ಕಂಚು ಶಿಲ್ಪ
ಅಚ್ಚುಗಳಲ್ಲಿ ಎರಕಹೊಯ್ದು ಆಕೃತಿಗಳನ್ನು ತಯಾರಿಸುವುದಕ್ಕೆ ಅತ್ಯಂತ ಪ್ರಶಸ್ತ ಲೋಹವಾದ ಕಂಚಿನಿಂದ ಶಿಲ್ಪಕಲಾಕೃತಿಗಳನ್ನು ರೂಪಿಸುವ ವಿಧಾನ.
ಇತಿಹಾಸ
[ಬದಲಾಯಿಸಿ]ಕಂಚಿನಿಂದ ವಿಗ್ರಹಗಳು ಮುಂತಾದ ಕಲಾವಸ್ತುಗಳ ತಯಾರಿಕೆ ಬಹು ಹಿಂದಿನ ಕಾಲದಿಂದಲೇ ನಡೆದು ಬಂದಿದೆ. ಈ ಮಿಶ್ರಲೋಹ ಗಟ್ಟಿ, ಹೊಳಪು ಹೊಂದಿದೆ. ಗಾಳಿಗೆ ಶೀತೋಷ್ಣಗಳಿಗೆ ಒಡ್ಡಿದರೂ ಬೇಗ ಹೊಳಪನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ ಅಚ್ಚಿನ ಎಲ್ಲ ಸಂದು ಬಿರುಕುಗಳಿಗೂ ಹರಿದು ಅಚ್ಚಿನಲ್ಲಿರುವ ಆಕೃತಿಯನ್ನೇ ತಾಳುತ್ತದೆ. ನವಶಿಲಾಯುಗ (ನಿಯೋಲಿಥಿಕ್ ಏಜ್) ಮತ್ತು ಕಬ್ಬಿಣಯಗಗಳ ಮಧ್ಯದ ಅವಧಿಯಲ್ಲಿ ಕಂಚಿನ ತಯಾರಿಕೆ ಪ್ರಾರಂಭವಾಯಿತೆಂದು ತಿಳಿದುಬಂದಿದೆ. ಚರಿತ್ರೆ ಪುರ್ವಕಾಲದಲ್ಲೇ ಏಷ್ಯದ ಮತ್ತು ಯುರೋಪಿನ ಅನೇಕ ದೇಶಗಳಲ್ಲಿ ಕಂಚನ್ನು ಆಯುಧಗಳನ್ನು ಮತ್ತು ಅನೇಕ ಅಲಂಕಾರ ಪದಾರ್ಥಗಳನ್ನು ಮಾಡುವುದಕ್ಕೆ ಉಪಯೋಗಿಸುತ್ತಿದ್ದರು. ಪ್ರ.ಶ.ಪು. ಮೂವತ್ತು ಶತಮಾನಗಳಷ್ಟು ಹಿಂದೆಯೇ ಕಂಚನ್ನು ಕರಗಿಸಿ ಆಯುಧಗಳು ಮುಂತಾದುವನ್ನು ತಯಾರಿಸುವ ಕ್ರಮ ಭಾರತದಲ್ಲಿ ತಿಳಿದಿತ್ತೆಂಬುದು ಮೊಹೆಂಜೊದಾರೊದಲ್ಲಿ ನಡೆಸಿದ ಉತ್ಖನನಗಳಿಂದ ತಿಳಿದುಬಂದಿದೆ.
ವಿಗ್ರಹಗಳು
[ಬದಲಾಯಿಸಿ]ದೇವರುಗಳ ಮತ್ತು ದೇವತಾಂಶ ಸಂಭೂತರಾದ ರಾಜರ, ಸಂತರ, ಭಕ್ತಾದಿಗಳ ವಿಗ್ರಹಗಳು; ಪುಜಾನುಕೂಲತೆಯನ್ನು ಒದಗಿಸಿಕೊಡುವ ಸಲಕರಣೆಗಳು, ಉಪಕರಣಗಳು, ದೇವಸ್ಥಾನದ ಕವಾಟಗಳು, ಬಾಗಿಲುಗಳು, ಶವಾಗಾರಗಳು, ಕಲ್ಲಿನ ಗೋರಿ ಅಲಂಕಾರ, ದೀಪದ ಮಲ್ಲಿಗಳು, ಹಲಗಾರತಿಗಳು, ತಟ್ಟೆಗಳು, ಅಘರ್ಯ್ ಪಾತ್ರೆಗಳು, ಉದ್ದರಣೆಗಳು, ದೀಪಸ್ತಂಭಗಳು, ಸ್ತೂಪಗಳು ಮತ್ತು ಕುದುರೆಗಾಡಿಗಳ ಮಸ್ತೀಬು, ಮೇಣದ ಬತ್ತಿಗಳನ್ನಿಡುವ ಗೆಲಿಂಚೆಗಳು, ಹೊಗೆಬತ್ತಿಯ ಮತ್ತು ಹೂವಿನ ಕರಂಡಕಗಳು, ಬಾಗಿಲ ಚಿಲಕ ಬೀಗಗಳು, ಮಕ್ಕಳ ಆಟದ ಸಾಮಾನುಗಳು, ದುಂಡಾದ ಮುದ್ರೆಗಳು-ಮುಂತಾದ ಅನೇಕಾನೇಕ ವಸ್ತುಗಳು ಕಂಚುಶಿಲ್ಪಕ್ಕೆ ಉತ್ತಮ ಉದಾಹರಣೆಗಳಾಗಿವೆ. ಪ್ರಾಚ್ಯ ಮತ್ತು ಪಾಶ್ಚಾತ್ಯ ಕಂಚುಶಿಲ್ಪಗಳಲ್ಲಿನ ಪ್ರಮುಖ ವ್ಯತ್ಯಾಸಗಳಿಗೆ ಅಲ್ಲಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ನಾಗರಿಕ ಧೋರಣೆಗಳಲ್ಲಿನ ವ್ಯತ್ಯಾಸಗಳೇ ಕಾರಣಗಳಾಗಿವೆ. ಪಾಶ್ಚಾತ್ಯ ಕಲೆಯಲ್ಲಿ ಕಾಲಾನುಕಾಲಕ್ಕೆ ಗಮನಾರ್ಹವಾದ ಮಾರ್ಪಾಟುಗಳಾಗಿದ್ದರೂ ಕಂಚುಶಿಲ್ಪ ಮಾತ್ರ ಆಧುನಿಕ ಕಾಲದವರೆಗೆ ತನ್ನ ಅಭಿಜಾತ ಗುಣವನ್ನು ಉಳಿಸಿಕೊಂಡು ಬಂದಿದೆ ಎನ್ನಬಹುದು.
ಏಷ್ಯ ಖಂಡಕ್ಕೆ ಸೇರಿದ ಚೀನ, ಜಪಾನ್, ಟಿಬೆಟ್, ಭೂತಾನ್, ನೇಪಾಲ, ಮಲಯ, ಕೊರಿಯ, ಇಂಡೊನೇಷ್ಯ, ಮಯನ್ಮಾರ್ ಮುಂತಾದ ಪ್ರದೇಶಗಳ ಕಲಾಸಂಸ್ಕೃತಿಗಳು, ದೇಶೀಯವೆನ್ನಬಹುದಾದ ಸವರಣೆಗಳಿಗೆ ಒಳಪಟ್ಟಿದ್ದರೂ ಹೆಚ್ಚಾಗಿ ಮತ್ತು ಮುಖ್ಯವಾಗಿ ಭಾರತದ ಕಲಾಸಂಸ್ಕಾರವನ್ನೇ ಪ್ರತಿಬಿಂಬಿಸುತ್ತವೆ. ಏನಾದರೂ ಅಂತರಗಳಿದ್ದಲ್ಲಿ, ಅವು ಈಚಿನ ಪಾಶ್ಚಾತ್ಯ ಪ್ರಭಾವಕ್ಕೆ ಅನುಗುಣವಾದುವಾಗಿವೆ.
ಪ್ರಾಚ್ಯ ಕಂಚುಗಳು
[ಬದಲಾಯಿಸಿ]ಕಂಚನ್ನು ಕರಗಿಸಿ ಮೂರ್ತಿಗಳನ್ನೂ ಆಯುಧಗಳನ್ನೂ ಇತರ ಪದಾರ್ಥಗಳನ್ನೂ ತಯಾರು ಮಾಡುವ ಕಲೆ ಮೊತ್ತಮೊದಲು (ಪ್ರ.ಶ.ಪು. 3000) ಭಾರತ ಮತ್ತು ಅಸ್ಸೀರಿಯಗಳಲ್ಲಿ ಬೆಳೆಯಿತು. ತಾಮ್ರದೊಂದಿಗೆ ಇತರ ಲೋಹ ಬೆರೆಸಿ ಕರಗಿಸಿ ಕಂಚು ಮಾಡುವುದರಲ್ಲಿ ಭಾರತೀಯರು ಮುಂದುವರಿದಿದ್ದರೂ ಅಂದವಾದ, ಕಲಾವೈಶಿಷ್ಟ್ಯ ಹೊಂದಿದ ಪದಾರ್ಥಗಳನ್ನು ತಯಾರಿಸುವುದರಲ್ಲಿ ಅಸ್ಸೀರಿಯನ್ನರು ಹೆಚ್ಚು ನೈಪುಣ್ಯಹೊಂದಿದ್ದರು. ಕ್ರಮೇಣ ಇದರಲ್ಲೂ ಭಾರತೀಯರು ಮೇಲ್ಮೆ ಪಡೆದರು. ಹಿಂದೂ ದೇವತಾಮೂರ್ತಿಗಳು ಎಲ್ಲ ಕಡೆ ತಯಾರಾದುವು. ಬೌದ್ಧ ಮತ್ತು ಜೈನಮುನಿಗಳ ಮೂರ್ತಿಗಳೂ ಹೊರಬಂದುವು. ಪ್ರತಿಯೊಂದು ದೇವಾಲಯದಲ್ಲೂ ದೇವತಾ ಮೂರ್ತಿಗಳು, ಹೆಚ್ಚಾಗಿ ಉತ್ಸವಮೂರ್ತಿಗಳು ಕಂಚಿನಿಂದಲೇ ತಯಾರಾದುವು. ಶ್ರೀಲಂಕ, ಆಗ್ನೇಯ ಏಷ್ಯ ದೇಶಗಳು, ಟಿಬೆಟ್-ಹೀಗೆ ನೆರೆದೇಶಗಳಿಗೂ ಈ ಕಂಚು ಕಲೆ ಹರಡಿತು. ಈಗ ಉತ್ತರ ಭಾರತದ ಮಧ್ಯಪ್ರದೇಶ, ಜಯಪುರ ಮುಂತಾದ ಕೆಲವು ಕಡೆಗಳಲ್ಲಿ, ದಕ್ಷಿಣದ ಕುಂಭಕೋಣಂ, ತಿರುವನಂತಪುರ, ತಂಜಾವೂರು ಪ್ರದೇಶಗಳಲ್ಲಿ, ದೇವತಾಮೂರ್ತಿಗಳನ್ನಲ್ಲದೆ ಪಾತ್ರೆಗಳು, ದೀಪಸ್ತಂಭಗಳು ಮುಂತಾದ ಪುಜೋಪಕರಣಗಳು, ಮಕ್ಕಳ ಆಟದ ಸಾಮಾನುಗಳು ಮುಂತಾದುವನ್ನೂ ತಯಾರುಮಾಡುತ್ತಾರೆ. ಭಾರತದಲ್ಲಿ ಈ ಕಲೆ ಇಂದಿಗೂ ಜೀವಂತವಾಗುಳಿದಿದೆಯಲ್ಲದೆ ನಿತ್ಯೋಪಯೋಗಿ ಸಾಮಾನುಗಳೊಂದಿಗೆ ಶ್ರೀಮಂತ ಕಲಾಭಿರುಚಿಯನ್ನು ತೃಪ್ತಿ ಪಡಿಸುವ ಕಲಾ ವಸ್ತುಗಳ ನಿರ್ಮಾಣವೂ ಸೇರಿ ಅನೇಕಾನೇಕ ಕಾರ್ಮಿಕ ಕುಟುಂಬಗಳಿಗೆ ಜೀವನ ನಿರ್ವಹಣೆ ಒದಗಿದಂತಾಗಿದೆ.
ದೇವತಾಸ್ವರೂಪಗ
[ಬದಲಾಯಿಸಿ]ಭಾರತದ ದೇವತಾಸ್ವರೂಪಗಳಲ್ಲಿ ನಟರಾಜ, ಉಮಾಮಹೇಶ್ವರ, ಶಿವಶಕ್ತಿ, ಶಿವ ಮತ್ತು ರಾಮಪಂಚಾಯತನ ಮೂರ್ತಿಗಳು, ಸಂಧ್ಯಾರಾಗಮೂರ್ತಿ, ದಕ್ಷಿಣಾಮೂರ್ತಿ, ವೀರಭದ್ರ, ಭೈರವ, ದತ್ತಾತ್ರೇಯ ಮುಂತಾದ ಪ್ರತಿಮೆಗಳು, ದೇವೀಸ್ವರೂಪದ ದುರ್ಗೆ, ದಾಕ್ಷಾಯಿಣಿ, ಅನ್ನಪುರ್ಣ, ಮಹಿಷಾಸುರಮರ್ದಿನಿ, ಕಾಳಿ, ಪಾರ್ವತಿ, ಇಂದ್ರಾಣಿ, ಭೈರವಿ, ವಾರಾಹಿ, ವೈಷ್ಣವೀ, ಶಿವಕಾಮಿನಿಗಳು, ಸಪ್ತಮಾತೃಕೆಗಳು, ಲಕ್ಷ್ಮಿ, ಸರಸ್ವತಿ, ಗಜಲಕ್ಷ್ಮಿ, ಭೂದೇವಿ, ಭಾರತಿ ಮೊದಲಾದುವು, ಗಣೇಶ, ಸೋಮಸ್ಕಂಧ, ವೇಣುಗೋಪಾಲ, ಸುಬ್ರಹ್ಮಣ್ಯ, ನಾರಸಿಂಹ, ಲಕ್ಷ್ಮೀನರಸಿಂಹ, ರಾಧೆ, ಕೃಷ್ಣ, ಆಂಜನೇಯ, ಗರುಡ, ಅಷ್ಟದಿಕ್ಪಾಲಕರು, ನವಗ್ರಹಮೂರ್ತಿಗಳು, ವಿಷ್ಣು, ರಂಗನಾಥ, ಶೇಷಶಾಯಿ, ಸತ್ಯನಾರಾಯಣ ಮುಂತಾದ ದೇವಸ್ವರೂಪಗಳು, ಗೌತಮಬುದ್ಧ, ಅಮಿತಾಭ, ರತ್ನಸಂಭವ, ಅಮೋಘಸಿದ್ಧಿ ಮುಂತಾದ ಧ್ಯಾನಿಬುದ್ಧರು, ಅವರ ಕುಟುಂಬಕ್ಕೆ ಸೇರಿದ ಹೇಣುಕಾ, ಏಕಜಾತ, ನೈರಾತ್ಮಾ, ಮಾರೀಚೀ, ವಜ್ರವಾರಾಹಿ, ಲೋಕೇಶ್ವರ, ಜಂಭಲ, ವಸುಧಾರಾ, ಪರ್ಣಶವರೀ ಪ್ರಜ್ಞಾಪಾರಮಿತಾ, ಮಂಜುಶ್ರೀ, ಮೈತ್ರೇಯ ಮುಂತಾದುವೂ ಜೈನಧರ್ಮಕ್ಕೆ ಸಂಬಂಧಿಸಿದಂತೆ ಆದಿನಾಥ, ಜೀವಂಧರ ಮುಂತಾದವರು; ಭಕ್ತವರ್ಯರಾದ ಸುಂದರ ಸುಂದರಮೂರ್ತಿ, ಮಾಣಿಕ್ಯವಾಚಕರ್ ಮುಂತಾದವರು. ಚರಿತ್ರ ಪುರುಷರಾದ ಶ್ರೀಕೃಷ್ಣದೇವರಾಯ ಮತ್ತು ಅವನ ರಾಣಿಯರು-ಇಂಥ ಶಿಲ್ಪಗಳು ಅಸಂಖ್ಯಾತವಾಗಿವೆ. ಭಾವದರ್ಶನದಲ್ಲಿ ಕಲಾದೃಷ್ಟಿಯಲ್ಲಿ ಅತ್ಯಂತ ಲೋಕಮಾನ್ಯತೆ ಪಡೆದ ವಿಗ್ರಹಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಬಹುದು:
1. ಶ್ರೀಶೈಲ, ತಂಜಾವೂರು, ಕಾಳಹಸ್ತಿ ತಿರುಮಂಗಳಗಳ ನಟರಾಜರು, ಸಂಧ್ಯಾರಾಗಮೂರ್ತಿಗಳು, ಭಿಕ್ಷಾಟನಶಿವರು; ಲೇಪಾಕ್ಷಿಯ ಭಿಕ್ಷಾಟನ ಶಿವ, ವೀರಭದ್ರ, ಉಮಾಮಹೇಶ್ವರರು. 2. ಶ್ರೀಶೈಲದ ದಕ್ಷಿಣಾಮೂರ್ತಿ. 3. ಸಿಂಹಳದ ಮತ್ತು ತಂಜಾವೂರಿನ ಸುಂದರಮೂರ್ತಿ, ಮಾಣಿಕ್ಯವಾಚಕರ್. 4. ನೇಪಾಲದ ಶಿವಶಕ್ತಿ ಸ್ವರೂಪಗಳು, ಬೋಧಿಸತ್ವ್ತರು. 5. ಕೂರ್ಕಿಹಾರಿನ ಪದ್ಮಪಾಣಿವಿಗ್ರಹ. 6. ಚಂಪದೇಶದ ಬುದ್ಧ. 7. ಜಾವ ಮತ್ತು ನಳಂದಗಳ ಪ್ರಜ್ಞಾಪಾರಮಿತ. 8. ನಾಗಪಟ್ಟಣದಲ್ಲಿನ ಬುದ್ಧನ ವಿಗ್ರಹ, ವಿಷಾಪಹರಣ ಮೂರ್ತಿ. 9 ಚೋಳಯುಗದ ಪಾರ್ವತಿ, ಶಿವಕಾಮಿನಿ ವಿಗ್ರಹಗಳು. 10. ನಳಂದ ಪ್ರದೇಶದ ತಾರಾ, ಮಂಜುಶ್ರೀ, ಪ್ರತಿಮೆಗಳ ಮಧ್ಯದಲ್ಲಿರುವ ಬುದ್ಧ ಮತ್ತು ಅವಲೋಕಿತೇಶ್ವರರು. ಅದೇ ಪ್ರದೇಶದ ಪದ್ಮಪಾಣಿ ಮತ್ತು ಸಿಂಹನಾದರು. 11. ಟಿಬೆಟ್ ಮತ್ತು ನೇಪಾಲ ಪ್ರದೇಶಗಳ ವಜ್ರಪಾಣಿ, ಪದ್ಮಪಾಣಿ, ವಜ್ರಧಾರಾ, ಲೋಕೇಶ್ವರರು. 12. ಸಿಂಹಳದ್ವೀಪದ ಬೋಧಿಸತ್ತ್ವರು, ನಾಟ್ಯವಿಗ್ರಹ, ಅನುರಾಧಾಪುರದ ವಜ್ರಸತ್ತ್ವ ಸ್ವರೂಪ. 13. ಚೀನದ ಆಸನಸ್ಥ ಬುದ್ಧ ಪ್ರತಿಮೆಗಳು, ಕ್ವಾನ್ಇನ್, ಸಿಂಹನಾದ ಅವಲೋಕಿತೇಶ್ವರರು. 14. ನೇಪಾಲದ ಅಮಿತಭಾತ್ರಿ ಮೂರ್ತಿ, ಬುದ್ಧನ ಜನನ ಶಿಲ್ಪ. 15. ಸಿಕ್ಕಿಂ ದೇಶದ ಪಂಚಲೋಹದ ಶಾಕ್ಯಶಿಲ್ಪ, ಮಿಲರೇಪ ತಾರಾ ಮುಂತಾದುವು. 16. ಜಪಾನಿನ ದೊಡ್ಡ ಪ್ರಮಾಣದ ಬುದ್ಧ ಅವಲೋಕಿತೇಶ್ವರ, ತಾರಾ, ಮಂಜುಶ್ರೀ ವಿಗ್ರಹಗಳು. 17. ಭೂತಾನ್ ದೇಶದ ದೀಪಂಕರ ಮೈತ್ರೇಯ, ಪದ್ಮಸಂಭವ, ರತ್ನಸಂಭವ ಮುಂತಾದ ಬೋಧಿಸತ್ತ್ವರು. 18. ತಿರುಪತಿಯಲ್ಲಿಯ ಶ್ರೀಕೃಷ್ಣದೇವರಾಯ ಮತ್ತು ಅವನ ರಾಣಿಯರ ಪ್ರತಿಮೆಗಳು.
ದಕ್ಷಿಣ ಭಾರತದಲ್ಲಿ ತಂಜಾವೂರು, ಕುಂಭಕೋಣಂ, ತಿರುವನಂತಪುರ ಪ್ರದೇಶಗಳಲ್ಲೂ ಉತ್ತರದಲ್ಲಿ ಮಧ್ಯಪ್ರದೇಶ, ಜಯಪುರ, ಆಗ್ರ, ಅಯೋಧ್ಯ ಮೊದಲಾದ ಕಡೆಯೂ ಕಂಚುಶಿಲ್ಪದ ಕೆಲಸ ಚೆನ್ನಾಗಿ ನಡೆಯುತ್ತದೆ. ಮಧ್ಯಪ್ರದೇಶದವುಗಳಲ್ಲಿ ನವಿಲುಗಳು, ನಂದಿಗಳು, ಸರ್ಪಗಳು, ವಿಧವಿಧವಾದ ದೇವತಾ ಸ್ವರೂಪಗಳು, ಚಿಕ್ಕಪುಟ್ಟ ದೇವಾಲಯಗಳು, ಶಿವಶಕ್ತಿ ಸ್ವರೂಪಗಳು, ಶಿವ ಮತ್ತು ಬುದ್ಧನ ಮುಖಗಳು, ಗಂಟೆಗಳು, ಕೈಯಲ್ಲಿ ಬೆಣ್ಣೆಯ ಮುದ್ದೆಯನ್ನು ಹಿಡಿದು ಅಂಬೆಗಾಲಿಡುವ ಬಾಲಕೃಷ್ಣಾಕೃತಿಗಳು-ಮುಂತಾದುವು ಬಹು ರಮ್ಯವಾಗಿವೆ. ಈ ದೇವತೆಗಳ ದೊಡ್ಡ ರೂಪಗಳೇ ಉತ್ಸವಮೂರ್ತಿಗಳಾಗಿ ದೇವಾಲಯಗಳಲ್ಲಿ ಬಳಕೆಯಲ್ಲಿವೆ. ಉತ್ತರಕ್ಕಿಂತ ದಕ್ಷಿಣದಲ್ಲಿ, ಶಾಸ್ತ್ರಾಂಶಕ್ಕೆ ಹೆಚ್ಚು ಪ್ರಾಧಾನ್ಯ. ದಕ್ಷಿಣ ಭಾರತದ ದೀಪಸ್ತಂಭಗಳಿಗೆ ಹಂಸ, ಕಿನ್ನರ, ಆಂಜನೇಯ, ಗರುಡ, ಕಲ್ಪವೃಕ್ಷ ಮುಂತಾದ ನಮೂನೆಗಳನ್ನು ಹೊಂದಿಸಿರುತ್ತಾರೆ. ಹಿನ್ನೆಲೆಯಲ್ಲಿ ತುಪ್ಪ, ಎಣ್ಣೆ ತುಂಬಲು ಮಾಡಿರುವ ಬುಡ್ಡಿಗಳ ಅಲಂಕಾರ ತಗಡಿನಲ್ಲಿ ನಿರ್ಮಿಸಿ ಒತ್ತಿ ಅಂಟಿಸಿದ ಗಜಲಕ್ಷ್ಮಿ, ಲಕ್ಷ್ಮಿ, ಸರಸ್ವತಿ, ಮೂರು, ಐದು, ಏಳು, ಒಂಬತ್ತು ಹೆಡೆಗಳುಳ್ಳ ಆದಿಶೇಷ ಮುಂತಾದ ಆಕೃತಿಗಳನ್ನೊಳಗೊಂಡಿರುತ್ತವೆ. ಸರ್ಪಾಕೃತಿಯ ದೀಪಗಳಿಗೆ ನಾಗದೀಪಗಳೆಂದು ಹೆಸರು. ಸಂಪುರ್ಣವಾಗಿ ಗುಂಡುಗುಂಡಾಗಿಯೂ ಇರುವ ಪ್ರತಿಮಾಶಿಲ್ಪವಲ್ಲದೆ ಕಂಚುತಗಡಿನ ಶಿಲ್ಪ ಕೂಡ ಬಳಕೆಯಲ್ಲಿತ್ತು. ಈ ಕೆಲಸ ಕವಾಟಸ್ತಂಭಗಳ ಅಲಂಕಾರಕ್ಕೂ ಬಾಗಿಲುಗಳ ಅಲಂಕಾರಕ್ಕೂ ಸರಿಹೋಗುತ್ತಿತ್ತು. ಶ್ರೀಶೈಲ ದೇವಸ್ಥಾನದ ಗೋಡೆಗಳಲ್ಲಿ ಇಂಥ ಅಲಂಕರಣವನ್ನು ಕಾಣಬಹುದು. ಪಾಶ್ಚಾತ್ಯ ದೇಶಗಳಲ್ಲಿ ಕೂಡ ಈ ನಮೂನೆಯ ಅಲಂಕಾರ ಕವಾಟಗಳಿಗೂ ಬಾಗಿಲುಗಳಿಗೂ ಬಲಿಪೀಠಗಳಿಗೂ ಪ್ರಾರ್ಥನಾಭಾಗಗಳಿಗೂ ಅಳವಟ್ಟಿದೆ. [೧] ಪರ್ಷಿಯದ ಲ್ಯೂರಿಸ್ತಾನ್ ಮತ್ತು ರಷ್ಯಕ್ಕೆ ಸೇರಿದ ಅಜóರ್ ಬೈಜಾನ್ಗಳಲ್ಲೂ ಕಂಚುಕಲೆ ಮೊಹೆಂಜೊದಾರೊ ಕಾಲದಲ್ಲೇ ಪ್ರಾರಂಭವಾಯಿತೆನ್ನಬಹುದು. ಲ್ಯೂರಿಸ್ತಾನದ ತಯಾರಿಕೆ ಮೇಲ್ಮಟ್ಟದ್ದು. ದೇವತಾವಿಗ್ರಹಗಳು ಕೊಂಚ ಮಟ್ಟಿಗೆ ಗ್ರೀಕರ ಡಯಾನಾ ವಿಗ್ರಹದ ಮಾದರಿಯವು. ಅವರ ಕುದುರೆ ಪ್ರತಿಮೆಗಳು ಉಚ್ಚಮಟ್ಟದ ಕಲಾಪ್ರತಿಭೆಯನ್ನು ತೋರಿಸುತ್ತವೆ. ಭಾರತದ ನೆರೆರಾಜ್ಯವಾದ್ದರಿಂದ ಪರ್ಷಿಯನ್ನರ ಕಲಾದೃಷ್ಟಿ ಆಧ್ಯಾತ್ಮಿಕವಾಗಿಯೂ ಇತ್ತು. ಅವರ ಜೀವನವೃಕ್ಷ (ಟ್ರೀ ಆಫ್ ಲೈಫ್) ಸಾಂಕೇತಿಕ; ಭಾರತದ ಆಧ್ಯಾತ್ಮಿಕ ಧೋರಣೆಗಳನ್ನೊಳಗೊಂಡಿದೆ.
ಪಾಶ್ಚಾತ್ಯ ಕಂಚುಗಳು
[ಬದಲಾಯಿಸಿ]ಪಾಶ್ಚಾತ್ಯ ಕಲಾಧೋರಣೆಗಳಿಗೂ ಧ್ಯೇಯಗಳಿಗೂ ಗ್ರೀಸ್ ದೇಶದ ಕಲಾಸಂಸ್ಕೃತಿ ಆಧಾರವಾಗಿದೆ. ಗ್ರೀಸಿನ ಪ್ರಭಾವ ಒಂದು ಕಾಲದಲ್ಲಿ ಹೆಚ್ಚಾಗಿಯೂ ಮತ್ತೊಂದರಲ್ಲಿ ಕಡಿಮೆಯಾಗಿಯೂ ಇರುತ್ತಲೇ ಬಂದಿದೆ. ಈ ಪ್ರಭಾವಕ್ಕೆ ಅಭಿಜಾತ ಧೋರಣೆ ಎನ್ನುತ್ತಾರೆ. ಪ್ರ.ಶ. 13ನೆಯ ಶತಮಾನದವರೆಗೂ ಇದು ತಾನೇ ತಾನಾಗಿದ್ದು ಗಾಥಿಕ್ ವೈಖರಿ ಜಾರಿಗೆ ಬಂದ ಅನಂತರ ಕಡಿಮೆಯಾಗಿ ಮತ್ತೆ ಯುರೋಪಿನ ಸಾಹಿತ್ಯ ಕಲೆಗಳ ಪುನರುಜ್ಜೀವನ ಕಾಲದಲ್ಲಿ ಹೆಚ್ಚಾಗಿ ದೇಶೀಯ ಸಂಸ್ಕೃತಿಗಳಿಗೆ ಒಳಪಟ್ಟು ನವೀನ ಅಭಿಜಾತ ಮಾರ್ಗ ಎಂಬ ಹೆಸರನ್ನು ಪಡೆದು ಈಗ ಅತಿ ನವೀನ ಧೋರಣೆಗಳಾದ ಕ್ಯೂಬಿಸಂ, ಮುಂತಾದ ಧೋರಣೆಗಳಿಂದಾಗಿ ಹಿಂದೆ ಬಿದ್ದಿದೆ.
ಗ್ರೀಸ್ ಪ್ರದೇಶದ ಕಂಚುಶಿಲ್ಪ ಅಮೃತಶಿಲೆಯ ಶಿಲ್ಪದಷ್ಟು ವಿಪುಲವಾಗಿಲ್ಲದಿದ್ದರೂ ರಚನೆಯ ವಿಧಾನದಲ್ಲಾಗಲಿ ಅಥವಾ ಕಲಾಧ್ಯೇಯಗಳಲ್ಲಾಗಲಿ ಉಚ್ಚ ಮಟ್ಟದ್ದಾಗಿದೆ. ಅಮೃತಶಿಲೆ ಮತ್ತಿತ್ತರ ವಸ್ತುಗಳಲ್ಲಿ ಸಾಧಿಸಿದ ಕಲಾಶ್ರೇಷ್ಠತೆಯನ್ನವರು ಕಂಚುಶಿಲ್ಪದಲ್ಲೂ ಸಾಧಿಸಿದರು. ಅವರ ಕಲಾಪ್ರೌಢಿಮೆಗೆ ನಿದರ್ಶನವಾಗಿ ಅನೇಕ ಕಂಚುಪ್ರತಿಮೆಗಳು ಇಂದಿಗೂ ಉಳಿದಿವೆ.
ಇವುಗಳಲ್ಲಿ ಕೆಲವು ಮುಖ್ಯಕೃತಿಗಳೆಂದರೆ-ಆರ್ಮೀನಿಯ ಪ್ರದೇಶದಲ್ಲಿ ಸಿಕ್ಕ ಅರ್ಟೆಮಿಸ್ ದೇವತೆಯ ದೊಡ್ಡ ಪ್ರಮಾಣದ ತಲೆ, ಸೇಬನ್ನು ಹಿಡಿದ ಹಕುರ್ಯ್‌ಲಿಸ್, ಪಾಲಿಕ್ಲೀಟಸ್ ರಚಿಸಿದ ಅಮೆeóÁನ್ ವಿಗ್ರಹ, ತಗಡಿನ ಉಬ್ಬು ಕೆತ್ತನೆಯ ಸಿರಿಯಸ್, ಪಾಂಪೇ ಪ್ರದೇಶದ ಆರ್ಟಿಮಿಸ್, 20" ಎತ್ತರದ ನಾರ್ಸಿಸಸ್ ವಿಗ್ರಹಗಳು. ಈ ವಿಗ್ರಹಗಳಲ್ಲಿನ ಕೂದಲಿನ ರಚನೆ ಗಮನಾರ್ಹವಾದ್ದು, ಉದಾಹರಣೆಗೆ, ಜುಪೀಟರ್ನ ಪ್ರತಿಮೆಯಲ್ಲಿ ತಲೆಗೂದಲು ಸಿಂಹದ ಕೇಸರಗಳಂತೆ ಸುರುಳಿ ಸುರುಳಿಯಾಗಿದ್ದರೆ ಅಪೊಲೊ ವಿಗ್ರಹದಲ್ಲಿ ಕೂದಲು ಕಂಠದ ಮೇಲೆ ಮತ್ತು ಕಪಾಲದ ಮೇಲೆ ಹರಿದಿದೆ. ಬ್ಯಾಕಸ್ ವಿಗ್ರಹದಲ್ಲಿ ಕೂದಲಿನ ಉಂಗುರಗಳು ಕಂಠದ ಮೇಲೆ ಮಾತ್ರ ಬಿದ್ದಿವೆ.
ಪ್ರಾಟೆಸ್ಟೆಂಟ್ ಧರ್ಮ ಹೆಚ್ಚಾಗಿ ವ್ಯಾಪಿಸಿರುವ ಕ್ರೈಸ್ತ ದೇಶಗಳಲ್ಲಿ ಕಂಚು ಪ್ರತಿಮೆಗಳು ಹೆಚ್ಚಾಗಿ ಸಂಸಾರಜೀವನಕ್ಕೆ ಸಂಬಂಧಿಸಿದುವು. ಆದರೆ, ರೋಮನ್ ಕೆಥೊಲಿಕ್ ಧರ್ಮ ವ್ಯಾಪಕವಾಗಿರುವ ದೇಶಗಳಲ್ಲಿ ಆರಾಧನೆಗಾಗಿ ನಿರ್ಮಾಣವಾದ ಮೇರಿ ಅವಳ ಶಿಶು ಮತ್ತು ಸಂತರು, ದೇವದೂತರು-ಇವರ ವಿಗ್ರಹಗಳು ಭಾವಗರ್ಭಿತವಾಗಿವೆ, ಪ್ರಾಚ್ಯದೇಶಗಳಲ್ಲಿರುವಂತೆ ಇವುಗಳಲ್ಲಿ ದೇವತಾಂಶ ಪ್ರಧಾನ.
ಗಾಥಿಕ್ ಯುಗದ ಕಂಚುಗಳು
[ಬದಲಾಯಿಸಿ]ಇಂಗ್ಲೆಂಡಿನಲ್ಲಿ ಸಾಧಾರಣವಾಗಿ ರಾಜರ ಮತ್ತು ಶ್ರೀಮಂತರ ಪ್ರತಿಮೆಗಳು ಮಾತ್ರ ಕಂಚಿನವಾಗಿವೆ. ಇವಕ್ಕೆ ಚಿನ್ನದ ಲೇಪನ ಮಾಡಿದೆ. ಫ್ರಾನ್ಸಿನಲ್ಲಿ 13-14 ಶತಮಾನಗಳಲ್ಲಿ ಗೋರಿಗಳ ಅಲಂಕಾರಕ್ಕಾಗಿ ಪ್ರತಿಮೆಗಳು ನಿರ್ಮಿತವಾದುವು. ಇವರ ಕಲಾವೈಶಿಷ್ಟ್ಯ ಇಂಗ್ಲೆಂಡಿಗೂ ಹರಡಿತು. ಇವುಗಳಲ್ಲಿ ಉಲ್ಲೇಖಾರ್ಹವಾದುದೆಂದರೆ 15ನೆಯ ಶತಮಾನದಲ್ಲಿ ರಚಿತವಾದ ರಿಚರ್ಡ್ ಬ್ಯುಷಾಂನ ವಿಗ್ರಹ. ಬಹು ಸುಂದರವಾದ ಇದಕ್ಕೆ ನೆದರ್ಲೆಂಡಿನ ಅಕ್ಕಸಾಲೆ ಬಾರ್ತ್ಲೋಮ್ಯೂ ಲ್ಯಾಂಬ್ಸ್ಪ್ರಿಂಗ್ ಚಿನ್ನದ ಲೇಪ ಕೊಟ್ಟಿದ್ದಾನೆ. 15, 16ನೇ ಶತಮಾನಗಳಲ್ಲಿ, ನ್ಯೂರೆಂಬರ್ಗ್, ಆಗ್ಸ್‌ಬರ್ಗ್, ಇನ್ಸ್‌ಬ್ರುಕ್ ಮುಂತಾದ ಅನೇಕ ನಗರಗಳಲ್ಲಿ ಅತ್ಯಂತ ಸುಂದರವಾದ ಕಂಚುಕಲಾಕೃತಿಗಳು ತಯಾರಾದುವು. ಚಕ್ರವರ್ತಿ ಮ್ಯಾಕ್ಸಿಮಿಲಿಯನ್ನನ ಸಮಾಧಿಯ ಮೇಲಿರುವ ಇಪ್ಪತ್ತೆಂಟು ಮೂರ್ತಿಗಳಿಂದಲಕೃತವಾಗಿರುವ ಕೃತಿಯಂತೂ ಮೋಹಕ ಕಲಾಸೌಂದರ್ಯವನ್ನು ಹೊಂದಿದೆ. ಇಟಲಿ, ನೆದರ್ಲೆಂಡ್ಸ್ ಮುಂತಾದ ಇತರ ದೇಶಗಳಲ್ಲೂ ರಚಿಸಲ್ಪಟ್ಟು ಇಂದಿಗೂ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿರುವ ಕಂಚು ಪ್ರತಿಮೆಗಳು ಇಂಥ ಉತ್ಕೃಷ್ಟ ಕಲಾಪ್ರೌಢಿಮೆಗೆ ನಿದರ್ಶನಗಳು.
ಕೃತಿಗಳು
[ಬದಲಾಯಿಸಿ]ಈ ಕಾಲದಲ್ಲಿ ಇಂಗ್ಲೆಂಡಿನಲ್ಲಿ ರಚಿತವಾದ ಕಂಚು ಕೃತಿಗಳು ಕಲಾಪ್ರೌಢಿಮೆಯಲ್ಲಿ ಇನ್ನೂ ಉನ್ನತಮಟ್ಟವನ್ನು ಸಾಧಿಸಿದವು. ಪುನರುಜ್ಜೀವನಯುಗದಲ್ಲಿ ಅಂದರೆ 15ನೆಯ ಶತಮಾನಗಳಲ್ಲಿ ರಚಿತವಾದ ಕೆಲವು ಕಲಾಕೃತಿಗಳು-ಉದಾಹರಣೆಗೆ ಏಳನೆಯ ಹೆನ್ರಿಯ ಸಮಾಧಿಯ ಮೇಲಿರುವ ಪ್ರತಿಮಾ ಪುಂಜ, ಉಬ್ಬು ಆಕೃತಿಗಳು, ರಿಚ್ಮಂಡನ ಮಾರ್ಗರೆಟ್ ಪ್ರತಿಮೆ-ಶವಗಳಿಂದಲೇ ಅಚ್ಚು ತಯಾರಿಸಿ ಎರಕಹೊಯ್ದು ಮಾಡಿದುವೋ ಎಂಬಂತೆ ಯಥಾವತ್ತಾದ ಮೂಲಪ್ರತಿಬಿಂಬನೆ ಪಡೆದು ರಮ್ಯವಾಗಿವೆ. ಇದೇ ಕಾಲದಲ್ಲಿ ಇಟಲಿ, ಫ್ರಾನ್ಸ್, ಸ್ಪೇನ್ಗಳಲ್ಲಿ ರಚಿತವಾದ ಕಂಚುಪ್ರತಿಮೆಗಳು, ಇಂಥ ನೈಸರ್ಗಿಕತೆಯನ್ನೂ ಚೆಲುವನ್ನೂ ಹೊಂದಿಲ್ಲವೆನ್ನಬೇಕು. 19ನೆಯ ಶತಮಾನದಿಂದೀಚೆಗೆ ಪುರ್ವಸಂಪ್ರದಾಯಗಳೂ ವಿಶ್ವಾಸಗಳ ನಿರ್ಬಂಧವಿಲ್ಲದೆ ವಾಸ್ತವಿಕತೆಯ ಮತ್ತು ಅದರ ಹಿನ್ನೆಲೆಯ ಭಾವನೆಗಳ ಮತ್ತು ರಾಗವಿಶೇಷಗಳ ನಿರೂಪಣೆ ಹೆಚ್ಚಾಗಿ ಬೆಳೆಯಿತು; ಸಂಕೇತ ಪ್ರಯೋಗ ಕ್ರಮ ಕಲಾಪ್ರಪಂಚಕ್ಕೂ ಹರಡಿತು. ತ್ವರಿತಗತಿಯಿಂದ ಬೆಳೆಯುತ್ತಿದ್ದ ವಿಜ್ಞಾನ ಸಾಧನಗಳೂ ಕಲಾಸೃಷ್ಟಿಗೆ ನೆರವಾದವು. ಹೀಗೆ ಈ ಕಾಲದಲ್ಲಿ ರಚಿತವಾದ ಕಂಚು ಪ್ರತಿಮೆಗಳಲ್ಲಿ ಇನ್ನೂ ಹೆಚ್ಚು ವಾಸ್ತವಿಕತೆ, ಸಂಕೇತಾರ್ಥ ನಿರೂಪಣೆಗಳನ್ನು ಕಾಣಬಹುದು. ಈ ಬೆಳೆವಣಿಗೆ ಹೆಚ್ಚಾಗಿ ಫ್ರಾನ್ಸ್, ಇಂಗ್ಲೆಂಡ್ಗಳಲ್ಲಿ ಕಂಡುಬರುತ್ತದೆ. (ಪಿ.ಎಸ್.)
ಉಲ್ಲೇಖಗಳು
[ಬದಲಾಯಿಸಿ]