ವಿಷಯಕ್ಕೆ ಹೋಗು

ಒರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒರೆ ಎಂದರೆ ಕತ್ತಿ, ಚಾಕೂ, ಅಥವಾ ಇತರ ದೊಡ್ಡ ಅಲಗನ್ನು ಹಿಡಿದಿಡುವ ಕೋಶ. ಹಿಂದಿನ ಸಹಸ್ರಮಾನಗಳಿಂದ ಒರೆಗಳನ್ನು ಅನೇಕ ಸಾಮಗ್ರಿಗಳಿಂದ ತಯಾರಿಸಲಾಗಿದೆ. ಇದರಲ್ಲಿ ಚಕ್ಕಳ, ಕಟ್ಟಿಗೆ, ಮತ್ತು ಹಿತ್ತಾಳೆ ಅಥವಾ ಉಕ್ಕಿನಂತಹ ಲೋಹಗಳು ಸೇರಿವೆ. ಅತ್ಯಂತ ಸಾಮಾನ್ಯವಾಗಿ, ಒರೆಗಳನ್ನು ಕತ್ತಿ ಪಟ್ಟಿ ಅಥವಾ ಡವಾಲಿ ಎಂದು ಕರೆಯಲ್ಪಡುವ ಭುಜಪಟ್ಟಿಯಿಂದ ನೇತಾಡಿಸಿ ಧರಿಸಲಾಗುತ್ತಿತ್ತು.

ಕಟ್ಟಿಗೆಯ ಒರೆಗಳನ್ನು ಸಾಮಾನ್ಯವಾಗಿ ಬಟ್ಟೆ ಅಥವಾ ಚಕ್ಕಳದಿಂದ ಹೊದಿಸಲಾಗುತ್ತಿತ್ತು; ಚಕ್ಕಳದ ಒರೆಗಳು ಸಾಮಾನ್ಯವಾಗಿ ಹೆಚ್ಚಿನ ಸುರಕ್ಷತೆ ಮತ್ತು ಸಾಗಿಸಲು ಸುಲಭವಾಗಲಿಕ್ಕೆ ಲೋಹದ ಜೋಡಿಕೆಗಳನ್ನು ಕೂಡ ಹೊಂದಿರುತ್ತಿದ್ದವು. ಜಪಾನ್‍ನ ಅಲಗುಗಳ ಚೂಪಾದ ಕತ್ತರಿಸುವ ಅಂಚುಗಳು ವಿಶಿಷ್ಟವಾಗಿ ಸಾಯಾ ಎಂದು ಕರೆಯಲ್ಪಡುವ ಕಟ್ಟಿಗೆಯ ಒರೆಯಿಂದ ರಕ್ಷಿತವಾಗಿರುತ್ತವೆ. ಗ್ರೀಕರು ಮತ್ತು ರೋಮನ್ನರು ಬಳಸುತ್ತಿದ್ದ ಒರೆಗಳಂತಹ ಅನೇಕ ಒರೆಗಳು ಚಿಕ್ಕದು ಮತ್ತು ಹಗುರವಾಗಿದ್ದವು. ಅವುಗಳನ್ನು ಕತ್ತಿಯನ್ನು ರಕ್ಷಿಸುವ ಬದಲಾಗಿ ಕತ್ತಿಯನ್ನು ಹಿಡಿದಿಡಲು ವಿನ್ಯಾಸಗೊಳಿಸಲಾಗುತ್ತಿತ್ತು. ಐರೋಪ್ಯ ಕಬ್ಬಿಣದ ಯುಗದಲ್ಲಿ ಪೂರ್ಣ ಲೋಹದ ಒರೆಗಳು ಗಣ್ಯರಲ್ಲಿ ಸಂಪತ್ತಿನ ಪ್ರದರ್ಶನಕ್ಕೆ ಜನಪ್ರಿಯ ವಸ್ತುಗಳಾಗಿದ್ದವು ಮತ್ತು ಹಲವುವೇಳೆ ಸಂಕೀರ್ಣವಾಗಿ ಅಲಂಕೃತವಾಗಿರುತ್ತಿದ್ದವು. ಅವುಗಳ ಕಟ್ಟಿಗೆಯ ನಿರ್ಮಾಣದ ಕಾರಣ, ಮುಂಚಿನ ಕಬ್ಬಿಣದ ಯುಗದ ಒರೆಗಳ ಬಗ್ಗೆ ಕಡಿಮೆ ತಿಳಿದಿದೆ. ಆದರೆ, ಮಧ್ಯ ಮತ್ತು ಉತ್ತರಾರ್ಧದ ಕಬ್ಬಿಣದ ಯುಗಗಳ ಅವಧಿಯಲ್ಲಿ, ಒರೆಯು ವಿಶೇಷವಾಗಿ ಅಲಂಕಾರಕ ವಿವರದ ಅಭಿವ್ಯಕ್ತಿಯಾಗಿ ಮುಖ್ಯವಾಯಿತು. ಕ್ರಿ.ಪೂ. ೨೦೦ರ ನಂತರ ಸಂಪೂರ್ಣವಾಗಿ ಅಲಂಕೃತ ಒರೆಗಳು ಅಪರೂಪವಾದವು. ಆಯುಧಗಳ ಬಲಿಗಳಿಂದ ಅನೇಕ ಪ್ರಾಚೀನ ಒರೆಗಳನ್ನು ಮರಳಿ ಪಡೆಯಲಾಗಿದೆ. ಇವು ಒಳಗಡೆ ತುಪ್ಪಳದ ಒಳಪದರವನ್ನು ಹೊಂದಿದ್ದವು.[] ಅಲಗನ್ನು ತುಕ್ಕುರಹಿತವಾಗಿಡಲು ತುಪ್ಪಳವನ್ನು ಬಹುಶಃ ಎಣ್ಣೆಎಣ್ಣೆಯಾಗಿ ಬಿಡಲಾಗುತ್ತಿತ್ತು. ತುಪ್ಪಳದ ಬಳಕೆಯಿಂದ ಕತ್ತಿಯನ್ನು ಸೆಳೆಯುವುದು ಹೆಚ್ಚು ಸುಗಮ ಮತ್ತು ಕ್ಷಿಪ್ರವಾಗಿ ಸಾಧ್ಯವಾಗುತ್ತಿತ್ತು.

ಸಂಪೂರ್ಣವಾಗಿ ಲೋಹದ ಒರೆಗಳು ಯೂರೋಪ್‍ನಲ್ಲಿ ೧೯ನೇ ಶತಮಾನದ ಮುಂಚಿನಲ್ಲಿ ಜನಪ್ರಿಯವಾದವು ಮತ್ತು ಅಂತಿಮವಾಗಿ ಬಹುತೇಕ ಇತರ ಬಗೆಗಳನ್ನು ಹಿಂದೆಹಾಕಿದವು. ಲೋಹವು ಚಕ್ಕಳಕ್ಕಿಂತ ಹೆಚ್ಚು ಬಾಳಿಕೆ ಬರುತ್ತಿತ್ತು ಮತ್ತು ಕ್ಷೇತ್ರ ಬಳಕೆಯ ತೀವ್ರತೆಗಳನ್ನು ಹೆಚ್ಚು ಉತ್ತಮವಾಗಿ ತಡೆದುಕೊಳ್ಳಬಲ್ಲವಾಗಿದ್ದವು, ವಿಶೇಷವಾಗಿ ಕುದುರೆ ಮೇಲೆ ಸವಾರಿ ಮಾಡುತ್ತಿದ್ದ ಪಡೆಗಳಲ್ಲಿ. ಇದರ ಜೊತೆಗೆ, ಲೋಹವು ಹೆಚ್ಚು ಮಿಲಿಟರಿ ನೋಟವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ನೀಡುತ್ತಿತ್ತು, ಜೊತೆಗೆ ಹೆಚ್ಚಿನ ಅಲಂಕರಣವನ್ನು ಪ್ರದರ್ಶಿಸುವ ಅವಕಾಶ ನೀಡುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. p266 & p282 Lars Jorgensen et al 2003 The spoils of Victory - The north in the shadow of the Roman Empire Nationalmuseet (National Museum of Denmark)
"https://kn.wikipedia.org/w/index.php?title=ಒರೆ&oldid=908274" ಇಂದ ಪಡೆಯಲ್ಪಟ್ಟಿದೆ