ಕಂಬದಹಳ್ಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕಂಬದಹಳ್ಳಿ
ಕಂಬದಹಳ್ಳಿ ನಗರದ ಪಕ್ಷಿನೋಟ
ಪಂಚಕೂಟ ಬಸದಿ, ಕಂಬದಹಳ್ಳಿ
India-locator-map-blank.svg
Red pog.svg
ಕಂಬದಹಳ್ಳಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಮಂಡ್ಯ
ನಿರ್ದೇಶಾಂಕಗಳು 12.863° N 76.671° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 571 416
 - +08158
 - KA-11

ಕಂಬದಹಳ್ಳಿಯು ಕರ್ನಾಟಕಮಂಡ್ಯ ಜಿಲ್ಲೆಯಲ್ಲಿರುವ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಇಲ್ಲಿ ಪ್ರಾಚೀನ ಜಿನಾಲಯವಿದ್ದು, ಜೈನ ಮಠವೂ ಸಹ ಇದೆ. ಈಗಿನ ಪೀಠಾಧಿಪತಿಗಳು ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು. ಕಂಬದಹಳ್ಳಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದೆ.

ಕಂಬದಹಳ್ಳಿಯನ್ನು ರಾಷ್ಟ್ರೀಯ ಹೆದ್ದಾರಿ ೪೮ (ಬೆಂಗಳೂರು-ಮಂಗಳೂರು) ರಲ್ಲಿ ಕದಬಹಳ್ಳಿಯ ಮೂಲಕ ತಲುಪಬಹುದು. ಜೈನರ ಪ್ರಮುಖ ಯಾತ್ರಾಸ್ಥಳ ಶ್ರವಣಬೆಳಗೊಳದಿಂದ ಕಂಬದಹಳ್ಳಿಯು ೧೮ ಕಿಮೀ ದೂರದಲ್ಲಿದೆ. ಕಂಬದಹಳ್ಳಿ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ಒಂದು ಪುಣ್ಯಕ್ಷೇತ್ರ. ಇಲ್ಲಿನ ಪಂಚಕೂಟಬಸ್ತಿಯ ಉತ್ತರದಲ್ಲಿರುವ 15.24 ಮೀ ಎತ್ತರದ ಕರಿಕಲ್ಲಿನ ಬ್ರಹ್ಮದೇವರ ಕಂಬವೇ ಊರಿನ ಹೆಸರಿಗೆ ಕಾರಣ. ಈ ಕಂಬದ ತಳಭಾಗದ ಎಂಟು ಮುಖಗಳ ಮೇಲೂ ಅಷ್ಟದಿಕ್ಪಾಲಕರ ಶಿಲ್ಪಗಳಿದ್ದು ಈ ಕಂಬದ ಮೇಲೆ ಪುರ್ವಾಭಿಮುಖವಾದ ಬ್ರಹ್ಮದೇವರ ಶಿಲ್ಪವಿದೆ. ಸಮೀಪದಲ್ಲಿ ದ್ರಾವಿಡ ಶೈಲಿಯಲ್ಲಿ ಕಲ್ಲಿನಿಂದ ಕಟ್ಟಲಾದ ಏಳು ದೇವಾಲಯಗಳಿವೆ. ಪ್ರ.ಶ. 900ರ ಸುಮಾರಿನಲ್ಲಿ ಕಟ್ಟಲ್ಪಟ್ಟ ಪಂಚಕೂಟಬಸ್ತಿಯಲ್ಲಿ ನಡುವೆ ಇರುವುದೇ ತ್ರಿಕೂಟಾಚಲ ಆದಿನಾಥಬಸ್ತಿ. ಇದರಲ್ಲಿ ಪಲ್ಲವಶಿಲ್ಪದ ಪ್ರಭಾವ ಕಂಡುಬರುತ್ತದೆ. ದೇವಾಲಯದ ಕೆಳಭಾಗ ಅಷ್ಟಕೋಣಾಕಾರವಾಗಿದ್ದು ಗೋಡೆಯ ಮೇಲುಗಡೆ ಯಕ್ಷ, ಜಿನರ ಲತಾಪಟ್ಟಿಕೆಗಳಿವೆ. ಗೂಡುಗಳಿಗೆ ಪುಷ್ಪ ಅಥವಾ ಮಕರತೋರಣಗಳಿವೆ. ಇವುಗಳಲ್ಲಿ ಗಂಧರ್ವ, ಯಾಳಿ, ಮುಕ್ಕೊಡೆ, ಮಕರಗಳ ಅಲಂಕರಣಗಳಿವೆ. ಮೇಲ್ಚಾವಣಿಗಳು ಬಾಗಿದ್ದು ಲಾಳದ ಆಕಾರದ ಕಮಾನುಗಳಿಂದ ಅಲಂಕೃತವಾಗಿವೆ. ಕೈಪಿಡಿ ಗೋಡೆಯ ಮೇಲೆ ಸಿಂಹಮುಖದ ಮೀನು, ನೀರ್ಗುದುರೆಗಳಿವೆ. ಬಲಭಾಗದ ಗರ್ಭಗುಡಿಯಲ್ಲಿ ನೇಮಿನಾಥ ಮತ್ತು ಎಡಭಾಗದ ಗುಡಿಯಲ್ಲಿ ಶಾಂತಿನಾಥ ವಿಗ್ರಹಗಳು ಕುಳಿತಿರುವಂತೆ ನಿರ್ಮಿತವಾಗಿವೆ. ಈ ದೇವಾಲಯದ ಮೂರು ಶಿಖರಗಳು ಕಣಶಿಲೆಯಿಂದ ನಿರ್ಮಿತವಾಗಿವೆ. ಈ ಮೂರು ಶಿಖರಗಳೂ ಮೂರು ವಿಧವಾಗಿವೆ. ಪುರ್ವದ ಶಿಖರ ದುಂಡಾಗಿಯೂ ಉತ್ತರದ ಶಿಖರ ಚತುರಸ್ರವಾಗಿಯೂ ಪಶ್ಚಿಮದ ಶಿಖರ ಅಷ್ಟಾಸ್ರವಾಗಿಯೂ ಇವೆ. ಇವುಗಳ ಮೇಲೆ ಲತಾಪಟ್ಟಿಕೆಯೂ ಪೀಠದ ಮೇಲಿರುವ ಲಾಳದ ಆಕಾರದ ಕಮಾನಗಳೂ ಇವೆ. ಇವು ತಾಜ್ಮಹಲಿನ ಬುದ್ದುದಾಕಾರದ ಶಿಖರಗಳನ್ನು ನೆನಪಿಗೆ ತರುತ್ತವೆ. ಗ್ರೀವಾಕಾರದ ಅಂತಸ್ತುಗಳುಳ್ಳ ಇಲ್ಲಿನ ಗೋಪುರಗಳು ಸುಂದರವಾಗಿಯೂ ಎತ್ತರವಾಗಿಯೂ ಇದ್ದು ಸ್ತಂಭಿಕೆಗಳಿಂದ ಅಲಂಕೃತವಾಗಿವೆ. ಶಿಖರದ ಮೇಲೆ ಮಗುಚಿಹಾಕಿದ ಪದ್ಮ ಆಕರ್ಷಣೀಯವಾಗಿದೆ. ಆದರೆ ಈ ಶಿಖರಕ್ಕೆ ಕಳಶಗಳಿಲ್ಲ. ಪುರ್ವದಿಕ್ಕಿನ ಗೋಪುರದಲ್ಲಿರುವ ಅಂಡಾಕಾರದ ಗುಮ್ಮಟ ಮಹಾಬಲಿಪುರದ ಧರ್ಮರಾಜ ರಥ ಅಥವಾ ಎಲ್ಲೋರದ ಕೈಲಾಸ ದೇವಾಲಯದ ಗುಮ್ಮಟಗಳ ನೆನಪನ್ನುಂಟುಮಾಡುತ್ತದೆ. ಬಸ್ತಿಯಲ್ಲಿರುವ ವಾಹನಸ್ಥ ದಿಕ್ಪಾಲಕರಾದಿಯಾದ ಹಲವು ಪ್ರತಿಮೆಗಳು ಗಮನಾರ್ಹವಾಗಿವೆ.

ಈ ತ್ರಿಕೂಟಾಚಲದ ನವರಂಗದಲ್ಲಿ ಹೆಚ್ಚು ಕೆತ್ತನೆ ಕೆಲಸವಿಲ್ಲ. ಸ್ತಂಭಗಳು ಸಾಮಾನ್ಯವಾಗಿವೆ. ಮೇಲ್ಚಾವಣಿಯ ಕಲ್ಲುಗಳ ಮಧ್ಯದಿಂದ ಹರಡಿಕೊಂಡಿವೆ. ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರೂ ಬಲಗೈಯಲ್ಲಿ ಶಂಖವನ್ನೂ ಎಡಗೈಯಲ್ಲಿ ದಂಡವನ್ನೂ ಹಿಡಿದು ಐದು ಹೆಡೆಯ ಹಾವಿನ ಕೆಳಗಿರುವ ಧರಣೇಂದ್ರ, ಯಕ್ಷ, ಚಾಮರಧಾರಿಣಿಯರೂ ಇರುವುದು ಆಕರ್ಷಣೀಯ ದೃಶ್ಯವಾಗಿದೆ. ಬಳಿಯಲ್ಲಿ ಎರಡು ಮಂದಿರಗಳಿದ್ದು ಒಂದರಲ್ಲಿ ನಿಂತಿರುವ ಶಾಂತಿನಾಥನ ಮೂರ್ತಿಯಿದೆ. ಇಲ್ಲಿನ ಒಂದು ಶಾಂತಿನಾಥ ಬಸ್ತಿ 20 ಚದರಡಿಯ ವಿಸ್ತೀರ್ಣದ್ದಾಗಿದ್ದು, ಇದರ ಗರ್ಭಗೃಹದ ಮೇಲ್ಚಾವಣಿಯಲ್ಲಿ ಪದ್ಮಗಳೂ ನಾಲ್ಕು ಅಷ್ಟಕೋಣ ಸ್ತಂಭಗಳೂ ಇವೆ. ಅಷ್ಟಕೋಣದ ಪೀಠದಲ್ಲಿ ದಿಕ್ಪಾಲಕರಿರುವುದು ಕಾಣಿಸುತ್ತದೆ. ಪೀಠದ ಮೇಲೆ ಸು. 3.05 ಮೀ ಎತ್ತರದ ಶಾಂತಿನಾಥನ ಮೂರ್ತಿ ಕಂಗೊಳಿಸುತ್ತದೆ. ಇದಕ್ಕೆ ಆಮೇಲೆ ಸೇರಿಸಿದ ಒಂಬತ್ತಂಕಣಗಳ ನವರಂಗದಲ್ಲಿ ನಾಲ್ಕು ಹೊಯ್ಸಳ ರೀತಿಯ ಬಳಪದ ಕಲ್ಲಿನ ಕಂಬಗಳಿವೆ. ನವರಂಗದ ಆಗ್ನೇಯ ಮೂಲೆಯಲ್ಲಿ ಪದ್ಮ ಪರಶು ಅಕ್ಷಮಾಲಾ ಫಲಗಳನ್ನು ಹಿಡಿದ ಯಕ್ಷವಿಗ್ರಹ ಮಗುಚಿ ಹಾಕಿದ ವೃಷಭಪೀಠದ ಹತ್ತಿರ ಇದೆ. ಮತ್ತೊಂದರಲ್ಲಿ ಯಾವ ಪ್ರತಿಮೆಯೂ ಇಲ್ಲ. ಶಾಂತಿನಾಥ ಮಂದಿರದಲ್ಲಿರುವ ಶಾಸನದಿಂದ ಈ ಮಂದಿರವನ್ನು ಪ್ರ.ಶ.12ನೆಯ ಶತಮಾನದಲ್ಲಿ ಹೊಯ್ಸಳ ವಿಷ್ಣವರ್ಧನನ ದಂಡನಾಯಕ ಗಂಗರಾಜನ ಬೊಪ್ಪನು ದ್ರೋಹಘರಟ್ಟಾಚಾರಿ ಎಂಬ ಶಿಲ್ಪಿಯ ಸಹಾಯದಿಂದ ಕಟ್ಟಿಸಿದನೆಂದು ತಿಳಿದುಬರುತ್ತದೆ. ಇದರ ಹೊರವಲಯದ ಗೋಡೆಗಳ ಮೇಲಿರುವ ಆನೆ, ಕುದುರೆ, ಸಿಂಹ ಮತ್ತು ಯಾಳಿಗಳ ಚಿತ್ರಪಟ್ಟಿಕೆಗಳು ಅಮೋಘ ಕೆತ್ತನೆಗಳಾಗಿದ್ದು ಇತರ ಹೊಯ್ಸಳ ದೇವಾಲಯಗಳಲ್ಲಿರುವ ಕೆತ್ತನೆಗಳನ್ನು ಹೋಲುತ್ತವೆ. ಹಸನ್ಮುಖ ಶಾಂತಿನಾಥ ವಿಗ್ರಹ 3.05 ಮೀ ಗಳೆತ್ತರವಿದ್ದು ಇಲ್ಲಿನ ಬಹು ಸುಂದರ ಶಿಲ್ಪಕೃತಿಗಳಲ್ಲೊಂದಾಗಿದೆ. ಧ್ಯಾನಮಗ್ನ ನೇಮಿನಾಥ ಮತ್ತು ಜಿನಮೂರ್ತಿಗಳೂ ನವರಂಗದಲ್ಲಿರುವ ಯಕ್ಷಿಣಿ ಗೊಂಬೆಯೂ ಉತ್ತಮ ಕೃತಿಗಳು. ಉಬ್ಬು ಎದೆ, ತೆಳುವಾದ ಉದರ, ನೀಳವಾಗಿ ಜೋತಾಡುತ್ತಿರುವ ಕೂದಲು ಮತ್ತು ಅನೇಕ ಆಭರಣಯುಕ್ತವಾದ ಯಕ್ಷಿಣಿಶಿಲ್ಪ ಚೋಳಶೈಲಿಯ ಅತ್ಯುತ್ತಮ ಶಿಲ್ಪಗಳನ್ನು ಹೋಲುತ್ತದೆ. ನವರಂಗದ ಚಾವಣಿಯಲ್ಲಿನ ಇತರ ಕೆತ್ತನೆಗಳೂ ಉತ್ತಮ ಕಲಾಕೃತಿಗಳಾಗಿವೆ.

ಈ ಬಸ್ತಿಯ ಗರ್ಭಗುಡಿಯ ತೊಲೆಯ ಮೇಲೆ ವೀರರಾಜೇಂದ್ರನ ಶಾಸನವಿದೆ. ಆಗ್ನೇಯ ಸ್ತಂಭದ ಮೇಲೆ 14ನೆಯ ಶತಮಾನದ ಶಾಸನವಿದೆ. ಮೊದಲಿನ ಸುಕನಾಸಿದ್ವಾರದ ಹತ್ತಿರ ಅಷ್ಟಕೋಣಪೀಠ, ಎರಡು ದ್ವಾರಪಾಲ ವಿಗ್ರಹಗಳೂ ಇವೆ.

ಶಾಂತಿನಾಥ ಬಸ್ತಿಯ ಪುರ್ವದಲ್ಲಿ ಮತ್ತೊಂದು ಬಸ್ತಿಯಿದೆ. ಇದರ ನವರಂಗದಲ್ಲಿ ಹಳೆಯ ರೀತಿಯ ಸ್ತಂಭಗಳಿವೆ. ಇದರ ಹಿಂಭಾಗದ ಗೋಡೆಯನ್ನು ತೆಗೆದು ಪುರ್ವದ್ವಾರವನ್ನು ನಿಲ್ಲಿಸಲಾಗಿದೆ. ನವರಂಗದ ಮಧ್ಯದಲ್ಲಿರುವ ಭುವನೇಶ್ವರಿ ಆಕರ್ಷಣೀಯವಾಗಿದೆ. ಅಷ್ಟದಿಕ್ಪಾಲಕರು ಮತ್ತು ತೊಲೆಗಳು ಸಂಧಿಸುವ ಜಾಗದಲ್ಲಿ ಪುಷ್ಪಮಾಲಿಕೆಗಳನ್ನು ಹಿಡಿದಿರುವ ನಾಲ್ವರು ಗಂಧರ್ವರ ವಿಗ್ರಹಗಳಿವೆ. ಮಧ್ಯಫಲಕದಲ್ಲಿ ಯಕ್ಷ-ಯಕ್ಷಿ ಗಂಧರ್ವರ ನಡುವೆ ಸಿಂಹಪೀಠವಿದ್ದು ಅದರ ಹಿಂದೆ ಆನೆಗಳಿವೆ. ಸಿಂಹಪೀಠದ ಮೇಲೆ ಪ್ರಭಾವಳಿ, ಮುಕ್ಕೊಡೆಗಳಿಂದಲಂಕೃತವಾದ ಜಿನವಿಗ್ರಹವಿದೆ. ಈ ವಿಗ್ರಹಕ್ಕೆ ಬುದ್ಧನಿಗಿರುವಂತೆ ಊರ್ಣಕೇಶವಿದೆ. (ಬಿ.ಕೆ.ಜಿ.)