ಕನ್ನಡದಲ್ಲಿ ಮುಕ್ತಕ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದಲ್ಲಿ ಮುಕ್ತಕ ಸಾಹಿತ್ಯ  : ಸಂಸ್ಕೃತ ಸಾಹಿತ್ಯದಲ್ಲಿ ಲೋಕೋಕ್ತಿ, ಶೋಕಗೀತೆ, ಚರಮಗೀತೆ, ಚಾಟುಪದ್ಯ, ಸೂಕ್ತಿ, ಸುಭಾಷಿತ ಮುಂತಾದ ಎಲ್ಲ ಬಗೆಯ ಲಘು ಪದ್ಯಗಳನ್ನೂ ಒಟ್ಟಾಗಿ ಮುಕ್ತಕಗಳು ಎಂಬ ಹೆಸರಿನಿಂದ ಕರೆಯುವುದು ರೂಡಿಯಲ್ಲಿದೆ. ಕನ್ನಡದಲ್ಲಿ ಕೂಡ ಈ ಬಗೆಯ ಲಘು ಪದ್ಯಗಳು ಪುರ್ವದಿಂದಲೂ ರಚಿತವಾಗತ್ತಲೇ ಬಂದಿವೆ. ಪ್ರಾಚೀನ ಕನ್ನಡದಲ್ಲಿ ಇವನ್ನು ಇಡುಕುಂಗಬ್ಬ, ಮುಕ್ತಕ, ವಚನ, ಚಾಟುಪದ್ಯ, ಶೋಕಗೀತೆ ಮುಂತಾಗಿ ಕರೆದರೆ ಹೊಸಗನ್ನಡದಲ್ಲಿ ನಾಟುನುಡಿ, ಹನಿಗವನ, ಮಿನಿಗವನ, ಚುಟುಕ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಹಾಗೆಯೇ ತೆಲುಗಿನಲ್ಲಿ ಚಾಟುಪದ್ಯ ಎಂದೂ ತಮಿಳಿನಲ್ಲಿ ನಾಟುನುಡಿ ಎಂದೂ ಉರ್ದುವಿನಲ್ಲಿ ಶಾಯಿರಿ ಎಂದೂ ಪ್ರಾಕೃತದಲ್ಲಿ ಗಾಹೆ ಎಂದೂ ಜಪಾನೀ ಭಾಷೆಯಲ್ಲಿ ಹೈಕು ಎಂದೂ ಕರೆಯುತ್ತಾರೆ. ಪಾಶ್ಚಿಮಾತ್ಯ ಸಾಹಿತ್ಯದಲ್ಲಿಯಂತೂ ಈ ಕಾವ್ಯ ಪ್ರಕಾರದ ಮಹಾಪುರವೇ ಹರಿದಿದೆ. ಇಂಗ್ಲಿಷ್ನಲ್ಲಿ ಎಪಿಗ್ರಮ್, ಲಿಮೆರಿಕ್, ಎಪಿಗ್ರಮ್ಮಾಟಿಕ್, ಎಲಿಜಿ, ನಾನ್ಸೆನ್ಸ್‌ ಪೊಯೆಮ್ಸ್‌ ಮುಂತಾಗಿ ಕರೆಯಲ್ಪಡುವ ರಚನೆಗಳು ನಮ್ಮ ಮುಕ್ತಕವನ್ನು ಹೋಲುವ ಪದ್ಯಗಳೇ ಆಗಿವೆ.

ಮುಕ್ತಕ ಆಕಾರದಲ್ಲಿ ಅತ್ಯಂತ ಸಣ್ಣದಾದ, ಒಂದೇ ಒಂದು ಭಾವವನ್ನು ಅರ್ಥಗಬಿರ್ತವಾಗಿ ಅಬಿವ್ಯಕ್ತಿಸುವ ಒಂದು ಬಿಡಿಪದ್ಯ. ಭಾವಕ್ಕೆ ಸೂಕ್ತ ಭಾಷೆಯಲ್ಲಿ ಅಬಿವ್ಯಕ್ತಗೊಂಡು ಮಿಂಚಿನಂತೆ ಕೋರೈಸುವ ಗುಣವುಳ್ಳದ್ದು. ಕಾವ್ಯ ಪ್ರಕಾರಗಳಲ್ಲಿಯೇ ಮುಕ್ತಕ ಅತ್ಯಂತ ಸಣ್ಣದಾದದ್ದೂ ಸುಂದರವಾದದ್ದೂ ಹೌದು.

ಪ್ರಾಚೀನತೆ[ಬದಲಾಯಿಸಿ]

ಮುಕ್ತಕದ ಪ್ರಾಚೀನತೆಯನ್ನು ಗುರುತಿಸುವುದು ಸುಲಭವಲ್ಲ. ಈಗ ತಿಳಿದಿರುವ ಮಟ್ಟಿಗೆ ವೇದಗಳೇ ಅತ್ಯಂತ ಪ್ರಾಚೀನತಮ ಕೃತಿಗಳಾಗಿರುವುದರಿಂದ ಸದ್ಯದ ಮಟ್ಟಿಗೆ ಇವೇ ಮುಕ್ತಕ ಪರಂಪರೆಯ ತಲಕಾವೇರಿಗಳೆಂದು ಹೇಳಬಹುದು. ಆದರೆ ವೇದಗಳಿಗಿಂತಲೂ ಮೊದಲು ಜನಪದರಲ್ಲಿ, ಜನಪದ ಗೀತೆಗಳ ರೂಪದಲ್ಲಿ ಈ ಮುಕ್ತಕಗಳು ಸೃಷ್ಟಿಗೊಂಡಿರಬಹುದೆಂದು ಹೇಳಬಹುದು. ವೇದಗಳಲ್ಲದೆ ಬ್ರಾಹ್ಮಣ, ಆರಣ್ಯಕ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿಯೂ ಮುಕ್ತಕ ರೂಪಗಳು ದೊರೆಯುತ್ತವೆ. ಸಂಸ್ಕೃತ ಸಾಹಿತ್ಯವಂತೂ ಮುಕ್ತಕಗಳ ಉಗ್ರಾಣವೇ ಆಗಿದೆ. ಅಲ್ಲಿ ಮುಕ್ತಕಗಳು ಮಹಾಕಾವ್ಯ, ಪುರಾಣ, ಐತಿಹಾಸಿಕ ಕಾವ್ಯ, ನಾಟಕ, ಕಥೆ, ಖಂಡಕಾವ್ಯ, ಶಾಸನ ಮುಂತಾದ ಕೃತಿಗಳ ನಡುನಡುವೆ ಬಿಡಿಯಾಗಿ ದೊರೆಯುತ್ತವೆ. ಅಲ್ಲದೆ ಬರಿಯ ಮುಕ್ತಕಗಳನ್ನೇ ಸಂಕಲನ ರೂಪದಲ್ಲಿ ಹೊಂದಿರುವ ಸಾಹಿತ್ಯ ರಾಶಿಯೇ ಸಂಸ್ಕೃತದಲ್ಲಿದೆ. ಪ್ರಾಕೃತ ಭಾಷೆಯಲ್ಲಿಯೂ ಮುಕ್ತಕಗಳು ವಿಶೇಷವಾಗಿ ರಚನೆಯಾಗಿವೆ. ಗಾಥಾಸಪ್ತಶತಿ, ತಂದುಲವೇಯಾಲಿಯಾ, ಭಕ್ತಪರಿಣ್ಣಾಯ, ವಜ್ಜಾಲಗ್ಗಂ, ಗಾಥಾಕೋಶೊ ಮುಂತಾದವು ಪ್ರಸಿದ್ಧ ಮುಕ್ತಕ ಸಂಕಲನಗಳು.

ಕನ್ನಡದಲ್ಲಿಯೂ ಮುಕ್ತಕಗಳು ಅಪಾರ ಸಂಖ್ಯೆಯಲ್ಲಿ ರಚಿತವಾಗಿವೆ. ಕನ್ನಡ ಶಾಸನಗಳು ಮತ್ತು ಪ್ರಾಚೀನ ಕನ್ನಡ ಕಾವ್ಯಗಳ ನಡುನಡುವೆ ಮುಕ್ತಕಗಳು ಸೇರಿಕೊಂಡಿರುವುವಲ್ಲದೆ ಹಲವು ಬಗೆಯ ಮುಕ್ತಕ ಸಂಕಲನಗಳೂ ಸಂಕಲಿತವಾಗಿವೆ.

ಮುಕ್ತಕ ಸಂಕಲನಗಳು[ಬದಲಾಯಿಸಿ]

ಕನ್ನಡದ ಸುಪ್ರಸಿದ್ಧ ಸಂಕಲನ ಗ್ರಂಥಗಳಾದ ಸೂಕ್ತಿ ಸುಧಾರ್ಣವ ಮತ್ತು ಕಾವ್ಯಸಾರ, ತಾತ್ತ್ವಿಕ ಗ್ರಂಥಗಳಾದ ಹದಿಬದೆಯ ಧರ್ಮ, ಅನುಭವ ಮುಕುರ, ಅನುಭವಸಾರ, ದ್ವಾದಶಾನುಪ್ರೇಕ್ಷೆ, ಅನುಭವಾಮೃತ, ಸಮಯ ಪರೀಕ್ಷೆ ಮುಂತಾದ ಕೃತಿಗಳಲ್ಲಿ ವಿಪುಲವಾಗಿ ಮುಕ್ತಕ ರೂಪದ ಪದ್ಯಗಳು ದೊರೆಯುತ್ತವೆ. ಪ್ರಾಚೀನ ಕನ್ನಡದ ವಿವಿಧ ಲಕ್ಷಣ ಗ್ರಂಥಗಳಾದ ಕವಿರಾಜಮಾರ್ಗ, ಛಂದೋಂಬುದಿ, ಉದಯಾದಿತ್ಯಾಲಂಕಾರ, ಶೃಂಗಾರ ರತ್ನಾಕರ, ಶಬ್ದಮಣಿದರ್ಪಣ, ಕಾವ್ಯಾವಲೋಕನ, ರಸರತ್ನಾಕರ, ಛಂದಸ್ಸಾರ ಮುಂತಾದ ಕೃತಿಗಳಲ್ಲಿಯೂ ಮುಕ್ತಕಗಳು ದೊರೆಯುತ್ತವೆ. ವೈಯಾಕರಣರು, ಆಲಂಕಾರಿಕರು, ಛಂದಸರು ಮೊದಲಾದ ಲಾಕ್ಷಣಿಕರು ತಮ್ಮ ಲಕ್ಷಣ ಗ್ರಂಥಗಳಲ್ಲಿ ಬೇರೆ ಬೇರೆ ಕಾವ್ಯಗಳಿಂದಾಯ್ದು ಇಂಥ ಪದ್ಯಗಳನ್ನು ಸಂದರ್ಭವರಿತು ಉದಾಹರಿಸಿರುತ್ತಾರೆ. ಇದೇ ರೀತಿ ಕನ್ನಡದಲ್ಲಿ ವಿಶೇಷವಾಗಿ ರಚನೆಯಾಗಿರುವ ಅಷ್ಟಕಗಳು ಮತ್ತು ಶತಕಗಳು ಸಹ ಶ್ರೇಷ್ಠಮಟ್ಟದ ಮುಕ್ತಕಗಳನ್ನು ಒಳಗೊಂಡಿವೆ.

ಕನ್ನಡ ಸಾಹಿತ್ಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಮೂಲ್ಯ ಮುಕ್ತಕಗಳನ್ನು ಒದಗಿಸಿದ ಇನ್ನೊಂದು ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಕನ್ನಡದ ಅತ್ಯಂತ ಜನಪ್ರಿಯ ಕವಿ ಸರ್ವಜ್ಞನ ಖ್ಯಾತಿಗೆ ಅವನ ಸರಳಸುಂದರ ವಚನಗಳೇ ಕಾರಣವಾಗಿವೆ. ಅವನ ಪ್ರತಿಯೊಂದು ವಚನವೂ ಒಂದು ಅಪೂರ್ವ ಮುಕ್ತಕವಾಗಿದ್ದು, ಸರ್ವಜ್ಞ ಕನ್ನಡ ಮುಕ್ತಕ ಸಾಮ್ರಾಜ್ಯದ ಸಾಮ್ರಾಟ ಎಂಬ ಖ್ಯಾತಿಗೂ ಪಾತ್ರನಾಗಿದ್ದಾನೆ. ಕನ್ನಡ ಜನಪದ ಸಾಹಿತ್ಯ ಮುಕ್ತಕ ಸಾಹಿತ್ಯದ ಗಣಿಯಿದ್ದಂತೆ. ಏಳೆ, ದ್ವಿಪದಿ, ತ್ರಿಪದಿ ಮತ್ತು ಸಾಂಗತ್ಯ ರೂಪದಲ್ಲಿ ರಚಿತವಾಗಿರುವ ಈ ಮುಕ್ತಕಗಳು ಜನಪದರ ಅನುಭವದ ರಸಘಟ್ಟಿಗಳಾಗಿ ರಾರಾಜಿಸುತ್ತಿವೆ.

ಕನ್ನಡದಲ್ಲಿ ದೊರೆಯುವ ಮುಕ್ತಕಗಳು[ಬದಲಾಯಿಸಿ]

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ದೊರೆಯುವ ಮುಕ್ತಕಗಳಿಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ಒಂದು ಶೃಂಗಾರ ಮುಕ್ತಕ: ನೆನೆಯಲು ಬೇಗುದಿಗೊಳಿಸುವಳು

ಕಾಣಲು ಹುಚ್ಚನು ಹಿಡಿಸುವಳು
ಮುಟ್ಟಲು ಮೂರುಸಾಲಿನ ಸಲಿಸುವಳು
ಪ್ರೇಯಸಿ ಎಂತಿವಳು

ಪ್ರೇಯಸಿಯೊಬ್ಬಳು ತನ್ನ ಪ್ರಿಯತಮನ ಮೇಲೆ ಬೀರುವ ಗಾಢ ಪ್ರಭಾವವನ್ನು ಈ ಮುಕ್ತಕ ವರ್ಣಿಸುತ್ತದೆ.

ಕನ್ನಡ ಕಾವ್ಯ ಹೇಗೆ ವಿಬಿನ್ನ ರಸಿಕರನ್ನು ರಂಜಿಸಬೇಕೆಂಬುದನ್ನು ಬಯಸುವ ಕವಿಯೊಬ್ಬನ ಅನಿಸಿಕೆಯ ರೂಪ ಹೀಗಿದೆ:

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗಾ
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ (ರತ್ನಾಕರವರ್ಣಿ)

ಧನಮದದಿಂದ ಮೆರೆಯುವವರನ್ನು ವಿಡಂಬಿಸುವ ವಚನಸಾಹಿತ್ಯದ ಒಂದು ಮುಕ್ತಕ:

ಹಾವು ತಿಂದವರ ನುಡಿಸಬಹುದು
ಗರ ಹೊಡೆದವರ ನುಡಿಸಬಹುದು
ಸಿರಿಗರ ಹೊಡೆದವರ ನುಡಿಸಲು ಬಾರದು ನೋಡಯ್ಯ
ಬಡತನವೆಂಬ ಮಂತ್ರವಾದಿ ಹೊಗಲು
ಒಡನೆ ನುಡಿವರು ನೋಡಾ ಕೂಡಲ ಸಂಗಮದೇವ (ಬಸವಣ್ಣ)

ಸ್ತ್ರೀ ಪುರುಷರು ಪರಸ್ಪರ ಪ್ರೀತಿಸಿ ಮದುವೆಯಾಗುವುದರ ಮಹತ್ತ್ವವನ್ನು ಸಾರುವ ಸರ್ವಜ್ಞನ ಒಂದು ಸುಂದರ ಮುಕ್ತಕ ಹೀಗಿದೆ:

ಮನಬಂದ ಹೆಣ್ಣನ್ನು ವಿನಯದಲಿ ಕರೆದಿತ್ತು
ಮನ ಮುಟ್ಟಿ ಬಾಳ್ವೆ ಮಾಡಿದರೆ ಅಮೃತದ
ಕೆನೆಯ ಸವಿದಂತೆ ಸರ್ವಜ್ಞ
ಹೆತ್ತು ಹೊತ್ತ ತಂದೆ ತಾಯಿಗಳ ಹಿರಿಮೆಯನ್ನು ವರ್ಣಿಸುವ ಒಂದು ಜನಪದ ಮುಕ್ತಕ:
ತಂದೀನ ನೆನೆದರೆ ತಂಗೂಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ನ ನೆನೆದರೆ
ಮಾಸೀದ ತಲೆಯು ಮಡಿಯಾಯ್ತು

ಹೊಸಗನ್ನಡ ಮುಕ್ತಕಗಳ ಚರಿತ್ರೆ[ಬದಲಾಯಿಸಿ]

ಹೊಸಗನ್ನಡದಲ್ಲಿಯೂ ವಿಪುಲವಾಗಿ ಮುಕ್ತಕಗಳು ರಚನೆಗೊಂಡಿವೆ. ಸಂಸ್ಕೃತ, ಪ್ರಾಕೃತ, ಹಿಂದಿ, ಇಂಗ್ಲಿಷ್ ಹಾಗೂ ಇತರ ಭಾರತದ ಮತ್ತು ವಿದೇಶೀಯ ಭಾಷೆಗಳ ಪ್ರಭಾವದಿಂದಾಗಿ ಹೊಸಗನ್ನಡ ಕವಿಗಳು ಮುಕ್ತಕಧಾರೆಯನ್ನೇ ಹರಿಸಿದ್ದಾರೆ. ಅವುಗಳಲ್ಲಿ ನಾನಾಛಂದಸ್ಸು, ನಾನಾಲಯ ಹಾಗೂ ವಸ್ತುಗಳು ಮೈಗೂಡಿಕೊಂಡಿವೆ. ಹಳಗನ್ನಡ, ನಡುಗನ್ನಡ, ಜನಪದ ಮತ್ತು ಹೊಸಗನ್ನಡದ ಮಿಕ್ಕ ಶೈಲಿಗಳಲ್ಲಿ ಈ ಮುಕ್ತಕಗಳು ರಚಿತವಾಗಿವೆ. ಹಿಂದೆಂದೂ ಕಾಣದಂಥ ಮುಕ್ತಕ ವೈವಿಧ್ಯವನ್ನು ನಾವು ಇಂದಿನ ಮುಕ್ತಕ ಸಾಹಿತ್ಯದಲ್ಲಿ ಕಾಣಬಹುದಾಗಿದೆ.

ಹೊಸಗನ್ನಡದಲ್ಲಿ ಮುಕ್ತಕ ರಚನೆ ಯಾರಿಂದ ಮೊದಲಾಯಿತೆಂದು ಖಚಿತವಾಗಿ ಹೇಳುವುದಕ್ಕೆ ಬರುವುದಿಲ್ಲವಾದರೂ ನಮಗೆ ದೊರಕುವ ಆಧಾರದ ಮೇಲೆ ಆ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಅವರು 1928ರಿಂದಲೇ ಇವುಗಳ ರಚನೆಗೆ ತೊಡಗಿದರು. ತೀ.ನಂ.ಶ್ರೀ ಅವರೂ ಸುಮಾರು ಇದೇ ಸಮಯದಲ್ಲಿ ಬಿಡಿ ಪದ್ಯಗಳ ರಚನೆಗೆ ತೊಡಗಿದರು. 1932ರಲ್ಲಿ ಪ್ರಕಟವಾದ ಅವರ "ಒಲುಮೆ" ಕವನ ಸಂಕಲನದಲ್ಲಿ ಅಂಥ ಕೆಲವು ಮುಕ್ತಕಗಳನ್ನು ಸೇರಿಸಿ ಪ್ರಕಟಿಸಿ, ಹೊಸಗನ್ನಡದಲ್ಲಿ ಈ ಕಾವ್ಯ ಪ್ರಕಾರ ಬೆಳೆಯುವುದಕ್ಕೆ ಅಂಕುರಾರ್ಪಣ ಮಾಡಿದರು. ಇವರ ಅನಂತರ 1938ರಲ್ಲಿ ಬಿ.ಶ್ರೀಕಂಠಯ್ಯ ಎಂಬವರು ಸೂಕ್ತಿಸುಧೆ ಎಂಬ ಸ್ವತಂತ್ರ ಮುಕ್ತಕ ಸಂಕಲನವನ್ನು ಪ್ರಕಟಿಸಿದರು. ಅದಾದ ಮೇಲೆ 1940ರಲ್ಲಿ ಜಿ.ಪಿ.ರಾಜರತ್ನಂ ಅವರು ತಮ್ಮ ನೂರು ಪುಟಾಣಿ ಎಂಬ ಸಂಕಲನವನ್ನೂ ಅನಂತರ ಚುಟಕ ಎಂಬ ಸಂಕಲನವನ್ನೂ ಪ್ರಕಟಿಸಿ ಮುಕ್ತಕ ರಚನೆಗೆ ಚಾಲನೆ ನೀಡಿದರು.

ಹೊಸಗನ್ನಡದ ಸಂದರ್ಭದಲ್ಲಿ ಅನೇಕ ಕವಿಗಳು ಸಾವಿರಾರು ಮುಕ್ತಕಗಳನ್ನು ರಚಿಸಿದ್ದಾರೆ. ಅಂಥವರಲ್ಲಿ ವಿ.ಜಿ.ಭಟ್ಟ, ಡಿ.ವಿ.ಜಿ., ಅಕಬರ ಆಲಿ, ತೋಫಖಾನೆ ಶ್ರೀನಿವಾಸ, ಎಸ್.ವಿ.ಪರಮೇಶ್ವರಭಟ್ಟ, ದಿನಕರ ದೇಸಾಯಿ, ಸಿಪಿಕೆ, ಗುಂಡ್ಮಿ ಚಂದ್ರಶೇಖರ ಐತಾಳ, ಎನ್.ಪ್ರಹ್ಲಾದರಾವ್, ದ್ವಾರಕಾನಾಥ್ ಕಬಂಡಿ, ನಾ.ಕಸ್ತೂರಿ, ಇಟಗಿ ಈರಣ್ಣ, ದುಂಡಿರಾಜ್. ವಿಡಂಬಾರಿ, ಸಿದ್ಧಯ್ಯ ಪುರಾಣಿಕ, ಬಿ.ಆರ್.ಲಕ್ಷ್ಮಣರಾವ್, ಸದಾಶಿವ ಎಣ್ಣೆಹೊಳೆ, ಸುಜನಾ, ಡಿ.ವಿ.ಬಡಿಗೇರ, ಚಿತ್ರಲಿಂಗಯ್ಯ, ಜರಗನಹಳ್ಳಿ ಶಿವಶಂಕರ, ದೊಡ್ಡರಂಗೇಗೌಡ, ಬೆಮೆಲ್ ಕಂಪ್ಲಪ್ಪ, ಕೆ.ವಿ.ರಾಜೇಶ್ವರಿ ಮೊದಲಾದವರನ್ನು ಹೆಸರಿಸಬಹುದು. ಮುಕ್ತಕೇ ಕವಯೋನಂತಾಃ (ಮುಕ್ತಕ ಕವಿಗಳಿಗೆ ಲೆಕ್ಕವಿಲ್ಲ) ಎಂದಂತೆ ಇಂದು ನೂರಾರು ಮಂದಿ ಕವಿಗಳು ಮುಕ್ತಕ ರಚನೆಯಲ್ಲಿ ತೊಡಗಿದ್ದಾರೆ. ಹೊಸಗನ್ನಡ ಮುಕ್ತಕಗಳಿಗೆ ಕೆಲವು ಉದಾಹರಣೆಗಳು ಹೀಗಿವೆ:

ಮಾನವ ತನ್ನ ಜೀವನದಲ್ಲಿ ಅಮೂಲ್ಯವಾದ ಕಾಲವನ್ನು ಹೇಗೆ ಅಳವಡಿಸಿಕೊಳ್ಳ ಬೇಕೆಂಬುದನ್ನು ಬಲು ಸ್ವಾರಸ್ಯಪುರ್ಣವಾಗಿ ಹೇಳುವ ಒಂದು ಮುಕ್ತಕ:

ಒಮ್ಮೆ ಹೂದೋಟದಲಿ ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ ಮಂಕುತಿಮ್ಮ (ಡಿ.ವಿ.ಜಿ.)

ಮಡದಿ ಮನೆಯಲ್ಲಿಲ್ಲದಿರುವಾಗಿನ ವಿರಹವೇದನೆಯನ್ನು ಚಿತ್ರಿಸುವ ಒಂದು ಮುಕ್ತಕ:

ಮಲ್ಲಿಗೆಯ ಹೂವಿಂದೆ ಮನೆಯೆಲ್ಲ ಘಂ
ಮುಡಿಯುವವಳಿಲ್ಲದೆಯೆ ಮನ ಬಿಕೋ ಬಿಂ (ಕುವೆಂಪು)

ಒಲವಿಲ್ಲದ ಹೆಣ್ಣಿನ ಸಹವಾಸವನ್ನು ಬಿಟ್ಟುಬಿಡುವುದೇ ಲೇಸು, ಇಲ್ಲವಾದರೆ ಗಂಡಾಂತರ ತಪ್ಪಿದ್ದಲ್ಲ ಎಂಬುದನ್ನು ಸಾರುವ ಒಂದು ಮುಕ್ತಕ:

ಮನೆ ಬಿಟ್ಟ ಹೆಣ್ಣನು ನೆಲೆ ಬಿಟ್ಟ ಬಸ್ಸನು
ಹಿಡಿಯುವೆನೆಂದೋಡಬೇಡ
ಮತ್ತೊಂದು ಮಾರಿಯ ಮತ್ತೊಂದು ಲಾರಿಯ
ಬಾಯಿಗೆ ಸಿಕ್ಕೀಯೆ ನೋಡ (ಎಸ್.ವಿ.ಪರಮೇಶ್ವರಭಟ್ಟ)

ಹಟಮಾರಿ ಗಂಡನ ನಿರ್ಬಂಧಕ್ಕೆ ಸಿಲುಕಿಕೊಂಡು ತೊಳಲುವ ಹೆಂಡತಿಯ ಕರುಣಾಜನಕ ಸ್ಥಿತಿಯನ್ನು ಚಿತ್ರಿಸುವ ಒಂದು ಮುಕ್ತಕ:

ಮನೆಯಲ್ಲೂ ನೆರೆಯಲ್ಲೂ ಹಾಲಿಲ್ಲವೆಂದರೂ
ಗಂಡ ಒದರಿದ ಬೇಕೇ ಬೇಕು ಕಾಫೀ
ಎಂತೆಂತೋ ಮಾಡಿದಳು ಕಾಫೀಯನು, ಮಗು ಅತ್ತು
ಹಾಲಿಲ್ಲ ಅಂದಿತ್ತು ಮೊಲೆಯ ಸೀಪಿ (ವಿ.ಜಿ.ಭಟ್ಟ)

ಬೂಟಾಟಿಕೆಯ ಜನರನ್ನು ವಿಡಂಬಿಸುವ ಒಂದು ಮುಕ್ತಕ:

ಗಾಂದಿ ಜಯಂತಿಯಂದು ಮಾಂಸವನ್ನು ತಿನ್ನಬಹುದೇ ಎಂಬ
ಪ್ರಶ್ನೆಯೊಮ್ಮೆ ಮನಸ್ಸಿಗೆ ಬಂತು, ಮರು ಕ್ಷಣದಲ್ಲಿ
ಮನಸ್ಸು ಹೇಳಿತು ಅಯ್ಯೊ ಹುಚ್ಚ! ಗಾಂದಿಯನ್ನೆ
ತಿಂದಿದ್ದೇವೆ, ಇನ್ನು ಮಾಂಸದಲ್ಲೇನಿದೆ (ಸಿ.ಪಿ.ಕೆ.)

ತಾಯಿ ವಾತ್ಸಲ್ಯದ ಮಹಿಮೆ ಅಪಾರವಾದುದು, ಅವ್ಯಾಜವಾದುದು ಎಂಬುದನ್ನು ಬಲು ಮಾರ್ಮಿಕವಾಗಿ ಅಬಿವ್ಯಕ್ತಿಸುವ ಒಂದು ಮುಕ್ತಕ:

ತಾಯಿ ತೋಳಿಂದೊಮ್ಮೆ ನನ್ನನ್ನು ನೇವರಿಸಿದಳು
ಓ, ತಿಂಗಳ ಮುಡಿದವನೇ
ಸಾವಿರಾರು ಪುಟ ಹೇಳದ ವಾತ್ಸಲ್ಯವನು
ಅವಳ ಬೆರಳುಗಳು ತಿಳಿಸಿದುವು (ಗುಂಡ್ಮಿಚಂದ್ರಶೇಖರ ಐತಾಳ)
ಹೀಗೆ ಕನ್ನಡಲ್ಲಿ ಮುಕ್ತಕ ಸಾಹಿತ್ಯದ ಬೆಳೆ ಹುಲುಸಾಗುತ್ತ ಸಾಗಿದೆ. (ಎಂ.ಪಿ.ಎಂ.)

ಉಲ್ಲೇಖ[ಬದಲಾಯಿಸಿ]