ಒಳ ಉರಿಯುವಿಕೆಯ ಬಿಣಿಗೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಳ ಉರಿಯುವಿಕೆಯ ಬಿಣಿಗೆ (Internal Combustion Engine) ಎಂದರೆ ಉರುವಲು ಮತ್ತು ಗಾಳಿಯ ಸೇರಿಕೆಯಿಂದಾಗುವ ಉರಿಯುವಿಕೆಯು ಇಂಜಿನ್ನಿನ ಒಳಗಡೆನೇ ನಡೆಯುತ್ತದೆ.

ನಾಲ್ಬಡಿತ ಇಂಜಿನ್ನಿನ ಚಿತ್ರ

ಉದಾ. ಕಾರು. ಇಲ್ಲಿ ಉರುವಲು (ಡಿಸೇಲ್, ಪೆಟ್ರೋಲ್ ಮುಂತಾದವು) ಗಾಳಿಯೊಡನೆ ಇಂಜಿನ್ನಿನ ಒಳಗಡೇನೇ ಬೆರೆತು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಅದೇ ಹೊರ ಉರಿಯುವಿಕೆಯ ಬಿಣಿಗೆಯಲ್ಲಿ (External Combustion Engine) ಉರಿಯುವಿಕೆಯು ಏರ್ಪಾಟಿನ ಹೊರಗಡೆ ಆಗುತ್ತದೆ. ಉದಾ: ಆವಿ ಬಿಣಿಗೆಗಳಲ್ಲಿ (steam engines). ಇಂಜಿನ್ನಿನ ಹೊರಗಡೆ, ಕುದಿಗೆಯಲ್ಲಿ (Boiler) ನೀರನ್ನು ಕಾಯಿಸಿ ಪಡೆದ ಆವಿಯಿಂದ ಇಂಜಿನ್ನನ್ನು ನಡೆಸುತ್ತಾರೆ. ಒಳ ಉರಿಯುವಿಕೆಯ ಬಿಣಿಗೆಯಲ್ಲಿ ಉರಿಯುವಿಕೆಯಿಂದಾಗಿ ಬಿಡುಗಡೆಯಾಗುವ ಹೆಚ್ಚೊತ್ತಡದ ಮತ್ತು ಹೆಚ್ಚು ಬಿಸುಪಿನ ಗಾಳಿಗಳು ಇಂಜಿನ್ನಿನ ಬಾಗಗಳಿಗೆ ನೇರವಾಗಿ ಕಸುವನ್ನು ಹಾಯಿಸುತ್ತವೆ. ಇಂತ ಏರ್ಪಾಟಿನಲ್ಲಿ ಹೆಚ್ಚಾಗಿ ಆಡುಬೆಣೆ (Piston), ತಿರುಗಾಲಿ ಅಲಗು (Turbine Blade) ಇಲ್ಲವೇ ಚಿಮ್ಮುಕಗಳಿಗೆ (Nozzle) ಉರುವಲಿನ ಕಸುವನ್ನು ಸಾಗಿಸಲಾಗುತ್ತದೆ. ಹೀಗೆ ಉರುವಲಿನಲ್ಲಿರುವ ರಾಸಾಯನಿಕ ಶಕ್ತಿಯಿಂದ ಹೊರ ಕಸುವನ್ನು ಪಡೆಯಲಾಗುತ್ತದೆ. ಇಟಿಯನ್ ಲಿನಾಯರ್ (Étienne Lenoir) ಮೊಟ್ಟಮೊದಲ ಬಾರಿಗೆ ಇಂತ ಮಾರಾಟ ಮಾಡಬಲ್ಲಂತಹ ಒಳ ಉರಿಯುವಿಕೆ ಬಿಣೆಗೆಯನ್ನು ಹೊರತರುವಲ್ಲಿ ಗೆಲುವು ಕಂಡರು.

ಒಳ ಉರಿಯುವಿಕೆಯ ಬಿಣಿಗೆ (ಒ.ಉ.ಬಿ) ಎರಡು ಬಗೆಯಲ್ಲಿರುತ್ತವೆ. ಮೊದಲನೇಯದು ಬಿಡಿ ಉರಿಯುವಿಕೆ ಬಗೆ ಉದಾ. ನಾಲ್ಬಡಿತದ ಅಡುಬೆಣೆ ಬಿಣಿಗೆ (Four stroke piston engine). ಇಲ್ಲಿ ಒಂದು ಸುತ್ತಿನ ನಾಲ್ಬಡಿತದಲ್ಲಿ, ಒಂದು ಬಡಿತದಲ್ಲಿ ಮಾತ್ರ ಉರಿಯುವಿಕೆ ಆಗುತ್ತದೆ. ಎರಡನೇಯದು ಎಡೆಬಿಡದ ಉರಿಯುವಿಕೆ ಬಗೆ ಉದಾ: ಗಾಳಿ ತಿರುಗಾಲಿ (Gas Turbine), ಚಿಮ್ಮು ಬಿಣಿಗೆ (Jet Engine), ಏರುಗಣೆ ಬಿಣಿಗೆ (Rocket Engine) ಮುಂತಾದವುಗಳು. ಇಲ್ಲಿ ಉರಿಯುವಿಕೆಯು ಸತತವಾಗಿ ಉಂಟಾಗಿ ಇಂಜಿನ್ನನ್ನು ನಡೆಸುತ್ತದೆ. ಒಳ ಉರಿಯುವಿಕೆಯ ಬಿಣೆಗೆಗಳು ಡಿಸೇಲ್, ಪೆಟ್ರೋಲನಂತಹ ದಟ್ಟವಾಗಿ ಶಕ್ತಿ ತುಂಬಿಕೊಂಡಿರುವ ಉರುವಲುಗಳಿಂದ ನಡೆಯುತ್ತವೆ. ಒಳ ಉರಿಯುವಿಕೆ ಬಿಣಿಗೆಗಳನ್ನು ಹೆಚ್ಚಾಗಿ ಓಡಾಟದ ಏರ‍್ಪಾಡುಗಳಿಗೆ ಬಳಕೆ ಮಾಡುತ್ತಾರೆ. ಉದಾಹರಣೆಗೆ: ಕಾರು, ವಿಮಾನಗಳು, ಹಡಗುಗಳು.

ಬಳಕೆಗಳು[ಬದಲಾಯಿಸಿ]

ಒಳ ಉರಿಯುವಿಕೆ ಬಿಣಿಗೆಗಳನ್ನು ಹೆಚ್ಚಾಗಿ ಗಾಡಿಗಳನ್ನು ಓಡಿಸಲು ಮತ್ತು ಎತ್ತಿಕೊಂಡು ಹೋಗಬಲ್ಲ ಸಲಕರಣೆಗಳಲ್ಲಿ ಬಳಸಲಾಗುತ್ತದೆ. ಇಂತಹ ಇಂಜಿನ್ನುಗಳಲ್ಲಿ ಕಸುವು/ತೂಕದ ಅನುಪಾತ ಹೆಚ್ಚಾಗಿರುವುದರಿಂದ (ಅಂದರೆ ಕಡಿಮೆ ತೂಕವಿರುವ ಇಂಜಿನ್ನು ಹೆಚ್ಚಿನ ಕಸುವು ನೀಡಬಲ್ಲದು) ಎತ್ತಿಕೊಂಡು ಹೋಗಬಲ್ಲ ಸಲಕರಣೆಗಳಿಗೆ ತುಂಬಾ ಬಳಕೆಯಾಗುತ್ತದೆ. ಸಾಗಾಣಿಕೆಯ ಹೆಚ್ಚು ಕಡಿಮೆ ಎಲ್ಲ ಬಗೆಯ ಗಾಡಿಗಳಲ್ಲಿ ಇಂದು ಒ.ಉ. ಬಿಣೆಗೆಗಳು ಬಳಕೆಯಾಗುತ್ತವೆ. (ಅಟೋಮೋಬೈಲಗಳು, ಟ್ರಕ್ಕುಗಳು, ದೋಣಿಗಳು ಇತ್ಯಾದಿ) ಹಾಗೆನೇ ಗಾಳಿ ತಿರುಗಾಲಿ (Gas Turbine) ಬಗೆಯ ಒ.ಉ. ಬಿಣಿಗೆಗಳು ಚಿಮ್ಮುವ ವಿಮಾನಗಳು, ಹೆಲಿಕಾಪ್ಟರಗಳು, ದೊಡ್ಡ ದೋಣಿಗಳು ಮತ್ತು ಮಿಂಚು ಹುಟ್ಟುಕಗಳಲ್ಲಿ (Electric Generators) ಬಳಕೆಯಾಗುತ್ತವೆ.

ಒಳ ಉರಿಯುವಿಕೆ ಬಿಣಿಗೆಗಳ (ಒ.ಉ.ಬಿ) ಬಗೆಗಳು[ಬದಲಾಯಿಸಿ]

ಇಂತಹ ಬಿಣಿಗೆಗಳನ್ನು (ಇಂಜಿನ್ನು) ಹಲವು ಬಗೆಗಳಲ್ಲಿ ಗುಂಪಿಸಬಹುದು. ಬಿಣಿಗೆ ಸುತ್ತು ಬಳಸಿ, ಬಿಣಿಗೆ ಏರ‍್ಪಾಡಿನ ಬಗೆಯಂತೆ, ಬಳಸುವ ಶಕ್ತಿಯನ್ನು ಬಳಸಿ, ಅವುಗಳ ಬಳಕೆಯಂತೆ ಇಲ್ಲವೇ ಅವುಗಳಲ್ಲಿ ಬಳಸಿದ ತಂಪು ಏರ‍್ಪಾಡುಗಳಂತೆ ಗುಂಪಿಸಬಹುದು. ಅವುಗಳಲ್ಲಿರುವ ಅಳವಡಿಕೆಯಂತೆ ಬಿಣಿಗೆಗಳನ್ನು (ಇಂಜಿನ್ನುಗಳನ್ನು) ಹೀಗೆ ಗುಂಪಿಸಬಹುದು.

ಹಿಂದುಮುಂದಾಟದ ಬಿಣೆಗಗಳು (Reciprocating Engines)

 • ಆಡುಬೆಣೆ ಬಿಣಿಗೆ
 • ಡಿಸೆಲ್ ಮತ್ತು ಅಟ್ಟೋ ಸುತ್ತಿನ ಬಿಣೆಗಗಳು
 • ಅಟಕಿನ್ಸನ್ ಸುತ್ತಿನ ಬಿಣಿಗೆ
 • ಮಿಲ್ಲರ್ ಸುತ್ತಿನ ಬಿಣೆಗೆ

ತಿರುಗುವ ಬಿಣಿಗೆಗಳು

 • ವಾಂಕಲ್ ಬಿಣಿಗೆ

ಎಡೆಬಿಡದ ಉರಿಯುವಿಕೆಯ ಬಿಣಿಗೆ

 • ಗಾಳಿ ತಿರುಗಾಲಿ
 • ಚಿಮ್ಮು ಬಿಣಿಗೆ (ತಿರುಗು-ಚಿಮ್ಮುಕ Turbojet, ತಿರುಗು-ಬೀಸುಕ Turbofan, ಏರುಗಣೆ Rocket ಇತ್ಯಾದಿಗಳು)

ಬಡಿತಗಳ ಎಣಿಕೆಯಂತೆ

 • ಎರಡು-ಬಡಿತದ ಬಿಣಿಗೆ
 • ನಾಲ್ಕು-ಬಡಿತದ (ನಾಲ್ಬಡಿತದ) ಬಿಣಿಗೆ
 • ಆರು-ಬಡಿತದ ಬಿಣಿಗೆ

ಉರುವಲು ಬಳಕೆಯಂತೆ

ಪೆಟ್ರೋಲಿಯಂ ಉರುವಲು
 • ಡಿಸೇಲ್ ಬಿಣಿಗೆಗಳು
 • ಪೆಟ್ರೋಲ್ ಬಿಣಿಗೆಗಳು
 • ನೈಸರ್ಗಿಕ ಒತ್ತಡದ ಗಾಳಿ (Compressed Natural Gas-CNG)
 • ನೀರಿನಂತಾಗಿಸಿದ ಪೆಟ್ರೋಲಿಯಂ ಗಾಳಿ (Liquified Petroleum Gas - LPG)
 • ಉಳಿದ ಉರುವಲು (ಪೆಟ್ರೋಲಿಯಂ ಹೊರತೆಗೆದಾಗ ಕೊನೆಗೆ ಉಳಿದದ್ದು)
ಕಲ್ಲಿದ್ದಲು
ಉಸಿರು-ಉರುವಲಗಳು (Biofuels) ಮತ್ತು ಇತರ ಗಿಡದ ಎಣ್ಣೆಗಳು (Vegoils)
 • ಬಯೋಬ್ಯುಟಿನಾಲ್ (ಪೆಟ್ರೋಲ ಬಳಕೆಯ ಬದಲಾಗಿ)
 • ಬಯೋಡಿಸೇಲ್ (ಡಿಸೆಲ್ ಬಳಕೆಯ ಬದಲಾಗಿ)
 • ಡಯಮಿತಾಯ್ಲ ಈತರ್ ( ಪೆಟ್ರ‍ೋಡಿಸೆಲ್ ಬದಲಾಗಿ)
 • ಬಯೋಇತೆನಾಲ್ ಮತ್ತು ಬಯೋಮಿತೆನಾಲ್ ( ಕಟ್ಟಿಗೆ ಹೆಂಡ) ಮತ್ತು ಇತರ ಉಸಿರು-ಉರುವಲಗಳು
 • ಬಯೋಗ್ಯಾಸ್

ಇಂಗ್ಲಿಶ ಪದ ಬಯೋ (Bio) ಅಂದರೆ ಕನ್ನಡದಲ್ಲಿ ಉಸಿರಾಡುವಂತದು, ಉಸಿರು ಅನ್ನಬಹುದು. ಸಂಸ್ಕ್ರುತದಲ್ಲಿ ಇದಕ್ಕೆ ಜಯ್ವಿಕ್ ಅಂತಾ ಬಳಸಲಾಗುತ್ತದೆ

ನೀರುಟ್ಟಕದಿಂದ (ಹಯಡ್ರೋಜನ್) ನಡೆಯುವಂತಹ ಬಿಣಿಗೆ ಮುಕ್ಯವಾಗಿ ವಿಮಾನಗಳು, ಏರುಗಣೆಗಳಲ್ಲಿ (ರಾಕೆಟ್ಟುಗಳು) ಬಳಸಲಾಗುತ್ತದೆ. ನೀರುಟ್ಟುಕವು (ಹಯಡ್ರೋಜನ್) ಮುಂಬರುವ ವರುಶಗಳಲ್ಲಿ ಡಿಸೇಲ್, ಪೆಟ್ರೋಲನಂತಹ ಪಳೆಯುಳಿಕೆ ಉರುವಲುಗಳ (fossile fuels) ಬಳಕೆ ತಪ್ಪಿಸುವುದೆಂದು ನಂಬಲಾಗಿದೆ. ನೀರುಟ್ಟಕವನ್ನು ಹಲವು ಬಗೆಗಳಲ್ಲಿ ಉಂಟುಮಾಡಬಹುದಾಗಿದ್ದರೂ ಅದಕ್ಕೆ ಹೆಚ್ಚಿನ ಮಿಂಚು ಶಕ್ತಿ (Eletric Power) ಬೇಕಾಗುತ್ತದೆ. ಮಿಂಚು ಶಕ್ತಿ ಸರಳವಾಗಿ, ಎಲ್ಲೆಡೆ ದೊರೆಯುವವರೆಗೆ ನೀರುಟ್ಟಕದ ಬಳಕೆ ಕಡಿಮೆ ಎನ್ನಬಹುದು. ಕರಿ ಉರುವಲಿಗೆ (Carbon Fuel) ಹೋಲಿಸಿದಾಗ ನೀರುಟ್ಟಕದ (ಹಯಡ್ರೋಜನ್) ಹಿನ್ನಡೆ ಎಂದರೆ ತುಂಬಾ ಕಡಿಮೆಯಾಗಿರುವ ಅದರ ದಟ್ಟಣೆ. (ಅದರ ದಟ್ಟಣೆ ನೀರಿಗಿಂತ ೧೪ ಪಟ್ಟು ಕಡಿಮೆ). ಕಡಿಮೆ ದಟ್ಟಣೆ ಇಂದಾಗಿ ಅದನ್ನು ಕೂಡಿಡಲು ದೊಡ್ಡ ಜಾಗಬೇಕಾಗುತ್ತದೆ

ತಂಪಾಗಿಸುವ ಏರ‍್ಪಾಡು ಬಳಸಿ ಬಿಣಿಗೆಯ ಬಗೆಗಳು

 • ಗಾಳಿಯಿಂದ ತಂಪಾಗಿಸುವಿಕೆಯ ಬಿಣೆಗೆ - ಉರಿಯುವಿಕೆಯಾದ ಮೇಲೆ ಉಂಟಾದ ಬಿಸಿಯನ್ನು "ಗಾಳಿ" ಬಳಸಿ ತಂಪು ಮಾಡಲಾಗುತ್ತದೆ. ಉದಾ: ಬೈಕುಗಳು
 • ನೀರಿನಿಂದ ತಂಪಾಗಿಸುವಿಕೆಯ ಬಿಣಿಗೆ - ಉರಿಯುವಿಕೆಯಾದ ಮೇಲೆ ಬಿಡುಗಡೆಯಾಗುವ ಬಿಸಿಯನ್ನು "ನೀರು" ಬಳಸಿ ತಂಪು ಮಾಡಲಾಗುತ್ತದೆ ಉದಾ: ಕಾರು

===== ಬಿಣಿಗೆ (ಇಂಜಿನ್ನು) ಕೆಲಸ ಮಾಡುವ ಬಗೆ =====

ನಾಲ್ಬಡಿತದ ಬಿಣಿಗೆ (Four stroke engine)

ನಾಲ್ಬಡಿತದ ಬಿಣಿಗೆ

ಹೆಸರೇ ಹೇಳುವಂತೆ ಈ ತರಹದ ಬಿಣಿಗೆಯಲ್ಲಿ ನಾಲ್ಕು ಬಡಿತಗಳಿರುತ್ತವೆ. ಈ ಬಿಣೆಗೆಯಲ್ಲಿ ಪ್ರತಿ ಎರಡು ಸುತ್ತಿಗೆ (ನಾಲ್ಕು ಬಡಿತ) ಕಸುವು ಬಿಡುಗಡೆಯಾಗುತ್ತದೆ.

 1. ಎಳೆಯುವಿಕೆ (Suction)
 2. ಒತ್ತುವಿಕೆ (Compression)
 3. ಕಸುವಿಕೆ (Power) ಇಲ್ಲವೇ ಹಿಗ್ಗುವಿಕೆ (Expanssion)
 4. ಹೊರಹಾಕುವಿಕೆ (Exhaust)
ಎಳೆಯುವಿಕೆ (Suction) ಈ ಬಡಿತದಲ್ಲಿ ಆಡುಬೆಣೆಯು (piston) ಮೇಲಿನಿಂದ ಕೆಳಗೆ ಸಾಗಿದಾಗ, ಬರೀ ಗಾಳಿ (ಡಿಸೆಲ್ ಬಿಣಿಗೆಯಲ್ಲಿ) ಇಲ್ಲವೇ ಗಾಳಿ ಮತ್ತು ಉರುವಲು (ಪೆಟ್ರೋಲ್ ಬಿಣಿಗೆಯಲ್ಲಿ) ಬಿಣಿಗೆಯೊಳಗೆ ಹೋಗುತ್ತವೆ. ಈ ಬಡಿತದಲ್ಲಿ ಗಾಳಿ ಮತ್ತು ಉರುವಲು ಒಳಬರಲು ಒಳತೆರ‍್ಪು (Intake valve) ತೆರೆದುಕೊಂಡಿದ್ದು, ಹೊರತೆರ‍್ಪು (Exhaust Valve) ಮುಚ್ಚಿರುತ್ತದೆ.
ಒತ್ತುವಿಕೆ (Compression) ಈ ಬಡಿತದಲ್ಲಿ ಆಡುಬೆಣೆಯು (piston) ಕೆಳಗಿನಿಂದ ಮೇಲೆ ಸಾಗುತ್ತದೆ. ಈ ಬಡಿತದಲ್ಲಿ ಒಳತೆರ‍್ಪು (Intake valve) ಮತ್ತು ಹೊರತೆರ‍್ಪು (Exhaust Valve) ಮುಚ್ಚಿದ್ದು, ಆಡುಬೆಣೆಯ ಓಡಾಟದಿಂದಾಗಿ ಬಿಣಿಗೆಯೊಳಗೆ ಮೊದಲ ಬಡಿತದಲ್ಲಿ ಒಳಬಂದ ಗಾಳಿ ಮತ್ತು ಉರುವಲು ಒತ್ತಡಕ್ಕೆ ಒಳಪಡುತ್ತವೆ. ಈ ಒತ್ತಡದಿಂದಾಗಿ ಗಾಳಿ ಮತ್ತು ಉರುವಲಿನ ಬಿಸುಪು ಹೆಚ್ಚುವುದರಿಂದ ಅವುಗಳನ್ನು ಉರಿಯುವಿಕೆಗೆ ಸಜ್ಜುಗೊಳಿಸಿದಂತಾಗುತ್ತದೆ. ಈ ಬಡಿತದ ಕೊನೆಗೆ ಉರುವಲನ್ನು (ಡಿಸೇಲ್ ಬಿಣೆಗೆಯಲ್ಲಿ) ಇಲ್ಲವೇ ಕಿಡಿಯನ್ನು (ಪೆಟ್ರೋಲ್ ಬಿಣಿಗೆಯಲ್ಲಿ) ಒದಗಿಸಲಾಗುತ್ತದೆ.
ಕಸುವಿಕೆ (Power) ಇಲ್ಲವೇ ಹಿಗ್ಗುವಿಕೆ (Expanssion) ಒತ್ತುವಿಕೆಯ ಕೊನೆಗೆ ಉರುವಲು ಇಲ್ಲವೇ ಕಿಡಿ ಒದಗಿಸುವುದರಿಂದ ಈ ಬಡಿತದಲ್ಲಿ ಉರಿಯುವಿಕೆ ಉಂಟಾಗಿ ಕಸುವು ಬಿಡುಗಡೆಯಾಗುತ್ತದೆ. ಈ ಬಡಿತದಲ್ಲೂ ಒಳತೆರ‍್ಪು (Intake valve) ಮತ್ತು ಹೊರತೆರ‍್ಪು (Exhaust Valve) ಮುಚ್ಚಿರುತ್ತವೆ. ಈ ಬಡಿತದಲ್ಲಿ ಉಂಟಾಗುವ ಕಸುವಿನಿಂದಾಗಿ ಆಡುಬೆಣೆ ಮೇಲಿನಿಂದ ಕೆಳಕ್ಕೆ ಓಡುತ್ತದೆ. ಆಡುಬೆಣೆಯ ಈ ಓಟದಿಂದಾಗಿ ಅದಕ್ಕೆ ಕೂಡಿಸಿದ ತಿರುಗುಸಳಿ (Crankshaft) ತಿರುಗುವಂತಾಗುತ್ತದೆ. ಹೀಗೆ ಉಂಟಾದ ತಿರುಗುವ ಓಟವು ಗಾಡಿಯ ಮುಂದಿನ ಸಾಗಾಣಿಕೆ ಏರ‍್ಪಾಡುಗಳಿಗೆ ಸಾಗಿ, ಕೊನೆಗೆ ನಾವು ನಡೆಸುವ ಗಾಡಿಯು ಮುಂದೆ ಸಾಗುವಂತಾಗುತ್ತದೆ.
ಹೊರಹಾಕುವಿಕೆ (Exhaust) ಈ ಬಡಿತದಲ್ಲಿ ಉರಿಯುವಿಕೆಯಾಗಿ ಉಳಿದ ಬಿಸಿಗಾಳಿಯನ್ನು ಈ ಬಡಿತದಲ್ಲಿ ಹೊರಹಾಕಲಾಗುತ್ತದೆ. ಈ ಬಡಿತದಲ್ಲಿ ಒಳತೆರ‍್ಪು (Intake valve) ಮುಚ್ಚಿದ್ದು, ಉಳಿದ ಬಿಸಿಗಾಳಿಯು ಹೊರತೆರ‍್ಪು (Exhaust Valve) ಮೂಲಕ ಹೊರಹೋಗುತ್ತದೆ.ಮೇಲಿನ ನಾಲ್ಬಡಿತಗಳನ್ನು ಬಳಸಿ ಡಿಸೇಲ್ ಮತ್ತು ಪೆಟ್ರೋಲ್ ಇಂಜಿನ್ನಗಳೆರಡೂ ನಡೆಯುತ್ತವೆ. ಇವೆರೆಡರ ನಡುವಿನ ವ್ಯತ್ಯಾಸವೆಂದರೆ ಡಿಸೇಲ್ ಬಿಣಿಗೆಯಲ್ಲಿ ಎಳೆಯುವಿಕೆ ಬಡಿತದಲ್ಲಿ ಬರೀ ಗಾಳಿ ಒಳಬಂದು, ಒತ್ತುವಿಕೆ ಬಡಿತದ ಕೊನೆಯಲ್ಲಿ ಉರುವಲನ್ನು ಹೆಚ್ಚಿನ ಒತ್ತಡದಲ್ಲಿ ಬಿಣಿಗೆಯೊಳಗೆ ಚಿಮ್ಮುಗೆಯಿಂದ (Injector) ಬಿಡಲಾಗುತ್ತದೆ. ಅದೇ ಪೆಟ್ರೋಲ್ ಬಿಣಿಗೆಯಲ್ಲಿ ಎಳೆಯುವಿಕೆ ಬಡಿತದಲ್ಲಿ ಗಾಳಿಯೊಡನೆ ಉರುವಲೂ ಬೆರೆತು ಬಿಣಿಗೆಯೊಳಗೆ ಬರುತ್ತವೆ ಮತ್ತು ಒತ್ತುವಿಕೆಯ ಕೊನೆಯಲ್ಲಿ ಉರುವಲು ಮತ್ತು ಗಾಳಿಯ ಬೆರೆತಕ್ಕೆ ಕಿಡಿ ತಾಗಿಸಿ ಉರಿಯುವಿಕೆಯನ್ನು ಉಂಟುಮಾಡಲಾಗುತ್ತದೆ. ಇಲ್ಲಿ ಕಿಡಿ ಉಂಟುಮಾಡಲು ಕಿಡಿಕಡ್ಡಿ (Spark Plug) ಬಳಸುತ್ತಾರೆ.

ಎರಡು-ಬಡಿತದ ಬಿಣಿಗೆ (Two stroke engine)

ಎರಡು-ಬಡಿತದ ಬಿಣಿಗೆ

ಇಂತಹ ಬಿಣಿಗೆಯಲ್ಲಿ ಪ್ರತಿ ಒಂದು ಸುತ್ತಿಗೆ (ಎರಡು ಬಡಿತ) ಕಸುವು ಬಿಡುಗಡೆಯಾಗುತ್ತದೆ. ನಾಲ್ಬಡಿತದ ಬಿಣೆಗೆಯಂತೆ ಈ ಬಿಣೆಗೆಯಲ್ಲಿ ತೆರ‍್ಪುಗಳು (Valves) ಇರದೇ ಗಾಳಿ ಒಳಬರಲು ಮತ್ತು ಹೊರಹೋಗಲು ಆಡುಬೆಣೆಯ ಓಡಾಟವನ್ನೇ ಬಳಸಿಕೊಳ್ಳಲಾಗತ್ತದೆ. ಚಿತ್ರದಲ್ಲಿ ಎರಡು ಬಡಿತದ ಬಿಣಿಗೆ (ಇಂಜಿನ್ನು) ಕೆಲಸ ಮಾಡುವ ಬಗೆಯನ್ನು ತೋರಿಸಲಾಗಿದೆ. ಮೊದಲ ಬಡಿತದಲ್ಲಿ ಗಾಳಿ, ಉರುವಲು (ಪೆಟ್ರೋಲ್) ಮತ್ತು ಎಣ್ಣೆಯು ಆಡುಬೆಣೆ (Piston) ಕೆಳಗಿರುವಾಗ ಬಿಣಿಗೆಯೊಳಗೆ ಹೋಗುತ್ತದೆ. ಆಡುಬೆಣೆ (Piston) ಕೆಳಗಿನಿಂದ ಮೇಲೆ ಸಾಗಿದಾಗ ಒಳಬಂದ ಗಾಳಿ,ಉರುವಲಿನ ಬೆರೆತದ ಒತ್ತಡವನ್ನು ಹೆಚ್ಚಿಸುತ್ತದೆ. ಈ ಬಡಿತದ ಕೊನೆಗೆ ಕಿಡಿಕಡ್ಡಿಯಿಂದ (Spark Plug) ಉರಿಯನ್ನು ಉಂಟುಮಾಡಲಾಗುತ್ತದೆ.ಇಲ್ಲಿ ಇಂಜಿನ್ನು ಬಾಗಗಳ ನಡುವಿನ ಉಜ್ಜುವಿಕೆ ಕಡಿಮೆ ಮಾಡಲು ಉರುವಲಿನೊಂದಿಗೆ ಎಣ್ಣೆಯನ್ನು ಬಳಸಲಾಗುತ್ತದೆ. ಟಿವಿಎಸ್ ಎಕ್ಸೆಲನಂತಹ ಮೊಪೆಡ್ ಗಾಡಿಗಳಲ್ಲಿ ಇದನ್ನು ಕಾಣಬಹುದು, ಪೆಟ್ರೋಲ್ ಹಾಕುವಾಗ ಅದರಲ್ಲಿ ಎಣ್ಣೆಯನ್ನೂ ಹಾಕಲಾಗುತ್ತದೆ. ತೆರ‍್ಪುಗಳು ಇಲ್ಲದಿರುವುದರಿಂದ ಮತ್ತು ಪ್ರತಿ ಒಂದು ಸುತ್ತಿಗೆ ಕಸುವು ಬಿಡುಗಡೆಯಾಗುವುದರಿಂದ ಈ ಬಗೆಯ ಬಿಣೆಗೆಯು (ಇಂಜಿನ್ನು) ಕೆಲವು ಒಳಿತುಗಳನ್ನು ಒದಗಿಸುತ್ತವೆ. ಎರಡು ಬಡಿತದ ಬಿಣಿಗೆಯ ಕಸುವು/ತೂಕದ ಅನುಪಾತ ಕಡಿಮೆ ಇರುವುದರಿಂದ ಇವುಗಳು ಚಿಕ್ಕದಾಗಿರುವುದು ಮತ್ತು ಇದನ್ನು ಮಾಡಲು ನಾಲ್ಬಡಿತ ಬಿಣಿಗೆಗಿಂತ ಸುಲಬವಾಗಿರುವುದು ಇಂತ ಕೆಲವು ಒಳಿತುಗಳು. ಈ ಒಳಿತುಗಳ ಜೊತೆಗೆ ಈ ಬಗೆಯ ಬಿಣಿಗೆಗಳಿಗೆ ಕೆಲವು ಹಿನ್ನಡೆಗಳಿವೆ ಅವೆಂದರೆ ಉರುವಲಿನ ಶಕ್ತಿಯನ್ನು ಸರಿಯಾಗಿ ಬಳಸದಿರುವುದು, ಕಡಿಮೆ ಬಾಳಿಕೆ, ತುಂಬಾ ಹೊಗೆ, ಕೆಡುಗಾಳಿ (Pollutant) ಸೂಸುವುದು ಇತ್ಯಾದಿ. ಈ ಹಿನ್ನಡೆಗಳನ್ನು ಮೀರಿಸಲು ಇತ್ತೀಚಿನ ವರುಶಗಳಲ್ಲಿ ಜಗತ್ತಿನ ಹಲವೆಡೆ ಹೆಚ್ಚಿನ ಕೆಲಸ ನಡೆಯುತ್ತಿದೆ. ನೇರ ಉರುವಲು ಚಿಮ್ಮುವಿಕೆ (Direct fuel Injection) ಎಂಬ ಚಳಕವೂ ಇದರಲ್ಲಿ ಒಂದು. ಇಲ್ಲಿ ಉರುವಲನ್ನು ಹೆಚ್ಚಿನ ಒತ್ತಡದೊಂದಿಗೆ ಗಾಳಿಯೊಂದಿಗೆ ಸೇರಿಸಲಾಗುತ್ತದೆ. ಹೀಗೆ ಮಾಡುವುದರಿಂದ ಉರಿಯುವಿಕೆ ಚೆನ್ನಾಗಿ ಆಗಿ ಶಕ್ತಿಯ ಹೆಚ್ಚಿನ ಬಳಕೆಯಾಗುತ್ತದೆ. ಎರಡು ಬಡಿತದ ಬಿಣಿಗೆಯನ್ನು ಹೆಚ್ಚಾಗಿ ಮಂಜುಗಾಡಿಗಳು (Snowmobiles), ಹುಲ್ಲುಹಾಸಿನ ಗಾಡಿಗಳು (Lawnmovers), ಎಳೆಕೊಯ್ತಗಳು (String timmers), ಸರಪಳಿ ಗರಗಸಗಳು (Chain Saws), ನೀರ‍್ಜಾರುಗಳು (Jet Ski) ಮತ್ತು ಮೊಪೆಡ ಗಾಡಿಗಳಲ್ಲಿ ಬಳಸುತ್ತಾರೆ. ಜಗತ್ತಿನ ದೊಡ್ಡ ಹಳಿಬಂಡಿಗಳು (Locomotives) ಮತ್ತು ದೊಡ್ಡ ಹಡಗುಗಳು ಎರಡು ಬಡಿತದ ಬಿಣಿಗೆಯಿಂದ ನಡೆಯುತ್ತವೆ. ಉದಾಹರಣೆಗೆ ವಾಟ್ಸೆಲ್ಕಾ-ಸುಜ್ಲರ್ ಕಂಪನಿಯ ಎರಡು ಬಡಿತದ ಡಿಸೇಲ್ ಬಿಣಿಗೆಯನ್ನು ಸಾಗಾಣಿಕೆಗೆ ಬಳಸುವ ದೊಡ್ಡ ಹಡುಗುಗಳಲ್ಲಿ ಅಳವಡಿಸಲಾಗಿದೆ.

ವಾಂಕಲ್ ಸುತ್ತಿನಿಂದ ನಡೆಯುವ ಒ.ಉ.ಬಿಣೆಗೆ ವಾಂಕಲ್ ಬಿಣಿಗೆಯಲ್ಲಿ (ಇಂಜಿನ್ನಿನಲ್ಲಿ) ಓಡಾಡುವ ಆಡುಬೆಣೆ (Piston) ಬದಲಾಗಿ ನಡುದೂರದ ತಿರುಗಣೆ ಏರ್ಪಾಟನ್ನು ಬಳಸಲಾಗುತ್ತದೆ ಇದನ್ನು ಸಾಮಾನ್ಯವಾಗಿ ತಿರುಗು ಬಿಣಿಗೆ (Rotary Engine) ಅಂತಾ ಕರೆಯುತ್ತಾರೆ. ಓಡುವ ಚಿತ್ರದಲ್ಲಿ ತೋರಿಸಿರುವಂತೆ, ವಾಂಕಲ್ ಇಂಜಿನ್ನಿನಲ್ಲಿ ಸಮಪಾಲಿನ ಮೂರು ಕೋಣೆಗಳು ಇರುತ್ತವೆ. ಸಾಮಾನ್ಯ ನಾಲ್ಬಡಿತದ ಬಿಣೆಗೆಯಂತೆ ಇದರಲ್ಲಿ ಎಳೆಯುವಿಕೆ, ಒತ್ತುವಿಕೆ, ಕಸುವಿಕೆ ಮತ್ತು ಹೊರಹಾಕುವಿಕೆ ಬಡಿತಗಳು ನಡೆಯುತ್ತವೆ. ಎಳೆಯುವಿಕೆ ಬಡಿತದಲ್ಲಿ ಒಳಬಂದ ಉರುವಲು ಮತ್ತು ಗಾಳಿಯನ್ನು ತಿರುಗಣೆ ಕೋಣೆಯ ನಡುವಿನ ಇಕ್ಕಟ್ಟಿನಲ್ಲಿ ಸಿಲುಕಿಸಿ, ಒತ್ತಡ ಉಂಟುಮಾಡಲಾಗುತ್ತದೆ, ಹೀಗೆ ಒತ್ತಡ ಹೆಚ್ಚಿಸಿದ ಗಾಳಿ-ಉರುವಲಿನ ಬೆರೆತಕ್ಕೆ ಕಿಡಿ ತಾಗಿಸಿ ಶಕ್ತಿಯನ್ನು ಪಡೆಯಲಾಗುತ್ತದೆ. ಮಾಜ್ಡಾ ಕಾರು ಕಂಪನಿಯ RX-8, RX-7 ಮಾದರಿ ಕಾರುಗಳಲ್ಲಿ ವಾಂಕಲ್ ಬಿಣಿಗೆಯನ್ನು ಬಳಸಲಾಗಿತ್ತು. ವಾಂಕಲ್ ಬಿಣಿಗೆಯ ಅಚ್ಚುಕಟ್ಟಾದ ವಿನ್ಯಾಸದಿಂದಾಗಿ ಅವುಗಳನ್ನು ಕೆಲವು ವಿಮಾನಗಳಲ್ಲಿ (ಉದಾ:ಡಯಮಂಡ್ DA20), ಮಂಜುಗಾಡಿಗಳಲ್ಲಿ(Snowmobiles), ಸರಪಳಿ ಗರಗಸಗಳು (Chain Saws), ನೀರ‍್ಜಾರುಗಳು (Jet Ski) ಮುಂತಾದ ಕಡೆ ಬಳಸುತ್ತಾರೆ

ವಾಂಕಲ್ ಬಿಣಿಗೆ ತೋರಿಸುವ ಓಡುಚಿತ್ರ

ಗಾಳಿ ತಿರುಗಾಲಿಗಳು (Gas Turbines) ಈ ಬಗೆಯ ಒಳ ಉರಿಯುವಿಕೆಯ ಬಿಣೆಗೆಯಲ್ಲಿ ಉರುವಲು ಮತ್ತು ಗಾಳಿಯನ್ನು ಬಿಣಿಗೆಕೋಣೆಯಲ್ಲಿ ಉರಿದು ಅದರಿಂದ ಹೊಮ್ಮುವ ಬಿಸಿಗಾಳಿಯನ್ನು ತಿರುಗಾಲಿಯಲ್ಲಿ (Turbine) ಹಾಯಿಸುತ್ತಾರೆ. ತಿರುಗಾಲಿ ಈ ಕಸುವಿನಿಂದ ಸುತ್ತುವಂತಾಗಿ ತಿರುಗುವ ಶಕ್ತಿ ಬಿಡುಗಡೆಯಾಗುತ್ತದೆ. ಆ ತಿರುಗು ಶಕ್ತಿಯನ್ನು ಗಾಳಿ ಒತ್ತಡವನ್ನು ಹೆಚ್ಚಿಸುವ ಒತ್ತುಗೆ (Compressor) ಮತ್ತು ಗಾಡಿ ನಡೆಸಲು ಬೇಕಾಗುವ ಸಲಕರಣೆಗೆ ಸಾಗಿಸಲಾಗಿತ್ತದೆ.ಗಾಳಿ ತಿರುಗಾಲಿಗಳನ್ನು ಹೆಚ್ಚಾಗಿ ವಿಮಾನಗಳಲ್ಲಿ ಬಳಸುತ್ತಾರೆ. ಜೊತೆಗೆ ರೈಲುಗಾಡಿಗಳು, ಹಡುಗುಗಳು ಮತ್ತು ಯುದ್ದದ ಟ್ಯಾಂಕಗಳಲ್ಲಿ ಬಳಸುತ್ತಾರೆ

ಗಾಳಿ ತಿರುಗಾಲಿ ಇಂಜಿನ್ನು

ಚಿಮ್ಮು ಬಿಣಿಗೆ (Jet Engine) ಈ ಬಗೆಯ ಒ.ಉ.ಬಿಣಿಗೆಯಲ್ಲಿ (ಇಂಜಿನ್ನಿನಲ್ಲಿ) ಉರುವಲು ಮತ್ತು ಗಾಳಿಯ ಉರಿಯುವಿಕೆಯಿಂದ ಬಿಡುಗಾಡೆಯಾದ ಬಿಸಿಗಾಳಿಯನ್ನು ತಳ್ಳುವ ಮೂಗುಗಳಿಂದ (Propulsion nozzle) ಹೊರಬಿಟ್ಟು ಅದರ ಎದುರಾಗಿ ಉಂಟಾಗುವ ಕಸುವನ್ನು ಗಾಡಿ ನಡೆಸಲು ಬಳಸುತ್ತಾರೆ. ಈ ಬಗೆಯ ಬಿಣಿಗೆಯನ್ನು ಏರುಗಣೆಗಳಲ್ಲಿ (ರಾಕೆಟ್) ಬಳಸುತ್ತಾರೆ.

F100 F-15 ಚಿಮ್ಮು ಬಿಣಿಗೆ