ಒನಕೆ ಓಬವ್ವ
ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.
ಒನಕೆ ಓಬವ್ವ
[ಬದಲಾಯಿಸಿ]ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.
ಒನಕೆ ಓಬವ್ವ ಕಥೆ
[ಬದಲಾಯಿಸಿ]ಒಮ್ಮೆ, ಹೈದರ್ ಆಲಿಯ ಗುಪ್ತಚಾರಿಗಳು ಚಿತ್ರದುರ್ಗದ ಕೋಟೆಗೆ ಪ್ರವೇಶಿಸಲು , ಚಿತ್ರದುರ್ಗದ ಕೋಟೆಯಲ್ಲಿ ಒಂದು ಸಣ್ಣ ರಂಧ್ರ ವನ್ನು ರಹಸ್ಯ ದಾರಿಯಾಗಿ ಕಂಡುಹಿಡಿದರು. ಇದನ್ನು ತಿಳಿದ ಹೈದರ್ ಆಲಿ ತನ್ನ ಸೈನ್ಯವನ್ನು ಈ ರಹಸ್ಯ ದಾರಿಯಿಂದ ಕೋಟೆಯೊಳಗೆ ಕಳುಹಿಸಲು ಆದೇಶಿಸಿದನು.ಅಲ್ಲಿನ ಪ್ರಾಂತದ ವ್ಯಕ್ತಿಯಾಗಿದ್ದ ಕಹಳೆ ಮುದ್ದ ಹನುಮ, ಓಬವ್ವನ ಪತಿ, ಭದ್ರತೆಯ ದೃಷ್ಟಿಯಿಂದ ಆತ ನಿಯೋಜಿತನಾಗಿದ್ದ. ಒಂದು ದಿನ, ಮುದ್ದ ಹನುಮ ಊಟಕ್ಕಾಗಿ ಮನೆಗೆ ಹೋದಾಗ, ಓಬವ್ವ ನೀರಿನ ಅಗತ್ಯಕ್ಕಾಗಿ ಹತ್ತಿರದ ಕೆರೆಗೆ ಹೋದಳು.ಅವಳು ನೀರು ತರಲು ಹೋದಾಗ ಸುತ್ತಲೂ ಕೆಲವು ಗೊಣಗಾಟದ ಶಬ್ದಗಳನ್ನು ಕೇಳಿತು. ಮೊದಲು ಭಯಗೊಂಡಿದ್ದರೂ, ತಕ್ಷಣ ಧೈರ್ಯವನ್ನೂ ಇಟ್ಟುಕೊಂಡು, ಆ ಸೈನಿಕರನ್ನು ತಡೆಯಲು ಏನಾದರೂ ಮಾಡಲು ನಿಶ್ಚಯಿಸಿಕೊಂಡಳು. ಹತ್ತಿರದಲ್ಲಿದ್ದ ಒನಕೆಯನ್ನು ಹಿಡಿದುಕೊಂಡು, ಬಂಡೆಯ ಹತ್ತಿರ ರಹಸ್ಯ ರಂಧ್ರದ ಬಳಿ ಶತ್ರುಗಳಿಗಾಗಿ ಕಾದು ಕುಳಿತಳು. ಮೊದಲ ಸೈನಿಕನು ರಂಧ್ರದ ಮೂಲಕ ತೊಳಗಾಗುತ್ತಿದ್ದಂತೆ, ಓಬವ್ವ ಆ ಒನಕೆಯಿಂದ ಅವನ ತಲೆಗೆ ಹೊಡೆದು, ಶಬ್ದ ಮಾಡದೆ ಅವನ ದೇಹವನ್ನು ಬಂಡೆಯ ಹಿಂದೆ ಎಳೆದುಹಾಕಿದಳು. ಆಕೆಯು ಈ ರೀತಿಯಲೇ ಪ್ರತಿಯೊಬ್ಬ ಸೈನಿಕನನ್ನೂ ಸತತವಾಗಿ ಹೊಡೆದು ಕೊಂದಳು, ಹೀಗಾಗಿ ಅಲ್ಲಿ ಸೈನಿಕರ ಶವಗಳ ಗುಡ್ಡವೇ ನಿರ್ಮಿತವಾಯಿತು.ಒಳಗಡೆ ಇದ್ದ ಮೇಲೂ ಕಾವಲುಗಾರ ಮುದ್ದ ಹನುಮ ತನ್ನ ಪತ್ನಿ ಕಾಣದೆ ಇರುವುದನ್ನು ಗಮನಿಸಿ, ಹೊರಗೆ ಬಂದು ನೋಡಿದಾಗ ಓಬವ್ವ ತನ್ನ ಶೌರ್ಯದಿಂದ ಅನೇಕ ಸೈನಿಕರನ್ನು ಹೋರಾಡಿ ಕೊಂದಿರುವುದನ್ನು ಕಂಡನು. ಆತ ಶೀಘ್ರವೇ ಬೆಟ್ಟದ ಮೇಲೆ ಹೋಗಿ ರಾಜನಿಗೆ ತಕ್ಷಣವೇ ಆಕ್ರಮಣದ ಎಚ್ಚರಿಕೆಯನ್ನು ನೀಡಲು ಕೊಂಬನ್ನು ಊದಿದನು. [೧]
ಒನಕೆ ಓಬವ್ವನ ಸಾವು
[ಬದಲಾಯಿಸಿ]ದುರದೃಷ್ಟವಶಾತ್, ಓಬವ್ವ ಆ ದಿನವೇ ನಿಧನರಾದರು, ಆದರೆ ಆಕೆಯ ಸಾವಿನ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ. ಕೆಲವರು, ಅನೇಕ ಶತ್ರುಗಳನ್ನು ವಧೆ ಮಾಡಿದ ಆಘಾತದಿಂದಲೇ ಅವಳು ಸತ್ತಿದ್ದಾಳೆ ಎಂದು ನಂಬಿದರೆ, ಮತ್ತಷ್ಟು ಜನರು ಶತ್ರುಗಳಲ್ಲಿ ಒಬ್ಬನು ಅವಳ ಮೇಲೆ ಹಿಂಬದಿಯಿಂದ ದಾಳಿ ಮಾಡಿ ಕೊಂದಿರುವ ಸಾಧ್ಯತೆಯನ್ನು ತೋರುತ್ತಾರೆ.[೨]
ಓಬವ್ವ ಜಯಂತಿ
[ಬದಲಾಯಿಸಿ]ಒನಕೆ ಓಬವ್ವನ ಜನ್ಮ ದಿನವಾದ ನವೆಂಬರ್ 11ರಂದು ಓಬವ್ವ ಜಯಂತಿಯನ್ನು ಆಚರಿಸುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಕೈಗೊಂಡಿತ್ತು. ಈ ದಿನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಆಚರಿಸಲು ಆದೇಶಿತವಾಗಿದೆ.[೩]
ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ
[ಬದಲಾಯಿಸಿ]ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.
ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆ
[ಬದಲಾಯಿಸಿ]ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ (ನಟಿ) ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ.
ಇವನ್ನೂ ನೋಡಿ
[ಬದಲಾಯಿಸಿ]ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ [[ವರ್ಗ:]]
- ↑ "Onake Obavva Information In Kannada ಒನಕೆ ಓಬವ್ವ ಜೀವನ ಚರಿತ್ರೆ". 25 February 2024.
- ↑ "ಒನಕೆ ಓಬವ್ವನ ಬಗ್ಗೆ ಮಾಹಿತಿ | Onake Obavva Information in Kannada". Kannada Deevige | ಕನ್ನಡ ದೀವಿಗೆ KannadaDeevige.in. 15 December 2022.
- ↑ VN, Manjula (11 November 2021). "ಒನಕೆ ಓಬವ್ವ ಜಯಂತಿ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಶುಭಾಶಯ; ನೀತಿ ಸಂಹಿತೆ ಹಿನ್ನೆಲೆ ಆಚರಣೆ ಮುಂದಕ್ಕೆ". Kannada Prabha.