ಒರೈಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒರೈಯನ್: ಆಕಾಶದ 88 ನಕ್ಷತ್ರಪುಂಜಗಳಲ್ಲಿ (ಕಾನ್ಸ್ಟೆಲೇಷನ್ಸ್‌) ಸುಲಭಗ್ರಾಹ್ಯವೂ ಸುಪ್ರಸಿದ್ಧವೂ ಆಗಿರುವ ಪುಂಜ (ಮಹಾವ್ಯಾಧ). ಇದರ ವ್ಯಾಪ್ತಿ ವಿಷುವದ್ವೃತ್ತದ ಇಕ್ಕೆಲಗಳಲ್ಲಿಯೂ ಇದೆ. ವಿಷುವದಂಶ (ರೈಟ್ ಅಸೆನ್ಷನ್) 4 ಗಂ. 40 ಮಿ.-6 ಗಂ. 20 ಮೀ; ಘಂಟಾವೃತ್ತಾಂಶ (ಡೆಕ್ಲಿನೇಷನ್) 110ದ.-230 ಉ. ಡಿಸೆಂಬರ್ ಜನವರಿ ತಿಂಗಳುಗಳ ಸಂಜೆಯ ಪುರ್ವಾಕಾಶದಲ್ಲಿ ಕಾಣಿಸಿಕೊಳ್ಳುವ ಈ ಪುಂಜದ ಆಕಾರ, ಇದನ್ನು ರಚಿಸುವ ಬಿಡಿ ನಕ್ಷತ್ರಗಳ ಪ್ರಕಾಶ, ಇದರ ಹಿಂದೆ ಹಬ್ಬಿರುವ ಪೌರಾಣಿಕ ಕಥೆಗಳು ಎಲ್ಲವೂ ಇದನ್ನು ವಿಜ್ಞಾನಿಗಳಿಗೂ ಸಾಹಿತಿಗಳಿಗೂ ರಸಿಕರಿಗೂ ಅತ್ಯಂತ ಆತ್ಮೀಯವನ್ನಾಗಿಸಿವೆ. ಇದರ ಆಕಾರ ತ್ರಾಪಿಜ್ಯದಂತೆ-ಪಶ್ಚಿಮ ಹಾಗೂ ಪುರ್ವಭುಜಗಳು ಸಮಾಂತರವಾಗಿವೆ; ಉತ್ತರ ಹಾಗೂ ದಕ್ಷಿಣ ಭುಜಗಳು ಮೇಲುನೋಟಕ್ಕೆ ಮೊದಲಿನವುಗಳಿಗೆ ಲಂಬವಾಗಿಯೇ ಇವೆ ಎಂದೆನ್ನಿಸುವುದು. ಆದ್ದರಿಂದ ಫಕ್ಕನೆ ನೋಡುವಾಗ ಒರೈಯನ್ ಒಂದು ಆಯತದಂತೆಯೂ ತೋರುವುದುಂಟು. ತ್ರಾಪಿಜ್ಯಾಕಾರವನ್ನು ರಚಿಸುವ ನಾಲ್ಕು ನಕ್ಷತ್ರಗಳ ವಿವರ ಹೀಗಿದೆ: ಪುರ್ವ-ಉತ್ತರ ಮೂಲೆಯ ನಕ್ಷತ್ರ ಆದಾರ್ರ್‌ (ಬೀಟ್ಲ್‌ ಜೂಸ್), ಪುರ್ವ-ದಕ್ಷಿಣ ಮೂಲೆಯ ನಕ್ಷತ್ರ ಸೈಫ್. ಇವೆರಡರ ಜೋಡಣೆ ತ್ರಾಪಿಜ್ಯದ ಪುರ್ವಭುಜ. ಪಶ್ಚಿಮ-ದಕ್ಷಿಣ ಮೂಲೆಯ ನಕ್ಷತ್ರ ರೈಗೆಲ್. ಪಶ್ಚಿಮ-ಉತ್ತರ ಮೂಲೆಯ ನಕ್ಷತ್ರ ಬೆಲ್ಲಾಟ್ರಿಕ್ಸ್‌. ಇವೆರಡರ ಜೋಡಣೆ ತ್ರಾಪಿಜ್ಯದ ಪಶ್ಚಿಮ ಭುಜ. ತ್ರಾಪಿಜ್ಯದ ಒಳಗೆ ಮೂರು ಉಜ್ಜ್ವಲ ನಕ್ಷತ್ರಗಳು ಒಂದೇ ಗೆರೆಯ ಮೇಲಿವೆ. ನಡುವಿನದು ಈ ಗೆರೆಯ ಮಧ್ಯಬಿಂದುವೂ ಹೌದು. ಇವುಗಳ ಒಟ್ಟು ಹೆಸರು ಮಹಾವ್ಯಾಧನ ನಡುಪಟ್ಟಿ (ಬೆಲ್ಟ್‌ ಆಫ್ ದಿ ಒರೈಯನ್). ಇದರಿಂದ ದಕ್ಷಿಣದ ಒತ್ತಿಗೆ (ತ್ರಾಪಿಜ್ಯದ ಒಳಗೆ) ಇರುವ ಬೆಳಕಿನ ತುಣುಕುಗಳ ಒಟ್ಟು ಹೆಸರು ಮಹಾವ್ಯಾಧನ ಖಡ್ಗ (ಡ್ಯಾಗರ್ ಆಫ್ ದಿ ಒರೈಯನ್). ಈ ವಲಯದಲ್ಲಿ ಬರಿಗಣ್ಣಿಗೆ ಕಾಣುವ ಒಂದು ನೆಬ್ಯುಲವಿದೆ. ಇದರ ಹೆಸರು ಒರೈಯನ್ ನೆಬ್ಯುಲ. ಶಾಸ್ತ್ರನಾಮ ಒ42. ಆಕಾಶಗಂಗೆಯಲ್ಲಿ ಅತ್ಯಂತ ವಿಸ್ತೃತವಾದ ಈ ನೆಬ್ಯುಲದ ಗಾತ್ರ ಸುಮಾರು 10,000 ಜ್ಯೋತಿರ್ವರ್ಷಗಳು.

ಇದರ ದೂರ ಸು. 1,600 ಜ್ಯೋತಿರ್ವರ್ಷಗಳು. ನಕ್ಷತ್ರಾಂತರ ಅನಿಲವಿರುವ ಒಂದು ಬೃಹತ್ ಪ್ರದೇಶದ ಅತಿಸಾಂದ್ರ ಭಾಗವೇ ಒರೈಯನ್ ನೆಬ್ಯುಲವೆಂದು ಊಹೆ. ಈ ನೆಬ್ಯುಲದಿಂದ ರೇಡಿಯೊ ತರಂಗಗಳು ವಿಸ್ತರಣೆಯಾಗುತ್ತಿರುವುದನ್ನು ಗುರುತಿಸಲಾಗಿದೆ. ಆದಾರ್ರ್‌ ಒಂದು ರಕ್ತದೈತ್ಯನಕ್ಷತ್ರ. ದೃಗ್ಗೋಚರ ನಕ್ಷತ್ರಗಳನ್ನು ಪ್ರಕಾಶರೀತ್ಯಾ ಪಂಕ್ತಿಸಿದರೆ ಇದಕ್ಕೆ 13ನೆಯ ಸ್ಥಾನ ಲಭಿಸುವುದು (ಸೂರ್ಯನಿಗೆ ಪ್ರಥಮಸ್ಥಾನ). ಕಾಂತಿವರ್ಗ 0.4-1.3ರ ವರೆಗೆ ವ್ಯತ್ಯಾಸಗೊಳ್ಳುವುದು. ವ್ಯತಿಕರಣಮಾಪಕ ವಿಧಾನದಿಂದ ಮೊತ್ತಮೊದಲು ಈ ನಕ್ಷತ್ರದ ತೋರ್ಕೆ ವ್ಯಾಸವನ್ನು ಅಳೆದಿದ್ದಾರೆ (1920) ಮೇಲೆ ಹೇಳಿರುವ ಪಂಕ್ತಿಯಲ್ಲಿ ರೈಗೆಲ್ ನಕ್ಷತ್ರದ ಸ್ಥಾನ 8. ಇದರ ಕಾಂತಿವರ್ಗ 0.3 ದೂರ ಸು. 545 ಜ್ಯೋತಿರ್ವರ್ಷಗಳು. ಇದೊಂದು ನೀಲ ಮಹಾದೈತ್ಯನಕ್ಷತ್ರ. ಸೂರ್ಯನಿಗಿಂತ 20,000 ಪಾಲು ಅಧಿಕ ಪ್ರಕಾಶಯುತವಾಗಿದೆ. ಮಹಾವ್ಯಾಧನ ಖಡ್ಗದ ರೇಖೆಯನ್ನು ದಕ್ಷಿಣ-ಪುರ್ವದೆಡೆಗೆ ಹಿಂದುವರಿಸಿದರೆ ಸ್ವಲ್ಪ ದೂರದಲ್ಲಿ ಆ ರೇಖೆಯ ಒತ್ತಿಗೆ ದಕ್ಷಿಣಕ್ಕೆ ಇರುವ ನೀಲಕಾಂತಿಯ ಮಹೋಜ್ಜ್ವಲ ನಕ್ಷತ್ರ ಲುಬ್ಧಕ(ಸಿರಿಯಸ್). ಸೂರ್ಯನಿಗೆ ಪ್ರಥಮಸ್ಥಾನವಿರುವ ನಕ್ಷತ್ರಪಂಕ್ತಿಯಲ್ಲಿ ಲುಬ್ಧಕದ ಸ್ಥಾನ ಎರಡನೆಯದು. ಲುಬ್ಧಕವಿರುವುದು ಮಹಾಶ್ವಾನ ನಕ್ಷತ್ರಪುಂಜದಲ್ಲಿ (ನೋಡಿ- ಮಹಾಶ್ವಾನ).

ಆದಾರ್ರ್‌-ಬೆಲ್ಲಾಟ್ರಿಕ್ಸ್‌ ನಕ್ಷತ್ರಗಳ ಜೋಡಣೆ ಮಹಾವ್ಯಾಧ ಪುಂಜದ ಉತ್ತರಬಾಹು. ಇದರ ಒತ್ತಿಗೆ ತ್ರಾಪಿಜ್ಯದ ಹೊರಗೆ (ಎಂದರೆ ಉತ್ತರಕ್ಕೆ) ಇರುವ ಬೆಳಕಿನ ತುಣುಕುಗಳ (ಸುಮಾರು ಮೂರನ್ನು ಬಿಡಿಯಾಗಿ ಎಣಿಸಬಹುದು) ಒಟ್ಟು ಹೆಸರು ಮೃಗಶಿರಾ. ಆದಾರ್ರ್‌-ಮೃಗಶಿರಾ ರೇಖೆಯನ್ನು ಮುಂದುವರಿಸಿದರೆ (ಪಶ್ಚಿಮ) ಸಮೀಪದಲ್ಲಿಯೇ ಎದುರಾಗುವ ಕೆಂಪು ನಕ್ಷತ್ರ ರೋಹಿಣಿ (ಆಲ್ಡೆಬರಾನ್). ಇದು ಸಹ ಆದಾರ್ರ್‌ದಂತೆ ಒಂದು ಕೆಂಪು ನಕ್ಷತ್ರ. ಬೆಲ್ಲಾಟ್ರಿಕ್ಸ್‌-ರೋಹಿಣಿ ಜೋಡಣೆಯನ್ನು ಮುಂದುವರಿಸಿದರೆ (ಪಶ್ಚಿಮ) ಸುಮಾರು ಅಷ್ಟೇ ದೂರದಲ್ಲಿ ಎದುರಾಗುವ ಹಲವಾರು ನಕ್ಷತ್ರಗಳ ನಿಬಿಡ ಸಮೂಹ ಕೃತ್ತಿಕಾನಕ್ಷತ್ರ ಗುಚ್ಛ. ರೋಹಿಣಿ, ಕೃತ್ತಿಕಾ ನಕ್ಷತ್ರಗಳಿರುವ ವಲಯದ ಹೆಸರು ವೃಷಭರಾಶಿ. ಹೀಗೆ ಒರೈಯನ್ ಅಥವಾ ಮಹಾವ್ಯಾಧ ನಕ್ಷತ್ರಪುಂಜದ ಪುರ್ವ-ದಕ್ಷಿಣ ಭಾಗದಲ್ಲಿ (ಅಂದರೆ ಹಿಂದೆ) ಮಹಾಶ್ವಾನ ಪುಂಜವೂ ಪಶ್ಚಿಮ-ಉತ್ತರ ಭಾಗದಲ್ಲಿ (ಅಂದರೆ ಮುಂದೆ) ವೃಷಭರಾಶಿಯೂ ಇವೆ. ಚಂದ್ರ ತಿಂಗಳಿಗೊಂದು ಸಲ ಮಹಾವ್ಯಾಧ ಪುಂಜದ ಉತ್ತರಪಾಶರ್ವ್‌ದಲ್ಲಿ ಸಮೀಪವಾಗಿ ಹಾಯುವ ಆಕಾಶಚಿತ್ರ ಆಕರ್ಷಣೀಯವಾಗಿದೆ.

ಈ ದೃಶ್ಯದ ಹಿನ್ನೆಲೆಯಲ್ಲಿ ಹೆಣೆದಿರುವ ಕಥೆಗಳು ಅಸಂಖ್ಯಾತ. ಒಂದೊಂದು ದೇಶದ ಒಂದೊಂದು ಕಾಲದ ಪುರಾಣಗಳು ಇದನ್ನು ಬಣ್ಣಿಸಿರುವ ಬಗೆ ಒಂದೊಂದು.

ಪುರಾಣಗಳಲ್ಲಿ[ಬದಲಾಯಿಸಿ]

ಹಿಂದೂಪುರಾಣಗಳಲ್ಲಿ[ಬದಲಾಯಿಸಿ]

ಹಿಂದೂ ಪುರಾಣದ ಪ್ರಕಾರ ಚತುರ್ಮುಖ ಬ್ರಹ್ಮ ತಾನೇ ಸೃಷ್ಟಿಸಿದ ವಾಗ್ದೇವಿಯ ಸೌಂದರ್ಯದಿಂದ ಕಾಮವಶನಾಗಿ ಆಕೆಯ ಬೆನ್ನಟ್ಟಿದ. ವಾಗ್ದೇವಿ ಹೆಣ್ಣುಜಿಂಕೆಯಾಗಿ ಓಡಲಾರಂಭಿಸಿದಾಗ ಬ್ರಹ್ಮ ಗಂಡು ಜಿಂಕೆ ರೂಪ ತಳೆದು ಅವಳನ್ನು ಹಿಂಬಾಲಿಸಿದ. ದೇವಲೋಕ ಬ್ರಹ್ಮನನ್ನು ಅತಿಯಾಗಿ ನಿಂದಿಸಿತು. ಆಗ ಶಂಕರ ಪಿನಾಕಪಾಣಿಯಾಗಿ ಮಹಾವ್ಯಾಧರೂಪದಿಂದ ಬಂದು ಮೃಗರೂಪಿಯಾಗಿದ್ದ ನಾಲ್ಮೊಗನ ಶಿರವನ್ನು ಕತ್ತರಿಸಿದ. ಜಿಂಕೆ ನೆಲಕ್ಕೆ ಕೆಡೆಯಿತು. ಅದರ ದೇಹದಿಂದ ನಿರ್ಗಮಿಸಿದ ತೇಜೋರಾಶಿ ಆಕಾಶದಲ್ಲಿ ಮೃಗಶಿರಾ (ಅಥವಾ ಮೃಗಶೀರ್ಷ) ನಕ್ಷತ್ರವೆಂದು ಪ್ರಖ್ಯಾತವಾಯಿತು. ಶಂಕರ ಆದಾರ್ರ್‌ನಕ್ಷತ್ರರೂಪಿಯಾಗಿ ಅದರ ಹಿಂದೆಯೇ (ಪುರ್ವ) ನೆಲೆಸಿದ. ಸರಸ್ವತಿ ರೋಹಿಣಿ ನಕ್ಷತ್ರರೂಪ ಪಡೆದಳೆಂದು ಒಂದು ಹೇಳಿಕೆ; ಕೃತ್ತಿಕಾನಕ್ಷತ್ರರೂಪ ಪಡೆದಳೆಂದು ಇನ್ನೊಂದು ಹೇಳಿಕೆ. ಇವೆರಡೂ ಮೃಗಶಿರಾನಕ್ಷತ್ರದ ಪಶ್ಚಿಮಕ್ಕೆ(ಮೊದಲು ರೋಹಿಣಿ ಮತ್ತೆ ಕೃತ್ತಿಕಾ) ಇವೆ. ಇಲ್ಲಿ ಆದಾರ್ರ್‌ ನಕ್ಷತ್ರವನ್ನು ಮಹಾವ್ಯಾಧನ ರೂಪವೆಂದು ಪರಿಗಣಿಸಿರುವುದು ತೋರುತ್ತದೆ.

ಇನ್ನೊಂದು ಕಲ್ಪನೆಯ ಪ್ರಕಾರ ಆದಾರ್ರ್‌ ನಕ್ಷತ್ರವನ್ನು ಒಳಗೊಂಡಂತೆ ನಾಲ್ಕು ಸ್ಪಷ್ಟ ನಕ್ಷತ್ರಗಳು ರಚಿಸುವ ತ್ರಾಪಿಜ್ಯಾಕಾರ ಮತ್ತು ಅದರೊಳಗಿರುವ ಮೂರು ಉಜ್ಜ್ವಲಪ್ರಕಾಶದ ಏಕರೇಖಸ್ಥ ನಕ್ಷತ್ರಗಳು-ಇವಿಷ್ಟರ ಒಟ್ಟು ಹೆಸರು ಮಹಾವ್ಯಾಧ (ಒರೈಯನ್). ಈತ ಎದುರಿಗೆ (ಪಶ್ಚಿಮ) ಇರುವ ವೃಷಭವನ್ನು ಅಟ್ಟುತ್ತಿದ್ದಾನೆ. ವೃಷಭದ ಮುಖ ಮಹಾವ್ಯಾಧನ ಕಡೆಗೆ ಇರುವಂತೆ ಚಿತ್ರಿಸಿದ್ದಾರೆ. ಆಕಾಶದ ದೈನಂದಿನ ಆವರ್ತನೆಯಲ್ಲಿ ಮಹಾವ್ಯಾಧ ಮುಂದೆ ಮುಂದೆ ಸಾಗಿದಂತೆ ವೃಷಭ ಹಿಂದೆ ಹಿಂದೆ ಸರಿಯುವುದು.

ಮೂರನೆಯ ಕಲ್ಪನೆಯ ಪ್ರಕಾರ ಶಂಕರನ ಸ್ಥಾನ ಲುಬ್ಧಕ (ಬೇಟೆಗಾರ ಎಂದು ಅರ್ಥ) ನಕ್ಷತ್ರದಲ್ಲಿದೆ. ಮಗಳಾದ ರೋಹಿಣಿಯ ಬೆನ್ನಟ್ಟುತ್ತಿದ್ದ ಬ್ರಹ್ಮನಿಗೆ ಶಂಕರ ಬಾಣ ಎಸೆದ. ಆ ಬಾಣಗಳೇ ತ್ರಾಪಿಜ್ಯದ ಒಳಗಿರುವ ಮೂರು ಏಕರೇಖಸ್ಥ ನಕ್ಷತ್ರಗಳು (ನಡುಪಟ್ಟಿ).

ಪ್ರಾಚೀನ ಈಜಿಪ್ಟ್‌ ಹಾಗೂ ಗ್ರೀಕ್ ಪುರಾಣಗಳಲ್ಲಿ[ಬದಲಾಯಿಸಿ]

ಪ್ರಾಚೀನ ಈಜಿಪ್ಟ್‌ ಹಾಗೂ ಗ್ರೀಕ್ ಪುರಾಣಗಳಲ್ಲಿ ಒರೈಯನ್ ಕಥೆಗಳು ಹಲವಾರು ಇವೆ. ಮೂರು ಪ್ರಸಿದ್ಧವಾದವನ್ನು ಇಲ್ಲಿ ಕೊಟ್ಟಿದೆ.

  • ಚಂದ್ರನ ಸೌಂದರ್ಯದ ಸ್ತ್ರೀರೂಪ ಡಯಾನ. ಇವಳು ಷೋಡಶಿ, ಸುಂದರಿ, ಸಾಹಸಪ್ರಿಯೆ, ದೊಡ್ಡ ಬಿಲ್ಲುಗಾರ್ತಿ. ಡಯಾನ ಭೂಮ್ಯಾಕಾಶಗಳಲ್ಲಿ ಸ್ವತಂತ್ರವಾಗಿ ವಿಹರಿಸಬಲ್ಲವಳಾಗಿದ್ದಳು. ಆದರೆ ಈಕೆ ಒಂದು ಕರ್ತವ್ಯವನ್ನು ನಿರ್ವಹಿಸಬೇಕಾಗಿತ್ತು-ಚಂದ್ರನನ್ನು ಆಕಾಶದಲ್ಲಿ ಕ್ರಮಬದ್ಧವಾಗಿ ಸಾಗಿಸುವ, ಹೀಗೆ ಸಾಗಿಸುವಾಗ ಭೂಮಿಗೆ ಈ ಚಂದ್ರಪ್ರಭೆಯನ್ನು ಪಸರಿಸುವ ಹೊಣೆಗಾರಿಕೆ ಇವಳದು. ಇದು ಇವಳಿಗೆ ಬಲು ಸುಲಭದ ಕೆಲಸ. ಆದರೆ ಒಂದು ದಿನ ಅಕಸ್ಮಾತ್ತಾಗಿ ಒರೈಯನನ್ನು (ಮಹಾವ್ಯಾಧ) ನೋಡಿದಳು. ಅವನ ಪರಾಕ್ರಮ, ಸೌಂದರ್ಯ, ಸಾಹಸಪ್ರವೃತ್ತಿ ಇವೆಲ್ಲವುಗಳಿಂದ ಅವಳು ಆತನಿಗೆ ಸಂಪುರ್ಣವಾಗಿ ಮಾರುಹೋದಳು. ಈ ಪ್ರೇಮಿಗಳ ಮಧುರ ಸಂಗಮದ ಪರಿಣಾಮವಾಗಿ ಡಯಾನ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನೆರವೇರಿಸಲಿಲ್ಲ. ಚಂದ್ರನ ಚಲನೆಯಲ್ಲಿ ಏರುಪೇರುಂಟಾಯಿತು. ಇದರಿಂದ ಜನರಲ್ಲಿ ಉಂಟಾದ ಕ್ಷೋಭೆಯನ್ನು ನಿವಾರಿಸಲು ಅಪೊಲೊ ಒಂದು ಹಂಚಿಕೆ ಹೂಡಿದ. ಈತ ಸೂರ್ಯತೇಜಸ್ಸಿನ ಪುರುಷರೂಪ. ಡಯಾನಳ ಅಣ್ಣ, ತಂಗಿಯನ್ನು ಗುರಿಹೊಡೆಯುವುದರ ಸ್ಪರ್ಧೆಗೆ ಆಹ್ವಾನಿಸಿದ. ಅವರು ನಿಂತಿದ್ದುದು ಸಮುದ್ರದಂಡೆಯಲ್ಲಿ. ಆಗ ಸಂಜೆ ಬೆಳಕು ಮಾಸುತ್ತಿತ್ತು. ಸಮುದ್ರವಿಡೀ ಕುದಿಯುತ್ತಿರುವ ಚಿನ್ನದ ರಸದಂತೆ ಕ್ಷೋಭೆಯಿಂದ ಕೂಡಿತ್ತು. ಅತಿದೂರದಲ್ಲಿ ತೆರೆಗಳ ಮೇಲೆ ತೇಲುತ್ತಿದ್ದ ದೊಡ್ಡ ಬಿಳಿ ವಸ್ತುವಿನೆಡೆಗೆ ಗುರಿಹೊಡೆಯುವ ಸ್ಪರ್ಧೆ. ಮೊದಲ ಎಸೆತ ಡಯಾನಳದ್ದು. ಅವಳು ಹೊಡೆದ ಬಾಣ ವ್ಯರ್ಥವಾಗಲಿಲ್ಲ. ಆದರೆ ಅದರ ಹತಿಯಿಂದ ಮೃತನಾದವ ಆಕೆಯ ಪ್ರಿಯಕರ ಒರೈಯನ್. ಡಯಾನ ಜೂಪಿಟರನ (ಬೃಹಸ್ಪತಿ) ಮರೆಹೊಕ್ಕಳು. ಅವನು ಒರೈಯನನಿಗೆ ಸ್ಥಿರನಕ್ಷತ್ರ ಪದವಿ ಅನುಗ್ರಹಿಸಿ ಡಯಾನಳಿಗೆ (ಚಂದ್ರನಿಗೆ) ಈತನನ್ನು ತಿಂಗಳಿಗೊಂದು ಸಲ ಸಮಾಗಮಿಸುವ ಭಾಗ್ಯವನ್ನು ಕರುಣಿಸಿದ. ಚಂದ್ರಬಿಂಬ ಮಹಾವ್ಯಾಧನ ಒತ್ತಿಗೆ ಉತ್ತರಕ್ಕಾಗಿ ತಿಂಗಳಿಗೊಂದು ಸಲ ಚಲಿಸುವುದೆಂಬುದನ್ನು ಇಲ್ಲಿ ಸ್ಮರಿಸಬಹುದು.
  • ಇನ್ನೊಂದು ಕಥೆಯ ಪ್ರಕಾರ ಒರೈಯನನ ಮರಣ ಸಂಭವಿಸಿದ್ದು ಚೇಳು ಕುಟುಕಿದುದರಿಂದ. ಮುಂದೆ ಚೇಳಿಗೂ ಸ್ಥಿರನಕ್ಷತ್ರ ಪದವಿ ಪ್ರಾಪ್ತವಾಯಿತು. ಇದೇ ವೃಶ್ಚಿಕ ರಾಶಿ (ವಿಷುವದಂಶ 15 ಗಂ. 45 ಮಿ.-17 ಗಂ. 55 ಮಿ.). ಆಕಾಶಗೋಳದಲ್ಲಿ ಮಹಾವ್ಯಾಧ ಮತ್ತು ವೃಶ್ಚಿಕ ಸರಿಸುಮಾರಾಗಿ ವ್ಯಾಸೀಯ ವಿರುದ್ಧ ಪುಂಜಗಳು. ಆದ್ದರಿಂದ ಒಂದು ಆಕಾಶದಲ್ಲಿ ಇರುವಾಗ ಇನ್ನೊಂದು ಮುಳುಗಿರುವುದು. ಈ ವೈರಿಗಳು ಒಬ್ಬರನ್ನೊಬ್ಬರು ನಿರಂತರವಾಗಿ ಅಟ್ಟುತ್ತಿರುವಂತೆ ಬಗೆಗಣ್ಣು ಕಂಡಿದೆ.
  • ಗ್ರೀಕ್ ಪುರಾಣದಲ್ಲಿನ ಇನ್ನೊಂದು ಕಲ್ಪನೆ ಹೀಗಿದೆ: ಒರೈಯನ್ ಒನೊಪಿಯಾನನ ಮಗಳಾದ ಮೆರೊಪಳನ್ನು ಪ್ರೀತಿಸಿದ್ದ. ಮೆರೊಪಳ ತಂದೆ ಈ ಮದುವೆಗೆ ಒಪ್ಪಲಿಲ್ಲ. ಆಕೆಯನ್ನು ಬಲಾತ್ಕಾರವಾಗಿ ಕೊಂಡೊಯ್ಯಲು ಉದ್ಯುಕ್ತನಾದಾಗ ಒನೊಪಿಯನ್ ಈತನ ಕಣ್ಣಗಳನ್ನು ಕಿತ್ತುಹಾಕಿದ. ಆಗ ಒಂದು ದಿವ್ಯವಾಣಿ ಕೇಳಿಸಿತು. ಅದರ ಪ್ರಕಾರ ಸೂರ್ಯೋದಯ ಸಮಯದಲ್ಲಿ ಸೂರ್ಯಕಿರಣಗಳು ಒರೈಯನನ ಕಣ್ಣಗುಳಿಗಳಿಗೆ ತಾಗಿದರೆ ಮತ್ತೆ ಆತನಿಗೆ ದೃಷ್ಟಿ ಬರುತ್ತದೆಂದು ತಿಳಿಯಿತು. ಒರೈಯನ್ ಅಲ್ಲಿಂದ ಲೆನ್ನೂಸ್ ಕಡೆಗೆ ಹೊರಟು ಅಲ್ಲಿ ಹೆಫೆಸ್ನಸನಿಂದ ಸೆಡಲಿಯಾನನನ್ನು ಮಾರ್ಗದರ್ಶಕನಾಗಿ ಪಡೆದು ಪುರ್ವದ ಕಡೆಗೆ ಹೊರಡುತ್ತಾನೆ. ದಿವ್ಯವಾಣಿಯಂತೆ ಅವನ ಕಣ್ಣಗಳನ್ನು ಮತ್ತೆ ಪಡೆದು ಆರ್ಟಿಮಿಸಳೊಂದಿಗೆ ಬೇಟೆಗಾರನಾಗಿ ಜೀವಿಸುತ್ತಾನೆ. ಅವನ ಮೃತ್ಯುವಿನ ಬಗ್ಗೆ ನಾನಾ ಪಾಠಾಂತರಗಳಿವೆ. ಅವನು ಚೇಳು ಕಡಿದು ಸತ್ತನೆಂದೂ ಇವೊಸಳು ಈತನನ್ನು ಪ್ರೇಮಿಸಿದುದರಿಂದ ಆರ್ಟಿಮಿಸಳು ಈತನನ್ನು ಕೊಂದಳೆಂದೂ ಒರೈಯನ್ ಆರ್ಟೆಮಿಸಳನ್ನು ಘಾಸಿಪಡಿಸಲು ಹೋದಾಗ ಆಕೆಯೇ ಈತನನ್ನು ಕೊಂದಳೆಂದೂ ಕಲ್ಪನೆಗಳಿವೆ.

ಆಕಾಶದ ದಿವ್ಯಸೌಂದರ್ಯ ಹಾಗೂ ಕ್ರಮಬದ್ಧತೆಗಳಿಗೆ ಮಾನವನ ಕಲ್ಪನೆ ಕೊಟ್ಟಿರುವ ರೂಪಗಳನ್ನಿಲ್ಲಿ ಕಾಣಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಒರೈಯನ್&oldid=815403" ಇಂದ ಪಡೆಯಲ್ಪಟ್ಟಿದೆ