಕ್ಕಿ ಸೊರಗದಿರಬೇಕಾದರೆ ವಚನದಂಥ ಒಂದು ಮಾಧ್ಯಮ ಎಲ್ಲ ಕಾಲಕ್ಕೆ ಸಮರ್ಪಕವಾಗಿ ಅಗತ್ಯವಾಗಿ ತೋರಿದ್ದರಲ್ಲಿಯೆ ಈ ಪ್ರಕಾರದ ಮಹತ್ತ್ವವಿದೆ. ಅಂತೆಯೇ ಹೊಸ ಸಾಹಿತ್ಯದಲ್ಲಿಯೂ ವಚನ ಪ್ರಕಾರ ಒಂದು ಪ್ರೇರಣೆಯ ಸೆಲೆಯಾಗಿದೆ ಅನುಕರಣೆಗೆ ಮಾದರಿಯಾಗಿದೆ.
  • ಸಾಹಿತ್ಯಚರಿತ್ರೆಯ ಪರಿಭಾಷೆಯಲ್ಲಿ ನಮಗೆ ಪರಿಚಿತರಾಗಿರುವಂಥ ವಚನಕಾರರು ಇಂದು ಇಲ್ಲ. ಆದರೆ ಸಾಹಿತ್ಯಕ್ಷೇತ್ರದ ಬೇರೆಬೇರೆ ಪ್ರಕಾರಗಳಲ್ಲಿ ಇಂದು ಕೆಲಸ ಮಾಡುತ್ತಿರುವ ಅನೇಕರು ವಚನಗಳನ್ನು ರಚಿಸಿದ್ದಾರೆ. ಈ ಗದ್ಯಗೀತ ಪ್ರಕಾರದ ರೂಪಾಂಶಕ್ಕೆ ಹೊಸ ಲೇಖಕರಿಗೆ ಅನ್ಯಮೂಲಗಳ ಸ್ಫೂರ್ತಿಯೂ ಲಭಿಸಿದೆ. ವಾಲ್ಟ್‍ವಿಟ್ ಮನ್ನನ ಗರಿಕೆಗಳು, ರವೀಂದ್ರನಾಥ ಠಾಕೂರರ ಕವಿತೆಗಳ ಇಂಗ್ಲಿಷ್ ಅನುವಾದಗಳು ಈ ನಿಟ್ಟಿನಲ್ಲಿ ನೆನಪಿಗೆ ಬರುವ ಮೂಲಗಳು.
  • ಸಮಕಾಲೀನರು ಅನೇಕರು ವಚನಗಳನ್ನು ಇಲ್ಲವೇ ರೂಪಾಂಶದಲ್ಲಿ ವಚನಗಳಿಗೆ ತೀರ ಹತ್ತಿರವಾದ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಇಪ್ಪತ್ತರೆಡು ಜನ ಲೇಖಕರು ಮೂವತ್ತಕ್ಕೂ ಹೆಚ್ಚು ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಹದಿನೆಂಟು ಜನರ ವಚನಗಳು, ಬೇರೆ ಬೇರೆ ಗ್ರಂಥಗಳಲ್ಲಿ ಪತ್ರಿಕೆಗಳಲ್ಲಿ ಅಚ್ಚಾಗಿವೆ ಅಥವಾ ಹಸ್ತ ಪ್ರತಿಯ ರೂಪದಲ್ಲಿವೆ.
  • ಈ ಲೇಖಕರಲ್ಲಿ ಮೂರೇ ಮೂರು ವಚನಗಳನ್ನು ಬರೆದ ತೀ. ನಂ. ಶ್ರೀಕಂಠಯ್ಯನವರೂ ಮೂರುಸಾವಿರದ ಐದುನೂರು ವಚನಗಳನ್ನು ಬರೆದು ಪ್ರಖ್ಯಾತರಾದ ಶ್ರೀಮನ್ನಿಡುಮಾಮಿಡಿ ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಚೆನ್ನಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳೂ (ಜಚನಿ) ಸೇರಿದ್ದಾರೆ; ಶಂಕರಮ್ಮ, ಓಂಕಾರಮ್ಮನವರ ಹಾಗೆ ವಾಚಕರಿಗೆ ಪರಿಚಯವೇ ಇಲ್ಲದವರೂ ನಾಡಿನಲ್ಲಿ ಮನೆ ಮಾತಾಗಿರುವ ಕುವೆಂಪು, ಬೇಂದ್ರೆಯವರೂ ಇದ್ದಾರೆ.
  • ರಂಗಣ್ಣ, ದಿವಾಕರರಂಥ ಹಿರಿಯರೂ ಚಂದ್ರಶೇಖರ ಐತಾಳ, ಭೈರವಮೂರ್ತಿಯವರಂಥ ತರುಣರೂ, ಸಿಂಪಿ ಲಿಂಗಣ್ಣನವರಂಥ ಮಾಸ್ತರರೂ, ಸದಾಶಿವ ಶಿವಾಚಾರ್ಯರು, ಗಂಗಾಧರ ಶಿವಾಚಾರ್ಯರು ಅವರಂಥ ಮಠಾಧೀಶರೂ, ಜೋಳದರಾಶಿ ದೊಡ್ಡನಗೌಡರಂಥ ಗಮಕಿಗಳೂ ಈ ಪಟ್ಟಿಯಲ್ಲಿ ಬರುತ್ತಾರೆ. ಈ ಎಲ್ಲ ಲೇಖಕರು ಬರೆದಿರುವ ವಚನಗಳ ಸಂಖ್ಯೆ ಒಂದು ಅಂದಾಜಿನಂತೆ ಸುಮಾರು ಹತ್ತು ಸಾವಿರವಾಗುತ್ತದೆ. ಇದೇನು ಸಾಮಾನ್ಯವಾದ ಸಾಧನೆಯಲ್ಲ.
  • ರಚನೆಯ ವಿನ್ಯಾಸದ ದೃಷಿಯಿಂದಲೂ ವಸ್ತುವೈವಿಧ್ಯದ ದೃಷ್ಟಿಯಿಂದಲೂ ಈ ವಚನಗಳು ನಾನಾ ಬಗೆಯಾಗಿವೆ. ಇವುಗಳಲ್ಲಿ ಪ್ರಾಚೀನ ಸಂಪ್ರದಾಯವಿದೆ. ಆಧುನಿಕ ವಿಚಾರಧಾರೆಯಿದೆ. ಆತ್ಮಶೋಧನೆಯಿದೆ, ಪ್ರಕೃತಿವರ್ಣನೆಯಿದೆ, ಭಕ್ತಿ ಇದೆ. ರಾಜಕೀಯವಿದೆ. ಭಾವುಕತೆಯಿದೆ, ವೈಚಾರಿಕತೆಯಿದೆ, ಪರದ ಆದರ್ಶವಿದೆ, ಇಹದ ವಾಸ್ತವಿಕತೆಯಿದೆ, ಮರಗಟ್ಟಿಕೊಂಡ ಪ್ರತಿಭೆಯೊಡನೆ ಕುಡಿಯೊಡೆದ ಪ್ರಜ್ಞೆಯಿದೆ.
  • ಇಲ್ಲಿ ಅರಳಿದ ವಚನಗಳಿವೆ. ಕರುಳಿನ ವಚನಗಳಿವೆ ; ಅನುಕರಿಸಿದ ವಚನಗಳಿಗೂ ಸೋಗಿನ ವಚನಗಳಿಗೂ ಬರವಿಲ್ಲ. ಈ ಆಧುನಿಕ ವಚನ ಸಾಹಿತ್ಯ ಮೈದಾಳಿರುವ ರೀತಿ, ಅದರ ಮುಖ್ಯ ಒಲವು ನಿಲುವುಗಳು, ಪ್ರವೃತ್ತಿಗಳು ವಿಸ್ತಾರವಾದ ಪ್ರತ್ಯೇಕ ಅಧ್ಯಯನಕ್ಕೆ ಅರ್ಹವಾಗಿವೆ. ಸಮಕಾಲೀನ ವಚನಕಾರರಲ್ಲಿ ಮೊದಲು ಗಮನ ಸೆಳೆಯುವ ಹೆಸರು ಎಸ್. ವಿ. ರಂಗಣ್ಣನವರದು. ಜಚನಿ ಅವರನ್ನು ಬಿಟ್ಟರೆ ರಂಗಣ್ಣನವರೇ ಅತಿ ಹೆಚ್ಚಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾರೆ.
  • ರಂಗಬಿನ್ನಪ ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಅವರ ವಚನಗಳು 1212. ಹೊಸ ಸಾಹಿತ್ಯದಲ್ಲಿ ಮೊತ್ತಮೊದಲಿಗೆ ವಚನಗಳನ್ನು ಬರೆದು ಪ್ರಕಟಿಸಿದ ಕೀರ್ತಿಯೂ ಅವರದೆ. 1925ರ ಅಕ್ಟೋಬರ್ ತಿಂಗಳಿನಲ್ಲಿ ಅವರು ತಮ್ಮ ಪ್ರಥಮ ವಚನವನ್ನು ಬರೆದುದಾಗಿ ಹೇಳಿಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳ ಅನಂತರ (1934) ರಂಗಣ್ಣವನರ ಹದಿನೈದು ವಚನಗಳನ್ನು ರಂಗಯ್ಯನ ವಚನಗಳು ಎಂಬ ಶೀರ್ಷಿಕೆಯಲ್ಲಿ ಪ್ರಬುದ್ಧ ಕರ್ಣಾಟಕ ಮೊದಲ ಬಾರಿಗೆ ಪ್ರಕಟಿಸಿತು.
  • ಆಧುನಿಕರಲ್ಲಿ ಇದಕ್ಕಿಂತ ಮೊದಲು ಬೇರೊಬ್ಬರು ವಚನಗಳನ್ನು ಪ್ರಕಟಿಸಿರುವುದು ಗಮನಕ್ಕೆ ಬಂದಿಲ್ಲ. ಐತಿಹಾಸಿಕವಾಗಿ ಆಧುನಿಕ ವಚನಕಾರರಲ್ಲಿ ರಂಗಣ್ಣನವರು ಮೊದಲಿಗರಾಗಿರುವುದು ಮಾತ್ರವಲ್ಲದೆ ಈ ಸಾಹಿತ್ಯ ಪ್ರಕಾರಕ್ಕೆ ರಾಷ್ಟ್ರದ ಅತ್ಯಚ್ಚ ಪ್ರಶಸ್ತಿಯನ್ನು ಗಳಿಸಿ ಸಫಲತೆಯನ್ನು ಪಡೆದಿದ್ದಾರೆ. ಒಂದು ದೃಷ್ಟಿಯಿಂದ ಬೇಂದ್ರೆಯವರೇ ರಂಗಣ್ಣನವರಿಗಿಂತ ಮೊದಲು ವಚನಗಳನ್ನು ರಚಿಸಿದವರು ಎನ್ನಬೇಕು.
  • ಅವರ ಪ್ರಖ್ಯಾತವಾದ ಕರುಳಿನ ವಚನಗಳು ಜಯ ಕರ್ನಾಟಕದಲ್ಲಿ 1931ರಲ್ಲಿ ಪ್ರಕಟವಾದರೂ ಅವನ್ನು ಪೂರ್ಣಗೊಳಿಸಿದ್ದು 1942ರಲ್ಲಿಯೆ ಎಂದೂ ಅವರು ಹೇಳಿದ್ದಾರೆ. ಆದರೆ ರಂಗಣ್ಣನವರ ವಚನಗಳು ರಚನಾ ವಿನ್ಯಾಸದಲ್ಲಿ ವಚನಗಳ ಚೌಕಟ್ಟಿನಲ್ಲಿ ಬರುವ ಹಾಗೆ ಬೇಂದ್ರೆಯವರ ವಚನಗಳು ಬರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಬೇಂದ್ರೆಯವರ ವಚನಗಳು ಹೆಚ್ಚು ಕಡಿಮೆ ಫ್ರೀ-ವ್ಹರ್ಸಿಗೆ ಸರಿಯಾಗುವ ಸ್ವಚ್ಛಂದ ಗೀತೆಗಳೇ ಸರಿ.
  • ಪ್ರಾಚೀನರ ವಚನಗಳು ಶುಧ್ಧ ಪಾರಮಾರ್ಥಿಕ ಸಾಧನೆಯ ಮಾರ್ಗದೊಳಗಿನವು. ಕರುಳಿನ ವಚನಗಳೂ ಲೌಕಿಕ ಭಾವದ ಪ್ರಕಟನೆಗೆ ಬಳಸಿಕೊಂಡಂಥವು-ಎಂಬ ಬೇಂದ್ರೆಯವರ ಮಾತುಗಳು ಸಹಜವಾಗಿ ವಸ್ತುವನ್ನುದ್ದೇಶಿಸುತ್ತವೆ. ರೂಪಾಂಶದಲ್ಲಿ ಅವು ಪ್ರಾಚೀನರ ವಚನಗಳಿಗಿಂತಲೂ ವಿಟ್‍ಮನ್, ಠಾಕೂರರ ಕೃತಿಗಳಿಗೆ ಹತ್ತಿರವಾದ ಗದ್ಯಗೀತೆಗಳು. ಕುವೆಂಪು ಅವರ ಕಿಂಕಿಣಿಗೂ ದಿವಾಕರರ ಅಂತರಾತ್ಮನಿಗೆ ಕೃತಿಗೂ ಈ ಮಾತುಗಳೇ ಅನ್ವಯವಾಗುತ್ತವೆ.
  • ರಂಗಣ್ಣನವರ ವಚನಗಳಲ್ಲಿ ಪ್ರಾಚೀನ ವಚನಗಳ ಪ್ರತಿಧ್ವನಿಯನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ. ಇದು ಆ ಸಾಹಿತ್ಯ ಪ್ರಕಾರ ಹೊಸ ಕಾಲದ ಲೇಖಕರ ಮೇಲೆ ಪ್ರಭಾವ ಬೀರಿರುವುದಕ್ಕೆ ಒಂದು ಉದಾಹರಣೆಯೂ ಹೌದು. ಎಂಟು ನೂರು ವರ್ಷಗಳಷ್ಟು ಹಿಂದಿನ ಆ ವಚನಗಳು ರೂಪಗೊಂಡ ಅನ್ಯಾದೃಶ ಸೊಗಸಿಗೆ, ಅವುಗಳಲ್ಲಿ ಅಭಿವ್ಯಕ್ತಗೊಂಡ ನಿಚ್ಚಳ ಪ್ರಮಾಣಿಕತೆಗೆ, ತೊಯ್ತ ತುಡಿತಗಳಿಗೆ ರಂಗಣ್ಣನವರ ಪ್ರತಿಭೆ ಸ್ಪಂದಿಸಿದ್ಧರಲ್ಲಿ ಆಶ್ಚರ್ಯವಿಲ್ಲ.
  • ಹೊಸ ಕಾಲಕ್ಕೆ ತಕ್ಕಂತೆ ಸಾಹಿತ್ಯವೂ ಹೊಸ ರೂಪವನ್ನು ಪಡೆಯುವುದು ಅನಿವಾರ್ಯವಾದುದರಿಂದ, ಈ ವಚನಗಳಾದರೂ ಪ್ರಾಚೀನದ ಪ್ರತಿರೂಪವಾದರೆ ಹೆಚ್ಚಿನದೇನನ್ನೂ ಸಾಧಿಸುವಂತಿರಲಿಲ್ಲ. ಆಗಲೇ ವಚನ ಸಾಹಿತ್ಯ ಸೃಷ್ಟಿಯ ಎರಡನೆಯ ಆವರ್ತದಲ್ಲಿಯ ವಚನಗಳ ಬಣ್ಣ ಅಳಿಸಿರುವುದು. ಕಾವು ಕಳೆದಿರುವುದು, ದನಿ ಮಾಸಿರುವುದು ಸಾಹಿತ್ಯ ಚರಿತ್ರೆಯ ವಿದ್ಯಾರ್ಥಿಗಳಿಗೆ ತಿಳಿದಿದೆ. ಬದಲಾದ ಮೌಲ್ಯ ಹೀಗಾಗುತ್ತದೆ.
  • ಹೊಸ ಕಾಲದ ವಚನ ಹೀಗಾಗಬಾರದೆಂಬುದನ್ನು ಆರಂಭಕ್ಕೇ ರಂಗಣ್ಣನವರು ಅರಿತುಕೊಂಡರು. ಅವರಿಗೆ ವಚನಕಾರರ ಸೃಷ್ಟಿಯ ಸೀಮೆಯ ಪರಿಚಯವಿತ್ತು ; ಸೀಮಿತಗಳ ತಿಳಿವಳಿಕೆಯಿತ್ತು. ವಚನ ಅದೇ ರೂಪದಲ್ಲಿ ಉಳಿಯುವುದು ಸಾಧ್ಯವಿಲ್ಲ ಎನ್ನುವುದೂ ಅವರಿಗೆ ಖಚಿತವಾಯಿತು. ಆಧುನಿಕ ವಚನ ಯಾವ ರೂಪ ತಾಳಬೇಕೆಂಬುದಕ್ಕೆ ಅವರು ವಿವಿಧ ಪ್ರಯೋಗಗಳನ್ನು ನಡೆಸಿದರು. ಹೊಸ ಕಾಲದ ಲೇಖಕರ ಈ ನಿಟ್ಟಿನ ಎಲ್ಲ ಪ್ರಯತ್ನಗಳಿಗೂ ಅವರು ಆಚಾರ್ಯರಾದರು.


ಕರ್ನಾಟಕ ಜನಪದವಿಂದು ಕುರಿಮಂದೆ,
ನರಿಬಳಗ, ಹೆಬ್ಬಾವು ಸಂಸಾರ,
ಎಮ್ಮೆ ದೊಡ್ಡಿ, ತಟ್ಟು ಕೊಟ್ಟಿಗೆ,
ಇರುವೆ ಗೂಡು ; ಎಲ್ಲವನ್ನು ಎಲ್ಲರನ್ನು ಎಚ್ಚರಿಸಿ,
ಇದಿರು ನಿಲ್ಲಿಸಿಕೊಂಡು, ಆಣತಿ ಪಾಲಿಸಯ್ಯ ;
ಕನ್ನಡವ ಕಾಪಿಡಲು ಸಂಕಲ್ಪ ತಿಳಿಸಯ್ಯ,
ಕೌಶಲ್ಯ ಕಲಿಸಯ್ಯ.

ಏಳನೆಯ ಮಾಸದಲ್ಲಿ ಬಸುರಿ ಬಲಬಾಹುವಿಗೆ ಕನ್ನಡ ರಕ್ಷೆ ಕಟ್ಟಬೇಕು.
ಶಿಶು ಜನಿಸಿದ ಒಡನೆ ತಿನ್ನಿಸುವ ಬಜೆಬೆಣ್ಣೆಯ ಜೊತೆಗೆ ಕನ್ನಡವ ಬೆರೆಸುವುದ ಮರೆಯಬಾರದು.
ಅನ್ಯಭಾಷೆಯ ಅನ್ಯಾಯ ಕಾಮವೆನ್ನುವ ಸಾಂಕ್ರಾಮಿಕ ಜಾಡ್ಯ ಸೋಂಕದಿರಲು,
ಆರು ತಿಂಗಳು ತೀರುವುದರೊಳಗೆ ಕನ್ನಡ ಸಿಡುಬು ಹಾಕಿಸಬೇಕು.
ಆಮೇಲೆ ಸಮಸಂವತ್ಸರ ನಡೆಯುವಾಗ ಕತ್ತರಿಸಲಯ್ಯ ಕನ್ನಡಕೆ ಮುಡಿಹು,
ಓನಾಮ ಹಬ್ಬಕ್ಕೆ ಸ್ವಾಮಿಯಾಗಿರಲಿ ಕನ್ನಡದಿಂದ ಮಾಡಿದ ಸಿದ್ಧಿ ವಿಘ್ನೇಶ.
ವಿದ್ಯಾಭ್ಯಾಸ ಆಗಬೇಕು ಕನ್ನಡ ಹಲಗೆ ಬಳಪ ಬಾಲಬೋಧೆಗಳ ಬಳಸುತ್ತ.
ಮುಂಜಿಯಲಿ ಕನ್ನಡ ಜನಿವಾರ ಕನ್ನಡ ಗಾಯತ್ರಿ,
ಮದುವೆಯಲಿ ಕನ್ನಡ ಭಾಷಿಂಗ ಕನ್ನಡ ಮಾಂಗಲ್ಯ,
ಕನ್ನಡ ಸಂಕಲಿಕೆ ಕನ್ನಡ ಧಾರೆಯ ಸೀರೆ.
ತರುವಾಯ ಮನೆ ಕಟ್ಟಬೇಕು ಕನ್ನಡ ಇಟ್ಟಿಗೆ ದೂಲ ಹೆಂಚುಗಳಿಂದ;
ಮೇಲೆ ಏರಿಸಬೇಕು ಕನ್ನಡ ಬಾವುಟವ.
ದಿನದಿನವು ಕನ್ನಡದ ಆಹಾರ, ಕನ್ನಡದ ವಿಹಾರ,
ಕನ್ನಡದಲ್ಲಿ ಶಯನ; ಎದ್ದೊಡನೆ ಕನ್ನಡದ ಸ್ಮರಣೆ,
ಮಧ್ಯಾಹ್ನ ಕನ್ನಡ ಪೂಜೆ. ಈ ನಾಡು ಆ ನಾಡು ನುಡಿಗಳೆಲ್ಲ
ನೆಮ್ಮದಿಯ ದಾಸದಾಸಿಯರಾಗಿ ಓಡಾಡಿ ಗೆಯ್ಮೆ ದುಡಿದು ತಂದು ತುಂಬಿಸಲಿ ಕನ್ನಡ ಕುಟುಂಬದುಗ್ರಾಣವನ್ನ;
ಕನ್ನಡ ಕುಲವ ಭಾರಿಯದಾಗಿ ಬೆಳೆಸಿ ಏಳಿಸಲಿ.
ಇಂಥ ಬಾಳ ಪದ್ಧತಿಯೆ ಕನ್ನಡಿಗನಿಗೆ ಸವಿ ಸಾರ್ಥಕವಾದ ನರಜನುಮದಾನಂದ ದೀಕ್ಷೆ ;
ಅಪ್ಪಣೆಯ ಹಾಡಯ್ಯ, ಅನುಕೂಲ ಮಾಡಯ್ಯ, ವಿಧಿಕೂಸ ಹೊಕ್ಕಳಲಿ ಹೆತ್ತನೆಯ ರಂಗಯ್ಯ.

ಹಾಗೆ ಕನಸಾಯ್ತು :
ನೆನ್ನೆ ಮೊನ್ನೆ ಸರ್ಕಾರದಾಶ್ರಯದಲ್ಲಿ
ಒಂದು ಗುಮಾಸ್ತಿಕೆಗಾಗಿ
ಪರೀಕ್ಷೆ ತೆಗೆದುಕೊಂಡ ವಾಲ್ಮೀಕಿ.
ಆ ವರ್ಷ ಸಾಹಿತ್ಯ ಪ್ರಶ್ನಪತ್ರಿಕೆಯಲಿ
ರಾಮಾಯಣವ ಕುರಿತು ಕೆಲವ ಕೇಳಿತ್ತು.
ವಾಲ್ಮೀಕಿ ತೇರ್ಗಡೆಯಾಗಲಿಲ್ಲ !
ಏತಕ್ಕೆ ಆಗಲಿಲ್ಲ ?
ಗೋವಿಂದರಾಜ ತಿಲಕ ಮಹೇಶ್ವರ ತೀರ್ಥ
ಯಾವೊಂದು ವ್ಯಾಖ್ಯಾನವನು ಅವ ಓದಿಯೇ ಇರಲಿಲ್ಲ.
ಏನಜ್ಞಾನ, ರಂಗ ಸರ್ವಜ್ಞ !

ಮನುಜನಿಗೂ ಮುಳ್ಳುಹಂದಿಗೂ ಸಾಮ್ಯವಂತೆ, ಬೇರ್ಪಡಿಸುವ ಮುಖ್ಯ ವ್ಯತ್ಯಾಸವೊಂದರ ಹೊರತು : ಕಣೆಗಳೆಲ್ಲ ಅದರ ಮೈಯಿಂದ ಹೊರಗೆ, ಅವನಿಗಾದರೂ ಒಳಗೆ ; ಮನುಷ್ಯನಿಗೆಂಥ ಪ್ರಶಸ್ತಿಪತ್ರ ಇದು, ರಂಗೇಶ ?

ಇಂದಿನ ವಚನಗಳಿಗೂ ಹಿಂದಣ ವಚನಗಳಿಗೂ ಕೆಲವು ವಿಚಾರಗಳಲ್ಲಿರುವ ಸಾದೃಶ್ಯ

[ಬದಲಾಯಿಸಿ]
  • ಇಂದಿನ ವಚನಗಳಿಗೂ ಹಿಂದಣ ವಚನಗಳಿಗೂ ಕೆಲವು ವಿಚಾರಗಳಲ್ಲಿ ಸಾದೃಶ್ಯ ವೈದೃಶ್ಯಗಳಿರುವುದನ್ನು ನಾವು ಗಮನಿಸಬಹುದು; ಹಿಂದಿನ ವಚನಗಳ ತಿರುಳು ಭಕ್ತಿ, ವಿಚಾರ ಮತ್ತು ವಿಮರ್ಶೆ, ಹೊಸ ಕಾಲದ ವಚನಗಳು ವಿಚಾರವಿಮರ್ಶೆಗಳ ಜೊತೆಗೆ ಆರಿಸಿಕೊಂಡದ್ದು ವಚನರಚನೆಯ ವಿಧಾನವನ್ನು. ವಚನಗಳ ಒಂದು ಸಾಮಾನ್ಯ ಲಕ್ಷಣ ಅವುಗಳಲ್ಲಿ ಕಂಡುಬರುವ ಲಯಬದ್ಧತೆ. ಯಾವುದೇ ಬದ್ಧತೆ ಮುಕ್ತತೆಗಳಿಂದ ಬೇರೆಯಾಗಿ ವಚನಗಳು ಗದ್ಯಪದ್ಯದ ಒಂದು ನಡುವಣ ಸ್ಥಿತಿಯಲ್ಲಿದೆ.
  • ವಚನಗಳ ಲಯದ ಪ್ರಾಸಾದಿಕತೆ ಅವುಗಳ ಉಗಮವನ್ನು ಹಡುಗಳಲ್ಲೊತ್ರಿಪದಿಗಳಲ್ಲೊ ಕಾಣುವಂತೆ ಅನೇಕ ವಿದ್ವಾಂಸರನ್ನು ಪ್ರಚೋದಿಸಿದೆ. ಒಂದು ನಿರ್ದಿಷ್ಟವಾದ ಛಂದಸ್ಸಿನ ಚೌಕಟ್ಟಿನಿಂದ ವಚನವನ್ನು ಹೊರಗೆಳೆಯ ಬೇಕಾಗಿಲ್ಲ. ಭಾವಭರಿತವಾದ, ಆವೇಶಯುಕ್ತವಾದ ಮಾತು ತನಗೆ ತಾನೇ ಲಯಬದ್ಧವೂ ನಾದಮಯವೂ ಆಗುತ್ತದೆ. ಭಾಷೆ ಆರಂಭಗೊಂಡಾಗ ಅದು ನಾದಯುಕ್ತವಾಗಿತ್ತಂದೇ ಅನೇಕ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
  • ಇಂದಿನ ವೃತ್ತಪತ್ರಿಕೆಗಳ ವರದಿರೂಪದ ಬರಹಗಳಲ್ಲಿಯೂ ಭಾಷೆಯ ಅನಿವಾರ್ಯ ಅಂಶವಾದ ಲಯಗುಣವನ್ನು ಗುರುತಿಸಬಹುದು. ಆದುದರಿಂದ ವಚನಗಳಲ್ಲಿ ಭಾಷೆಯ ಈ ಸಹಜ ಲಯ, ಭಾವತೀವ್ರತೆ ಅನುಭವ ತೀವ್ರತೆಗಳಿಂದಾಗಿ ಮಿಕ್ಕ ಕಡೆ ಗಳಿಗಿಂತ ಸ್ಪಷ್ಟವಾಗಿ ಮೈದೋರಿದೆಯೆಂಬುದನ್ನು ಗಮನಿಸಿದರೆ ಸಾಕು. ಈ ದೃಷ್ಟಿಯಿಂದ ಇಂದಿನ ವಚನಗಳನ್ನು ಹಳೆಯ ವಚನಗಳೊಂದಿಗೆ ಹೋಲಿಸಿ ಪರಿಶೀಲಿಸಿದಾಗ, ಇಂದಿನ ವಚನಗಳ ಬಂಧದಲ್ಲಿ ಒಂದು ಬಗೆಯ ಶಿಥಿಲತೆ ಕಾಣಿಸುತ್ತದೆ.
  • ಹಳೆಯ ವಚನಗಳಲ್ಲಿ ಹಾಡುಗಬ್ಬಗಳ ಒಲವಿದ್ದರೆ ಇಂದಿನವು ಓದುಗಬ್ಬಗಳಾಗಿವೆ. ಅಂದಿನ ವಚನಗಳಲ್ಲಿ ಅಲ್ಲಲ್ಲಿ ತ್ರಿಪದಿಗಳೇ ಹುದುಗಿಕೊಂಡಿದ್ದರೆ, ಇಂದಿನ ವಚನಗಳಲ್ಲಿ ಎಷ್ಟೋ ಕಡೆ ಬರಡಾದ ಒರಟು ಗದ್ಯವಿದೆ. ತಂತ್ರದ ದೃಷ್ಟಿಯಿಂದ ಇನ್ನೊಂದು ಸಾಮಾನ್ಯ ಅಂಶವೆಂದರೆ, ಪ್ರಾಚೀನ ವಚನಗಳು ಬರೆದವರ ಗುಪ್ತ ಅಂಕಿತಗಳನ್ನೊಳಗೊಂಡಿರುವುದು. ಮಧ್ಯಕಾಲದ ಭಕ್ತಿ ಸಾಹಿತ್ಯದ ಒಂದು ಪ್ರಧಾನ ಲಕ್ಷಣ ಇದು.
  • ಹೆಚ್ಚು ಕಡಿಮೆ ಇಂದಿನ ವಚನಕಾರರೆಲ್ಲ ಈ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ. ಕುವೆಂಪು, ಬೇಂದ್ರೆ ಅವರಿಗೆ ವಚನ ಬರಹ ಕೇವಲ ಒಂದು ಕಾವ್ಯವಿಧಾನ ಅಷ್ಟೆ. ಅವರಂತೆಯೆ ಸಿಂಪಿ ಲಿಂಗಣ್ಣ, ವಾಮನ ಭಟ್ಟ ಮೊದಲಾದವರಿಗೆ ಅಂಕಿತದ ಅಗತ್ಯ ತೋರಲಿಲ್ಲ. ಆರ್. ಬಾಳ ಮೊದಲಾದ ಇನ್ನೂ ಕೆಲವರಿಗೆ ಇದರಲ್ಲಿ ಯಾವುದೇ ವಿಧಧ ಕಟ್ಟುನಿಟ್ಟಿಲ್ಲ.
  • ರಂಗಣ್ಣ ಜಚನಿ, ಪರಮೇಶ್ವರ ಭಟ್ಟ ಅವರಂಥವರಿಗೆ ಇದು ತಾಂತ್ರಿಕ ಅನಿವಾರ್ಯತೆ. ದಿವಾಕರರ ಒಳನುಡಿಗಳಲ್ಲಿಯೂ ಅಂತರಾತ್ಮನನ್ನು ಕುರಿತು ಸಂಬೋಧನೆಯಿದೆ. ಮತಾತೀತವಾದ ಭಕ್ತಿಯನ್ನು ಲೌಕಿಕ ಜೀವನದ ವಿವಿಧ ನಿಲವುಗಳನ್ನೂ ಅಭಿವ್ಯಕ್ತಗೊಳಿಸುವುದು ಆಧುನಿಕ ವಚನಗಳ ಒಂದು ಸಾಧನೆಯಾಗಿದೆ. ಜಚನಿ ಅವರನ್ನುಳಿದು ಇತರ ವೀರಶೈವ ಮಠಾಧೀಶರು ರಚಿಸಿದ ವಚನಗಳು ತೀರ ಸೀಮಿತವಾದ ಧಾರ್ಮಿಕ ಪರಿಸರದಲ್ಲಿ ಸುಂದರವಾಗಿ ಅರಳದೆ ಹೋಗಿವೆ.
  • ಜಚನಿ ಅವರ ಆರಂಭದ ವಚನಗಳನ್ನು ಅವರ ಈಚಿನ ವಚನಗಳೊಂದಿಗೆ ಹೋಲಿಸಿದಾಗ ವೈವಿಧ್ಯ ಕುಂದಿರುವುದು ಸ್ಪಷ್ಟವಾಗುತ್ತದೆ. ದೊಡ್ಡನಗೌಡರು, ಜೀರಿಗೆಕಟ್ಟಿ ಬಸಪ್ಪನವರು ಮೊದಲಾದವರು ಸಂಪ್ರದಾಯದ ವಚನಗಳಿಂದ ಸಂಪೂರ್ಣವಾಗಿ ಪ್ರಭಾವಿತರಾಗಿದ್ದರೂ ಲೌಕಿಕವನ್ನು ಕಡೆಗಣಿಸುವುದಿಲ್ಲ. ದಿವಾಕರ ಹಾಗೂ ಸಿಂಪಿಯವರ ವಚನಗಳಲ್ಲಿ ಅತೀಂದ್ರಿಯ ಪ್ರಜ್ಞೆಯ ಪುಣ್ಯಸ್ಪರ್ಶದಿಂದ ಪುಳಕಿತಗೊಳ್ಳುವ ಕವಿಚೇತನದ ಕಂಪನವಿದೆ.

ವಿಜ್ಞಾನಿಗಳಿಗೆ ಅಜ್ಞಾನವಾಗಿ ಕಾಡಿತ್ತು ಮಾಯೆ,
ಸತ್ಯರಿಗೆ ಅಸತ್ಯವಾಗಿ ಕಾಡಿತ್ತು ಮಾಯೆ.
ಸಾಹಿತಿಗಳಿಗೆ ಸಂಪ್ರದಾಯವಾಗಿ ಕಾಡಿತ್ತು ಮಾಯೆ.
ವಿರಾಗಿಗೆ ಅನುರಾಗವಾಗಿ ಕಾಡಿತ್ತು ಮಾಯೆ.
ಹಿರಿಯರಿಗೆ ಕಿರುಕುಳವಾಗಿ ಕಾಡಿತ್ತು ಮಾಯೆ.
ಶ್ರೀ ನಿಡುಮಾಮಿಡಿ ಶ್ರೀ ಗಿರಿ ಸೂರ್ಯಸಿಂಹಾಸನಾಧೀಶ್ವರ
ಮಾಯಾ ಮೋಹಕೆ ಮರುಳಾಗದವರ ಕಾಣೆನಯ್ಯ.
ಹೊಟ್ಟೆಯ ಪಾಡಿಂಗೆ ಪಟ್ಟಕ್ಕೇರುವವರಿಗೆ
ನುಡಿಸೇವೆಯ ಮಾತೇಕೆ, ನಾಡಸೇವೆಯ ದಂದುಗವೇಕೆ ?
ವಂದನೆಗೆ ಆಶಿಸುವರು ; ಪರನಿಂದೆಗೆ ಆನಂದಿಸುವರು.
ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯಸಿಂಹಾಸನಾಧೀಶ್ವರನ
ಸುಖಸಾರಾಯವು ಅವರಿಗೆ ರುಚಿಸದು.
ಸೀಮೆ ರಾಜನಿಗಲ್ಲದೆ ರಸಜ್ಞನಿಗುಂಟೆ ?
ಸೀಮೆ ವಾರಿಧಿಗಲ್ಲದೆ ವಾಙ್ಮಯಕ್ಕುಂಟೆ ?
ಸೀಮೆ ರಸಾನ್ನಕ್ಕುಂಟಲ್ಲದೆ ರಸೋಕ್ತಿಗುಂಟೆ ?
ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯಸಿಂಹಾಸನಾಧೀಶ್ವರ,
ಸೀಮಾತೀತ ಸಾಹಿತಿ: ಸೀಮಾತೀತ ಸಾಹಿತ್ಯ.

  • ಬೇಂದ್ರೆಯವರು ಕರುಳಿನ ವಚನಗಳಲ್ಲಿ ವಾತ್ಸಲ್ಯ ಭಾವ ಮಡುಗಟ್ಟಿದ್ದರೆ, ಕುವೆಂಪು ಅವರು ಕಿಂಕಿಣಿಯ ನಾದದಲ್ಲಿ ಆತ್ಮಶೋಧನೆಯಗೆ ತೊಡಗುತ್ತಾರೆ. ರಂಗಣ್ಣನವರ ವಿಮರ್ಶನ ಪ್ರಜ್ಞೆ ವಿಶ್ವವ್ಯಾಪಕವಾದುದು : ಪರಮೇಶ್ವರ ಭಟ್ಟರು ಸಮಕಾಲೀನ ಜೀವನದ ಸಣ್ಣಪುಟ್ಟ ಸಂಗತಿಗಳಿಗೆ ವಿಲಕ್ಷಣವಾದ ತಿರುವು ಕೊಡುತ್ತಾರೆ. ಚಂದ್ರಶೇಖರ ಐತಾಳರ ವಚನಗಳ ಕೇಂದ್ರಬಿಂದು ತಾಯಿ, ತಾಯಿತನ, ಮೊತ್ತದಲ್ಲಿ ಇಂದಿನ ವಚನ ಸೆಕ್ಯುಲರ್ ಆಗಿದೆ.
  • ಅಂದಮಾತ್ರಕ್ಕೆ ಅದು ಆರ್ತತೆಯನ್ನು, ಆತ್ಮನಿರೀಕ್ಷಣೆಯನ್ನು, ಆನಂದಾನುಭವವನ್ನು ಕಡೆಗಣಿಸಿದೆ ಎಂದು ಅರ್ಥವಲ್ಲ. ಹಿಂದಿನ ವಚನಗಳಲ್ಲಿ ಒಂದೇ ಸಮನೆ ಕೇಳಿಸುತ್ತಿದ್ದುದು, ಪರಮಾತ್ಮನನ್ನು ಅರಸುತ್ತಿದ್ದ ಆತ್ಮದ ಕರೆ, ಈ ಹಾದಿಯಲ್ಲಿ ಕಲ್ಲು ಮುಳ್ಳು ಕಸ ಇರಬಾರದೆಂದು ಪದೇ ಪದೇ ಒತ್ತಿಹೇಳುವ ಶುಚಿಜೀವನದ ಸಂದೇಶ. ಇಂದಿನ ವಚನಗಳಿಗಾದರೊ ಬೇಲಿಯಿಲ್ಲ. ಜೀವನದ ವಿಸ್ತಾರವನ್ನೆಲ್ಲ ಅವು ಆವರಿಸುತ್ತವೆ.
  • ಸಂಕೀರ್ಣ ಬದುಕಿನ ಎಲ್ಲ ಪದರಗಳನ್ನೂ ವರ್ಣಿಸಲು ಅವು ಸಮರ್ಥವಾಗಿವೆ. ಅಂದರೆ ಹನ್ನೆರಡನೆಯ ಶತಮಾನದಲ್ಲಿ ವಚನ ಸಾಧಿಸಿದುದನ್ನೆಲ್ಲ ಇಂದು ಸಾಧಿಸಲಾಗದು. ಅದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ; ಸಾಧುವೂ ಅಲ್ಲ. ಅಂದಿನವರೆದುರಿಗಿದ್ದುದು ಒಂದೇ ಧ್ಯೇಯ ; ಕಾವ್ಯ ಶುದ್ಧ ಜೀವನ ಸಂಹಿತೆ. ಇಂದಿನ ಲೇಖಕನೋ ಸಂಕೀರ್ಣತೆಯ ಶಿಶು. ಭಾಷೆಯಾದರೋ ಅಂದಿನವರು ನಡೆದುದೆ ದಾರಿ : ಇಂದು ಮಾರ್ಗನಿರ್ಮಾಣ ಸುಲಭವಲ್ಲ.
  • ಪರಮೇಶ್ವರ ಭಟ್ಟರು ಇಂದು ವಚನಗಳನ್ನು ಬರೆಯುತ್ತಿರುವವರಲ್ಲಿ ಅತ್ಯಂತ ಮುಖ್ಯರು. ಜಚನಿ ಹಾಗೂ ರಂಗಣ್ಣನವರನ್ನುಳಿದರೆ ಭಟ್ಟರೇ ಹೆಚ್ಚು ಸಂಖ್ಯೆಯ ವಚನಗಳನ್ನು ಬರೆದಿರುವವರು. ಅವರ ಉಪ್ಪು ಕಡಲು ಸಂಗ್ರಹದಲ್ಲಿ 705 ವಚನಗಳಿವೆ. ಇದು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲೊಂದು. ಭಟ್ಟರ ಪರಿಣತ ಕೃತಿಯೂ ಹೌದು. ಯಶಸ್ಸಿನ ದೃಷ್ಟಿಯಿಂದಲೂ ಅವರ ರಚನೆಗಳು ವಿಶೇಷ ಉಲ್ಲೇಖಕ್ಕೆ ಅರ್ಹವಾದವು.
  • ಇವನ್ನು ಹೋಲಿಸಬಹುದಾದರೆ ಕೇವಲ ರಂಗಣ್ಣನವರ ವಚನಗಳೊಂದಿಗೆ ಮಾತ್ರ. ಹಾಗೆ ಮಾಡಿದರೂ ರಂಗಣ್ಣನವರ ವಚನಗಳಲ್ಲಿ ಅಷ್ಟಾಗಿ ಕಾಣಿಸದ ಕೆಲವು ಗುಣಗಳು ಭಟ್ಟರ ವಚನಗಳಲ್ಲಿ ಕಾಣಿಸುತ್ತವೆ. ರಂಗಣ್ಣನವರು ಪ್ರಧಾನವಾಗಿ ಪಂಡಿತರು, ವಿಮರ್ಶಕರು. ಅವರ ವಚನಗಳಾದರೂ ಪಾಂಡಿತ್ಯ ವಿಮರ್ಶೆಯಿಂದಲೇ ತುಂಬಿವೆ ಎನ್ನಬಹುದು. ರಂಗಣ್ಣನವರ ಜೀವನಾನುಭವದೊಡನೆ ಅವರ ವ್ಯಾಪಕವಾದ ಅಧ್ಯಯನ ಸ್ಪರ್ಧಿಸುತ್ತಿರುವಂತೆ ಕಾಣುತ್ತದೆ.
  • ಭಟ್ಟರು ಕೇವಲ ವಿಮರ್ಶಕರಲ್ಲ, ಕವಿಗಳೂ ಹೌದು. ಅವರ ವಚನಗಳಲ್ಲಿ ಯಥೇಚ್ಛವಾಗಿ ಕಾವ್ಯ ಹೊಳವು ಹಾಕಿದೆ. ತಾಂತ್ರಿಕವಾಗಿ ಇಬ್ಬರೂ ಪ್ರಾಚೀನ ವಚನಗಳಿಗೆ ಸರಿಸಮನಾದ ರಚನೆಗಳನ್ನು ಮಾಡಿದ್ದಾರೆ. ಆದರೆ ಭಟ್ಟರ ವಚನಗಳಲ್ಲಿ ವಚನ ರೂಪ ಖಚಿತಗೊಂಡಿರುವ ಹಾಗೆ ರಂಗಣ್ಣನವರ ವಚನಗಳಲ್ಲಿ ಕಾಣಿಸುವುದಿಲ್ಲ.
  • ಸದಾಶಿವ ಗುರುವಿಗೆ ಭಟ್ಟರು ಮೊರೆಹೋಗುವುದರಲ್ಲಿ ಅಭಿವ್ಯಕ್ತವಾಗುವ ಆರ್ತತೆ ಉತ್ಕಟತೆಗಳಲು ರಂಗಣ್ಣನವರು ಮಾವಿನಕೆರೆಯ ಅಧಿದೈವಕ್ಕೆ ಪ್ರಾರ್ಥನೆ ಸಲ್ಲಿಸುವಾಗ ತೋರುವುದಿಲ್ಲ. ರಂಗಬಿನ್ನಪದ ವೈಚಾರಿಕತೆ ಭಾಷಣಾತ್ಮಕವಾದದ್ದು, ಉಪ್ಪುಕಡಲಿನ ವೈಚಾರಿಕತೆ ನಿವೇದನಾತ್ಮಕವಾದದ್ದು, ಮೊದಲನೆಯದರಲ್ಲಿ ನಿರೂಪಣೆ; ಎರಡನೆಯದರಲ್ಲಿ ತೋಡಿಕೆ.
  • ರಂಗಯ್ಯ ಆತ್ಮವನ್ನು ಮರೆಯದಿದ್ದರೂ ಲೋಕಕ್ಕೆ ಸನಿಯದವನು ; ಸದಾಶಿವಗುರು ಲೋಕವನನು ಕಡೆಗಾಣದಿದ್ದರೂ ಆತ್ಮಕ್ಕೆ ಹತ್ತಿರದವನು. ಈ ವಚನಗಳಲ್ಲಿ ಕಡಲಿನ ಆಳ ವೈಶಾಲ್ಯ ವೈವಿಧ್ಯಗಳನ್ನು ವರ್ಣಿಸುವ ನೆಪದಲ್ಲಿ ಕವಿ ಮನುಷ್ಯನ ಅಲ್ಪತೆಗಳನ್ನೆಲ್ಲ ಎತ್ತಿ ಆಡಿದ್ದಾನೆ. ಈ ವಚನಗಳು ಕಡಲಿನ ಒಂದು ವರ್ಣಮಯ ಆಲ್ಬಂ. ಇಲ್ಲಿನ ಕಡಲಿನ ಮೊರೆತ ಮಾನವಹೃದಯದ ತುಯಿತ; ಇದು ಅಪ್ಬಳಿಸುವುದಿಲ್ಲ ಸ್ಪರ್ಶಿಸುತ್ತದೆ ; ಭೋರ್ಗರೆಯುವುದಿಲ್ಲ ಪಿಸುಗುಡುತ್ತದೆ.
  • ಕಡಲ ಕಥನಕ್ಕೆ ಮೀಸಲಾದ ಈ ಏಳನೆಯ ನೂರು ವಚನಗಳ ಜೊತೆಗೆ ಮಿಕ್ಕ ಮೊದಲ ಆರುನೂರು ವಚನಗಳಲ್ಲಿಯೂ ಜೀವನದ ವಿಮರ್ಶೆಯಿದೆ; ಅನುಭವದ ತುಡಿತವಿದೆ ; ಆತ್ಮ ವಿಮರ್ಶೆಯ ಕೆಚ್ಚಿದೆ. ಬದುಕಿನ ನಾನಾಮುಖಗಳಲ್ಲಿ ಕಂಡು ಉಂಡ ಅನುಭವ ಈ ವಚನಗಳಲ್ಲಿ ತೊಟ್ಟಿಕ್ಕುತ್ತದೆ. ಇವುಗಳ ವಸ್ತು ನಿತ್ಯಜೀವನ. ಇವುಗಳ ನಿರ್ವಹಣೆಯಲ್ಲಿ ಪ್ರತಿಭೆಯಿದೆ, ಪಾಂಡಿತ್ಯವಿದೆ, ವ್ಯುತ್ಪತ್ತಿಯಿದೆ.
  • ಇಲ್ಲಿನ ಎಷ್ಟೊ ಸಂಗತಿಗಳು ಪರಮೇಶ್ವರ ಭಟ್ಟರ ಮಿಕ್ಕ ಕೃತಿಗಳನ್ನು ಬಲ್ಲವರಿಗೆ ಹೊಸವಲ್ಲ. ಅವರ ಅನೇಕ ವಿಚಾರಗಳು ಇಲ್ಲಿ ರೂಪಾಂತರಗೊಂಡಿರುವುದನ್ನು ಗಮನಿಸಬಹುದು. ಪ್ರತಿಮೆ ಉಪಮೆ ಹೋಲಿಕೆ ಮೊದಲಾದ ಈ ವಚನಗಳ ಪರಿಕರಗಳು ಬಹುವಾಗಿ ಸಮಕಾಲೀನ ಜೀವನದಿಂದ ಎತ್ತಿಕಕೊಂಡವು. ಸ್ಕೂಟರ್ ಮೇಲೆ ಹೋಗುತ್ತಿರುವ ಗಂಡಹೆಂಡಿರು ಆಧುನಿಕ ದಾಂಪತ್ಯಕ್ಕೆ ಅದ್ಭ್ಬುತ ಸಂಕೇತವಾಗಬಲ್ಲರು.

ಸ್ಕೂಟರು ನಡೆಸುವ ಗಂಡನ ಮುಖ ಪಯಣದ ದಿಕ್ಕಿಗೆ ಮನೆಯ ಕಡೆಗೆ !
ಹಿಂದೆ ಕುಳಿತ ಹೆಂಡತಿಯ ಮುಖ ಬೀದಿಯ ದಿಕ್ಕಿಗೆ ಅಂಗಡಿಯ ಕಡೆಗೆ !
ಹೀಗೆ ಪತಿಯ ಮುಖ ಅತ್ತ ಸತಿಯ ಮುಖ ಇತ್ತ !
ಆದರೇನು ಒಮ್ಮ್ಮುಖವಾದರೆ ಚಿತ್ತಸುಖವದುವೆ ಸದಾಶಿವಗುರು.

ಇದು ಒಡೆಯುವುದಕ್ಕೂ ಸಂಕೇತ, ಕೂಡುವುದಕ್ಕೂ ಸಂಕೇತ, ಎರಡೇ ಸಾಲುಗಳಲ್ಲಿ ಭಾರತ ದೇಶದ ಸ್ವಾತಂತ್ರ್ಯೋತ್ತರ ಪರಿಸ್ಥಿತಿಯನ್ನು ವರ್ಣಿಸಿರುವ ರೀತಿ :

ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ ಸ್ವೈರ ಬಂತು.
ಮಗುವಿಗೆ ಮಾತಿನ ಜತೆಗೆ ಉಗ್ಗು ಬಂದಂತೆ ಸದಾಶಿವಗುರು.
ಬದುಕಿನ ಹೊಣೆಗಾರಿಕೆಯನ್ನು ಆತ್ಮವಿಶ್ವಾಸವನ್ನು ಹೇಳುವ ಹೊಸ ವಿಧಾನ :
ಬ್ರೇಕಿಲ್ಲದೆ ಬೆಲ್ಲಿಲ್ಲದ ಲೈಟಿಲ್ಲದ ಲೈಸೆನ್ಸಿಲ್ಲದ ಸೈಕಲ್ಲನು ಮೆಟ್ಟಂದೆ
ಟಾರಿಲ್ಲದ ಕಲ್ಲಿಲ್ಲದ ಈ ಹೊಳ್ಳದೆ ಈ ಕೊಳ್ಳದೆ ನಡೆಯೆಂದೆ
ಆದರು ನಾನೆದೆಗಡೆದೆಯೆ ಎಡೆಬಿಡದೆಯೆ ಪೆಡಲೊತ್ತುವೆ
ಮುಂದಾಗುವೆ ಗುರಿಮುಟ್ಟುವೆ ಸದಾಶಿವಗುರುವೆ.

  • ಒಂದು ಪಂಕ್ತಿಯಿಂದ ಹಿಡಿದು ಮುಕ್ಕಾಲು ಪುಟದವರೆಗೆ ಸಾಮಾನ್ಯವಾಗಿ ಇಲ್ಲಿನ ವಚನಗಳ ವ್ಯಾಪ್ತಿ. ಅವುಗಳ ರಚನಾವಿನ್ಯಾಸ ಎಲ್ಲ ವಿವರಗಳಲ್ಲಿಯೂ ಸಂಪೂರ್ಣವಾಗಿ ಪ್ರಾಚೀನದ ಶ್ರೇಷ್ಠ ವಚನಗಳನ್ನು ನೆನಪಿಗೆ ತರುತ್ತವೆ. ರೂಪಾಂತರ ದೃಷ್ಟಿ ಯಿಂದ ಎಷ್ಟೋ ಸಂದರ್ಭಗಳಲ್ಲಿ ಈ ವಚನಗಳನ್ನು ಹಳೆಯ ವಚನಗಳಿಂದ ಬೇರ್ಪಡಿಸುವುದು ಕೂಡ ಸಾಧ್ಯವಾಗುವುದಿಲ್ಲ. ಭಟ್ಟರ ಪ್ರಾಸ ಪ್ರಯೋಗಗಳು ವಿಚಿತ್ರ ರೀತಿಯಲ್ಲಿ ಪರಿಣಾಮವನ್ನುಂಟು ಮಾಡುತ್ತವೆ.
  • ಪರಿಚಿತ ಪ್ರಸಂಗಗಳಿಗೆ, ಮಾತುಗಳಿಗೆ ಭಟ್ಟರು ತರುವ ಅನಿರೀಕ್ಷಿತ ತಿರುವಿನಿಂದಲೇ ಒಂದು ಸ್ವಾರಸ್ಯ ಉಂಟಾಗುತ್ತದೆ. ಹಳೆಯ ಗಾದೆಯ ಮಾತುಗಳಿಗೆ ಅವರು ವಿಲಕ್ಷಣ ಪ್ರತಿಕ್ರಿಯೆಯನ್ನೊದಗಿಸುತ್ತಾರೆ. ಪದಗಳಲ್ಲಿ ತೀರ ಹೊಸ ಅರ್ಥವನ್ನೂ ಅವರು ಒಮ್ಮೊಮ್ಮೆ ಹೊಮ್ಮಿಸಬಲ್ಲರು. ಆತ್ಮವಿಮರ್ಶೆ ಈ ವಚನಗಳಲ್ಲಿ ತಾನೇ ತಾನಾಗಿ ತುಂಬಿಕೊಂಡಿದೆ. ಒಟ್ಟಿನಲ್ಲಿ ಆಧುನಿಕ ವಚನಸಾಹಿತ್ಯದ ಬೆಳಸು ಆಶಾದಾಯಕವಾಗಿದೆ ಎನ್ನಬಹುದು.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕ

[ಬದಲಾಯಿಸಿ]