ಕಡಲ ಇಲಿ
ವಲಯವಂತ ವಂಶದ ಪಾಲಿಕೀಟ ಗಣಕ್ಕೆ ಸೇರಿದ ಅಫ್ರೊಡೈಟ್ ಜಾತಿಯ ಕಡಲುವಾಸಿ (ಸೀಮೌಸ್). ಉತ್ತರ ಅಮೆರಿಕ, ಆಸ್ಟ್ರೇಲಿಯ ಮತ್ತು ಐರೋಪ್ಯ ರಾಷ್ಟ್ರಗಳ ಕರಾವಳಿಯ ನಯವಾದ ಮಣ್ಣಿನ ಸಮುದ್ರ ತಳದಲ್ಲಿ ವಾಸಿಸುತ್ತದೆ. ಸಮುದ್ರತಳದಲ್ಲಿ ತೆವಳುವಾಗ ಇಲಿಯನ್ನು ಹೋಲುವುದರಿಂದ ಇದಕ್ಕೆ ಈ ಹೆಸರು.
ಕಡಲ ಇಲಿಯ ಆಕಾರ
[ಬದಲಾಯಿಸಿ]೪೦ ಕ್ಕೂ ಮಿಗಿಲಾದ ಖಂಡಗಳುಳ್ಳ ಈ ಮಂದಗಾಮಿಯ ಅಂಡಾಕಾರದ ದೇಹ ೬"-೭" ಉದ್ದ ೩"-೪" ಅಗಲ. ಪ್ರತಿ ಖಂಡದ ಇಕ್ಕಡೆಯಲ್ಲೂ ದ್ವಿಶಾಖಾರಚನೆಯುಳ್ಳ (ಬೈರೇಮಸ್) ಎರಡು ಪಾಶರ್ವ್‌ಪಾದ (ಪ್ಯಾರಪೋಡಿಯ)ಗಳಿವೆ. ಈ ಪಾಶರ್ವ್‌ಪಾದಗಳ ಬೆನ್ನಿನ ಸಿರ್ರಸ್ಸುಗಳಿಂದಾದ ೧೫ ಜೊತೆ ಫಲಕಗಳು ಹೊರಮೈಯನ್ನು ಮುಚ್ಚಿರುತ್ತವೆ. ಆದರೆ ಅವುಗಳ ಮೇಲೆ ನಿಬಿಡವಾಗಿ ಹರಡಿರುವ ವರ್ಣರಂಜಿತ ಬಿರುಗೂದಲುಗಳ ಹೊದಿಕೆಯಿರುವುದರಿಂದ ಫಲಕಗಳು ಕಾಣುವುದಿಲ್ಲ. ಈ ರಕ್ಷಾಕವಚದ ಚಲನೆಯಿಂದ ಕಡಲ ಇಲಿಯ ಬಿಲದಲ್ಲಿ ಜಲಾಭಿಸರಣೆಯಾಗುತ್ತದೆ. ಸ್ನಾಯುಪುಷ್ಟಿತ ಸ್ಥೂಲ ಗಂಟಲಲ್ಲದೆ ೧೮ ಜೊತೆ ಕರುಳು ಚೀಲ ಗಳಿರುವ ಜೀರ್ಣನಾಳ ಎಲ್ಲ ಜಾತಿಯಕಡಲು ಇಲಿ ಗಳಲ್ಲೂ ಕಂಡುಬರುತ್ತವೆ. ಇದರ ಜೀರ್ಣನಾಳದ ಮುಂತುದಿಯನ್ನು ಹಿಂದಿನವರು ಆಹಾರವಾಗಿ ಉಪಯೋಗಿಸುತ್ತಿದ್ದರೆಂದು ಪ್ರತೀತಿ.
ಕಡಲ ಇಲಿಯ ವಾಸಸ್ಥಳ
[ಬದಲಾಯಿಸಿ]ಭಾರತದ ಸಮುದ್ರ ದಡಗಳಲ್ಲಿ ಇದರ ಕೆಲವು ಪ್ರಭೇದಗಳು ಕಂಡುಬರುತ್ತವೆ. ಅವುಗಳಲ್ಲಿ ತಮಿಳುನಾಡು ಮತ್ತು ಸಾಂತಾಪಲ್ಲಿಯಲ್ಲಿ ದೊರಕುವ ಅಫ್ರೊಡೈಟ್ ಅಕ್ಯುಲಿಯೇಟ, ಲಕಡೀವ್ ಮತ್ತು ಕ್ಯಾಮೊರಿನ್ ದ್ವೀಪಗಳಲ್ಲಿ ವಾಸಿಸುವ ಅ.ಆಸ್ಟ್ರಾಲಿಸ್ ಮತ್ತು ಅಂಡಮಾನ್, ಒರಿಸ್ಸ, ಕೇರಳ ಮತ್ತು ಬಂಗಾಲ ಕೊಲ್ಲಿಗಳಲ್ಲಿರುವ ಅ.ಟಾಲ್ಪಾಗಳು ಮುಖ್ಯವಾದುವು.