ವಿಷಯಕ್ಕೆ ಹೋಗು

ಕಂದಕ ಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂದಕಗಳ ನೆರವಿನಿಂದ ನಡೆಸುವ ಕಾದಾಟ (ಟ್ರೆಂಚ್ ವಾರ್ಫೇರ್[೧]). ಒಂದು ಸ್ಥಳವನ್ನು ಆಕ್ರಮಿಸಲು ಮುನ್ನಡೆಯುತ್ತಿರುವ ಆಕ್ರಮಣಬಲದ ವಿರುದ್ಧ ಆ ಸ್ಥಳದಲ್ಲಿ ಭದ್ರವಾಗಿ ನೆಲೆ ಊರಿರುವ ರಕ್ಷಣಾಬಲ ಗುಂಡಿನ ಮಳೆ ಸುರಿಸುತ್ತದೆ.

ಕಂದಕ ಯುದ್ಧ

ಆಕ್ರಮಣಬಲ[ಬದಲಾಯಿಸಿ]

ಇಂಥ ಕದನದಲ್ಲಿ ಸ್ಥಳದ ವಿನ್ಯಾಸವನ್ನು ಅನುಸರಿಸಿ ಆಕ್ರಮಣಬಲ ತನ್ನ ಎಡಪಾಶರ್ವ್‌ದಲ್ಲಿ ಶತ್ರುವನ್ನು ಕದನೋದ್ಯುಕ್ತಗೊಳಿಸಿ ಬಲಪಾಶರ್ವ್‌ದಿಂದ ಗುಟ್ಟಾಗಿ ಮುಂದುವರಿಸಿ ಆತನನ್ನು ಹಠಾತ್ತಾಗಿ ಸದೆ ಬಡಿಯಬಹುದು. ಇದು ಬಲಪಾಶರ್ವ್‌ದ ಆಕ್ರಮಣ.ಹೀಗೆಯೇ ಎಡಪಾಶರ್ವ್‌ದ ಆಕ್ರಮಣಯೂ ಇದೆ.

ಕಂದಕ ಯುದ್ಧ[ಬದಲಾಯಿಸಿ]

ಆದರೆ ಕೆಲವು ನೆಲಗಳಲ್ಲಿ ಇಂಥ ಯಾವ ಮುನ್ನಡೆಯೂ ಸಾಧ್ಯವಾಗದು. ಆಗ ಎದುರಾಳಿಗೆ ನೇರಿದಿರಾಗಿ ಸಾಗುವುದೊಂದೇ ಆಕ್ರಮಣ ಪಕ್ಷಕ್ಕೆ ಉಳಿಯುವ ದಾರಿ. ಇಂಥಲ್ಲಿ ಈ ಪಕ್ಷ ಎದುರಿಸುವ ಹೊಡೆತ ಅತಿತೀವ್ರ : ಅದರಿಂದ ಸಂಭವಿಸುವ ಸಾವು ನೋವು ಅಪಾರ. ಆಗ ಮುನ್ನಡೆಯನ್ನು ನಿಲ್ಲಿಸಿ ಅಲ್ಲೇನೆಲ ಕೊರೆದು ಆತ್ಮರಕ್ಷಣೆಯನ್ನು ಸಾಧಿಸುವ ಯುದ್ಧತಂತ್ರವನ್ನು ಬಳಸಬೇಕಾಗುತ್ತದೆ. ಇದೇ ಕಂದಕ ಯುದ್ಧ.

ರಚನೆ[ಬದಲಾಯಿಸಿ]

ಕಂದಕ ರಚನೆಯ ತಂತ್ರವಿಷ್ಟು, ರಾತ್ರಿ ವೇಳೆ ಶತ್ರುವಿಗೆ ಅರಿಯದಂತೆ ಮುಂದುವರಿದು ಯುಕ್ತ ಪ್ರದೇಶದಲ್ಲಿ ಕಂದಕಗಳನ್ನು ತೋಡಬಹುದು. ಅಥವಾ ಮುಂಚೂಣಿ ಬಲಗಳು ಶತ್ರುವನ್ನು ಕದನದಲ್ಲಿ ತೊಡಗಿಸಿರುವಾಗ ಹಿಂಚೂಣಿಯವರು ಕಂದಕಗಳನ್ನು ರಚಿಸಿ ಒಂದು ಸುಭದ್ರ ನೆಲೆ ಒದಗಿಸಬಹುದು. ನೆಲದಲ್ಲಿ ಸಾಕಷ್ಟು ಆಳದ ನೇರವಾದ ಅಥವಾ ಅಂಕುಡೊಂಕಾದ (ಇದು ಯುದ್ಧತಂತ್ರವನ್ನು ಅವಲಂಬಿಸಿದೆ) ಕಾಲುವೆಗಳನ್ನು ಹೊಡೆಯುತ್ತಾರೆ. ಅವುಗಳಿಂದ ಹೊರತೆಗೆದ ಮಣ್ಣನ್ನು ಶತ್ರುವಿನ ಕಡೆಗಿನ ಬದಿಗಳಲ್ಲಿ ದಿಬ್ಬದಂತೆ ಪೇರಿಸಿದಾಗ ಕಂದಕ ಪುರ್ಣವಾಗುತ್ತದೆ. ಇದರೊಳಗೆ ನಿಂತ ಅಥವಾ ಮಲಗಿದ ಸೈನಿಕರ ರೈಫಲ್ ಮುಂತಾದ ಅಗ್ನ್ಯಸ್ತ್ರಗಳು ದಿಬ್ಬದ ಮೇಲೆ ಶತ್ರುವಿನೆಡೆಗೆ ಗುರಿ ಮಾಡಿರುತ್ತವೆ. ಶತ್ರುವಿನ ಗುಂಡು ಕಂದಕದೊಳಗೆ ಹುದುಗಿರುವ ಸೈನಿಕನ ಮೇಲೆ ಬೀಳುವುದು ಕಷ್ಟ. ಆದರೆ ಈತ ಮಾತ್ರ ಶತ್ರುವಿನ ಮೇಲೆ ಅಗ್ನಿವರ್ಷ ಸುರಿಸಿ ಆತನ ಬಲವನ್ನು ಕುಂದಿಸಬಹುದು.

ಕಾಲ[ಬದಲಾಯಿಸಿ]

ಕಂದಕ ಯುದ್ಧ ಒಂದೆರಡು ದಿವಸಗಳಲ್ಲಿ ಮುಗಿಯುವ ಘಟನೆ ಅಲ್ಲ. ದಿವಸಗಟ್ಟಲೆ ವಾರಗಟ್ಟಲೆ-ಅನೇಕ ದಿವಸಗಳ ಕಾಲ ಯಾವ ಯುದ್ಧ ಕಾರ್ಯಾಚರಣೆಯೂ ಇಲ್ಲದೆ-ಇಲ್ಲಿ ಹೊಂಚುಹಾಕುತ್ತಿರಬೇಕಾಗುವುದು. ಅನೇಕ ವೇಳೆ ಈ ಯುದ್ಧ ರಕ್ಷಣೆ ಹಾಗೂ ಆಕ್ರಮಣ ಬಲಗಳ ನಡುವಿನ ಒಂದು ಧೃತಿ ಯುದ್ಧವೇ (ವಾರ್ ಆಫ್ ನವ್ರ್ಸ್‌) ಆಗುವುದುಂಟು. ಅಂಥ ದಿವಸಗಳಲ್ಲಿ ಕಂದಕಗಳೇ ಸೈನಿಕರ ತಂಗುದಾಣಗಳು. ಹೀಗಾಗಿ ಇವು ಶಿಬಿರಗಳೇ ಆಗುತ್ತವೆ. ಅಲ್ಲಿ ಆಹಾರ, ವೈದ್ಯ, ವಿರಾಮ ಮುಂತಾದ ಸಕಲ ಕನಿಷ್ಠ ಸೌಕರ್ಯಗಳನ್ನೂ ಒದಗಿಸಬೇಕಾಗುತ್ತದೆ.


ಕಂದಕಗಳ ಉಪಯೋಗ ಆಕ್ರಮಣ ಬಲದ ಮುನ್ನಡೆಯಲ್ಲಿ ಮಾತ್ರವಲ್ಲ, ಪೌರರಕ್ಷಣೆಯಲ್ಲೂ (ಸಿವಿಲ್ ಡಿಫೆನ್ಸ್‌) ಉಂಟು. ಬಾಂಬ್ ದಾಳಿಯಿಂದ ಪೌರರಿಗೆ ರಕ್ಷಣೆ ನೀಡಲು ನಗರಗಳಲ್ಲಿ ಕಂದಕಗಳನ್ನು ತೋಡುತ್ತಾರೆ. ಅಮೆರಿಕ ದೇಶದ ಪರಮಾಣು ಶಕ್ತಿ ಆಯೋಗ ಪರಮಾಣು ಬಾಂಬಿನ ಸ್ಫೋಟನೆಯ ಪ್ರಯೋಗಗಳನ್ನು ನೆವಾಡದಲ್ಲಿ ನಡೆಸಿತು (1950). ಆಗ ಕಂದಕಗಳಲ್ಲಿ ಮಂಡಿಯೂರಿ ನಿಂತ ಸೈನಿಕರಿಗೆ ಯೋಗ್ಯರಕ್ಷಣೆ ದೊರೆತದ್ದು ಮಾತ್ರವಲ್ಲ, ನೆಲದ ಮೇಲಿನ ಶೂನ್ಯ ಬಿಂದುವಿಗೆ (ಬಾಂಬಿನ ಪ್ರಹಾರ ಬಿಂದು ಅಥವಾ ಅದರ ನೇರ ಕೆಳಗಿನ ಬಿಂದು) ಅದುವರೆಗೆ ಊಹಿಸಿದುದಕ್ಕಿಂತ ಅದೆಷ್ಟೋ ಸಮೀಪ ಬಂದಾಗಲೂ ಅವರಿಗೆ ಬಾಂಬ್ ಸ್ಫೋಟನೆಯ ಪರಿಣಾಮ ಆಗಲಿಲ್ಲ, ಆದ್ದರಿಂದ ಪರಮಾಣು ಬಾಂಬ್ ಯುದ್ಧದಲ್ಲಿ ಕಂದಕಗಳ ರಕ್ಷಣಾ ಸಾಮಥರ್ಯ್‌ ಅಪಾರವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://encyclopedia.1914-1918-online.net/bibliography/SK5PDCCD