ಓಡೊವೇಸರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓಡೊವೇಸರ್: 433-93 ಇಟಲಿಯ ಮೊದಲನೆಯ ಗ್ರೀಕ್ ರೋಮನ್ನೇತರ (ಬರ್ಬರ) ದೊರೆ; ಇಡಿಕೊವಿನ ಮಗ, ಡ್ಯಾನ್ಯೂಬ್ ನದಿಯ ಸಮೀಪದಲ್ಲಿ ಹುಟ್ಟಿದ. ಅಂತೂ ಈತ ಜರ್ಮನ್, ಈತ ಸ್ಕಿರಿಗಳ ಜೊತೆಯಲ್ಲಿ ಇಟಲಿಗೆ ಬಂದು ಚಕ್ರವರ್ತಿ ಅಮತಿಮಿಯಸನ ಸೇವೆಗೆ ಸೇರಿ ಬೇಗ ಮುಂದೆ ಬಂದ. ಇವನ ಜೊತೆಗಾರರು ಅಂತಿಮಿಯಸನನ್ನು ಗಾಡಿಯಿಂದಿಳಿಸಲು ರಿಸಿಮರ್ಗೆ ನೆರವು ನೀಡಿದರು. ಚಕ್ರವರ್ತಿ ಜ್ಯೂಲಿಯಸ್ ನೀಪಾಸನನ್ನು ಪದಚ್ಯುತಿಗೊಳಿಸುವುದಕ್ಕೂ ಅವರು ಒರಿಸ್ಟಿಸ್ಗೆ ಬೆಂಬಲವಾಗಿ ನಿಂತರು. ಇದಕ್ಕೆ ಬಹುಮಾನವಾಗಿ ಆತ ರೋಮನ್ ಪ್ರಭುತ್ವದ ಜಮೀನಿನಲ್ಲಿ ಒಂದು ಭಾಗವನ್ನು ಅವರಿಗೆ ಕೊಡುವುದಾಗಿ ವಾಗ್ದಾನ ಮಾಡಿದ. ಆದರೆ ಕೊಟ್ಟ ಮಾತಿಗೆ ಒರಿಸ್ಟಿಸ್ ತಪ್ಪಿ ನಡೆದಾಗ ಅವರು ಓಡೊವೇಸರನ ನಾಯಕತ್ವದಲ್ಲಿ ದಂಗೆಯೆದ್ದರು. ಒರಿಸ್ಟಿಸ್ ಪಾವಿಯ ಪ್ರದೇಶದ ಟೆಸಿನಂನಲ್ಲಿ ತಲೆಮರೆಸಿಕೊಂಡ. ಓಡೊವೇಸರ್ ಅದರ ಮೇಲೆ ದಾಳಿಯಿಟ್ಟು ಒರಿಸಿಸನನ್ನು ಹಿಡಿದು ಕೊಂದ (476); ಒರಿಸ್ಟಿಸನ ಮಗನೂ ಪಶ್ಚಿಮದ ಕೊಟ್ಟಕೊನೆಯ ರೋಮನ್ ಚಕ್ರವರ್ತಿಯೂ ಆದ ರಾಮ್ಯುಲಸ್ ಆಗಸ್ಟ್ಯುಲಸನನ್ನು ಪದಚ್ಯುತಿಗೊಳಿಸಿ ಆತ ಕ್ಯಾಂಪಾನಿಯದಲ್ಲಿ ಬದುಕಿಕೊಳ್ಳಲು ಅವಕಾಶಕೊಟ್ಟ. ನಾನಾ ರಾಷ್ಟ್ರೀಯರಿಂದ ಕೂಡಿದ ಓಡೊವೇಸರನ ಸೇನೆ ಇವನನ್ನು ದೊರೆಯೆಂದು 476 ಆಗಸ್ಟ್‌ 23ರಂದು ಘೋಷಿಸಿತು. ಕಾನ್ಸ್ಟ್ಯಾಂಟಿನೋಪಲಿನಲ್ಲಿದ್ದ ಚಕ್ರವರ್ತಿಗೆ ಇಟಲಿ ಅಧೀನವಾಗಿದೆಯೆಂದು ನೆಪಮಾತ್ರಕ್ಕೆ ಒಪ್ಪಿಕೊಂಡು, ಅದನ್ನು ತನ್ನ ಆಡಳಿತದ ಮುಷ್ಟಿಯೊಳಗಿಟ್ಟುಕೊಳ್ಳಬೇಕೆಂಬುದು ಈತನ ಇಚ್ಛೆಯಾಗಿತ್ತು. ತನ್ನನ್ನು ಇಟಲಿಯಲ್ಲಿ ರೋಮನ್ ಚಕ್ರವರ್ತಿಯ ಶ್ರೀಮಂತ ಪ್ರತಿನಿಧಿಯೆಂದು (ಪಟ್ರಿಷನ್) ಪರಿಗಣಿಸಬೇಕೆಂದೂ ಇಟಲಿಯ ಆಡಳಿತವನ್ನು ತನಗೆ ಒಪ್ಪಿಸಬೇಕೆಂದೂ ಕೋರಿ ಕಾನ್ಸ್ಟ್ಯಾಂಟಿನೋಪಲಿನ ಜಿûೕನೋಗೆ ನಿಯೋಗವೊಂದನ್ನು ಕಳಿಸಿದ. ಓಡೊವೇಸರನ ಮೊದಲನೆಯ ಬೇಡಿಕೆಗೆ ಒಪ್ಪಿಗೆ ದೊರಕಿತು. ಆದರೆ ಡ್ಯಾಲ್ಮೇಷಿಯದಲ್ಲಿದ್ದ ಜ್ಯೂಲಿಯಸನನ್ನು ಚಕ್ರವರ್ತಿಯೆಂದು ಸ್ವೀಕರಿಸಬೇಕೆಂದು ಜಿûೕನೋ ಸೂಚಿಸಿದ. ಓಡೊವೇಸರ್ ಇದಕ್ಕೊಪ್ಪಲಿಲ್ಲ. ಅಷ್ಟರಲ್ಲೇ (480) ನೀಪಾಸ್ ಕೊಲೆಗೀಡಾದ. ರೋಮಿನ ಸೆನೆಟ್ ಓಡೊವೇಸರನಿಗೆ ಬೆಂಬಲ ನೀಡಿತು. ತನಗೆ ನೆರವಾದ ಜರ್ಮನಿಗರಿಗೆ ಡೊವೇಸರ್ ಜಮೀನು ಹಂಚಿಕೊಟ್ಟ. ಆದರೂ ಅವರಲ್ಲಿ ಅಶಾಂತಿಯಿತ್ತು. ಕೊನೆಗೂ ಓಡೊವೇಸರ್ ಅದನ್ನಡಗಿಸಿದ. ಜಿûೕನೋ ವಿರುದ್ಧವಾಗಿ ತನಗೆ ನೆರವು ನೀಡಬೇಕೆಂದು ಓಡೊವೇಸರನ್ನು ಇಲಸ್ ಪ್ರಾರ್ಥಿಸಿದ. ಓಡೊವೇಸರ್ ಒಪ್ಪಲಿಲ್ಲ. ಇಲಸರನ ಅಧೀನದಲ್ಲಿದ್ದ ಪ್ರಾಂತ್ಯಗಳನ್ನೇ ಮುತ್ತಿದ. ಓಡೊವೇಸರ್ ಪ್ರಬಲನಾಗುತ್ತಿದ್ದುದನ್ನು ಜಿûೕನೋವೊ ಸಹಿಸಲಿಲ್ಲ, ಇವನ ಬಲಗುಂದಿಸಲು ಲೆನಿó್ಜಜಿಗೊ ವಿಯೆನ್ನವಿಗೂ ನಡುವೆ ಇದ್ದ ರೂಗಿಯನ್ನು ಎತ್ತಿಕಟ್ಟಿದ. ಓಡೊವೇಸರ್ ಡ್ಯಾನ್ಯೂಬ್ ನದಿ ದಾಟಿ ರೂಗಿಯನ್ನು ಅವನ ನೆಲದಲ್ಲೇ ಸೋಲಿಸಿ ಅವನನ್ನೂ ಅವನ ಹೆಂಡತಿಯನ್ನೂ ಸೆರೆ ಹಿಡಿದು ಕೊಂದು ಸ್ವಲ್ಪ ಕಾಲಾನಂತರ ಅವನ ಮಗನನ್ನೂ ಸೋಲಿಸಿ ಅಡಗಿಸಿದ. ಡ್ಯಾನ್ಯೂಬ್ ಪ್ರದೇಶದಲ್ಲಿ ತನಗೆ ನೆಮ್ಮದಿಯಿಲ್ಲವೆಂದು ಓಡೊವೇಸರನಿಗೆ ಮನವರಿಕೆಯಾಯಿತು. ಆದ್ದರಿಂದ ಅಲ್ಲಿದ್ದ ರೋಮನ್ನರನ್ನು ಇಟಲಿಗೆ ಕರೆತರಿಸಿದ.

ಆ ವೇಳೆಗೆ ಯೂರಿಕ್ ದೊರೆ ಸ್ಪೇನ್ ಮತ್ತು ಪಾವಾನ್ಸ್‌ಗಳ ಬಹುಭಾಗವನ್ನಾಕ್ರಮಿಸಿ ಕೊಂಡು ಓಡೊವೇಸರನಿಗೆ ತಲೆನೋವಾದ. ಅವನ ಆಕ್ರಮಣವನ್ನು ಓಡೊವೇಸರ್ ಹಿಂತಳ್ಳಿದನಾದರೂ ಆಕ್ರಮಣಕ್ಕೊಳಗಾದ ಪ್ರದೇಶದಲ್ಲಿ ಕೆಲಭಾಗ ಅವನ ಕೈಯಲ್ಲೇ ಉಳಿಯಿತು. 489-439ರ ವರೆಗಿನ ಕಾಲದಲ್ಲಿ ಆಸ್ವೊಗಾತ್ಗಳ ತಿಯೊಡೊರಿಕ್ ಮಾಡಿದ ದಾಳಿಗಳ ಫಲವಾಗಿ ಕ್ರಮೇಣ ಓಡೊವೇಸರನ ಶಕ್ತಿ ಕುಂದಿತು. ಈತನ ಅಧೀನದಲ್ಲಿದ್ದ ಪ್ರದೇಶಗಳು ಒಂದೊಂದಾಗಿ ಕೈಬಿಟ್ಟುವು. ಕೊನೆಗೆ 493ರಲ್ಲಿ ತಿಯೊಡೊರಿಕ್ ತನ್ನ ಕೈಯಿಂದಲೇ ಓಡೊವೇಸರನನ್ನು ಕೊಂದ. ಈತನ ಪರಿವಾರದವರೂ ಹಿಂಬಾಲಕರೂ ಸಾವಿಗೆ ಈಡಾದರು. ಇವನ ವಂಶವೇ ಅಳಿಸಿಹೋಯಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: