ಕದಿರುಗಿಣಿ
ಕದಿರುಗಿಣಿ : ನೆಕ್ಟರಿನೈಯಿಡೀ ಕುಟುಂಬಕ್ಕೆ ಸೇರಿದ ಹಕ್ಕಿ (ಸನ್ಬರ್ಡ್). ಈ ಕುಟುಂಬದಲ್ಲಿ ಸು. 104 ಪ್ರಭೇದಗಳಿದ್ದು ಎಲ್ಲಕ್ಕೂ ಸನ್ಬರ್ಡ್ ಎಂಬ ಹೆಸರೇ ಅನ್ವಯಿಸುತ್ತದೆ. ಇವೆಲ್ಲ ಹೆಚ್ಚಾಗಿ ಉಷ್ಣವಲಯಗಳಲ್ಲಿ ವಾಸಿಸುತ್ತವೆ. ಆಫ್ರಿಕಾದಲ್ಲಿ ಹೆಚ್ಚು. ದಕ್ಷಿಣ ಏಷ್ಯ ಮತ್ತು ಹತ್ತಿರದ ದ್ವೀಪಗಳಲ್ಲಿಯೂ ಹಲವು ಪ್ರಭೇದಗಳು ದೊರೆಯುತ್ತವೆ. ಆಸ್ಟ್ರೇಲಿಯ ಖಂಡದಲ್ಲೂ ಒಂದು ಪ್ರಭೇದವಿದೆ. ಇವು ಕಾಡುಗಳಲ್ಲಿ ಅಥವಾ ತೋಟಗಳಲ್ಲಿ ಆಹಾರ ಹುಡುಕುತ್ತ ಕಾಲಕಳೆಯುತ್ತವೆ. ಇವುಗಳಲ್ಲಿ ಗಂಡುಗಳಿಗೆ ಮಿರುಗುವ ವರ್ಣರಂಜಿತ ಗರಿಗಳಿವೆ. ಹಳದಿ, ಕೆಂಪು ಹಾಗೂ ಕಪ್ಪು ಚುಕ್ಕಿಗಳಿರುವ ಹೊಳೆಯುವ ನೀಲಿ, ಕೆನ್ನೀಲಿ, ಹಸಿರು ಬಣ್ಣಗಳು ಬಹಳ ಸಾಮಾನ್ಯ. ಹೆಣ್ಣುಗಳ ಬಣ್ಣ ಮಾಸಲು, ಹೂವುಗಳ ಬಳಿ ಕುಳಿತು, ಹೂವಿನೊಳಗಿನ ಮಧುವಿಗಾಗಿ ಮತ್ತು ಅಲ್ಲಿಗೆ ಬರುವ ಚಿಕ್ಕಪುಟ್ಟ ಕೀಟಗಳಿಗಾಗಿ ಇವು ಹುಡುಕುತ್ತಿರುವುದು ಬಹಳ ಸಾಮಾನ್ಯ ದೃಶ್ಯ. ಇದಕ್ಕಾಗಿ ಇವಕ್ಕೆ ಬಾಗಿದ ಕೊಕ್ಕು, ಉದ್ದಕ್ಕೆ ಚಾಚಬಹುದಾದ, ಹೆಚ್ಚು ಕಡಿಮೆ ಕೊಳವೆಯಾಕರದ ನಾಲಗೆಯಿದೆ. ಮರದ ರೆಂಬೆಗಳಲ್ಲಿ ಅಂಡಾಕಾರದ ಹುಲ್ಲಿನ ಗೂಡುಗಳನ್ನಿವು ಕಟ್ಟುತ್ತವೆ. ಗೂಡಿಗೆ ತುದಿಯ ಪಕ್ಕದಲ್ಲಿ ಬಾಗಿಲೊಂದಿದ್ದು ಅದರ ಮೇಲೆ ಮುಚ್ಚಳವಿರುತ್ತದೆ. ಹೆಣ್ಣು ಚುಕ್ಕಿಗಳಿರುವ ಎರಡು ಮೊಟ್ಟೆಗಳನ್ನಿಡುತ್ತದೆ. ಮೈಸೂರಿನಲ್ಲಿ ಕಾಣಬರುವ ಕದಿರು ಗಿಣಿಗಳಲ್ಲಿ ಕೆನ್ನೀಲಿ ಕದಿರುಗಿಣಿ ಮತ್ತು ಕೆನ್ನೀಲಿ ಕೆದರು ಕದಿರುಗಿಣಿಗಳು ಮುಖ್ಯವಾದವು.