ವಿಷಯಕ್ಕೆ ಹೋಗು

ಒಳಸಂಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳಸಂಚು: ನ್ಯಾಯಬಾಹಿರವಾದ ಕಾರ್ಯವೊಂದನ್ನು ಮಾಡಲೋ ನ್ಯಾಯಬಾಹಿರ ಮಾರ್ಗದಿಂದ ನ್ಯಾಯವಾದ ಉದ್ದೇಶವೊಂದನ್ನು ಸಾಧಿಸಲೋ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ತಮ್ಮಲ್ಲೇ ಮಾಡಿಕೊಂಡ ಒಪ್ಪಂದ (ಕನ್ಸ್‌ಪಿರಸಿ). ನ್ಯಾಯಾಲಯಗಳಾಗಲಿ ವಿಧಾನ ಮಂಡಲಗಳಾಗಲಿ ಅಪರಾಧದ ಒಳಸಂಚನ್ನು (ಕ್ರಿಮಿನಲ್ ಕನ್ಸ್‌ಪಿರಸಿ) ಕುರಿತ ನಿಷ್ಕೃಷ್ಟ ವ್ಯಾಖ್ಯೆ ನೀಡಿಲ್ಲ. ತಕ್ಸೀರು ಅಥವಾ ಅಪರಾಧ (ಕ್ರಿಮಿನಲ್) ಕಾಯಿದೆಯ ಕ್ಷೇತ್ರದಲ್ಲಿ ಇದು ಸ್ಫುಟವಾಗಿ ಮೂಡಿಲ್ಲ.ಸಂದರ್ಭಗಳ ಆಧಾರದ ಮೇಲೆ,ಒಳಸಂಚು ಕ್ರಿಮಿನಲ್ ಅಪರಾಧ ಅಥವಾ ನಾಗರಿಕ ತಪ್ಪು ಕೂಡ ಆಗಿರಬಹುದು..[೧]

ಒಳಸಂಚಿಗೆ ಸಂಬಂಧಿಸಿದ ಕಾನೂನು ಭಾರತೀಯ ದಂಡ ಸಂಹಿತೆಯ 34 ಮತ್ತು 121ಎ ಪ್ರಕರಣಗಳಲ್ಲಿ ಅಂತರ್ಗತವಾಗಿದೆ. ಪ್ರಮುಖವಾಗಿ ಐದನೆಯ ಭಾಗದಲ್ಲಿರುವ 107ನೆಯ ಪ್ರಕರಣದಲ್ಲಿ ದುಷ್ಪ್ರೇರಣೆಯ (ಅಬೆಟ್ಮೆಂಟ್) ಎರಡನೆಯ ರೂಪವನ್ನು ವಿವರಿಸುವ ಸಂದರ್ಭದಲ್ಲಿ ಒಳಸಂಚಿನ ವಿಚಾರ ಬಂದಿದೆ. 107ನೆಯ ಪ್ರಕರಣದ ಪ್ರಕಾರ ಅಪರಾಧಿಗೂ (ಕ್ರಿಮಿನಲ್) ಅಪರಾಧಕ್ಕೂ ಬಹಳ ಹತ್ತಿರದ ಸಂಬಂಧ ಇರಬೇಕಾಗುವುದರಿಂದ 1913ರ ಅಪರಾಧನ್ಯಾಯದ ತಿದ್ದುಪಡಿ ಕಾಯಿದೆ ಭಾರತೀಯ ದಂಡಸಂಹಿತೆಗೆ 5ಎ ಎಂಬ ಪ್ರಕರಣವನ್ನು ಸೇರಿಸಿ 120ಎ ಮತ್ತು 120ಬಿ ಪ್ರಕರಣಗಳನ್ನು ಜಾರಿಗೆ ತಂದಿತು. 120ಎ ಪ್ರಕರಣ ಅಪರಾಧದ (ತಕ್ಸೀರು) ಒಳಸಂಚು ಎಂಬ ವಿಶಿಷ್ಟ ಅಪರಾಧವನ್ನು ಸೃಷ್ಟಿಸಿದೆ. 120ಬಿ ಅದನ್ನು ಮಾಡಿದವರಿಗೆ ವಿಧಿಸಬೇಕಾದ ಶಿಕ್ಷೆಯನ್ನು ಹೇಳಿದೆ. ಈ ಪ್ರಕರಣಗಳಿಂದ ಇಂಗ್ಲಿಷ್ ಮತ್ತು ಭಾರತೀಯ ಕಾನೂನುಗಳನ್ನು ಈ ವಿಚಾರದಲ್ಲಿ ಸರಿಸಮಾನಗೊಳಿಸಲು ಪ್ರಯತ್ನಿಸಲಾಗಿದೆ. ಆದರೂ ಭಾರತದಲ್ಲಿಯ ಒಳಸಂಚಿನ ಕಾನೂನಿಗೂ ಇಂಗ್ಲಿಷ್ ಕಾನೂನಿಗೂ ಇನ್ನೂ ಭೇದವಿದೆ.

ಇಬ್ಬರು ಅಥವಾ ಹೆಚ್ಚು ಜನ ಯಾವುದಾದರೂ ಒಂದು ಕಾನೂನುಬಾಹಿರವಾದ ಕಾರ್ಯವನ್ನು, ಅಥವಾ ಕಾನೂನುಬಾಹಿರ ಮಾರ್ಗದ ಮೂಲಕ ಕಾನೂನುಬಾಹಿರವಲ್ಲದ ಕಾರ್ಯವನ್ನು, ಮಾಡಲು ಅಥವಾ ಮಾಡಿಸಲು ಒಪ್ಪಂದ ಮಾಡಿಕೊಂಡರೆ ಅದು ಒಳಸಂಚೆಂದು ಭಾರತೀಯ ದಂಡಸಂಹಿತೆಯ 120ನೆಯ ಪ್ರಕರಣದಲ್ಲಿ ಹೇಳಿದೆ. ಆದರೆ ಇದರ ಪರಂತುಕದಲ್ಲಿ (ಪ್ರೊವೈಸೊ) ಹೇಳಿರುವಂತೆ ಕಾನೂನಿನ ಪ್ರಕಾರ ಅಪಕೃತ್ಯವೆಂದು (ಅಫೆನ್ಸ್‌) ಗಣಿಸಲಾಗುವ ಕಾರ್ಯಗಳ ಹೊರತಾಗಿ ಬೇರೆ ಕಾರ್ಯಗಳಲ್ಲಿ ಒಪ್ಪಂದ ಮಾತ್ರವೇ ಅಲ್ಲದೆ ಆ ಒಪ್ಪಂದವನ್ನು ಅನುಷ್ಠಾನಕ್ಕೆ ತರಲು ಅದಕ್ಕೆ ಸೇರಿದವರಲ್ಲಿ ಒಬ್ಬ ಅಥವಾ ಹೆಚ್ಚು ಮಂದಿ ಏನಾದರೂ ಒಂದು ಸ್ಪಷ್ಟ ಕೃತ್ಯ (ಓವರ್ಟ್ ಆಕ್ಟ್‌) ಮಾಡಿರಬೇಕು. ಕಾನೂನುಬಾಹಿರವಾದ ಗುರಿ, ಗುರಿಯನ್ನು ಮುಟ್ಟಲು ಪುರಕವಾದ ಮಾರ್ಗ-ಇವೆರಡರಲ್ಲಿ ಭೇದವನ್ನು ಕಲ್ಪಿಸದೆ ಅವುಗಳನ್ನು ಸರಿಸಮಾನವೆಂದೇ ಕಾಯಿದೆಯ ವಿವರಣೆ ಪರಿಗಣಿಸುತ್ತದೆ.

ಭಾರತೀಯ ದಂಡಸಂಹಿತೆಯಲ್ಲಿ[ಬದಲಾಯಿಸಿ]

ತಕ್ಸೀರಿನ ಒಳಸಂಚಿನ ಮುಖ್ಯ ಫಟಕಗಳು: ಭಾರತೀಯ ದಂಡಸಂಹಿತೆಯ 120ಎ ಪ್ರಕರಣದ ಪ್ರಕಾರ ತಕ್ಸೀರಿನ ಒಳಸಂಚಿಗೆ ನಾಲ್ಕು ಮುಖ್ಯ ಫಟಕಗಳಿವೆ.

  1. ಇಬ್ಬರು ಅಥವಾ ಹೆಚ್ಚು ಮಂದಿಗಳೊಳಗೆ ಒಪ್ಪಂದ: ಒಬ್ಬನ ಮೇಲೆ ಮಾತ್ರ ತಕ್ಸೀರಿನ ಒಳಸಂಚಿನ ತಪ್ಪು ಸ್ಥಾಪನೆಯಾಗಲು ಸಾಧ್ಯವಿಲ್ಲ. ಇಬ್ಬರು ಅಥವಾ ಹೆಚ್ಚು ಮಂದಿಯೊಳಗೆ ಒಪ್ಪಂದ ಅಗತ್ಯ. ಮನಸ್ಸಿನಲ್ಲಿ ಗುಪ್ತವಾಗಿದ್ದ ಇಚ್ಛೆ ಆಪಾದಿತರೊಳಗೆ (ಅಕ್ಯೂಸ್ಡ್‌) ಪರಸ್ಪರ ವಿಚಾರ ವಿನಿಮಯಕ್ಕೆ ಒಳಗಾಗಿ, ಆ ಇಚ್ಛೆ ಅವರೆಲ್ಲರದೂ ಆಗಬೇಕು. ಆಪಾದಿತರ ಮೇಲೆ ಹೊರಿಸಿದ ತಪ್ಪನ್ನು ಮಾಡಲು ಅಥವಾ ಮಾಡಿಸಲು ಒಪ್ಪಂದವಾಗಿರಬೇಕು. ಇಂಗ್ಲಿಷ್ ನ್ಯಾಯದಲ್ಲಿ ಇಂಥ ಒಪ್ಪಂದವನ್ನೇ ಸ್ಪಷ್ಟ ಕೃತ್ಯವೆಂದು ಭಾವಿಸಲಾಗಿದ್ದು ಒಳಸಂಚಿನ ತಪ್ಪು ಸ್ಥಾಪನೆಯಾಗುತ್ತದೆ. ಒಂದು ರೀತಿಯಲ್ಲಿ ಭಾರತದಲ್ಲಿ ಈ ಮಟ್ಟಿಗೆ ಒಳಸಂಚಿನ ವಿಚಾರದ ಕಾನೂನು ಇಂಗ್ಲಿಷ್ ಕಾನೂನಿನಿಂದ ಸಂಕುಚಿತವಾಗಿದೆ. ಆದರೆ ಇನ್ನು ಕೆಲವು ವಿಚಾರಗಳಲ್ಲಿ ಭಾರತದ ಕಾನೂನು ಇಂಗ್ಲಿಷ್ ಕಾನೂನಿಗಿಂತ ವಿಸ್ತಾರವಾದದ್ದು. ಇಲ್ಲಿ ತಕ್ಸೀರಿನ ಒಳಸಂಚು ಒಂದು ವಿಶಿಷ್ಟ ಅಪಕೃತ್ಯವಾಗಿ ಎಣಿಸಲ್ಪಟ್ಟು ಶಿಕ್ಷಾರ್ಹವಾಗಿದೆ. ಇಂಗ್ಲಿಷ್ ನ್ಯಾಯದಲ್ಲಿ ಗಂಡ ಮತ್ತು ಹೆಂಡತಿ ಒಬ್ಬರೆ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಹಾಗಲ್ಲ. ಇಂಗ್ಲಿಷ್ ನ್ಯಾಯದಲ್ಲಾಗಲಿ ಭಾರತದ ದಂಡಸಂಹಿತೆಯಲ್ಲಾಗಲಿ ಒಪ್ಪಂದ ಅತಿ ಮುಖ್ಯ ಫಟಕ.
  1. ಕಾನೂನುಬಾಹಿರವಾದ ಅಥವಾ ಕಾನೂನು ನಿಷೇಧಿಸುವ ಕೆಲಸಕ್ಕಾಗಿ ಒಪ್ಪಂದ ಆಗಿರತಕ್ಕದ್ದು. ಭಾರತೀಯ ದಂಡಸಂಹಿತೆಯ 43ನೆಯ ಪ್ರಕರಣದಲ್ಲಿ ಕಾನೂನುಬಾಹಿರ ಕೃತ್ಯದ ವಿವರವಿದೆ. ಅದರ ಪ್ರಕಾರ ಕಾನೂನು ನಿಷೇಧಿಸಿದ ಅಥವಾ ಕಾನೂನು ತಪ್ಪೆಂದು ನಿರ್ದೇಶಿಸಿದ, ಅಥವಾ ಸಿವಿಲ್ ಮೊಕದ್ದಮೆಗೆ ಬುನಾದಿಯ ರೂಪದ ಕೆಲಸಗಳು ಕಾನೂನುಬಾಹಿರ ಕೆಲಸಗಳು. ಒಂದು ಕೆಲಸವನ್ನು ಮಾಡದೆ ಬಿಡುವುದು ನ್ಯಾಯಬಾಹಿರವಾಗಿದ್ದಲ್ಲಿ ಅದು ಪ್ರತಿಯೊಬ್ಬನೂ ಮಾಡಲೇಬೇಕಾದ ಕೆಲಸವೆಂದು ತಿಳಿಯತಕ್ಕದ್ದು ಎಂದು ಅದೇ ಪ್ರಕರಣ ಹೇಳುತ್ತದೆ. ಆದ್ದರಿಂದ ನ್ಯಾಯಬಾಹಿರ ಕ್ರಿಯೆ ನ್ಯಾಯಬಾಹಿರ ನಿಷ್ಕ್ರಿಯೆಯನ್ನೂ (ಇಲ್ಲೀಗಲ್ ಒಮಿಷನ್) ಒಳಗೊಂಡಿದೆ. ಅಪರಾಧಿಯ ಒಳಸಂಚಿನ ಮೊಕದ್ದಮೆ ತಾಂತ್ರಿಕ (ಟೆಕ್ನಿಕಲ್) ತಪ್ಪಾದುದರಿಂದ ಈ ಘಟಕವನ್ನು ಸರಿಯಾಗಿ ರುಜುವಾತುಪಡಿಸಬೇಕು. ಧರ್ಮಕ್ಕೆ ವಿರೋಧವಾದ, ಸಾರ್ವಜನಿಕ ಧೋರಣೆಗೆ (ಪಬ್ಲಿಕ್ ಪಾಲಿಸಿ) ವ್ಯತಿರಿಕ್ತವಾದ-ಹೀಗೆ ಮುಂತಾಗಿ ನ್ಯಾಯಾಲಯಗಳು ಜಾರಿ ಮಾಡದಿರುವ-ಒಪ್ಪಂದಗಳು ಕಾನೂನುಬಾಹಿರವೆಂದು ಗಣಿಸಲು ಸಾಧ್ಯವಿಲ್ಲ. ನ್ಯಾಯಬಾಹಿರ ಕೆಲಸ ಕಟ್ಟಕಡೆಯ ಗುರಿಯಾಗಿದ್ದರೂ ಸರಿ, ಅಥವಾ ಗುರಿಗೆ ಪ್ರಾಸಂಗಿಕವಾಗಿದ್ದರೂ (ಇನ್ಸಿಡೆಂಟಲ್) ಸರಿ, ಅಪಕೃತ್ಯ ಸ್ಥಾಪನೆಯಾಗುತ್ತದೆ. ಒಬ್ಬನಿಗೆ ಅಸಾಧ್ಯವಾದ ಅಪಕೃತ್ಯವಾಗಿದ್ದರೂ ಆ ವಿಚಾರ ಗಣನೀಯವಲ್ಲ. ಕೃತ್ಯ ತಕ್ಸೀರಿನದಾಗದಿದ್ದರೂ ಕಾನೂನುಬಾಹಿರವಾಗಿರಬಹುದು ಎಂಬುದನ್ನು ನೆನಪಿನಲ್ಲಿಡಬೇಕು. ತಪ್ಪು ತಿಳಿವಳಿಕೆ (ಮಿಸ್ಟೇಕ್), ಆಕಸ್ಮಿಕ ಘಟನೆ ಇತ್ಯಾದಿ ಕಾರಣಗಳನ್ನು ಮುಂದಿಟ್ಟು ನ್ಯಾಯಬಾಹಿರ ಕೃತಿಯನ್ನು ಸರಿಯೆಂದು ವಾದಿಸಲು ಅಸಾಧ್ಯವೆಂದು ಕಾಯಿದೆಯ ವಿವರಣೆ ಸ್ಪಷ್ಟಪಡಿಸುತ್ತದೆ.
  1. ಅದು ಕಾನೂನುಬಾಹಿರ ಕೃತ್ಯವಲ್ಲದಿದ್ದರೂ ಅದನ್ನು ಮಾಡುವ ವಿಧಾನ ಕಾನೂನುಬಾಹಿರವಾಗಿದ್ದರೆ ಸಹ ತಕ್ಸೀರಿನ ಒಳಸಂಚಿನ ಅಪಕೃತ್ಯ ಸ್ಥಾಪಿತವಾಗುತ್ತದೆ. ಗುರಿ ಒಳ್ಳೆಯದಿದ್ದರೆ ಸಾಲದು, ಅದನ್ನು ಸಾಧಿಸುವ ರೀತಿಯೂ ಸಮಂಜಸವಾಗಿರಬೇಕು.
  2. ಸ್ಪಷ್ಟಕೃತ್ಯದ ಅವಶ್ಯಕತೆ : ಇಂಗ್ಲಿಷ್ ನ್ಯಾಯಕ್ಕೂ ಭಾರತದ ದಂಡಸಂಹಿತೆಗೂ ಈ ವಿಚಾರದಲ್ಲಿರುವ ಭೇದವನ್ನು ಹಿಂದೆಯೇ ಹೇಳಿದೆ. ಇಂಗ್ಲಿಷ್ ನ್ಯಾಯದ ಪ್ರಕಾರ ಒಳಸಂಚಿನ ಅಪಕೃತ್ಯದ ಸ್ಥಾಪನೆಗೆ ಮೇಲೆ ಹೇಳಿದ ಮೂರು ಫಟಕಗಳು ಸಾಕು. ಭಾರತದಲ್ಲಿ ಒಪ್ಪಂದ ಮಾತ್ರವಲ್ಲದೆ ಅದನ್ನು ಸರಿಯಾಗಿ ಬೇರ್ಪಡಿಸುವ ಸ್ಪಷ್ಟಕೃತ್ಯವೂ ಅಗತ್ಯ. ಯಾವುದು ಸ್ಪಷ್ಟಕೃತ್ಯ ಎಂಬುದು ಪ್ರತಿಯೊಂದು ಮೊಕದ್ದಮೆಯ ಸಂಗತಿಯಿಂದ ನಿರ್ಧಾರವಾಗತಕ್ಕ ವಿಚಾರ.

ಒಳಸಂಚಿನ ಬಗೆಗಳು[ಬದಲಾಯಿಸಿ]

ಭಾರತದ ಕಾಯಿದೆಯಲ್ಲಿ ಎರಡು ಬಗೆಯ ಒಳಸಂಚುಗಳು ಸೇರಿವೆ. ಒಂದನೆಯದು, ಅಪಕೃತ್ಯ ಮಾಡಲು ಹೂಡಿದ ಒಳಸಂಚು. ಇದರಲ್ಲಿ ಸ್ಪಷ್ಟಕೃತ್ಯ ಮಾಡದಿದ್ದರೂ ಒಪ್ಪಂದವೇ ಒಳಸಂಚಿನ ತಪ್ಪಿಗೆ ಕಾರಣವಾಗುತ್ತದೆ. ಎರಡನೆಯದು, ಕಾನೂನುಬಾಹಿರ ಕೃತ್ಯವನ್ನು ಮಾಡಲು ಅಥವಾ ಕಾನೂನುಬಾಹಿರವಲ್ಲದ ಕೆಲಸವನ್ನು ಕಾನೂನುಬಾಹಿರ ರೀತಿಯಿಂದ ಮಾಡಲು ಮಾಡಿಕೊಂಡ ಒಪ್ಪಂದ. ಇದರಲ್ಲಿ ಒಪ್ಪಂದದ ಹೊರತಾಗಿ ಸ್ಪಷ್ಟಕೃತ್ಯವಾದರೆ ಮಾತ್ರ ಒಳಸಂಚಿನ ಅಪರಾಧಕ್ಕೆ ವ್ಯಕ್ತಿ ಗುರಿಯಾಗುತ್ತಾನೆ.

ಒಳಸಂಚಿಗೂ ಬೇರೆ ಅಪಕೃತ್ಯಗಳಿಗೂ ಇರುವ ಭೇದ[ಬದಲಾಯಿಸಿ]

ಮಿಕ್ಕ ಅಪರಾಧಗಳಲ್ಲಿ ಉದ್ದೇಶವೇ (ಇನ್ಟೆನ್ಷನ್) ಅಪಕೃತ್ಯವಾಗುವುದಿಲ್ಲ. ಉದ್ದೇಶವನ್ನು ಕಾರ್ಯಗತ ಮಾಡಲು ಏನಾದರೂ ಕೆಲಸ ಮಾಡದೆ ಅಥವಾ ಕೆಲಸ ಮಾಡಲು ಪ್ರಯತ್ನಿಸದೆ ತಪ್ಪು ಸ್ಥಾಪನೆಯಾಗುವುದಿಲ್ಲ. ಆದರೆ ಒಳಸಂಚಿನ ಅಪಕೃತ್ಯ ಉದ್ದೇಶವನ್ನು ಮುಂದುವರಿಸುತ್ತದೆ. ಕಾರ್ಯವನ್ನು ಮಾಡಲಿ ಮಾಡದಿರಲಿ, ಒಳಸಂಚಿನ ಒಪ್ಪಂದವಾದೊಡನೆ ಅಪಕೃತ್ಯ ಸ್ಥಾಪಿತವಾಗುತ್ತದೆ.

ಭಾರತೀಯ ದಂಡಸಂಹಿತೆಯ 34ನೆಯ ಪ್ರಕರಣದಲ್ಲಿ ಸಮಾನ ಉದ್ದೇಶದಿಂದ (ಕಾಮನ್ ಇನ್ಟೆನ್ಷನ್) ಅಪಕೃತ್ಯ ಮಾಡಿದವರ ವಿಚಾರ ಹೇಳಲಾಗಿದೆ. ಅದರ ಪ್ರಕಾರ ಅನೇಕರು ಒಂದು ಅಪರಾಧದ ಕೃತ್ಯವನ್ನು ಸಾಮಾನ್ಯ ಉದ್ದೇಶದಿಂದ ಮಾಡಿದ್ದರೆ ಪ್ರತಿಯೊಬ್ಬನೂ ತಾನೊಬ್ಬನೇ ಅದನ್ನು ಮಾಡಿದನೆಂಬಂತೆಯೇ ಆ ಕೃತ್ಯಕ್ಕೆ ಜವಾಬ್ದಾರಿಯಾಗಿರುತ್ತಾನೆ. 120ಎ ಪ್ರಕರಣದ ಪ್ರಕಾರ ಕಾನೂನನ್ನು ಮುರಿಯುವ ಬಗ್ಗೆ ಸಂಭವಿಸಿದ ಕೂಡುವಿಕೆಗೆ ಪ್ರಾಮುಖ್ಯವುಂಟು; ಕೃತ್ಯ ಮಾಡುವುದು ಗೌಣ. 34ನೆಯ ಪ್ರಕರಣದ ಪ್ರಕಾರ ಸಾಮಾನ್ಯ ಉದ್ದೇಶವನ್ನು ಪುರೈಸುವ ಆಶಯದಿಂದ ಕೃತ್ಯ ಮಾಡುವುದು ಮುಖ್ಯ.

ಒಳಸಂಚಿಗೆ ಸೇರಿದ ಒಬ್ಬನೊಡನೆ ಅಥವಾ ಹಲವರೊಡನೆ ಒಬ್ಬಾತ ಕೂಡಿಕೊಂಡಿದ್ದು. ಒಂದು ಕ್ರಿಯೆ ಅಥವಾ ನಿಷ್ಕ್ರಿಯೆ ಆ ಒಳಸಂಚಿನ ಅನುಸಾರ ನಡೆದಲ್ಲಿ ಆ ಮನುಷ್ಯ ದುಷ್ಪ್ರೇರಣೆ (ಅಬೆಟ್ಮೆಂಟ್) ಮಾಡುತ್ತಾನೆಂದು ಭಾರತೀಯ ದಂಡಸಂಹಿತೆಯ 107ನೆಯ ಪ್ರಕರಣದ ಎರಡನೆಯ ಕಲಮು ಹೇಳುತ್ತದೆ. ಕೇವಲ ಒಪ್ಪಂದವೇ ದುಷ್ಪ್ರೇರಣೆಯನ್ನು ಸ್ಥಾಪಿಸಲು ಸಾಕಾಗುವುದಿಲ್ಲ. ಒಂದು ಕ್ರಿಯೆ ಅಥವಾ ನಿಷ್ಕ್ರಿಯೆ ಒಳಸಂಚಿನ ಪ್ರಕಾರ ನಡೆಯಬೇಕು. ತಕ್ಸೀರಿನ ಒಳಸಂಚಿನಲ್ಲಿ ಒಪ್ಪಂದವೇ ಮುಖ್ಯ. 107ನೆಯ ಪ್ರಕರಣದ ಪ್ರಕಾರ ಜನರ ಸಂಫಟನೆ ಅಥವಾ ಅವರೊಳಗೆ ಒಪ್ಪಂದ ಇದ್ದರೆ ಮಾತ್ರ ಸಾಲದು. 120ಎ ಪ್ರಕರಣದ ಒಪ್ಪಂದ ಅಪಕೃತ್ಯದ ಇರಾದೆಯಿಂದ ಕೂಡಿದ್ದರೆ ಸಾಕು.

ಭಾರತೀಯ ದಂಡಸಂಹಿತೆ ಕೆಲವು ಒಳಸಂಚುಗಳಿಗೆ ಪ್ರತ್ಯೇಕವಾದ ಶಿಕ್ಷೆ ವಿಧಿಸಿದೆ. ಈ ಕೆಳಗಿನ ಒಳಸಂಚುಗಳನ್ನು ಅದು ಹೇಳುತ್ತದೆ :

  1. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಮೇಲೆ ಯುದ್ಧದ ಒಳಸಂಚು (121ಎ),
  2. ಅಪಕೃತ್ಯ ಮಾಡಲು ನಡೆಸಿದ ಒಳಸಂಚು,
  3. ಕಾನೂನುಬಾಹಿರ ಕಾರ್ಯ ನಡೆಸಲು ಒಳಸಂಚು,
  4. ಒಳಸಂಚಿನ ದುಷ್ಪೇ್ರರಣೆ (107),
  5. ಡಕಾಯಿತರ ಗುಂಪಿನ ಸದಸ್ಯತ್ವ (402),
  6. ಕಳ್ಳರ ತಂಡದ ಸದಸ್ಯತ್ವ (401) ಮತ್ತು
  7. ಠಕ್ಕತನ (311).

ಈ ಒಳಸಂಚುಗಳಿಗೆ ಭಾರತೀಯ ದಂಡಸಂಹಿತೆಯಲ್ಲಿ ಪ್ರತ್ಯೇಕವಾದ ಶಿಕ್ಷೆಗಳನ್ನು ಹೇಳಲಾಗಿದೆ.

ಊಲ್ಲೇಖಗಳು[ಬದಲಾಯಿಸಿ]

  1. "Conspiracy". merriam-webster.com. Retrieved December 27, 2017.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಒಳಸಂಚು&oldid=1232496" ಇಂದ ಪಡೆಯಲ್ಪಟ್ಟಿದೆ