ಕನ್ನಡದಲ್ಲಿ ಗದ್ಯ ಸಾಹಿತ್ಯ

ವಿಕಿಪೀಡಿಯ ಇಂದ
Jump to navigation Jump to search

ಕನ್ನಡದಲ್ಲಿ ಗದ್ಯಸಾಹಿತ್ಯ :- ಸದ್ಯದಲ್ಲಿ ಕನ್ನಡ ಗದ್ಯ ಸಾಹಿತ್ಯದ ಇತಿಹಾಸವನ್ನು ಹಲ್ಮಿಡಿ ಶಾಸನದಿಂದ (ಸು.450) ಗುರುತಿಸಬಹುದು. ಸು.5ನೆಯ ಶತಮಾನದಿಂದ ಸು.18ನೆಯ ಶತಮಾನದವರೆಗೆ ಅಸಂಖ್ಯ ಗದ್ಯ ಶಾಸನಗಳು ದೊರೆಯುತ್ತವೆ. ಅವುಗಳಲ್ಲಿ ವೀರಗಲ್ಲು, ಮಾಸ್ತಿಕಲ್ಲು, ದತ್ತಿಶಾಸನಗಳಲ್ಲಿಯ ಗದ್ಯ ಆಯಾ ಕಾಲದ ಐತಿಹಾಸಿಕ, ಸಾಮಾಜಿಕ ಮತ್ತು ಇತರ ಸಂಗತಿಗಳೊಂದಿಗೆ ಭಾಷಾಸ್ವರೂಪವನ್ನು ತಿಳಿಸುತ್ತದೆ. ಕದಂಬ ಕಾಕುತ್ಸ್ಥವರ್ಮನ ಕಾಲಕ್ಕೆ ಸೇರಿದ ಹಲ್ಮಿಡಿ ಶಾಸನ ಪುರ್ವದ ಹಳಗನ್ನಡ ಭಾಷೆಯಲ್ಲಿದೆ. ಅದರ ಕೆಲವು ಪಂಕ್ತಿಗಳನ್ನು ನೋಡಬಹುದು: ನಮಃ ಶ್ರೀಮತ್ಕದಂಬಪನ್ತ್ಯಾಗಸಂಪನ್ನನ್ಕಲಭೋರ(ನಾ)ಅಕ ಕುಸ್ಥಭಟ್ಟೋರನಾಳೆನರಿದಾವಿ(ಳೆ)ನಾಡುಳ್ಮೃಗೇಶನಾ ಗೇನ್ದ್ರಾಬೀಳಭರ್ಪ್‌ಟಹರಪೊರ್ ಶ್ರೀಮೃಗೇಶನಾಗಾಹ್ವಯರಿವರ್ಪ್‌ರಾ ಬಟರಿಕುಲಾಮಲಮ್ಯೋಮತಾರಾದಿನಾಥನ್ನಳಪ ಗಣಪಶುಪತಿ............................. ಭಟ್ಟಗಿರ್ಗ್‌ಗ ಒಡ್ಡಲಿ ಆಪತ್ತೊನ್ದಿವಿಟ್ಟಾರಕರ

ಇತಿಹಾಸ[ಬದಲಾಯಿಸಿ]

ಆರಂಭದಲ್ಲಿನ ಶ್ಲೋಕವನ್ನು ಬಿಟ್ಟರೆ ಹಲ್ಮಿಡಿ ಶಾಸನದಲ್ಲಿ ಉಳಿದಿದ್ದೆಲ್ಲವೂ ಗದ್ಯದಲ್ಲಿದೆ. ಇದರಲ್ಲಿ ಸಂಸ್ಕೃತ ಪದಗಳ ಬಳಕೆ ಹೆಚ್ಚು. ಕನ್ನಡ ಪದಗಳು ಬೆರಳಲ್ಲಿ ಎಣಿಸುವಷ್ಟು ಮಾತ್ರ ಇವೆ. ಪೂರ್ವ ಹಳಗನ್ನಡದ ವಿಭಕ್ತಿ ಪ್ರತ್ಯಯಗಳು ಅಲ್ಲಲ್ಲಿ ಕಾಣುತ್ತವೆ. ಕರ್ಮಣೀಪ್ರಯೋಗದ ಒಂದು ರೂಪವೂ ಇದೆ. ಹೀಗೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಅನೇಕ ರಂಗಗಳಲ್ಲಿ ಬೆಳೆದುಕೊಡು ಬಂದಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. ಈ ಶಾಸನದಿಂದ 1-2ನೆಯ ಶತಮಾನಗಳ ಹಿಂದಿನಿಂದಲೂ ಕನ್ನಡ ಗ್ರಾಂಥಿಕ ಭಾಷೆಯಾಗಿ ಬೆಳೆಯತೊಡಗಿತ್ತು ಎಂದು ಹೇಳಬಹುದು. ಇದು ಸಂಸ್ಕೃತದ ಒತ್ತಡಕ್ಕೆ ಒಳಗಾದ ಕನ್ನಡದ ಪ್ರಯೋಗ ಕಾಲವೆಂದು ಹೇಳಬಹುದು.[೧]

ಹಲ್ಮಿಡಿ ಶಾಸನದ ಅನಂತರ ಬಾದಾಮಿಯ ಚಳುಕ್ಯ ರಾಜ ಮಂಗಳೇಶನ 578ರ ಗದ್ಯಶಾಸನವನ್ನು ಇಲ್ಲಿ ಹೆಸರಿಸಬೇಕು. ಈ ಶಾಸನದಲ್ಲಿ ಸಾಹಿತ್ಯ ಗುಣಗಳಿಲ್ಲದಿದ್ದರೂ ಪೂರ್ವದ ಹಳಗನ್ನಡ ಭಾಷೆಯ ವಿಶಿಷ್ಟ ರೂಪಗಳಿವೆ.

ಮುಂದೆ, 7, 8, 9ನೆಯ ಶತಮಾನದ ಗದ್ಯಶಾಸನಗಳಲ್ಲಿ ಹಳಗನ್ನಡ ಶಬ್ದಗಳ ಬಳಕೆಯನ್ನು ವಿಶೇಷವಾಗಿ ಕಾಣುತ್ತೇವೆ. ಅಲ್ಲಲ್ಲಿ ಪುರ್ವದ ಹಳಗನ್ನಡದ ಪ್ರಯೋಗಗಳೂ ಇವೆ. ಸಂಸ್ಕೃತ, ಪ್ರಾಕೃತ ತದ್ಭವಗಳ ಮಿಶ್ರಣ ಈ ಕಾಲದ ಗದ್ಯ ಶಾಸನಗಳಲ್ಲಿ ಕಂಡುಬರುತ್ತದೆ. ಆದರೂ ಕನ್ನಡ ಭಾಷೆ, ಅದರ ವ್ಯಾಕರಣ ಪ್ರಯೋಗಗಳು ಬಹುಮಟ್ಟಿಗೆ ತಮಿಳು ಭಾಷೆಯನ್ನು ಹೋಲುತ್ತವೆ. 10ನೆಯ ಶತಮಾನದ ಹೊತ್ತಿಗೆ ಗದ್ಯಕ್ಕಿಂತ ಪದ್ಯದ ಕಡೆಗೆ ಒಲವು ಹೆಚ್ಚಿರುವುದು ಕಾಣುತ್ತದೆ. ಇದು ಚಂಪುಯುಗದ ಸುವರ್ಣಕಾಲ. ಪಂಪ ರನ್ನರ ಪ್ರಭಾವ ಶಾಸನ ಕವಿಗಳ ಮೇಲೆಯೂ ಬಿದ್ದಿರಬೇಕು. ಈ ಕಾಲದಲ್ಲಿ ಗದ್ಯಶಾಸನಗಳಿಗಿಂತ ಪದ್ಯ ಶಾಸನಗಳೇ ಹೇರಳವಾಗಿವೆ. ಅನಂತರ 13-14ನೆಯ ಶತಮಾನಗಳಲ್ಲಿಯ ಶಾಸನಗಳು ಸಂಪ್ರದಾಯ ಹಾಗೂ ಅನುಕರಣಕ್ಕೆ ಮಾರುಹೋಗಿವೆ. ಅವುಗಳಲ್ಲಿ ಹೊಸತನವಿಲ್ಲ. ಅನಂತರ 15, 16, 17ನೆಯ ಶತಮಾನಗಳಲ್ಲಿಯ ಶಾಸನಗಳಲ್ಲಿಯೂ ಭಾಷಾಪ್ರೌಡಿಮೆಯಿಲ್ಲ. ದೇಶದಲ್ಲಿ ಮಹಮ್ಮದೀಯರು ಹಾಗೂ ಇಂಗ್ಲಿಷರ ಆಕ್ರಮಣದಿಂದ ಆಯಾ ಭಾಷೆಯ ಬಳಕೆಯ ಮಾತುಗಳು ಶಾಸನ ಸಾಹಿತ್ಯದಲ್ಲಿಯೂ ಸೇರಿಕೊಂಡಿವೆ.

ಪದ್ಯ ಶಾಸನಗಳೇ[ಬದಲಾಯಿಸಿ]

ಸು.11 ರಿಂದ 18ನೆಯ ಶತಮಾನದ ಅವದಿಯಲ್ಲಿ ಪದ್ಯ ಶಾಸನಗಳೇ ಹೇರಳವಾಗಿ ದೊರೆಯುತ್ತವೆ. ಗದ್ಯ ಶಾಸನಗಳು ಅಲ್ಲಲ್ಲಿ ಮಿನುಗುತ್ತವೆ. ವೀರಗಲ್ಲು, ದತ್ತಿಶಾಸನಗಳು ವಿಶೇಷವಾಗಿ ಗದ್ಯದಲ್ಲಿಯೇ ಸಿಗುತ್ತವೆ. ಅವು ಚಿಕ್ಕ ಚಿಕ್ಕವಾಗಿದ್ದರೂ ಮೇಲ್ಸ್ತರದ ಗದ್ಯಶೈಲಿಯನ್ನು ಅಲ್ಲಿ ಕಾಣಬಹುದು. ಈ ಕಾಲದ ಶಾಸನಗಳಲ್ಲಿ ಬಳಸಿದ ಗದ್ಯದಲ್ಲಿಯೂ ಒಂದು ಹೊಸ ನೋಟವಿದೆ. ಇಲ್ಲಿಯ ಗದ್ಯ ನೀರಸವಾಗಿರದೆ ಹೃದ್ಯವಾಗಿದೆ. ಚಾಳುಕ್ಯ ನಾಲ್ಕನೆಯ ಸೋಮೇಶ್ವರನ ಕಾಲದ ಸಜ್ಜನತಿಲಕನೆಂಬ ಕವಿ ಬರೆದ ಸಿರಸಂಗಿ ಶಾಸನ ಸೊಗಸಾದ ಚಿಕ್ಕ ಚಂಪು ಕಾವ್ಯ ಎನ್ನುವಂತಿದೆ. ಋಷ್ಯಶೃಂಗನ ಜನ್ಮಕಥೆ ಇದು ಹೃದಯಂಗಮವಾದ ಗದ್ಯ ಶೈಲಿಯಲ್ಲಿದೆ. ಒಂದು ಸುದೀರ್ಘವಾದ ವಾಕ್ಯದಲ್ಲಿ ಚಿಕ್ಕ ಚಿಕ್ಕ ವಾಕ್ಯಗಳ ಮಾಲೆಯನ್ನು ಹೆಣೆದು ಅದರಲ್ಲಿ ಚಿಕ್ಕ ಕಥೆಯನ್ನು ಜೋಡಿಸಿದುದು ಕಾವ್ಯದ ಮೇಲ್ಮಟ್ಟವನ್ನು ಸೂಚಿಸುತ್ತದೆ. ಇದೇ ಶಾಸನದಲ್ಲಿ ಮತ್ತೊಂದು ಗದ್ಯಭಾಗ ಹೀಗಿದೆ: ಇಂತೆನಿಸಿ ...............ಮಟ್ಟಮೀರದೆ ಸಿಟ್ಟು ನುಡಿವ ದುಟ್ಟನಾಯಕರ ನಿಟ್ಟಿಲ್ವಂ ಮುಳುದೊಟ್ಟಜಿಯಿಂದಟ್ಟಿಯಾಡಿಸುವ ಬಿರುದನಾಯಕರ ಶಿರದ ಶಿರ್ಪಂ ಬಿದಿರ್ಚುವ ಚಪಳನಾಯಕ ಹೃದಯನಲ್ಲ, ಬೀತನಾಯಕರ ಕೊಲ್ಲ, ಸತ್ಯರಾಧೇಯ, ಸಾಹಸವೈನತೇಯ- ಈ ಮಾತುಗಳು ಹಬ್ಬೆಯ ನಾಯಕನ ಸಾಹಸವನ್ನು ಅವನ ಸತ್ಯಸಂಧತೆಯನ್ನು ಸಾರುತ್ತವೆ. ಇಲ್ಲಿಯ ಅಚ್ಚಗನ್ನಡದ ಪದಗಳ ಜೋಡಣೆ ಟಕಾರದ ಠೇಂಕಾರ ಮನೋಜ್ಞವಾಗಿದೆ. ಹೀಗೆ ಕೆಲವು ಶಾಸನಗಳು ಸಂಪ್ರದಾಯ ಹಾಗೂ ಅನುಕರಣಕ್ಕೆ ಮಾರುಹೋದರೆ, ಹಲವು ಶಾಸನಗಳು ಅಚ್ಚಗನ್ನಡದ ಬಿಗುವಿನಿಂದಲೂ ಚಿಕ್ಕ ಚಿಕ್ಕ ವಾಕ್ಯಗಳ ಶ್ರೇಷ್ಠ ಗದ್ಯಶೈಲಿಯಿಂದಲೂ ಶೋಬಿsಸುತ್ತವೆ. ಶಾಸನದ ಗದ್ಯ ಕನ್ನಡದ ಗದ್ಯ ಸಾಹಿತ್ಯಕ್ಕೆ ಹಿರಿದಾದ ಕೊಡುಗೆಯನ್ನು ಕೊಟ್ಟಿದೆ. ಅಂದಿನ ಶಾಸನಗಳಲ್ಲಿ ಮುಖ್ಯವಾಗಿ ಆಡುಮಾತಿನ ಗ್ರಂಥಸ್ಥ ಭಾಷೆಯ, ವ್ಯಾವಹಾರಿಕ ಹಾಗೂ ಸರ್ಕಾರಿ ಭಾಷೆಯ, ಕಾವ್ಯಭಾಷೆಯ, ಪ್ರಾದೇಶಿಕ ಸೊಗಡಿನ ಎಲ್ಲ ಸ್ತರಗಳನ್ನೂ ಕಾಣಬಹುದಾಗಿದೆ. ಕವಿರಾಜಮಾರ್ಗದಲ್ಲಿ (ಸು.850) ಪದಪಾದವಿಯುತ ನಿಯಮಾಸ್ಪದಮಲ್ಲದಳಂಕೃತಂ ಕ್ರಿಯಾಕಾರಕದೊಳ್ ಪುದಿದರ್ಥ ವ್ಯಕ್ತಿಯನೀವುದು ಗದ್ಯಮನೇಕ ರೂಪಭೇದವಿವಿಕ್ತಂ ಎಂದು ಗದ್ಯಕಾವ್ಯದ ಲಕ್ಷಣವನ್ನು ತಿಳಿಸಿದೆ. ವಿಮಳ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತಾದಿಗಳು ಗದ್ಯ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆನ್ನುವುದು ಕವಿಯ ಅಬಿಪ್ರಾಯವಾಗಿದೆ. ಇಲ್ಲಿಯವರೆಗೆ ಇವರ ಯಾವ ಗ್ರಂಥಗಳೂ ದೊರೆತಿಲ್ಲ. ಇವರಲ್ಲದೆ ಇನ್ನೂ ಸಾಮಾನ್ಯ ಗದ್ಯ ಲೇಖಕರು ಎಷ್ಟು ಜನರಿದ್ದರೋ ತಿಳಿಯದು. ಅಂತು ನೃಪತುಂಗನ ಕಾಲಕ್ಕೆ ಸ್ವತಂತ್ರವಾದ ಗದ್ಯಲೇಖನ ಚೆನ್ನಾಗಿ ಬೆಳೆದುಬಂದಿತ್ತೆಂದು ಹೇಳಬಹುದು.

ವಡ್ಡಾರಾಧನೆ (ಸು.920) ಕನ್ನಡ ಸಾಹಿತ್ಯದ ಮೊಟ್ಟಮೊದಲನೆಯ ಗದ್ಯ ಗ್ರಂಥ (ನೋಡಿ ವಡ್ಡಾರಾಧನೆ). ಈ ಗ್ರಂಥದಲ್ಲಿ ಕವಿ ಜೈನ ತತ್ತ್ವಗಳನ್ನು ಕಥೆಗಳ ಮೂಲಕ ಸಾಮಾನ್ಯರಿಗೂ ಮನಮೆಚ್ಚುವಂತೆ ಬೋದಿಸಿದ್ದಾನೆ. ಶೈಲಿಯಲ್ಲಿ ಕನ್ನಡತನವಿದೆ. ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಕತೆಯ ಓಟ ಸುಗಮವಾಗಿ ಸಾಗುತ್ತದೆ. ಎಲ್ಲಿಯೂ ವರ್ಣನೆಗಳ ಆಡಂಬರವಿಲ್ಲ. ನಾಣ್ಣುಡಿಗಳು, ಅನುಭವವೇದ್ಯವಾದ ದೃಷ್ಟಾಂತಗಳು ಅಡಿಗಡಿಗೆ ಬಂದು ಕಥೆಗಳಿಗೆ ಕಳೆಕಟ್ಟಿವೆ. ಹೀಗೆ ದೇಶೀಯ ಪ್ರಚುರತೆ, ವಿಶಿಷ್ಟವಾದ ವ್ಯಾಕರಣ ಪ್ರಕ್ರಿಯೆಗಳು, ಅಪೂರ್ವ ಪದಗಳು, ಜೀವಂತ ಮಾತುಗಾರಿಕೆ, ಅನುಭವ ಸಂಪನ್ನವಾದ ಅಬಿವ್ಯಕ್ತಿ, ಕನ್ನಡ ಸಂಸ್ಕೃತ ಪದಗಳ ಸಮತೂಕ ಇವುಗಳಿಂದ ವಡ್ಡಾರಾಧನೆಯ ಗದ್ಯ ವಿಶಿಷ್ಟವಾದರೂಪ ತಾಳಿದೆ. ಹಳಗನ್ನಡ ಗದ್ಯದ ಒಳ್ಳೆಯ ಮಾದರಿಗೆ ಈ ಗ್ರಂಥ ಮೇಲುಪಂಕ್ತಿಯಾಗಿದೆ.

ಕನ್ನಡ ಗದ್ಯ ಸಾಹಿತ್ಯ ಚರಿತ್ರೆಯಲ್ಲಿ ಶಾಸನಗದ್ಯ, ವಡ್ಡಾರಾಧನೆಯ ಗದ್ಯ ಒಂದೊಂದು ಘಟ್ಟವಾದರೆ ಚಾವುಂಡರಾಯನ ಗದ್ಯ ಇನ್ನೊಂದು ಘಟ್ಟ. ಇವನ ತ್ರಿಷಷ್ಟಿಲಕ್ಷಣ ಮಹಾಪುರಾಣ (ಸು.978) ಕನ್ನಡ ಗದ್ಯಸಾಹಿತ್ಯದ ಎರಡನೆಯ ಪ್ರಮುಖ ಗ್ರಂಥ. ಇದರಲ್ಲಿ ಜೈನಧರ್ಮದ ನಂಬಿಕೆಗಳೂ ತತ್ತ್ವಗಳೂ ಅರುವತ್ತುಮೂರು ಪುರಾತನರ ಚರಿತ್ರೆಗಳೂ ಅಡಕವಾಗಿವೆ. ಅಲ್ಲಲ್ಲಿ ಪದ್ಯಗಳೂ ಪ್ರಾಕೃತ ಗಾದೆಗಳೂ ಬಂದಿವೆ. ಈ ಕೃತಿಯ ಗದ್ಯಶೈಲಿ ವಡ್ಡಾರಾಧನೆಯದಕ್ಕಿಂತ ಸ್ವಲ್ಪಮಟ್ಟಿಗೆ ಪ್ರೌಢವೂ ಗಂಬೀರವೂ ಆಗಿದೆ. ಇದರಲ್ಲಿ ಸಂಸ್ಕೃತ ಪದಗಳ ಬಳಕೆ, ಮತಸಂಬಂಧವಾದ ವಿಷಯಗಳು ಹೆಚ್ಚು. ವಾಕ್ಯಗಳು ಉದ್ದುದ್ದವಾಗಿವೆ. ಕನ್ನಡ, ಸಂಸ್ಕೃತ, ಪ್ರಾಕೃತಗಳಲ್ಲಿ ಕವಿಗಿರುವ ಪಾಂಡಿತ್ಯ ಗ್ರಂಥದ ಉದ್ದಕ್ಕೂ ಕಾಣಬರುತ್ತದೆ. ಇಲ್ಲಿಯ ಸಾಹಿತ್ಯ ಸ್ವರೂಪ, ಭಾಷೆ ಪೂರ್ತಿಯಾಗಿ ಹಳಗನ್ನಡದಲ್ಲಿದೆ. ವಡ್ಡಾರಾಧನೆಯ ಅನಂತರ ಸು.60 ವರ್ಷಗಳಾದ ಮೇಲೆ ಬೆಳೆದು ಬಂದ ಈ ಗದ್ಯ ವೈಶಿಷ್ಟ್ಯಪುರ್ಣವಾಗಿದೆ. ವಡ್ಡಾರಾಧನೆಯಲ್ಲಿ ಕಥಾ ಗದ್ಯಕ್ಕೆ ಪ್ರಾಧಾನ್ಯವಿದ್ದರೆ ಇಲ್ಲಿ ಕಥಾಗದ್ಯ ಮತ್ತು ಶಾಸ್ತ್ರೀಯ ಗದ್ಯ ಮಿಲನವಾಗಿವೆ. ಇವೆರಡನ್ನೂ ಹೀಗೆ ಮಿಲನ ಮಾಡಿದ ಈ ಕವಿ ಮೇಲ್ತರಗತಿಯ ಗದ್ಯಕಾರನೆಂದು ಹೇಳಬೇಕು. ಚಂಪು ಗ್ರಂಥಗಳಲ್ಲಿ ಬಳಕೆಯಾದ ಗದ್ಯ, ಗದ್ಯ ಸಾಹಿತ್ಯದ ಬೆಳೆವಣಿಗೆಗೆ ತುಂಬ ಸಹಾಯವಾಗಿದೆ. ಪಂಪ ತನ್ನ ಎರಡೂ ಚಂಪುಕೃತಿಗಳಲ್ಲಿ ಔಚಿತ್ಯಪುರ್ಣವಾಗಿ ಗದ್ಯವನ್ನು ಬಳಸಿದ್ದಾನೆ. ತನ್ನ ಕಥಾನಾಯಕನಾದ ಅರಿಕೇಸರಿಯ ಯೌವನೋದಯ ಸಂದರ್ಭವನ್ನು ಸುಮಾರು 55 ಪಂಕ್ತಿಗಳ ಗದ್ಯದಲ್ಲಿ ಬಣ್ಣಿಸಿದ್ದಾನೆ. ಇಲ್ಲಿ ಅತಿಶಯೋಕ್ತಿಯಿದ್ದರೂ ಮನೋಹರತೆಯಿದೆ. ಕಥಾನಾಯಕನ ಸೊಬಗನ್ನು ಮಧುರವಾಗಿ ಚಿತ್ರಿಸಲಾಗಿದೆ. ಹೇರಳವಾದ ಹೋಲಿಕೆಗಳಿದ್ದರೂ ಎಲ್ಲವ ಹದವರಿತು ಬಂದಿವೆ. ಇದರಿಂದಾಗಿ ಸುದೀರ್ಘವಾದರೂ ಈ ಗದ್ಯಭಾಗ ಚಿತ್ತಾಕರ್ಷಕವಾಗಿದೆ. ಕಾವ್ಯಮಯವಾಗಿದೆ. ದೇಸೀ ನುಡಿಗಟ್ಟುಗಳು, ನಾದ ಸೂಕ್ಷ್ಮಗಳು ಇವನ ಕಾವ್ಯ ಶೈಲಿಯ ಗುಣಗಳು. ಈ ಎಲ್ಲವನ್ನೂ ನಾವು ಇವನ ಗದ್ಯದಲ್ಲೂ ಕಾಣಬಹುದು. ಈತನ ಚಂಪುಕಾವ್ಯಗಳಲ್ಲಿ ಬಳಕೆಯಾದ ಗದ್ಯ ಮುಂದಿನ ತಲೆಮಾರಿನವರಿಗೆ ಮಾರ್ಗದರ್ಶಿಯಾಯಿತು.

ಗದ್ಯ ಸಾಮಾನ್ಯ[ಬದಲಾಯಿಸಿ]

ಪಂಪನ ಅನಂತರ ಬಂದ ಚಂಪುಕಾವ್ಯಗಳಲ್ಲಿನ ವಾಗಿ ಪಾಂಡಿತ್ಯ ಪ್ರದರ್ಶನದಿಂದ ತುಂಬಿದೆ. ಕಥೆಯ ಬೆಳೆವಣಿಗೆಯ ದೃಷ್ಟಿ, ವಿವರಗಳ ಸಂಕ್ಷಿಪ್ತತೆ ಪಂಪನಂತೆ ಕೆಲವು ಕವಿಗಳಲ್ಲಿ ಕಾಣುವುದಿಲ್ಲ. ರುದ್ರಭಟ್ಟ, ಜನ್ನ, ಷಡಕ್ಷರಿ ಮೊದಲಾದವರು ಇದಕ್ಕೆ ಹೊರತಾಗಿಲ್ಲ. ದುರ್ಗಸಿಂಹ, ನಯಸೇನರ ಚಂಪು ಕೃತಿಗಳಲ್ಲಿನ ಗದ್ಯದಲ್ಲಿ ಸ್ಪಷ್ಟತೆ, ಸರಳತೆ, ಹೃದ್ಯತೆ ವಿಶೇಷವಾಗಿದೆ ದುರ್ಗಸಿಂಹನ ಪಂಚತಂತ್ರದಲ್ಲಿ ಪದ್ಯಕ್ಕಿಂತ ಗದ್ಯವೇ ಹೆಚ್ಚು. ಕಥಾರೂಪಣೆಗೆ ಗದ್ಯ ಆವಶ್ಯಕವೆಂಬುದನ್ನು ಕವಿ ಇಲ್ಲಿ ತೋರಿಸಿಕೊಟ್ಟಿದ್ದಾನೆ. ಇವನ ಗದ್ಯದಲ್ಲಿ ನಾಣ್ಣುಡಿಗಳೂ ಜಾಣ್ಣುಡಿಗಳೂ ಇವೆ. ನಯಸೇನನ ಧರ್ಮಾಮೃತದಲ್ಲಿ ಈ ಸಂಪ್ರದಾಯ ಬೆಳೆದಿದೆ. ಧರ್ಮಾಮೃತದಲ್ಲಿ ದೀರ್ಘವಾದ ಗದ್ಯ ಹೆಚ್ಚಾಗಿಲ್ಲ. ಚಿಕ್ಕ ಚಿಕ್ಕದಾಗಿ ಹೆಣೆದ ಇಲ್ಲಿನ ಗದ್ಯ ಚೊಕ್ಕವಾಗಿದೆ. ಹೋಲಿಕೆಗಳಂತೂ ಹೊಳೆಯಾಗಿ ಹರಿದಿವೆ. ಕಥೆಯನ್ನು ಹೇಳಹೇಳುತ್ತಲೇ ರಾಶಿರಾಶಿಯಾಗಿ ಸಾದೃಶ್ಯ ಮಾಲಿಕೆಗಳನ್ನು ತರುವುದು ಇವನ ಶೈಲಿಯ ಗುಣವಿಶೇಷವ ಪರಿಮಿತಿಯೂ ಆಗಿದೆ. ಸಂಸ್ಕೃತವನ್ನು ಅಲ್ಲಲ್ಲಿ ಬಳಸಿದ್ದರೂ ತಿರುಳ್ಗನ್ನಡದ ಹೊಗರು ಹೆಚ್ಚಾಗಿ ಹೊರಹೊಮ್ಮಿದೆ. ಇವನ ಅನಂತರ ಬಂದ ಎಲ್ಲ ಚಂಪು ಕವಿಗಳ ಗದ್ಯ ಸುಮಾರಾಗಿ ಒಂದೇ ಮಾದರಿಯದು. ಇವರ ಗದ್ಯಭಾಗದಲ್ಲಿನ ಅಲಂಕಾರಗಳ ಬಾಹುಳ್ಯ ಮತ್ತು ಉದ್ದುದ್ದ ಸಮಾಸಗಳು ಕಥಾವಸ್ತುವಿಗೆ ಪೋಷಕವಾಗಿಲ್ಲದಿರುವುದು. ಗದ್ಯಬಂಧ ಬಿಗಿಯಾಗಿರದೆ ಶಿಥಿಲವಾಗಿರುವುದು ಕಂಡುಬರುತ್ತದೆ. ಆದರೂ ಚಂಪುಗದ್ಯ, ಗದ್ಯ ಸಾಹಿತ್ಯದ ಬೆಳೆವಣಿಗೆಗೆ ಪ್ರೇರಕ, ಪೋಷಕ, ಸಹಾಯಕ ಆಗಿದೆ ಎಂಬ ಮಾತು ಸ್ಪಷ್ಟ.

ಕನ್ನಡ ಗದ್ಯಕ್ಕೆ ವಚನಗಳದು ಒಂದು ಅಪುರ್ವವಾದ ಕಾಣಿಕೆ. ಅನುಭಾವಿಗಳ ಈ ಭಾಷೆಯಲ್ಲಿ ಉತ್ಕಟವಾದ ಭಾವಾವೇಶವಿದೆ, ಲಯವಿದೆ, ನಾದವಿದೆ, ಮಾಧುರ್ಯವಿದೆ. ಇವುಗಳನ್ನು ಗಮನಿಸಿದಾಗ ಈ ವಚನಗಳು ಪದ್ಯಜಾತಿಗೆ ಸೇರಿದುವೇ ಅಥವಾ ಗದ್ಯಜಾತಿಗೆ ಸೇರಿದುವೇ ಎಂಬ ಪ್ರಶ್ನೆ, ಆಲೋಚನೆ ಉಂಟಾಗುತ್ತದೆ. ಮೂಲದಲ್ಲಿ ಇವು ಛಂದೋಬದ್ಧ ರಚನೆಗಳೆಂದೇ ಕೆಲವು ವಿದ್ವಾಂಸರು ಹೇಳಿದರೆ, ಹಲವರು ಗದ್ಯವೆಂದೂ ಗದ್ಯಪದ್ಯಗಳ ನಡುವಿನ ಒಂದು ಮಾದರಿಯೆಂದೂ ಅಬಿಪ್ರಾಯಪಡುತ್ತಾರೆ.

12ನೆಯ ಶತಮಾನದ ಉತ್ತರಾರ್ಧದಲ್ಲಿ ಉಕ್ಕಂದವಾಗಿ ಹರಿದ ಈ ಸಾಹಿತ್ಯ ಅತ್ಯಂತ ಶ್ರೀಮಂತವಾಯಿತು. ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ, ಚೆನ್ನಬಸವಣ್ಣ ಮೊದಲಾದವರ ವಚನ ಸಾಹಿತ್ಯವು ಅಂದಿನ ಸಾಹಿತ್ಯ ಧೋರಣೆ, ಜೀವನ, ಮತಧರ್ಮ ಮೊದಲಾದವಕ್ಕೆ ಸಾಕ್ಷಿಯಾಯಿತು. ಇವರ ವಚನಗಳಲ್ಲಿ ಹೊಸಗನ್ನಡ ಗದ್ಯದ ಪ್ರಾರಂಭವನ್ನು ಗುರುತಿಸಬಹುದು. ಅಚ್ಚುಕಟ್ಟಾದ ಗಾದೆ ಮಾತಿನಂಥ ಸೂತ್ರರೂಪದ ವಾಕ್ಯಗಳು, ಮಾಲೆಮಾಲೆಯಾಗಿ ಬರುವ ದೃಷ್ಟಾಂತಗಳು, ರೂಪಕಗಳು, ಉಪಮೆಗಳು, ಮಾತಿನ ಅಬಿಪ್ರಾಯದ ಹಿತಮಿತವಾದ ಪುನರಾವರ್ತನೆ, ಕಠೋರವೆನಿಸದ ಪ್ರಾಸನಿರ್ವಹಣೆ, ಕೊನೆಯಲ್ಲಿ ಹೊಳೆದು ನಿಲ್ಲುವ ತತ್ತ್ವ ಇವುಗಳಿಂದಾಗಿ ವಚನಗಳು ಇಂದಿಗೂ ತಮ್ಮ ಚೆಲುವನ್ನು ಕಳೆದುಕೊಂಡಿಲ್ಲ. ಈ ಪ್ರಕಾರ 20ನೆಯ ಶತಮಾನದ ಕೆಲವು ಕವಿಗಳಿಗೂ ಸ್ಫೂರ್ತಿಯನ್ನು ಕೊಟ್ಟಿದೆ ಎಂಬ ವಿಷಯವನ್ನು ಇಲ್ಲಿ ಸ್ಮರಿಸಬಹುದು. ಮುಂದೆ 15ನೆಯ ಶತಮಾನದಲ್ಲಿ ಕೆಲವು ವಚನಕಾರರು ಹಿಂದಿನ ವಚನ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಆಯ್ದು ಜೋಡಿಸಿದರು. ಇದರ ಪರಿಣಾಮವಾಗಿ ಶೂನ್ಯ ಸಂಪಾದನೆ ಮೊದಲಾದ ವಿಶಿಷ್ಟ ಮಾದರಿಯ ವಚನ ಗ್ರಂಥಗಳು ಹೊರಬಂದುವು. ಹರಿಹರನ ರಗಳೆಯಲ್ಲಿಯ ಗದ್ಯ ಕನ್ನಡ ಗದ್ಯಕ್ಕೆ ಒಂದು ಹಿರಿದಾದ ಕೊಡುಗೆ. ಕಥೆ ದೊಡ್ಡದಾದಾಗ ಹರಿಹರ ಒಂದು ಭಾಗ ರಗಳೆ, ಇನ್ನೊಂದು ಭಾಗ ಗದ್ಯ, ಮತ್ತೆ ರಗಳೆ ಅನಂತರ ಗದ್ಯ ಹೀಗೆ ಸಂದರ್ಭಗಳನ್ನು ಬೆಳೆಸಿದ್ದಾನೆ. ಇದೊಂದು ಅಪೂರ್ವ ಪ್ರಯೋಗ. ಹಳೆಯ ಚಂಪುಕ್ರಮ ಇಲ್ಲಿ ಇನ್ನೂ ಹಿಗ್ಗಿದೆ. ಪದ್ಯ ಭಾಗದಲ್ಲಿ ಹೇಗೊ ಹಾಗೆ ಗದ್ಯಭಾಗದಲ್ಲೂ ಕಥೆ, ವರ್ಣನೆ ಎಲ್ಲ ನಿರರ್ಗಳವಾಗಿ ಹರಿಯುತ್ತದೆ. ಚಂಪುವಿನಲ್ಲಿ ಕಥೆಯ ಓಟಕ್ಕೆ ಸಹಾಯಕವಾಗಿದ್ದ ಗದ್ಯಕ್ಕೆ ಇಲ್ಲಿ ಸ್ವತಂತ್ರ ಅಸ್ತಿತ್ವ ದೊರಕಿತು. ಒಂದು ಕಡೆ ವಚನಗಳ ಧೋರಣೆ, ಇನ್ನೊಂದು ಕಡೆ ತಾನೇ ಬಳಸಿ ರೂಡಿಸಿದ ರಗಳೆ ಇವೆರಡರ ಸಂಗಮದಿಂದ ಇವನ ಗದ್ಯ ಹರಿತವಾಯಿತು. ಹೆಚ್ಚು ಜೀವಂತವಾಯಿತು. ಭಾಷೆ ಆಡುಮಾತಿಗೆ ಬಹು ಹತ್ತಿರವಾಯಿತು. ಅಂದರೆ ಇಲ್ಲಿ ಗದ್ಯದ ನಿಜವಾದ ಉದ್ದೇಶ ಸಫಲವಾಯಿತೆನ್ನಬಹುದು.

ಕನ್ನಡ ಗದ್ಯ ಸಾಹಿತ್ಯದ ಇತಿಹಾಸದಲ್ಲಿ ವ್ಯಾಖ್ಯಾನಕಾರರಿಗೆ ಒಂದು ಸ್ಥಾನವಿದೆ. ವೈದ್ಯ, ಜ್ಯೋತಿಷ, ಪಾಕ, ಸಂಗೀತ, ಗಣಿತ, ಸಾಮುದ್ರಿಕ, ಧರ್ಮ, ವ್ಯಾಕರಣ ಮೊದಲಾದ ವಿಷಯಗಳ ಮೇಲೆ ಕನ್ನಡದಲ್ಲಿ ಶಾಸ್ತ್ರೀಯ ಗ್ರಂಥಗಳಿವೆ. ಅವುಗಳಲ್ಲಿ ಕೆಲವಕ್ಕೆ ವಿಸ್ತಾರವಾದ ವ್ಯಾಖ್ಯಾನಗಳು, ಟೀಕೆ, ಟಿಪ್ಪಣಿಗಳು ಬಂದಿವೆ. ಸೂಚ್ಯವಾದುದನ್ನು ವಾಚ್ಯವಾಗಿ ವಿವರಿಸಿ ಹೇಳುವುದೇ ಇವುಗಳ ಮುಖ್ಯ ಗುರಿ. ಹೇಳುವ ಮಾತಿನಲ್ಲಿ, ಬಳಸುವ ಶಬ್ದಗಳಲ್ಲಿ ಕ್ಲಿಷ್ಟತೆ ಇದ್ದರೂ ಇದೊಂದು ಮಾದರಿಯ ಗದ್ಯವಾಗಿ ಬೆಳೆದುಕೊಂಡು ಬಂದಿದೆ. ಅಷ್ಟು ಉತ್ತಮ ಗದ್ಯವಲ್ಲದಿದ್ದರೂ ಇದಕ್ಕೆ ಗದ್ಯ ಸಾಹಿತ್ಯ ವಿವೇಚನೆಯಲ್ಲಿ ಒಂದು ಸ್ಥಾನವಿದೆ.

ಹಸ್ತಿಮಲ್ಲನ ಪೂರ್ವಪುರಾಣಕ್ಕೂ ಕನ್ನಡ ಗದ್ಯ ಸಾಹಿತ್ಯ ಚರಿತ್ರೆಯಲ್ಲಿ ಒಂದು ಸ್ಥಾನವಿದೆ. ಸು.14ನೆಯ ಶತಮಾನದ ಗದ್ಯದ ಒಂದು ಮಾದರಿಯನ್ನು ಇಲ್ಲಿ ಕಾಣಬಹುದಾಗಿದೆ. ಈ ಪುಟ್ಟ ಕೃತಿಯ ಗದ್ಯ ಸುಲಭವೂ ಸರಳವೂ ಆಗಿದೆ. ಚಿಕ್ಕ ಚಿಕ್ಕ ವಾಕ್ಯಗಳೂ ಆಡುಮಾತುಗಳೂ ಇಲ್ಲಿ ದೊರೆಯುತ್ತವೆ. ಸಾಮಾನ್ಯವಾಗಿ ಜೈನ ಪುರಾಣಗಳಲ್ಲಿ ಸಂಸ್ಕೃತ ಪದಗಳ ಬಳಕೆ ಹೆಚ್ಚು. ಆದರೆ ಇಲ್ಲಿ ಅವು ಕಡಿಮೆಯಾಗಿದ್ದು ಬಂದ ಕಡೆ ಚೆನ್ನಾಗಿ ಹೊಂದಿಕೊಂಡು ಬಂದಿರುವುದನ್ನು ಗಮನಿಸಬಹುದು.

14ನೆಯ ಶತಮಾನದಿಂದ 17ನೆಯ ಶತಮಾನದವರೆಗೆ ಕನ್ನಡ ಗದ್ಯ ಸಾಹಿತ್ಯದ ಸ್ರೋತ ಬತ್ತಿದಂತೆ ಕಾಣುತ್ತದೆ. ನಿಜಗುಣ ಶಿವಯೋಗಿ, ಗುಬ್ಬಿಯ ಮಲ್ಲಣ್ಣ, ಮಗ್ಗೆಯ ಮಾಯಿದೇವ ಮೊದಲಾದ ವೀರಶೈವ ಶಾಸ್ತ್ರೀಯ ಗದ್ಯಗ್ರಂಥಗಳನ್ನು ಬಿಟ್ಟರೆ ಗದ್ಯಸಾಹಿತ್ಯವನ್ನು ಬೆಳೆಸಿದ ಬೇರೆ ಕವಿಗಳ ಯಾವ ಕೃತಿಗಳೂ ಈ ಕಾಲದಲ್ಲಿ ಕಾಣುವುದಿಲ್ಲ.

17ನೆಯ ಶತಮಾನದಲ್ಲಿ ಮೈಸೂರು ಅರಸರೂ ಅವರ ಆಶ್ರಯದಲ್ಲಿದ್ದ ಕವಿಗಳೂ ಗದ್ಯಸಾಹಿತ್ಯವನ್ನು ಸಾಕಷ್ಟು ಬೆಳೆಸಿದರು. ಚಿಕ್ಕದೇವರಾಜನು ಚಿಕ್ಕದೇವರಾಜ ಬಿನ್ನಪವನ್ನೂ ಭಾಗವತ, ಶೇಷಧರ್ಮಗಳ ಟೀಕೆಗಳನ್ನೂ ಗದ್ಯದಲ್ಲಿ ಬರೆದಿದ್ದಾನೆ. ಶಾಂತಲಿಂಗ ದೇಶಿಕ, ತಿರುಮಲಾರ್ಯ, ಚಿಕುಪಾಧ್ಯಾಯ (ಸು.1672) ಈ ಕಾಲದ ಉತ್ತಮ ಗದ್ಯಕಾರರು. ಶಾಂತಲಿಂಗ ದೇಶಿಕನ ಕೃತಿಗಿಂತಲೂ ತಿರುಮಲಾರ್ಯನ ಚಿಕ್ಕದೇವರಾಜವಂಶಾವಳಿಯ ಭಾಷೆ ಪ್ರೌಢವಾಗಿಯೂ ಹಳಗನ್ನಡದ ಬಿಗುವಿದಲೂ ಕೂಡಿದೆ. ಚಿಕುಪಾಧ್ಯಾಯನೇ ಸುಮಾರು ಏಳು ಗದ್ಯ ಗ್ರಂಥಗಳನ್ನು ಬರೆದಂತೆ ತಿಳಿಯುತ್ತದೆ. ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರರತ್ನಾಕರದಲ್ಲಿ ಹಳಗನ್ನಡ ನಡುಗನ್ನಡ ಶಬ್ದರೂಪಗಳ ಮಿಶ್ರಣ ಕಂಡುಬರುತ್ತದೆ.

17-18ನೆಯ ಶತಮಾನದಲ್ಲಿ ಬಖೈರು, ಕೈಪಿಯತ್ತು ಎಂಬ ಹೆಸರಿನ ಐತಿಹಾಸಿಕ ಗದ್ಯಕೃತಿಗಳು ಸಿಗುತ್ತವೆ. ಇವುಗಳಲ್ಲಿ ಉರ್ದು, ಪಾರಸೀ ಶಬ್ದಗಳು ಹೇರಳವಾಗಿ ಬಳಕೆಯಾಗಿವೆ. ಬಖೈರುಗಳ ಗದ್ಯಶೈಲಿ ಇತಿಹಾಸವನ್ನು ಚಿತ್ರಿಸುವ ಅಂದವಾದ ಶೈಲಿಯಾಗಿದೆ. ಕನ್ನಡ ಗದ್ಯದ ಬೆಳೆವಣಿಗೆಯ ದೃಷ್ಟಿಯಿಂದ ಈ ಬಖೈರುಗಳು ಉಲ್ಲೇಖನಾರ್ಹವಾಗಿವೆ.

18-19ನೆಯ ಶತಮಾನದಲ್ಲಿ ಕನ್ನಡ ಗದ್ಯಸಾಹಿತ್ಯ ವಿಪುಲವಾಗಿ ಸಮರ್ಥವಾಗಿ ಬೆಳೆದಿದೆ. ಈ ಕಾಲದಲ್ಲಿ ಕಾಣಬರುವಷ್ಟು ಗದ್ಯ ಕೃತಿಗಳು ಹಿಂದೆ ಮತ್ತಾವ ಕಾಲದಲ್ಲಿಯೂ ಕಂಡುಬಂದಿಲ್ಲ. ಇದನ್ನು ಗದ್ಯ ಸಾಹಿತ್ಯದ ಸುವರ್ಣಯುಗವೆಂದೇ ಕರೆಯಬಹುದು. ಕಳಲೆ ನಂಜರಾಜ (1740), ದೇವಚಂದ್ರ (1770-1841), ಮುಮ್ಮಡಿ ಕೃಷ್ಣರಾಜ (1794-1868), ಕೆಂಪುನಾರಾಯಣ (ಸು.1823), ಅಳಿಯ ಲಿಂಗರಾಜ (1823-74), ಮುದ್ದಣ (1870-1901) ಮೊದಲಾದ ಗದ್ಯ ಲೇಖಕರು ಈ ಕಾಲದಲ್ಲಿ ಪ್ರಸಿದ್ಧರಾಗಿದ್ದಾರೆ. ಕೆಂಪುನಾರಾಯಣನ ಮುದ್ರಾಮಂಜೂಷ ಹಳಗನ್ನಡ, ನಡುಗನ್ನಡ, ಹೊಸಗನ್ನಡ ಭಾಷೆಗಳಿಂದ ಮುಪ್ಪುರಿಗೊಂಡಿದೆ. ಕಥಾ ನಿರೂಪಣೆಗೆ ಉಚಿತವಾದ ಗದ್ಯವನ್ನಿಲ್ಲಿ ಕಾಣಬಹುದು. 20ನೆಯ ಶತಮಾನದ ಗದ್ಯಕ್ಕೆ ಈ ಗ್ರಂಥ ಮುಂಬೆಳಕಾಯಿತು. ಮುಂದೆ ಕ್ರೈಸ್ತ ಮಿಶನರಿಗಳು ಗದ್ಯಕ್ಕೆ ನ್ಯಾಯವಾದ ಸ್ಥಾನವನ್ನು ದೊರಕಿಸಿಕೊಟ್ಟರು. ಬೈಬಲ್ ಗ್ರಂಥ ಸು.1823ರಲ್ಲಿ ಕನ್ನಡ ಗದ್ಯದಲ್ಲಿ ಪ್ರಕಟವಾಯಿತು. 19ನೆಯ ಶತಮಾನದ ಮಧ್ಯದಲ್ಲಿ ಹೊರಟ ಸಭಾಪತ್ರ, ಸತ್ಯ ದೀಪಿಕೆಗಳೆಂಬ ಪತ್ರಿಕೆಗಳು ಪತ್ರಿಕಾ ವ್ಯವಸಾಯಕ್ಕೆ ನೆಲಗಟ್ಟಾದುವು.

ಮುದ್ದಣ ಎರಡು ಗದ್ಯಗ್ರಂಥಗಳನ್ನು ಬರೆದ. ಅದ್ಭುತ ರಾಮಾಯಣ ಸರಳ ಶೈಲಿಯಲ್ಲಿ ಚೊಕ್ಕವಾಗಿರುವ ಹಳಗನ್ನಡ ಗ್ರಂಥ. ಹಳಗನ್ನಡ ಅಭ್ಯಾಸಿಗಳಿಗೆ ಇದು ಹಿತಮಿತವಾದ ಕೃತಿ. ರಾಮಾಶ್ವಮೇಧದಲ್ಲಿ ಇವನ ಪ್ರತಿಭೆ ಇನ್ನೂ ಮಿಗಿಲಾಗಿದೆ. ಇಲ್ಲಿಯೇ ಕವಿ ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂದು ಗದ್ಯದ ಮೇಲ್ಮೆಯನ್ನು ಹೇಳಿದ್ದಾನೆ. ಇದರಲ್ಲಿ ಆರಂಭದ ಮಳೆಗಾಲದ ವರ್ಣನೆ, ಮುದ್ದಣ ಮನೋರಮೆಯರ ಸಂಭಾಷಣಾಕುಶಲತೆ, ಕಥಾನಿರೂಪಣೆಯಲ್ಲಿನ ನವೀನತೆ ಇವೆಲ್ಲವ ಇವನ ಗದ್ಯಶೈಲಿಯ ಬೆಡಗನ್ನು ತೋರುತ್ತವೆ. ಹಳಗನ್ನಡ ಭಾಷೆಯನ್ನು ಹೊಸಗನ್ನಡ ಧೋರಣೆಯಲ್ಲಿ ಬಳಸಿರುವುದೇ ಮುದ್ದಣನ ವೈಶಿಷ್ಟ್ಯ. ಇವನ ಶೈಲಿಯಲ್ಲಿ ಆಧುನಿಕ ಕಥೆಕಾದಂಬರಿಗಳ ಸೊಗಸು ವೈವಿಧ್ಯಗಳನ್ನು ಕಾಣಬಹುದಾಗಿದೆ.

ಹೊಸಗನ್ನಡ ಗದ್ಯ ಸಾಹಿತ್ಯ ಹೊಸ ಮಾದರಿಯಲ್ಲಿ ರೂಪುಗೊಂಡಿತು. ನಡುಗನ್ನಡ ಶಬ್ದಗಳು ಮಾಯವಾಗಿ ಹೊಸ ಹೊಸ ಶಬ್ದಗಳು ತಲೆದೋರಿದುವು. ಮುಸಲ್ಮಾನರು, ಫ್ರೆಂಚರು, ಪೋರ್ಚುಗೀಸರು, ಇಂಗ್ಲಿಷರು ಮುಂತಾದವರ ಭಾಷಾ ಸಾಹಿತ್ಯಗಳ ಪ್ರಭಾವ ನೇರವಾಗಿ ಕನ್ನಡದ ಮೇಲೆ ಆದುದರಿಂದ ಕನ್ನಡದಲ್ಲಿ ಅನ್ಯದೇಶ ಶಬ್ದಗಳು ಸೇರಿಕೊಂಡವು. ದೇಶೀಯ ಸಾಹಿತ್ಯದೊಂದಿಗೆ ಇಂಗ್ಲಿಷ್ ಹಾಗೂ ಇತರ ವಿದೇಶೀಯ ಸಾಹಿತ್ಯಗಳ ವ್ಯಾಸಂಗದ ಪರಿಣಾಮವಾಗಿ ಕನ್ನಡದಲ್ಲಿಯೂ ನವಜಾಗೃತಿಯುಂಟಾಯಿತು. ಗದ್ಯ ಸಾಹಿತ್ಯದ ವಿವಿಧ ಪ್ರಕಾರಗಳು ಬೆಳೆದುವು. ಕಾದಂಬರಿ, ಸಣ್ಣಕಥೆ, ಜೀವನಚರಿತ್ರೆ, ನಾಟಕ, ವ್ಯಕ್ತಿಚಿತ್ರ, ಪ್ರಬಂಧ, ಹರಟೆ, ಪ್ರವಾಸಸಾಹಿತ್ಯ, ಪತ್ರಸಾಹಿತ್ಯ, ವೈಜ್ಞಾನಿಕ ಸಾಹಿತ್ಯ, ಮಾನವಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ವಿಮರ್ಶೆ ಹೀಗೆ ನಾನಾ ರೂಪದಲ್ಲಿ ಹುಲುಸಾಗಿ ಬೆಳೆಯುತ್ತಿದೆ. ಇವುಗಳಲ್ಲಿ ಕೆಲವು ಮುಖ್ಯ ಪ್ರಕಾರಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.

ಕಾದಂಬರಿ ಸಾಹಿತ್ಯ ಪ್ರಕಾರ ಕನ್ನಡಕ್ಕೆ ಹೊಸತು. ಇದು ಬಂಗಾಲಿ, ಮರಾಠಿ, ಇಂಗ್ಲಿಷ್ ಇತ್ಯಾದಿ ಭಾಷೆಗಳ ಪ್ರಭಾವದಿಂದ ಕನ್ನಡಕ್ಕೆ ಬಂದುದು. ಚ.ವಾಸುದೇವಯ್ಯನವರ ಆರ್ಯಕೀರ್ತಿ, ಬೀಷ್ಮ ಚರಿತೆಗಳು ಹೊಸಗನ್ನಡದ ಗದ್ಯಶೈಲಿಗೆ ಭದ್ರವಾದ ತಳಹದಿಯನ್ನು ಹಾಕಿದುವು. ಬಿ.ವೆಂಕಟಾಚಾರ್ಯರು ಮತ್ತು ಗಳಗನಾಥರು ಬಂಗಾಲಿ, ಮರಾಠಿ ಭಾಷೆಗಳ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದರು. ಎಂ.ಎಸ್.ಪುಟ್ಟಣ್ಣನವರ ಮಾಡಿದ್ದುಣ್ಣೋ ಮಹಾರಾಯ ಮೊದಲಾದ ಸ್ವತಂತ್ರ ಕಾದಂಬರಿಗಳಲ್ಲಿ ಮೈಸೂರು ಚಾಮರಾಜನಗರಗಳ ಕಡೆಯ ಅಂದಿನ ಕನ್ನಡದ ಪ್ರಾದೇಶಿಕ ಕಸುವನ್ನು ಕಾಣಬಹುದು. ಮುಂದೆ ಕಾದಂಬರಿ ಕ್ಷೇತ್ರ ವೈವಿದ್ಯ ಪುರ್ಣವಾಗಿ ಬೆಳೆಯಿತು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ರಾಜಕೀಯ, ಪತ್ತೇದಾರಿ ಹೀಗೆ ಐದು ಬಗೆಯಲ್ಲಿ ಅದು ವಿಕಸಿಸಿತು. ಶಿವರಾಮ ಕಾರಂತ, ಅ.ನ.ಕೃ., ಕೃಷ್ಣಮೂರ್ತಿ ಪುರಾಣಿಕ, ತ.ರಾ.ಸು., ಶ್ರೀನಿವಾಸರಾವ್ ಕೊರಟಿ, ತ್ರಿವೇಣಿ, ಬಸವರಾಜ ಕಟ್ಟೀಮನಿ, ವಿ.ಎಂ.ಇನಾಂದಾರ್ ಮೊದಲಾದವರ ಕಾದಂಬರಿಗಳಲ್ಲಿನ ಭಾಷೆ ಗದ್ಯಕ್ಕೆ ಹೊಸತನವನ್ನು ತಂದುಕೊಟ್ಟಿತು. ಭಾಷೆಯ ಪ್ರಾದೇಶಿಕ ವೈಭವಕ್ಕೆ ಕುವೆಂಪು, ಮಿರ್ಜಿ ಅಣ್ಣಾರಾಯ, ರಾವಬಹಾದ್ದೂರ, ಶಿವರಾಮ ಕಾರಂತ, ಶ್ರೀರಂಗ ಇವರ ಕೃತಿಗಳನ್ನು ವೀಕ್ಷಿಸಬಹುದು. ಇವರ ಗದ್ಯದಿಂದ ಅನೇಕಾನೇಕ ಪ್ರಾದೇಶಿಕ ಶಬ್ದಗಳು, ನುಡಿಗಟ್ಟುಗಳು ಭಾಷಾಮರ್ಯಾದೆಗಳು ಕನ್ನಡಕ್ಕೆ ಬಂದು ಸೇರಿವೆ. ಜೀವನವನ್ನು ವರ್ಣಿಸುವಲ್ಲಿ, ಸಂಭಾಷಣೆಗಳನ್ನು ಹೆಣೆಯುವುದರಲ್ಲಿ ಗದ್ಯಕ್ಕಿರುವ ಎಲ್ಲ ಸಾಮಥರ್ಯ್‌ವನ್ನೂ ಉಪಯೋಗಿಸಿರುವುದನ್ನು ಇಲ್ಲಿ ಕಾಣಬಹುದಾಗಿದೆ. ಮುಂದೆ ನವ್ಯ ಸಾಹಿತ್ಯ ಪ್ರಕಾರ ಬೆಳೆದು ಭಾಷೆಗೆ ಹೊಸ ಸತ್ವವನ್ನೂ ಜೀವಂತಿಕೆಯನ್ನೂ ತುಂಬಿತು. ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ, ಗಿರಿ, ಶಾಂತಿನಾಥ ದೇಸಾಯಿ, ಪುರ್ಣಚಂದ್ರ ತೇಜಸ್ವಿ, ಶ್ರೀಕೃಷ್ಣ ಆಲನಹಳ್ಳಿ ಮುಂತಾದ ಶ್ರೇಷ್ಠ ದರ್ಜೆಯ ಗದ್ಯ ಲೇಖಕರು ಕನ್ನಡ ಗದ್ಯದ ಬೆಳೆವಣಿಗೆಗೆ ಶಕ್ತಿ ನೀಡಿದ್ದಾರೆ.

ಹೊಸಗನ್ನಡ ಗದ್ಯ[ಬದಲಾಯಿಸಿ]

ಹೊಸಗನ್ನಡ ಗದ್ಯ ಸಾಹಿತ್ಯದಲ್ಲಿ ಕಾದಂಬರಿಯ ಅನಂತರ ಸಣ್ಣ ಕಥೆಗಳದೇ ಅಗ್ರಸ್ಥಾನ. ಒಂದು ದೃಷ್ಟಿಯಲ್ಲಿ ಕಾದಂಬರಿಗಿಂತ ಸಣ್ಣಕಥೆಯ ರಚನೆ ಹೆಚ್ಚು ಕ್ಲಿಷ್ಟವಾದುದು. ಹೀಗಿರುವಲ್ಲಿ ಕನ್ನಡ ಸಣ್ಣಕಥೆಗಳು ತಮ್ಮ ಕ್ಷೇತ್ರದಲ್ಲಿ ಪಡೆದಿರುವ ಸಿದ್ಧಿಯನ್ನು ನೋಡಿದರೆ ಕನ್ನಡ ಗದ್ಯ ಎಷ್ಟರಮಟ್ಟಿಗೆ ವಿಕಸನಗೊಂಡಿದೆಯೆಂಬ ಅಂಶ ಸ್ವಯಂವೇದ್ಯವಾಗುತ್ತದೆ. ಕೆರೂರ ವಾಸುದೇವಾಚಾರ್ಯ, ಪಂಜೆ, ಮಂಗೇಶರಾಯ, ಎಂ.ಎನ್.ಕಾಮತ್, ಶ್ರೀನಿವಾಸ ಇವರು ಕನ್ನಡ ಸಣ್ಣ ಕಥೆಗಳ ಮೊದಲಿಗರು. ನಮೋದಯದಲ್ಲಿ ಕುವೆಂಪು, ಚದುರಂಗ, ಅ.ನ.ಕೃ. ಅಶ್ವತ್ಥ, ಎ.ಆರ್.ಕೃ., ಮೊದಲಾದ ಲೇಖಕರೂ ನವ್ಯದಲ್ಲಿ ಯು.ಆರ್.ಅನಂತಮೂರ್ತಿ, ಪುರ್ಣಚಂದ್ರ ತೇಜಸ್ವಿ, ಶಾಂತಿನಾಥ ದೇಶಾಯಿ, ಪಿ.ಲಂಕೇಶ್, ಟಿ.ಜಿ.ರಾಘವ, ಕಾಮರೂಪಿ, ಯಶವಂತ ಚಿತ್ತಾಲ ಮೊದಲಾದವರು ಉತ್ತಮ ಕಥೆಗಳನ್ನು, ಶ್ರೇಷ್ಠ ದರ್ಜೆಯ ಭಾಷೆಯನ್ನು ಕೊಟ್ಟಿದ್ದಾರೆ. ಜೀವನಚರಿತ್ರೆಯೂ ಗದ್ಯ ಪ್ರಕಾರಗಳಲ್ಲಿ ಒಂದು. ಎಂ.ಎಸ್.ಪುಟ್ಟಣ್ಣ, ಚ.ವಾಸುದೇವಯ್ಯ, ಡಿ.ವಿ.ಜಿ., ಕುವೆಂಪು, ಆಲೂರ ವೆಂಕಟರಾಯ, ಸಿ.ಕೆ.ವೆಂಕಟರಾಮಯ್ಯ ಮೊದಲಾದವರು ಉತ್ತಮ ದರ್ಜೆಯ ಜೀವನ ಚರಿತ್ರೆಗಳನ್ನು ನೀಡಿದ್ದಾರೆ. ಅದರಲ್ಲಿಯೂ ಕುವೆಂಪು ಅವರ ಗದ್ಯ ವಿಶಿಷ್ಟವಾದದ್ದು, ಪ್ರೌಢವಾದದ್ದು. ದೇಜಗೌ ಅವರ ಭಾಷೆ ಹೆಚ್ಚು ಗ್ರಾಮೀಣವಾದದ್ದು. ಶಿವರಾಮ ಕಾರಂತರದು ಹದವರಿತ ಶೈಲಿ. ಬೆಳೆಯುತ್ತಿರುವ ಆಧುನಿಕ ಜೀವನವನ್ನು ಯುಕ್ತವಾಗಿ ನಿರೂಪಿಸಬಲ್ಲ ಶಕ್ತಿ ಕನ್ನಡ ಗದ್ಯಕ್ಕೆ ಇದೆ ಎನ್ನುವ ವಿಷಯ ಈ ಜೀವನ ಚರಿತ್ರೆಗಳಿಂದ ಸ್ಪಷ್ಟವಾಗುತ್ತದೆ.

ನಾಟಕ ಇನ್ನೊಂದು ಬಗೆಯ ಗದ್ಯಕ್ಕೆ ದಾರಿಮಾಡಿಕೊಟ್ಟಿದೆ. ಆಧುನಿಕ ಕನ್ನಡ ನಾಟಕಗಳನ್ನು ವಿವೇಚಿಸಬೇಕಾದರೆ ಅಳಸಿಂಗರಾಚಾರ್ಯ, ಬಸವಪ್ಪಶಾಸ್ತ್ರಿ, ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು ಮೊದಲಾದವರನ್ನು ಮರೆಯುವಂತಿಲ್ಲ. ಗಿರೀಶ ಕಾರ್ನಾಡ ಕನ್ನಡ ನಾಟಕಗಳಿಗೆ ಒಂದು ಹೊಸ ದೃಷ್ಟಿಕೋನ ಕೊಟ್ಟರು. ನವ್ಯನಾಟಕಕಾರರಲ್ಲಿ ಪಿ.ಲಂಕೇಶ್, ಎಚ್.ಎಂ.ಚನ್ನಯ್ಯ, ಚಂದ್ರಶೇಖರ ಪಾಟೀಲ, ಚದುರಂಗ, ಕೀರ್ತಿನಾಥ ಕುರ್ತಕೋಟಿ, ಚಂದ್ರಕಾಂತ ಕುಸನೂರ, ಚಂದ್ರಶೇಖರ ಕಂಬಾರ ಮೊದಲಾದವರು ಸಮರ್ಥ ಲೇಖಕರು. ಇವರ ಕೈಯಲ್ಲಿ ಕನ್ನಡ ಗದ್ಯ ಬೆಳೆದಿದೆ; ಶ್ರೀಮಂತವಾಗಿದೆ. ಇಂಥ ಬರೆಹಗಾರರಿಂದ ಕನ್ನಡ ಗದ್ಯಸಾಹಿತ್ಯ ಹೊಸಹೊಸ ಆಯಾಮವನ್ನು ಪಡೆಯುತ್ತಿದೆ. ಪೌರಾಣಿಕ, ರುದ್ರ ಪ್ರಹಸನ, ಏಕಾಂಕ ನಾಟಕ ಈ ಮೊದಲಾದ ಪ್ರಕಾರಗಳಲ್ಲಿ ನಾಟಕಕಾರರು ಬಳಸಿರುವ ಗದ್ಯಭಾಷೆ ತನ್ನ ವೈವಿಧ್ಯದಿಂದ ಔಚಿತ್ಯದಿಂದ ಸಂಕೀರ್ಣತೆಯಿಂದ ವ್ಯಾಸಂಗಯೋಗ್ಯವೆನಿಸಿದೆ.

ವಿಮರ್ಶಾತ್ಮಕ ಲೇಖನಗಳು, ಕೃತಿಗಳು, ಹೊಸಗನ್ನಡ ಗದ್ಯವನ್ನು ಬೆಳೆಸುವುದರಲ್ಲಿ ಹೆಚ್ಚಿನ ಕೆಲಸ ನಡೆಸಿವೆ. ಮೊದಮೊದಲು ಈ ಲೇಖನಗಳು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಪ್ರಬುದ್ಧ ಕರ್ಣಾಟಕ, ಜಯಂತಿ, ಜಯಕರ್ನಾಟಕ, ಜೀವನ, ಶರಣಸಾಹಿತ್ಯ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದುವು. ಈಗ ಅವುಗಳ ಜೊತೆಗೆ ಕರ್ನಾಟಕ ಭಾರತಿ, ವಿಜ್ಞಾನ ಕರ್ಣಾಟಕ, ಮಾನವಿಕ ಕರ್ಣಾಟಕ, ಸಾಧನೆ, ಸಂಕ್ರಮಣ, ಸಾಕ್ಷಿ, ಸಮನ್ವಯ, ಜಾನಪದ ಮೊದಲಾದುವು ಸೇರಿವೆ. ಇವಲ್ಲದೆ ದೈನಂದಿನ ಮತ್ತು ವಾರಪತ್ರಿಕೆಗಳಾದ ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಸುಧಾ, ಕರ್ಮವೀರ, ತರಂಗ, ಪ್ರಜಾಮತ, ಜನಪ್ರಗತಿ ಮೊದಲಾದುವು ವರ್ಷಕ್ಕೆ ಒಂದು ಬಾರಿಯೋ ಎರಡು ಬಾರಿಯೋ ಹೊರತರುವ ವಿಶೇಷಾಂಕಗಳಲ್ಲೂ ಪ್ರೌಢಲೇಖನಗಳು ಅಚ್ಚಾಗುತ್ತಿವೆ. ವಿಮರ್ಶಾರಂಗ ವಿಶಾಲವಾಗಿ ಬೆಳೆಯುವುದಕ್ಕೆ ಈ ಪತ್ರಿಕೆಗಳಿಂದ ಆಗಿರುವ ಸಹಾಯ ಅಪಾರ. ಇವಲ್ಲದೆ ವಿರ್ಮಶನ ಗದ್ಯ ಕಾಲಕಾಲಕ್ಕೆ ಪುಸ್ತಕಗಳಾಗಿಯೂ ಹೊರಬಂದಿದೆ. ಪಂಪ, ರನ್ನ, ಕುಮಾರವ್ಯಾಸ, ಮುದ್ದಣ ಮೊದಲಾದವರನ್ನು ಕುರಿತ ಪ್ರಶಸ್ತಿಗಳು ಆಯಾ ಕವಿಯ ಮತ್ತು ಕಾವ್ಯದ ಪರಿಚಯವನ್ನು ಮಾಡಿಕೊಡುವ ವಿಮರ್ಶಾತ್ಮಕ ಕೃತಿಗಳು. ಇಲ್ಲಿಯ ಲೇಖನಗಳೆಲ್ಲ ಶಾಸ್ತ್ರೀಯ ಗದ್ಯ ಶೈಲಿಯಲ್ಲಿವೆ. ಇವೇ ಮುಂದಿನ ವಿಮರ್ಶಕರಿಗೆ ಮಾರ್ಗದರ್ಶನ ನೀಡಿದುವೆನ್ನಬಹುದು. ಅಬಿವಂದನೆ, ಸಂಭಾವನೆ, ಉಡುಗೊರೆ, ಉಪಾಯನ, ಬಾಗಿನ, ಗಂಗೋತ್ರಿ, ದೇಜಗೌ ಐವತ್ತು, ರಸಿಕರಂಗ, ಗಂಗೋತ್ರಿ, ಸಹ್ಯಾದ್ರಿ, ಕಾರಂತ ಪ್ರಪಂಚ, ಸವಿನೆನಪು, ಮಹಾಮಾರ್ಗ ಈ ಮೊದಲಾದ ಅಬಿನಂದನ ಗ್ರಂಥಗಳು ಕನ್ನಡ ವಿಮರ್ಶಾಗದ್ಯದ ಉಜ್ವಲ ಮಾದರಿಗಳನ್ನು ಒದಗಿಸುತ್ತವೆ. ವಿಮರ್ಶಾರಂಗದಲ್ಲಿ ಎಸ್.ವಿ.ರಂಗಣ್ಣ, ದೇಜಗೌ, ಹಾ.ಮಾ.ನಾಯಕ, ಎಲ್.ಬಸವರಾಜು, ಎಂ.ಚಿದಾನಂದಮೂರ್ತಿ, ರಂ.ಶ್ರೀ.ಮುಗಳಿ, ಜಿ.ಎಸ್.ಶಿವರುದ್ರಪ್ಪ, ಸಿ.ಪಿ.ಕೃಷ್ಣಕುಮಾರ್ ಮೊದಲಾದವರು ಸ್ಮರಣೀಯ ಕೆಲಸ ಮಾಡಿದ್ದಾರೆ. ಈ ಮಹನೀಯರಲ್ಲಿ ಕೆಲವರು ಹಳಗನ್ನಡ ಕಾವ್ಯಗಳನ್ನು ಪರಿಷ್ಕರಿಸಿ ಸಂಪಾದಿಸಿ ಅವುಗಳಿಗೆ ಮುನ್ನುಡಿ, ಪ್ರಸ್ತಾವನೆಗಳನ್ನು ಗದ್ಯದಲ್ಲಿ ಬರೆದು ಗದ್ಯಸಾಹಿತ್ಯವನ್ನು ಪುಷ್ಟಿಗೊಳಿಸಿದ್ದಾರೆ. ಇವರಲ್ಲದೆ ಹೆಚ್ಚಾಗಿ ನವ್ಯ ಸಾಹಿತ್ಯವನ್ನು ಕುರಿತು ವಿಮರ್ಶಿಸಿ ಹೊಸದೃಷ್ಟಿಯನ್ನು ಬೆಳೆಸಿದವರಲ್ಲಿ ಗೋಪಾಲಕೃಷ್ಣ ಅಡಿಗ, ಎಂ.ಜಿ.ಕೃಷ್ಣಮೂರ್ತಿ, ಯು.ಆರ್.ಅನಂತಮೂರ್ತಿ, ಕುರ್ತಕೋಟಿ, ಶಂಕರ ಮೊಕಾಶಿ ಪುಣೇಕರ, ಪಿ.ಲಂಕೇಶ್, ಜಿ.ಎಚ್.ನಾಯಕ, ಎಚ್.ಎಂ.ಚನ್ನಯ್ಯ, ಎನ್.ಎಸ್.ಎಲ್.ಭಟ್ಟ, ಸುಮತೀಂದ್ರ ನಾಡಿಗ, ಡಿ.ಆರ್.ನಾಗರಾಜ್, ಟಿ.ಪಿ.ಅಶೋಕ, ನರಹಳ್ಳಿ ಬಾಲಸುಬ್ರಹ್ಮಣ್ಯ ಮೊದಲಾದವರು ಮುಖ್ಯರು.

ಗದ್ಯದ ಬೆಳೆವಣಿಗೆಗೆ ವೃತ್ತ ಪತ್ರಿಕೆಗಳು, ಸಾಪ್ತಾಹಿಕ ಪತ್ರಿಕೆಗಳು, ಮಾಸಪತ್ರಿಕೆಗಳು, ತ್ರೈಮಾಸಿಕ ಪತ್ರಿಕೆಗಳು, ಆಯನಪತ್ರಿಕೆಗಳು ನಾನಾಮುಖವಾಗಿ ಸೇವೆ ಸಲ್ಲಿಸುತ್ತಿವೆ. ಗದ್ಯ ವಿಕಸನಕ್ಕೆ ಆಡುಮಾತನ್ನು ಬಿಟ್ಟರೆ ಪತ್ರಿಕೆಗಳೇ ಪ್ರಮುಖ ರಂಗವನ್ನು ಒದಗಿಸಿವೆಯೆಂಬ ಮಾತು ನಿಜ. ಮಾತು, ಅಬಿsಪ್ರಾಯ, ವರದಿ, ವರ್ಣನೆ, ವಾದ, ವಿವಾದ, ತರ್ಕ, ರಂಜನೆ ಎಲ್ಲ ಅನುಭವಗಳಿಗೂ ಪತ್ರಿಕೆ ಎಡೆಕೊಡುತ್ತದೆ. ತನ್ಮೂಲಕ ಗದ್ಯ ಮಾದರಿಗಳನ್ನು ಬೆಳೆಸುತ್ತದೆ. ಸದ್ಯಕ್ಕೆ ಒದಗಬಲ್ಲ ಹೊಸ ಹೊಸ ಪದಗಳ ಸೃಷ್ಟಿಯಾಗುವುದೂ ಪತ್ರಿಕೆಗಳಲ್ಲಿಯೇ. ಈ ದೃಷ್ಟಿಯಿಂದ ಪ್ರಜಾವಾಣಿ, ಉದಯವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಸುಧಾ, ಕರ್ಮವೀರ, ಕಸ್ತೂರಿ, ಮಯೂರ, ತುಷಾರ, ತರಂಗ ಮೊದಲಾದವು ಮಾಡುತ್ತಿರುವ ಕೆಲಸ ಮುಖ್ಯವಾದುದು. ಹೀಗೆ ಪತ್ರಿಕೆ ಜೀವದ್ಭಾಷೆಯ ಪ್ರಯೋಗ ಶಾಲೆಯಾಗಿದೆ.

ಅನುವಾದಕೃತಿಗಳಿಂದಲೂ ಕನ್ನಡ ಗದ್ಯಭಾಷೆ ಹೆಚ್ಚು ಸಂಪದ್ಭರಿತವಾಗಿದೆ. ಸಂಸ್ಕೃತ, ಇಂಗ್ಲಿಷ್, ರಷ್ಯನ್ ಹಿಂದಿ, ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಬಂಗಾಲಿ ಇತ್ಯಾದಿ ಭಾಷೆಗಳ ಅನುವಾದದಿಂದ ಕನ್ನಡದ ಗದ್ಯ ಹೊಸ ಸತ್ವವನ್ನು ಪಡೆಯುತ್ತಿದೆ. ವಿವಿಧ ಭಾಷೆಗಳ ವಿಶಿಷ್ಟ ಶಬ್ದಗಳು, ನುಡಿಗಟ್ಟು, ವಾಕ್ಯರಚನೆ ಮುಂತಾದು ವನ್ನು ಕನ್ನಡಕ್ಕೆ ಅನುವಾದಿಸುವಲ್ಲಿ ಕನ್ನಡ ಹೇಗೆ ಅದನ್ನು ನಿರ್ವಹಿಸಿದೆ. ಅದರಲ್ಲಿ ಎರವಲು ಎಷ್ಟು, ಎಷ್ಟರ ಮಟ್ಟಿಗೆ ಅನುವಾದ ಸಫಲವಾಗಿದೆ ಎಂಬ ವಿಷಯಗಳ್ನು ಪರಿಶೀಲಿಸಿದಲ್ಲಿ ಅನುವಾದದಿಂದ ಭಾಷೆ ಹೇಗೆ ಬೆಳೆಯಬಲ್ಲದೆಂಬ ಅಂಶ ಸ್ಪಷ್ಟ ವಾಗುತ್ತದೆ. ಸಂಸ್ಕೃತ ಗ್ರಂಥವನ್ನು ಅನುವಾದಿಸುವುದರಲ್ಲಿ ಕೆ. ಕೃಷ್ಣ ಮೂರ್ತಿಯವರ ಹೆಸರು ಹೊಸ ಗನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿ ಯಾಗಿ ಉಳಿಯುತ್ತದೆ. ದೇಜಗೌ ಅವರು ಇಂಗ್ಲಿಷ್ ಹಾಗೂ ರಷ್ಯನ್ ಸಾಹಿತ್ಯಾನುವಾದದಿಂದ ಕನ್ನಡದ ಗದ್ಯಸಂಪತ್ತನ್ನು ಬೆಳಗಿಸಿದ್ದಾರೆ. ಇವರ ಗದ್ಯದಲ್ಲಿ ಬಿಗು ಬಿನ್ನಾಣವಿದೆ, ಬನಿ ತನಿ ಇದೆ, ಆಡುಮಾತುಗಳ ಜಾಲವಿದೆ, ಅಸಂಖ್ಯ ಹೊಸ ಶಬ್ದಗಳ ಸೃಷ್ಟಿಯಿದೆ. ಶಾಸ್ತ್ರೀಯ ಅನುವಾದಕ್ಕೆ ಎನ್.ಬಾಲಸುಬ್ರಹ್ಮಣ್ಯಂ ಹೆಸರಾಗಿದ್ದಾರೆ. ಸಿ.ಪಿ.ಕೆ. ಅವರು ಸಂಸ್ಕೃತ, ಇಂಗ್ಲಿಷ್ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಗದ್ಯ ಸಾಹಿತ್ಯವನ್ನು ಬಲಪಡಿಸಿದ್ದಾರೆ.

ಇನ್ನು ವಿದ್ವಾಂಸರು ನಡೆಸಿದ ಹಿರಿಯ ಸಂಶೋಧನೆಗಳ ಪ್ರಕಟಣೆಗಳನ್ನು ಗಮನಿಸ ಬಹುದು. ಎ.ಆರ್.ಕೃ. ಅವರ ಕನ್ನಡ ನಾಟಕ, ಬಂಕಿಮಚಂದ್ರ, ಜಿ.ವರದರಾಜರಾವ್ ಅವರ ಕುಮಾರರಾಮನ ಸಾಂಗತ್ಯಗಳು, ಚಿದಾನಂದಮೂರ್ತಿಯವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಜಿ.ಎಸ್.ಶಿವರುದ್ರಪ್ಪನವರ ಸೌಂದರ್ಯ ಸಮೀಕ್ಷೆ, ಪ್ರಭುಶಂಕರರ ಕನ್ನಡದಲ್ಲಿ ಭಾವಗೀತೆ, ಟಿ.ವಿ.ವೆಂಕಟಾಚಲಶಾಸ್ತ್ರೀ ಅವರ ಕನ್ನಡ ಛಂದಸ್ಸು, ಶ್ರೀನಿವಾಸ ಹಾವನೂರರ ಹೊಸಗನ್ನಡದ ಅರುಣೋದಯ ಮೊದಲಾದವು ಈ ಬಗೆಯ ಗದ್ಯಕ್ಕೆ ಉತ್ತಮ ಉದಾಹರಣೆಗಳು.

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗುತ್ತಿರುವ ಕನ್ನಡ ವಿಶ್ವಕೋಶದ ಸಂಪುಟಗಳು ಗದ್ಯ ಕ್ಷೇತ್ರದಲ್ಲಿ ಹೊಸದೊಂದು ವಿಕ್ರಮ ಸ್ಥಾಪಿಸುತ್ತಿವೆ. ಭಾಷೆಯನ್ನು ವೈಜ್ಞಾನಿಕವಾಗಿ ಬಳಸುವುದು, ಪದಪ್ರಯೋಗಗಳಲ್ಲಿ ಸಾಧ್ಯವಾದಷ್ಟು ಏಕತೆಯನ್ನು ಸಾದಿಸುವುದು, ಅನುಚಿತವೆನಿಸಬಹುದಾದ ಕೆಲವು ಪ್ರತ್ಯಯಗಳನ್ನು ನಿವಾರಿಸುವುದು, ಬಿನ್ನ ಬಿನ್ನ ಲೇಖಕರ ಬರೆಹಗಳನ್ನು ಉಚಿತ ಸಂಯೋಜನೆಯಿಂದ ಒಂದು ಸಮಾನ ರೂಪಕ್ಕೆ ತರುವುದು ಈ ಮೊದಲಾದ ಅಂಶಗಳಿಂದಾಗಿ ಇಲ್ಲಿನ ಗದ್ಯ ಪರಿಶೀಲನಯೋಗ್ಯವಾಗಿದೆ. ವಿವಿಧ ಜ್ಞಾನ ಕ್ಷೇತ್ರಗಳಲ್ಲಿನ ಅದರಲ್ಲೂ ವಿಜ್ಞಾನ ವಿಭಾಗಗಳಲ್ಲಿನ ಸೂಕ್ಷ್ಮವೂ ಸಂಕೀರ್ಣವೂ ಆದ ಅಂಶಗಳನ್ನು ಶಾಸ್ತ್ರೀಯ ಸ್ಪಷ್ಟತೆಯಿಂದ ಕನ್ನಡ ಗದ್ಯ ರೂಪಿಸಬಲ್ಲುದೆಂಬುದಕ್ಕೆ ಈ ಕೋಶಗಳಲ್ಲಿ ನಿದರ್ಶನಗಳಿವೆ. ಇದರ ಜೊತೆಗೆ ವಿಜ್ಞಾನ ವಿಷಯಗಳನ್ನು ಕುರಿತು ಆರ್.ಎಲ್.ನರಸಿಂಹಯ್ಯ, ಶಿವರಾಮ ಕಾರಂತ, ಜೆ.ಆರ್.ಲಕ್ಷ್ಮಣರಾವ್, ಡಿ.ಎಸ್.ಶಿವಪ್ಪ, ಜಿ.ಟಿ.ನಾರಾಯಣರಾವ್ ಮೊದಲಾದವರು ರಚಿಸಿರುವ ಗ್ರಂಥಗಳನ್ನೂ ಕನ್ನಡ ವಿಜ್ಞಾನ ಸಾಹಿತ್ಯ ನಿರ್ಮಾಣ ಗ್ರಂಥಗಳನ್ನೂ ಪರಿಶೀಲಿಸಬಹುದು. ಇತ್ತೀಚೆಗೆ ಹೆಚ್ಚು ವಿಶಾಲವೂ ವೈಜ್ಞಾನಿಕವೂ ಆಗಿ ಬೆಳೆಯುತ್ತಿರುವ ವಿಷಯಗಳಲ್ಲಿ ಜಾನಪದವೂ ಒಂದು. ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಕಥೆ, ಒಗಟು, ಗಾದೆ, ಗೀತೆ ಪ್ರಮುಖವಾದವು. ನೂರಾರು ಜನಪದ ಕಥೆಗಳೂ ಗಾದೆ ಗೀತೆ ಒಗಟುಗಳೂ ಸಂಪಾದನೆ ಹೊಂದಿ ಪ್ರಕಟವಾಗಿವೆ. ಹಲವಾರು ವಿದ್ವಾಂಸರು ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿ ಹೆಸರು ಗಳಿಸಿದ್ದಾರೆ. ಜಾನಪದದ ಬಗ್ಗೆ ಜನಪದ ಸಾಹಿತ್ಯದ ಬಗ್ಗೆ ಅನೇಕ ಲೇಖನಗಳೂ ವಿಮರ್ಶಾಕೃತಿಗಳೂ ಹೊರಬಂದಿವೆ. ಜನಪದ ಸಾಹಿತ್ಯದಲ್ಲಿ ಕಥೆ, ಒಗಟು, ಗಾದೆ ಇವುಗಳಲ್ಲಿ ಬಳಕೆಯಾಗಿರುವ ಗದ್ಯ ಆಡುಭಾಷೆಯ ಸೊಗಡಿನಿಂದ ಕೂಡಿದ್ದು ಜೀವಂತವಾಗಿದೆ. ಈ ಭಾಷೆ ಕನ್ನಡದ ನೈಜ ಜಾಯಮಾನದ ಸಂಪತ್ತಿನಿಂದ ಕೂಡಿದೆ.

ಇಂದು ಸೃಜನಶೀಲ ಗದ್ಯ ಒಂದು ಕಡೆ, ಶಾಸ್ತ್ರ ಗದ್ಯ ಇನ್ನೊಂದು ಕಡೆ ವೈವಿಧ್ಯಪುರ್ಣ ವಾಗಿ ಬೆಳೆಯುತ್ತಿದೆ. ಪದ್ಯಕ್ಕಿಂತ ಗದ್ಯಕ್ಕೆ ಹೆಚ್ಚಿನ ವ್ಯಾವಹಾರಿಕ ಪ್ರಾಮುಖ್ಯವಿದೆ. ಆಧುನಿಕ ಯುಗದಲ್ಲಂತೂ ಗದ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಸಂದಿದೆ. ಈಚೆಗೆ ವಾಣಿಜ್ಯ ವ್ಯವಹಾರಗಳಲ್ಲಿ ಕನ್ನಡದ ಬಳಕೆ ಹೆಚ್ಚಿದೆ. ಕನ್ನಡ ಹಂತಹಂತವಾಗಿ ಆಡಳಿತ ಭಾಷೆಯಾಗಿ ರೂಡಿsಯಾಗುತ್ತಿದೆ. ಪದವಿ ಮಟ್ಟದ ಶಿಕ್ಷಣ ಕನ್ನಡ ಮಾಧ್ಯಮದಿಂದ ಯಶಸ್ವಿಯಾಗಿ ನೆರವೇರುತ್ತಿದೆ. ಅದಕ್ಕನುಕೂಲವಾಗಿ ಪಠ್ಯಪುಸ್ತಕಗಳು ಸ್ಪಷ್ಟಿಯಾಗುತ್ತಿವೆ. ಕನ್ನಡ ಗದ್ಯ ಸುಪುಷ್ಟವಾಗಿ ಬೆಳೆದು ಶಾಸ್ತ್ರಾಬಿವ್ಯಕ್ತಿಗೂ ಭಾವಾಬಿವ್ಯಕ್ತಿಗೂ ಸಮರ್ಥವಾದುದಾಗಿದೆ. ಕನ್ನಡ ಮಾಧ್ಯಮದಿಂದ ಯಾವ ವಿಷಯವನ್ನಾದರೂ ಹೇಳಲು ಕಲಿಯಲು ಬರುತ್ತದೆ ಎಂಬ ಅಂಶ ಮೇಲಿನ ಪರಿಶೀಲನೆಯಿಂದ ಸಹಜವಾಗಿ ಸ್ಪಷ್ಟಗೊಳ್ಳುತ್ತಿದೆ. *

1970ರ ದಶಕ ಕನ್ನಡ ಗದ್ಯಸಾಹಿತ್ಯಕ್ಷೇತ್ರದಲ್ಲಿ ಬಹಳ ಪ್ರಮುಖವಾದದ್ದು ನವೋದಯ ಕಾಲದ ಸಾಹಿತ್ಯ, ಪ್ರಗತಿಶೀಲ ಕಾಲದ ಸಾಹಿತ್ಯದ ಹಂತಗಳನ್ನು ದಾಟಿ ನವ್ಯಪಂಥದ ಕಾಲದ ಸಾಹಿತ್ಯ ಶಿಖರಾವಸ್ಥೆಯನ್ನು ತಲಪಿದ ಕಾಲವದು. ಕಾವ್ಯದ ಕ್ಷೇತ್ರದಲ್ಲಿ ನವ್ಯಪಂಥ ಒಂದು ವಿನೂತನ ಕಾವ್ಯಮಾದರಿಯನ್ನು ರೂಡಿಸಿತು. ಪದ್ಯಗಂದಿ ಗದ್ಯ ಹೆಚ್ಚು ಪ್ರಬಲವಾಯಿತು. ಕಾವ್ಯ ತನ್ನ ಗೇಯತೆಯನ್ನು ಕಳೆದುಕೊಂಡು ವಾಸ್ತವಕ್ಕೆ ಹೆಚ್ಚು ಹತ್ತಿರವಾಯ್ತು. ಅನೇಕ ನವ್ಯ ಲೇಖಕರು ಕನ್ನಡ ಗದ್ಯವನ್ನು ಅತ್ಯಂತ ಸೃಜನಶೀಲವಾಗಿ ಬೆಳೆಸಿದರು. ಗದ್ಯವೂ ಕಾವ್ಯದಷ್ಟೇ, ಅದಕ್ಕೆ ಒಂದು ಕೈ ಮೇಲಾಗಿ ಸಾಹಿತ್ಯವನ್ನು ತುಂಬಿಕೊಂಡಿತು. ವಿಮರ್ಶೆಯ ಕ್ಷೇತ್ರ, ಅದರ ಪರಿಮಿತಿಗಳ ನಡುವೆಯೂ ಅತ್ಯಂತ ಶ್ರೀಮಂತವಾದದ್ದು ನವ್ಯ ಸಾಹಿತ್ಯ ಸಂದರ್ಭದಲ್ಲಿ. ಗೋಪಾಲಕೃಷ್ಣ ಅಡಿಗ, ಲಂಕೇಶ್, ಅನಂತಮೂರ್ತಿ, ಎಂ.ಜಿ.ಕೃಷ್ಣಮೂರ್ತಿ, ಮೊದಲಾದವರು ಕನ್ನಡ ಗದ್ಯಸಾಹಿತ್ಯ ಕ್ಷೇತ್ರದ ಕ್ಷಿತಿಜವನ್ನು ತಮ್ಮ ಬರೆಹಗಳಿಂದ ವಿಸ್ತರಿಸಿದರು. ಈ ವಿಸ್ತರಣೆಯಲ್ಲಿ ಸಾಕ್ಷಿ, ಸಂಕ್ರಮಣ ಮೊದಲಾದ ಸಾಹಿತ್ಯ ಪತ್ರಿಕೆಗಳ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಅನಂತರ ಬಂಡಾಯ, ದಲಿತ ಸಾಹಿತ್ಯದ ಸಂದರ್ಭದಲ್ಲಿ ಗದ್ಯ ನ ಭೂತೋ ನ ಭವಿಷ್ಯತಿ ಎಂಬಂತೆ ಸಹಸ್ರ ಮುಖಿಯಾಯ್ತು. ಕೆಳವರ್ಗದಿಂದ ಬಂದ ಲೇಖಕರ ತಾಜಾ ಅನುಭವಗಳ ಅಬಿsವ್ಯಕ್ತಿ ಆಯಾ ಪ್ರಾದೇಶಿಕ ಭಾಷೆಯ ಎಲ್ಲ ಸತ್ವದೊಡನೆ ವಿಜೃಂಬಿಸಿತು. ಕನ್ನಡ ಗದ್ಯಕ್ಕೆ ಹೊಸ ರಕ್ತದಾನವಾಯಿತು.

ತೇಜಸ್ವಿ, ಲಂಕೇಶ್, ಬೆಸಗರಹಳ್ಳಿ ರಾಮಣ್ಣ, ಕುಂ.ವೀರಭದ್ರಪ್ಪ, ವೀರಭದ್ರ, ಗಿರೀಶ್ ಕಾರ್ನಾಡ್, ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ, ಮಾಧವ ಕುಲಕರ್ಣಿ, ಚೆನ್ನಣ್ಣ ವಾಲೀಕಾರ ಮುಂತಾದವರು ಕನ್ನಡ ಗದ್ಯಕ್ಕೆ ಹೊಸ ಆಯಾಮವನ್ನು ನೀಡಿದರು. ಕಾರ್ನಾಡ್, ಕಂಬಾರ, ಲಂಕೇಶ್ ಮುಂತಾದವರು ನಾಟಕ ಕ್ಷೇತ್ರದ ಗದ್ಯದಲ್ಲಿ ಉತ್ತಮ ಸಾಧನೆ ಮಾಡಿದರು. ಬಂಡಾಯ ಸಾಹಿತ್ಯದಲ್ಲಿ ಮುಖ್ಯವಾಗಿ ಮೂರು ಬಗೆಯ ಸಂವೇದನೆಗಳನ್ನು ನೋಡಬಹುದು - ದಲಿತ ಸಂವೇದನೆ, ಮಹಿಳಾ ಸಂವೇದನೆ ಮತ್ತು ಮುಸ್ಲಿಂ ಸಂವೇದನೆ. ಸಣ್ಣಕಥೆಗಳ ಕ್ಷೇತ್ರದಲ್ಲಿ ಬರೆವಣಿಗೆಯ ಹೊಸತನ ಕಾಣಿಸಿಕೊಳ್ಳತೊಡಗಿತು. ಕುಂ.ವೀರಭದ್ರಪ್ಪನವರ ಇನ್ನಾದರೂ ಸಾಯಬೇಕು, ಬೆಸಗರಹಳ್ಳಿ ರಾಮಣ್ಣನವರ ಕನ್ನಂಬಾಡಿ, ಬರಗೂರು ರಾಮಚಂದ್ರಪ್ಪನವರ ಕಪ್ಪುನೆಲದ ಕೆಂಪುಕಾಲು, ಫಕೀರ್ ಮಹಮ್ಮದ್ ಕಟ್ಪಾಡಿಯವರ ನೋಂಬು, ಬಾನು ಮುಷ್ತಾಕ್ ಅವರ ಹೆಜ್ಜೆ ಮೂಡದ ಹಾದಿ, ವೀರಭದ್ರ ಅವರ ಕನ್ನಡಿ ನೋಡಿದ ನಾಯಿ, ಚದುರಂಗರ ಮೃಗಯಾ, ವೀಣಾ ಶಾಂತೇಶ್ವರರ ಬಿಡುಗಡೆ, ಕೊಡ್ಲೆಕೆರೆಯವರ ಯಕ್ಷಸೃಷ್ಟಿ, ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು, ಮೊಗಳ್ಳಿ ಗಣೇಶ್ ಅವರ ಬುಗುರಿ ಮುಂತಾದ ಕೃತಿಗಳಲ್ಲಿ ಗ್ರಾಮೀಣ ಲಕ್ಷಣವನ್ನುಳ್ಳ ಭಾಷೆಯನ್ನೂ ಗದ್ಯದ ವಿಕಾಸವನ್ನೂ ಕಾಣುತ್ತೇವೆ. ನಾ.ಡಿಸೋಜರವರ ಸಣ್ಣಕಥೆಗಳ ಭಾಷೆಯ ಸ್ವಾರಸ್ಯದಿಂದಾಗಿ ಓದುಗರು ಕ್ರೈಸ್ತ ಸಮಾಜ, ಸಮುದಾಯದ ನಡುವೆಯೇ ಇರುವಂತೆ ತೋರುತ್ತದೆ. ಕೆಳವರ್ಗದವರ ಬದುಕಿನ ಹೃದಯಸ್ಪರ್ಶಿ ಚಿತ್ರಣವನ್ನು ಅನೇಕ ಸಣ್ಣಕತೆಗಾರರ ಬರೆಹಗಳಲ್ಲಿ ಕಾಣುತ್ತೇವೆ. ದೇವನೂರು ಮಹಾದೇವ, ಮೊಗಳ್ಳಿ ಗಣೇಶ್, ಕುಂ.ವೀರಭದ್ರಪ್ಪ, ಅಮರೇಶ ನುಗುಡೋಣಿ, ಎಂ.ಎಸ್.ವೇದಾ ಮುಂತಾದವರ ಕಥೆಗಳನ್ನು ಭಾಷೆಯ ಸ್ವಾರಸ್ಯಕ್ಕಾಗಿಯೂ ಮತ್ತೆ ಮತ್ತೆ ಓದಬೇಕೆಸುವುದುಂಟು.

ಇದೇ ಸಂದರ್ಭದಲ್ಲಿ ಬಂದ ಕಾದಂಬರಿಗಳೂ ಭಾಷೆಯ ಗತಿಸ್ಥಿತಿಯನ್ನು ವಿಸ್ತೃತಗೊಳಿಸಿದವು. ದೇವನೂರರ ಕುಸುಮಬಾಲೆ ಕಾದಂಬರಿಯ ಗದ್ಯ, ಒಡಲಾಳದ ಗದ್ಯ ಒಂದು ಸಮಾಜದ ಸಮುದಾಯಮೊಂದರ ಆಡುಭಾಷೆಯ ಎಲ್ಲ ಕಸುವನ್ನೂ ಬೆರಗನ್ನೂ ಒಳಗೊಂಡಿರುವುದು ನಮ್ಮ ಗಮನ ಸೆಳೆಯುತ್ತದೆ. ಈ ಕೃತಿಗಳನ್ನು ಓದಲು, ಅರ್ಥೈಸಲು ಒಂದು ವಿಶಿಷ್ಟ ಬಗೆಯ ಮನೋಭಾವ, ಗ್ರಾಮೀಣ ಬದುಕಿನ ಅರಿವು ಅತ್ಯಂತ ಅಗತ್ಯವಾಗಿಬಿಡುತ್ತದೆ. ಕನ್ನಡ ಗದ್ಯಲೋಕ ಅದುವರೆಗೆ ಈ ಬಗೆಯ ಬೆರಗಿನ ಭಾಷೆಯನ್ನು ಕಂಡಿರಲಿಲ್ಲ. ಕನ್ನಡದಲ್ಲಿ ನಾಟಕಗಳು ಕಡಿಮೆ ಎಂಬ ಭಾವನೆ ಇದೆ. ಶ್ರೀರಂಗರ ಅನಂತರ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರು ನಾಟಕದ ಗದ್ಯವನ್ನು ಬೆಳೆಸಿದರು. ಕಂಬಾರರು ಉತ್ತರ ಕರ್ನಾಟಕದ ಭಾಷೆಯನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಾರ್ನಾಡ್ರ ನಾಟಕಗಳು ಸೊಗಸಾದ ಗದ್ಯವನ್ನು ನಿರ್ಮಿಸಿಕೊಟ್ಟಿವೆ. ತುಘಲಕ್, ಯಯಾತಿ, ಹಯವದನ, ಅಗ್ನಿ ಮತ್ತು ಮಳೆ ಮುಂತಾದುವುಗಳ ಗದ್ಯವನ್ನು ನೋಡಬಹುದು. ಎಚ್.ಎಸ್.ಶಿವಪ್ರಕಾಶ್ ಅವರ ಸುಲ್ತಾನ್ ಟಿಪ್ಪು, ಮಹಾಚೈತ್ರ, ಟಿ.ಎನ್.ಸೀತಾರಾಮ್ ಅವರ ಆಸ್ಫೋಟ, ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದುವನ್ನೂ ಭಾಷೆಯದೃಷ್ಟಿಯಿಂದ ಪರಿಶೀಲಿಸಬೇಕು.

ಕನ್ನಡದಲ್ಲಿ ನವ್ಯಪಂಥದ ಕಾಲದಲ್ಲಿ ಕುರ್ತಕೋಟಿ, ಆಮೂರ, ಗಿರಡ್ಡಿ, ಲಂಕೇಶ್, ಚಂದ್ರಶೇಖರ ಪಾಟೀಲ್, ಮಾಧವ ಕುಲಕರ್ಣಿ, ಎಚ್.ಎಂ.ಚನ್ನಯ್ಯ ಮುಂತಾದವರು ವಿಮರ್ಶೆಯ ಗದ್ಯವನ್ನು ಕನ್ನಡ ಜಾಯಮಾನಕ್ಕೆ ಒಗ್ಗುವಂತೆ ಬಳಸತೊಡಗಿದರು. ದಲಿತ ಸಂವೇದನೆ ಸ್ಪಷ್ಟವಾಗಿ ಕನ್ನಡ ನೆಲದಲ್ಲಿ ಹಬ್ಬಿದ ಅನಂತರ ಕನ್ನಡ ಗದ್ಯಕ್ಕೆ ಹೊಸ ಆಯಾಮ ಲಬಿಸಿತು. ಅದುವರೆಗೆ ಶಿಷ್ಟರಿಗೆ ಅಗೋಚರವಾಗಿದ್ದ ಪರಿಶಿಷ್ಟರ ಗದ್ಯದ ಗತ್ತು ತಿಳಿದುಬಂದಿತು. ದೇವನೂರು ಮಹಾದೇವರ ಅನಂತರ ಮುಳ್ಳೂರು ನಾಗರಾಜ, ಮ.ನ.ಜ., ಮೊಗಳ್ಳಿ ಗಣೇಶ್, ಅರವಿಂದಮಾಲಗತ್ತಿ ಮೊದಲಾದವರ ಗದ್ಯ ದಲಿತ ಸಂವೇದನೆಯನ್ನು ಪ್ರಕಟಿಸತೊಡಗಿತು. ಮಹಿಳಾ ಸಂವೇದನೆ ಕಳೆದ ಕಾಲು ಶತಮಾನದಲ್ಲಿ ಬೆಳೆದಂತೆ ಹಿಂದೆಂದೂ ಬೆಳೆದಿರಲಿಲ್ಲ. ಹಿಂದೆ ಮಹಿಳಾ ಕಾದಂಬರಿಕಾರರು ಇದ್ದರೇ ವಿನಾ ಮಹಿಳಾ ಸಂವೇದನೆಯನ್ನು ಪ್ರತಿಪಾದಿಸುವ ಧೈರ್ಯವನ್ನು ತೋರುವವರು ತುಂಬಾ ಕಡಿಮೆ ಇದ್ದರು. ಮಹಿಳೆಯರಲ್ಲಿ ದಲಿತ ದಲಿತೇತರ ಎಂಬ ವ್ಯತ್ಯಾಸವೇನೂ ಇಲ್ಲ. ಏಕೆಂದರೆ ಇಡೀ ಸ್ತ್ರೀವರ್ಗವೇ ವಿಮೋಚನೆಯನ್ನು ಬಯಸುವ ಸ್ಥಿತಿಯಲ್ಲಿತ್ತು. ಉಷಾನವರತ್ನರಾಂ, ಸಿ.ಎನ್.ಮುಕ್ತಾ, ಈಚನೂರು ಸಹೋದರಿಯರು, ಸಾರಾ ಅಬೂಬಕರ್, ಬಾನು ಮುಷ್ತಾಕ್, ಗೀತಾ ನಾಗಭೂಷಣ, ವಿಜಯಾ, ಪಿಲೋಮಿನಾ, ಸಂಧ್ಯಾರೆಡ್ಡಿ, ಸುನಂದಾ ಬೆಳಗಾಂವಕರ, ವಿಜಯಾದಬ್ಬೆ, ಸುಮಿತ್ರಾಬಾಯಿ, ಪ್ರತಿಭಾ ನಂದಕುಮಾರ್, ನಾಗಚಂದ್ರ ಮೊದಲಾದ ಅನೇಕ ಲೇಖಕಿಯರು ಕೃತಿರಚನೆ ಮಾಡಿದ್ದಾರೆ. ಆದರೆ ಭಾಷೆಯ ವೈಶಿಷ್ಟ್ಯವನ್ನು ತೋರಿಸಿದವರಲ್ಲಿ ಸುನಂದಾ ಬೆಳಗಾಂವಕರ, ವೈದೇಹಿ ಮುಂತಾದವರು ಪ್ರಮುಖರು. ಮುಸ್ಲಿಂ ಸಂವೇದನೆ ತುಂಬ ತಡವಾಗಿ ಕನ್ನಡದಲ್ಲಿ ಕಾಣಿಸಿಕೊಂಡಿತು. ರಮಜಾನದರ್ಗಾ, ಅದೀಬ್ಅಕ್ತರ್, ಅಬ್ದುಲ್ರಷೀದ್, ಬೊಳುವಾರು, ಕಟ್ಪಾಡಿ, ರಹಮತ್ ತರೀಕರೆ ಮುಂತಾದವರು ಕನ್ನಡವನ್ನು ಮಾತೃಭಾಷೆಯೆಂಬುಂತೆ ಬಳಸಿದ್ದಾರೆ. ಮುಚ್ಚಿದ ಸಮಾಜವೆನ್ನಿಸಿಕೊಂಡಿರುವ ಮುಸ್ಲಿಂ ಸಮಾಜದ ಒಳ ಆಯಾಮಗಳು ಇನ್ನೂ ಹೆಚ್ಚಾಗಿ ಬೆಳಕಿಗೆ ಬರುವಂತಾದರೆ ಕನ್ನಡ ಭಾಷೆಗೆ ಹೊಸ ಮಗ್ಗಲು ಪ್ರಾಪ್ತವಾಗುತ್ತದೆ. ಕನ್ನಡ ನಿಯತಕಾಲಿಕೆಗಳಲ್ಲಿ ಅಂಕಣ ಸ್ಥಿರಶೀರ್ಷಿಕೆ ಪ್ರಾರಂಭವಾದ ಬಳಿಕ ಕನ್ನಡ ಗದ್ಯಕ್ಕೆ ಇನ್ನೊಂದು ಬಣ್ಣದ ಎಳೆ ಸೇರಿಕೊಂಡಿತು. ಕು.ಶಿ.ಹರಿದಾಸಭಟ್ಟ, ನಿರಂಜನ, ಹಾ.ಮಾ.ನಾಯಕ, ಎಚ್ಚೆಸ್ಕೆ ಮುಂತಾದ ಹಿರಿಯರು ಬರೆದಿರುವ ಅಂಕಣ ಗದ್ಯ ಕನ್ನಡಕ್ಕೆ ಇನ್ನೊಂದು ಗರಿಯನ್ನು ಮೂಡಿಸಿತು. ಎಚ್ಚೆಸ್ಕೆಯವರ ವ್ಯಕ್ತಿಚಿತ್ರ ವಿಶಿಷ್ಟ ಸ್ವರೂಪದ ಗದ್ಯವಾಗಿದೆ. ಉದಾಹರಣೆಗೆ ‘ಬಕ್ಕತಲೆ, ಚೂಪಾದ ಮೂಗು, ಭೇದಿಸಿ ನೋಡುವ ಕಣ್ಣು, ಕಿವಿಯೊಳಗಿಂದ ಬೆಳೆದ ಪೊದೆಗೂದಲು, ಕೈಯಲ್ಲೊಂದು ಕೊಡೆ, ಪುಟಪುಟನೆ ನಡೆದು ಬರುತ್ತಿದ್ದ ಪುಟ್ಟ ಆಕೃತಿ’. ಹೀಗೆ ಭಾಷೆಯನ್ನು ಹೇಗೆಂದರೆ ಹಾಗೆ ನಿರಾಯಾಸವಾಗಿ ಬಳಸಿಕೊಳ್ಳುವ ಶಕ್ತಿ ಎಚ್ಚೆಸ್ಕೆಯವರಿಗಿರುವುದನ್ನು ಕಾಣುತ್ತೇವೆ.

ಸಾಹಿತ್ಯಕ ಬರೆಹಗಳಲ್ಲಿಯೂ ಗದ್ಯದ ಎಲ್ಲ ಸಾಧ್ಯತೆಗಳನ್ನೂ ದುಡಿಸಿಕೊಂಡ ಲೇಖಕರು ಕನ್ನಡದಲ್ಲಿ ಅನೇಕರಿದ್ದಾರೆ. ದೇಜಗೌ, ಎ.ಎನ್.ಮೂರ್ತಿರಾವ್, ಹಾ.ಮಾ.ನಾಯಕ, ಜಿ.ಎಸ್.ಶಿವರುದ್ರಪ್ಪ, ಗೋಪಾಲಕೃಷ್ಣ ಅಡಿಗ, ಎಂ.ಜಿ.ಕೃಷ್ಣಮೂರ್ತಿ, ಸುಮತೀಂದ್ರ ನಾಡಿಗ, ಲಂಕೇಶ್, ತೇಜಸ್ವಿ, ಎಂ.ಚಿದಾನಂದಮೂರ್ತಿ, ಎಚ್ಚೆಸ್ಕೆ ಮೊದಲಾದವರು ಕನ್ನಡ ಗದ್ಯ ಬರೆವಣಿಗೆಯನ್ನು ವಿಸ್ತೃತಗೊಳಿಸಿದರು. ಡಾಕ್ಟೋರೇಟ್ ಪದವಿಗಳಿಗೆ ಬರೆದ ನಿಬಂಧಗಳಿಂದಲೂ ಕನ್ನಡ ಗದ್ಯಕ್ಕೆ ಉತ್ತಮ ಕೊಡುಗೆ ಲಭ್ಯವಾಗಿದೆ. ಸಂಶೋಧನ ಗ್ರಂಥಗಳಲ್ಲಿಯೂ ಕೇವಲ ಶಾಸ್ತ್ರೀಯ ಪರಿಭಾಷೆಯನ್ನು ಮೀರಿದ ಗುಣಗಳನ್ನು ನಾವು ಕಾಣಬಹುದು. ಹಾಸ್ಯ ಬರೆಹಗಳು ಕನ್ನಡ ಗದ್ಯಕ್ಕೆ ಮೊನಚು ತಂದಿರುವುದು ಸ್ವಯಂವೇದ್ಯ ವಿಚಾರವೇ ಸರಿ. ರಾ.ಶಿ., ಪಾ.ವೆಂ., ಬೀಚಿ, ಅ.ರಾ.ಮಿತ್ರ, ಅ.ರಾ.ಸೇ., ಎಚ್.ಎಲ್.ಕೇಶವಮೂರ್ತಿ, ಮನೋಹರ ಚಂದ್ರನ್, ಭುವನೇಶ್ವರಿ ಹೆಗಡೆ, ಬಿ.ಚಂದ್ರೇಗೌಡ ಮುಂತಾದವರು ಗದ್ಯವನ್ನು ಬಳಸಿ ಬೆಳೆಸಿದ್ದಾರೆ. ವೈಎನ್ಕೆಯವರ ‘ವಂಡರ್ ಕಣ್ಣು’ ಅಂಕಣ ಒಂದು ವಿಶಿಷ್ಯ ಬಗೆಯ ಬರೆವಣಿಗೆ. ಅದು ವಿದ್ವತ್ಪೂರ್ಣವೂ ಹೌದು ಅತ್ಯಂತ ಸರಸವೂ ಸರಳವೂ ಹೌದು. ಇಂಥ ಸಮ್ಮಿಳನ ಬಹಳ ಅಪರೂಪ ಎನ್ನಬಹುದು. ಪುಂಡಲೀಕ ಶೇಟ್ ಬರೆಯುತ್ತಿದ್ದ ಹುಬ್ಬಳ್ಳಿಯಾಂವ ಶೀರ್ಷಿಕೆಯ ಹಾಸ್ಯ ಬರೆಹದ ಗದ್ಯ ಬಹಳ ಸೊಗಸಾದುದು. ಬಯಲು ಸೀಮೆಯ ಕಟ್ಟೆಪುರಾಣ ಶೀರ್ಷಿಕೆಯಲ್ಲಿ ಬಂದ ಬಿ.ಚಂದ್ರೇಗೌಡರ ಗದ್ಯವಂತೂ ಮಂಡ್ಯ ಹಾಸನ ಗಡಿಭಾಗದ ಆಡುಭಾಷೆಯ ಪ್ರತಿರೂಪವಾಗಿದೆ. “ಅಂಗಲ್ಲ ಕಣ ಮಾವ, ನಮಿಗುವೆ ಯಾವುದು ಸರಿ, ಯಾವುದು ತಪ್ಪು ಅಂತ ತಿಳಿವಳಿಕೆ ಬಂದದೆ, ಏನಾದ್ರೂ ಇದ್ದುದ್ದ ಬರಿಯೋ ಅಂತ ಸಗತಿನೂ ಬಂದದೆ, ಓದೋ ಸಗತಿನೂ ಅದೆ ..... ಅದರೊಳಿಕೋಗಿ ಬ್ಯಾಡಬ್ಯಾಡ ಅಂದ್ರೂವೆ ಕೋಟಿಕ್ಕಿ ಅದ್ಯೆಂತದ್ನೋ ಹಗ್ಗಬಿಗಿದಂಗೆ ಕತ್ತಿಗೆ ಬಿಗುದು ತಗಸಿದ್ರು ಆ ಪೊಟಾ ನೋಡಿದೋರ್ಯೆಲ್ಲ ನೀನು ರಾಜಕುಮಾರಗೆ ಏನು ಕಮ್ಮಿ ಅಂದ್ರು .............” ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಚಹಾದ ಜೋಡಿ ಚೂಡಾದಾಂಗ ಎಂಬ ಅಂಕಣ ಬರೆಹದ ಗದ್ಯವೂ ಅತ್ಯಂತ ಆಪ್ತವಾದದ್ದು.

ಆತ್ಮಚರಿತ್ರೆ, ಜೀವನ ಚರಿತ್ರೆಗಳ ರಚನೆಯಲ್ಲಿಯೂ ಭಾಷೆಯ ಅಂಶವನ್ನು ಪ್ರತ್ಯೇಕವಾಗಿ ಗಮನಿಸುವುದರಿಂದ ಆ ಗ್ರಂಥಗಳ ವಿಮರ್ಶೆಗೂ ಬೆಲೆ ಬರುತ್ತದೆ. ವಸ್ತು ಮತ್ತು ವಾಹಕಗಳೆರಡೂ ಇಲ್ಲಿ ಮುಖ್ಯ. ಎ.ಎನ್.ಮೂರ್ತಿರಾಯರ ಸಂಜೆಗಣ್ಣಿನ ಹಿನ್ನೋಟ, ಎಚ್.ನರಸಿಂಹಯ್ಯನವರ ತೆರೆದ ಮನ, ಕೋ.ಚನ್ನಬಸಪ್ಪನವರ ನ್ಯಾಯಾದೀಶನ ನೆನಪುಗಳು, ತರಳಬಾಳು ಶಿವಾಚಾರ್ಯರ ಆತ್ಮನಿವೇದನ, ಕೆ.ಆರ್.ರಾಮಚಂದ್ರನ್ ಅವರ ತಾಪೇದಾರಿ, ಬಿ.ಡಿ.ಜತ್ತಿಯವರ ನನಗೆ ನಾನೇ ಮಾದರಿ, ಸಿದ್ಧಲಿಂಗಯ್ಯನವರ ಊರುಕೇರಿ ಮುಂತಾದುವನ್ನು ನೋಡಿದಾಗ ಕನ್ನಡ ಗದ್ಯ ಎಷ್ಟು ಸುಲಲಿತವಾದುದು ಎಂಬುದು ತಿಳಿಯುತ್ತದೆ. ಇಡೀ ಭಾರತದಲ್ಲಿಯೇ ಕನ್ನಡ ಅತ್ಯಂತ ಸಮೃದ್ಧವಾದ ಭಾಷೆ ಎಂಬ ಮಾತು ಗದ್ಯ ಬರೆಹಕ್ಕೂ ಋಣಿಯಾಗಿದೆ ಎಂದರೆ ಅದು ಅತಿಶಯೋಕ್ತಿಯ ಮಾತಲ್ಲ. ಗದ್ಯಂ ಕವೀನಾಂ ನಿಕಷಂ ವದಂತಿ ಎಂಬ ಮಾತು ತ್ರಿಕಾಲಬಾದಿತ ಸತ್ಯವೆಂದು ತೋರುತ್ತದೆ. ಇತ್ತೀಚಿನ ಕನ್ನಡ ಗದ್ಯದ ಕೆಲವು ಮಾದರಿಗಳನ್ನು ಇಲ್ಲಿ ನೋಡಬಹುದು.

‘ಅಕ್ಷರ ರಹಿತ ಆತ್ಮಗಳ ಮೇಲೆ ಅಕ್ಷರಗಳು ಹರಿದಾಡಿ ಹೊರಟಾಗಿನ ಅದೇ ಅಲಂಕಾರರಹಿತ ಶಬ್ದಗಳ ಗ್ರಾಮ್ಯತೆ, ಒಂದು ವಿನೂತನ ಅಲಂಕಾರವನ್ನೂ ಅನುಭಾವ ಸೌಂದರ್ಯವನ್ನು ಕನ್ನಡ ಅಕ್ಷರಗಳು ಪಡೆಯತೊಡಗಿದವೆಂಬುದನ್ನು ಮರೆಯುವಂತಿಲ್ಲ’ ‘ಮಾನವನು ಸ್ವತಂತ್ರನಾಗಿಯೇ ಹುಟ್ಟಿಲ್ಲ. ಸ್ವತಂತ್ರನಾಗಲು ಹುಟ್ಟಿದವನು. ಸ್ವಾತಂತ್ರ್ಯದ ಪ್ರೇರಣೆಯು ಮಾನವ ಜೀವನದ ಮರ್ಮ’. ‘ಮತಿದಾಸ್ಯ, ಮತದಾಸ್ಯ ಪುರ್ವದ ಲಕ್ಷಣ ಬುದ್ಧಿ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ ಪಶ್ಚಿಮದ ಲಕ್ಷಣ’ ‘ಬಡತನ, ಅಜ್ಞಾನ, ದಟ್ಟವಿಷಾದ ಹಾಗೂ ಬದುಕಿನ ವಿವಿಧ ಲಯಗಳು ಇಲ್ಲಿ ಜೀವಂತವಾಗಿವೆ.’

‘ಕಂಡದ್ದನ್ನು ಮೈತುಂಬ ತುಂಬಿಕೊಂಡು ನಡುಗಿದರು. ಮತ್ತೆ ಕಣ್ಣು ತೆರೆದು ನೇರವಾಗಿ ನಿರ್ಭಯವಾಗಿ ನೋಡಿದರು. ಕೆಂಡದಂತೆ ಉರಿಯುತ್ತ ಅಬ್ಬರಿಯ ತಳದಲ್ಲಿ ಮಲಗಿದ್ದ ಹುಲಿಯೂ ಅವರನ್ನು ನೋಡಿತು. ಅವರ ಹಾಗೆ ಕಣ್ಣಗಲಿಸಿ, ನಿರ್ಭಯವಾಗಿ, ಯಾವ ಎಗ್ಗೂ ಇಲ್ಲದೆ, ನಿಶ್ಚಯ’ ‘ಕೂದಲು ಕತ್ತರಿಸಿದ ಮಂಡೆಯಂತಿದ್ದ ತೋಟವನ್ನು ನೋಡಿದವರ ಸುತ್ತ ಸೊನ್ನೆಗಳು ಮಿಡತೆಗಳಂತೆ ಮುತ್ತಿದುವು. ಅಷ್ಟೆತ್ತರ ಹಸಿರು ಹೊತ್ತು ಬಳುಕುತ್ತಿದ್ದ ಅಡಿಕೆ ಮರಗಳು ಹೀಗೆ ರುಬ್ಬಾರುಬ್ಬಿ ಬೇರು ಸಹಿತ ಕಿತ್ತು ಯಾಕೆ ಬಿದ್ದಿವೆ?’

‘ಪ್ರಾಣದ ವಿಸರ್ಜನೆಗೆ ಧ್ಯಾನಿಸುತ್ತಿರುವರೆಂಬಂತೆ ಕುಕ್ಕೂರು ಕೂತ ....... ಅವರು ಮಾತಾಡಲಿಲ್ಲ. ಮೌನಿಯ ವಸ್ತ್ರಾವೃತ ಆಕೃತಿ ಕಣ್ಣಿನಲ್ಲಿ ಊರಿದಂತಾಗಿ .........ರ ಸಲೀಸು ಬಾಯಿ ಸ್ತಬ್ಧವಾಯಿತು’

‘ಅವನು ವ್ಯಾವಹಾರಿಕವಾದ ಘಟನೆಗಳಿಂದ ಕಾಯುವ, ಹೊಂದಿಕೊಳ್ಳುವ ಮೂಲಗಳಿಂದಲೇ ಅಸಹಕಾರದಿಂದ, ಅವಮಾನದಿಂದ, ವಿಶಿಷ್ಟ ಸಂಸ್ಕಾರಗಳನ್ನು ಪಡೆಯುತ್ತಾ ಬಂದಂತೆ ತನ್ನ ಪರಿಗಳನ್ನು ಕೀಳುತ್ತ ಕೀಳುತ್ತ ಜೈವಿಕ ಪ್ರಪಂಚದಿಂದ ದೂರವಾಗುತ್ತಾ ಒಂಟಿಯಾಗುತ್ತಾನೆ’ ‘ಒಂದು ಗುಂಪು ಅಥವಾ ಸಮಾಜ ಪರಂಪರಾಗತ ಮೌಲ್ಯದ ಒತ್ತಡ ಮಾತ್ರದಿಂದಲೇ ಅಲ್ಲದೆ ತಮ್ಮದೇ ಆದ ದೌರ್ಬಲ್ಯ, ಅಚಾತುರ್ಯ, ಅತಿಭಾವುಕತೆ, ಕಾರ್ಪಣ್ಯ, ಹಾಯಲಾರದ, ಕಟ್ಟಲಾರದ ಬದುಕಿನ ಪೇಚು ಇತ್ಯಾದಿಗಳಲ್ಲಿ ಯಾವುದೋ ಒಂದು ಅಥವಾ ಎಲ್ಲವ ಕಾರಣವಾಗಿ ಬದುಕಿನ ಅಸ್ವಸ್ಥತೆ, ದುಃಖ, ಯಾತನೆಗಳನ್ನು ........ ಹೆಚ್ಚಾಗಿ ಗಮನಿಸಿದಂತೆನಿಸುವುದಿಲ್ಲ’

‘ಆ ವಿಚಾರಗಳ ನೇಪಥ್ಯದಲ್ಲಿ ಅದರ ಒಡೆಯನ, ಸಜೀವ ಎದೆಬಡಿತವನ್ನು ಅಡಿಗಡಿಗೂ ಆಲಿಸಿ ಭಾವ ಅಲೋಚನೆಗಳ ಮಾತಂತಿರಲಿ, ಅವುಗಳನ್ನು ಶಬ್ದಗಳಲ್ಲಿ ಹರಳಿಸುವ ಮಾತುಗಾರಿಕೆಯ ಸಂವೇದನಾಶೀಲ ಗತಿ ಸೂಕ್ಷ್ಮಗಳ ಮೇಲೆ ನಯವಂತ ಗೇಯಾತ್ಮಕ ಲಯ ಸೌಕುಮಾರ್ಯದ ಮೇಲೆ ..... ಆನಂದಾಶ್ಚರ್ಯಗಳು ಅಷ್ಟಿಷ್ಟಲ್ಲ’.

‘ವಾಸ್ತವತೆಯ ಹೆಸರಿನಲ್ಲಿ ತಮ್ಮ ಲೋಕಾನುಭವವನ್ನು ಹಾಗೆ ಹಾಗೇ ಕಚ್ಚಾ ಸ್ಥಿತಿಯಲ್ಲಿ ತೋಡಿಕೊಳ್ಳುತ್ತಿರುವ ಲೇಖಕರ ಅಪ್ರಬುದ್ಧ ಹುಂಬ ಹುಮ್ಮಸ್ಸಿಗೆ ಕಡಿವಾಣ ಜಡಿಯಬೇಕಾದದ್ದು ತುಂಬಾ ಸಮಂಜಸ’

ಮೇಲಿನ ಉದ್ಧೃತ ಭಾಗಗಳಲ್ಲಿ ಕೆಲವು ಉದ್ಧೃತಗಳು ಲಕ್ಷಣ ಸಮನ್ವಿತವಾಗಿರುವುದನ್ನೂ ಗಮನಿಸಬಹುದು. ಬಂಡಾಯ, ದಲಿತ, ಸಮನ್ವಯ ಎಂಬ ಹೆಸರಿನಲ್ಲಿ ಸಾಹಿತ್ಯ ಪ್ರಯಾಣ ಮುಂದುವರಿಯುವ ಮುನ್ನ ಕನ್ನಡ ಗದ್ಯದ ಒಂದು ಮುಖ ಹೇಗಿತ್ತು ಎಂಬುದನ್ನು ಈ ಮುಂದಿನ ಒಂದು ಉದ್ಧೃತ ಭಾಗದ ಸಹಾಯದಿಂದ ಕಲ್ಪಿಸಿಕೊಳ್ಳಬಹುದು.

‘ಇದು ತುಂಬಾ ಅಥೆಂಟಿಕ್ ಆಗಿರುವಂತೆ ಕಂಡರೂ ಆಬ್ವಿಯಸ್ ಎನ್ನಿಸುವುದಿಲ್ಲ. ಪಾತ್ರಗಳ ಐಡೆಂಟಿಟಿ ಬಗ್ಗೆ ಅನುಮಾನವಿರುವುದಾದರೂ ಅವುಗಳ ಸ್ಟೆಬಿಲಿಟಿಗೆ ಕಾರಣವನ್ನು ಇದರಲ್ಲೇ ಹುಡುಕಬಾರದು’

ಕನ್ನಡ ಗದ್ಯ ಇಂದು ಬಹಳ ಶಕ್ತಿಯುತವಾಗಿ, ಭಾವನೆ ಆಲೋಚನೆಗಳ ಪ್ರಬಲ ಮಾಧ್ಯಮವಾಗಿ ಅಗತ್ಯಕ್ಕೆ ತಕ್ಕ ರೂಪವನ್ನು ಪಡೆಯುವ ಅಂತಃಸತ್ತ್ವವನ್ನು ಮೈಗೂಡಿಸಿಕೊಳ್ಳುತ್ತ ಸಾಗಿದೆ ಎಂದು ಹೇಳಬಹುದು. (ಎಂ.ಆರ್.)

ಉಲ್ಲೇಖಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
  • ಕನ್ನಡದಲ್ಲಿ ಗದ್ಯ ಸಾಹಿತ್ಯ:[೧]