ವಿಷಯಕ್ಕೆ ಹೋಗು

ಐಸೊಮಾರ್ಫಿಸಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Forsterite

ಐಸೊಮಾರ್ಫಿಸಂ ಮತ್ತು ಪಾಲಿಮಾರ್ಫಿಸಂ: ಸಂಯುಕ್ತಗಳು ಒಂದೇ ಆಕೃತಿಯಲ್ಲಿ ಅಥವಾ ತತ್ಸಮೀಪ ಜ್ಯಾಮಿತೀಯ ಆಕೃತಿಗಳಲ್ಲಿ ಸ್ಫಟಿಕೀಕರಿಸುವ ಪ್ರವೃತ್ತಿ (ಸಮರೂಪತೆ). ಇಂಥ ಸಂಯುಕ್ತಗಳ ಹೆಸರು ಐಸೊಮಾರ್ಫಸ್ ಸಂಯುಕ್ತಗಳು. ಉಪ್ಪಿನ ತುಣುಕೊಂದನ್ನು ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದರೆ ಅದರ ಪ್ರತಿಯೊಂದು ಹರಳೂ ಘನಾಕೃತಿಯಲ್ಲಿರುವುದು ವ್ಯಕ್ತವಾಗುತ್ತದೆ. ಹರಳನ್ನು ನುಣ್ಣಗೆ ಹುಡಿಮಾಡಿ ಎಷ್ಟು ವಿಭಾಗಗಳಾಗಿ ವಿಭಾಗಿಸಿದರೂ ದೊರೆಯುವ ಒಂದೊಂದು ಕಣವೂ ಘನಾಕೃತಿಯಲ್ಲಿಯೇ ಇರುವುದು. ಆದ್ದರಿಂದ ಘನಾಕೃತಿ ಉಪ್ಪಿನ ಸ್ವಭಾವಸಿದ್ಧ ಆಕಾರ ಎಂದಾಯಿತು. ಹೀಗೆ ಹರಳುರೂಪದ ಒಂದೊಂದು ವಸ್ತುವಿಗೂ ವಿಶಿಷ್ಟ ಆಕಾರ ಇದೆ. ಸ್ಫಟಿಕದಲ್ಲಿರುವ ಪರಮಾಣುಗಳು ಭಿನ್ನರೀತಿಯಲ್ಲಿ ಜೋಡಣೆಯಾದಾಗ ವಿವಿಧ ಸ್ಫಟಿಕಾಕೃತಿಗಳು ಮೈದಳೆಯುತ್ತವೆ. ಇದರ ವಿವರವಾದ ಪರಿಶೀಲನೆಯಿಂದ ಸೋಜಿಗದ ಸಂಗತಿಗಳು ಹೊರಬಿದ್ದಿವೆ. ಆಲಂ ಒಂದು ಲವಣವರ್ಗದ ಹೆಸರು. ಇವು ಯುಗ್ಮಲವಣಗಳು (ಡಬಲ್ ಸಾಲ್ಟ್‌್ಸ). ನಿರ್ಮಾಣವಾದ ಪಟಿಕಕ್ಕೆ ಪೊಟ್ಯಾಷ್ ಆಲಂ ಎಂಬುದು ರಾಸಾಯನಿಕ ಹೆಸರು. ಇದರ ಅಣುಸೂತ್ರ

ಪೊಟ್ಯಾಷ್ ಆಲಂ
KAl(SO4)2·12H2O.  

ನೇರಿಳೆಬಣ್ಣದ ಕ್ರೋಮ್ ಆಲಂ ಇದೇ ಗುಂಪಿನದು. ಇದರ ಅಣುಸೂತ್ರ

Chrome alum
KCr(SO4)2·12(H2O). 

ಈ ಎರಡು ಲವಣಗಳಲ್ಲಿರುವ ಪರಮಾಣುಗಳ ಸಂಖ್ಯೆ ಒಂದೇ. ಸೂಕ್ಷ್ಮದರ್ಶಕದಿಂದ ಪರೀಕ್ಷಿಸಿದಾಗ ಅವುಗಳ ಸ್ಫಟಿಕಾಕೃತಿಯೂ ಒಂದೇ ಆಗಿರುವುದು ಕಂಡುಬರುತ್ತದೆ. ಅಲ್ಲದೆ ಪಟಿಕದ ಪರ್ಯಾಪ್ತದ್ರಾವಣದಲ್ಲಿಟ್ಟ ಕ್ರೋಮ್ ಆಲಂ ಹರಳು ಸರಾಗವಾಗಿ ಬೆಳೆಯುವುದು. ಕ್ರಮೇಣ ದ್ರಾಕ್ಷಿಯ ಬೀಜ ಹುದುಗಿರುವ ಕಡುಬಿನಂತೆ ಊದುವುದು. ಪಟಿಕ ಕ್ರೋಮ್ ಆಲಂ ಸುತ್ತ ಇಷ್ಟು ನಿರಾಳವಾಗಿ ಸಂಗ್ರಹಗೊಳ್ಳುವುದರಿಂದ ಅವೆರಡರ ಸ್ಫಟಿಕಾಕೃತಿಯಲ್ಲಿ ಎಷ್ಟು ನಿಕಟ ಹೋಲಿಕೆಯಿದೆ ಎಂಬುದು ವೇದ್ಯವಾಗುತ್ತವೆ. ಈ ಪ್ರವೃತ್ತಿಯೇ ಐಸೊಮಾರ್ಫಿಸಂ.

ಜರ್ಮನಿಯ ಭೂವಿಜ್ಞಾನಿಯೂ ಸ್ಫಟಿಕಶಾಸ್ತ್ರ ಪರಿಣತನೂ ಆದ ಮಿಚೆರ್ಲಿಕ್ [೧]ಇಂಥ ಅನೇಕ ಹರಳುರೂಪದ ಸಂಯುಕ್ತಗಳ ಅಧ್ಯಯನದಿಂದ ಐಸೊಮಾರ್ಫಿಸಮನ್ನು ಕುರಿತ ಒಂದು ನಿಯಮವನ್ನು ಪ್ರತಿಪಾದಿಸಿದ (1819)[೨] . ಈ ನಿಯಮದ ಪ್ರಕಾರ ಸಮಾನ ಸಂಖ್ಯೆಯ ಪರಮಾಣುಗಳು ಸಮಾನರೀತಿಯಲ್ಲಿ ಜೋಡಣೆಗೊಂಡಿರುವ ವಸ್ತುಗಳ ಹರಳುಗಳ ರೂಪಗಳಲ್ಲೂ ಸಾಮ್ಯವಿದೆ.[೩] ಆದರೆ ಈ ನಿಯಮದ ಯಾಥಾರ್ಥದ ಬಗ್ಗೆ ಸಂಶಯ ಹುಟ್ಟಿಸುವ ಕೆಲವು ಸಾಕ್ಷ್ಯಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ರಾಸಾಯನಿಕ ರಚನೆ ಮತ್ತು ಸ್ಫಟಿಕಾಕೃತಿಗಳಲ್ಲಿ ಹೋಲಿಕೆಯಿರುವ ಕೆಲವು ಸಂಯುಕ್ತಗಳಿವೆ. ಈ ಹೋಲಿಕೆ ಸ್ಥೂಲವಾಗಿದ್ದು ಸ್ಫಟಿಕಕೋನದಲ್ಲಿ ಅಲ್ಪ ಅಂತರವಿರುವುದು ವ್ಯಕ್ತಪಟ್ಟಿದೆ. ಉದಾಹರಣೆಗೆ, ಮೆಗ್ನೇಸಿಯಂ ಸಲ್ಫೇಟ್ MgSO4 ಮತ್ತು ಫೆರಸ್ ಸಲ್ಫೇಟ್ FeSO4 ಲವಣಗಳನ್ನು ಹೆಸರಿಸಬಹುದು.

ತಿದ್ದುಪಡಿ[ಬದಲಾಯಿಸಿ]

ಇವೆರಡು ಸಂಯುಕ್ತಗಳಲ್ಲಿ ಐಸೊಮಾರ್ಫಿಸಮಿಗೆ ಆಧಾರವಾದ ಎಲ್ಲ ಗುಣಗಳೂ ಇರುವುದು ನಿಜ. ಆದರೆ ಅವುಗಳ ಸ್ಫಟಿಕಾಂಗದ (ಕ್ರಿಸ್ಟಲ್ ಯೂನಿಟ್) ಆಯಾಮಗಳಲ್ಲಿ (ಡೈಮೆನ್ಷನ್ಸ್‌) ಮತ್ತು ಕೋನದಲ್ಲಿ ಸೂಕ್ಷ್ಮ ವ್ಯತ್ಯಾಸಗಳಿವೆ. ಎರಡು ವಸ್ತುಗಳ ಹರಳು ರಚನೆಯಲ್ಲಿ ಪರಿಪೂರ್ಣ ಸಾಮ್ಯವಿರಲು ಸಾಧ್ಯವಿಲ್ಲ ಎಂಬ ಹಾಯನ ನಿಯಮ ಇದರಿಂದ ಸಮರ್ಥಿತವಾಗುತ್ತದೆ. ಅಲ್ಲದೆ ಐಸೊಮಾರ್ಫಿಸಂ ನಿಯಮವನ್ನು ಸರ್ವಸತ್ಯವೆಂದು ಅನ್ವಯಿಸಲಾಗದು ಎಂಬ ತೀರ್ಪು ಅನಿವಾರ್ಯವಾಗುತ್ತದೆ. ಮಿಚೆರ್ಲಿಕನ ಪ್ರಕಾರ ಐಸೊಮಾರ್ಫಸ್ ಸಂಯುಕ್ತಗಳಲ್ಲಿ ಸಮಸಂಖ್ಯೆಯ ಪರಮಾಣುಗಳಿರಬೇಕಷ್ಟೆ. ಇದಕ್ಕೂ ಅಪವಾದಗಳಿವೆ. ಅಮೋನಿಯಂ ಆಲಂನಲ್ಲಿ.Al(SO 4)2.12H2O ಪೊಟ್ಯಾಷ್ ಆಲಂಗಿಂತ ಎಂಟು ಪರಮಾಣುಗಳು ಹೆಚ್ಚು ಇವೆ. ಆದರೆ ಇವೆರಡೂ ಐಸೊಮಾರ್ಫಸ್ ಸಂಯುಕ್ತಗಳು. ಇಂಥ ಅನೇಕ ನಿದರ್ಶನಗಳಿವೆ. ಈ ಪರಿಸ್ಥಿತಿಯಲ್ಲಿ ಮಿಚೆರ್ಲಿಕನ ನಿಯಮವನ್ನು ತಿದ್ದುಪಡಿಮಾಡದೆ ವಿಧಿಯಿಲ್ಲ. ಸಮಾನ ರಾಸಾಯನಿಕ ರಚನೆಯುಳ್ಳ ವಸ್ತುಗಳ ಸ್ಫಟಿಕಾಕೃತಿಯಲ್ಲೂ ಹೋಲಿಕೆ ಇರುವುದು ಸಂಭವನೀಯ ಎನ್ನುವುದು ಹೆಚ್ಚು ವಾಸ್ತವ.

ರಾಸಾಯನಿಕ ಗುಣಗಳಿಗಿಂತ ಹರಳಿನ ಒಳರಚನೆಯಲ್ಲಿರುವ ಹೋಲಿಕೆಯೇ ಐಸೊಮಾರ್ಫಿಸಮಿಗೆ ಕಾರಣವೆಂದು ಗೊತ್ತಾಗಿದೆ. ಪ್ರತಿಯೊಂದು ಹರಳುರೂಪದ ವಸ್ತುವೂ ಚಿಕ್ಕ ಘಟಕಗಳಿಂದ ಆಗಿರುತ್ತದೆ. ಈ ಘಟಕಗಳ ಜ್ಯಾಮಿತೀಯ ಆಕಾರ ಸಮನಾಗಿದ್ದರೆ ಸಾಕು. ಅಂಥ ವಸ್ತುಗಳು ಐಸೊಮಾರ್ಫಿಸಮನ್ನು ಪ್ರದರ್ಶಿಸಬಲ್ಲವು. ಇದಕ್ಕೆ ಕ್ಯಾಲ್ಸಿಯಂ ಕಾರ್ಬೋನೇಟ್ (CaCO3) ಮತ್ತು ಸೋಡಿಯಂ ನೈಟ್ರೇಟ್ (NaNO3) ಉದಾಹರಣೆಗಳು. ಆದ್ದರಿಂದ ಐಸೊಮಾರ್ಫಸ್ ಸಂಯುಕ್ತಗಳಲ್ಲಿರುವ ಆಯಾಮದಲ್ಲಿ ನಿಕಟ ಹೋಲಿಕೆಯಿರುವುದು ನಿಜ. ಆದರೆ ಎರಡು ಹರಳುಗಳ ಸ್ಫಟಿಕ ನಿಯತಾಂಕಗಳು (ಕ್ರಿಸ್ಟಲ್ ಕಾನ್ಸ್ಟೆಂಟ್ಸ್‌) ಒಂದಾಗಿದ್ದ ಮಾತ್ರಕ್ಕೆ ಅವು ಐಸೊಮಾರ್ಫಸ್ ಎನ್ನಲಾಗದು. ಮಿಶ್ರಹರಳುಗಳನ್ನು ಉಂಟುಮಾಡುವ ಚೈತನ್ಯವನ್ನು ಐಸೊಮಾರ್ಫಿಸಮಿಗೆ ಪ್ರಮುಖ ಆಧಾರವಾಗಿ ಇಟ್ಟುಕೊಳ್ಳುವುದು ಸಂಪ್ರದಾಯ. ಎರಡು ವಸ್ತುಗಳು ಐಸೊಮಾರ್ಫಸ್ ಆಗಿದ್ದರೆ ಅವೆರಡನ್ನು ವಿವಿಧ ಪ್ರಮಾಣಗಳಲ್ಲಿ ಹೊಂದಿರುವ ಮಿಶ್ರಹರಳುಗಳನ್ನು ತಯಾರಿಸಬಹುದು.

ಐಸೊಮಾರ್ಫಸ್ ವಸ್ತುಗಳೆಲ್ಲ ಮಿಶ್ರಹರಳುಗಳನ್ನು ಕೊಡುವುದಿಲ್ಲ. ವಸ್ತುಗಳ ಅಣುಗಾತ್ರ ಪರಸ್ಪರ ಹೊಂದಿಕೊಂಡಷ್ಟೂ ಮಿಶ್ರಹರಳುಗಳ ಜನನ ಹೆಚ್ಚು ಸಂಭವನೀಯ. ಒಂದು ಹರಳಿನ ಮೇಲೆ ಮತ್ತೊಂದು ಸಂಗ್ರಹಿಸುವ ಸಾಮಥರ್ಯ್‌ವಿದ್ದರೆ ಅದೂ ಸಹ ಐಸೊಮಾರ್ಫಿಸಮಿಗೆ ಆಧಾರವೆನಿಸಿಕೊಳ್ಳುತ್ತದೆ. ಕೇವಲ ಅಣುಗಾತ್ರ ಸಮನಾಗಿದ್ದರೂ ಹೀಗಾಗುವುದರಿಂದ ಇದನ್ನೂ ನೆಚ್ಚುವಂತಿಲ್ಲ. ಒಟ್ಟಾರೆ-1. ಸ್ಫಟಿಕಾಕೃತಿಯಲ್ಲಿ ಹೋಲಿಕೆ 2. ಮಿಶ್ರಹರಳುಗಳ ಉತ್ಪತ್ತಿ 3. ಒಂದರ ಮೇಲೊಂದು ಹರಳು ಬೆಳೆಯುವಿಕೆ-ಈ ಲಕ್ಷಣಗಳ ಪೈಕಿ ಯಾವುದೊಂದು ಐಸೊಮಾರ್ಫಿಸಮಿಗೆ ಮಾನದಂಡವಾಗಲಾರದು. ಈ ಗುಣಧರ್ಮಗಳಲ್ಲಿ ಒಂದಕ್ಕಿಂತ ಹೆಚ್ಚು ಲಕ್ಷಣಗಳನ್ನು ಪಡೆದಿರುವ ವಸ್ತುಗಳು ಮಾತ್ರ ಐಸೊಮಾರ್ಫಿಕ್ ವಸ್ತುಗಳು ಎನ್ನಲು ಬಾಧಕವಿಲ್ಲ.

ಐಸೊಪಾಲಿಮಾರ್ಫಿಸಂ[ಬದಲಾಯಿಸಿ]

ಐಸೊಮಾರ್ಫಿಸಮಿನ ವಿಶೇಷ ಸಂದರ್ಭವಿದು. ಆರ್ಸಿನಿಯಸ್ ಆಕ್ಸೈಡಿನಲ್ಲಿ ಎರಡು ಬಗೆಯುಂಟು. ಒಂದರಲ್ಲಿ ಪ್ರತಿ ಪುಟ್ಟ ಹರಳಿಗೂ ಎಂಟು ಮುಖಗಳಿರುತ್ತವೆ. ಒಂದೊಂದು ಮುಖವೂ ಸರಳಘನಾಕೃತಿಯದು. ಇದನ್ನು ಅಷ್ಟಮುಖೀರೂಪ (ಆಕ್ಟಹೆಡ್ರಲ್) ಎನ್ನುವರು. ಇನ್ನೊಂದು ಏಕನತರೂಪಿ (ಮಾನೊಕ್ಲಿನಿಕ್). ಆಂಟಿಮೊನಿಯಸ್ ಆಕ್ಸೈಡಿಗೆ ಇಂಥವೇ ಎರಡು ರೂಪಗಳಿವೆ. ಇವೆರಡರ ಅಷ್ಟಮುಖಿ ಮತ್ತು ಏಕನತ ಹರಳುಗಳು ಐಸೊಮಾರ್ಫಿಸಮನ್ನು ಪ್ರದರ್ಶಿಸುವುವು. ಈ ಗುಣವೈಚಿತ್ರ್ಯಕ್ಕೆ ಐಸೊಪಾಲಿಮಾರ್ಫಿಸಂ ಎಂದು ಹೆಸರು. ಐಸೊಮಾರ್ಫಿಸಮಿನಲ್ಲಿ ಮತ್ತೊಂದು ವಿಧವಿದೆ. ಅಯೊಡೀನ್ ಬ್ರೋಮೈಡ್ ಎಂಬ ಸಂಯುಕ್ತ ಅಯೊಡೀನ್ ಮತ್ತು ಬ್ರೋಮಿನಿನ ಹರಳು ರೂಪಗಳೆರಡನ್ನೂ ಹೋಲುವುದು. ಇದಕ್ಕೆ ಐಸೊಡೈಮಾರ್ಫಿಸಂ ಎಂದು ಹೆಸರು. ಪಾಲಿಮಾರ್ಫಿಸಂ: ಘನವಸ್ತುಗಳು ಒಂದಕ್ಕಿಂತ ಹೆಚ್ಚು ಭೌತರೂಪಗಳಲ್ಲಿ ದೊರೆಯುವ ಪ್ರವೃತ್ತಿ (ಬಹುರೂಪತೆ). ಇಂಥ ಸಂಯುಕ್ತಗಳ ಹೆಸರು ಪಾಲಿಮಾರ್ಫಿಸ್ ಸಂಯುಕ್ತಗಳು. ಉದಾಹರಣೆಗೆ, ಬೆಣಚುಕಲ್ಲು ಮರಳು ಇತ್ಯಾದಿಗಳು ಸಿಲಿಕದ (SiO2) ಬಹುರೂಪಗಳು. ಹಾಗೆಯೇ ಅಮೃತಶಿಲೆ, ಸುಣ್ಣಕಲ್ಲು ಮತ್ತು ಸೀಮೆಸುಣ್ಣ ಕ್ಯಾಲ್ಸಿಯಂ ಕಾರ್ಬೋನೇಟಿನ ವಿವಿಧರೂಪಗಳು. ಪಾಲಿಮಾರ್ಫಿಸಮನ್ನು ಪ್ರದರ್ಶಿಸುವ ವಸ್ತುಗಳು ಮೂಲಧಾತುಗಳಾಗಿದ್ದರೆ ಆಗ ಅದು ಭಿನ್ನರೂಪತೆ (ಅಲಾಟ್ರೊಪಿ) ಎನಿಸಿಕೊಳ್ಳುತ್ತದೆ. ಕೆಂಪು ಮತ್ತು ಬಿಳಿಯ ರಂಜಕ, ಇಂಗಾಲ ರೂಪಿಗಳಾದ ವಜ್ರ ಮತ್ತು ಗ್ರಾಫೈಟ್, ಅಷ್ಟಮುಖಿ, ಏಕನತ ಮತ್ತು ಮೆದುಗಂಧಕ ಮುಂತಾದವುಗಳ ಪರಿಚಯ ನಮಗಿದೆ. ಆದರೆ ಆಕ್ಸಿಜನ್ ಮತ್ತು ಓಜೋನ್ (O3) ಆರ್ಥೊ ಮತ್ತು ಪ್ಯಾರಾ ಹೈಡ್ರೊಜನ್, ಕ್ರಿಯಾಶಾಲಿ ಮತ್ತು ಸಾಮಾನ್ಯ ನೈಟ್ರೊಜನ್ ಇತ್ಯಾದಿ ಅಸ್ಫಟಿಕ ವಸ್ತುಗಳ ಭಿನ್ನರೂಪತೆ ಪಾಲಿಮಾರ್ಫಿಸಮಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಪಾಲಿಮಾರ್ಫಿಸಂ ಕೇವಲ ಸ್ಫಟಿಕರೂಪದ ವಸ್ತುಗಳಿಗೆ ಸೀಮಿತವಾದ ಗುಣ.

ಸ್ಫಟಿಕರಚನೆಯಲ್ಲಿರುವ ವ್ಯತ್ಯಾಸಗಳ ಫಲವಾಗಿ, ಸಾಂದ್ರತೆ ಮುಂತಾದ ಭೌತ ಗುಣಗಳಲ್ಲಿ ವ್ಯತ್ಯಾಸಗಳಾಗಿ ಇದು ಪ್ರಾಪ್ತವಾಗುವುದು. ಅಂದರೆ ಉಪ್ಪಿನಂತೆ ಒಂದೇ ವಸ್ತು ಘನಾಕೃತಿಯಲ್ಲಿ ಅಥವಾ ಅಷ್ಟಮುಖಿಯಾಗಿ ಸ್ಫಟಿಕೀಕರಿಸಬಹುದು. ಪಾಲಿಮಾರ್ಫಿಸಮಿಗೆ ಮರ್ಕ್ಯೂರಿಕ್ ಅಯೋಡೈಡನ್ನು ಉದಾಹರಿಸುವುದು ವಾಡಿಕೆ. ಅದು ಒತ್ತರಿಸಿದಾಗ ಹಳದಿಯಾಗಿದ್ದು ತತ್ಕ್ಷಣ ಕೆಂಪಾಗುತ್ತದೆ. ಕೆಂಪುರೂಪವನ್ನು 1260 ಸೆಂ. ಉಷ್ಣತೆಗೆ ಕಾಯಿಸಿದಾಗ ಹಳದಿಯ ರೂಪ ತಾಳಿ ತಣಿಸಿದಾಗ ಪುನಃ ಕೆಂಪಾಗುತ್ತದೆ. ಕೆಂಪುರೂಪ ಚತುಷ್ಕೋಣ ವ್ಯವಸ್ಥೆಯಲ್ಲಿ (ಟೆಟ್ರಗೊನಲ್ ಸಿಸ್ಟಂ) ಅಷ್ಟಮುಖಿಯಾಗಿರುತ್ತದೆ. ಹಳದಿರೂಪ ಚಪ್ಪಟೆಯಾಕೃತಿಹೊಂದಿದ್ದು ಆರ್ಥೋರಾಂಬಿಕ್ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ. ಕ್ಯುಪ್ರಿ ಮಕೂರ್ಯ್‌ರಿಕ್ ಅಯೋಡೈಡಿನಂಥ ಲವಣಗಳಲ್ಲಿ ಈ ಪರಿಣಾಮ ಎದ್ದುಕಾಣುತ್ತದೆ. 700 ಸೆಂ. ಉಷ್ಣತೆಗೆ ಕಾಯಿಸಿದಾಗ, ಈ ಲವಣ ಕಪ್ಪಾಗಿ, ತಣಿಸಿದಾಗ ಪುನಃ ಕೆಂಪಾಗುವುದು. ಪಾಲಿಮಾರ್ಫಸ್ ವಸ್ತುಗಳ ಶಕ್ತಿಪರಿಮಾಣ (ಎನರ್ಜಿ ಕಂಟೆಂಟ್): ಹರಳಿನಲ್ಲಿ ಅಣು ಘಟಕಗಳು ಇರುವುದು ಸರಿಯಷ್ಟೆ. ಪ್ರತಿಯೊಂದು ಅಣುವಿನಲ್ಲಿರುವ ಪರಮಾಣುಗಳ ಸಂಖ್ಯೆ ಮತ್ತು ಜೋಡಣೆಯ ಕ್ರಮವನ್ನು ಅವಲಂಬಿಸಿ ಪಾಲಿಮಾರ್ಫಸ್ ವಸ್ತುಗಳಾಗುತ್ತವೆ. ಹರಳು ಜಾಲಕದಲ್ಲಿ (ಕ್ರಿಸ್ಟಲ್ ಲ್ಯಾಟ್ಟಿಸ್) ಅಣುಗಳ ಸ್ಥಾನ ಮತ್ತು ಸಾಪೇಕ್ಷ ಚಲನೆಗೆ ಅನುಗುಣವಾಗಿ ಆಯಾ ರೂಪದ ಶಕ್ತಿ ನಿರ್ಧಾರವಾಗುತ್ತದೆ. ಅಣುಗಳಿಗೆ ಸಾಕಷ್ಟು ಶಕ್ತಿಯಿದ್ದರೆ ಅವುಗಳ ಕಂಪನಸ್ವಾತಂತ್ರ್ಯ ಹೆಚ್ಚಿ ಅವು ಚಾಲಕದಿಂದ ಆವಿಯ ರೂಪದಲ್ಲಿ ತಪ್ಪಿಸಿಕೊಳ್ಳುತ್ತವೆ. ಆದ್ದರಿಂದ ಹರಳುವಸ್ತುವಿನ ಆವಿಯೊತ್ತಡ ಹೆಚ್ಚಾಗಿದ್ದಿದ್ದರೆ ಆ ರೂಪ ಅಸ್ಥಿರವಾಗಿರಬೇಕು. ಹಾಗೆಯೇ ಸ್ಥಿರರೂಪದ ಆವಿಯೊತ್ತಡ ಮತ್ತು ಕ್ರಿಯಾಶೀಲತೆ ಕಡಿಮೆಯಾಗಿರುತ್ತದೆ. ತಾತ್ತ್ವಿಕವಾಗಿ ವಸ್ತುಗಳಿಗೆ ಅಸ್ಥಿರ ಸ್ಥಿತಿಯಿಂದ ಸ್ಥಿತಿರೂಪಕ್ಕೆ ಜಾರಿಕೊಳ್ಳುವ ಸಹಜ ಪ್ರವೃತ್ತಿ ಇರುವುದು. ಆದರೆ ಸೂಕ್ತ ಪ್ರಚೋದನೆಯಿಲ್ಲದೆ ಹೀಗಾಗುವುದು ವಿರಳ. ಇಂಥ ಅನೇಕ ನಿದರ್ಶನಗಳಿವೆ. ಮಕೂರ್ಯ್‌ರಿಕ್ ಅಯೋಡೈಡ್ ಹಳದಿರೂಪದಲ್ಲಿ ಕೆಲಕಾಲ ಇರಬಲ್ಲುದು. ಅದನ್ನು ಒಂದು ಕಡ್ಡಿಯಿಂದ ಮುಟ್ಟಿದಾಗ ಅಥವಾ ಕೆರೆದಾಗ ಕೂಡಲೇ ಕೆಂಪಾಗುತ್ತದೆ. ಏಕನತ ಗಂಧಕವೂ ಹೀಗೆಯೇ ಉಜ್ಜಿದಾಗ ಅಷ್ಟಮುಖಿ ಗಂಧಕವಾಗಿ ಮಾರ್ಪಡುತ್ತದೆ. ಸ್ಥಿರರೂಪದಲ್ಲಿ ಇರಬೇಕಾದ ಸನ್ನಿವೇಶದಲ್ಲಿ ಹಾಗಿರದೆ ಸಂಧಿ ಸಮಸ್ಥಿತಿಯಲ್ಲಿರುವ (ಮೆಟಸ್ಟೇಬಲ್ ಸ್ಟೇಟ್) ವಸ್ತುಗಳಿವೆ. ಇದು ಲೋಹಗಳಿಗೆ ಬಹುತೇಕ ಅನ್ವಯಿಸುವುದು. ತವರದ ಮೂರು ರೂಪಗಳಲ್ಲಿ ಬೂದು ಮತ್ತು ಬಿಳಿಯ ತವರಗಳ ಪರಸ್ಪರ ಪರಿವರ್ತನೆ ಸ್ವಾರಸ್ಯವಾಗಿದೆ. ಉಷ್ಣತೆ 180 ಸೆಂ. ಮೀರಿದರೆ ಬಿಳಿಯ ತವರವೂ, ಅದಕ್ಕಿಂತ ಕಡಿಮೆಯಾದರೆ ಬೂದು ತವರವೂ ಪ್ರಾಪ್ತವಾಗುವುವು. ಶೀತದೇಶಗಳಲ್ಲಿ ಚಳಿಗಾಲದಲ್ಲಿ ಈ ಪರಿವರ್ತನೆಯನ್ನು ಕಾಣಬಹುದು. ಉದಾಹರಣೆಗೆ, ಚಳಿಗಾಲದಲ್ಲಿ ಇಂಗ್ಲೆಂಡಿನ ವಾತಾವರಣದ ಉಷ್ಣತೆ 180 ಸೆ. ಗಿಂತ ಕೆಳಗಿಳಿಯುವುದು ಸರ್ವೇಸಾಮಾನ್ಯ. ಆಗ ತಂಪಾದ ತವರ ಬೂದುಬಣ್ಣಕ್ಕೆ ತಿರುಗದೇ ಮತ್ತು ಹಾಗೆಯೇ ಕೆಲಕಾಲ ಉಳಿದಿರುತ್ತದೆ. ಅದಕ್ಕೆ ಬೂದು ತವರದ ಒಂದು ಹರಳನ್ನು ಹಾಕಿದರೆ ಸಾಕು. ಪರಿವರ್ತನೆ ತತ್‍ಕ್ಷಣ ಪ್ರಾರಂಭವಾಗುತ್ತದೆ. ಬೂದು ತವರದ ಸಾಂದ್ರತೆ (5.7) ಬಿಳಿಯ ತವರದ ಸಾಂದ್ರತೆಗಿಂತ (7.28) ಕಡಿಮೆಯಾದುದರಿಂದ ಈ ಪರಿವರ್ತನೆಯಾದಾಗ ವಸ್ತು ವಿಕಸಿತವಾಗಬೇಕು. ತತ್ಫಲವಾಗಿ ಅದು ಹುಡಿಯಾಗುತ್ತದೆ. ಈ ಪರಿವರ್ತನೆಗೆ ತವರದ ಪ್ಲೇಗ್ ಎನ್ನುತ್ತಾರೆ.

Tin medal affected by tin pest

ಇದರ ಬಗ್ಗೆ ಐತಿಹಾಸಿಕ ಉಲ್ಲೇಖವಿದೆ. 1812ರಲ್ಲಿ ರಷ್ಯಾದ ವಿರುದ್ಧ ದಂಡಯಾತ್ರೆಯಲ್ಲಿ ವಿಫಲನಾದ ನೆಪೋಲಿಯನ್ ಚಕ್ರವರ್ತಿಯ ಸೈನ್ಯ, ಅಲ್ಲಿಯ ಅಸಾಧ್ಯ ಚಳಿಯ ದೆಸೆಯಿಂದ ಹಿಂತಿರುಗಬೇಕಾಯಿತು. ಫ್ರೆಂಚ್ ಸೈನಿಕರು ಧರಿಸಿದ್ದ ತವರದ ಪದಕಗಳು ಮತ್ತು ಸಮವಸ್ತ್ರದ ಗುಂಡಿಗಳೆಲ್ಲ ಬೂದು ಬಣ್ಣಕ್ಕೆ ತಿರುಗಿ ಹುಡಿಯಾಗಿ ಉದುರಿ ಹೋದುವಂತೆ. ಬೂದುರೂಪಕ್ಕೆ ಬಾರದೆ ಬಿಳಿಯ ತವರವಾಗಿಯೇ ಬಹುಕಾಲ ಉಳಿಯುವ ಚೈತನ್ಯ ಇರದಿದ್ದಲ್ಲಿ ಶೀತ ದೇಶಗಳಲ್ಲಿ ತವರದ ಉಪಯೋಗ ಹೇಳ ಹೆಸರಿಲ್ಲದೆ ಹೋಗುತ್ತಿತ್ತು. ಹೀಗೆ ಒಂದೇ ವಸ್ತುವಿನ ಎರಡು ರೂಪಗಳು ಸಮಸ್ಥಿರತೆಯನ್ನು ಹೊಂದಿರುವ ಉಷ್ಣತೆಗೆ ಅದರ ಪರ್ವಬಿಂದು (ಟ್ರಾನ್ಸಿಷನ್ ಟೆಂಪರೇಚರ್) ಎಂದು ಹೆಸರು. ಈ ಸ್ಥಿತಿಯಲ್ಲಿ ಎರಡು ರೂಪಗಳ ದ್ರಾವಣತೆ ಮತ್ತು ಆವಿಯೊತ್ತಡ ಸಮನಾಗಿರುತ್ತವೆ. ಆದ್ದರಿಂದ ಇವುಗಳಿಗೆ ಸಂಬಂಧಿಸಿದ ರೇಖೆಗಳು ಸಂಧಿಸುವ ಬಿಂದುವನ್ನು ಗುರುತಿಸಿಕೊಂಡು ಪರ್ವಬಿಂದುವನ್ನು ಕಂಡುಹಿಡಿಯಬಹುದು. ಪರಿಚಿತ ವಸ್ತುಗಳ ಪರ್ವಬಿಂದುಗಳ ವಿವರಗಳನ್ನು ಕೆಳಗೆ ಕೊಡಲಾಗಿದೆ. ವಸ್ತು ರೂಪ ಪರ್ವತಬಿಂದು 0ಸೆಂ. ಗಂಧಕ ಅಷ್ಟಮುಖಿ ಏಕನತ 95.6 ತವರ ಬೂದುಬಿಳಿ 18.0 ಸತು ಆಲ್ಫಾಬೀಟಾ 174.0 ಬೀಟಾ ಗ್ಯಾಮಾ 322.0 ಅಮೋನಿಯಂ ಕ್ಲೋರೈಡ್ ಆಲ್ಫಾಬೀಟಾ 184.5 ಮಕೂರ್ಯ್‌ರಿಕ್ ಅಯೋಡೈಡ್ ಟೆಟ್ರಾಗೊನಲ್ಆರ್ಥೋ ರಾಬಿಕ್ 126.0 ಸಿಲ್ವರ್ ನೈಟ್ರೇಟ್ ರಾಂಬಿಕ್ರಾಂಬೊಹಿಡ್ರಲ್ 160.0 ಸಿಲ್ವರ್ ಅಯೋಡೈಡ್ ಹೆಕ್ಸಾಗೊನಲ್ರೆಗ್ಯುಲರ್ 146.5 ಪಾಲಿಮಾರ್ಫಿಸಮಿನ ವರ್ಗೀಕರಣ:

  • ಉಷ್ಣತೆ ಪರ್ವಬಿಂದುವಿಗಿಂತ ಹೆಚ್ಚು ಕಡಿಮೆಯಾದರೆ ವಸ್ತು ರೂಪಾಂತರ ಹೊಂದುವ ಪ್ರವೃತ್ತಿಗೆ ದ್ವಿಚರವರ್ತನೆ (ಎನಾಂಟಿಯೊಟ್ರಪಿ) ಎಂದು ಹೆಸರು. ಗಂಧಕ, ತವರ ಮತ್ತು ಮಕೂರ್ಯ್‌ರಿಕ್ ಅಯೋಡೈಡುಗಳು ಈ ಗುಂಪಿಗೆ ಸೇರಿದವು.
  • ಕೆಲವು ವಸ್ತುಗಳಿಗೆ ನಿರ್ದಿಷ್ಟ ಪರ್ವಬಿಂದು ಎಂಬುದಿಲ್ಲ: ಎಲ್ಲ ಉಷ್ಣತೆಯಲ್ಲೂ ಏಕಮುಖವಾಗಿ ಮಾತ್ರ ರೂಪಾಂತರವಾಗುವುವು. ಇದು ವಿಪರ್ಯಯ ಕ್ರಿಯೆಯಲ್ಲ. ಆದ್ದರಿಂದ ಏಕಚರಗಳು (ಮಾನೋಟ್ರಾಪಿಕ್) ಎನ್ನಬಹುದು. ಇದಕ್ಕೆ ಓಜೋ಼ನ್ ಉದಾಹರಣೆ. ಅದು ಎಲ್ಲ ಉಷ್ಣತೆಯಲ್ಲೂ ವಿಭಜಿಸಿ ಆಕ್ಸಿಜನ್ ಕೊಡುವುದು. ಆದರೆ ಸನ್ನಿವೇಶ ತಲೆಕೆಳಗಾದಾಗ ಆಕ್ಸಿಜನ್ ಓಜೋ಼ನ್ ಆಗುವುದಿಲ್ಲ,
  • ಗಂಧಕದ ವರ್ತನೆ ವಿಚಿತ್ರ. ಲ್ಯಾಮ್ಡಾ ಗಂಧಕ (S8)ಮತ್ತು ಮ್ಯೂ ಗಂಧಕ ಎಂಬ ಅದರ ಎರಡು ರೂಪಗಳು ರಾಸಾಯನಿಕ ಸಮಸ್ಥಿತಿಯಲ್ಲಿರಲು ಶಕ್ತವಾಗಿವೆ. ಈ ಸ್ಥಿತಿಯಲ್ಲಿ ಪ್ರತಿಯೊಂದು ರೂಪದ ಪ್ರಮಾಣ ಎಷ್ಟಿರುತ್ತದೆ ಎಂಬುದು ಉಷ್ಣತೆಗೆ ಅನುಗುಣವಾಗುತ್ತದೆ. ಇದನ್ನು ಸಂಚಾಲಿತ ಭಿನ್ನರೂಪತೆ (ಡೈನಾಮಿಕ್ ಅಲಾಟ್ರೊಪಿ) ಎಂದು ಕರೆಯುವರು.

ಉಲ್ಲೇಖಗಳು[ಬದಲಾಯಿಸಿ]

  1. Schutt Hans-Werner. (1997.) Eilhard Mitscherlich: Prince of Prussian Chemistry, Chemical Heritage Foundation. ISBN 9780841233454.
  2. Bernadette Bensaude-Vincent. (1996.) A History of Chemistry, Harvard University Press, p. 122. ISBN 9780674396593.
  3. "Mitscherlich, Eilhard". Complete Dictionary of Scientific Biography. Encyclopedia.com. 2008.