ಒರಿಯಾ ಸಾಹಿತ್ಯ
ಒರಿಯ ಸಾಹಿತ್ಯ: ವಿಪುಲವಾಗಿ ಬೆಳೆದಿರುವ ಒರಿಯ ಸಾಹಿತ್ಯಚರಿತ್ರೆಯನ್ನು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಸಂಗ್ರಹವಾಗಿ ನಿರೂಪಿಸಿ ಅದರಲ್ಲಿನ ಪ್ರಧಾನ ಘಟ್ಟಗಳನ್ನು ಪರಿಚಯ ಮಾಡಿಕೊಡುವುದೇ ಈ ಲೇಖನದ ಉದ್ದೇಶ. ೧೫ ನೆಯ ಶತಮಾನಕ್ಕೂ ಹಿಂದೆ ಅಂದರೆ ಸಾರಳಾದಾಸನಿಗಿಂತ ಹಿಂದೆ ಒರಿಯ ಸಾಹಿತ್ಯದ ಸ್ವರೂಪ ಹೇಗಿತ್ತೆಂಬುದನ್ನು ಸ್ವಲ್ಪಮಟ್ಟಿಗಾದರೂ ಅರಿತುಕೊಳ್ಳಲು ಯಾವ ಐತಿಹಾಸಿಕ ಆಧಾರಗಳೂ ದೊರೆತಿಲ್ಲ. ಆದರೂ ಸಾರಳಾದಾಸನ ಕವಿತ್ವದಲ್ಲಿ ವ್ಯಕ್ತವಾಗುವ ಪರಿಣತಿಯನ್ನು ನೋಡಿದರೆ ಆತನಿಗಿಂತ ಹಿಂದೆಯೂ ಸಾಹಿತ್ಯ ಬಹಳ ಚೆನ್ನಾಗಿ ಬೆಳೆದಿರಬೇಕೆಂಬುದನ್ನು ಸಯುಕ್ತಿಕವಾಗಿ ಊಹಿಸಬಹುದು. ಚೌತಿಸಾಢಗ. ಢಮಾಳಿ, ದಾಕವಚನ ಮತ್ತು ಇತರ ಜಾನಪದ ಸಾಹಿತ್ಯ ಪ್ರಕಾರಗಳು ಅವನ ಕಾಲಕ್ಕೆ ಬಹು ಹಿಂದೆನಯೇ ರೂಪುಗೊಂಡು ವಿಕಾಸವಾಗಿದ್ದವೆನ್ನಬಹುದು. ಒರಿಯ ಕವಿತೆಯ ಹಳೆಯ ರೂಪವೊಂದನ್ನು ಪ್ರದರ್ಶಿಸುವ ಒಂದೇ ಒಂದು ಪ್ರಾಚೀನ ಗ್ರಂಥವೆಂದರೆ ಬೌದ್ಧಗಾನ ಓ ದೋಹ. ಎಂಬತ್ತನಾಲ್ಕು ಕವಿಗಳಿಂದ ರಚಿತವಾಗಿದ್ದು ಬೌದ್ಧಧರ್ಮಕ್ಕೆ ಸಂಬಂಧಿಸಿದ ಭಾವಗೀತೆಗಳು ಇಲ್ಲಿ ಸಂಕಲಿತವಾಗಿವೆ. ಇವರು ಬೌದ್ಧತಾಂತ್ರಿಕ ಪಂಥಕ್ಕೆ ಸೇರಿದವರು. ಈ ಭಾವಗೀತೆಗಳ ಕಾಲ ೭-೧೨ ನೆಯ ಶತಮಾನದವರೆಗೆ ಹರಡಿದೆ. ಇಲ್ಲಿನ ಭಾಷೆ ಅಪಭ್ರಂಶದ ಒಂದು ಮೃದುರೂಪ. ಮಧ್ಯಯುಗದ ಮತ್ತು ಆಧುನಿಕ ಕಾಲದ ಭಾಷೆಗಿಂತ ತೀರ ಭಿನ್ನವಾದದ್ದು. ಇಲ್ಲಿನ ಗೀತೆಗಳನ್ನು ಹಳೆಯ ಬಂಗಾಳಿ ಮತ್ತು ಮೈಥಿಲೀ ಭಾಷೆಗಳ ಭಾವಗೀತೆಗಳೆಂದು ಪಂಡಿತರು ಹೇಳುವುದುಂಟು. ಇವು ಪ್ರಾಚೀನ ಒರಿಯ ಭಾವಗೀತೆಗಳೇ ಎಂದು ಡಾ. ಕಾರ್ ಗುರುತಿಸಿದ್ದಾರೆ (೧೯೫೦ ). ಈ ಗ್ರಂಥದಷ್ಟೆ ಪ್ರಾಚೀನ ಭಾಷೆಯಲ್ಲಿ ರಚಿತವಾದ ಶಿಶುವೇದವೆಂಬ ಮತ್ತೊಂದು ಗ್ರಂಥ ಬೆಳಕಿಗೆ ಬಂದಿದೆ. ಐತಿಹಾಸಿಕ ಸಾಕ್ಷ್ಯಗಳ ಕೊರತೆಯಿಂದ ಇದರ ಕಾಲವನ್ನು ನಿಷ್ಕೃಷ್ಟವಾಗಿ ತಿಳಿಯಲಾಗಿಲ್ಲ. ಆದರೂ ಇದು ಬೌದ್ಧಗಾನ ಓ ದೋಹಕ್ಕಿಂತ ಈಚಿನದೆಂದೂ ಸಾರಳಾದಾಸನಿಗೆ ಪುರ್ವದ್ದೆಂದೂ ಸಾಮಾನ್ಯವಾಗಿ ಪರಿಗಣಿತವಾಗಿದೆ.
ಕೆಲವು ಗ್ರಂಥಗಳನ್ನು ಸಾರಳಾದಾಸನಿಗಿಂತ ಪುರ್ವದವೆಂದು ಹೇಳಲು ಸರಿಯಾದ ಐತಿಹಾಸಿಕ ಆಧಾರಗಳು ಇಲ್ಲವಾದ್ದರಿಂದ ಸದ್ಯಕ್ಕೆ ಇಷ್ಟು ಹೇಳಬಹುದು. ಆ ಕಾಲದಲ್ಲಿ ಸಂಸ್ಕೃತ ಸಾಹಿತ್ಯದ ಪ್ರಭಾವ ಒರಿಯದಲ್ಲಿ ಪ್ರಬಲವಾಗಿತ್ತಲ್ಲದೆ ಪ್ರಾಂತೀಯ ಸಾಹಿತ್ಯ ಜಾಗರೂಕತೆಯಿಂದ ತನ್ನ ಸ್ವರೂಪವನ್ನು ಪಡೆಯುತ್ತಿತ್ತು. ಮೇಲೆ ಹೇಳಿದ ಗ್ರಂಥಗಳು ಅಪಭ್ರಂಶದ ಕಾಲ ಮುಗಿಯುತ್ತಿದ್ದಂತೆ ಹುಟ್ಟಿದವೆನ್ನಬಹುದು.
ಸಾರಳಾ ಯುಗ
[ಬದಲಾಯಿಸಿ]ಒರಿಯ ಸಾಹಿತ್ಯದ ಜನಕನೆಂದು ಪ್ರಖ್ಯಾತನಾದ ಸಾರಳಾದಾಸ ೧೫ ನೆಯ ಶತಮಾನದಲ್ಲಿ, ಒರಿಸ್ಸದ ಗಜಪತಿಯಾದ ಕಪಿಳೇಂದ್ರ ದೇವನ ಆಳ್ವಿಕೆಯಲ್ಲಿದ್ದವ. ಮಹಾಭಾರತ, ಬಿಲಂಕಾ ರಾಮಾಯಣ ಮತ್ತು ಚಂಡೀ ಪುರಾಣಗಳು ಇವನ ಕೃತಿಗಳು. ಮಹಾಭಾರತದಲ್ಲಿ ೧೮ ಭಾಗಗಳಿವೆ. ಅದು ಮೂಲ ಸಂಸ್ಕೃತ ಭಾರತಕ್ಕಿಂತ ವರ್ಣನೆಯಲ್ಲೂ ಉದ್ದೇಶದಲ್ಲೂ ಭಿನ್ನವಾಗಿದೆ. ದೇಶದ ದೈನಂದಿನ ಮತ್ತು ಸಾಮಾಜಿಕ, ಸಾಂಸ್ಕೃತಿಕ ಜೀವನವನ್ನು ಆಧರಿಸಿ ಕವಿ ಅದರಲ್ಲಿ ಅನೇಕ ತನ್ನದೇ ಆದ ಹೊಸ ಕಥೆಗಳನ್ನು ಅಳವಡಿಸಿದ್ದಾನೆ. ಅವು ಹೇರಳವಾಗಿ ಜನಪ್ರೀತಿಯನ್ನು ಗಳಿಸಿವೆ. ಪಾತ್ರಚಿತ್ರಣದಲ್ಲೂ ಪ್ರಕೃತಿವರ್ಣನೆಯಲ್ಲೂ ಕವಿ ತನ್ನ ಸಾಮಥರ್ಯ್‌ವನ್ನು ಪ್ರಕಟಿಸಿದ್ದಾನೆ. ಜೊತೆಗೆ ಈತನ ವೈಷ್ಣವ ತತ್ತ್ವಗಳು ಮಹಾಭಾರತದ ವಸ್ತುವಿನೊಂದಿಗೆ ಚೆನ್ನಾಗಿ ಮಿಳಿತವಾಗಿರುವುದು ಕಂಡುಬರುತ್ತದೆ. ಈತನ ವರ್ಣನೆಗಳಲ್ಲಿ ದೇಸೀಯತೆ ಕಂಪಿಟ್ಟಿದೆ. ಬಿಲಂಕಾ ರಾಮಾಯಣ ಸಂಸ್ಕೃತದ ಅದ್ಭುತರಾಮಾಯಣದ ಪ್ರಭಾವವನ್ನು ತೋರುವ ಗ್ರಂಥವೆಂದು ಕೆಲವು ಪಂಡಿತರ ಅಭಿಪ್ರಾಯ. ಮಹಾತಾಯಿ ಚಂಡಿಯ ಶಕ್ತಿಯನ್ನು ಪ್ರದರ್ಶಿಸಲು ರಚಿತವಾದ ಪೌರಾಣಿಕ ಕೃತಿ ಚಂಡೀಪುರಾಣ. ಯಮದೇವತೆ ತನ್ನನ್ನು ಕೊಲ್ಲಲಾಗದ ಮಟ್ಟಿಗೆ ಶಕ್ತಿವಂತನಾಗಿ ಬೆಳೆದ ಮಹಿಷಾಸುರನನ್ನು ದೇವತೆಗಳೆಲ್ಲರ ಪ್ರಾರ್ಥನಾಫಲವಾಗಿ ಎದ್ದ ಕಿಚ್ಚಿನಿಂದ ಮೂಡಿಬಂದ ಮಹಿಷಾಸುರ ಮರ್ದಿನಿ ನಿರ್ನಾಮ ಮಾಡಿದ ವಿಷಯ ಇಲ್ಲಿ ವರ್ಣಿತವಾಗಿದೆ.
ಸಾರಳಾದಾಸನ ಎಲ್ಲ ಕೃತಿಗಳಲ್ಲೂ ಯುದ್ಧದ ವರ್ಣನೆಗಳು ವಿಪುಲವಾಗಿವೆ. ಈ ವರ್ಣನೆಗಳು ಜೀವಕಳೆಯಿಂದ ತುಂಬಿದ್ದು ಓದುಗರ ಮನಸ್ಸಿನ ಮುಂದೆ ಆಯಾ ದೃಶ್ಯಗಳನ್ನು ಪರಿಣಾಮಕಾರಿಯಾಗಿ ತಂದು ನಿಲ್ಲಿಸಿಬಿಡುತ್ತವೆ. ತನ್ನ ರಾಜ್ಯವನ್ನು ವಿಸ್ತರಿಸುವುದಕ್ಕಾಗಿ ದೀರ್ಘಕಾಲದವರೆಗೂ ಹೋರಾಟದಲ್ಲೇ ತೊಡಗಿದ್ದ ಒರಿಸ್ಸದ ಪ್ರಭು ಕಪಿಳೇಂದ್ರನ ಕಾಲದಲ್ಲಿ ಈ ಕವಿ ಚಿತ್ರಿಸಿರುವ ಯುದ್ಧಗಳು ಐತಿಹಾಸಿಕ ದೃಷ್ಟಿಯಿಂದ ಗಮನಾರ್ಹವಾಗಿವೆ.
ಸಾರಳಾದಾಸ ತೀರಿಕೊಂಡ ತರುಣದಲ್ಲೇ ಕಲಸ ಚೌತಿಸಾ ಎಂಬುದನ್ನು ರಚಿಸಿದ ಬಚ್ಛದಾಸನೆಂಬ ಮತ್ತೊಬ್ಬ ಕವಿ ಪ್ರವರ್ಧಮಾನಕ್ಕೆ ಬಂದ. ಈ ಕೃತಿಯ ವಸ್ತು ಪಾರ್ವತೀಪರಮೇಶ್ವರರ ವಿವಾಹ. ಹಾಸ್ಯರಸ ನಿರೂಪಣೆಯಲ್ಲಿ ಈ ಕವಿ ತನ್ನ ಚಾತುರ್ಯವನ್ನು ಪ್ರಕಟಿಸಿದ್ದಾನೆ. ಹಾಗೂ ಕಥಾನಾಯಕಿಯ ವರ್ಣನೆಯಲ್ಲಿ, ವಿವಾಹಪ್ರಸಂಗದಲ್ಲಿ ಒರಿಸ್ಸದ ರೂಪವತಿಯರ, ವಿವಾಹ ಪದ್ಧತಿಯ ವಿವರಗಳನ್ನು ತಂದಿದ್ದಾನೆ. ಹೆಸರೆತ್ತಿ ಹೇಳಬಹುದಾದ ಆ ಕಾಲದ ಮತ್ತೊಂದು ಚೌತಿಸಾ ಯಾವುದೆಂದರೆ ದಾಮೋದರ ಕವಿ ಪ್ರಣೀತವಾದ ರಾಸಕುಲ್ಯಾ. ಈ ಕೃತಿಯ ವಸ್ತು ರಾಧಾಕೃಷ್ಣರ ಪ್ರಣಯ. ರಾಧಾಕೃಷ್ಣರ ವಿರಹದ ವರ್ಣನೆಯನ್ನು ಓದುತ್ತಿರುವಾಗ ಓದುಗರ ಮನಸ್ಸು ಕರಗಿಹೋಗುತ್ತದೆ. ಅರ್ಜುನದಾಸನ ರಾಮ ಬಿಭಾ ಎಂಬ ಕೃತಿಯಲ್ಲಿ (೧೪೮೦ -೧೫೧೦] ರಾಮಚಂದ್ರ ಪರಶುರಾಮನನ್ನು ಕಾಣುವ ಸಂದರ್ಭದವರೆಗಿನ ಕಥೆ ವರ್ಣಿತವಾಗಿದೆ. ಈ ಕೃತಿಯ ಮುಖ್ಯವಸ್ತು ರಾಮಾಯಣದಿಂದ ತೆಗೆದುಕೊಂಡದ್ದು. ಈ ಕಾಲದ ಇನ್ನೂ ಕೆಲವು ಕೃತಿಗಳಿರಬೇಕು. ಆದರೆ ಖಚಿತವಾದ ಸಾಕ್ಷ್ಯಗಳಿಲ್ಲದ್ದರಿಂದ ಒರಿಯ ಭಾಷೆ ಮತ್ತು ಸಾಹಿತ್ಯ ವಿಮರ್ಶಕರು ಅಂಥವನ್ನು ಹೆಸರಿಸುವ ವಿಚಾರದಲ್ಲಿ ಮೌನ ತಾಳಿದ್ದಾರೆ. ವೈಷ್ಣವ ಅಥವಾ ಪಂಚಸಖಾಯುಗ: 16ನೆಯ ಶತಮಾನದ ಆದಿ ಭಾಗದಲ್ಲಿ ವೈಷ್ಣವ ಕವಿಗಳ ಕೈಯಲ್ಲಿ ಸಾಹಿತ್ಯ ಹೊಸ ರೂಪವನ್ನು ಪಡೆಯಿತು. ಸಾರಳಾದಾಸನ ಕಾಲದಲ್ಲೂ ವೈಷ್ಣವ ಸಂಪ್ರದಾಯವಿತ್ತಾದರೂ ಪ್ರಖ್ಯಾತ ವಿಷ್ಣು ಭಕ್ತನಾದ ಶ್ರೀಚೈತನ್ಯ ಬಂಗಾಳದಿಂದ ಪುರಿಗೆ ಬಂದಾಗ (೧೫೧೦ ) ಅದಕ್ಕೆ ಹೊಸ ರಂಗು ಬಂತು. ಒರಿಸ್ಸದ ವೈಷ್ಣವ ಪಂಥಕ್ಕಿಂತ ಭಿನ್ನವಾದ ಚೈತನ್ಯನ ಪಂಥ ಅಲ್ಲಿನ ವೈಷ್ಣವ ಕವಿಗಳ ಮೇಲೆ ಪ್ರಭಾವ ಬೀರಿತು. ಆದುದರಿಂದ ಆ ಎರಡು ಪಂಥಗಳೂ ಎಂದರೆ ಗೌಡೀಯ ಪಂಥ ಮತ್ತು ಒರಿಯ ಪಂಥಗಳು ಒರಿಸ್ಸದಲ್ಲಿ ಆ ಕಾಲದಿಂದಲೂ ಸ್ವೀಕೃತವಾದುವು. ಪುರಿಯ ಅಧಿದೈವ ಜಗನ್ನಾಥ ಒರಿಸ್ಸದ ಹೊರಗಣ್ಣಿಂದ ಅನೇಕ ಉಪದೇಶಕರನ್ನು ತನ್ನತ್ತ ಸೆಳೆದನಲ್ಲದೆ ಎಲ್ಲ ವೈಷ್ಣವ ಪಂಥಗಳ ಭಕ್ತಿಮಾರ್ಗಗಳಿಗೂ ತಾನೇ ಆಕರನಾದ.
ಆ ಕಾಲದಲ್ಲಿ ಪಂಚಸಖರೆಂದು ಹೆಸರಾಂತ ಬಳರಾಮದಾಸ, ಜಗನ್ನಾಥದಾಸ, ಅಚ್ಯುತಾನಂದದಾಸ, ಜಸೋವಂತ ದಾಸ ಮತ್ತು ಅನಂತದಾಸ ಎಂಬ ಐವರಿದ್ದರು. ಜನರಿಗೆ ಉಪದೇಶಮಾಡಲು ಇವರು ಒಂದುಗೂಡಿದ್ದರ ಫಲವಾಗಿ ಒರಿಯ ಸಾಹಿತ್ಯ ಶ್ರೀಮಂತವಾಯಿತು. ಬಳರಾಮದಾಸನ ದಾಂದಿ ರಾಮಾಯಣ, ಜಗನ್ನಾಥದಾಸನ ಒರಿಯ ಭಾಗವತ, ಅಚ್ಯುತಾನಂದದಾಸನ ಹರಿವಂಶ-ಎಂಬುವು ಈ ಕಾಲದ ಮೂರು ರತ್ನಗಳು. ಇವುಗಳ ಜೊತೆಗೆ, ಈ ಸಾಧುಗಳು ತಮ್ಮ ಮತಪ್ರಚಾರಕ್ಕಾಗಿ ಧಾರ್ಮಿಕ ಕಾವ್ಯಗಳನ್ನು ವಿಪುಲವಾಗಿ ರಚಿಸಿದರು. ಈ ಸಾಧುಗಳ ಅನೇಕ ಕೃತಿಗಳಲ್ಲಿ ಜಗನ್ನಾಥ ಪ್ರಭುವೂ ಕೃಷ್ಣನೂ ವರ್ಣಿತರಾಗಿದ್ದಾರೆ. ಕೃತಿಗಳಲ್ಲಿ ಈ ಸಂತರ ದಿವ್ಯಶಕ್ತಿ ನೆಲೆಸಿದೆ. ಜಗನ್ನಾಥದಾಸನ ಒರಿಯ ಭಾಗವತ ದೇಶದಲ್ಲೆಲ್ಲ ತನ್ನ ಪ್ರಭಾವವನ್ನು ಬೀರಿದೆ. ಧರ್ಮದ ಕಠಿಣ ಸಮಸ್ಯೆಗಳೆಲ್ಲವನ್ನೂ ಸರಳವೂ ವಿಶದವೂ ಆದ ರೀತಿಯಲ್ಲಿ ದೈನಂದಿನ ಜನಜೀವನದ ಉದಾಹರಣೆಗಳಿಂದ ಈ ಕವಿ ಬಿಡಿಸಿದ್ದಾನೆ. ಭಾಗವತ ಎಷ್ಟು ಪವಿತ್ರ ಗ್ರಂಥವೆನಿಸಿತ್ತೆಂದರೆ ಅದನ್ನು ಪ್ರತಿಯೊಂದು ಹಳ್ಳಿಯಲ್ಲಿಯೂ ಒಂದು ಗುಡಿಯಲ್ಲೋ ಮಂದಿರದಲ್ಲೋ ಇಟ್ಟು ಜನ ಪುಜಿಸುತ್ತಿದ್ದರು. ಗ್ರಾಮಗಳ ಪ್ರಾಥಮಿಕ ಶಾಲೆಗಳಲ್ಲಿ ಹುಡುಗರಿಗೆ ಒರಿಯ ಸಾಹಿತ್ಯವನ್ನು ಕಲಿಸಲು ಇದೇ ಪ್ರಧಾನ ಪಠ್ಯಪುಸ್ತಕವಾಗಿತ್ತು.
ದಾಂದಿ ರಾಮಾಯಣ ಮತ್ತು ಹರಿವಂಶಗಳು ಒರಿಸ್ಸದಲ್ಲಿ, ಅದರಲ್ಲೂ ವೃದ್ಧ ಜನರ ಶಾಸ್ತ್ರಾಚರಣೆಗಳಲ್ಲಿ, ತುಂಬ ಪ್ರಾಶಸ್ತ್ಯಗಳಿಸಿದುವು. ಆದರೆ ಈ ಎರಡು ಗ್ರಂಥಗಳಿಗಿಂತ ಭಾಗವತ ನಿಸ್ಸಂದೇಹವಾಗಿ ಹೆಚ್ಚು ಜನಪ್ರಿಯವಾಗಿದ್ದ ಕೃತಿ.
ಆ ಕಾಲದ ಒರಿಯ ಸಾಹಿತ್ಯದಲ್ಲಿ ಗೀತಾ, ಸಂಹಿತಾ, ಮಳಿಕಾ, ಕೊಯಿಲೆ. ಮಾಹಾತ್ಮ್ಯ, ಸಂಬಾದ-ಮುಂತಾದ ಅನೇಕ ಸಾಹಿತ್ಯಪ್ರಕಾರಗಳು ಉದಿಸಿದುವು. ಅನೇಕ ಗ್ರಂಥಗಳ ರಚನೆಯಾಗಿ ತನ್ಮೂಲಕ ಜಾತಿಮತ ಭೇದವಿಲ್ಲದೆ ಅನೇಕ ಮಂದಿ ಓದು ಕಲಿತು ಅವನ್ನು ಓದುವಂತಾದುದು ಆ ಕಾಲದ ಮುಖ್ಯ ಧೋರಣೆ. ಆಗಿನ ಅರಸನಾದ ಪ್ರತಾಪರುದ್ರದೇವ ವೈಷ್ಣವಭಾವನೆಯಿಂದ ತುಂಬ ಪ್ರಭಾವಿತನಾಗಿದ್ದ. ಆಗಿನಿಂದ ಒರಿಸ್ಸದಲ್ಲಿ ವೈಷ್ಣವ ಮತ ಹರಡಿದ್ದರ ಫಲವಾಗಿ ಒರಿಸ್ಸದ ಸೈನಿಕರು ಕಾದುವುದರಲ್ಲಿ ಅನಾಸ್ಥೆಯನ್ನು ತಾಳಿ ಶತ್ರುಗಳ ಆಕ್ರಮಣಕ್ಕೆ ಅವಕಾಶ ಕೊಡುವಂತಾದರೆಂದು ಒಂದು ಅಪವಾದವಿದೆ.
ಕೇಶವ ಕೊಯಿಲಿ ಎಂಬುದು ಕೃಷ್ಣನ ಅಗಲಿಕೆಯನ್ನು ತಾಳದೆ ಯಶೋದೆ ಪಟ್ಟ ಪರಿತಾಪವನ್ನು ವರ್ಣಿಸುವ ಕೃತಿ. ಈ ಕಾರಣಕ್ಕಾಗಿಯೇ ಇದು ತುಂಬ ಜನಪ್ರಿಯವಾಗಿದೆ. ಪಂಚಸಖರಿದ್ದ ಕಾಲದಲ್ಲೋ ಅವರ ತರುವಾಯವೋ ಇದು ರಚಿತವಾದುದೆಂದು ಭಾವಿಸಲಾಗಿದೆ. ಈ ಕೃತಿಯ ಕವಿಯಾದ ಮಾರ್ಕಂಡದಾಸನ ವಿಚಾರವಾಗಿ ಯಾವ ಸಂಗತಿಯೂ ತಿಳಿದುಬಂದಿಲ್ಲ. ಗಜಪತಿ ಪ್ರತಾಪರುದ್ರನ ಕಾಲದಲ್ಲಿದ್ದ ರಾಯ ರಮಾನಂದ ಎಂಬ ವೈಷ್ಣವ ಕವಿ ಬ್ರಜಬೋಲಿಯಲ್ಲಿ ಅನೇಕ ಭಾವಗೀತೆಗಳನ್ನು ಬರೆದ. ಇದು ಚೈತನ್ಯದೇವನ ಜನಪ್ರಿಯ ತತ್ತ್ವವನ್ನು ಅನಕ್ಷರಸ್ಥರಾದ ಹಳ್ಳಿಯ ಜನರಲ್ಲಿ ಹರಡಲು ಮೊದಲ ಹೆಜ್ಜೆಯೆನಿಸಿತು. ರಾಮಾನಂದನ ಸಮಕಾಲೀನಳಾದ ಮಾಧಬಿ ದಾಸಿ ಕೂಡ ಬ್ರಜಬೋಲಿಯಲ್ಲಿ ಅನೇಕ ಗೀತೆಗಳನ್ನು ರಚಿಸಿದಳೆಂದು ಹೇಳಲಾಗಿದೆ. ಒರಿಸ್ಸದ ವೈಷ್ಣವ ಪಂಥದ ದಿವಾಕರದಾಸನೆಂಬಾತ ಜಗನ್ನಾಥದಾಸನೆಂಬ ಮಹಾ ವೈಷ್ಣವ ಭಕ್ತನ ಜೀವನಚರಿತ್ರೆಯಾದ ಜಗನ್ನಾಥಚರಿತಾಮೃತವನ್ನು ರಚಿಸಿದ. 16ನೆಯ ಶತಮಾನದ ಆದಿಭಾಗದಲ್ಲಿದ್ದ ಶಿಶು ಶಂಕರದಾಸ ಉಷಾಬಿಲಾಸ ಎಂಬ ಕೃತಿಯನ್ನು ರಚಿಸಿದ. ಇದು ಬಾಣಾಸುರನ ಮಗಳಾದ ಉಷೆ ಮತ್ತು ಅನಿರುದ್ಧರ ವಿಚಾರವನ್ನು ಕುರಿತುದಾಗಿದೆ. ಇದರ ಕಥಾವಸ್ತುವನ್ನು ಕವಿ ಸಂಸ್ಕೃತ ಭಾಗವತ, ಸಾರಳಾ ಮಹಾಭಾರತ ಮತ್ತು ಹರಿವಂಶಗಳಿಂದ ತೆಗೆದುಕೊಂಡಿದ್ದಾನೆ. ಹರಿಹರದಾಸನ ಚಂದ್ರಾವತಿಬಿಲಾಸ ಎಂಬುದು ದುರ್ಯೋಧನನ ಮಗಳಾದ ಚಂದ್ರಾವತಿ ಶ್ರೀಕೃಷ್ಣನ ಮಗನೊಡನೆ ವಿವಾಹವಾದ ಪ್ರಸಂಗವನ್ನು ಅವಲಂಬಿಸಿ ರಚಿತವಾಗಿದೆ. ಇದರ ಸಂವಿಧಾನ ಮತ್ತು ಶೈಲಿ ಉಷಾಬಿಲಾಸದ ಹಾಗಿವೆ. ಕಾರ್ತಿಕ್ದಾಸನ ರುಕ್ಮಣೀಬಿಭಾ ಎಂಬುದು ಶ್ರೀಕೃಷ್ಣರುಕ್ಮಿಣಿಯರ ವಿವಾಹವನ್ನು ನಿರೂಪಿಸುತ್ತದೆ. ಶಿಶುಪಾಲನೊಡನೆಯೂ ಜರಾಸಂಧನೊಡನೆಯೂ ಶ್ರೀಕೃಷ್ಣ ಹೋರಾಡಿದುದರ ವರ್ಣನೆ ತುಂಬ ಮನೋಹರವಾಗಿದೆ. ಪ್ರಕೃತಿ ಮತ್ತು ಸಾಮಾಜಿಕ ಸಂಪ್ರದಾಯಗಳ ವರ್ಣನೆಗಳಲ್ಲಿ ಕವಿ ತನ್ನ ಶಕ್ತಿಯನ್ನು ಪ್ರಕಟಿಸಿದ್ದಾನೆ.
ಕೃಷ್ಣಲೀಲಾ, ರಾಸಲೀಲಾ, ಗುಪ್ತಗೀತಾ ಎಂಬುವನ್ನು ರಚಿಸಿದ ಎರಡನೆಯ ಬಳರಾಮದಾಸ, ರಾಧಾಕೃಷ್ಣ ಲೀಲಾಮೃತವನ್ನು ಬರೆದ ದೀನಬಂಧುದಾಸ, ಮಧುಪಚೌತಿಹಾಸವನ್ನು ರಚಿಸಿದ ಗೋಪೇಂದ್ರದಾಸ, ಶ್ರೀಕೃಷ್ಣನ ಮೇಲೆ ಅನೇಕ ಭಾವಗೀತೆಗಳನ್ನು ಬರೆದ ಸಾಲಬೆಗ, ಬನ್ಸಿ ಚೋರಿಯನ್ನು ಬರೆದ ಚಾಂದಕವಿ ಮುಂತಾದ ಕೆಲವು ಗೌಣಕವಿಗಳು ತಮ್ಮ ಕೃತಿಗಳನ್ನು ಈ ಕಾಲದ ಸಾಹಿತ್ಯಕ್ಕೆ ಅರ್ಪಿಸಿದ್ದಾರೆ.
ಹೀಗೆ ೧೫ ಮತ್ತು೧೬ನೆಯ ಶತಮಾನಗಳ ಸು. ಇನ್ನೂರು ವರ್ಷಗಳಿಗಿಂತಲೂ ಹೆಚ್ಚಿನ ಸಾಹಿತ್ಯಾವಧಿಯಲ್ಲಿ ರಾಧಾಕೃಷ್ಣರ ಪರವಾದ ಕಾವ್ಯವೇ ಬೆಳೆದು ಆ ಯುಗಕ್ಕೆ ವೈಷ್ಣವಯುಗವೆಂಬ ಹೆಸರನ್ನು ತಂದಿದೆ. ಈ ಪ್ರಸಂಗಗಳನ್ನೇ ಕವಿಗಳು ಏಕೆ ಆರಿಸಿಕೊಂಡರೆಂದರೆ ಅವರೆಲ್ಲರೂ ಪ್ರಧಾನವಾಗಿ ವೈಷ್ಣವರು. ಆದ್ದರಿಂದ ಅವರು ಸಹಜವಾಗಿಯೇ ದೇವರನ್ನು ಪ್ರಣಯಿಯೆಂದು ಭಾವಿಸಿ ಅವನೊಡನೆ ಒಡಗೂಡುವ ಅತೀಂದ್ರಿಯಾನುಭೂತಿಯನ್ನೇ ತಮ್ಮ ಪರಮ ಧ್ಯೇಯವಾಗಿಟ್ಟುಕೊಂಡಿದ್ದರು. ಈ ಉದ್ದೇಶಕ್ಕೆ ರಾಧಾಕೃಷ್ಣರ ಪ್ರಸಂಗಗಳು ಬಹು ಸಮೀಚೀನವಾಗಿ ಒದಗಿದ್ದವು.
ಒರಿಯ ಸಾಹಿತ್ಯದಲ್ಲಿ ೧೭ನೆಯ ಶತಮಾನ ಎರಡು ಯುಗಗಳ ಸಂಧಿಕಾಲವಾಗಿತ್ತು. ಪಂಚಸಖಾ ಅಥವಾ ವೈಷ್ಣವಯುಗ ಕಳೆದ ತರುವಾಯದ ಮತ್ತು ಉಪೇಂದ್ರ ಭಂಜಯುಗ ಅಥವಾ ಕಾವ್ಯಸಾಹಿತ್ಯದ ಯುಗಕ್ಕೆ ಮುಂಚಿನ ಒಂದು ನೂರು ವರ್ಷಗಳ ಅವಧಿ ಸಾಹಿತ್ಯ ವಿಷಯಕವಾದ ಚರ್ಚೆಗೆ ತುಂಬ ಪ್ರಧಾನವಾಗಿದೆ. ಈ ಅವಧಿಯಲ್ಲಿ ಪ್ರಾಚೀನ ಒರಿಯ ಸಾಹಿತ್ಯದ ಮೇಲ್ಪಂಕ್ತಿಯನ್ನು ಅನುಸರಿಸಿ ಕೆಲವು ಕೃತಿಗಳು ರಚಿತವಾದುವು. ಕವಿಗಳಲ್ಲಿ ಅನೇಕರು ಸಂಸ್ಕೃತ ಕಾವ್ಯಸಾಹಿತ್ಯದಿಂದ ಪ್ರಭಾವಿತರಾಗಿದ್ದರು. ಈ ಶತಮಾನದಲ್ಲಿ ಕವಿಗಳು ಈ ರೀತಿಯಾಗಲು ದೇಶದ ಐತಿಹಾಸಿಕ ಪರಿಸ್ಥಿತಿ ಸಹಾಯಕವಾಗಿತ್ತು. ಇದು ಹೇಗಾದರೂ ಇರಲಿ, ಈ ಶತಮಾನದಲ್ಲಿ ಒರಿಯ ಕಾವ್ಯಸಾಹಿತ್ಯಕ್ಕೆ ಒಳ್ಳೆ ತಳಪಾಯ ಬಿದ್ದಿತು. ಇದು ಹದಿನೆಂಟನೆಯ ಶತಮಾನದಲ್ಲಿ ಉಪೇಂದ್ರಭಂಜನ ಕೈಯಲ್ಲಿ ಬೇರೆ ರೂಪ ಪಡೆಯಿತು. ಈ ಪ್ರಕಾರವಾಗಿ ಉಪೇಂದ್ರಭಂಜ ಹಾಕಿಕೊಟ್ಟ ಕಾವ್ಯಸಂಪ್ರದಾಯ ಸುಮಾರು ನೂರೈವತ್ತು ವರ್ಷಗಳ ಕಾಲ ನಡೆಯಿತು.
೧೭ನೆಯ ಶತಮಾನದ ಸಾಹಿತ್ಯವನ್ನು ಸರಳ ಮತ್ತು ಸುಂದರ ಶೈಲಿಗಳ ಸಮ್ಮಿಶ್ರಣವೆಂದು ಹೇಳಬಹುದು. ಕಾವ್ಯದ ಸಾಲುಗಳು ಕೆಲವು ವೇಳೆ ಯಾವ ಗೋಜುಗಳೂ ಇಲ್ಲದೆ ವಿಶದವಾಗಿದ್ದು ಪ್ರಾಚೀನ ಒರಿಯ ಸಾಹಿತ್ಯದ ಸುಂದರ ರತ್ನಗಳನ್ನು ನೆನಪಿಗೆ ತರುತ್ತವೆ. ಮತ್ತೆ ಕೆಲವು ಸಮಯ ಶ್ರೀಮಂತವೂ ವರ್ಣರಂಜಿತವೂ ಆಗಿದ್ದು ಅದು ಕಾವ್ಯಸಾಹಿತ್ಯದ ಒಂದು ಮಹಾಸುದಿನದ ಉಷಃಕಾಲವೋ ಎಂದು ಅಚ್ಚರಿಪಡುವಂತೆ ಮಾಡುತ್ತವೆ.
೧೭ನೆಯ ಶತಮಾನದ ಆದಿಭಾಗದಲ್ಲಿ ಇದ್ದ ರಾಮಚಂದ್ರ ಪಟ್ಟನಾಯಕನ ಸ್ವೋಪಜ್ಞಕೃತಿ ಹಾರಾವತಿ ಎಂಬುದು ಸಾಮಾನ್ಯ ಜನವರ್ಗದಿಂದ ಆಯ್ದುಕೊಂಡ ನಾಯಕನಾಯಕಿಯರಿಬ್ಬರ ಪ್ರಣಯ ಪ್ರಸಂಗವನ್ನು ಅವಲಂಬಿಸಿದೆ. ಹಾರಾವತಿ ಎಂಬ ಕಥಾನಾಯಕಿಯ ಹೆಸರನ್ನೇ ಕೃತಿಗೂ ಕೊಟ್ಟಿದೆ. ೧೭ ನೆಯ ಶತಮಾನದ ಆದಿಭಾಗದಲ್ಲಿದ್ದ ಪ್ರತಾಪರಾಯ್ ಎಂಬಾತನಿಂದ ವಿರಚಿತವಾದ ಶಶಿಸೇಣಾ ಎಂಬುದೂ ಶೃಂಗಾರರಸಭೂಯಿಷ್ಟವಾದ ಕಲ್ಪಿತ ಕಥೆ. ಒರಿಸ್ಸದಲ್ಲಿ ಜನಪ್ರಿಯವಾಗಿರುವ ಹಳಾಹಳ ಕುಮಾರನ ಕಥೆಯನ್ನು ಅವಲಂಬಿಸಿ ಇದು ರಚಿತವಾಗಿರುವಂತಿದೆ. ನಳದಮಯಂತಿಯ ಚರಿತೆಯನ್ನು ಹೇಳುವ ನಳಚರಿತ ಎಂಬ ಮತ್ತೊಂದು ಕೃತಿಯನ್ನು ೧೭ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಮಧುಸೂದನದಾಸ ರಚಿಸಿದ. ಅದೇ ಸುಮಾರಿನಲ್ಲಿದ್ದ ಕವಿ ಕಂಠದಾಸ ನಪಾಯ್, ಛಪಾಯ್ ಮುಂತಾದ ಅನೇಕ ಸಣ್ಣ ಸಣ್ಣ ಪದ್ಯಗಳನ್ನು ಬರೆದ. ೧೭ನೆಯ ಶತಮಾನದ ಕವಿ ಈಶ್ವರದಾಸ ಒರಿಸ್ಸದಲ್ಲಿ ಚೈತನ್ಯನ ಜೀವನವನ್ನು ಕುರಿತ ಚೈತನ್ಯ ಭಾಗವತವೆಂಬ ಗ್ರಂಥವನ್ನು ಬರೆದಿದ್ದಾನೆ.
೧೭ನೆಯ ಶತಮಾನದ ಉತ್ತರಾರ್ಧದಲ್ಲಿ ದ್ವಾರಕದಾಸ ಒಬ್ಬ ಮುಖ್ಯ ವೈಷ್ಣವ ಕವಿ. ಗುಪ್ತಗೀತೆ, ಪರಛೆಗೀತ ಮತ್ತು ರಾಮರಸಚಂದ್ರಿಕಾ ಎಂಬವು ಈತನ ಮೂರು ಪ್ರಧಾನ ಕೃತಿಗಳು. ಈ ಕೃತಿಗಳ ತಳದಲ್ಲೆಲ್ಲ ಕಣ್ಣಿಗೆ ಕಾಣದಿರುವ ತನ್ನ ಹೃದಯಾಧಿದೈವದೊಡನೆ ಕೂಡಿಕೊಳ್ಳಬೇಕೆಂಬ ಉತ್ಕಟಭಕ್ತಿಯಿದ್ದು ಒರಿಸ್ಸದ ವೈಷ್ಣವಧರ್ಮದ ತತ್ತ್ವಗಳೆಲ್ಲ ಉದ್ದಕ್ಕೂ ಪ್ರಕಟಗೊಂಡಿವೆ.
೧೭ನೆಯ ಶತಮಾನದ ಅಂತ್ಯಭಾಗದಲ್ಲಿದ್ದ ಮಹಾದೇವದಾಸ ಎಂಬ ಕವಿ ಕಾರ್ತಿಕ ಮಹಾತ್ಮ್ಯ, ಬೈಶಾಖ ಮಹಾತ್ಮ್ಯ, ಮಾಘ ಮಹಾತ್ಯ್ಮ ಮತ್ತು ಮಾರ್ಕಂಡೇಯ ಪುರಾಣಗಳನ್ನು ರಚಿಸಿದ. ಈ ಕಾಲದ ಭೀಮಾ ಧಿಬರ್ ಎಂಬ ಕವಿ ಮಹಾಭಾರತದ ಕಥೆಯೊಂದನ್ನು ಅವಲಂಬಿಸಿ ಕಪಟ ಪಸಾ ಎಂಬ ಕೃತಿಯನ್ನು ರಚಿಸಿದ.
೧೭ನೆಯ ಶತಮಾನದ ಅಂತ್ಯಭಾಗದಲ್ಲಿ ಒರಿಸ್ಸದ ಬಾನ್ಪುರದ ಅರಸನಾಗಿದ್ದ ರಘುನಾಥ ಹರಿಚಂದನ್ ಲೀಲಾವತಿಯನ್ನು ಬರೆದ. ಈ ಕೃತಿಯಲ್ಲಿ ಕಾವ್ಯಸಾಹಿತ್ಯದ ಒಂದು ಲಕ್ಷಣವೂ ಕಠಿಣವೂ ಆದ ರೂಪವೆಂದು ಪ್ರಕಟವಾಗಿದೆ. ಈ ರೂಪ ಮುಂದಿನ ಶತಮಾನದಲ್ಲಿ ಪ್ರಾಮುಖ್ಯ ಪಡೆಯಿತು. ಕಾವ್ಯಸಾಹಿತ್ಯ ಯುಗ (ಉಪೇಂದ್ರ ಭಂಜನ ಯುಗ): ೧೮ನೆಯ ಶತಮಾನದಲ್ಲಿ ಸಾಹಿತ್ಯದಲ್ಲುಂಟಾದ ಒಂದು ದೊಡ್ಡ ವ್ಯತ್ಯಾಸಕ್ಕೆ ಅಂದಿನ ಸಾಹಿತ್ಯ ಮತ್ತು ಸಂಸ್ಕೃತಿಗಳ ಪರಿಸ್ಥಿತಿಗಳು ಮುಖ್ಯ ಕಾರಣವಾಗಿವೆ. ೧೬-೧೮ನೆಯ ಶತಮಾನದ ಅಂತ್ಯಭಾಗದವರೆಗೆ, ಒರಿಸ್ಸ ಮುಸ್ಲಿಂ ಪ್ರಭುತ್ವಕ್ಕೆ ಒಳಗಾಗಬೇಕಾಯಿತು. ದೇಶದ ಅರಸರೂ ಅರಸುಕುಮಾರರೂ ಸಾಹಿತ್ಯ ವಿಷಯಕವಾದ ಜಿಜ್ಞಾಸೆಗಳಲ್ಲಿ ಆಸಕ್ತರಾಗಿದ್ದರು. ಅನೇಕ ಸಂಸ್ಕೃತ ವಿದ್ವಾಂಸರು ರಾಜರ ಆಸ್ಥಾನಗಳಲ್ಲಿದ್ದು ಈ ಚರ್ಚೆಗಳನ್ನು ಸಂಸ್ಕೃತದತ್ತ ಒಯ್ಯಲು ಸಹಾಯಕರಾದರು. ಅಲ್ಲದೆ ಸಾಮಾನ್ಯ ಓದುಗರಿಗೆ ಧರ್ಮಶ್ರವಣ ಮಾಡಿಸುವುದರಲ್ಲೇ ನಿರತವಾಗಿದ್ದ ಏಕಪ್ರಕಾರದ ಸಾಹಿತ್ಯ ಬೇಸರ ತಂದುದರಿಂದ ಅವರು ಬೇರೊಂದು ಬಗೆಯ ಕೃತಿಗಳಿಗಾಗಿ ಹಾತೊರೆಯುತ್ತಿದ್ದರು. ಆದುದರಿಂದ ಈ ಕಾಲದ ಕವಿಗಳು ಕಾಳಿದಾಸ, ಮಾಘ, ಶ್ರೀಹರ್ಷ ಮತ್ತು ಇತರ ಸಂಸ್ಕೃತ ಕವಿಗಳ ಕಾವ್ಯತಂತ್ರವನ್ನು ಅನುಸರಿಸಿದರು. ಕಾವ್ಯಸಂಪ್ರದಾಯವನ್ನು ಸಂಸ್ಥಾಪಿಸುವುದರಲ್ಲಿ ಉಪೇಂದ್ರಭಂಜನೊಬ್ಬನೇ ಮೂಲಕಾರಣನಾಗಿದ್ದವ. ಅವನ ಹಿಂದಿನವರು ಈ ಹೊಸ ದಾರಿಯಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದರು. ಅದೇ ದಾರಿಯಲ್ಲಿ ಉಪೇಂದ್ರಭಂಜ ನಡೆದು ಈ ಸಂಪ್ರದಾಯವನ್ನು ರೂಢಿಸಿದ. ಬಿಷ್ಣುದಾಸ ಮತ್ತು ಶ್ರೀಧರದಾಸ ಎಂಬಿಬ್ಬರು ಉಪೇಂದ್ರಭಂಜನಿಗೆ ಹಿಂದಿನವರಲ್ಲಿ ಪ್ರಸಿದ್ಧರಾದ ಕವಿಗಳು. ಬಿಷ್ಣುದಾಸ ಪ್ರೇಮಾಲೋಚನಾ ಎಂಬುದನ್ನೂ ಶ್ರೀಧರದಾಸ ಕಾಂಚನಲತಾ ಎಂಬುದನ್ನೂ ರಚಿಸಿದರು.
ಉಪೇಂದ್ರಭಂಜನ ತಾತನಾದ ಧನಂಜಯಭಂಜ ಒಬ್ಬ ಪ್ರಖ್ಯಾತ ಕವಿ. ಆತ ಬರೆದ ಕಾವ್ಯ ರಘುನಾಥವಿಳಾಸ; ರಾಮಾಯಣದಿಂದ ಆಯ್ದುಕೊಂಡ ರಾಮಚಂದ್ರನ ಚರಿತ್ರೆ ಈ ಗ್ರಂಥದ ವಸ್ತು. ಈ ಕೃತಿಯಲ್ಲಿ ಧನಂಜಯ ಸಂಸ್ಕೃತ ಕಾವ್ಯತಂತ್ರವನ್ನು ಅನುಸರಿಸಿದ. ತನ್ನ ಮೊಮ್ಮಗನಾದ ಉಪೇಂದ್ರಭಂಜನನ್ನು ಕವಿಯಾಗಲು ಪ್ರೋತ್ಸಾಹಿಸಿದ. ತಾತನ ಪ್ರೋತ್ಸಾಹ ಮತ್ತು ಪ್ರೇರಣೆಗಳಿಂದ ಉಪೇಂದ್ರಭಂಜ ಬೈದೇಹಿಸ ವಿಲಾಸವನ್ನು ಬರೆದನೆಂಬುದು ನಿಜ. ಇದು ಪ್ರಖ್ಯಾತವಾದ ಗ್ರಂಥ. ಧನಂಜಯ ಭಂಜ ಈ ಕೃತಿಯನ್ನು ನೋಡಿದಾಗ ಇದರ ಅಸಾಧಾರಣವಾದ ಕಾವ್ಯಗುಣಕ್ಕೆ ಮೆಚ್ಚಿ ತನ್ನ ಮೊಮ್ಮಗನನ್ನು ಅಭಿನಂದಿಸಿದನಂತೆ.
ಉಪೇಂದ್ರಭಂಜ ರಚಿಸಿದ ಕೃತಿಗಳ ಸಂಖ್ಯೆ ಇನ್ನೂ ಅನಿರ್ದಿಷ್ಟವಾಗಿದೆ. ಅವನ ಕಾಲ್ಪನಿಕ ಶೃಂಗಾರಕಾವ್ಯಗಳ ಪೈಕಿ ಲಾವಣ್ಯವತಿ, ಕೋಟಿಬ್ರಹ್ಮಾನಂದ ಸುಂದರಿ, ರಸಿಕ ಹಾರಾವಳಿ ಮತ್ತು ರಸಲೇಖಾ ಎಂಬವು ಗಮನಾರ್ಹವಾಗಿವೆ. ಆತನ ಪೌರಾಣಿಕ ಕೃತಿಗಳಲ್ಲಿ ಸುಭದ್ರಾಪರಿಣಯ, ಕಲಾಕೌತುಕ ಮತ್ತು ಬೈದೇಹಿಸ ವಿಲಾಸ ಎಂಬುವು ಗಣ್ಯವಾಗಿವೆ. ಪೌರಾಣಿಕ ವಸ್ತುಗಳನ್ನು ಈತ ರಾಮಾಯಣ ಮಹಾಭಾರತಗಳಿಂದ ತೆಗೆದುಕೊಂಡಿದ್ದಾನೆ. ಛಾಂದಭೂಷಣ ಮತ್ತು ಚಿತ್ರಕಾವ್ಯ ಬೌಧೋದಯ ಮುಂತಾದ ಕೃತಿಗಳಲ್ಲಿ ಪ್ರತಿಭೆಗಿಂತ ಹೆಚ್ಚಾಗಿ ಶೈಲಿ ಮತ್ತು ರಚನಾ ಕೌಶಲಗಳನ್ನು ಕಾಣಬಹುದಾಗಿದೆ.
ಉಪೇಂದ್ರಭಂಜ ತನ್ನ ಸಣ್ಣ ಪದ್ಯಗಳಲ್ಲಿಯೂ ಜಯಶಾಲಿಯಾಗಿದ್ದಾನೆ. ಆತ ಅನೇಕ ಚೌತಿಸಾ, ಚೌಪದಿ, ಛಾಂದ ಮುಂತಾದವನ್ನು ಬರೆದಿದ್ದಾನೆ. ಇವೆಲ್ಲ ತುಂಬ ಜನಪ್ರಿಯವಾಗಿವೆ. ಸಂಸ್ಕೃತ ಅಲಂಕಾರಶಾಸ್ತ್ರವನ್ನು ಅಭ್ಯಾಸಮಾಡಿದವರಿಗೆ ಭಂಜನ ಕಾವ್ಯದ ರುಚಿ ನಿಲುಕುತ್ತದೆ. ಒರಿಯ ಸಾಹಿತ್ಯದಲ್ಲಿ ಉಪೇಂದ್ರಭಂಜ ಕವಿಸಮ್ರಾಟ್ ಎಂದು ಸಂಭಾವಿತನಾಗಿದ್ದಾನೆ.
ಉಪೇಂದ್ರಭಂಜನಿಂದ ಪ್ರತಿಷ್ಠಿತವಾದ ಕಾವ್ಯಸಾಹಿತ್ಯಕ್ಕೆ ಇತರ ಕೆಲವು ಕವಿಗಳೂ ಅನೇಕ ಗಣ್ಯಕೃತಿಗಳನ್ನು ನೀಡಿದ್ದಾರೆ. ಧನಂಜಯಭಂಜನ ಕಿರಿಯ ತಮ್ಮನಾದ ಫೆನಭಂಜ ಹಾಡುಗಳನ್ನೂ ಪದ್ಯಗಳನ್ನೂ ರಚಿಸಿ ಖ್ಯಾತನಾಗಿದ್ದಾನೆ; ಗೋವಿಂದವಿಳಾಸವೆಂಬ ಪೌರಾಣಿಕ ಕಾವ್ಯವನ್ನು ಸಹ ಬರೆದಿದ್ದಾನೆ. ರಸನಿಧಿ ಎಂಬ ಶೃಂಗಾರಕಾವ್ಯ ಅವನ ಕೃತಿಗಳ ಪೈಕಿ ವಿಶೇಷ ಉಲ್ಲೇಖಕ್ಕೆ ತಕ್ಕುದಾಗಿದೆ. ತ್ರೈಲೋಕ್ಯಮೋಹಿನಿ ಎಂಬ ಅವನ ಮತ್ತೊಂದು ಶೃಂಗಾರ ಕೃತಿ ಆ ಕಾಲದ ಸಾಮಾನ್ಯ ಪ್ರವೃತ್ತಿಗಿಂತ ಸ್ವಲ್ಪ ಭಿನ್ನವಾಗಿದೆ. ಆ ಕಾಲದ ಪ್ರಖ್ಯಾತ ಕವಿಯಾದ ದೀನಕೃಷ್ಣದಾಸ ಅನೇಕ ಕಾವ್ಯಗಳನ್ನು ಬರೆದಿದ್ದಾನೆ. ರಸಕಲ್ಲೋಲ, ರಸವಿನೋದ, ನಾಮರತ್ನಗೀತಾ, ಜಗಮೋಹನ್ ಛಾಂದ-ಎಂಬವು ಆತನ ಗಣ್ಯಕೃತಿಗಳು. ಅತ್ಯುತ್ತಮ ಕೃತಿ ರಸಕಲ್ಲೋಲ, ಕವಿ ವೈಷ್ಣವ. ಹೀಗಾಗಿ ವೈಷ್ಣವ ಭಾವನೆಗಳು ಆತನ ಕೃತಿಗಳಲ್ಲಿ ಎದ್ದುಕಾಣುತ್ತವೆ. ಬಾಲ್ಯದಿಂದ ತೊಡಗಿ ಗೋಕುಲ ನಿರ್ಗಮನದವರೆಗಿನ ಕೃಷ್ಣ ಕಥೆಯನ್ನು ರಸಕಲ್ಲೋಲ ನಿರೂಪಿಸುತ್ತದೆ. ಕೃಷ್ಣ ಗೋಪಿಕೆಯರನ್ನು ತ್ಯಜಿಸಿ ಹೊರಟ ಬಳಿಕ ಗೋಪಿಕೆಯರ ಶೋಕವನ್ನು ಕುರಿತ ಕವಿಯ ವರ್ಣನೆ ಓದುಗರ ಹೃದಯವನ್ನು ಕರಗಿಸುತ್ತದೆ. ರಸವಿನೋದದಲ್ಲಿನ ಬಸಿಷ್ಠ ಭುಸಂಡರ ಸಂವಾದದಲ್ಲಿ ರಾಧಾ ಮತ್ತು ಕೃಷ್ಣರ ಪ್ರಣಯಪ್ರಸಂಗ ನಿರೂಪಿತವಾಗಿದೆ. ನಾಮರತ್ನಗೀತದಲ್ಲಿ ವೈಷ್ಣವದರ್ಶನದ ವರ್ಣನೆಯಿದೆ. ಪ್ರಭು ಜಗನ್ನಾಥನ ನಿತ್ಯಪುಜಾವಿಧಿಗಳನ್ನೂ ವಿಶೇಷೋತ್ಸವಗಳನ್ನೂ ಸಂಗೀತ ಮಯವಾದ ಜಗಮೋಹನ ಛಾಂದ ಎಂಬ ಕೃತಿ ವರ್ಣಿಸುತ್ತದೆ. ಲೋಕನಾಥ ಬಿದ್ಯಾಧರ ಎಂಬ ಆ ಕಾಲದ ಪ್ರಖ್ಯಾತ ಕವಿ ಮಕರಧ್ವಜ ಮತ್ತು ಪದ್ಮಾವತಿಯರನ್ನು ಕುರಿತ ಪದ್ಮಾವತೀ ಪ್ರಣಯವನ್ನು ಬರೆದ. ಆತನ ಚಿತ್ರಲೇಖಾ ಎಂಬುದು ಕಥಾನಾಯಕಿ ಚಿತ್ರಲೇಖೆ ತನ್ನ ಪ್ರಿಯನಾದ ರಾಜಪುತ್ರ ಸುದರ್ಶನನನ್ನು ಒಡಗೂಡಿದ ಸುಖಸನ್ನಿವೇಶವನ್ನೂ ಸರ್ವಾಂಗಸುಂದರಿ ಎಂಬ ಮತ್ತೊಂದು ಶೃಂಗಾರಕಾವ್ಯ ಅವನೀತಿಲಕನೆಂಬ ಕಥಾನಾಯಕನ ಪ್ರಣಯ ಪ್ರಸಂಗವನ್ನೂ ವರ್ಣಿಸುತ್ತದೆ. ಬೃಂದಾವನ ವಿಹಾರವೆಂಬುದು ಆತನ ಶೃಂಗಾರಕಾವ್ಯಗಳಿಂದ ಸ್ವಲ್ಪ ಭಿನ್ನವಾಗಿದೆ. ಅದು ವೈಷ್ಣವ ಕವಿತೆಯ ರಾಧಾಕೃಷ್ಣ ಪ್ರಸಂಗದ ಪ್ರತಿಧ್ವನಿ. ಈ ಕವಿ ತನ್ನ ಎಲ್ಲ ಕೃತಿಗಳನ್ನೂ ಕಲಾತ್ಮಕವಾದ, ಅಲಂಕಾರಿಕ ಶೈಲಿಯಲ್ಲಿ ರಚಿಸಿದ್ದಾನೆ.
ಆ ಕಾಲದ ಬೃಂದಾವತಿದಾಸಿ ಎಂಬ ಕವಿಯಿತ್ರಿ ಗೋಕುಲದಲ್ಲಿ ಕೃಷ್ಣನ ಜೀವಿತವನ್ನು ಕುರಿತ ಪುರ್ಣತಮ ಚಂದ್ರೋದಯ ಎಂಬ ಕಾವ್ಯವನ್ನು ಬರೆದಿದ್ದಾಳೆ.
ಉಪೇಂದ್ರಭಂಜನ ಕಾಲದಲ್ಲಿ ಏಕಪ್ರಕಾರವಾಗಿರುವ ಕಾವ್ಯಶೈಲಿ ಸಾಹಿತ್ಯದಲ್ಲೆಲ್ಲ ವ್ಯಾಪಿಸಿತ್ತು ಎಂಬುದು ಸ್ಪಷ್ಟ. ಕವಿಗಳು ಅಂಥ ಶೈಲಿಯಲ್ಲೇ ಬರೆದು ತಮ್ಮ ಕವಿತಾಪ್ರೌಢಿಮೆಯನ್ನು ಮೆರೆಸಲು ಕಾತರರಾಗಿದ್ದರು. ಉಪೇಂದ್ರಭಂಜನ ತರುವಾಯ ಕೆಲವು ಕವಿಗಳು ಒರಿಯ ಸಾಹಿತ್ಯಕ್ಕೆ ಗಮನಾರ್ಹವಾದ ಕಾಣಿಕೆಯನ್ನು ಸಲ್ಲಿಸಿ ಖ್ಯಾತರಾಗಿದ್ದಾರೆ.
18ನೆಯ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಸದಾನಂದ ಕವಿ ಸೂರ್ಯಬ್ರಹ್ಮ ವೈಷ್ಣವಧರ್ಮವನ್ನು ಸ್ವೀಕರಿಸಿದ ಮೇಲೆ ತನ್ನ ಹೆಸರನ್ನು ಸಾಧು ಚರಣದಾಸನೆಂದು ಮಾರ್ಪಡಿಸಿಕೊಂಡ. ಆತ ಪ್ರೇಮತರಂಗಿಣಿಯನ್ನೂ ಪ್ರೇಮ ಲಹರಿ, ಲಳಿತಲೋಚನಾ ಛೌರಚಿಂತಾಮಣಿ ಮತ್ತು ಜುಗಳರಸಾಮೃತಲಹರಿ ಎಂಬ ಮಧುರ ಮಂಜುಳ ಕೃತಿಗಳನ್ನೂ ಬರೆದಿದ್ದಾನೆ. ಅವಕ್ಕೆಲ್ಲ ಉಪೇಂದ್ರಭಂಜನೇ ಮೇಲುಪಂಕ್ತಿ. 18ನೆಯ ಶತಮಾನದ ಮಧ್ಯಭಾಗದಲ್ಲಿದ್ದ ಜನಾರ್ಧನದಾಸನಿಗೆ ದನಾಯಿದಾಸನೆಂದೂ ಹೆಸರಿತ್ತು. ಆತ ಗೋಪೀಭಾಸವನ್ನು ಬರೆದ. ಇದರಲ್ಲಿ ಗೋಪ ಗ್ರಾಮದಲ್ಲಿನ ಸ್ತ್ರೀಯರು ಕೃಷ್ಣ ತಮ್ಮನ್ನು ಬಿಟ್ಟು ಮಧುರೆಗೆ ಹೊರಟಾಗ ಗೋಳಾಡಿದ ಬಗೆ ವರ್ಣಿತವಾಗಿದೆ.
ಆ ಕಾಲದ ರಾಮದಾಸ ಎಂಬ ಕವಿ ರಾಮರಸಾಮೃತ ಮತ್ತು ದಾಢರ್ಯ್‌ತಾ ಭಕ್ತಿ ಎಂಬವನ್ನು ಬರೆದಿದ್ದಾನೆ. ಮೊದಲನೆಯದು ರಾಮಚಂದ್ರನ ಚರಿತ್ರೆಯನ್ನೂ ಎರಡನೆಯದು ಒರಿಸ್ಸ ದೇಶದ ಸಾಧುಸಂತರ ಚರಿತ್ರೆಯನ್ನೂ ವರ್ಣಿಸುತ್ತವೆ.
ಬಿಸ್ವನಾಥ್ ಕುಂಟಿಯಾ ಎಂಬ ಕವಿ ೧೮ ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದು ರಾಮಚಂದ್ರನ ಮಾಹಾತ್ಮ್ಯವನ್ನು ವರ್ಣಿಸುವ ವಿಚಿತ್ರ ರಾಮಾಯಣ ಎಂಬ ಗ್ರಂಥವನ್ನು ಬರೆದಿದ್ದಾನೆ.
ಬ್ರಜನಾಥ ಬಡಜೆನಾ ಎಂಬಾತ 18ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದು ದೇಶಾಭಿಮಾನವನ್ನು ಉಕ್ಕಿಸುವಂಥ ಸಾಹಿತ್ಯ ನಿರ್ಮಿತಿಗಾಗಿ ಖ್ಯಾತನಾಗಿದ್ದಾನೆ. ಧೆಂಕನಾಳ್ ರಾಜ ಮರಾಠಿಗರೊಂದಿಗೆ ಯುದ್ಧಮಾಡಿದ ಪ್ರಸಂಗ ಈತನ ಸಮರತರಂಗದಲ್ಲಿ ವರ್ಣಿತವಾಗಿದೆ. ಈತನ ಶ್ಯಾಮರಾಸೋತ್ಸವ ಮತ್ತು ಅಂಬಿಕಾವಿಲಾಸ ಎಂಬುವು ಪೌರಾಣಿಕ ವಸ್ತುವನ್ನು ಅವಲಂಬಿಸಿ ಬರೆದ ಕೃತಿಗಳು; ಗುಂಡಿಛಾಬಿಜೆ ಎಂಬ ಹಿಂದಿ ಕೃತಿಯಲ್ಲಿ ಈತ ಪ್ರಭುಜಗನ್ನಾಥನ ರಥೋತ್ಸವವನ್ನು ವರ್ಣಿಸಿದ್ದಾನೆ.
12ನೆಯ ಶತಮಾನದ ಅಂತ್ಯಭಾಗದಲ್ಲಿ ಜೀವಿಸಿದ್ದ ಭಕ್ತಚರಣದಾಸನೆಂಬ ಕವಿ ಶ್ರೀಕೃಷ್ಣಚರಿತ್ರವನ್ನೂ ಆತನ ಪ್ರೇಮಪ್ರಸಂಗಗಳನ್ನೂ ವರ್ಣಿಸುವ ಮಥುರಾ ಮಂಗಳ ಎಂಬ ಕಾವ್ಯವನ್ನು ರಚಿಸಿದ್ದಾನೆ. ಮನಬೋಧ ಚೌತಿಸಾ ಎಂಬ ಇನ್ನೊಂದು ಕೃತಿ ಒರಿಸ್ಸದಲ್ಲೆಲ್ಲ ಬಹಳವಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಳಾಕಳೆವರ ಚೌತಿಸಾ ಮತ್ತು ಮನಸಿಖ್ಯಾ ಎಂಬುವೂ ಮತ್ತೆರಡು ಜನಪ್ರಿಯ ಕೃತಿಗಳು. ಕಾವ್ಯಸಾಹಿತ್ಯವನ್ನು ಬೆಳೆಸಿದ ಇನ್ನೂ ಅನೇಕ ಸಣ್ಣಪುಟ್ಟ ಕವಿಗಳಿದ್ದಾರಾದರೂ ಅವರ ಉಲ್ಲೇಖ ಇಲ್ಲಿ ಅಪ್ರಕೃತ. ಆ ಅವಧಿಯಲ್ಲಿ ಧಾರ್ಮಿಕ ಸಂಪ್ರದಾಯವನ್ನು ಒತ್ತಟ್ಟಿಗಿರಿಸಿ ಕಾವ್ಯಸಂಪ್ರದಾಯವೇ ತುಂಬ ಪ್ರಸಿದ್ಧಿಗೆ ಬಂದಿತೆನ್ನಬಹುದು. ಇವುಗಳ ಜನಪ್ರಿಯತೆಗಿದ್ದ ಅತಿ ದೊಡ್ಡ ಕಾರಣ ಇವುಗಳ ಗೇಯಗುಣವೇ ಆಗಿದೆ.
ಸಂಕೀರ್ಣ ಸಾಹಿತ್ಯದ ಯುಗ (1800-50)
[ಬದಲಾಯಿಸಿ]ಉಪೇಂದ್ರಭಂಜನ ತರುವಾಯ ಕಾವ್ಯಸಂಪ್ರದಾಯ ಮಾರ್ಪಾಡುಹೊಂದಿತು. ಭಂಜನ ಪ್ರಭಾವವನ್ನು ತೋರುತ್ತ ಜೊತೆಗೆ ಆಧುನಿಕ ಒರಿಯ ಸಾಹಿತ್ಯೋದಯದ ಗುರಿಯನ್ನೂ ದ್ಯೋತಿಸುವ ಪ್ರವೃತ್ತಿಯೊಂದು ಆಗ ಗೋಚರಿಸಿತು. ಆ ಕಾಲದ ಅಭಿಮನ್ಯು ಸಮಂತಸಿಂಘಾರ್ ಎಂಬ ಪ್ರಖ್ಯಾತ ಕವಿ ರಾಧಾಕೃಷ್ಣರ ಪ್ರಣಯವನ್ನು ಕುರಿತ ವಿದಗ್ದ ಚಿಂತಾಮಣಿ ಎಂಬುದನ್ನು ಬರೆದ. ಇದರಲ್ಲಿನ ದಾರ್ಶನಿಕ ಭಾವವನ್ನೂ ವರ್ಣಿಸುವಾಗ ಕವಿ ಸದಾನಂದ ಕವಿ ಸೂರ್ಯಬ್ರಹ್ಮನ ಪ್ರಭಾವಕ್ಕೆ ಒಳಗಾಗಿದ್ದಾನೆ. ಈತ ಉಪೇಂದ್ರಭಂಜನ ಲಲಿತ ಶೈಲಿಯನ್ನೇ ಅನುಸರಿಸಿದ್ದಾನೆ. ಗೋಪಾಲಕೃಷ್ಣ ಪಟ್ಟನಾಯಕ ಶ್ರೀಕೃಷ್ಣಲೀಲಾಪ್ರಸಂಗಗಳನ್ನು ಕುರಿತು ಅನೇಕ ಪದ್ಯಗಳನ್ನು ಬರೆದಿದ್ದಾನೆ. ಈತನ ಕೃತಿಗಳು ಸಾಹಿತ್ಯಕ್ಕಿಂತ ಹೆಚ್ಚಾಗಿ ಹಾಡುಗಳೆನಿಸಿ ಜನರೊಲವನ್ನುಗಳಿಸಿವೆ.
ಜದುಮಣಿ ಮಹಾಪಾತ್ರ ಕವಿ ಮತ್ತು ವಿಡಂಬನಕಾರ. ಶ್ರೀಕೃಷ್ಣನ ಪ್ರಣಯ ಪ್ರಸಂಗವನ್ನು ಕುರಿತು ಪ್ರಬಂಧ ಪುರ್ಣಚಂದ್ರ ಎಂಬ ಕಾವ್ಯವನ್ನು ರಚಿಸಿದ್ದಾನೆ. ಈತನೂ ಉಪೇಂದ್ರ ಭಂಜನ ಶೈಲಿಯನ್ನೇ ಅನುಸರಿಸಿದ್ದಾನೆ.
ಕಿಶೋರಚಂದ್ರಾನಂದ ಚಂಪು ಎಂಬುದನ್ನು ರಚಿಸಿದ ಕವಿ ಸೂರ್ಯ ಬಳದೇವ ರಥ ಒಬ್ಬ ಖ್ಯಾತ ಕವಿ. ಚೌತಿಸಾ ಮಾದರಿಯ ಮೂರು ನಾಲ್ಕು ಹಾಡುಗಳಿಂದ ಕೂಡಿದ ಈ ಕೃತಿ ಶ್ಲೇಷೆ ಮತ್ತು ಯಮಕಾಲಂಕಾರ ಭೂಯಿಷ್ಟವಾಗಿದೆಯಲ್ಲದೆ ಇಲ್ಲಿನ ಒಂದೊಂದು ಹಾಡಿಗೂ ಒಂದೊಂದು ಮಟ್ಟಿದೆ. ರಾಧಾಕೃಷ್ಣರ ಪ್ರಣಯ ಇದರ ವಸ್ತು.
ಮಹಿಮಾ ಪಂಥದ ಪ್ರಚಾರಕ್ಕಾಗಿ ಭೀಮಾ ಭೋಯ್ ಎಂಬ ಕವಿ ಅನೇಕ ಭಜನೆಗಳನ್ನು ರಚಿಸಿದ್ದಾನೆ. ಈ ಐವತ್ತು ವರ್ಷಗಳಲ್ಲಿನ (1800-50) ಒರಿಸ್ಸ ಸಾಹಿತ್ಯದ ಮುನ್ನಡೆ ಮಿಕ್ಕ ಅವಧಿಗಳಿಗಿಂತ ಯಾವ ವಿಧದಲ್ಲೂ ಕಡಿಮೆಯದಲ್ಲ. ಈ ಕಾಲದಲ್ಲಿ ಮಹಾಕಾವ್ಯ, ಭಾವಗೀತ, ದೀರ್ಘಕಾವ್ಯಗಳು, ಲಘುಕಾವ್ಯಗಳು-ಇವನ್ನೆಲ್ಲ ರಚಿಸಲು ಪ್ರಯತ್ನಗಳು ನಡೆದಿವೆ. ರಾಜ್ಯ ಒಂದು ವಿದೇಶೀ ಆಳ್ವಿಕೆಗೆ ಒಳಗಾಗುವ ಮಹಾ ದುರವಸ್ಥೆಯ ಈ ಅವಧಿಯಲ್ಲಿ ಸಹ ಸಾಹಿತ್ಯಕ್ಷೇತ್ರ ಬಂಜರಾಗಿರಲಿಲ್ಲವೆಂಬುದೂ ಮಂಕಾಗಿ ಮಲಗದೆ ಚಟುವಟಿಕೆಯಿಂದ ಕೂಡಿತ್ತೆಂಬುದೂ ಇದರಿಂದ ಸಿದ್ಧವಾಗುತ್ತದೆ. ಈ ಕಾಲದವರೆಗೆ ಪ್ರಾಚೀನ ಮತ್ತು ಮಧ್ಯಯುಗದ ಸಾಹಿತ್ಯ ಪ್ರಕಾರಗಳು ನಡೆದುಕೊಂಡು ಬಂದುವು. ಇದರ ತರುವಾಯ ಸಾಹಿತ್ಯಕ್ಷೇತ್ರದಲ್ಲಿ ಒಂದು ಕ್ರಾಂತಿಯುಂಟಾಗಿ ಹೊಸ ದೃಷ್ಟಿಯೊಂದು ಮೂಡಿತು.
ಆಧುನಿಕ ಒರಿಯ ಸಾಹಿತ್ಯ
[ಬದಲಾಯಿಸಿ]1870ರಲ್ಲಿ ಅದು ಪಡೆದುಕೊಂಡ ಹೊಸ ದೃಷ್ಟಿಯೇ ಆಧುನಿಕ ಒರಿಯ ಸಾಹಿತ್ಯದಲ್ಲಿ ಗಮನಿಸಬೇಕಾದ ಪ್ರಧಾನ ಅಂಶ. ಬ್ರಿಟಿಷರ ಆಳ್ವಿಕೆಯಲ್ಲಿ ಜಾರಿಗೆ ಬಂದ ನವೀನ ವಿದ್ಯಾಭ್ಯಾಸ ಪದ್ಧತಿ ಇದಕ್ಕೆ ಕಾರಣವಾಯಿತು. ಒರಿಯ ಕವಿತೆಯ ಪ್ರಾಚೀನ ಸಂಪ್ರದಾಯವನ್ನು ಬದಿಗೊತ್ತಿ ರಾಧಾನಾಥ ರಾಯ್ ಹೊಸ ಸಂಪ್ರದಾಯವನ್ನು ಸ್ಥಾಪಿಸಿದ. ಈತನೊಬ್ಬ ಉಪಾಧ್ಯಾಯ. ವಿದ್ಯಾ ಇಲಾಖೆಯ ಅಧಿಕಾರಿಯಾದ ಮೇಲೆ ಈತ ತನ್ನ ಹೊಸ ಅಭಿರುಚಿಯನ್ನೂ ಕಾವ್ಯರಚನಾ ವಿಧಾನವನ್ನೂ ಸಾಮಾನ್ಯ ಓದುಗನ ಮೇಲೆ ಹೇರಲು ಸಮರ್ಥನಾದ.
ಈ ಕಾಲದ ಮುಖ್ಯ ಪ್ರವೃತ್ತಿಗಳನ್ನು ಕೆಲವು ದೃಷ್ಟಿಕೋನಗಳಿಂದ ನೋಡಿ ಗುರುತಿಸಬಹುದು. ರಾಧಾಕೃಷ್ಣ ಪ್ರಣಯ ಕಥೆಗಳು ಹಿಂದಾಗಿ ಸಾಮಾಜಿಕ ವಿಷಯಗಳು ಇಲ್ಲಿ ಕಾವ್ಯವಸ್ತುಗಳಾಗಿವೆ. ವಸ್ತುಗಳನ್ನು ಆರಿಸುವುದರಲ್ಲಿ ಕವಿಗಳ ವಿಶಾಲ ದೃಷ್ಟಿ ಗೋಚರಿಸುತ್ತದೆ. ಹಿಂದಿನ ವರ್ಷಗಳ ನಾಯಕ ನಾಯಕಿಯರ ಯಾಂತ್ರಿಕ ಪಡಿಯಚ್ಚಿನ ಚಿತ್ರಗಳ ಜಾಗವನ್ನು ಧೈರ್ಯ, ಪ್ರೇಮ ಮತ್ತು ಇತರ ಜೀವನ ಧ್ಯೇಯಗಳುಳ್ಳ ಪಾತ್ರಗಳು ಆಕ್ರಮಿಸಿಕೊಂಡಿವೆ. ದೇವತೆಗಳ ಮತ್ತು ಪ್ರಣಯಿಗಳ ಜೀವಿತಚಿತ್ರಣಕ್ಕೆ ಬದಲಾಗಿ ಸಾಮಾನ್ಯ ಮನುಷ್ಯನ ಬಾಳುವೆ ಕಾವ್ಯವಸ್ತುವಾಗಿದೆ.
ಪ್ರಕೃತಿ ವರ್ಣನೆಯೇ ಈ ಕಾಲದ ಸಾಹಿತಿಗಳ ಮುಖ್ಯ ಕಾಣಿಕೆ. ಸಮಯ ಸಂದರ್ಭಗಳಿಗೆ ತಕ್ಕಂತೆ ಅಲ್ಲಿ ಇಲ್ಲಿ ಪ್ರಕೃತಿಯನ್ನು ವರ್ಣಿಸುವ ರೂಢಿ ಹಿಂದಿನ ಕಾವ್ಯಗಳಲ್ಲಿ ಕಂಡುಬರುತ್ತದಾದರೂ ಈ ಕಾಲದಿಂದೀಚೆಗೆ ಪ್ರಕೃತಿಯೇ ಒಂದು ಪಾತ್ರದಂತೆ ವರ್ಣಿತವಾಗಿ ಕಣ್ಣಿಗೆ ಎದ್ದುಕಾಣುತ್ತದೆ. ಛಂದಸ್ಸಿನಲ್ಲಿ ಕೂಡ ಹೆಚ್ಚಿನ ಬದಲಾವಣೆಯಾಗಿರುವುದು ಕಂಡುಬರುತ್ತದೆ.
ವಿಡಂಬನ, ಹಾಸ್ಯ, ಗದ್ಯಸಾಹಿತ್ಯ, ನಾಟಕ, ಸಾಹಿತ್ಯಪತ್ರಿಕೆಗಳು, ವಿಮರ್ಶೆ-ಇತ್ಯಾದಿಗಳಲ್ಲಿ ಆಗಿರುವ ವಿಕಾಸವೂ ಈ ಕಾಲದ ಲಕ್ಷಣವಾಗಿದೆ. ಆಧುನಿಕ ಒರಿಯ ಸಾಹಿತ್ಯದ ಅಭಿವೃದ್ಧಿಗೆ ಮುಖ್ಯವಾಗಿ ಸಾಹಿತ್ಯಪತ್ರಿಕೆಗಳು ಕಾರಣವಾಗಿವೆ. ರಾಧಾನಾಥರಾಯ್, ಮಧುಸೂದನ ರಾವ್, ಗಂಗಾಧರ ಮೆಹರ್, ನಂದಕಿಶೋರ್ ಬಳ್, ಚಿಂತಾಮೊನಿ ಮೊಹಾಂತಿ, ರಾಮಶಂಕರ ರಾಯ್ ಮತ್ತು ಇತರರ ಲೇಖನಗಳು ಮೊದಲು ಪತ್ರಿಕೆಗಳಲ್ಲಿ ಅಚ್ಚಾಗಿ ಬಳಿಕ ಪುಸ್ತಕ ರೂಪದಲ್ಲಿ ಪ್ರಕಟವಾದವು.
ಈ ಕಾಲದ ಪ್ರಖ್ಯಾತ ಕವಿ ರಾಧಾನಾಥ ರಾಯ್ ಕಾವ್ಯಗಳನ್ನು ರಚಿಸಿದ್ದಾನೆ. ಕೇದಾರಗೌರಿ, ಚಂದ್ರಭಾಗಾ ಮತ್ತು ಪಾವರ್ತಿಗಳ ಕಥಾವಸ್ತು ಗ್ರೀಕ್ ಮೂಲಗಳಿಂದ ಆಯ್ದುಕೊಂಡಂಥವು. ಒರಿಸ್ಸ ಜನ ಇವನ್ನು ಈತನ ಸ್ವಂತ ಕೃತಿಗಳೆಂದೇ ಪರಿಭಾವಿಸುವ ರೀತಿಯಲ್ಲಿ ಈತ ಇವನ್ನು ನಿರ್ವಹಿಸಿದ್ದಾನೆ. ಈತನ ಚಿಲಿಕಾ ಎಂಬ ಪ್ರಖ್ಯಾತ ಕಾವ್ಯ ಅದೇ ಹೆಸರಿನ ಸರೋವರದ ಪ್ರಕೃತಿ ಸೌಂದರ್ಯವನ್ನು ವರ್ಣಿಸುತ್ತದೆ. ಈತನ ಅಪುರ್ಣ ಕೃತಿ ಮಹಾಯಾತ್ರಾ ಎಂಬುದು ಸರಳ ರಗಳೆಯಲ್ಲಿದೆ. ಕಾಳಿದಾಸನ ಸಂಸ್ಕೃತ ಕಾವ್ಯದ ಅನುವಾದವಾದ ಮೇಘಸಂದೇಶದ ವಿಶದ ಶೈಲಿ ಮತ್ತು ಮಧುರ ಪದಬಂಧಗಳು ಓದುಗನನ್ನು ಬೆರಗುಗೊಳಿಸುತ್ತವೆ. ರಾಧಾನಾಥ ಸಂಸ್ಥಾಪಿಸಿದ ಹೊಸ ಸಂಪ್ರದಾಯವನ್ನು ಈತನ ಸಮಕಾಲೀನರೂ ಮುಂದಿನ ಪೀಳಿಗೆಯವರೂ ಅನುಸರಿಸಿದರು. ಆದುದರಿಂದ ಈ ಕಾಲಾವಧಿಯನ್ನು ರಾಧಾನಾಥನ ಹೆಸರಿನಿಂದಲೇ ಕರೆಯಲಾಗಿದೆ.
ಭಕ್ತ ಕವಿ ಮಧುಸೂದನ್ ಬ್ರಾಹ್ಮಪಂಥದ ತತ್ತ್ವವನ್ನು ಹರಡುವ ಉದ್ದೇಶದಿಂದ ಹಲವು ಕಾವ್ಯಗಳನ್ನು ಬರೆದಂತೆ ಕಂಡುಬರುತ್ತದೆ. ಈತನ ಪದ್ಯಗಳು ಧ್ಯೇಯವಾದಿಗಳಾಗಿವೆ. ಈತನ ಜೀವನ ಚಿಂತ್, ರುಸಿಪ್ರಾಣಿ, ದೇವಾವತರಣಗಳು ಈತನ ತಪಸ್ವೀಭಾವನೆಗಳನ್ನು ಪ್ರಕಟಿಸುತ್ತವೆ. ಈತನ ಉತ್ತರರಾಮಚರಿತವೆಂಬುದು ಸಂಸ್ಕೃತ ಮಹಾನಾಟಕವೆಂಬ ಕೃತಿಯ ಒಂದು ಭಾಗದ ಅನುವಾದವಾಗಿದೆ. ಗಂಗಾಧರ ಮೆಹರ್ ಕಾವ್ಯರಚನೆಯಲ್ಲಿ ಸಂಸ್ಕೃತ ಕಾವ್ಯಗಳ ಧ್ಯೇಯಗಳನ್ನೇ ಅನುಸರಿಸಿದ್ದಾನೆ. ಈತನ ಉತ್ಕಳಲಕ್ಷ್ಮಿ ಎಂಬುದರಲ್ಲಿ ಒರಿಸ್ಸ ದೇಶದ ಪ್ರಕೃತಿ ವರ್ಣನೆಯಿದೆ. ಕೀಚಕಬಧ, ಪ್ರಣಯಬಲ್ಲರಿ, ತಪಸ್ವಿನಿ, ಪದ್ಮಿನಿಗಳು ಈತನ ಇತರ ಕಾವ್ಯಗಳು. ಇವುಗಳ ವಸ್ತುಗಳನ್ನು ಕವಿ ಮಹಾಭಾರತ ರಾಮಾಯಣ ಮತ್ತು ಇತರ ಅಂಥ ಮೂಲಗಳಿಂದ ತೆಗೆದುಕೊಂಡಿದ್ದಾನೆ.
ಗ್ರಾಮ ಸೌಂದರ್ಯವನ್ನು ವರ್ಣಿಸುವ ಪ್ರಖ್ಯಾತವಾದ ಭಾವಗೀತೆಗಳನ್ನು ರಚಿಸಿ ನಂದಕಿಶೋರ್ಬಳ್ ಕೀರ್ತಿವಂತನಾಗಿದ್ದಾನೆ. ಹಳ್ಳಿಗಳಲ್ಲಿನ ಪ್ರಕೃತಿಯ ಚೆಲುವನ್ನು ಈತ ರಸವತ್ತಾಗಿ ಚಿತ್ರಿಸಿದ್ದಾನೆ. ಜಜಾತಿ ಮತ್ತು ದೇವಜಾನಿಯರ ಪ್ರಣಯದ ಕಥೆಯನ್ನು ಅವಲಂಬಿಸಿ ಈತ ಶರ್ಮಿಷ್ಠಾ ಎಂಬ ದೊಡ್ಡ ಕಾವ್ಯವೊಂದನ್ನು ರಚಿಸಿದ್ದಾನೆ.
ಚಿಂತಾಮಣಿ ಮೊಹಾಂತಿಯೂ ಅನೇಕ ಬೃಹದ್ಗ್ರಂಥಗಳನ್ನು ಅರ್ಪಿಸಿದ್ದಾನೆ. ರಾಧಾನಾಥನ ಶೈಲಿಯ ಪ್ರಭಾವವನ್ನು ಈತನ ಕವಿತೆಗಳಲ್ಲಿ ಕಾಣಬಹುದು.
ಪದ್ಮಚರಣ್ ಪಟ್ಟನಾಯಕ ಹಲವಾರು ಭಾವಗೀತೆಗಳನ್ನೂ ಅಷ್ಟಪದಿಗಳನ್ನೂ ರಚಿಸಿದ್ದಾನೆ. ಕಲಾತ್ಮಕವಾದ ಒಳನೋಟ ಈತನ ವೈಶಿಷ್ಟ್ಯ. ಪದ್ಮಪಾಖುಡಾ, ಸೂರ್ಯಮುಖಿ, ಗೊಲಾಪಗುಚ್ಛ ಮತ್ತು ಆಸಾಮಂಜರಿ ಎಂಬುವು ಈತ ಆಗಾಗ ಬರೆದ ಕವನಗಳ ಸಂಗ್ರಹಗಳು. ಫಕೀರ್ ಮೋಹನ್ ಸೇನಾಪತಿ ಅನೇಕ ಕವನಗಳನ್ನು ಬರೆದನಲ್ಲದೆ ಹರಿವಂಶ, ರಾಮಾಯಣಗಳನ್ನು ಭಾಷಾಂತರಿಸಿದ. ಈತನ ಉತ್ಕಳ ಭ್ರಮನಂಗ್ ಎಂಬುದು ಕಾವ್ಯವಾಗಿದ್ದರೂ ಆ ಕಾಲದ ಒರಿಸ್ಸ ದೇಶದ ಅನೇಕ ಮಹಾಪುರುಷರನ್ನು ಇದು ನಿರ್ದಾಕ್ಷಿಣ್ಯವಾಗಿ ವಿಮರ್ಶಿಸುತ್ತದೆ. ಸತ್ಯವಾದೀ ಯುಗ: ರಾಧಾನಾಥ ರಾಯ್ (1908) ದಿವಂಗತನಾದ ಬಳಿಕ, ಒರಿಯ ಸಾಹಿತ್ಯದಲ್ಲಿ ಹೊಸ ಲೇಖಕರ ಒಂದು ತಂಡ ಉದಿಸಿತು. ಇವರು ಮೂಲತಃ ದೇಶಭಕ್ತರು. ಗೋಪಬಂಧು ದಾಸ್, ನೀಳಕಂಠ ದಾಸ್, ಗೋದಾವರೀಶ್ ಮಿಶ್ರ, ಕೃಪಾಸಿಂಧು ಮಿಶ್ರ ಮತ್ತು ಬಸುದೇವ ಮಿಶ್ರ ಎಂಬ ಐವರು ಈ ತಂಡಕ್ಕೆ ಸೇರಿದವರು. ಗೋಪಬಂಧು ಈ ತಂಡದ ನಾಯಕ. ದೇಶಭಕ್ತರಾದುದರಿಂದ ಈ ಐವರೂ ರಾಧಾನಾಥನ ಸಾಹಿತ್ಯಕ್ಕೆ ಎದುರುಬಿದ್ದರು. ಏಕೆಂದರೆ ರಾಧಾನಾಥ್ ತನ್ನ ಸಾಹಿತ್ಯರಚನೆಗೆ ಹೊರಗಿನ ವಸ್ತುಗಳನ್ನೂ ತೆಗೆದುಕೊಂಡು ಒರಿಯ ಜನರ ಸಂಸ್ಕೃತಿಗೂ ಪ್ರತಿಷ್ಠೆಗೂ ಭಂಗತಂದನೆಂದು ಇವರು ಭಾವಿಸಿದರು. ರಾಧಾನಾಥನ ಕೃತಿಗಳನ್ನು ಇವರು ತೀವ್ರವಾಗಿ ಖಂಡಿಸಿ ಒರಿಸ್ಸದ ಪ್ರಾಚೀನ ವೈಭವವನ್ನು ತಮ್ಮ ಕೃತಿಗಳಲ್ಲಿ ಎತ್ತಿಹಿಡಿದರು.
ಪಂಡಿತ, ಗೋಪಬಂಧು ಎಂಬ ಲೇಖಕ ಕಾರಾ ಕವಿತಾ, ಬಂದಿರ ಆತ್ಮಕಥಾ, ಧರ್ಮಪದ, ನಚೀಕೇತ, ಗೋ ಮಾಹಾತ್ಮ್ಯ ಮತ್ತು ಅವಕ್ಷಚಿಂತಾ ಮುಂತಾದ ಕವಿತೆಗಳನ್ನು ರಚಿಸಿದ. ಈ ಕೃತಿಗಳೆಲ್ಲವೂ ಒರಿಸ್ಸ ಮತ್ತು ಅದರ ಜನರ ಹೆಮ್ಮೆಯನ್ನೂ ಠೇಂಕಾರವನ್ನೂ ತೋರಿಸುತ್ತವೆ. ಪಂಡಿತ ನೀಲಕಂಠ ದಾಸ ಕವಿ ಖಾರವೇಲ, ಕೊನಾರ್ಕ್, ದಾಸನಾಯಿಕ ಮುಂತಾದ ಕವಿತೆಗಳನ್ನು ರಚಿಸಿದ. ಇವುಗಳಲ್ಲಿ ಸಹ ಇದೇ ಭಾವನೆಗಳು ವ್ಯಕ್ತವಾಗಿವೆ. ಪಂಡಿತ ಗೋದಾವರೀಶ್ ಮಿಶ್ರ ಕಥನ ಕವಿತೆಗಳಿಗೂ ಭಾವಗೀತೆಗಳಿಗೂ ಪ್ರಸಿದ್ಧನಾದವ. ಈತನ ಕಿಸಳಯ, ಅಲೇಖಿಕಾ, ಕವಿತಾಯನ ಮತ್ತು ಛಯನಿಕಾ ಎಂಬವು ಕಥನಕವನ ಮತ್ತು ಭಾವಗೀತೆಗಳ ಸಂಗ್ರಹಗಳು. ಕೃಪಾಸಿಂಧು ಮಿಶ್ರ ಇತಿಹಾಸಕಾರ. ಬಸುದೇವ ಮಿಶ್ರ ಪ್ರಬಂಧಲೇಖಕ. ಇಬ್ಬರೂ ಸಮಾನಭಾವದಿಂದ ಇತಿಹಾಸವನ್ನೂ ಪ್ರಬಂಧಗಳನ್ನೂ ರಚಿಸಿದರು.
ಸವುಜ ಯುಗ
[ಬದಲಾಯಿಸಿ]ದೇಶಭಕ್ತಿ ಸಾಹಿತ್ಯದ ತರುವಾಯ ಲೇಖಕರ ಮತ್ತೊಂದು ತಂಡ ಒರಿಸ್ಸದಲ್ಲಿ ಅಂಕುರಿಸಿತು. ಈ ತಂಡದವರು ಸವುಜ (ಹಸಿಯ) ಸಾಹಿತ್ಯವನ್ನು ನಿರ್ಮಿಸಿದರು. ಸವುಜವೆಂಬುದು ಬಂಗಾಳಿಯಿಂದ ತೆಗೆದುಕೊಂಡ ಶಬ್ದ. ಆ ಕಾಲದಲ್ಲಿ ಬಂಗಾಳದಲ್ಲೂ ತರುಣರ ಒಂದು ತಂಡ ಸವುಜದಳವೆಂಬ ಹೆಸರನ್ನಿಟ್ಟುಕೊಂಡು ಬರೆಯತೊಡಗಿತ್ತು. ಅದರ ಪ್ರಭಾವ ಒರಿಯ ಸಾಹಿತ್ಯದ ಮೇಲೂ ಸಾಕಷ್ಟು ಆಯಿತು. ಕಾಳಿಂದೀಚರಣ ಪಾಣೆಗ್ರಾಹಿ, ಹರಿಹರ್ ಮಹಾಪಾತ್ರ, ಅನ್ನದಾ ಶಂಕರ ರಾಯ್, ಶರತ್ಚಂದ್ರ ಮುಖರ್ಜಿ ಮತ್ತು ಬೈಕುಂಠನಾಥ ಪಟ್ಟನಾಯಕ ಎಂಬ ಐದು ಮಂದಿ 1913ರಲ್ಲಿ ಕಾಲೇಜು ವಿದ್ಯಾರ್ಥಿಗಳಾಗಿದ್ದರು. ಈ ಐವರೂ ಒಂದು ಸಂಘವನ್ನು ಕಟ್ಟಿಕೊಂಡು ಅದಕ್ಕೆ ನಾನ್ಸೆನ್ಸ್ ಕ್ಲಬ್ ಎಂದು ನಾಮಕರಣ ಮಾಡಿ ಅದರ ವತಿಯಲ್ಲಿ ಪ್ರಣಯವನ್ನೇ ಮುಖ್ಯ ವಸ್ತುವಾಗುಳ್ಳ ಕವಿತೆಗಳನ್ನು ಬರೆಯಲು ತೊಡಗಿದರು. 1921ರಲ್ಲಿ ಈ ಸಂಘ ಸವುಜಸಾಹಿತ್ಯ ಸಮಿತಿಯಾಗಿ ಮಾರ್ಪಾಡು ಹೊಂದಿತು. ಆಗ ಇದಕ್ಕೆ ಇನ್ನೂ ಕೆಲವು ಮಂದಿ ಸದಸ್ಯರಾಗಿ ಸೇರಿದರು. ಐವರು ಲೇಖಕರ ಕವನಗಳನ್ನೊಳಗೊಂಡ ಸವುಜಕವಿತಾ ಎಂಬ ಕವನ ಸಂಗ್ರಹವೊಂದು ಪ್ರಕಟವಾಯಿತು. ಈ ಸಂಘದ ಹದಿಮೂರು ಮಂದಿ ಒಟ್ಟು ಸೇರಿ ಬಾಸಂತಿ ಎಂಬ ಕಾದಂಬರಿಯನ್ನು ರಚಿಸಿದರು. ಇದರಲ್ಲಿ ಸಮಾಜಪರಿಷ್ಕರಣ ಭಾವನೆಗಳಿದ್ದವು. ಈ ಕಾದಂಬರಿಯ ವೈಶಿಷ್ಟ್ಯವೇನೆಂದರೆ ಹದಿಮೂರು ಮಂದಿ ಲೇಖಕರು ಒಬ್ಬೊಬ್ಬರೂ ಎರಡು ಮೂರು ಅಧ್ಯಾಯಗಳನ್ನು ಬರೆದು ಈ ಕಥೆಯನ್ನು ಪುರೈಸಿದುದು. ಈ ಅವಧಿಯ (1913-31) ವರೆಗಿನ ಕವಿಗಳು ತೊರೆದೋಡುವವರು (ಎಸ್ಕೇಪಿಸ್ಟ್‌್ಸ) ಎಂಬ ನಿಂದೆಗೆ ಪಾತ್ರಾರಾದರು. ಈ ಭೂಮಿ ಪ್ರೇಮಕ್ಕೆ ಯೋಗ್ಯವಾದ ಸ್ಥಾನವಲ್ಲವೆಂದು ಇವರು ಭಾವಿಸಿದ್ದರಲ್ಲದೆ ಈ ಲೋಕವನ್ನು ತ್ಯಜಿಸಿ ಪ್ರಣಯಕ್ಕಾಗಿ ಸ್ವರ್ಗಕ್ಕೇರಬಂiÀÄಸಿದ್ದರು. ಹುರುಳಿಲ್ಲದ್ದರಿಂದ ಇಂಥ ಕಾವ್ಯ ಬಹಳ ಕಾಲ ಜೀವಿಸಲಾರದೆ ಹೋಯಿತು.
ಸಮಕಾಲೀನ ಯುಗ
[ಬದಲಾಯಿಸಿ]ಈ ಯುಗದ ಕವಿತಾ ಕ್ಷೇತ್ರವನ್ನು ಮೊದಲು ಪರಿಶೀಲಿಸಬಹುದು. ಸವುಜ ಕಾಲದಲ್ಲಿ ಮೇಲಕ್ಕೆ ಬಂದವರಾದರೂ ಸವುಜ ಸಮಿತಿಗೆ ಸೇರದೆ ಇದ್ದ ಮಾಯಾಧರ್ ಮಾನಸಿಂಘ, ಸಚ್ಚಿ ತಾಟ್ರೆ, ಕುಂತಲ ಕುಮಾರಿ ಸಾಬತ್ ಮುಂತಾದ ಕೆಲವು ಕವಿಗಳು ಸಣ್ಣ ದೊಡ್ಡ ಸ್ವತಂತ್ರ ಕವಿತೆಗಳನ್ನು ಬರೆದಿದ್ದಾರೆ.
ಒರಿಸ್ಸ ಸಾಹಿತ್ಯದಲ್ಲಿ ಪ್ರಣಯ ಕವಿತೆಗೆ ಮಾಯಾಧರ್ ಮಾನಸಿಂಘ ಪ್ರಖ್ಯಾತನಾಗಿದ್ದಾನೆ. ಪ್ರಣಯದ ವಿಷಯದಲ್ಲಿ ಆತನ ಭಾವನೆಗಳನ್ನೂ ಅನುಭವಗಳನ್ನೂ ನಿಶ್ಯಂಕೆಯಿಂದ ರೂಪಿಸುವ ಪ್ರಣಯಪದ್ಯಗಳ ಸಂಕಲನವೆಂದರೆ ಆತನ ಧೂಪ ಎಂಬ ಗ್ರಂಥ. ಹೇಮಪುಷ್ಪ ಮತ್ತು ಹೇಮಸಸ್ಯ ಎಂಬುವು ಇದೇ ತರದ ಪದ್ಯಗಳನ್ನೊಳಗೊಂಡ ಮತ್ತೆರಡು ಪುಸ್ತಕಗಳು. ಈಚೆಗೆ ಅಂದರೆ 1948ರ ತರುವಾಯ ಮಾನಸಿಂಘ ಕವಿತೆಯ ವಿಷಯದಲ್ಲಿ ತನ್ನ ದೃಷ್ಟಿಯನ್ನು ಬದಲಾಯಿಸಿದ್ದಾನೆ. ತಪಾಸ ಧ್ಯೇಯಗಳು ಈಗ ಆತನ ಕವಿತಾಮನೋಭಾವಕ್ಕೆ ವಿಷಯಗಳಾಗಿವೆ. ಈ ಪರಿವರ್ತಿತ ಮನೋಭಾವಕ್ಕೆ ಕಮಳಾಯನ ಎಂಬ ಗ್ರಂಥ ಅತ್ಯುತ್ತಮ ನಿದರ್ಶನವಾಗಿದೆ. ಪ್ರಣಯದ ಶಾರೀರಿಕ ಪ್ರಶಂಸೆಗೆ ಈತನ ಪುರ್ವದ ಕವಿತೆಗಳು ಮೀಸಲಾಗಿದ್ದರೆ, ಇತ್ತೀಚಿನ ಕವಿತೆಗಳು ಪ್ರೇಮದ ಆಧ್ಯಾತ್ಮ ಸ್ವರೂಪವನ್ನು ಪ್ರಕಟಿಸುತ್ತವೆ. ಕುಂತಳಕುಮಾರಿ ಸಾವತಳು ಬಗೆಬಗೆಯ ಭಾವಗಳನ್ನು ಕುರಿತು ಅನೇಕ ಪದ್ಯಗಳನ್ನು ಬರೆದಿದ್ದಾಳೆ. ಎಲ್ಲ ಧರ್ಮಗಳಲ್ಲೂ ಮಾನವತೆಯಲ್ಲೂ ವಿಶ್ವಾಸವಿಟ್ಟ ದೇಶಾಭಿಮಾನಿ ಈಕೆ ಸ್ಫುಲಿಂಗ ಎಂಬ ಕವನಸಂಗ್ರಹದಲ್ಲಿ ಈಕೆಯ ದೇಶಾಭೀಮಾನ ಮತ್ತು ಕ್ರಾಂತಿಕಾರಕ ಭಾವನೆಗಳು ಸಮರ್ಥಕವಾಗಿ ವ್ಯಕ್ತವಾಗಿವೆ. ಈಕೆಯ ಪ್ರೇಮಚಿಂತಾಮಣಿಯಲ್ಲಿ ರಾಧಾಕೃಷ್ಣರ ಆಧ್ಯಾತ್ಮಿಕ ಪ್ರೇಮ ವರ್ಣಿತವಾಗಿದೆ. ಶ್ರೀ ಸಚ್ಚಿದಾನಂದ ರೌತ್ರೆ ಈ ಕಾಲದ ಅತ್ಯಂತ ಶಕ್ತನಾದ ಕವಿ. 1925ರಲ್ಲಿ ಈತ ಕವಿತೆಯನ್ನು ಬರೆಯಲು ತೊಡಗಿದ. ಎಳೆತನದಲ್ಲಿ ಪ್ರಣಯ ಕವಿತೆಗಳನ್ನು ಬರೆದ. 1931 ರಿಂದೀಚೆಗೆ ಈತ ಕ್ರಾಂತಿಕಾರಕ ಕವಿತೆಗಳನ್ನು ಬರೆದಾಗ ಈತನ ಭಾವನೆ ಬದಲಾಯಿಸಿರುವುದು ಬೆಳಕಿಗೆ ಬಂದಿತು. ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳಿಗೂ ಇರುವ ಅಸಮಾನತೆಯನ್ನು ಈತ ಖಂಡಿಸಿದ. ಮಾನವಪ್ರಕೃತಿಯ ವಿಷಯದಲ್ಲಿ ಈತನ ಭಾವನೆಗಳೆಂಥವೆಂಬುದನ್ನು ಪಾಂಡುಲಿಪಿ ಎಂಬ ಗ್ರಂಥ ತೋರಿಸುತ್ತದೆ. ಈತನ ಭಾನುಮತಿರ ದೇಶ ಎಂಬ ಕವಿತೆ ಸರಳ ರಗಳೆಯಲ್ಲಿ ರಚಿತವಾಗಿರುವ ಬಹುಶ್ರೇಷ್ಠ ಕವಿತೆ. ಇದು ಈತನಿಗೆ ಒರಿಸ್ಸ ಸಾಹಿತ್ಯದಲ್ಲಿ ಉನ್ನತ ಸ್ಥಾನಗಳಿಸಿಕೊಟ್ಟಿದೆ. ಬಾಜಿ ರೌತ್ ಎಂಬುದು ಒಂದು ಶ್ರೇಷ್ಠ ಪದ್ಯ. ಧೆಂಕನಾಳ್ ರಾಜ್ಯದಲ್ಲಿ ನಡೆದ ಉತ್ಕ್ರಾಂತಿಯಲ್ಲಿ ಬಾಜಿ ರೌತನ ಮರಣವೇ ಇದರ ವಸ್ತು. ಬಾಜಿ ರೌತ ಧೆಂಕನಾಳಿನ ಒಬ್ಬ ಚಿಕ್ಕ ಹುಡುಗ. ತಮ್ಮನ್ನು ದೋಣಿಯಲ್ಲಿ ಕೂರಿಸಿಕೊಂಡು ಹೋಗದಿದ್ದುದಕ್ಕಾಗಿ ಪೊಲೀಸಿನವರು ಇವನನ್ನು ಗುಂಡಿಕ್ಕಿ ಕೊಂದರು. ಇದನ್ನು ಕುರಿತ ಮೂಲ ಕವಿತೆ ಇಂಗ್ಲಿಷ್ ಮತ್ತು ಇತರ ಯುರೋಪಿಯನ್ ಭಾಷೆಗಳಿಗೆ ಅನುವಾದಗೊಂಡಿದೆ (ದಿ ಬೋಟ್ಮನ್ ಬಾಯ್ ಅಂಡ್ ಫಾರ್ಟಿ ಅದರ್ ಪೊಯೆಮ್ಸ್).
ರಾಧಾಮೋಹನ್ ಗರ್ನಾಯಕ್ ಸಂಪನ್ನ ಶೈಲಿಯ ಒಬ್ಬ ಜನಪ್ರಿಯ ಕವಿ. ಜಾನಪದ ಕಥನಕವನಗಳಿಗಾಗಿ ಈತ ಪ್ರಖ್ಯಾತನಾಗಿದ್ದಾನೆ. ಇವು ಉತ್ಕಳಿಕಾ ಎಂಬ ಪುಸ್ತಕದಲ್ಲಿ ಪ್ರಕಟವಾಗಿವೆ. ಈತನ ಪಸುಪಖಿರ ಕಾವ್ಯ ಎಂಬುದು ಪ್ರಖ್ಯಾತ ಮೃಗಪಕ್ಷಿಗಳ ಮೇಲೆ-ಎಂದರೆ ವಾಲ್ಮೀಕಿ ಮಹರ್ಷಿಯ ಮುಂದೆಯೇ ಹತವಾದ ಕ್ರೌಂಚ ಪಕ್ಷಿ, ರಷ್ಯದ ರಾಕೆಟ್ಟಿನಲ್ಲಿ ಗಗನಯಾತ್ರೆ ಮಾಡಿದ ಲೈಕಾ ಎಂಬ ನಾಯಿ-ಮುಂತಾದವುಗಳ ಮೇಲೆ ಬರೆದ ಪದ್ಯಗಳನ್ನು ಒಳಗೊಂಡಿದೆ.
ಅನಂತರದವರಲ್ಲಿ ಪಟ್ಟನಾಯಕ ಮತ್ತೊಬ್ಬ ಜನಪ್ರಿಯ ಕವಿ. ಈತನ ಕವಿತೆಗಳು ಅನೇಕ ಪತ್ರಿಕೆಗಳಲ್ಲಿ ಅಚ್ಚಾಗುತ್ತಿವೆ. ಈತನ ಶೈಲಿ ಗಡುಸು. ಈತನದು ಕ್ರಾಂತಿಯ ಮನೋಭಾವ. ಈಗಿನ ಸಾಮಾಜಿಕ ರೂಢಿಯನ್ನು ಪ್ರತಿಭಟಿಸುವುದೇ ಈತನ ಧ್ಯೇಯ. ಬಿನೋದ್ ಚಂದ್ರ ನಾಯಕನೂ ಅನೇಕ ಪದ್ಯಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಶೃಂಗಾರ ಕಲ್ಪನೆಯ ಪದ್ಯಗಳು ಅನೇಕವಾಗಿವೆ. ಈತನ ನೀಲಚಂದ್ರರ ಉಪತ್ಯಕಾ ಎಂಬುದು ಅಂಥದೊಂದು ಸಂಗ್ರಹ. ಕುಂಜ ಬಿಹಾರಿಯ ಹಲವಾರು ಗ್ರಂಥಗಳು ಪ್ರಕಟವಾಗಿವೆ. ಚಾರಣಿಕಾ ಎಂಬುದು ಆತನ ಅನೇಕ ಪದ್ಯಗಳ ಸಂಗ್ರಹ. ಈ ಕಾಲದ ಪ್ರಖ್ಯಾತ ಕವಿಯಾದ ಗೋದಾವರೀಶ್ ಮಹಾಪಾತ್ರ ಸ್ವೋಪಜ್ಞ ಶೈಲಿಯನ್ನು ಪ್ರಬಲವಾದ ಪ್ರತಿಭೆಯನ್ನೂ ಪಡೆದಿದ್ದಾನೆ. ವಿಡಂಬನ ಕವಿತೆಗಳಿಗೂ ಈತ ಪ್ರಸಿದ್ಧ. ಈತನ ಕಂಟಾ ಓ ಫೂಲ ಮತ್ತು ಉಠ ಕಂಕಾಳ ಎಂಬವು ಕ್ರಾಂತಿಕಾರಕ ಭಾವನೆಯ ವಿಡಂಬನ ಕವಿತೆಗಳ ಸಂಗ್ರಹಗಳು. ಕಿರಿಯ ತಲೆಮಾರಿನವರ ಪೈಕಿ ಚಿಂತಾಮಣಿ ಬೆಹೆರಾ ಮತ್ತು ಜಾನಕಿ ಮೊಹಾಂತಿ ಎಂಬುವರು ಗಣನೀಯರಾಗಿದ್ದಾರೆ. ಬೆಹೆರಾನ ನೂತನ ಸ್ವಾಖ್ಯರ ಮತ್ತು ಮೊಹಾಂತಿಯ ತಿಜರ್ಯ್‌ಕ್ ಎಂಬ ಗ್ರಂಥಗಳು ಆಧುನಿಕ ಲೇಖಕರ ಶಕ್ತಿಸಾಮಥರ್ಯ್‌ಗಳಿಗೆ ನಿದರ್ಶನಗಳಾಗಿವೆ. ಕೇವಲ ಪತ್ರಿಕೆಗಳಿಗೆ ಮತ್ತು ಕಾಲಿಕಗಳಿಗೆ ಬರೆಯುವ ಅನೇಕ ಕವಿಗಳಿದ್ದಾರೆ. ಇವರ ಕಾಣಿಕೆಗಳೂ ಬೆಲೆಯುಳ್ಳವು.
ಕಾದಂಬರಿಗಳು
[ಬದಲಾಯಿಸಿ]ಉಮೇಶಚಂದ್ರ ವಿರಚಿತ ಪದ್ಮಮಾಳಿ ಎಂಬುದೇ ಒರಿಯ ಭಾಷೆಯ ಪ್ರಥಮ ಕಾದಂಬರಿಯೆಂದು ಪರಿಣಿತವಾಗಿದೆ. ಇದು ಪದ್ಮಮಾಳಿ ಮತ್ತು ಪರಿಖಿತರ ಪ್ರಣಯ ಪ್ರಸಂಗವನ್ನು ವರ್ಣಿಸುತ್ತದೆ. ಗೋಪಾಲವಲ್ಲಭದಾಸ ಬರೆದ ಭೀಮಾ ಭುಯಾನ್ ಎಂಬ ಮತ್ತೊಂದು ಕಾದಂಬರಿ ಕಥಾನಾಯಕ ಭೀಮನ ಕಥೆಯನ್ನು ಕುರಿತುದಾಗಿದೆ. ಒರಿಸ್ಸ ಆದಿವಾಸಿ ಕುಲಗಳ ಸಾಮಾಜಿಕ ರೂಢಿಗಳು ಇಲ್ಲಿ ವರ್ಣಿತವಾಗಿವೆ. ರಾಮಶಂಕರ್ ರಾಯ್ ಬರೆದ ಬಿಬಾಸಿನಿ ಎಂಬುದು ಒಂದು ಐತಿಹಾಸಿಕ ಕಾದಂಬರಿ.
ಈ ಮೂರು ಕಾದಂಬರಿಗಳ ತರುವಾಯ, ಫಕೀರ್ ಮೋಹನ್ ಸೇನಾಪತಿಯ ಛ ಮಾಣ ಅಠಗುಂಠ ರಚಿತವಾಗುವವರೆಗೆ (1897) ಮತ್ತಾವ ಕಾದಂಬರಿಯೂ ಗೋಚರಿಸುವುದಿಲ್ಲ. ಈ ಕಾದಂಬರಿ ಒರಿಸ್ಸ ಸಾಹಿತ್ಯದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯನ್ನು ತಂದಿತು. ಭಗಿಯಾ ಎಂಬ ಒಬ್ಬ ಭೂಮಾಲೀಕ ಮತ್ತು ಸಾರಿಯಾ ಎಂಬ ಆತನ ಮಡದಿ ತಮ್ಮ ಭೂಮಿಯ ಸಲುವಾಗಿ ರಾಮಚಂದ್ರ ಮಂಗರಾಜನೆಂಬಾತನ ಕುಹಕ ತಂತ್ರಕ್ಕೆ ಸಿಕ್ಕಿ ಅನೇಕ ಕಷ್ಟಗಳನ್ನು ಅನುಭವಿಸಿದ ಪರಿಯನ್ನು ಈ ಕಾದಂಬರಿ ವರ್ಣಿಸುತ್ತದೆ. ಶೈಲಿ ಹಾಸ್ಯಮಯವಾಗಿದ್ದರೂ ಘಟನೆ ವಿಷಾದಾಂತವಾಗಿದೆ. ಲಛ್ಛಮಾ, ಮಾಮು ಮತ್ತು ಪ್ರಾಯಶ್ಚಿತ್ತ ಎಂಬ ಮೂರು ಇತರ ಕಾದಂಬರಿಗಳನ್ನೂ ಫಕೀರಮೋಹನ ಬರೆದ. ಎರಡು ಶತಮಾನಗಳವರೆಗಿನ, ಎಂದರೆ 18 ಮತ್ತು 19ನೆಯ ಶತಮಾನಗಳ ಒರಿಸ್ಸ ದೇಶದ ರಾಜಕೀಯ ಮತ್ತು ಸಾಮಾಜಿಕ ಇತಿಹಾಸ ಈ ನಾಲ್ಕು ಕಾದಂಬರಿಗಳಲ್ಲಿ ಸಿಕ್ಕುತ್ತದೆ. ಈತನ ಸಮಕಾಲೀನರಾದ ಚಿಂತಾಮಣಿ ಮೊಹಾಂತಿ ಸನಿಸಪ್ತಾ ಮತ್ತು ಟಂಕಾಗಚ್ಛ ಎಂಬುವನ್ನು ಬರೆದ. ಕನಕಲತೆ ಧನಂಜಯರಾಯನನ್ನು ಪ್ರೀತಿಸಿ ಮದುವೆಯಾದ ಪ್ರಸಂಗವನ್ನು ಕುರಿತ ಕನಕಲತಾ ಎಂಬ ಕಾದಂಬರಿಯನ್ನು ನಂದಕಿಶೋರ ಬಳ್ ರಚಿಸಿದ.
ಗೋದಾವರೀಶ್ ಮಿಶ್ರ ಹಲವಾರು ಕಾದಂಬರಿಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಕೆಲವು ಮೂಲ ಇಂಗ್ಲಿಷ್ ಕೃತಿಗಳ ಭಾಷಾಂತರಗಳು. ಆತನ ಅಭಾಗಿನಿ ಎಂಬುದು ವಿಕ್ಟರ್ ಹ್ಯೂಗೊನ್ ಲೇ ಮಿಸರಬ್ಲೇ ಕೃತಿಯ ಭಾಷಾಂತರ. ಕಮಲಾಕಾಂತ ದಾಸ ಅನೇಕ ಕಾಲ್ಪನಿಕ ಕಾದಂಬರಿಗಳನ್ನು ರಚಿಸಿದ. ಅವುಗಳಲ್ಲಿ ಚೌ ಎಂಬುದು ಅತ್ಯುತ್ತಮವಾಗಿದೆ. ಲಕ್ಷ್ಮೀಕಾಂತ ಮಹಾಪಾತ್ರ ಕಣಾಮಾಮು ಎಂಬ ಹಾಸ್ಯರಸಪ್ರಧಾನವಾದ ಕಾದಂಬರಿಯನ್ನು ಬರೆದ. ಬೈಷ್ಣಬ್ ಚರನ್ ದಾಸ ಮನೆ ಮನೆ ಎಂಬ ಕಾಲ್ಪನಿಕ ಕಾದಂಬರಿಯನ್ನು ರಚಿಸಿದ.
ರಾಜಕಿಶೋರ್ ಪಟ್ಟನಾಯಕ, ನಿತ್ಯಾನಂದ ಮಹಾಪಾತ್ರ, ಕಾನ್ಹುಚರಣ ಮೊಹಾಂತಿ, ಗೋಪಿನಾಥ್ ಮೊಹಾಂತಿ ಎಂಬುವರು ಆದ್ಯಕಾಲೀನ ಪ್ರಖ್ಯಾತ ಕಾದಂಬರಿಕಾರರು. ರಾಜಕಿಶೋರ್ ಪಟ್ಟನಾಯಕನ ಅನೇಕ ಕಾದಂಬರಿಗಳಲ್ಲಿ ಸಿಂದುರಗಾರ, ಕಜóಲಗಾರ, ಪಂಜುರಿ ಪಕ್ಷಿ, ಛಲಾ ಬಾಟ ಎಂಬುವು ಗಮನಾರ್ಹವಾದ ಕೆಲವು. ಕಾನ್ಹು ಚರಣ ಮೊಹಾಂತಿ ಈ ಕಾಲದ ಪ್ರಖ್ಯಾತ ಕಾದಂಬರಿಕಾರ. ಈತ ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ಕೀರ್ತಿವಂತನಾಗಿದ್ದಾನೆ. ಹಾ ಅನ್ನ, ಸಾಸ್ತಿ, ಝಡರ ಶೇಷ, ಝಂಜಾ, ಕಾ ಮತ್ತು ಬಜ್ರಬಾಹು ಎಂಬುವು ಈತನ ಪ್ರಸಿದ್ಧ ಕಾದಂಬರಿಗಳು. ಆಧುನಿಕ ಒರಿಯ ಸಾಹಿತ್ಯದಲ್ಲಿ ಈತನ ಶೈಲಿ ವಿಲಕ್ಷಣವಾಗಿದೆ. ಫಕೀರ ಮೋಹನನ ತರುವಾಯ ಒರಿಯ ಲೇಖಕರ ಮೇಲೆ ತುಂಬ ಪ್ರಭಾವ ಬೀರಿರುವವ ಈತನೊಬ್ಬನೇ. ಪರಜಾ, ದಾಡಿ ಬುಢಾ, ಅಮೃತಸರ ಸಂತಾನ್, ಹರಿಜನ, ರಾಹುರ ಚ್ಛಾಯಾ ಮುಂತಾದುವು ಗೋಪೀನಾಥ ಮೊಹಾಂತಿಯ ಕೆಲವು ಕಾದಂಬರಿಗಳು. ಅವುಗಳ ಪೈಕಿ ಪರಜಾ ಎಂಬುದು ಅತ್ಯುತ್ತಮವಾಗಿದೆ. ಈತನ ಶೈಲಿ ಸರಳವೂ ವಿಶದವೂ ಸ್ವೋಪಜ್ಞವೂ ಆಗಿ ಒಳ್ಳೆಯ ಮಾದರಿಯಾಗಿದೆ.
ಕಾಳಿಂದೀಚರಣ ಪಾಣಿಗ್ರಾಹಿ ಎಂಬಾತ ಮಾಟಿರ ಮನಿಸ, ಲುಹಾರ ಮನಿಸ, ಮುಕ್ತಾ ಗದರ ಕ್ಷುಧಾ ಮತ್ತು ಅಮರ ಚಿತಾ ಎಂಬವನ್ನು ಬರೆದಿದ್ದಾನೆ. ಆತನ ಮಾಟಿರ ಮನಿಸ ಎಂಬುದು ವಾಸ್ತವ ಕಥೆಯೊಂದನ್ನು ಅವಲಂಬಿಸಿ ರಚಿತವಾಗಿದ್ದು ಜನಪ್ರಿಯವೆನಿಸಿದೆ. ಹರೇಕೃಷ್ಣ ಮಹತಾಬ್ ಬರೆದಿರುವ ಕಾದಂಬರಿಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸುಧಾರಣೆಗಳ ಬಗೆಗೆ ಆತನಿಗಿದ್ದ ಒಲವು ಎದ್ದು ಕಾಣುತ್ತದೆ. ಪ್ರತಿಭಾ ಮತ್ತು ಟಾರ್ಟರ್ ಎಂಬ ಆತನ ಕೃತಿಗಳು ಜನಪ್ರಿಯವಾಗಿವೆ.
ಸಣ್ಣ ಕಥೆಗಳು
[ಬದಲಾಯಿಸಿ]ಫಕೀರ್ ಮೋಹನ್ ಸೇನಾಪತಿ ಬರೆದ ರೇಬತಿ ಎಂಬುದು ಒರಿಯ ಭಾಷೆಯ ಮೊದಲ ಸಣ್ಣ ಕಥೆ. ಈ ಕಥೆಯಲ್ಲಿ ಲೇಖಕ ಒರಿಸ್ಸ ದೇಶದಲ್ಲಿ ಸ್ತ್ರೀ ವಿದ್ಯಾಭ್ಯಾಸಕ್ಕಿದ್ದ ಕಷ್ಟಗಳನ್ನು ಎತ್ತಿ ತೋರಿಸಿದ್ದಾನೆ. ಕವಿಯ ಇಲ್ಲಿನ ಉದ್ದೇಶ ಸಮಾಜಸುಧಾರಣೆ. ಪೇಟೆಂಟ್ ಮೆಡಿಸನ್, ರಾಂಡೀಪುರ, ಅನಂತಾ, ಡಾಕ್ ಮುನ್ಷಿ, ಗಾರುಡಿಮಂತ್ರ, ಧುಳಿಯಾ ಬಾಬಾ ಮುಂತಾದುವೂ ಸುಧಾರಣಾದೃಷ್ಟಿಯಿಂದಲೇ ಬರೆದವಾಗಿವೆ. ಫಕೀರ ಮೋಹನನಿಗೆ ಮಾನವಸ್ವಭಾವದ ಸೂಕ್ಷ್ಮಜ್ಞಾನವಿತ್ತು. ಆತನ ಸಣ್ಣ ಕಥೆಗಳು ಜನರಿಗೆ ಮೆಚ್ಚಿಗೆಯಾಗಿವೆ.
ಗೋಪಾಲ ಚಂದ್ರಪ್ರಹರಾಜ ಕೆಲವು ಸಣ್ಣ ಕಥೆಗಳನ್ನು ಬರೆದಿದ್ದಾನೆ. ಆದರೆ ಅವು ಮುಖ್ಯವಾಗಿ ಜಾನಪದ ಕಥೆಗಳ ವರ್ಗಕ್ಕೆ ಸೇರುತ್ತವೆ. ಆದುದರಿಂದ ಅವುಗಳಲ್ಲಿ ಆಧುನಿಕ ಸಣ್ಣ ಕಥೆಗಳ ಲಕ್ಷಣ ಕಂಡುಬರುವುದಿಲ್ಲ. ರಾಜಕಿಶೋರ ರೇ ಎಂಬಾತ ಈ ಕಾಲದ ಪ್ರಖ್ಯಾತ ಕಥೆಗಾರ. ಈತ ತನ್ನ ಸ್ವಂತ ಅನುಭವಗಳನ್ನೇ ಕಥಾರೂಪದಲ್ಲಿ ಹಿಡಿದಿಟ್ಟಿದ್ದಾನೆ. ಮನರ ಮೃಣಾಳ ಮತ್ತು ನೀಳ ಲಹರಿ ಎಂಬವು ಆತನ ಕಥಾಸಂಗ್ರಹಗಳು. ಸುರೇಂದ್ರ ಮೊಹಾಂತಿ ಮತ್ತೊಬ್ಬ ಪ್ರಸಿದ್ಧ ಕಥೆಗಾರ. ಕೃಷ್ಣ ಚೂಡಾ, ಸವುಜ ಪತ್ರ ಓ ಧುಸರ ಗೋಪಾಲ ಎಂಬುವು ಆತನ ಬೇರೆ ಬೇರೆ ಸಂಗ್ರಹಗಳು. ಬಸಂತ ಕುಮಾರಿ ಪಟ್ಟನಾಯಕಳು ವಿವಿಧ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತಾಳೆ. ಪಾಲಟಾ ಧೆಯು ಮತ್ತು ಸಭ್ಯತಾರ ಸಾಜ ಎಂಬುವು ಆಕೆಯ ಎರಡು ಕಥಾಸಂಗ್ರಹಗಳು. ರಾಜಕಿಶೋರ್ ಪಟ್ಟನಾಯಕ, ನಿತ್ಯಾನಂದ ಮಹಾಪಾತ್ರ, ದೇವೇಂದ್ರ ಮೊಹಾಂತಿ, ಮನೋಜ್ ದಾಸ್, ಬಾಮಾ ಚರಣ್ ಮಿತ್ರ, ಸದಾನಂದ ದಾಸ್ ಮತ್ತು ಇತರ ಅನೇಕ ತರುಣ ಬರಹಗಾರರು ಅನೇಕ ಪತ್ರಿಕೆಗಳಲ್ಲಿ ಕಥೆಗಳನ್ನು ಪ್ರಕಟಿಸುತ್ತಿದ್ದಾರಲ್ಲದೆ ಅನೇಕರು ತಮ್ಮ ಕಥಾ ಸಂಗ್ರಹಗಳನ್ನು ಗ್ರಂಥರೂಪವಾಗಿ ಬೆಳಕಿಗೆ ತಂದಿದ್ದಾರೆ. ಆಧುನಿಕ ಒರಿಯ ಸಾಹಿತ್ಯದಲ್ಲಿ ಸಣ್ಣ ಕಥೆಗಳು ತಕ್ಕಷ್ಟು ಉದಿಸಿವೆ. ಅವುಗಳಲ್ಲಿ ಹಲವಾರು ಮೇಲುಮಟ್ಟವನ್ನು ಮುಟ್ಟಿವೆ.
ನಾಟಕ
[ಬದಲಾಯಿಸಿ]ಕಾಂಚಿ ಕಾವೇರಿ ಎಂಬ ಮೊಟ್ಟಮೊದಲಿನ ಒರಿಯ ನಾಟಕವನ್ನು ರಾಮ ಶಂಕರ ರಾಯ್ 1880ರಲ್ಲಿ ಬರೆದ. ಆತ ಬನಮಾಳಾ, ರಾಮ ಬನಬಾಸ್, ಜುಗಧರ್ಮ, ಲೀಳಾವತಿ ಮುಂತಾದ ಇತರ ಅನೇಕ ನಾಟಕಗಳನ್ನೂ ಬರೆದಿದ್ದಾನೆ. ಸಂಸ್ಕೃತ ಮತ್ತು ಇಂಗ್ಲಿಷ್ ಪ್ರಭಾವವನ್ನು ಸ್ಪಷ್ಟವಾಗಿ ಆತನಲ್ಲಿ ಕಾಣಬಹುದು. ಸೀತಾ ಬಿಬಾಹ ಎಂಬ ಮತ್ತೊಂದು ನಾಟಕ ಕಾಮಪಾಳ ಮಿಶ್ರನ ಕೃತಿ. ಕಟಕ ಬಿಜೊಯ ಎಂಬುದು ಭಿಕಾರಿಚರಣ ಪಟ್ಟನಾಯಕ ರಚಿಸಿದ ಐತಿಹಾಸಿಕ ನಾಟಕ. ಮೂವತ್ತಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ಬರೆದಿರುವ ಗಣ್ಯನಾಟಕಕಾರ ಅಶ್ವಿನಿಕುಮಾರ್ ಘೋಷ್. ಆತನ ಕಳಾಪಾಹಡ, ಸಿಯೋಜಿ, ಗೌಡ ಬಿಜೇತಾ ಎಂಬುವು ಖ್ಯಾತವಾಗಿವೆ. ಗೋದಾವರೀಶ್ ಮಿಶ್ರ ಐತಿಹಾಸಿಕ ಪ್ರಸಂಗಗಳನ್ನು ತೆಗೆದುಕೊಂಡು ಪುರುಷೋತ್ತಮದೇವ ಮತ್ತು ಕಪಿಳೇಂದ್ರದೇವ ಎಂಬೆರಡು ನಾಟಕಗಳನ್ನು ಬರೆದಿದ್ದಾನೆ. ಆಧುನಿಕ ಕಾಲದ ಅತ್ಯುತ್ತಮ ನಾಟಕಕಾರನೆಂದು ಪರಿಗಣಿತನಾದವನೆಂದರೆ ಕಾಳಿಚರಣ್ ಪಟ್ಟನಾಯಕ. ಒರಿಸ್ಸದಲ್ಲಿ ಸ್ಥಿರವಾದ ರಂಗಮಂಟಪವನ್ನು ನಿರ್ಮಿಸಿದವ ಈತನೇ. ಸುಮಾರು ಹದಿನೈದು ನಾಟಕಗಳನ್ನು ಈತ ಬರೆದಿದ್ದಾನೆ. ಅವುಗಳಲ್ಲಿ ಅಭಿಜಾನ, ರಕ್ತಮಾಟಿ, ಭಾಟ, ಗಲ್ರ್ಸ್ ಸ್ಕೂಲ್-ಎಂಬುವು ಪ್ರಖ್ಯಾತವಾಗಿವೆ. ಭಂಜಕಿಶೋರ್ ಪಟ್ಟನಾಯಕ ಮೂವತ್ತು ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಬೆನಮಿ, ಮಾಣಿಕ ಜೋಡಿ ಮತ್ತು ಜೀವನ ಜುಅ ಎಂಬುವು ಜನಪ್ರಿಯವಾಗಿವೆ. ಭರಸಾ, ಪರಕಲಮ ಮತ್ತು ಅರ್ಧಾಂಗಿನಿ ಎಂಬುವನ್ನು ರಚಿಸಿ ಒಳ್ಳೆಯ ನಾಟಕಕಾರನೆಂದೆನಿಸಿಕೊಂಡವ ಗೋಪಾಲ್ ಛೋಟ್ರಾಯ್. ಆಧುನಿಕ ನಾಟಕಕಾರರ ಪೈಕಿ ಮನೋರಂಜನ್ ದಾಸ್, ರಾಮಚಂದ್ರ ಮಿಶ್ರ, ಅದ್ವೈತ ಚರಣ ಮೊಹಾಂತಿ ಎಂಬವರು ಗಣನೀಯರು. ಪ್ರಾಣಬಂಧು ಕರ್ ಮತ್ತು ಜಾನಕೀ ಬಲ್ಲಭ ಮೊಹಾಂತಿ ಎಂಬುವರು ಫಕೀರ್ ಮೋಹನ್, ಕನ್ಹುಚರಣ ಮೊಹಾಂತಿ ಮತ್ತು ಗೋಪೀನಾಥ ಮೊಹಾಂತಿಗಳ ಕೆಲವು ಕಾದಂಬರಿಗಳನ್ನು ನಾಟಕಗಳಾಗಿ ಪರಿವರ್ತಿಸಿದ್ದಾರೆ. ಪ್ರಾಣಬಂಧುಕರ್ ತನ್ನ ಏಕಾಂಕ ನಾಟಕಗಳಿಗಾಗಿ ಕೀರ್ತಿವೆತ್ತಿದ್ದಾನೆ.
ವಿಮರ್ಶೆ
[ಬದಲಾಯಿಸಿ]ಆಧುನಿಕ ಒರಿಯ ಸಾಹಿತ್ಯದಲ್ಲಿ ವಿಮರ್ಶೆ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಆರ್ತಬಲ್ಲಭ ಮೊಹಾಂತಿ ಮತ್ತು ಗಿರಿಜಾಶಂಕರ ರೇ ಎಂಬುವರು ಅನೇಕ ಮುಖ್ಯ ಸಮಸ್ಯೆಗಳನ್ನು ಕುರಿತು ಹಲವಾರು ಸಾಹಿತ್ಯ ವಿಮರ್ಶೆಗಳನ್ನು ಬರೆದಿದ್ದಾರೆ. ಪಂಡಿತ ನೀಲಕಂಠ ದಾಸ್ ಎಂಬ ವಿದ್ವಾಂಸ ಧಾರ್ಮಿಕ ಮತ್ತು ದಾರ್ಶನಿಕ ಜಿಜ್ಞಾಸೆಗಳಲ್ಲಿ ಪ್ರವೀಣನಾಗಿದ್ದಾನೆ. ನಟಬರ್ ಸಾಮಂತ ರಾಯ, ಗೌರೀಕುಮಾರ ಬ್ರಹ್ಮಾ, ಪ್ರಹ್ಲಾದ್, ಪ್ರಧಾನ್, ಬನ್ಸೀಧರ್ ಮೊಹಾಂತಿ, ಪಠಾನಿ ಪಟ್ಟನಾಯಕ್, ದೇವೇಂದ್ರ ಮೊಹಾಂತಿ ಮುಂತಾದವರು ಆಧುನಿಕ ಒರಿಯ ಸಾಹಿತ್ಯದ ವಿಮರ್ಶಕರೆಂದು ಪರಿಗಣಿತರಾಗಿದ್ದಾರೆ. ಸಾಮಂತ ರಾಯನ ವ್ಯಾಸ ಕವಿ ಫಕೀರ್ ಮೋಹನ್ ಎಂಬುದೂ ಜುಗ ಪ್ರಬರ್ತಕ ಸ್ರಸ್ತಾ ರಾಧಾನಾಥ್ ಎಂಬುದೂ ಆಧುನಿಕ ಒರಿಯ ಸಾಹಿತ್ಯದ ಮೇಲಣ ಎರಡು ಗಣ್ಯ ಗ್ರಂಥಗಳು. ಬ್ರಹ್ಮಾನ ಕೃತಿಗಳಾದ ಸಮಸ್ಯಾ ಓ ಸಮಾಧಾನ ಮತ್ತು ಚಿಲಿಕಾ ಓ ರಾಧಾನಾಥ್ ಎಂಬುವು ಸಹ ಗಣನೀಯವಾಗಿವೆ. ಬನ್ಸೀಧರ್ ಮೊಹಾಂತಿ ಸಾರಳಾ ದಾಸನ ಸಾಹಿತ್ಯದಲ್ಲಿ ಪಂಡಿತನಾಗಿದ್ದಾನೆ. ಅನೇಕ ತರುಣ ವಿಮರ್ಶಕರ ಲೇಖನಗಳು ಪತ್ರಿಕೆಗಳಲ್ಲೂ ಕಾಲಿಕಗಳಲ್ಲೂ ಪ್ರಕಟವಾಗುತ್ತಿವೆ.
ಸಂಕೀರ್ಣ ವಿಷಯಗಳು
[ಬದಲಾಯಿಸಿ]ಕುಲಮಣಿ ದಾಷ್ ಬರೆದ ಹಿಮಾಲಯ ಪಥ, ಜಿ.ಬಿ. ಧಾಲ್ ಬರೆದ ಅಮೆರಿಕ ಅನುಭೂತಿ, ಶ್ರೀಹರ್ಷ ಮಿಶ್ರನ ಪಶ್ಚಿಮ ಪಥಿಕ ಎಂಬುವು ಗಣ್ಯವಾದ ಪ್ರವಾಸವರ್ಣನೆಗಳು. ಗೋಕುಲಾನಂದ ಮಹಾಪಾತ್ರ ವಿರಚಿತ ಸುನರ ಒಡಿಸಾ ಎಂಬುದು ಒಂದು ವೈಜ್ಞಾನಿಕ ಕಲ್ಪನೆಯ ಕಥೆ. ಫಕೀರ ಮೋಹನ್ ಸೇನಾಪತಿಯ ಫಕೀರ ಮೋಹನ್ ಆತ್ಮಚರಿತ ಮತ್ತು ಗೋದಾವರೀಶ್ ಮಿಶ್ರನ ಅರ್ಧ ಶತಾಬ್ದಿರ ಒಡಿಸ್ಸಾ ಓ ತಹಿನ್ರೆ ಮೊ ಸ್ಥಾನ ಎಂಬುವು ಗಮನಾರ್ಹವಾದ ಆತ್ಮಚರಿತೆಗಳು.
ಶ್ರೀರಾಮಚಂದ್ರ ದಾಷ್, ಸದಾಶಿವ ಮಿಶ್ರ ಮತ್ತು ಬೈದ್ಯನಾಥ ಮಿಶ್ರರು ಅರ್ಥಶಾಸ್ತ್ರದ ಮೇಲೂ ಬಸಂತಕುಮಾರ್ ಬೆಹೂರಾ, ಕೇಶವಚಂದ್ರ ಸಾಹು ಮತ್ತು ಇತರರು ವಿಜ್ಞಾನವಿಷಯಗಳ ಮೇಲೂ ಅನೇಕ ಪತ್ರಿಕೆಗಳಲ್ಲಿ ಬರೆದಿದ್ದಾರೆ.
ಬಿನೋದೆ ಕನೂಂಗೊ ಎಂಬಾತನ ಜ್ಞಾನಮಂಡಲ ಎಂಬ ಜನಪ್ರಿಯ ಒರಿಯ ವಿಶ್ವಕೋಶದ ಸಂಪುಟಗಳು ಪ್ರಕಟನೆಗೆ ಸಿದ್ಧವಾಗುತ್ತಲಿವೆ. ಇದರ ಮೊದಲ ಸಂಪುಟ 1960ರಲ್ಲಿ ಪ್ರಕಟಗೊಂಡಿತು. ಉತ್ಕಲ ವಿಶ್ವವಿದ್ಯಾನಿಲಯ ಇಷ್ಟರಲ್ಲಿಯೇ ತನ್ನ ಒರಿಯ ಜ್ಞಾನಕೋಶವನ್ನು ಪ್ರಕಟಿಸುವುದರಲ್ಲಿದೆ. ಒರಿಯ ಪತ್ರಿಕೆಗಳೂ ಕಾಲಿಕಗಳೂ ಒರಿಯ ಸಾಹಿತ್ಯದ ಅಭಿವೃದ್ದಿಗೆ ನೆರವಾಗುತ್ತಿರುವುದು ಒಂದು ಗಮನಾರ್ಹವಾದ ಸಂಗತಿ. ಇವುಗಳಿಂದ ಅನೇಕ ಬರೆಹಗಾರರು ಬೆಳಕಿಗೆ ಬಂದರಲ್ಲದೆ ಇವುಗಳಿಂದ ಅನೇಕ ಓದುಗರು ಜ್ಞಾನದ ವಿವಿಧ ಶಾಖೆಗಳ ತಿಳಿವಳಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ.