ಕಂಕಂಟ ಪಾಪರಾಜು

ವಿಕಿಪೀಡಿಯ ಇಂದ
Jump to navigation Jump to search

ಕಂಕಂಟಿ ಪಾಪರಾಜು (తెలుగు:కంటింటి పాపరాజు) ೧೮ನೆಯ ಶತಮಾನದ ಕೊನೆಯಲ್ಲಿದ್ದ ಆಂಧ್ರ ಕವಿ.

ಕವಿಯ ಜೀವನ[ಬದಲಾಯಿಸಿ]

ಈತನು ಇಂದಿನ ನೆಲ್ಲೂರು ಮಂಡಲಕ್ಕೆ ಸೇರಿದವನೆಂಬ ಒಂದು ಹೇಳಿಕೆ ಇದೆ. ಅನಂತಪುರ ಮಂಡಲದ ಕಂಕಂಟಿ ಎಂಬ ಹೆಸರಿನ ಗ್ರಾಮದವನೆಂದೂ ಕೆಲವರು ನಂಬುತ್ತಾರೆ. ಕಂಕಂಟಿಯಲ್ಲಿ ಹುಟ್ಟಿ ನೆಲ್ಲೂರಿಗೆ ಹೋಗಿ ಸೇರಿರಬಹುದೆಂಬ ಊಹೆಗೆ ಅವಕಾಶವಿದೆ. ನೆಲ್ಲೂರು ಗೂಡೂರು ತಾಲ್ಲೂಕಿನಲ್ಲಿ ವಾಸವಾಗಿದ್ದ ಆಗತಾನೆ ವ್ಯಾಪಾರಾರ್ಥವಾಗಿ ಭಾರತಕ್ಕೆ ಬಂದ ಡಚ್ಚರಿಗೂ ಇಂಗ್ಲಿಷರಿಗೂ ದುಭಾಷಿಯಾಗಿದ್ದುಕೊಂಡು ಚೆನ್ನಾಗಿ ಸಂಪಾದನೆ ಮಾಡಿದನೆಂದು ಆರುದ್ರರು ಆಂಧ್ರ ಸಾಹಿತ್ಯ ಚರಿತ್ರೆಯಲ್ಲಿ ತಿಳಿಸುತ್ತಾರೆ. ಕಂಕಂಟಿವಂಶಪಯಃ ಪಾರವಾರಪರಿಪುರ್ಣಸುಧಾಕರನೆಂದು ಕವಿ ತನ್ನ ವಿಷಯವಾಗಿ ಹೇಳಿಕೊಂಡಿರುವುದರಿಂದ ಅವನ ಮನೆತನಕ್ಕೆ ಕಂಕಂಟಿಯವರೆಂಬ ಹೆಸರಿದ್ದಿತೆಂದು ಸ್ಪಷ್ಟವಾಗುತ್ತದೆ.

ಈ ಕವಿ ಆರವೇಲು ನಿಯೋಗಿ ಪಂಗಡಕ್ಕೆ ಸೇರಿದ ಶ್ರೀವತ್ಸ ಗೋತ್ರದ ಬ್ರಾಹ್ಮಣ. ತನ್ನ ಕಾವ್ಯದಲ್ಲಿ ಆ ಪಂಗಡವನ್ನು ಬಹಳವಾಗಿ ಪ್ರಶಂಸೆ ಮಾಡಿಕೊಂಡಿದ್ದಾನೆ. ಅಖಿಲ ರಾಜಾಧಿರಾಜಾಸ್ಥಾನಜನಹೃದ್ಯವಿದ್ಯಾವಿಹಾರಿಗಳು - ಅರವೇಲಿನವರು! ಅವರು ಬಲಿ,ಕರ್ಣರಂತೆ ವಿತರಣೋದಾರಿಗಳಂತೆ! ಘನದುರ್ಘಟ ಸ್ವಾಮಿಕಾರ್ಯ ನಿರ್ವಹಣ ಪ್ರವೀಣರವರು ಎಲ್ಲಕ್ಕಿಂತ ಮಿಗಿಲಾಗಿ ಅವರು ವಿಮತಗರ್ವಾಪರರು! ಇಂಥ ಶ್ರೇಷ್ಠವಾದ ಪಂಗಡದಲ್ಲಿ ಕೀರ್ತಿಶಾಲಿಯಾದ ಅಪ್ಪಯಾಮಾತ್ಯನ ಸುಪುತ್ರ, ಕವಿ ಪಾಪರಾಜು. ಈತ ರಾಜನೀತಿ ಮತ್ತು ಗಣಿತವಿಜ್ಞಾನಗಳಲ್ಲಿ ನಿಷ್ಣಾತನೂ ರಾಜಸನ್ಮಾನಿತನೂ ಆಗಿದ್ದನೆಂದು ಹೇಳಿಕೊಂಡಿದ್ದಾನೆ.

ಕೃತಿಗಳು[ಬದಲಾಯಿಸಿ]

ಪಾಪರಾಜು ವಿಷ್ಣುಮಾಯಾವಿಲಾಸ ಎಂಬ ಒಂದು ಯಕ್ಷಗಾನವನ್ನೂ ಉತ್ತರ ರಾಮಾಯಣ ಎಂಬ ಪ್ರೌಢಪ್ರಬಂಧಕಾವ್ಯವನ್ನೂ ರಚಿಸಿದ್ದಾನೆ. ಮೊದಲು ರಚಿಸಿದ್ದು ಯಕ್ಷಗಾನ, ಭರತಭೂಮಿಯ ಮೇಲೆ ಬ್ರಾಹ್ಮಣನಾಗಿ ಹುಟ್ಟಿ ಕವಿತಾ ಪ್ರತಿಭೆಯನ್ನು ಪಡೆದಿದ್ದು ಇಹಪರಸಾಧಕವಾದ ಶ್ರೀರಾಮಕಥೆಯನ್ನು ಹೇಳದೆ ಅಸತ್ಕಥೆಗಳನ್ನೆಷ್ಟು ಬರೆದರೂ ಜನ್ಮ ವ್ಯರ್ಥವೆಂದು ಕವಿಯ ತ್ರಿಕರಣಪುರ್ವಕವಾದ ನಂಬಿಕೆ. ಆದ್ದರಿಂದಲೇ ಈತ ಉತ್ತರರಾಮಾಯಣವನ್ನು ರಚಿಸಲು ಸಂಕಲ್ಪಿಸಿದ. ಆಂಧ್ರ ಮಹಾಭಾರತಕರ್ತರಲ್ಲಿ ಒಬ್ಬನಾದ ತಿಕ್ಕನ ಸೋಮಯಾಜಿ ನಿರ್ವಜನೋತ್ತರ ರಾಮಾಯಣ ಎಂಬ ಹೆಸರಿನಿಂದ ಈ ರಾಮಚರಿತೆಯನ್ನೇ ಪದ್ಯಕಾವ್ಯವಾಗಿ ರಚಿಸಿದ್ದಾನೆ. ಪ್ರ.ಶ. 1300ರ ಸುಮಾರಿನಲ್ಲಿ ಜೀವಿಸಿದ್ದ ಕಾಚ ಮತ್ತು ವಿಠಲನೆಂಬ ರಾಜಕವಿಗಳು ಉತ್ತರರಾಮಚರಿತೆಯನ್ನು ದ್ವಿಪದಕಾವ್ಯವಾಗಿ ರಚಿಸಿದರು. ಇಷ್ಟಿದ್ದರೂ ಪಾಪರಾಜು ಈ ಕಾವ್ಯರಚನೆಗೆ ಸಂಕಲ್ಪಿಸಿದ. ಶ್ರೀರಾಮನ ಚರಿತ್ರೆಯನ್ನು ಎಷ್ಟು ವಿಧಗಳಲ್ಲಿ ಹೇಳಿದರೂ ಸಾಲದೆಂದು ಕವಿಯ ತಿಳಿವಳಿಕೆ. ಸುಧೀಪರಿಷತ್ಸಂತತ ಸೇವ್ಯವಾದ ಉತ್ತರರಾಮಾಯಣವನ್ನು ಮೃದುವಚೋಧಾರಾರ್ಥ ಸಂದರ್ಭ ನಿರ್ಭರವಾದ ರೀತಿಯಲ್ಲಿ ಬರೆಯುವೆನೆಂದು ಪ್ರತಿಜ್ಞೆ ಮಾಡಿ ಪಾಪರಾಜು ಬಹಳ ಉತ್ತಮವಾದ ಶೈಲಿಯಲ್ಲಿ ಕೃತಿರಚನೆ ಮಾಡಿ ಸತ್ಯಸಂಕಲ್ಪನಾಗಿದ್ದಾನೆ.

ತೆಲುಗಿನಲ್ಲಿ ಇದುವರೆಗೂ ಲಭಿಸಿರುವ ಉತ್ತರರಾಮಾಯಣಗಳಲೆಲ್ಲ ಈ ಕೃತಿಯೇ ದೊಡ್ಡದು. ಎಂಟು ಆಶ್ವಾಸಗಳುಳ್ಳ ವಿಸ್ತಾರವಾದ ಪ್ರೌಢಪ್ರಬಂಧ ಕಾವ್ಯವಿದು. ಇದರಲ್ಲಿ ರಾಮ ಪಟ್ಟಾಭಿಷಿಕ್ತನಾದ ಮೇಲೆ ಸೀತೆಯನ್ನು ಅಡವಿಗೆ ಕಳುಹಿಸಿದ ಕಥೆ ಮುಖ್ಯವಾದರೂ ಕವಿ ಸಿಂಹಾವಲೋಕನ ಕ್ರಮದಿಂದ ರಾವಣೇಶ್ವರನ ಪುರ್ವಚರಿತ್ರೆಯನ್ನೂ ಆಂಜನೇಯನ ಕಥೆ. ವೃತ್ತಾಸುರ ವಧೆಯಿಂದ ಸಂಭವಿಸಿದ ಬ್ರಹ್ಮಹತ್ಯಾದೋಷ ಪರಿಹಾರವಾದ ಬಗೆ-ಮೊದಲಾದ ಹಲವು ಉಪಾಖ್ಯಾನಗಳನ್ನೂ ಅಚ್ಚುಕಟ್ಟಾಗಿ ಜೋಡಿಸಿ ಹೇಳಿದ್ದಾನೆ. ರಂಭಾ ರಾವಣ ಸಂವಾದ, ಸೀತಾ ವನವಾಸ, ಮೊದಲಾದ ಭಾಗಗಳು ಬಹು ಸ್ವಾರಸ್ಯವಾಗಿವೆ. ಭಾರತ ಭಾಗವತಗಳನ್ನು ಬಿಟ್ಟರೆ ಈ ಕೃತಿಯೇ ತೆಲುಗು ದೇಶದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ ಕಾವ್ಯವೆಂದು ಹೇಳಬೇಕು. ರಾಯಲಸೀಮೆಯಲ್ಲಂತೂ ಉತ್ತರರಾಮಾಯಣ ಬಹಳ ಪ್ರಚಾರದಲ್ಲಿದ್ದು ಜನಮನ್ನಣೆ ಗಳಿಸಿದೆ.

ಪಾಪರಾಜು ಹೀಗೆ ರಾಘವೇಶ್ವರಚರಿತವನ್ನು ರಚಿಸಿ ಅದನ್ನು ಯಾರಿಗೆ ಅಂಕಿತಮಾಡುವುದೆಂದು ಯೋಚಿಸುತ್ತಿದ್ದಾಗ ಒಂದು ರಾತ್ರಿ ಕನಸಿನಲ್ಲಿ ಅವನ ಇಷ್ಟದೈವನಾದ ಮದನಗೋಪಾಲಸ್ವಾಮಿ ದರ್ಶನ ಕೊಟ್ಟು ವತ್ಸ, ನಿನ್ನ ಪ್ರಬಂಧವನ್ನು ನನಗೆ ಅಂಕಿತ ಮಾಡಿ ಅರ್ಪಿಸು, ನೀನು ಕೃತಾರ್ಥನಾಗುವೆ. ನಿನ್ನ ಕೃತಿಯೂ ಆಚಂದ್ರಾರ್ಕವಾಗಿ ಬೆಳಗುತ್ತದೆ. ಹಿಂದೆ ನೀನು ವಿಷ್ಣುಮಾಯಾವಿಲಾಸವನ್ನು ನನಗೆ ಸಮರ್ಪಿಸಿದೆ. ಅಂದಿನಿಂದ ನಿನ್ನ ಸುಧಾನುಸಾರಿಯಾದ ವಾಕ್ಕುಗಳನ್ನು ಸವಿಯುತ್ತಿದ್ದೇನೆ ಎಂದು ಹೇಳಿಕೊಂಡನಂತೆ! ಅದರಂತೆ ಕವಿ ತನ್ನ ಈ ಬೃಹತ್ಕಾವ್ಯವನ್ನು ಸುಜನೈಕಕೃಪಾಳುವಾದ ಮದನಗೋಪಾಲನಿಗೆ ಭಕ್ತಿಯಿಂದ ಸಮರ್ಪಿಸಿದ್ದಾನೆ.

ಕೃತಿರಚನೆಯಲ್ಲಿ ತನಗೆ ಪುಷ್ಪಗಿರಿ ತಿಮ್ಮನನೆಂಬ ಕವಿಮಿತ್ರ ವಿಶೇಷವಾದ ಸಹಾಯಮಾಡಿದನೆಂದು ಹೇಳಿ ಅವನ ಉಪಕಾರವನ್ನು ಕವಿ ಕೊಂಡಾಡಿದ್ದಾನೆ.

ಶೈಲಿ[ಬದಲಾಯಿಸಿ]

ಪಾಪರಾಜು ಪ್ರೌಢ ಪಂಡಿತಕವಿ. ಇವನ ಬರೆವಣಿಗೆಯಲ್ಲಿ ಸಂಸ್ಕೃತದ ಬಳಕೆ ಹೆಚ್ಚು, ಆದರೂ ಇವನ ಕಥನಕೌಶಲ, ವರ್ಣನಾವಿಲಾಸಗಳಿಂದ ಈ ಕಾವ್ಯ ಸರ್ವಜನಾದರಣೀಯವಾಗಿದೆ. ಶ್ರಾವ್ಯವೂ ರಸಭರಿತವೂ ಆದ ಈ ಕೃತಿಯಲ್ಲಿ ಕವಿಯ ನಿರರ್ಗಳವಾದ ಪದರಚನೆ ಸುಪ್ರಕಟವಾಗಿದೆ; ಲೋಕೋಕ್ತಿಗಳು, ಶಬ್ದಾಲಂಕಾರ, ಅರ್ಥಾಲಂಕಾರಗಳು ಹೇರಳವಾಗಿದ್ದು ಪಂಡಿತಪಾಮರರಿಬ್ಬರಿಗೂ ರಂಜಕವಾಗಿದೆ.


Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: