ಐರೋಪ್ಯ ಸಾಹಿತ್ಯ ವಿಮರ್ಶೆಯ ರೂಪರೇಷೆಗಳು
ಐರೋಪ್ಯ ಸಾಹಿತ್ಯ ವಿಮರ್ಶೆಯ ರೂಪರೇಷೆಗಳು: ಸಾಮಾನ್ಯವಾಗಿ ಪ್ರಚಾರವಾಗಿರುವ ಅಭಿಪ್ರಾಯದಂತೆ ಐರೋಪ್ಯ ಸಾಹಿತ್ಯ ವಿಮರ್ಶೆಯ ಇತಿಹಾಸಕ್ಕೆ ಸ್ಥೂಲವಾಗಿ ಏಳು ಅವಧಿಗಳುಂಟು. ಪ್ರ.ಶ.ಪು. 4-1ನೆಯ ಶತಮಾನದ ಕಡೆಯವರೆಗೆ ಹೆಲನಿಕ್ ಮತ್ತು ಹೆಲನಿಸ್ಟಿಕ್ ವಿಭಾಗಗಳನ್ನೊಳಗೊಂಡ ಪ್ರಾಚೀನ ಗ್ರೀಕ್ ಅವಧಿ, ಅಲ್ಲಿಂದ ಸು. ಪ್ರ.ಶ. 500ರ ವರೆಗೆ ಪ್ರಾಚೀನ ರೋಮನ್ ಅವಧಿ, 500-1500ರ ವರೆಗೆ ಮಧ್ಯಯುಗ, 1500-ಸು.1630ರ ತನಕ ಹೊಸ ಹುಟ್ಟಿನ ಕಾಲ, ಅಲ್ಲಿಂದ ಹೆಚ್ಚು ಕಡಿಮೆ 18ನೆಯ ಶತಮಾನದ ಕೊನೆಯವರೆಗೆ ನವಅಭಿಜಾತತೆಯ ಸಮಯ, ಆಮೇಲೆ ಸುಮಾರು ನಲವತ್ತು ಐವತ್ತು ವರ್ಷ ರೊಮ್ಯಾಂಟಿಕತೆಯ ಕಾಲ, ಸು. 19ನೆಯ ಶತಮಾನದ ಮಧ್ಯದಿಂದ ಆಧುನಿಕ ಯುಗ-ಹೀಗೆ.
ಪ್ರಾಚೀನ ಗ್ರೀಕ್
[ಬದಲಾಯಿಸಿ]ಪ್ರಾಚೀನ ಗ್ರೀಕ್ರನ್ನೂ ರೋಮನರನ್ನೂ ಸಾಹಿತ್ಯದೃಷ್ಟಿಯಿಂದ ಒಟ್ಟುಗೂಡಿಸಿ ಅಭಿಜಾತ ಪದ್ಧತಿಯ ಕಾಲವೆಂದು ಬಗೆಯುವುದು ವಾಡಿಕೆ. ಮಧ್ಯಯುಗದಲ್ಲಿ ಕ್ರೈಸ್ತ ಚರ್ಚಿನ ಪ್ರಭಾವ ಅತ್ಯಂತವಾಗಿ ಇದ್ದದ್ದರಿಂದಲೂ ಲೌಕಿಕ ಸಾಹಿತ್ಯ ಹೆಚ್ಚಾಗಿ ತಲೆಯೆತ್ತದ್ದರಿಂದಲೂ ಮಧ್ಯಯುಗದ ವಿಮರ್ಶೆ ಗಮನಾರ್ಹವಲ್ಲವೆಂದು ಕೆಲವರ ಅಭಿಮತ, ಅದನ್ನು ಒಪ್ಪಲಾಗದು. ನಿಯೊಕ್ಲ್ಯಾಸಿಕಲ್ ಪದ್ಧತಿಯೆಂಬ ನವ ಅಭಿಜಾತ ಪಂಥದ ಹೊಸ ಹುಟ್ಟು ಎದ್ದು ಬಂದಾಗಲೇ ಪ್ರಾರಂಭವಾಯಿತೆಂದು ಕೆಲವರ ಭಾವನೆ. ಹಾಗೆ ಆಗಿರಬಹುದು, ಆದರೂ ಹೊಸ ಹುಟ್ಟಿನ ಸಾಹಿತ್ಯಕ್ಕೂ ಸಾಹಿತ್ಯವಿಮರ್ಶೆಗೂ ಶಿಷ್ಟತೆಯಿಂದ ವಿಭಿನ್ನವಾದ ಸ್ವಂತ ವರ್ಚಸ್ಸು ತುಂಬಿರುವುದರಿಂದ ಅವನ್ನು ನವ ಅಭಿಜಾತತೆಯಿಂದ ಪ್ರತ್ಯೇಕಿಸಿ ಲಕ್ಷಿಸುವುದೇ ಸಾಧು. ಒಬ್ಬಿಬ್ಬರಿಗೆ ಆಧುನಿಕ ಯುಗ ಸು. 1750ರಂದೇ ಉದಯಗೊಂಡಿತೆಂದು ತೋರಿಬಂದಿದೆ. ಅವರ ಭಾವನೆಗೆ ರೊಮ್ಯಾಂಟಿಕ್ ಸಮಯ ಆಧುನಿಕತೆಯಲ್ಲಿ ಅಂತರ್ಗತ. ಇದನ್ನು ಒಪ್ಪಲಾಗದು. ನವ ಅಭಿಜಾತತೆ 19ನೆಯ ಶತಮಾನದ ಒಂದೆರಡು ದಶಕದಲ್ಲೂ ಹಠಹಿಡಿದು ನಿಂತಿದ್ದು ತನ್ನ ಆಡಳಿತ ಬಿಟ್ಟುಕೊಡಲು ಸಮ್ಮತಿಸಲಿಲ್ಲ. ಅದನ್ನು ಪುರ್ತಿ ಕೆಳಗಿಳಿಸುವುದಕ್ಕೆ ರೊಮ್ಯಾಂಟಿಕತೆಯೊಂದೇ ಸಾಲದಾಯಿತು ವಾಸ್ತವತೆ ವೈಜ್ಞಾನಿಕತೆ ಎರಡೂ ಬೆಂಬಲ ಕೊಟ್ಟ ಮೇಲೆ ನವ ಅಭಿಜಾತತೆಗೆ ಇಳಿಗಾಲ ಪ್ರಾರಂಭವಾಯಿತು. ಅದೂ ಅಲ್ಲದೆ ರೊಮ್ಯಾಂಟಿಕತೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಹಿಂದಿನದನ್ನು ಸಂಪುರ್ಣವಾಗಿ ಕೈಬಿಟ್ಟಲ್ಲದೆ ಇಂದಿನದು ಬದುಕಲಾರದು ಎಂದು ಆಧುನಿಕತೆ ಸಾರಿದರೆ ಹಿಂದಿನದರ ಸ್ಫೂರ್ತಿಯಿಂದ ಕಸುವುಗೊಂಡು ಇಂದಿನದು ಬೆಳೆಯಬೇಕು ಎಂಬುದು ರೊಮ್ಯಾಂಟಿಕತೆಯ ಧ್ಯೇಯ. ಆದ್ದರಿಂದ ರೊಮ್ಯಾಂಟಿಕ್ ಅವಧಿಯನ್ನು ಆಧುನಿಕತೆಯಲ್ಲಿ ವಿಲೀನಗೊಳಿಸುವುದು ಸರಿಯಲ್ಲ.
ಸಾಹಿತ್ಯವೇ ವಿಮರ್ಶೆ
[ಬದಲಾಯಿಸಿ]ಸಾಹಿತ್ಯವನ್ನು ಕುರಿತ ಸಾಹಿತ್ಯವೇ ವಿಮರ್ಶೆ. ಮೊದಲು ಸಾಹಿತ್ಯ ಅನಂತರ ವಿಮರ್ಶೆ-ಇದು ತರ್ಕಸಮ್ಮತ ಕ್ರಮ. ಪುರಾತನ ಗ್ರೀಕರಲ್ಲಿ ಅದೇ ಕ್ರಮ ಆಗಿ ಬಂದದ್ದರಿಂದ ಅವರು ಕಂಡುಹಿಡಿದ ಕಾವ್ಯತತ್ತ್ವಗಳಿಗೂ ನಿಯಂತ್ರಿಸಿದ ಕಾವ್ಯ ಸೂತ್ರಗಳಿಗೂ ಬಹುಕಾಲ ನಿಲ್ಲುವ ಸತ್ಯತೆಯೂ ಸಾಮಥರ್ಯ್ವೂ ಲಭಿಸಿದುವು. ಪ್ರ.ಶ.ಪು. 8ನೆಯ ಶತಮಾನದಿಂದ ಭವ್ಯಕಾವ್ಯಗಳೂ ಪ್ರಗಾಥಗಳೂ ಐದನೆಯ ಶತಮಾನದಲ್ಲಿ ರುದ್ರನಾಟಕ ಹರ್ಷನಾಟಕಗಳೂ ಸಾಕಾದಷ್ಟು ವಿರಚಿತವಾಗಿ ಪ್ರಚಾರ ಗೊಂಡು ಜನರಿಗೆ ಪರಿಚಯ ವಾದುವು. ಭವ್ಯಕವಿ ಹೋಮರ್ ಗ್ರೀಕರಿಗೆ ಅಚ್ಚುಮೆಚ್ಚು. ಅವನ ಕಾವ್ಯಗಳ ಮೇಲೆ ಆರು ಏಳನೆಯ ಶತಮಾನಗಳಲ್ಲಿ ಕೆಲವು ಜ್ಞಾನಿಗಳು ಮಾಡಿದ ಟೀಕೆಟಿಪ್ಪಣಿಗಳು ಈಗಲೂ ಉಳಿದಿವೆ. ತತ್ತ್ವ ವಿಚಾರದಲ್ಲೊ ನೀತಿಬೋಧನೆಯಲ್ಲೊ ಅವರು ಆಡಿದ ಪ್ರಾಸಂಗಿಕ ವಾಕ್ಯಗಳನ್ನು ಸಾಹಿತ್ಯ ವಿಮರ್ಶೆಯೆಂದು ಪರಿಗಣಿಸ ಲಾಗದು. ಹಾಗೆಯೇ ವಿಡಂಬನ ಕಾರನಾದ ವಿನೋದಶೀಲ ಅರಿಸ್ಟೊಫೇನಿಸ್ ತನ್ನ ನಾಟಕದಲ್ಲಿ ಎಸಗಿದ ರುದ್ರನಾಟಕಕಾರರ ತುಲನೆಯನ್ನೂ ಖಚಿತ ವಿಮರ್ಶೆಯೆಂದು ತೆಗೆದುಕೊಳ್ಳುವುದು ಅಸಾಧ್ಯ. ಕಾವ್ಯವಿಮರ್ಶೆ ಅಧಿಕೃತವಾಗಿ ವ್ಯವಸ್ಥಿತವಾಗಿ ಪ್ರಾರಂಭವಾದದ್ದು ನಾಲ್ಕನೆಯ ಶತಮಾನದಲ್ಲಿ, ಮಹಾದಾರ್ಶನಿಕ ಪ್ಲೇಟೊವಿನಿಂದ. ಪ್ಲೇಟೊವನ್ನು ಕಾವ್ಯವಿರೋಧಿ, ಕವಿಗಳ ಶತ್ರು ಎನ್ನುತ್ತಿದ್ದರು. ಅದು ಕೇವಲ ಬಾಹ್ಯನೋಟದ ಪರಿಣಾಮ. ಕವಿತ್ವಕ್ಕೆ ಒಂದು ಬಗೆಯ ದಿವ್ಯಾವೇಶ ಅವಶ್ಯಕವೆಂದು ಅವನಂತೆ ಉತ್ಸಾಹಗೂಡಿ ಸುರಮ್ಯವಾಗಿ ಬಣ್ಣಿಸುವವರು ಅಪರೂಪ. ಕವಿಗಳ ಆ ಸಮ್ಮೋಹನ ಶಕ್ತಿಯೇ ಅವನಲ್ಲಿ ಕೋಪ ಎಬ್ಬಿಸಿತು. ಮಂದಿ ರಾಗಾವೇಶದಿಂದ ಕುಣಿದಾಡುವಂತೆ ಮಾಡಿ ಅವರನ್ನು ದುರ್ಬಲಗೊಳಿಸುತ್ತದೆ, ಕಾವ್ಯ-ಎಂಬುದು ಅವನ ಆಕ್ಷೇಪಣೆ. ಅಲ್ಲದೆ ಆದರ್ಶವಾಗಬೇಕಾದ ಸತ್ಯದ ನಕಲಿನ ನಕಲನ್ನು ಕಾವ್ಯ ತಯಾರಿಸುತ್ತದೆಯಾಗಿ ಅದು ಸತ್ಯದಿಂದ ದೂರ; ದೇವತೆಗಳೂ ವಿಷಯಲಾಂಪಟ್ಯಾದಿ ದೋಷಯುಕ್ತರೆಂದು ಸುಳ್ಳು ಹೇಳಿ ದೈವದೂಷಣೆಯ ಕಡೆಗೆ ಜನರನ್ನು ತಳ್ಳುತ್ತದೆ. ಆದ್ದರಿಂದ ಆದರ್ಶರಾಷ್ಟ್ರದಲ್ಲಿ ಕವಿಗಳಿಗೆ ಜಾಗವಿರಕೂಡದು. ಪ್ರಾಯಶಃ ಕಮ್ಮಾರ, ಕೃಷಿಕ ಮೊದಲಾದವರು ಕವಿವರ್ಗಕ್ಕಿಂತ ಹೆಚ್ಚು ಲೋಕೋಪಕಾರಿಗಳೆಂದು ಪ್ಲೇಟೊವಿನ ನಿರ್ಧಾರ. ಪ್ರಾಚೀನ ಗ್ರೀಕರಿಗೆ ಬಡಗಿ, ವೈದ್ಯ, ಶಿಲ್ಪಿ, ಕವಿ ಎಲ್ಲರೂ ಒಂದೇ ಗುಂಪಿನ ಕೆಲಸಗಾರರು. ಸಮಾಜಸೇವೆ ಎಲ್ಲರಿಗೂ ಗುರಿ.
ಪ್ಲೇಟೊ ಶಿಷ್ಯ
[ಬದಲಾಯಿಸಿ]ಪ್ಲೇಟೊವಿನ ಶಿಷ್ಯರಲ್ಲಿ ಅರಿಸ್ಟಾಟಲ್ ಒಬ್ಬ. ಅವನು ಗುರುವಿನ ಮತವನ್ನು ಖಂಡಿಸಲೋಸ್ಕರವೇ ತನ್ನ ಕಾವ್ಯಕಲೆಯನ್ನು ರೂಪಿಸಲಿಲ್ಲ. ಅವನ ಉದ್ದೇಶಗಳಲ್ಲಿ ಅಂಥ ಪ್ರತಿಭಟನೆ ಒಂದಾಗಿದ್ದರೂ ಇರಬಹುದು. ಅರಿಸ್ಟಾಟಲನ ವಾದಸರಣಿ ಇದು. ಅನುಕರಣೆ ಕಾವ್ಯದ ಕೆಲಸ, ದಿಟ; ಆದರೆ ಅದು ಯಥಾರ್ಥತೆಯನ್ನು ತದ್ವತ್ತಾಗಿ ತಂದಿಡುವುದಿಲ್ಲ; ಒಳಗೆ ಹುದುಗಿರುವ ಆದರ್ಶ ಸತ್ಯವನ್ನು ಪ್ರತಿಬಿಂಬಿಸುತ್ತದೆ. ಕಾವ್ಯ ಇತಿಹಾಸಕ್ಕಿಂತ ಹೆಚ್ಚು ತತ್ತ್ವವತ್ತಾದದ್ದು, ತತ್ತ್ವಶಾಸ್ತ್ರಕ್ಕಿಂತ ಹೆಚ್ಚು ರಸವತ್ತಾದದ್ದು. ಜನರೊಳಗೆ ಇದ್ದುಕೊಂಡು ಮಂದೈಸಿ ಕಸಿವಿಸಿಗೊಳಿಸುವ ಮರುಕ, ಭೀತಿ ಇತ್ಯಾದಿ ಭಾವಗಳು ಹೊರಬೀಳುವಂತೆ ಮಾಡಿ ಹೃದಯ ಶುದ್ಧಿಗೂ ಮನಶ್ಯಾಂತಿಗೂ ಕಾವ್ಯ ಸುಲಭೋಪಾಯವಾಗುತ್ತದೆ. ಮೇಲಾಗಿ ಕಾವ್ಯ ತನಗೆ ಸಮಂಜಸವಾದ ಮತ್ತು ತನ್ನಿಂದ ಮಾತ್ರ ಒದಗಬಲ್ಲ ಸಂತಸವನ್ನು ಕೊಡುವುದರಿಂದ ಅದು ಪುರಸ್ಕಾರಾರ್ಹ.ಭವ್ಯಕಾವ್ಯ, ರುದ್ರನಾಟಕ, ಹರ್ಷನಾಟಕ ಮುಂತಾದ ಪ್ರಭೇದಗಳ ವಿಂಗಡಣೆ, ರುದ್ರನಾಟಕದ ಆರು ಅಂಗಗಳ ವಿವರಣೆ, ಕವಿಗಳ ಸಾಮ್ಯವೈಷಮ್ಯ ನಿರೂಪಣೆ ಇತ್ಯಾದಿ ಹಲವು ಕಾರ್ಯಗಳನ್ನು ಅರಿಸ್ಟಾಟಲ್ ಸಮರ್ಪಕವಾಗಿ ನಡೆಸಿಕೊಟ್ಟ.
ಕಾವ್ಯಾಲಾಪ
[ಬದಲಾಯಿಸಿ]ಪ್ರಾಚೀನ ಗ್ರೀಕರಿಗೆ ಕಾವ್ಯಾಲಾಪ ಹವ್ಯಾಸವಾದರೆ ಭಾಷಣವಿದ್ಯೆ ನಿತ್ಯ ಜೀವನದ ಚರ್ಯೆಯಾಗಿತ್ತು. ಅದಕ್ಕೂ ಒಂದು ಉತ್ತಮ ಕೈಪಿಡಿ ರಚಿತವಾಯಿತು, ಅರಿಸ್ಟಾಟಲನಿಂದ. ಭಾಷಣದ ಜಿಜ್ಞಾಸೆಯ ಮೂಲಕ ಗದ್ಯದ ವಿಚಾರವನ್ನೂ ಆತ ಚೆನ್ನಾಗಿ ಪರಿಶೀಲಿಸಿದ. ಮುಂದೆ ನೂರಾರು ವರ್ಷ ಆ ಪುಸ್ತಕಕ್ಕೆ ಮರ್ಯಾದೆ ದೊರಕಿತೇ ವಿನಾ ಅವನ ಕಾವ್ಯಕಲೆಗಲ್ಲ. ಎಂದರೆ ನಮ್ಮ ದೃಷ್ಟಿಗೆ ಎಷ್ಟೇ ಘನ ವಿಮರ್ಶಕನಾಗಿ ಅರಿಸ್ಟಾಟಲ್ ಕಾಣಬಂದರೂ ಸಾಹಿತ್ಯವಿಮರ್ಶೆಗೆ ಮುಖ್ಯವೃತ್ತಿಯ ಪದವಿಯನ್ನು ಹೊಂದಿಸಿಕೊಡುವುದು ಆಗಲಿಲ್ಲ, ಅವನಿಂದ ಕೂಡ. ವಾಗ್ಮಿತೆಯ ಆಕರ್ಷಣೆಗೆ ಕುಂದು ತಟ್ಟಲಿಲ್ಲ. ಪ್ರಜಾಪ್ರಭುತ್ವ ಕುಸಿದುಬಿದ್ದು ಚಕ್ರಾಧಿಪತ್ಯ ಏರ್ಪಟ್ಟ ಮೇಲೂ ಆ ಕಲೆಗೆ ಪ್ರೋತ್ಸಾಹ ಕಡಿಮೆಯಾಗಲಿಲ್ಲ. ಯುವಕರ ವಿದ್ಯಾಭ್ಯಾಸಕ್ಕೆ ವ್ಯಾಕರಣ ತರ್ಕಗಳೊಂದಿಗೆ ಅದೂ ಒಂದು ಪಠ್ಯವಾಯಿತು.
ಹೆಲನಿಸ್ಟಿಕ್ ಅಥವಾ ಅಲೆಕ್ಸಾಂಡ್ರಿಯನ್ ಅವಧಿ
[ಬದಲಾಯಿಸಿ]ಹೆಲನಿಸ್ಟಿಕ್ ಅಥವಾ ಅಲೆಕ್ಸಾಂಡ್ರಿಯನ್ ಅವಧಿಯಲ್ಲಿ ಅನೇಕ ಮಹಾಪಂಡಿತರು ಆಗಿಬಂದರು. ಪ್ಲೋಟಿನಸ್, ಪ್ರೋಕ್ಲಸ್, ಪಾರ್ಫೈರಿ, ಮೆಲೀಗರ್, ಹರ್ಮೋಜೀನಿಸ್, ಡಿಮೆಟ್ರಿಯಸ್ ಮುಂತಾದವರಿಗೆ ವಿಶೇಷ ಸನ್ಮಾನತೆಯಿತ್ತು. ಭಾಷಣ ವಿದ್ಯೆಯೇ ಅವರ ಪ್ರಧಾನ ಆಸಕ್ತಿಯಾಗಿದ್ದರೂ ಸಾಹಿತ್ಯದ ಗೋಜನ್ನು ಅವರು ಬಿಡಲಾಗಲಿಲ್ಲ ಅಥವಾ ಬಿಡಲೊಲ್ಲದೆ ಹೋದರು. ಏತಕ್ಕೆಂದರೆ ವಾದಚಾತುರ್ಯ, ಯುಕ್ತಾಲಂಕಾರ, ಉಪಕ್ರಮ, ಮುಕ್ತಾಯ ಮುಂತಾದವಕ್ಕೆಲ್ಲ ಸಾಹಿತ್ಯದಿಂದಲೇ ಸೂಕ್ತ ನಿದರ್ಶನ ಬರಬೇಕಲ್ಲವೇ? ಹೋಮರನನ್ನೂ ಮೂರು ರುದ್ರನಾಟಕಕಾರರನ್ನೂ ಆ ವಿದ್ವಾಂಸರು ಪಠಿಸಿದಂತೆ ಯಾವ ವಿಮರ್ಶಕನೂ ಪಠಿಸಲಾರ. ಹೀಗಾಗಿ ಭಾಷಣವಿದ್ಯೆ ಬರುತ್ತ ಬರುತ್ತ ಸಾಹಿತ್ಯವಿಮರ್ಶೆಯನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ತನ್ನೊಳಕ್ಕೆ ಸೇರಿಸಿಕೊಂಡಿತು. ಸಾವಿರಾರು ನಾಡುನುಡಿಗಳು (ಎಪಿಗ್ರ್ಯಾಮ್) ಪ್ರಚುರಗೊಂಡುವು. ಅವುಗಳಲ್ಲಿ ಹಲವು ಅತ್ಯುತ್ತಮ ವಿಮರ್ಶೆಯ ಕಿಂಚಿತ್ ಛಾಯೆಯಿಂದ ಆಹ್ಲಾದಕರವಾಗಿವೆ. ವಾಗ್ಮಿವಿದ್ಯೆಯ ಆವಶ್ಯಕತೆಯೂ ಮಹತ್ವವೂ ರೋಮನರ ಕಾಲದಲ್ಲಿ ಹೆಚ್ಚಾದುವೇ ಹೊರತು ಕಡಿಮೆಯಾಗಲಿಲ್ಲ.
ಗ್ರೀಕ್ ಭಾಷೆ
[ಬದಲಾಯಿಸಿ]ರೋಮನರಿಗೆ ಗ್ರೀಕ್ ಭಾಷೆಯನ್ನು ಕಂಡರೆ ಅತೀವ ವ್ಯಾಮೋಹ. ಸುಸಂಸ್ಕೃತ ಪುರುಷರೆಲ್ಲರೂ ಸ್ವಂತ ನುಡಿಯಾದ ಲ್ಯಾಟಿನ್ ಜೊತೆಗೆ ಗ್ರೀಕಿನಲ್ಲೂ ಬಲ್ಲವರಾಗಿದ್ದರು. ಸಿಸಿರೊ ಲ್ಯಾಟಿನ್ ಗದ್ಯದ ಸೀಮಾಪುರುಷರಲ್ಲಿ ಅತಿ ಗಣ್ಯನಾದವ; ಅವನು ಸಮಯ ಸಿಕ್ಕಿದಾಗಲೆಲ್ಲ ಮಾತನಾಡುತ್ತಿದ್ದುದು ಗ್ರೀಕ್. ಕೆಲವು ವಿದ್ವಾಂಸರು ಗ್ರೀಕಿನಲ್ಲೇ ಗ್ರಂಥ ಬರೆದರು. ಪ್ಲುಟಾರ್ಕನ ಹೆಸರು ಜಗದ್ವಿಖ್ಯಾತವಾದುದು. ಅವನಿಗೆ ಸಾಹಿತ್ಯದ ವಿಚಾರ ಮುಖ್ಯವಾಗಿರಲಿಲ್ಲ. ಡೆಮಾಸ್ತನೀಸ್ ಸಿಸಿರೊಗಳನ್ನು ಹೋಲಿಸಿ ಬರೆದ ಪ್ರಬಂಧದಲ್ಲೂ ಸಾಹಿತ್ಯಸಂಬಂಧಿಯಾದ ವಾಕ್ಯಗಳು ವಿರಳ. ಪ್ರಾಯಶಃ ಅವನಿಗೆ ಗೊತ್ತಿದ್ದ ಲ್ಯಾಟಿನ್ ಬಡಕಲೋ ಏನೊ! ಭಾಷಣವಿದ್ಯೆಯ ಬೋಧಕರಲ್ಲಿ ಒಬ್ಬನಾದ ಲ್ಯೂಸಿಯನ್ ಅರಿಸ್ಟೋಫೆನೀಸನಂತೆ ಅವಹೇಳನಕುಶಲಿ, ನಾವೀನ್ಯದ ವೈರಿ. ಶುದ್ಧಶೈಲಿಯ ಉಪಾಸಕ, ಮಿತತ್ತ್ವದ ಮತ್ತು ಮಧ್ಯಮ ಮಾರ್ಗದ ಪ್ರೇಮಿ. ವಿಮರ್ಶಕನಾಗುವ ವ್ಯಕ್ತಿತ್ವ ಅವನಲ್ಲಿ ಅಂಕುರವಾಗಿದ್ದರೂ ಅದು ಎಲೆಗೂಡಲಿಲ್ಲ, ಹೂಬಿಡಲಿಲ್ಲ.
ಸಾಂಸ್ಕೃತಿಕ ಪರಿಸ್ಥಿತಿ
[ಬದಲಾಯಿಸಿ]ಸಾಂಸ್ಕೃತಿಕ ಪರಿಸ್ಥಿತಿ ಹೀಗಿದ್ದರೂ ಪ್ರ.ಶ. ಸು. 250ರಲ್ಲಿ ಉತ್ಕೃಷ್ಟತೆಯಲ್ಲಿದ್ದ ಒಬ್ಬ ವಿಮರ್ಶಕನನ್ನು ಬಹುವಾಗಿ ಶ್ಲಾಘಿಸಲಾಗಿದೆ. ಅವನ ಹೆಸರು ಲಾಂಜೈನಸ್, ನಡೆದಾಡುವ ಪುಸ್ತಕಭಂಡಾರ, ಸಚೇತನ ವಿಶ್ವಕೋಶ-ಎಂಬ ವರ್ಣನೆ ಅವನದ್ದಾಗಿದ್ದಿತಂತೆ. ಅವನ ಒಂದು ಕಿರು ಹೊತ್ತಿಗೆ ಉಪಲಬ್ಧವಾಗಿದೆ. ಅದಕ್ಕೆ ಅಂಟಿಸಿರುವ ಈಚಿನ ಹೆಸರು ಭವ್ಯತೆಯನ್ನು ಕುರಿತು-ಎಂದು. ಅದು ಅಸಮರ್ಪಕವೆಂದು ಕೆಲವು ನುರಿತ ವಿದ್ವಾಂಸರ ಅಭಿಪ್ರಾಯ. ವಾಗ್ವಿಭವೋನ್ನತಿ-ಎಂಬ ನಾಮಧೇಯ ಉಚಿತವೆಂದು ಅವರ ಹೇಳಿಕೆ. ಗ್ರಂಥದಲ್ಲಿ ಉದ್ದಕ್ಕೂ ಸತ್ತ್ವಮಯವಾದ ರಸವದ್ವಾಕ್ಯಗಳು ನರ್ತನಗೈಯುತ್ತವೆ. ಕಾವ್ಯ ಹೇಗೆ ಮಹೋನ್ನತವಾಗಬಲ್ಲುದು ಎಂಬುದನ್ನು ಸೂಕ್ಷ್ಮ ವಿವೇಚನೆಯಿಂದಲೂ ಭಾವಪುರಿತವಾಗಿಯೂ ಮನವೊಪ್ಪಿಸುವ ಉಜ್ಜ್ವಲ ನುಡಿಯಿಂದಲೂ ಲಾಂಜೈನಸನಂತೆ ವಿವರಿಸಬಲ್ಲ ಜಾಣರು ವಿರಳ. ಕಾವ್ಯ ಶ್ರೇಷ್ಠವೆನಿಸುವುದು ನೀತಿಬೋಧೆಯಿಂದಲ್ಲ, ಓದುಗರಿಗೆ ಪರವಶತೆಯನ್ನುಂಟು ಮಾಡುವುದರಿಂದ. ಮಹೋನ್ನತ ಶೈಲಿಗೆ ಉದಾತ್ತ ಭಾವನೆಗಳೂ ಧಾರಾಳ ಮನಸ್ಸೂ ಸೂಕ್ತ ರಾಗಾವೇಶವೂ ಅಲಂಕಾರಪ್ರಾವೀಣ್ಯವೂ ಅಮೋಘವಾಗ್ಜಾಲವೂ ಉತ್ಕೃಷ್ಟ ಸಂಯೋಜನೆಯೂ ಕಾರಣ. ಸರಿಯಾದ ಉದಾಹರಣೆಗಳ ಮೂಲಕ ಹೇಗೆ ಮಹೋನ್ನತಿ ಕುದುರಿದೆ, ಎಲ್ಲಿ ಅದರ ಆಭಾಸ ಉಂಟಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಯಾವ ಅಂಶವನ್ನೇ ಚರ್ಚಿಸುತ್ತಿರಲಿ ಅವನ ಉಕ್ತಿ ತತ್ಕ್ಷಣ ನಮ್ಮ ಮನಸ್ಸನ್ನು ಒಲಿಸಿಕೊಳ್ಳುತ್ತದೆ. ದೋಷವಿಲ್ಲದಿರುವಿಕೆ ಎಂಬ ವಿಷಯದಲ್ಲಿ ಅವನದೇ ಕೊನೆಯ ಮಾತು ಎನ್ನಬಹುದು. ಸಾಹಿತ್ಯವನ್ನು ಸಾಹಿತ್ಯವಾಗಿಯೇ ವಿಮರ್ಶಿಸಿದವರಲ್ಲಿ ಅವನೇ ಮೊಟ್ಟಮೊದಲಿಗ. ಲಾಂಜೈನಸ್ ಏಕಾಂಗಿ. ಅವನ ಸನಿಯಕ್ಕೆ ಬರಬಲ್ಲವರು ಹಾಗಿರಲಿ, ಅವನ ಪಥದಲ್ಲಿ ಹೆಜ್ಜೆಯಿಡಲು ಬಂiÀÄಸಿದ ವಿದ್ವಾಂಸನೊಬ್ಬನೂ ಸಾಹಿತ್ಯ ಚರಿತ್ರೆಯಲ್ಲಿ ನಮಗೆ ಕಾಣಸಿಗರು.
ರೋಮನರಿಗೆ ಗ್ರೀಕರಿಂದ ಆದ ಅನುಕೂಲ
[ಬದಲಾಯಿಸಿ]ರೋಮನರಿಗೆ ಗ್ರೀಕರಿಂದ ಆದ ಅನುಕೂಲಗಳಲ್ಲಿ ಮುಖ್ಯವಾದದ್ದು ಇದು; ತಮ್ಮ ಮುಂದಿದ್ದ ವಿಶಾಲ ಗ್ರೀಕ್ ಸಾಹಿತ್ಯದೊಡನೆ ತಮ್ಮ ಸಾಹಿತ್ಯವನ್ನು ಹೋಲಿಸಿ, ತೂಕಮಾಡಿ, ಬೆಲೆ ನಿಷ್ಕರ್ಷಿಸಿ, ವಿಮರ್ಶೆಗೆ ತಿರುಳನ್ನೂ ಸ್ವಾರಸ್ಯವನ್ನೂ ಅವರು ತಂದುಕೊಂಡರು. ಆದರೆ ಅವರು ಸ್ವಭಾವತಃ ಕಾರ್ಯಪಟುಗಳು, ಆಲೋಚನಾ ಪರರಲ್ಲ. ಎರಡನೆಯದಾಗಿ ಲ್ಯಾಟಿನ್ ಸಾಹಿತ್ಯಕ್ಕೆ ಪುಷ್ಟಿ ಕಡಿಮೆಯಾಗಿತ್ತು. ದಣಿಯ ಹಿಂದೆ ಆಳುಗಳು ನಡೆಯುವಂತೆ ವರ್ಜಿಲ್ ಹೋಮರನನ್ನೂ ಸೆನೆಕ ಯೂರಿಪಿಡೀಸನನ್ನೂ ಹೊರೇಸ್ ಅರಿಸ್ಟಾಟಲನನ್ನೂ ಭಯಭಕ್ತಿಯಿಂದ ಹಿಂಬಾಲಿಸಿದರು. ಪ್ರತಿಭಾಶಾಲಿಗಳೇ ಹೀಗೆ ಮಾಡಿದ ಮೇಲೆ ಸಾಧಾರಣ ಸಾಹಿತಿಗಳ ಗತಿಯೇನು! ಲುಕ್ರೀಷಿಯಸ್ ಮತ್ತು ಕ್ಯಾಟಲಸ್ ಇಬ್ಬರೇ ಸ್ವಾವಲಂಬಿಗಳಾಗಿ ಸ್ವತಂತ್ರ ಹಾದಿಯಲ್ಲಿ ಮುಂದುವರಿದು ಅಪ್ಪಟ ರೋಮನರಾದರು; ಆದರೆ ಅವರಿಗೆ ಸಂದಗೌರವ ಅಷ್ಟೇನೂ ಹೇಳುವಂಥದ್ದಲ್ಲ.ಇದರಿಂದ ಏನು ಉಪಯೋಗ ಎಂಬುದು ರೋಮನರ ಜಾಯಮಾನ. ಭಾಷಣವಿದ್ಯೆ ಅವರಿಗೆ ಬಹುವಾಗಿ ಬೇಕಾಯಿತು. ವಾಗ್ಮಿತೆಯಲ್ಲಿ ಅವರು ಗ್ರೀಕರನ್ನು ಸರಿಗಟ್ಟಬಹುದಾಗಿತ್ತು. ಆದ್ದರಿಂದ ಭಾಷಣವಿದ್ಯೆಯ ಬೋಧಕರೂ ಗ್ರಂಥಕರ್ತರೂ ವ್ಯಾಖ್ಯಾನಕಾರರೂ ಐದನೆಯ ಶತಮಾನದ ಅಂತ್ಯದವರೆಗೂ ಉದಿಸಿಬಂದು ನೇರವಾಗಿ ಅಲ್ಲದಿದ್ದರೂ ಸಾಹಿತ್ಯದ ಮಾತುಕಥೆಯನ್ನು ಪಾಲಿಸಿಕೊಂಡರು. ಅವರಲ್ಲಿ ಕ್ವಿಂಟಿಲಿಯನ್ ಮುಖ್ಯಸ್ಥ. ಅವನೇನೂ ಪ್ರತಿಭಾವಂತನಲ್ಲ. ಆದರೆ ವಾಗ್ಮಿತೆಯ ಸೂತ್ರಗಳಿಗೆ ಉದಾಹರಣೆಗೋಸ್ಕರ ಅವನು ಸಾಹಿತ್ಯವನ್ನು ಆ ಕಡೆಯಿಂದ ಈ ಕಡೆಯವರೆಗೆ ಅಭ್ಯಾಸ ಮಾಡಿದ. ಆಗೊಮ್ಮೆ ಈಗೊಮ್ಮೆ ಅವನ ವದನದಿಂದ ಸಾಹಿತ್ಯವಿಮರ್ಶೆ ಉದುರುತ್ತದೆ-ಅದೂ ಸಾಹಿತ್ಯದ ಮೇಲಣ ಮಮತೆಯಿಂದಲ್ಲ, ವ್ಯಾವಹಾರಿಕ ದಕ್ಷತೆಯ ಸಾಧನೆಗೋಸ್ಕರ. ಸಾಹಿತ್ಯ ಭಾಗಗಳನ್ನು ಉದ್ಧರಿಸದೇ ಬಿಟ್ಟರೆ ಯಾವ ವಕೀಲನಾಗಲಿ ಸೆನೆಟ್ ಸಭಾಸದನಾಗಲಿ ಶೋಭಿಸುವುದಿಲ್ಲವೆಂಬುದು ಅವನ ಭಾವನೆ.
ರೋಮನ್ ಯುಗ
[ಬದಲಾಯಿಸಿ]ರೋಮನ್ ಯುಗದಲ್ಲಿ ಅವತರಿಸಿದ ಒಬ್ಬ ಸಾಹಿತಿಗೆ ವಿಮರ್ಶಕನೆಂಬ ಅಪಾರ ಖ್ಯಾತಿ ಒದಗಿಬಂತು. ಕೆಲಕಾಲ ಅವನು ಅರಿಸ್ಟಾಟಲನನ್ನು ಹಿಂದೆ ಹಾಕಿದ. ಬಹಳ ಕಾಲ ಅವನೊಡನೆ ಸಹ ಸಿಂಹಾಸನರೂಢನಾಗಿ ವಿಮರ್ಶಾಸಾಮ್ರಾಜ್ಯವನ್ನು ಆಳಿದ. ಅವನೇ ಹೊರೇಸ್. ಹೊರೇಸ್ ನಿಜವಾಗಿ ಕವಿ, ಮೃದು ವಿಡಂಬನಕಾರ, ಕುಶಲ ಪತ್ರದ ರೀತಿಯ ಲಲಿತಪ್ರಬಂಧಕಾರ. ಉದ್ದೇಶಪುರ್ವಕವಾಗಿ ಅವನೆಂದೂ ವಿಮರ್ಶೆ ಬರೆದವನಲ್ಲ. ಆದರೂ ಅವನ ಒಂದು ಪದ್ಯಪ್ರಬಂಧ ಕಾವ್ಯಕಲೆ ಎಂಬ ಹೆಸರನ್ನು ಹೊತ್ತು ವಿಮರ್ಶೆಯ ಪ್ರಸ್ಥಾನ ಗ್ರಂಥವಾಯಿತು. ಅದರಲ್ಲಿ ಗಾಢ ಚಿಂತನೆಯ ಗಂಭೀರತೆಗೂ ಭಾವಾವೇಶದ ಉರವಣೆಗೂ ಆಸ್ಪದವಿಲ್ಲ. ಎಲ್ಲೆಲ್ಲೂ ಸರಳವೂ ಸ್ಪಷ್ಟವೂ ವಿವೇಕಯುಕ್ತವೂ ಒಲಿಸಿಕೊಳ್ಳತಕ್ಕವೂ ಆದ ನಿಯಮಾವಳಿಗಳಿವೆ. ಅವು ಸ್ಥಾನದರ್ಪದಿಂದ ಜರುಗುವ ಆಜ್ಞೆಗಳಲ್ಲ, ಅನುಭವಪುರ್ಣನಾದ ಹಿರಿಯಣ್ಣ ಕೊಡುವ ಸವಿ ಹಿತೋಪದೇಶಗಳು. ಹೊರೇಸನದು ಸೂತ್ರೋಚ್ಚಾರ ವಿಮರ್ಶೆಯಾದರೂ (ಪ್ರಿಸ್ಕ್ರಿಪ್ಟಿವ್ ಕ್ರಿಟಿಸಿಸಂ) ಉಚ್ಚರಿಸುವವ ಸುಶಿಕ್ಷಿತ ಸಂಭಾವಿತನಾಗಿ ನಾಗರಿಕ ವಿನಯ ಮರ್ಯಾದೆಯನ್ನು ಸದಾ ಪಾಲಿಸುವವನಾದ್ದರಿಂದ ರಸಾಹ್ಲಾದ ಉಂಟಾಗುತ್ತದೆಯೇ ಹೊರತು ಆಕ್ರೋಶ ಉತ್ಪತ್ತಿಯಾಗುವುದಿಲ್ಲ. ಅವುಗಳ ಸಾರಸರ್ವಸ್ವವನ್ನೂ ಔಚಿತ್ಯವೆಂಬ ಒಂದೇ ಶಬ್ದದಲ್ಲಿ ಅಡಕ ಮಾಡಬಹುದು. ಕಾವ್ಯ ಪ್ರಕಾರ ಯಾವುದೆಂಬುದನ್ನು ಮರೆಯದಿರಿ, ನಾಟಕಕ್ಕೆ ಐದಂಕವೇ ಇರತಕ್ಕದ್ದು ರೌದ್ರಕೃತ್ಯವಾವುದೂ ರಂಗದ ಮೇಲೆ ಜರುಗಕೂಡದು, ಪ್ರಸ್ತಾವಕ್ಕೂ ಪಾತ್ರಕ್ಕೂ ಅನುಗುಣವಾದ ಮಾತನ್ನೇ ಬಳಸಿ, ಗ್ರೀಕ್ ಗ್ರಂಥಗಳನ್ನು ಹಗಲೂ ಇರುಳೂ ಪಠಿಸಿ-ಇತ್ಯಾದಿ ಸಾರಸ್ವತ ಸಲಹೆಗಳು ಇಡೀ ಯುರೋಪಿಗೇ ಪ್ರಿಯವಾದವು. ಹೊರೇಸನ ನುಡಿಗಳು ನಾಣ್ಣುಡಿಯಂತೆ ಕ್ಷಿಪ್ರಗ್ರಾಹ್ಯವಾದವು, ಸಾಟಿ ನಿಲ್ಲಬಲ್ಲಂಥವು, ಅತ್ಯಂತ ತೃಪ್ತಿಕರವಾದವು. ಅವನ ಅಪಾರ ಪ್ರಶಸ್ತಿ ನ್ಯಾಯವಾದದ್ದೇ[೧].
ಮಧ್ಯಯುಗ ಸಾಹಿತ್ಯ ವಿಮರ್ಶೆಯ ಕಾಲ
[ಬದಲಾಯಿಸಿ]ಮಧ್ಯಯುಗ ಸಾಹಿತ್ಯ ವಿಮರ್ಶೆಯ ಕಾಲವಲ್ಲ-ಎಂದು ಕೆಲವು ವಿದ್ವಾಂಸರು, ತೀರ್ಪಿತ್ತಿದ್ದಾರೆ. ಅದು ಅಕ್ಷರಶಃ ನಿಜವಲ್ಲ. ಆಗ ವಿದ್ಯಾವಂತ ವರ್ಗ ಒಂದಲ್ಲ ಒಂದು ಬಗೆಯಲ್ಲಿ ಕ್ರೈಸ್ತ ಚರ್ಚಿಗೆ ಸಂಬಂಧಿಸಿದ್ದರಿಂದ ಅವರ ಹಂಗಿನ ವಿಷಯ ದೇವತಾಶಾಸ್ತ್ರವಾಗಿತ್ತು (ಥಿಯಾಲಜಿ). ಕಾವ್ಯನಾಟಕಾದಿ ಬರೆಹವನ್ನು ಕೇವಲ ಭಾಷಾಜ್ಞಾನದ ಉಪಕರಣವನ್ನಾಗಿ ಉಪಯೋಗಿಸಿಕೊಂಡು ಕೈಬಿಡತಕ್ಕದ್ದಲ್ಲದೆ ಅವಕ್ಕೆ ಚಿತ್ರವನ್ನು ಸೂರೆಗೊಡಬಾರದು-ಎಂದು ಅವರ ದೃಢನಿರ್ಧಾರ. ಅವರ ಕಠಿಣದೃಷ್ಟಿಗೆ ಗ್ರೀಕ್ ಲ್ಯಾಟಿನ್ ಸಾಹಿತ್ಯವೆಲ್ಲ ಮ್ಲೇಚ್ಛಸಾಹಿತ್ಯ (ಪೇಗನ್ ಲಿಟರೇಚರ್). ಅದರ ಕಡೆಗೆ ಮನಸ್ಸನ್ನು ತಿರುಗಿಸುವುದು ಪಾಪಕಾರ್ಯ. ನಾಟಕವನ್ನು ನೋಡುವವರಿಗೆ ನರಕ ಕಾದಿದೆ. ರಸವ್ಯಾಸಂಗ ಬೇಕಾದರೆ ಮಹಾ ಸಾಹಿತ್ಯವಾದ ಬೈಬಲ್ ಇಲ್ಲವೆ? ಎಷ್ಟು ಸಾರಿ ಅದನ್ನು ಓದಿದರೆ ತಾನೆ ತಣಿವುಂಟಾದೀತು!ಆ ವಿದ್ಯಾವಂತರ ಭಾಷೆ ಸಾಮಾನ್ಯವಾಗಿ ಲ್ಯಾಟಿನ್-ವರ್ಜಿಲ್ ಸಿಸಿರೊ ಹೊರೇಸರ ಗ್ರಾಂಥಿಕ ಲ್ಯಾಟಿನ್. ಕೆಳದರ್ಜೆಯ ಲ್ಯಾಟಿನ್ ಮಿಶ್ರವಾದ ದೇಶಭಾಷೆಗಳೂ ಮಧ್ಯಯುಗದಲ್ಲಿ ಬೆಳೆದುಬಂದುವಲ್ಲದೆ ಅವುಗಳಲ್ಲಿ ನೂರಾರು ಯೋಗ್ಯ ಅದ್ಭುತ ಕಥೆಗಳೂ (ರೊಮಾನ್ಸ್) ಸಾವಿರಾರು ಭಾವಗೀತೆಗಳೂ ಹುಟ್ಟಿ ಬಂದುವು. ಆದರೆ ಅವುಗಳ ಕಡೆಗೆ ಪಂಡಿತರ ಗಮನ ಹರಿಯಲೇ ಇಲ್ಲ. ಅವು ಮಧ್ಯಯುಗದ ಪರಮ ಸಾಹಿತ್ಯ ಎಂಬ ನಿಜಾಂಶ ಯುರೋಪಿಗೆ ಅರಿವಾದದ್ದು 18ನೆಯ ಶತಮಾನದ ಎರಡನೆಯ ಭಾಗದಲ್ಲಿ. ಚರ್ಚಿನ ಆಶ್ರಯದಲ್ಲೇ ರಹಸ್ಯಗಳು, ಪವಾಡಗಳು, ನೀತಿರೂಪಕಗಳು-ಎಂಬ ಮೂರು ಬಗೆಯ ನಾಟಕಗಳು ಮೂಡಿಬಂದುವು. ಅವುಗಳಲ್ಲಿ ಉಪದೇಶ ಹೆಚ್ಚು, ಕಾವ್ಯಾಂಶ ಕಡಿಮೆ. ಅವಕ್ಕೆ ಟ್ರ್ಯಾಜಡಿ, ಕಾಮೆಡಿ-ಎಂಬ ಅಂಕಿತವನ್ನು ಯಾರೂ ಅಂಟಿಸುತ್ತಿರಲಿಲ್ಲ. ಒಂದು ಬಗೆಯ ದೃಷ್ಟಾಂತ ಕಥೆ ಪ್ರಚಾರಕ್ಕೆ ಬಂತು. ಉನ್ನತ ಸ್ಥಾನ ಸಂಪತ್ತಿನಲ್ಲಿ ಇದ್ದು ಬಲು ಸೊಕ್ಕಿ ಪಾತಕಮಾಡಿ ಕೆಳಗುರುಳಿದವನ ಪ್ರಕರಣವೂ ಅದೃಷ್ಟದೇವಿಯ ಅನಿಮಿತ್ತ ಆಗ್ರಹಕ್ಕೆ ಪಕ್ಕಾಗಿ ಬಂತು. ಉನ್ನತ ಸ್ಥಾನ ಸಂಪತ್ತಿನಲ್ಲಿ ಇದ್ದು ಬಲು ಸೊಕ್ಕಿ ಪಾತಕಮಾಡಿ ಕೆಳಗುರುಳಿದವನ ಪ್ರಕರಣವೂ ಆ ಕಥೆಯ ವಿಷಯ. ಅದಕ್ಕೇ ಮಧ್ಯಯುಗದಲ್ಲಿ ಟ್ರ್ಯಾಜಡಿ ಎಂಬ ಹೆಸರು. ಹೀಗೆ ಕೊಂಚಮಟ್ಟಿಗಾದರೂ ಸಾಹಿತ್ಯವಿಮರ್ಶೆ ನಡೆಯುತ್ತಲೇ ಇತ್ತು, ಮಧ್ಯಯುಗದಲ್ಲಿ.
ವಿದ್ಯಾಶಾಲೆಗಳಲ್ಲಿ ಬೋಧನ
[ಬದಲಾಯಿಸಿ]ಅಲ್ಲದೆ ಭಾಷಣವಿದ್ಯೆ ಕಡ್ಡಾಯವಾಗಿ ವಿದ್ಯಾಶಾಲೆಗಳಲ್ಲಿ ಬೋಧನ ಭಾಗವಾಗಿತ್ತು. ಬೀಡ್, ಇಸಿಡೋರ್, ಆಗಸ್ಟೀನ್, ಅಪೊಲೋನಿಯಸ್, ಕ್ಯಾಸಿಯೋಡರಸ್, ಬೊಅರೆಯಸ್ ಮೊದಲಾದವರು ಅದರಲ್ಲಿ ಪರಿಣತರಾಗಿದ್ದರು. ಅವರು ಹೊರೇಸ್, ಕ್ವಿಂಟಲಿಯನರನ್ನು ಅನುಸರಿಸಿದರು. ಉದಾಹರಣೆಗಾಗಿ ಕಾವ್ಯಭಾಗಗಳನ್ನು ಉಪಯೋಗಿಸಲೇಬೇಕಾಯಿತು. ತತ್ತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರದ ತೊತ್ತಿನಂತೆ ಕಾವ್ಯ ಜೀತ ದುಡಿದರೆ ಪರವಾಯಿಲ್ಲ, ಎಂಬುದೇ ಅವರ ಸಮಾಧಾನ.ಆದರೂ ಕಾವ್ಯವನ್ನು ಕುರಿತು ಮಧ್ಯಯುಗದ ಮುಖಂಡರಿಗೆ ಜುಗುಪ್ಸೆ. ಹಿಂದೆ ಪ್ಲೇಟೊ ನುಡಿದಿದ್ದಂಥ ಆಕ್ಷೇಪವನ್ನೇ ಅವರು ಎತ್ತಿ ಆಡಿದರು. ತಮ್ಮ ದೂರಿಗೆ ವ್ಯಾವಹಾರಿಕ ಕಾರಣ ಮುಂದಿಡುವುದು ಅವರ ನಡೆವಳಿಕೆ. ಎಷ್ಟೇ ಆದರೂ ಕಾವ್ಯಸುಳ್ಳಿನ ಕಂತೆ, ಕಟ್ಟುಕಥೆಯ ಬೊಂತೆ; ಅದರಲ್ಲಿ ತುಂಬಿರುವ ಅಶ್ಲೀಲತೆ ದೈವ ದೂಷಣೆಗಳಿಂದ ಕೆಡುಕೇ ವಿನಾ ಒಳ್ಳೆಯದಲ್ಲ; ಅದು ಚಿತ್ತವನ್ನು ಬಡಿದೆಬ್ಬಿಸಿ ಶಾಂತಿಭಂಗಕ್ಕೆ ದೂಡುತ್ತದೆ. ಮನುಷ್ಯನನ್ನು, ಮ್ಲೇಚ್ಛ ದೇವತೆಗಳನ್ನು ತರುವುದರಿಂದ ಕ್ರೈಸ್ತಮತಕ್ಕೆ ಅದು ವಿರೋಧಿ. ಕಾವ್ಯದಿಂದ ನಡತೆಯನ್ನು ತಿದ್ದುವುದು ಹೇಗೆ? ಇಂಥ ಅಭಿಪ್ರಾಯಗಳನ್ನು ಟರ್ಟುಲಿಯನ್, ಇಸಿಡೋರ್, ಅಕ್ವಿನಸ್ ಮುಂತಾದವರು ಕಟುವಾಗಿ ಹೇಳಿದರು. ಅವರದೇ ಬಲಿಷ್ಠ ಪಕ್ಷ.
ಕಾವ್ಯ
[ಬದಲಾಯಿಸಿ]ಇನ್ನೊಂದು ಪಕ್ಷವೂ ಇತ್ತೆಂಬುದನ್ನು ಲಕ್ಷಿಸಬೇಕು. ಕಾವ್ಯವನ್ನು ತೀರ ಕೆಟ್ಟುದಲ್ಲವೆಂದೂ ಸ್ವೀಕರಣೀಯವೆಂದೂ ಸಮರ್ಥನ ಮಾಡಲೋಸುಗ ಅವರಲ್ಲಿ ಕೆಲವರು ಯತ್ನಿಸಿದರು. ಕಾವ್ಯದಲ್ಲಿ ಮುಖ್ಯವಾದದ್ದು ಅದರ ಅಭಿಧಾರ್ಥವಲ್ಲ, ಅನ್ಯಾರ್ಥ (ಅಲೆಗೊರಿ) ಎಂದು ಅವರ ವಾದ. ಹರ್ಕ್ಯುಲೀಸ್ ಥೀಸಿಯಸ್ ಮುಂತಾದ ವೀರರನ್ನು ಆದಿಕಾಲದ ಜ್ಞಾನಿಗಳಂತೆ ಭಾವಿಸತಕ್ಕದ್ದು. ದುಶ್ಚಾಳಿಗಳನ್ನೂ ಭಾವಾತಿರೇಕವನ್ನೂ ಎದುರಿಸಿ ಬಗ್ಗುಬಡಿಯುವುದೇ ಅವರ ನಿಜ ಸಾಹಸ. ಅವರು ಒಂದು ರೀತಿ ಮ್ಲೇಚ್ಛ ಸಂತರು. ಅನ್ಯಾರ್ಥ ಸಂಕೇತವನ್ನು ಆಮೇಲೆ ಬೈಬಲಿನ ಹಳೆಯ ಒಡಂಬಡಿಕೆಯ ಏಬ್ರಹಾಂ, ಆಡಂ, ಈವ್ ಮತ್ತು ಜೇಕಬರಿಗೂ ಅನ್ವಯಿಸಿದರು. ಆರನೆಯ ಶತಮಾನದ ಫುಲ್ಜೆಂಟೆಯಸನಿಂದ ಹದಿನಾಲ್ಕರ ಪೆಟ್ರಾರ್ಕನವರೆಗೂ ಅನ್ಯಾರ್ಥ ಪ್ರತಿಪಾದನೆಯೇ ಸಮರ್ಪಕ ಸಾಹಿತ್ಯವಿಮರ್ಶೆಯೆಂಬ ಅಭಿಪ್ರಾಯ ಬಳಕೆಯಲ್ಲಿತ್ತು. ಕಾವ್ಯಕ್ಕೆ ವ್ಯಕ್ತಾರ್ಥ, ನೀತ್ಯರ್ಥ-ಈ ಮೂರೂ ಸಲ್ಲುತ್ತವೆಂದು ಬಗೆಯಬೇಕು. ಡಾಂಟೆ ನಾಲ್ಕನೆಯದೊಂದನ್ನು ತಂದು ಸೇರಿಸಿದ. ಅದೇ ಗೂಢಾರ್ಥ ಅಥವಾ ಅತೀಂದ್ರಿಯಾರ್ಥ (ಆನಗೋಜಿ). ಅನ್ಯಾರ್ಥವಾದುದರಿಂದ ಕಾವ್ಯಕ್ಕೆ ಒಂದು ಬಗೆಯ ಆಶ್ರಯ ದೊರೆತರೂ ಅದು ಒಂದು ಸ್ವತಂತ್ರವ್ಯಾಪಾರವೆಂಬುದು ಸ್ಥಿರವಾಗಲಿಲ್ಲ. ದೇವತಾಶಾಸ್ತ್ರದ ಲೌಕಿಕರೂಪ ಅದು ಎಂದಾಯಿತು. ಆದರೆ ಪೆಟ್ರಾರ್ಕ್, ಬೊಕ್ಯಾಟ್ಚೊ ಇಬ್ಬರೂ ದೇವತಾಶಾಸ್ತ್ರ ಒಂದು ಬಗೆಯ ಕಾವ್ಯ, ದೇವರ ಕಾವ್ಯ, ಎಂದು ಯುಕ್ತಿಯುಕ್ತವಾಗಿ ವಾದಿಸಿದರು. ಅವರಿಗೆ ಬೈಬಲ್ ಒಂದು ಕಾವ್ಯವೆಂದು ನಿಶ್ಚಲ ನಂಬಿಕೆ. ಕಾವ್ಯಸಮರ್ಥನೆಯಲ್ಲಿ ಬೊಕ್ಯಾಟ್ಚೊ ಮೊಟ್ಟ ಮೊದಲಣ ಆಧುನಿಕ ಎಂದು ಕೆಲವರು ಹೊಗಳಿದ್ದಾರೆ. ಅವನ ಸಮರ್ಥನೆ ದಿಟವಾಗಿ ಆಧುನಿಕವಲ್ಲ ಮಧ್ಯಯುಗದ್ದು.
ದೇಶಕಾಲಗಳ ಸಂಕಲೆ
[ಬದಲಾಯಿಸಿ]ದೇಶಕಾಲಗಳ ಸಂಕಲೆಯನ್ನು ಕಿತ್ತೊಗೆದು ವಿಶ್ವವ್ಯಾಪ್ತ ಅಮರ ವ್ಯಕ್ತಿಯಂತೆ ವಿಹರಿಸುವುದು ಪ್ರಚಂಡಪ್ರತಿಭಾವಂತನಿಗೆ ಸಾಧ್ಯ. ಅಂಥ ಮಹಾಮೇಧಾವಿ ಡಾಂಟೆ. ಅವನ ವಿಮರ್ಶೆ ಹೆಚ್ಚಾಗಿ ಭಾಷಾವಿಚಾರಕ್ಕೆ ಸೇರಿದ್ದು. ಪ್ರಾಸಂಗಿಕವಾಗಿ ಕಾವ್ಯದ ವಿಚಾರಕ್ಕೆ. ಇಟಲಿಯ ಪ್ರಾಂತಭಾಷೆಗಳ ಹೋಲಿಕೆ ಅವುಗಳ ಗುಣದೋಷ, ಟಸ್ಕನ್ ಭಾಷೆಯ ಹಿರಿಮೆ ಮುಂತಾದ ಜಿಜ್ಞಾಸೆಯಲ್ಲಿ ಅವನು ಅತ್ಯುತ್ತಮ ವಿಮರ್ಶಕನ ಲಕ್ಷಣವನ್ನು ಮೆರೆದ ಹಾಗೂ ಪದಗಳ ಸತ್ತ್ವ ಲಾವಣ್ಯಗಳನ್ನು ಅವನು ವಿಂಗಡಿಸಿ ವರ್ಣಿಸಿರುವ ರೀತಿಯೂ ಅದೇ ಬಗೆಯದೇ. ಅವನ ಹಲವು ಚಿಕ್ಕವಾಕ್ಯಗಳೂ ವಿಶೇಷಣಗಳೂ ವಿಮರ್ಶೆಯ ಪರಿಭಾಷೆಯಲ್ಲಿ ಸೇರಿಕೊಂಡಿವೆ. ಕಾವ್ಯದ ವಸ್ತು ಮೂರು; ಯುದ್ಧ, ಪ್ರೇಮ, ಸದ್ಗುಣ ಎಂದು ಅವನ ಅಭಿಮತ. ಶಬ್ದಗಳನ್ನು ಜರಡೆಯಾಡಿದ ಡಾಂಟೆಗೆ ಭಾಷಣವಿದ್ಯೆ ಹೊಲ್ಲ ಎನ್ನಿಸಿತು. ಅವನ ವಿಮರ್ಶೆ ಪ್ರಾಚೀನ ಗ್ರೀಕರ ವಿಮರ್ಶೆಗಿಂತಲೂ ಹೆಚ್ಚು ಉದಾರವಾದದ್ದು ಎಂದಿದ್ದಾರೆ. ಲಾಂಜೈನಸನಂತೆ ಡಾಂಟೆಯೂ ತನ್ನ ಯುಗದಲ್ಲಿ ಒಬ್ಬನೇ ಒಬ್ಬ. ಕಾವ್ಯದ ಬಾಹ್ಯರೂಪ ರಚನಾ ಕಟ್ಟುಪಾಡು ಯಾವುದೇ ಆಗಿರಲಿ ಅದರ ಆಳದಲ್ಲಿನ ಮೂಲ ಸಂಜ್ಞೆ ಸರಿಸುಮಾರಾಗಿ ಒಂದೇ ಗುರುತಿನದು; ಅದನ್ನು ಕಣ್ಣಿಟ್ಟು ನೋಡಿ ಇತರರ ಅವಗಾಹನೆಗೆ ನಿಸ್ಸಂದಿಗ್ಧವಾಗಿ ತರಬಲ್ಲ ವಿಮರ್ಶಕ ರಸಿಕರು ಬೇಡಿದಾಗಲೆಲ್ಲ ಎದ್ದು ಬರುವುದಿಲ್ಲ; ಸೃಷ್ಟಿದೇವಿ ತನ್ನ ಇಚ್ಛೆಯಂತೆ ಡಾಂಟೆಯಂಥ ಕವಿ ವಿಮರ್ಶಕನನ್ನು ಕಳಿಸುತ್ತಾಳೆ ಭೂಮಿಗೆ, ಲೋಕೋದ್ಧಾರಕ್ಕಾಗಿ.[೨]
ಯುರೋಪಿನ ಸಾಂಸ್ಕೃತಿಕ ಚರಿತ್ರೆ
[ಬದಲಾಯಿಸಿ]ಹೊಸಹುಟ್ಟು (ನವೋದಯ; ರಿನೆಸಾನ್ಸ್) ಎಂಬುದು ಯುರೋಪಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ನಡೆದ ಒಂದು ದೊಡ್ಡ ಕ್ರಾಂತಿ. ಸು. 15ನೆಯ ಶತಮಾನದಲ್ಲಿ ಮೊದಲು ಇಟಲಿಯಲ್ಲಿ, ಅನಂತರ ಫ್ರಾನ್ಸ್ ಇಂಗ್ಲೆಂಡುಗಳಲ್ಲಿ ಅನಂತರ ಸ್ಪೇನ್, ಜರ್ಮನಿ ಮುಂತಾದ ಇತರ ರಾಷ್ಟ್ರಗಳಲ್ಲಿ ಪ್ರಾರಂಭಗೊಂಡ ನವೋದಯ ಸು. 1630ರ ವರೆಗೂ ಪ್ರಭಾವಯುಕ್ತವಾಗಿತ್ತು. ಆ ಯುಗದಲ್ಲಿ ಮನುಷ್ಯಜೀವನದ ಸಕಲ ಶಾಖೆಗಳಲ್ಲೂ ಸ್ಪಷ್ಟ ಬದಲಾವಣೆ ಉಂಟಾಯಿತು. ಇಲ್ಲಿ ನಮಗೆ ಪ್ರಕೃತವಾಗಿರುವುದು ಸಾಹಿತ್ಯವನ್ನೂ ಸಾಹಿತಿಗಳನ್ನೂ ಕುರಿತು ಆಲೋಚನಾಪರರಲ್ಲಿ ಆದ ದೃಷ್ಟಿ ವ್ಯತ್ಯಾಸ. ಅದಕ್ಕೆ ಮುಖ್ಯ ಕಾರಣ ಅಭಿಜಾತ (ಕ್ಲ್ಯಾಸಿಕಲ್) ಸಾಹಿತ್ಯದ ಪುನರ್ಗಳಿಕೆ. ಹಳೆಯ ಗ್ರೀಕ್ ಲ್ಯಾಟಿನ್ ಕವಿಗಳ ಮತ್ತು ದಾರ್ಶನಿಕರ ಗ್ರಂಥಗಳು ಮೂಲರೂಪದಲ್ಲಿ ಪಂಡಿತರಿಗೆ ಲಭ್ಯವಾದಾಗ ಅವರ ಅಚ್ಚರಿಗೂ ಮೆಚ್ಚಿಕೆಗೂ ಎಣೆಯಿರಲಿಲ್ಲ. ಆ ಪೇಗನ್ ಸಾಹಿತ್ಯದಲ್ಲಿ ಮೂಡಿಬಂದಿದ್ದ ಸಹಜವೂ ಶುದ್ಧವೂ ಆಳವೂ ವಿಶಾಲವೂ ಆದ ಮಾನವತೆಯನ್ನು ಪರಿಭಾವಿಸಿ ಅವರಿಗೆ ಒಂದು ಕಡೆ ನಿಬ್ಬೆರಗು, ಇನ್ನೊಂದು ಕಡೆ ಪರಮಾನಂದ, ಮತ್ತೊಂದು ಕಡೆ ಹುರುಪು ಹುಮ್ಮಸ್ಸು, ಮಗುದೊಂದು ಕಡೆ ಮಾನವ ಜೀವನದ ಹಿರಿಮೆಯಲ್ಲಿ ಭರವಸೆ. ಕ್ರಮೇಣ ಅವರಿಗೆ ಮಾನುಷ ದಾರ್ಶನಿಕರು (ಹ್ಯೂಮನಿಸ್ಟ್್ಸ) ಎಂಬ ಹೆಸರು ಬಂತು. ಗ್ರಂಥಗಳ ಸಂಗ್ರಹಣೆ, ಸಂಪಾದನೆ, ವ್ಯಾಖ್ಯಾನ, ಟಿಪ್ಪಣಿ ಇತ್ಯಾದಿ ಕಾರ್ಯಾವಳಿಯಲ್ಲಿ ಲೇಖಕರು ಆಸಕ್ತಿಯಿಂದ ನಿರತರಾದರು. ಅವರಿಗೆ ದೊರೆತ ಪುಸ್ತಕಗಡಣದಲ್ಲಿ ಬಹು ಮುಖ್ಯವಾದವುಗಳಲ್ಲಿ ಅರಿಸ್ಟಾಟಲನ ಕಾವ್ಯಕಲೆ ಅತಿ ಮುಖ್ಯವಾದುದು. ಆ ಕಾವ್ಯದೀಪಿಕೆಯ ಇತಿಹಾಸ ನಿಜವಾಗಿ ರೋಮಾಂಚಕ. ಹಿಂದೆ ಸೂಚಿಸಿರುವಂತೆ ಅರಿಸ್ಟಾಟಲನ ತರುವಾಯ ಅದಕ್ಕೆ ಸಾಕಷ್ಟು ಪ್ರಸಾರ ಸಿಗಲಿಲ್ಲ. ಕ್ರಮೇಣ ವಿದ್ವಜ್ಜನ ಅದನ್ನು ಮರೆತುಬಿಟ್ಟಂತೆ ತೋರುತ್ತದೆ. ಹೆಲನಿಸ್ಟಿಕ್ ಅವಧಿಯಲ್ಲಾಗಲಿ ರೋಮನರ ಯುಗದಲ್ಲಾಗಲಿ ಅದರ ಪ್ರಸ್ತಾಪ ಏಳಲಿಲ್ಲ; ಸಿಸಿರೊ, ಹೊರೇಸ್, ಕ್ವಿಂಟಿಲಿಯನ್ ಯಾರೂ ಅದನ್ನು ಓದಿದ್ದಂತೆ ಕಾಣುವುದಿಲ್ಲ. ಎಂದಮೇಲೆ ಮಧ್ಯಯುಗದ ಮಾತೇಕೆ! ಹತ್ತನೆಯ ಶತಮಾನದಲ್ಲಿ ಅದರ ಸಿರಿಯಾಕ್ ಭಾಷೆಯ ತರ್ಜುಮೆಯನ್ನು ಅಬುಬಾಸ್ಕರ್ ಅರಬ್ಬೀ ಭಾಷೆಗೆ ಪರಿವರ್ತನೆ ಮಾಡಿದನಂತೆ, ಎರಡು ಶತಮಾನಗಳ ತರುವಾಯ ಅವಿರೊಯಿಜ್ó ಕೈಯಿಂದ ಇನ್ನೊಂದು ಸಂಕ್ಷಿಪ್ತ ಪ್ರತಿ ತಯಾರಾಯಿತಂತೆ. ಜರ್ಮನಿಯ ಹರ್ಜ್ನ್ ಎಂಬಾತ ಹದಿಮೂರನೆಯ ಶತಮಾನದಲ್ಲಿ ಕಾವ್ಯಕಲೆಯ ಲ್ಯಾಟಿನ್ ಭಾಷಾಂತರ ರಚಿಸಿದ. ಮಧ್ಯಯುಗದಲ್ಲಿ ಅದು ಕೆಲಕೆಲವರಿಗೆ ಪರಿಚಿತವಾಗಿದ್ದರೂ ಅದರ ಪ್ರಭಾವ ಏನೇನೂ ಇರಲಿಲ್ಲ. ಹದಿನಾಲ್ಕನೆಯ ಶತಮಾನದಲ್ಲಿ ಸ್ಪೇನಿನ ಮಾಂಟಿನಸನಿಂದ ಇನ್ನೊಂದು ಭಾಷಾಂತರ ಬಂತು. ಆದರೂ ಪೆಟ್ರಾರ್ಕ್, ಬೊಕ್ಯಾಟ್ಚೊ ಅದರ ಹೆಸರನ್ನೇ ಎತ್ತುವುದಿಲ್ಲ.
ಇಟಲಿಯ ಜಾರ್ಜಿಯೊ
[ಬದಲಾಯಿಸಿ]ಇಟಲಿಯ ಜಾರ್ಜಿಯೊ ವಲ್ಲ 1498ರಲ್ಲಿ ಲ್ಯಾಟಿನ್ ತರ್ಜುಮೆಯನ್ನು ತಯಾರಿಸಿ, 1508ರಲ್ಲಿ ಗ್ರೀಕ್ ಮೂಲದೊಡನೆ ಅದನ್ನು ಪ್ರಕಟಿಸಿದ. 1536ರಲ್ಲಿ ಅಲೆಗ್ಸಾಂಡ್ರಿಯೊ ಫಾಸ್ಟಸಿ ಪರಿಷ್ಕರಿಸಿದ ಲ್ಯಾಟಿನ್ ತರ್ಜುಮೆಯನ್ನು ಗ್ರೀಕ್ ಮೂಲದೊಂದಿಗೆ ಪ್ರಕಟಿಸಿದ. ಅಲ್ಲಿಂದ ಮುಂದೆ ಅರಿಸ್ಟಾಟಲ್ ಸಾಹಿತಿಗಳಿಗೂ ಸಾಹಿತ್ಯ ವಿಮರ್ಶಕರಿಗೂ ಒಂದು ಜ್ಯೋತಿಯಾದ. 1548ರಲ್ಲಿ ರಾಬರ್ಟೆಲ್ಲೊವಿನ ವಿಮರ್ಶಪುರ್ಣ ಪ್ರಕಟಣೆ ಹೊರಬಂದ ಮೇಲಂತೂ ಅದರ ಪ್ರಶಸ್ತಿಗೆ ಕಳೆಯೇರಿತು.ಹೊಸ ನೋಟ ಇದ್ದದ್ದು ನಿಜ; ಆದರೆ ಹಳೆಯದೆಲ್ಲವನ್ನೂ ಗುಡಿಸಿ ಬಿಸಾಡಿ ಹೊಸದನ್ನು ತಂದಿಡುವ ವಿಪರೀತ ಮತಿ ಅವರನ್ನು ಎಂದಿಗೂ ಪೀಡಿಸಿಲ್ಲ. ಕೆಲವಂಶಗಳಲ್ಲಿ ಹೊಸಹುಟ್ಟಿನ ಅವಧಿ ಕಂಡ ಹಾಗೆ ಮಧ್ಯಯುಗದ ಮುಂದುವರಿಕೆ ಎಂದರೂ ತಡೆಯುತ್ತದೆ. ಅದು ಬರಿ ಮುಂದುವರಿಕೆಯಲ್ಲ, ಬೆಳೆವಣಿಗೆ ಕೂಡಿದ ಮುಂದುವರಿಕೆ. ಭಾಷಣವಿದ್ಯೆಯನ್ನು ತೆಗೆದುಕೊಳ್ಳಿ; ವಿದ್ಯಾರ್ಜನೆಗೆ ಅದರ ವಿಶಿಷ್ಟ ಉಪಯೋಗ ಅವಶ್ಯಕವೆಂದು ಮನಗಂಡು ಅದನ್ನು ಹೊಸಹುಟ್ಟಿನಲ್ಲಿ ಇಟ್ಟುಕೊಳ್ಳಲಾಯಿತು. ಭಾಷಣದ ಅವಸರ ಮರೆಯಾಗಿ ಹೋದದ್ದರಿಂದ ಭಾಷಣವಿದ್ಯೆ ಹೆಚ್ಚುಹೆಚ್ಚಾಗಿ ಲೇಖನಕಲೆಯಾಯಿತು (ಕಾಂಪೋಜಿ಼ಷನ್); ಕ್ರಮೇಣ ಅಲಂಕಾರಶಾಸ್ತ್ರವಾಗಿ ಪರಿಣಮಿಸಿತು. 19ನೆಯ ಶತಮಾನದ ಕೊನೆಯವರೆಗೂ ಅದು ವಿದ್ಯಾಭ್ಯಾಸಕ್ರಮದ ಒಂದು ಅಂಗವಾಗಿಯೇ ನಡೆದುಬಂತು. ಈ ಶತಮಾನದಲ್ಲೂ ವಿಶಾಲಾರ್ಥವನ್ನು ಅದಕ್ಕೆ ಹೊಂದಿಸಿ ಅದರಿಂದ ಪ್ರಯೋಜನ ಪಡೆಯಬಹುದೆಂದು ಐ.ಎ.ರಿಚಡ್ರ್ಸ್ ಮೊದಲಾದವರ ಮತ. 16, 17ನೆಯ ಶತಮಾನಗಳ ಕವಿಗಳ ಶೈಲಿ ಸಾಮಾನ್ಯವಾಗಿ ಅಲಂಕಾರಮಯವಾಗಿರುವುದಕ್ಕೆ ಅವರಿಗೆ ಅಲಂಕಾರಶಾಸ್ತ್ರದಲ್ಲಿ ಶಿಕ್ಷಣ ಆಗಿದ್ದುದೇ ಕಾರಣ. ಪದ್ಯ ಗದ್ಯ ಎರಡರಲ್ಲೂ ಅಲಂಕಾರವೈಖರಿಗೆ ಎಡೆಯಿತ್ತು.
ಸಾರಸ್ವತ ಕಾರ್ಯ
[ಬದಲಾಯಿಸಿ]ಮಾನುಷ್ಯವತ್ಸಲರಾದ ವಿದ್ವಾಂಸರು ಹಲವು ಸಾರಸ್ವತ ಕಾರ್ಯಗಳನ್ನು ತಮ್ಮ ಪಾಲಿಗೆ ಬಂದ ಕರ್ತವ್ಯವೆಂದು ಭಾವಿಸಿ ನಿರಾಲಸ್ಯದಿಂದ ಶ್ರಮಿಸಿ ಅವನ್ನು ನೆರವೇರಿಸಿದರು. ಅವು ಹೀಗಿವೆ: 1. ಮುಖ್ಯವೆನಿಸಿದ ಅಭಿಜಾತ (ಕ್ಲಾಸಿಕಲ್) ಗ್ರಂಥಗಳ ನಿರ್ದುಷ್ಟ ಭಾಷಾಂತರ 2. ಅಭಿಜಾತ ವಿಧಾನದ ದೇಶೀಯ ಕಾವ್ಯರಚನೆ, ಮುಖ್ಯವಾದ ನಾಟಕ ಸಾಹಿತ್ಯದ ರಚನೆ 3. ಸಾಹಿತ್ಯ ಪ್ರಕಾರಗಳ ವಿಂಗಡನೆ ಮತ್ತು ಅವುಗಳ ಭಿನ್ನಲಕ್ಷಣ ನಿರ್ಣಯ 4. ಹಿಂದಣ ಯುಗಗಳಲ್ಲೂ ತಮ್ಮ ಕಾಲದಲ್ಲೂ ಚರ್ಚೆ ಎಬ್ಬಿಸಿದ ಆಕ್ಷೇಪಣೆಗಳಿಂದ ಸಾಹಿತ್ಯವನ್ನು ರಕ್ಷಿಸಿಕೊಳ್ಳುವುದು ಮತ್ತು ಸಾಹಿತ್ಯ ಸಮರ್ಥನೆ 5. ತಮ್ಮ ಕಾಲದ ಕವಿವರ್ಗ ಮನಬಂದಂತೆ ಯದ್ವಾ ತದ್ವಾ ಕಾವ್ಯ ನಿರ್ಮಾಣ ಮಾಡದಂತೆ ತಡೆಗಟ್ಟುವುದು 6. ಹಲವು ಕಾಲ ನಿಲ್ಲತಕ್ಕ ಸಾಹಿತ್ಯ ವಿಮರ್ಶೆಯ ರಚನೆ 7. ಪ್ರಾಚೀನ ಗ್ರೀಕ್ ಲ್ಯಾಟಿನ್ ಸಂಸ್ಕೃತಿ ಸಾಹಿತ್ಯಗಳ ಹಿರಿಮೆ ಉಪಯುಕ್ತತೆಗಳ ಸ್ಥಾಪನೆ. ಇವುಗಳಲ್ಲಿ ಕೆಲವು ಇಲ್ಲಿ ನಮ್ಮ ಪರಿಶೀಲನೆಗೆ ಬರಬೇಕಾದ್ದಿಲ್ಲ.
ಹೊರೇಸ್ ಜೊತೆಗೆ ಅರಿಸ್ಟಾಟಲ್ ವಿಮರ್ಶ
[ಬದಲಾಯಿಸಿ]ಹೊರೇಸ್ ಜೊತೆಗೆ ಅರಿಸ್ಟಾಟಲ್ ಒದಗಿಬಂದದ್ದರಿಂದ ವಿಮರ್ಶಕರಿಗೆ ಚತುರ್ಭುಜವಾಯಿತು. ಆದರೆ ಪ್ಲೇಟೊ ಬಗೆಗೆ ಅವರಿಗೆ ತುಂಬ ಆತಂಕ. ಅವನನ್ನು ಅವರೆಂದಿಗೂ ಕೈಬಿಡಲಾರರು. ಕಾವ್ಯವನ್ನು ಅವನು ಬಹುವಾಗಿ ಹಳಿದು ಕವಿಗಳಿಗೆ ಬಹಿಷ್ಕಾರ ಹಾಕಿದ್ದರ ಕಾರಣಗಳನ್ನು ಕುರಿತು ಅವರು ಆಳವಾಗಿ ವಿವೇಚಿಸಿದರು.
ಕವಿಗಳ ಸಂರಕ್ಷಣೆ ಹೊರೇಸನ ನೇತೃತ್ವದಲ್ಲಿ ಜರುಗಿತು
[ಬದಲಾಯಿಸಿ]1. ಕಾವ್ಯದಿಂದ ಬೋಧನೆಯೂ ರಸಾಹ್ಲಾದವೂ ಒಟ್ಟಿಗೆ ಆಗುತ್ತವೆ. 2. ನಾಗರಿಕತೆಯ ಸ್ಥಾಪನೆಗೂ ಉತ್ಕರ್ಷಕ್ಕೂ ಕಾವ್ಯವೊಂದು ಉತ್ತಮ ಸಾಧನ. ಆದಿಕವಿಗಳು ಮಹಾಜ್ಞಾನಿಗಳೂ ಪ್ರವಾದಿಗಳೂ ಆಗಿದ್ದರು; ಅಲ್ಲದೆ ಕುಶಲಕಲೆಗಳೂ ಯಂತ್ರೋಪಕರಣಗಳೂ ನಿರ್ಮಿತವಾದದ್ದು ಅವರಿಂದಲೇ. ಉದಾಹರಣೆಗಾಗಿ ಆರ್ಫಿಯಸ್ ಮನುಷ್ಯರನ್ನು ದುರ್ಭರ ಹಿಂಸಾಕೃತ್ಯಗಳಿಂದ ಮೇಲಕ್ಕೆತ್ತಿದ. ಆಂಫಿಯನ್ ವಸತಿ ನಿರ್ಮಾಣದ ಜನಕನಾದ. ವಿವಾಹ ಮುಂತಾದ ಒಳ್ಳೆಯ ಕಟ್ಟುಪಾಡನ್ನು ಸಮಾಜ ಸುಭದ್ರತೆಗೆ ಒದಗಿಸಿದವರೂ ಕವಿಗಳೇ. 3. ಕವಿಯ ಪೀಳಿಗೆ ಅತ್ಯಂತ ಪುರಾತನವಾದದ್ದು; ಅವನ ಕೆಲಸವನ್ನು ದೈವಿಕವೆಂದೇ ತಿಳಿಯಬೇಕು. 4. ಜನರ ನಡತೆಯ ಮೇಲೆ ಕಾವ್ಯದ ಪ್ರಭಾವ ಪರಿಣಾಮಕರವೆಂಬ ಬಗೆಗೆ ಹೊಸಹುಟ್ಟಿನ ವಿಮರ್ಶಕರಿಗೆ ಸಂದೇಹವೇ ಇರಲಿಲ್ಲ. ವಿದ್ಯಾಭ್ಯಾಸವೆಂದರೆ ಶೀಲಶಿಕ್ಷಣ. ಅದಕ್ಕೆ ಕಾವ್ಯವನ್ನಲ್ಲದೆ ಮತ್ತಾವುದನ್ನೂ ನೆಮ್ಮದಿಯಿಂದ ಬಳಸಲಾಗುವುದಿಲ್ಲ. 5. ಕಾವ್ಯಕ್ಕೂ ಕವಿಗಳಿಗೂ ವಿಶೇಷ ಮನ್ನಣೆ ಅವಿಚ್ಛಿನ್ನವಾಗಿ ಸಂದು ಬಂದಿದೆ. ಇಟಲಿಯಲ್ಲಿ ಸವೋನರೋಲ ಇಂಗ್ಲೆಂಡಿನಲ್ಲಿ ಗಾಸನ್ ಕವಿಗಳನ್ನು ಬೈಯ್ದು ಗಜರಿ ಗರ್ಜಿಸಿದರು, ನಿಜ. ಅವರ ತಪ್ಪು ತಿಳುವಳಿಕೆಯನ್ನು ಕಂಡು ಕನಿಕರಿಸತಕ್ಕದ್ದೇ ವಿನಾ ಅವರ ಅಭಿಪ್ರಾಯವನ್ನು ಮನ್ನಿಸತಕ್ಕದ್ದಲ್ಲ.
ಆಂತರಿಕ ವಿಮರ್ಶೆ
[ಬದಲಾಯಿಸಿ]ಇದೆಲ್ಲ ಹೊರಗಣ ವಿಮರ್ಶೆ. ನಿಜವಾದ ಆಂತರಿಕ ವಿಮರ್ಶೆಗೆ ಅರಿಸ್ಟಾಟಲ್ ಪ್ರಬಲ ಪ್ರೇರಕನಾದ. ಅವನ ವಿವರಣೆಯನ್ನು ಅನುಸರಿಸಿ ಈ ಅಭಿಪ್ರಾಯಗಳು ಹೊರಬಂದುವು. ದೇಶದೇಶದವರಿಂದ ಪುನಃಪುನಃ ಘೋಷಣೆಗೊಂಡುವು: 1. ಪ್ರತ್ಯಕ್ಷ ವಾಸ್ತವ್ಯವನ್ನಲ್ಲ ಕಾವ್ಯ ಪ್ರತಿಬಿಂಬಿಸುವುದು, ಪರೋಕ್ಷವೂ ಅತ್ಯುಚ್ಚವೂ ಆದ ಆದರ್ಶ ವಾಸ್ತವ್ಯವನ್ನು. ಅದರ ಮುಖ್ಯ ವಿಷಯ. ವಿಶ್ವವ್ಯಾಪಿಯೂ ಅಮರವೂ ಆದ ಸತ್ಯ: ಬಿಡಿ ಸಂಗತಿಗಳಲ್ಲ, ಬಿಡಿ ವ್ಯಕ್ತಿಗಳಲ್ಲ. ಕೇವಲ ಆಗುಹೋಗಿನ ಪ್ರತಿಚಿತ್ರಣವಲ್ಲ ಅದರ ಕೆಲಸ; ಆಗಬಹುದಾದದ್ದು ಆಗಬೇಕಾದದ್ದು ಅದರ ಲಕ್ಷ್ಯ. 2. ಆದ್ದರಿಂದ ಕಾವ್ಯರೂಪಕ ಭಾವಗಳನ್ನು ಕೆರಳಿಸುವುದೇನೊ ನಿಜ: ಆದರೆ ಅದು ಮೊದಲಣ ಹೆಜ್ಜೆ, ಅಷ್ಟೆ. ಎರಡನೆಯ ಹೆಜ್ಜೆ ಭಾವಗಳನ್ನು ಉಪಶಮನಗೈದು ಸಂಯಮದ ಕ್ಲುಪ್ತಮರ್ಯಾದೆಗೆ ಅವನ್ನು ಒಳಗೊಳಿಸುವುದು. ಹೀಗೆ ಚರಿತ್ರೆಗಿಂತ ಕಾವ್ಯ ಹೆಚ್ಚು ಪ್ರಯೋಜನಕರ, ತತ್ತ್ವಶಾಸ್ತ್ರಕ್ಕಿಂತ ಹೆಚ್ಚು ಸಂತೋಷದಾಯಕ.
ಕಾವ್ಯಕಲೆ
[ಬದಲಾಯಿಸಿ]ಡೇನಿಯೆಲೊ (1536). ಮಿಂಟೂರ್ನೊ (1559), ಸ್ಟ್ರ್ಯಾಬೊ, ವರ್ಚೆ, ರಾಬರ್ಟೆಲೊ, ಫ್ರಕಾಸ್ಟರೊ (1555) ಮುಂತಾದವರಿಂದ ಕಾವ್ಯಕಲೆ ಎಂಬ ಹೆಸರಿನ ಪ್ರಬಂಧಗಳು ರಚಿತವಾದುವು. ಅವರಲ್ಲಿ ಕೆಲವರಿಗೆ ಅರಿಸ್ಟಾಟಲ್ ಸರಿಯಾಗಿ ಗ್ರಹಿಕೆಯಾಗಲಿಲ್ಲ. ಫ್ರಕಸ್ಟರೊ ಆತನನ್ನು ಹೆಚ್ಚುಕಡಿಮೆ ಸರಿಯಾಗಿ ಅರ್ಥ ಮಾಡಿಕೊಂಡಂತೆ ಭಾಸವಾಗುತ್ತದೆ. ಅಷ್ಟೇ ಅಲ್ಲದೆ ಅರಿಸ್ಟಾಟಲನ ಅನುಕರಣತತ್ತ್ವದ ವಿವರಣೆಗೆ ಪ್ಲೇಟೊವಿನ ಆದರ್ಶ ಸೌಂದರ್ಯವನ್ನು ಫ್ರಕಾಸ್ಟರೂ ಜೋಡಿಸಿದ ಹೊಸ ಹುಟ್ಟಿನ ಅವಧಿಯಲ್ಲಿ ಸೌಂದರ್ಯವನ್ನು ಮೂರು ರೀತಿ ಪರಿಗಣಿಸುತ್ತಿದ್ದರು: 1. ವಸ್ತುನಿಷ್ಠ, ಇಂದ್ರಿಯಗೋಚರ; ಬಾಹ್ಯಾಕಾರದಂತೆ ವರ್ತುಲ ಚಚ್ಚೌಕ ಇತ್ಯಾದಿ. 2. ನೈತಿಕಕೋನದಿಂದ; ಸೌಂದರ್ಯವೂ ಸಜ್ಜನಿಕೆಯೂ ಹತ್ತಿರ ಹತ್ತಿರ, ಬಹುತೇಕ ಒಂದೇ. 3. ಕಲಾಮೂಲ ಭಾವನೆಯಂತೆ; ವಸ್ತುವಿವರ ಪರಿಕರ ಎಲ್ಲವೂ ಚೆನ್ನಾಗಿ ಹೊಂದಿಕೊಂಡದ್ದು.
ಕಾವ್ಯ ಪ್ರಭೇದಗಳು ಮೂರೆಂದು ವಿದ್ವಾಂಸರ ಒಡಂಬಡಿಕೆ: ಗೀತಾತ್ಮಕ, ನಾಟಕೀಯ, ಕಥನರೀತಿಯದು. ಈ ವರ್ಗೀಕರಣ ಗ್ರೀಕರಿಂದ ನಡೆದುಬಂದದ್ದು. ಅದಕ್ಕೆ ಹೆಚ್ಚಿನ ಮಾರ್ಪಾಟು ಸಂದಿಲ್ಲ, ಇಂದಿಗೂ.ಪ್ಲೇಟೊ ಕವಿಗಳನ್ನು ಹೊರದೂಡಿದ್ದು ಏತಕ್ಕೆ ಎಂಬ ಬಿಡಿ ಪ್ರಶಂಸನೆಯೊಂದು ವಿದ್ವಾಂಸರಿಗೆ ತಲೆನೋವು ತರುತ್ತಿತ್ತು. ಟ್ಯಾಸೊ, ಡೇನಿಯೆಲೊ ಮೊದಲಾದವರು ಪ್ಲೇಟೊ ಕುಕವಿಗಳನ್ನು ನಿಂದಿಸಿದ, ಸತ್ಕವಿಗಳನ್ನಲ್ಲ ಎಂಬ ತರುರೋಕ್ತಿಯಿಂದ ಸಮಾಧಾನ ನೀಡಲು ಬಯಸಿದರು.
ಹೊರೇಸ್ ಅರಿಸ್ಟಾಟಲ್ ಪ್ಲೇಟೊ ಅಭಿಪ್ರಾಯ
[ಬದಲಾಯಿಸಿ]ಕಾವ್ಯದ ವಿಚಾರದಲ್ಲಿ ಹೊರೇಸ್ ಅರಿಸ್ಟಾಟಲ್ ಪ್ಲೇಟೊ ಈ ಮೂವರ ಅಭಿಪ್ರಾಯಗಳ ಬೆರಕೆಯಿಂದ ಒಂದು ಮೀಮಾಂಸೆಯನ್ನು ಸಜ್ಜುಗೊಳಿಸುವುದು ಪಂಡಿತರಿಗೆ ಸಾಧ್ಯವಾಯಿತು. ನಾಟಕದ ವಿಚಾರದಲ್ಲಿ ಅರಿಸ್ಟಾಟಲ್ ಹೊರೇಸರ ಜೊತೆಗೆ ಮಧ್ಯಯುಗದಿಂದ ಇಳಿದು ಬಂದಿದ್ದನ್ನು ಹೇಗೊ ಮಿಳಿತಗೊಳಿಸಲೇಬೇಕಾಯಿತು. ಮಧ್ಯಯುಗದ ಭಾವನೆಯೇನು? ಅರಿಸ್ಟಾಟಲನ ತರುವಾಯ ಅವನ ವಿದ್ಯಾಪೀಠಕ್ಕೆ ಗುರುವಾದ ಥಿಯೊಫ್ರಾಸ್ಟಸನವೆಂದು ಹೇಳಲಾದ ಕೆಲವು ವಿವರಣೋಕ್ತಿಗಳೇ ಮಧ್ಯಯುಗದ ತತ್ತ್ವ. ಥಿಯೊಫ್ರಾಸ್ಟಸನ ಅಭಿಮತ ಇದು: ನಾಯಕನ ಜೀವನದಲ್ಲಿ ದೊಡ್ಡ ಬದಲಾವಣೆ ಉಂಟಾಗದೆ ಅದೇ ಟ್ರ್ಯಾಜಡಿ; ಕಾಮೆಡಿಯ ಕಥಾವಸ್ತು ಖಾಸಗಿ ಮಂದಿಯ ಬಾಳಿಗೆ ಸಂಬಂಧಿಸಿದ್ದು, ಏನೇನೂ ಅಪಾಯ ಕಾಣದ್ದು. ರೋಮನರಲ್ಲೂ ಕಾಮೆಡಿಯ ಕಲ್ಪನೆ ಇದೇ ಆಗಿತ್ತು. ಅದಕ್ಕೆ ವ್ಯಾಖ್ಯೆ ಬರೆಯುತ್ತ ಮಧ್ಯಯುಗದ ವಿದ್ವಾಂಸರು ಸಂತೃಪ್ತರಾದರು. ಟ್ರ್ಯಾಜಡಿಗೂ ಕಾಮೆಡಿಗೂ ವ್ಯತ್ಯಾಸವಿಷ್ಟೆ: 1. ಟ್ರ್ಯಾಜಡಿಯ ಮುಖ್ಯ ಪಾತ್ರಗಳು ಅರಸರು. ಜನನಾಯಕರು; ಕಾಮೆಡಿಯಲ್ಲಿ ಸಾಮಾನ್ಯ ದರ್ಜೆಯ ಮಂದಿ. 2. ಟ್ರ್ಯಾಜಡಿಯಲ್ಲಿ ಭಾರಿ ಅನಾಹುತಗಳು, ರೌದ್ರಚರ್ಯೆ; ಕಾಮೆಡಿಯಲ್ಲಿ ಸಾಧಾರಣ ಸಾಂಸಾರಿಕ ಜರುಗಣೆಗಳು. 3. ಸುಖದಿಂದ ಪ್ರಾರಂಭವಾದ ಟ್ರ್ಯಾಜಡಿ ಅಸೌಖ್ಯದಲ್ಲಿ ಕೊನೆಗೊಳ್ಳುತ್ತದೆ; ಕಾಮೆಡಿಯಲ್ಲಿ ಅದರ ವಿಲೋಮ. 4. ಅದರಲ್ಲಿ ಶಬ್ದ ಪುಂಜವೂ ಶೈಲಿಯೂ ಘನವಾದವು. ಇದರಲ್ಲಿ ಬಳಕೆಯ ಆಡುಮಾತು, ಸಡಿಲ ಶೈಲಿ. 5. ಐತಿಹಾಸಿಕ ಸಂಗತಿಗಳು ಟ್ರ್ಯಾಜಡಿಗೆ ಯೋಗ್ಯ. ಕಾಮೆಡಿಗೆ ಕವಿ ತನ್ನ ಮನಬಂದಂತೆ ಕಥೆ ಕಲ್ಪಿಸಬಹುದು. 6. ದೇಶಭ್ರಷ್ಟತೆ ರಕ್ತಪಾತ ಟ್ರ್ಯಾಜಡಿಗೆ ಸಲ್ಲುತ್ತವೆ. ಪ್ರೇಮ ಗುಪ್ತಪ್ರಣಯ ಕಾಮೆಡಿಗೆ. ಈ ತೆರನ ಅಭಿಪ್ರಾಯ ಹೊಸಹುಟ್ಟಿನ ಅವಧಿಯಲ್ಲೂ ಆಮೇಲೆ ರೂಢಿಯಲ್ಲಿತ್ತು.
ರೂಪಕ ಮೀಮಾಂಸೆ
[ಬದಲಾಯಿಸಿ]ರೂಪಕ ಮೀಮಾಂಸೆಯಲ್ಲಿ ಅರಿಸ್ಟಾಟಲನನ್ನು ಹಿಂಬಾಲಿಸುವುದೇ ವಿದ್ವಾಂಸರ ಆಶಯವಾಗಿತ್ತು. ಸಿನ್ತಿಯೊ, ಮ್ಯಾಗಿ ಮುಂತಾದವರು ಅದರ ಪ್ರತಿಪಾದಕರಾದರು. ಅವರಲ್ಲಿ ಸ್ಕ್ಯಾಲಿಜರ್ ಮುಖ್ಯನಾದವ. ಟ್ರ್ಯಾಜಡಿಯ ವಿವರಣೋಕ್ತಿಯಲ್ಲಿ ಅರಿಸ್ಟಾಟಲನನ್ನೇ ಅವನು ಅನುವಾದಿಸಿದ. ಆದರೆ ಅವನ ಮೆಚ್ಚಿಕೆಗೆ ಪಾತ್ರನಾದ ಟ್ರ್ಯಾಜಿಕ್ ಕವಿ ರೋಮನರ ಸೆನೆಕ, ಗ್ರೀಕರ ಸೋಫಕ್ಲೀಸ್ ಅಲ್ಲ. ಆ ಕಾರಣದಿಂದ ಅವನ ಟ್ರ್ಯಾಜಿಕ್ ಘಟನಾಪಟ್ಟಿಯಲ್ಲಿ ಕಗ್ಗೊಲೆ. ಪುರ್ಣಹತಾಶೆ, ಶಿರಚ್ಛೇದ, ತಂದೆತಾಯಿಯರ ಹತ್ಯೆ, ಅಕ್ರಮ ಕೂಟ, ಬೆಂಕಿಯಿಂದ ಸರ್ವನಾಶ, ಕರಾಳ ಸಂಗ್ರಾಮ, ಕಿರಿಚು, ರುದ್ರರೋಧನ, ಸಮಾಧಿಗೀತ- ಮುಂತಾದುವೇ ಹೆಚ್ಚು. ಸ್ಕ್ಯಾಲಿಜರನಿಗಿಂತಲೂ ಅಧಿಕನಾದವ ಕ್ಯಾಸಲ್ ಮೆಟ್ರೋ (1570). ಮೂರು ಏಕತೆಗಳು ಎಂಬ ನಿಯಮವನ್ನು ರೂಪಿಸಿ ಸಿದ್ಧಾಂತಕ್ಕೆ ಅದನ್ನು ಅವನೇ ಏರಿಸಿದ. ಅವನ ಅಭಿಮತದಲ್ಲಿ ನಾಟಕಾಲಯದ ನೇಪಥ್ಯ ಕಿರಿದು. ಆದ್ದರಿಂದ ಒಂದೇ ಕಾರ್ಯಾವಳಿ ಒಂದೇ ಸ್ಥಳದಲ್ಲಿ ನಡೆದು ಒಂದೇ ದಿವಸದಲ್ಲಿ ಮುಗಿಯುವುದು ನ್ಯಾಯ. ಅರಿಸ್ಟಾಟಲ್ ಮುಂದಿಟ್ಟ ಭಾವವಿವೇಚನೆಯ (ಕೆಥಾರ್ಸಿಸ್) ತತ್ತ್ವವನ್ನು ಕುರಿತೂ ವಿಮರ್ಶಕರು ವಿಪುಲ ಚರ್ಚೆ ನಡೆಸಿದರು.
ಭವ್ಯಕಾವ್ಯ (ಎಪಿಕ್)
[ಬದಲಾಯಿಸಿ]ಅರಿಸ್ಟಾಟಲನ ಮತದಂತೆ ಭವ್ಯಕಾವ್ಯ (ಎಪಿಕ್) ಟ್ರ್ಯಾಜಡಿಗೆ ಎರಡನೆಯದು. ಈ ಅಭಿಪ್ರಾಯ ಹೊಸಹುಟ್ಟಿನ ಪಂಡಿತರಿಗೆ ರುಚಿಸಲಿಲ್ಲ. ಅರಿಸ್ಟಾಟಲ್ ಹೋಮರ್ ಒಬ್ಬನನ್ನೇ ದೃಷ್ಟಿಯಲ್ಲಿಟ್ಟುಕೊಂಡಿದ್ದ; ರುದ್ರನಾಟಕಕಾರರು ಹೋಮರನನ್ನು ಮೀರಿಸಿದಂತೆ ಅವನಿಗೆ ತೋಚಿತು. ಹೊಸ ಹುಟ್ಟಿನವರಿಗೆ ವರ್ಜಿಲನ ಪರಿಚಯವೂ ಇದ್ದಿತಾಗಿ ಅವರ ಭವ್ಯಕಾವ್ಯದ ವಿವರಣೆ ಬಹು ಸಂಕ್ಷಿಪ್ತ, ಅರಿಸ್ಟಾಟಲನಲ್ಲಿ. ಹೊಸ ಹುಟ್ಟು ಅದರ ವಿಸ್ತಾರ ನಿರೂಪಣೆಯನ್ನು ಕೈಗೊಳ್ಳಬೇಕಾಯಿತು. 1520ಕ್ಕೆ ಹಿಂದೆಯೇ ಇನಿಯಡ್ನ್ನೂ ಮಾದರಿಯಾಗಿರಿಸಿಕೊಂಡು ವಿಡಾ ಪದ್ಯರೂಪದಲ್ಲಿ ವಿಮರ್ಶೆ ಬರೆದ. ಟ್ರಿಸ್ಸಿನೊ ಅರಿಸ್ಟಾಟಲನ್ನು ಅನುವಾದ ಮಾಡಿ ಕೊನೆಗೆ ಭವ್ಯ ಕಾವ್ಯಕ್ಕೆ ಯಾವಾಗಲೂ ಬಹಳ ಗೌರವ ಸಿಕ್ಕಿದೆ. ಅದು ಹೆಚ್ಚೊ ಟ್ರ್ಯಾಜಡಿ ಹೆಚ್ಚೊ ಎಂಬುದನ್ನು ಓದುಗರೇ ತೀರ್ಮಾನಿಸಲಿ ಎಂಬ ಟಿಪ್ಪಣಿಯನ್ನು ನುಡಿದ. ಡೇನಿಯೆಲೊ ಹೇಳಿದ ಭವ್ಯಕಾವ್ಯದ ವಿವರಣೋಕ್ತಿಯನ್ನೇ ಅವನು ಸೂಕ್ತವಾಗಿ ಅದಕ್ಕೆ ಅನ್ವಯಿಸಿದ. ಭವ್ಯಕಾವ್ಯಕ್ಕೆ ವೀರಕಾವ್ಯ (ಹಿರಾಯಿಕ್ ಪೊಯಟ್ರಿ) ಎಂಬ ಹೆಚ್ಚು ವೈಶಾಲ್ಯದ ಅಂಕಿತ ರೂಢಿಗೆ ಬಂತು.ಅದಕ್ಕೆ ಕಾರಣವಿತ್ತು. ಇಟಲಿಯ ಕವಿ ಅರಿಯೋಸ್ಟೊ ಒಂದು ಶ್ರೇಷ್ಠ ಕಥನ ಕಾವ್ಯ ಕಟ್ಟಿ ಲೋಕವನ್ನೇ ಚಕಿತಗೊಳಿಸಿದ. ಹೋಮರ್, ವರ್ಜಿಲ್, ಡಾಂಟೆಗಳ ಭವ್ಯಕಾವ್ಯಕ್ಕೆ ಅದು ಏನೂ ಕಡಿಮೆಯಲ್ಲ ಎಂಬ ಪ್ರಖ್ಯಾತಿ ಆ ಕಾವ್ಯಕ್ಕೆ ಬಂತು. ಅದು ಮಧ್ಯಯುಗದ ಅದ್ಭುತ ಕಥೆಯಂತೆ ಅದ್ಭುತಗಳನ್ನು ಒಳಗೊಂಡಿದ್ದರೂ ಕಾವ್ಯ ಲಕ್ಷಣಗಳಲ್ಲಿ ಅದರಿಂದ ಬೇರೆ. ಆದರೆ ಅರಿಯೋಸ್ಟೊ ಕಾವ್ಯಕ್ಕೂ ರೊಮಾನ್ಸ್ ಎಂದೇ ಹೆಸರಾಯಿತು. ಆಮೇಲೆ ಇಟಲಿಯ ಟ್ಯಾಸೊ, ಇಂಗ್ಲೆಂಡಿನ ಸ್ಪೆನ್ಸರ್ ಇವರು ಬರೆದ ಅದೇ ಮಾದರಿಯ ಕಾವ್ಯಗಳೂ ಹಳೆಯ ಭವ್ಯಕಾವ್ಯದೊಂದಿಗೆ ಸೆಣಸಿದುವು. ಅವನ್ನು ಒಳಕ್ಕೆ ಸೇರಿಸಿಕೊಳ್ಳುವುದಕ್ಕೋಸ್ಕರ ವೀರಕಾವ್ಯ ಮೂರು ನಾಲ್ಕು ಬಗೆ ಎಂದು ಸೂತ್ರಿಸಿದರು. ಆದರೂ ಮಿಂಟೂರ್ನೊ, ಬೆಂಬೊ, ಹಾರ್ವಿ ಮುಂತಾದ ಕೆಲವು ಪ್ರತಿಗಾಮಿಗಳಿಗೆ ರೊಮಾನ್ಸ್ ಕಾವ್ಯಾಭಾಸವೆಂದೇ ತೋರಿಬಂತು.
ಕವಿಗೆ ಸ್ವಾತಂತ್ರ್ಯ
[ಬದಲಾಯಿಸಿ]ಪ್ರಾಚೀನರನ್ನು ಹಿಂಬಾಲಿಸಬೇಕು ಎಂಬ ಧ್ಯೇಯಕ್ಕೆ ಹೊಸಹುಟ್ಟಿನಲ್ಲಿ ಸಾಮಾನ್ಯವಾಗಿ ಮನ್ನಣೆಯಿತ್ತು. ಆದರೂ ಕವಿಗೆ ಸ್ವಾತಂತ್ರ್ಯ ಇಲ್ಲದಿಲ್ಲ. ಮೇಲಾಗಿ ತರ್ಕವಿವೇಚನೆ ಕವಿಗೆ ಅತಿ ಮುಖ್ಯ. ಅದರ ಬೋಧನೆಯಂತೆ ತನ್ನ ಕೆಲಸವನ್ನು ಅವನು ನಡೆಸಿದರೆ ಕ್ಷೇಮ ಎಂಬ ಅಭಿಪ್ರಾಯಕ್ಕೂ ಸಾಕಷ್ಟು ಗೌರವವಿತ್ತು.ಇಟಲಿಯ ಮೇಲ್ಪಂಕ್ತಿಯೇ ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್ ಇತ್ಯಾದಿ ರಾಷ್ಟ್ರಗಳಲ್ಲಿ ಗಣ್ಯತೆ ಪಡೆಯಿತು. ಡುಬೆಲ್ಲೆ, ರಾನ್ಸಾ, ಸಿಡ್ನಿ, ಜಾನ್ಸನ್, ಎಸ್ಪಿನಾಡೊ, ಸಪಾಟಿ ಮೊದಲಾದವರ ಹೆಸರುಗಳನ್ನು ಇಲ್ಲಿ ಹೇಳಬಹುದು. ಇವರಾರಲ್ಲೂ ನವೀನವಾದದ್ದು ಏನೂ ಇಲ್ಲ. ಕಾವ್ಯಮೀಮಾಂಸೆಗಿಂತ ಕವಿಗಳಿಗೆ ಬುದ್ಧಿವಾದ ಇವರಲ್ಲಿ ಅಧಿಕ. ಆಲೋಚನಾ ಮೌಲ್ಯಕ್ಕಿಂತ ವ್ಯಾವಹಾರಿಕ ಮೌಲ್ಯಕ್ಕೆ ಹೆಚ್ಚು ಗಮನ.
ಸಾಹಿತ್ಯ ವಿಮರ್ಶೆ ಸ್ಥಾನಮಾನ
[ಬದಲಾಯಿಸಿ]ಒಟ್ಟಿನಲ್ಲಿ ಹೊಸಹುಟ್ಟಿನ ಸಾಹಿತ್ಯ ವಿಮರ್ಶೆ ಕವಿಗೆ ಉಚಿತ ಸ್ಥಾನಮಾನ ಲಭಿಸುವುದಕ್ಕೆ ನೆರವಾಯಿತು. ಪ್ಲೇಟೊ ಅರಿಸ್ಟಾಟಲ್ ಹೊರೇಸರ ತತ್ತ್ವಗಳ ಒಂದು ಬಗೆಯ ಸಮನ್ವಯವನ್ನು ರೂಪಿಸಲು ಯತ್ನಿಸಿತು. ಪ್ರಾಚೀನರನ್ನು ಅವರ ಅಂತಃಸತ್ತ್ವಕ್ಕಾಗಿಯೂ ಸಾಹಿತ್ಯ ಪರಂಪರೆಯನ್ನು ಪಾಲಿಸುವುದಕ್ಕಾಗಿಯೂ ಉಳಿಸಿಕೊಳ್ಳಬೇಕು ಎಂಬುದು ಅವರ ಮನೋರಥವಾದರೂ ಸಾಹಿತ್ಯ ಹೊಸ ಪಥದಲ್ಲಿ ಸಹಜವಾಗಿಯೂ ಸರಾಗವಾಗಿಯೂ ಸುರಮ್ಯವಾಗಿಯೂ ಚಲಿಸುತ್ತಿರುವುದನ್ನು ಕಾಣುತ್ತ ಅದು ವಿರೋಧ ಸೂಚಿಸಿದರೂ ಅಡ್ಡಗಟ್ಟುವುದಕ್ಕೆ ಹಾತೊರೆಯಲಿಲ್ಲ.
ಇತಿಹಾಸ
[ಬದಲಾಯಿಸಿ]17ನೆಯ ಶತಮಾನದಲ್ಲಿ ವಿಮರ್ಶೆಯ ಆಡಳಿತಸೂತ್ರ ಇಟಲಿಯ ಕೈಯಿಂದ ಫ್ರಾನ್ಸಿಗೆ ವರ್ಗವಾಯಿತು. ಫ್ರೆಂಚ್ ಅಕೆಡಮಿಯ ಸ್ಥಾಪನೆ, ಶ್ರೀಮಂತಿನಿಯರ ಖಾಸಗಿ ಸಾರಸ್ವತ ಗೋಷ್ಠಿಗಳು, 14ನೆಯ ಲೂಯಿಯ ನಿರಂಕುಶಾಧಿಕಾರ-ಮುಂತಾದ ಪ್ರಬಲಶಕ್ತಿಗಳು ಭಾಷೆ, ಸಾಹಿತ್ಯ, ವಿಮರ್ಶೆಗಳೆಲ್ಲವನ್ನೂ ಒಂದು ನಯನಾಜೂಕಿನ ಕಟ್ಟಿನಲ್ಲಿ ಹತೋಟಿಗೈಯುವುದಕ್ಕೆ ಅನುವಾದುವು. ಮೊದಲು ಮಾಲರ್ಬ್, ಆಮೇಲೆ ಬಾಲ್ಜ್ಯಾóಕ್, ಡೇಕಾರ್ಟ್, ಪ್ಯಾಸ್ಕಲ್, ಆಮೇಲೆ ಡಾಬಿಗ್ನ್ಯಾಕ್, ಬ್ವಾಲೊ, ಲಬ್ರೂಯೇರ್, ಫೆನಿಲನ್ ಮೊದಲಾದ ಉಜ್ವಲ ಮೇಧಾವಿಗಳು ಆ ಜವಾಬ್ದಾರಿಗೆ ಯುಕ್ತ ಕಾರ್ಯವಾಸಿಗಳಾದರು. ಹೊಸಹುಟ್ಟಿನ ಕವಿಗಳು ಬಹಳ ಧಾರಾಳವಾಗಿ ಪದಗಳನ್ನೂ ಪದಪುಂಜಗಳನ್ನೂ ವಚನವಿಗ್ರಹಗಳನ್ನೂ ತಂದು ಭಾಷೆಗೆ ಸುರಿಸಿದರು. ಅವನ್ನು ಪರೀಕ್ಷಿಸಿ ವಿಚಿತ್ರ ವಾದವನ್ನು ತೊಡೆದುಹಾಕಿ ನುಡಿಗೆ ಸಕ್ರಮ ಸಾಮಂಜಸ್ಯ ತಾರ್ಕಿಕತೆಯನ್ನು ಉಂಟುಮಾಡುವುದು ಮಾಲರ್ಬನ ಹೊಣೆಯಾಯಿತು. ಚಾಪಿಲೇನ್ ಇಟಲಿ ಸ್ಪೇನುಗಳ ಸಾಹಿತ್ಯವನ್ನು ಓದಿದವ; ಹಳೆಯ ಫ್ರೆಂಚ್ ಸಾಹಿತ್ಯವನ್ನೂ ಬಲ್ಲವ. ಪ್ರಧಾನಿ ರಿಷಲುವಿನ ಅಪ್ಪಣೆಯನ್ನು ಶಿರಸಾವಹಿಸಿ ಕಾರ್ನೀಲನ ಲುಸಿಡ್ ನಾಟಕದ ಮೇಲೆ ಕತ್ತಿಕಟ್ಟಿದ. ನಾಟಕದಲ್ಲಿ ಹೊರೇಸ್ ಅರಿಸ್ಟಾಟಲರ ನಿಯಮಾವಳಿಗೆ ಲೋಪ ತರಬಾರದು ಎಂಬುದು ಧರ್ಮಶಾಸ್ತ್ರವಾಗುತ್ತ ಹೋಯಿತು. ಸಾಹಿತ್ಯ ಪ್ರಭೇದಗಳನ್ನೂ ಅವುಗಳ ವಿರಚನಾಕ್ರಮವನ್ನೂ ಯಾವುದು ಗುಣ ಯಾವುದು ದೋಷ ಎಂಬುದನ್ನು ಅವರೀರ್ವರು ಆಗಲೇ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ. ಆದ್ದರಿಂದ ಅವರನ್ನು ಶ್ರದ್ಧೆಯಿಂದ ಹಿಂಬಾಲಿಸುವುದೇ ಕವಿಗಳಿಗೆ ಇರುವ ಏಕೈಕ ಮಾರ್ಗ. ಇದನ್ನು ವಿಮರ್ಶಕರು ಒತ್ತಿ ಒತ್ತಿ ಸಾರಿದರು. ಹೊರೇಸನಂತೆ ಬ್ವಾಲೊ ಒಂದು ಕಾವ್ಯಕಲೆಯನ್ನು ರಚಿಸಿದ. ಅದು ನವಅಭಿಜಾತತೆಯ ಪ್ರಧಾನ ಗ್ರಂಥವಾಯಿತು. ಅದರ ಸಾರಾಂಶ ಇಷ್ಟು. ಕವಿಗೆ ಪ್ರತಿಭೆ ಆವಶ್ಯಕ, ಅದಕ್ಕಿಂತ ಹೆಚ್ಚಾಗಿ ಸುಬುದ್ಧಿಯೂ ತರ್ಕವಿವೇಚನೆಯೂ ಆವಶ್ಯಕ. ಸುಮ್ಮನೆ ಎತ್ತರಕ್ಕೆ ಹಾರಬಂiÀÄಸಬಾರದು. ಅತಿ ಸೂಕ್ಷ್ಮ ವಿವರಗಳನ್ನು ಕೊಡಲೂಬಾರದು. ಕೆಳಕ್ಕೆ ಇಳಿಯದಂತೆ ಎಚ್ಚರದಿಂದಿರತಕ್ಕದ್ದು. ಸ್ಪಷ್ಟ ಶೈಲಿಗೆ ಸ್ಪಷ್ಟ ಆಲೋಚನೆ ತಾಯಿ. ಔಚಿತ್ಯ ಹೆಗ್ಗುರಿಯಾಗಿರಲಿ; ವಿನಯ, ಮರ್ಯಾದೆ ಕೈಹಿಡಿದು ನಡೆಸಲಿ. ಹೀಗೆ ಹೊರೇಸ್ ಮತ್ತು ಅರಿಸ್ಟಾಟಲರನ್ನು ತನಗೆ ತೋರಿದಂತೆ ಅರ್ಥಮಾಡಿಕೊಂಡು ಬ್ವಾಲೊ ನಿಯಮಾವಳಿ ಸಿದ್ಧಪಡಿಸಿದ. ರ್ಯಾಪಿನ್ ಆ ನಿಯಮಗಳನ್ನು ಅನುಮೋದಿಸಿ ಸಾಹಿತ್ಯ ವಿಚಾರಗಳಿಗೆ ಕೆಲವು ತಲೆಚೀಟಿ ಅಂಟಿಸಿ ನವಶಿಷ್ಟತೆಯ ಪಾಲಕನಾದ. ಲುಬಾಸ್ ಭವ್ಯಕಾವ್ಯದ ವಿಷಯವಾಗಿ ಸೂತ್ರ ಹೇಳಿದ. ವಾಲ್ಟೇರ್ ವಿಮರ್ಶೆಯ ಮೂಲಕವೂ ರೂಪಕ ನಿರ್ಮಾಣದ ಮೂಲಕವೂ ನವಅಭಿಜಾತತೆಯನ್ನು ಎತ್ತಿಹಿಡಿದ.
ಇಂಗ್ಲೆಂಡ್
[ಬದಲಾಯಿಸಿ]ಇಂಗ್ಲೆಂಡಿನಲ್ಲಿ ಡ್ರೈಡನ್, ಪೋಪ್, ಜಾನ್ಸನ್ ನವಅಭಿಜಾತತೆಯ ಧೀರರಾದರು. ಆದರೆ ಅವರಲ್ಲಿ ಸ್ವಲ್ಪಮಟ್ಟಿನ ಸ್ವಾತಂತ್ರ್ಯ ಕಾಣಬರುತ್ತದೆ. ಕಾರಣ ಇಷ್ಟೆ. ಷೇಕ್ಸ್ಪಿಯರ್ ಪ್ರಾಚೀನರ ಸೂತ್ರಗಳಿಗೆ ವಿರುದ್ಧವಾದ ನಾಟಕ ರಚಿಸಿ ಗೆದ್ದನಲ್ಲವೆ? ವಾಲ್ಟೇರನಿಗೆ ಅವನು ಒಡ್ಡೊಡ್ಡಾಗಿ ಕಂಡುಬಂದರೂ ಇಂಗ್ಲಿಷ್ ವಿಮರ್ಶಕರಿಗೆ ಅವನೊಬ್ಬ ಮಹಾ ನಾಟಕಕಾರ. ಅವನು ಒದಗಿಸುವಷ್ಟು ಭಾವಾರ್ಥವನ್ನೂ ಭಾಷಾಲಾವಣ್ಯವನ್ನೂ ಮತ್ತಾರೂ ಒದಗಿಸಿಲ್ಲ, ಬಹುಶಃ ಒದಗಿಸಲಾರರು. ನಿಯಮಕ್ಕೆ ವಿರುದ್ಧವಾಗಿ ಯಾವ ಕೃತಿಯೂ ಹರ್ಷ ಕೊಡಕೂಡದು. ಎಂಬ ಫ್ರೆಂಚರ ಶಾಸನ ಇಂಗ್ಲಿಷರಿಗೆ ಒಗ್ಗಲಿಲ್ಲ. ಆದ್ದರಿಂದ ಅವರು ಪರಮ ಪ್ರತಿಭೆಯ ಕವಿನಿಯಮಗಳನ್ನು ಉಲ್ಲಂಘಿಸಬಹುದು ಎಂದುಬಿಟ್ಟರು. ನವಅಭಿಜಾತತೆಯ ಗೇಣುಸೂತ್ರಗಳಿಂದ ಆಜಾನುಬಾಹು ಷೇಕ್ಸ್ಪಿಯರನನ್ನು ಅಳೆಯಹೋಗಿ ರೈಮರ್ ಎಂಬಾತ ನಾಚಿಕೆಗೇಡಾದ. ಪ್ರಚಂಡ ಮೇಧಾವಿಯಾದರೂ ನವಶಿಷ್ಟತೆಯಿಂದ ಅರೆಕುರುಡನಾದ ವಾಲ್ಟೇರನೂ ಹಾಗೆಯೇ. ಅಂತೂ ಸಾಹಿತ್ಯ ವಿಮರ್ಶೆ ಸುಮಾರು 150 ವರ್ಷ ಮಡುಗಟ್ಟಿ ನಿಶ್ಚಲವಾಗಿ ನಿಂತು ಪಾಚಿಕಟ್ಟಿ ಅಂದಗೆಟ್ಟು ಹೋಯಿತು.ಕವಿಗೆ ಹೆಚ್ಚು ಸ್ವಾತಂತ್ರ್ಯ ಇರತಕ್ಕದ್ದೆಂದು ವಾದಿಸುವ ಮುನ್ನೋಟದ ಯೋಚನಾವಂತರು 18ನೆಯ ಶತಮಾನದಲ್ಲಿ ಆಗಿಬಂದರು. ಆದರೆ ಅವರಿಗೆ ಅಭಿಜಾತತೆಯ ಶಿಸ್ತನ್ನು ಒಡೆಯುವ ಸಾಮಥರ್ಯ್ವಿರಲಿಲ್ಲ. ಆದರೂ ಒಬ್ಬಿಬ್ಬರು ತಮ್ಮ ಪಾಂಡಿತ್ಯ ಪ್ರತಿಭೆಗಳಿಂದ ವಿಮರ್ಶೆ ನಡೆಸಿ ಬೇಗಬೇಗ ನವಅಭಿಜಾತತೆಯ ಸಂಕೋಲೆ ಕಳಚಿ ಬೀಳುವಂತೆ ಎಸಗುವುದರಲ್ಲಿ ನೆರವಾದರು. ಫ್ರೆಂಚರ ಡಿಡಿರೊ ಉದ್ದೇಶಪುರ್ವಕವಾಗಿ ವಿಮರ್ಶಕನಾಗಲಿಲ್ಲ. ವಿಶ್ವಜ್ಞಾನ ವ್ಯಾಸಂಗಿ ಆದ್ದರಿಂದ ಸಾಹಿತ್ಯವನ್ನು ಕುರಿತು ಅವನು ಸಲಹೆಗಳನ್ನು ಹೇಳಿದ; ಅವುಗಳಲ್ಲಿ ಹಲವು ಅಮೂಲ್ಯ. ಇಂಗ್ಲೆಂಡಿನ ರಿಚರ್ಡ್ಸನ್ನನ ಕಾದಂಬರಿಯನ್ನು ಅವನು ಶ್ಲಾಘಿಸಿರುವುದು ಅವನ ಉದಾರನೋಟದ ಕುರುಹು. ನಾನಾ ಲಲಿತಕಲೆಗಳನ್ನು ಕುರಿತು ಅವನು ಚಿಂತನೆಮಾಡಿ ಒಪ್ಪತಕ್ಕ ತೀರ್ಮಾನಗಳನ್ನು ನುಡಿದ.
ಜರ್ಮನಿಯ ಲೆಸ್ಸಿಂಗ್
[ಬದಲಾಯಿಸಿ]ಅವನ ಹಾಗೆಯೇ ವಿಶಾಲದೃಷ್ಟಿಯಿಂದ, ಕಲೆ ಸಾಹಿತ್ಯಗಳನ್ನು ವೀಕ್ಷಿಸಿದ ಇನ್ನೊಬ್ಬ ಮಹಾವ್ಯಕ್ತಿ ಜರ್ಮನಿಯ ಲೆಸ್ಸಿಂಗ್. ಅವನು ಬಂದಾಗ ಗಾಟ್ಷೆಡ್ ಎಂಬ ಕವಿ ಜರ್ಮನಿಯಲ್ಲಿ ನವಶಿಷ್ಟತೆಯ ಪ್ರಧಾನ ಪುರೋಹಿತನಾಗಿದ್ದ. ಅವನಿಗೆದುರಾಗಿ ಆಗಲೇ ಸ್ವಿಟ್ಜರ್ಲೆಂಡಿನ ಬಾಡ್ಮರ್, ಬ್ರೈಟಿಂಗರ್ ಎಂಬಿಬ್ಬರು ಪಂಡಿತರು ಹೋರಾಟ ನಡೆಸಿದ್ದರು. ಅವರಿಗಿಂತ ಹೆಚ್ಚು ಸಾಹಿತ್ಯಜ್ಞಾನ ಲೆಸ್ಸಿಂಗನಿಗಿತ್ತು. ಪ್ರಾಚೀನರನ್ನೂ ಅರ್ವಾಚೀನರನ್ನೂ ಅವನು ಶ್ರದ್ಧೆಯಿಂದ ಪಠಿಸಿದ್ದ. ತೌಲನಿಕ ವಿಮರ್ಶೆಯಲ್ಲಿ ಅವನು ಎತ್ತಿದ ಕೈ. ಅರಿಸ್ಟಾಟಲನ ಅಭಿಪ್ರಾಯವನ್ನು ನೇರವಾಗಿ ವಿವರಿಸಿದ್ದು ಅವನು ನೆರವೇರಿಸಿದ ದೊಡ್ಡ ಕಾರ್ಯ. ನವಅಭಿಜಾತತೆಯ ಫ್ರೆಂಚರು ಹೇಗೆ ಅರಿಸ್ಟಾಟಲನನ್ನು ಅಪಾರ್ಥ ಮಾಡಿಕೊಂಡರೆಂಬುದಕ್ಕೆ ಅವನು ಕನ್ನಡಿ ಹಿಡಿದ. ಅವನ ಒಂದು ಹೇಳಿಕೆ ಸಾಹಿತ್ಯದ ನೈಜ ಸೃಷ್ಟಿಯನ್ನು ತೃಪ್ತಿಕರವಾಗಿ ಬಣ್ಣಿಸುತ್ತದೆ. ಪ್ರತಿಯೊಂದು ಶ್ರೇಷ್ಠ ಕಲಾಕೃತಿಗೂ ಅದರದೇ ಆದ ಆಂತರಿಕ ನಿಯಮವಿದೆ. ಇಂಥ ಹೇಳಿಕೆಗಳು ಅವನ ಇಪ್ಪತ್ತು ಸಂಪುಟಗಳಲ್ಲಿ ಹೇರಳವಾಗಿವೆ.ಹದಿನೆಂಟನೆಯ ಶತಮಾನದ ಕೊನೆಯಲ್ಲಿ ರೊಮ್ಯಾಂಟಿಕ್ ಚಳವಳಿ ಜರ್ಮನಿಯಲ್ಲಿ ಆರಂಭವಾಗಿ ಕ್ರಮೇಣ ಫ್ರಾನ್ಸ್, ಇಂಗ್ಲೆಂಡ್, ಸ್ಪೇನ್, ರಷ್ಯ ಮುಂತಾದ ದೇಶಗಳಿಗೂ ಹರಡಿತು. ಸಾಹಿತ್ಯಕೃತಿಯನ್ನು ವ್ಯಾಖ್ಯಾನಿಸಿ ಬೆಲೆಕಟ್ಟುವ ಕೆಲಸದಲ್ಲಿ ಅದೇ ಸೂಚಿಸುವ ವಿಧಾನವನ್ನು ಅನುಸರಿಸತಕ್ಕದ್ದು. ಹೊರಗಣ ಕಟ್ಟುಕಟ್ಟಳೆಯನ್ನು ಹಿಡಿದುಕೊಂಡರೆ ಅಪಾಯ. ಇದೇ ಅದರ ಮೂಲ ನಂಬಿಕೆಗಳಲ್ಲಿ ಒಂದು. ರೊಮ್ಯಾಂಟಿಕತೆಯ ವಾದಿಗಳಿಗೆ ಷೇಕ್ಸ್ಪಿಯರ್ ಅತಿ ನೆಚ್ಚಿನ ಕವಿ. ಫ್ರಾನ್ಸಿನಲ್ಲಿ ಮದಾಂ ಡ ಸ್ಟೀಲ್, ಇಂಗ್ಲೆಂಡಿನಲ್ಲಿ ವಡ್ರ್ಸ್ವರ್ತ್, ಕೋಲ್ರಿಜರು ರೊಮ್ಯಾಂಟಿಕತೆಯ ಸ್ಥಾಪಕರಾದರು.
ಸಾಹಿತ್ಯ ವಿಮರ್ಶೆಯಲ್ಲಿ ಕೋಲ್ರಿಜನ
[ಬದಲಾಯಿಸಿ]ಸಾಹಿತ್ಯ ವಿಮರ್ಶೆಯಲ್ಲಿ ಕೋಲ್ರಿಜನ ಹೆಸರು ಮೇಲ್ಮಟ್ಟದ್ದು. ದೃಢವಾದ ಜ್ಞಾನವೂ ತೀಕ್ಷ್ಣ ರಸಜ್ಞತೆಯೂ ಅವನ ಹಿರಿಯ ಗುಣ. ಜರ್ಮನಿಯ ತತ್ತ್ವಶಾಸ್ತ್ರದ ಗಾಢಾಭಿಪ್ರಾಯಗಳನ್ನು ಸಾಹಿತ್ಯಕ್ಕೆ ಹೊಂದಿಸಿದುದರಲ್ಲಿ ಅವನು ನಿಸ್ಸೀಮ. ಸಾಹಿತ್ಯ ಸೃಷ್ಟಿಸಬಲ್ಲ ವಿಭಾವನೆಯನ್ನು (ಇಮ್ಯಾಜಿನೇಷನ್) ಅವನಂತೆ ಖಚಿತವಾಗಿ ತಿಳಿಯಹೇಳುವವರು ಅಪುರ್ವ. ಕವಿಯ ಭಾಷೆ ಛಂದಸ್ಸುಗಳ ವಿಚಾರದಲ್ಲೂ ಅವನ ಹೇಳಿಕೆ ಕಟ್ಟಕಡೆಯ ತೀರ್ಮಾನ ಎನಿಸುತ್ತದೆ. ಹ್ಯಾಸ್óಲಿಟ್, ಲ್ಯಾಮ್ ಮೊದಲಾದ ಇತರ ಕೆಲವು ಉತ್ತಮ ವಿಮರ್ಶಕರು ಅದೇ ಕಾಲದಲ್ಲಿ ಎದ್ದು ಬಂದರು. ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳೂ ಉದಿಸಿ ವಿಮರ್ಶೆ ಒಳ್ಳೆಯ ವ್ಯವಸಾಯವೆಂಬ ಭಾವನೆಯನ್ನು ಮೂಡಿಸಿದುವು19ನೆಯ ಶತಮಾನದ ಎರಡನೆಯ ಭಾಗದಲ್ಲಿ ಸಾಹಿತ್ಯ ವಿಮರ್ಶೆಗೆ ಬೇರಾವ ಕಾಲದಲ್ಲೂ ಸಿಗದಷ್ಟು ಗೌರವ ದಕ್ಕಿತು. ವಿಮರ್ಶಕ ಸಮಾಜಕ್ಕೂ ಜನಾಂಗಕ್ಕೂ ಅಗತ್ಯವಾದ ಪ್ರತಿನಿಧಿ ಎಂದಾಯಿತು. ಫ್ರಾನ್ಸಿನಲ್ಲಿ ಸೇಂಟ್ ಬವ್, ರಷ್ಯದಲ್ಲಿ ಬೆಲಿನ್ಸ್ಕಿ, ಇಟಲಿಯಲ್ಲಿ ಡಸ್ಯಾಂಕ್ಟಿಸ್, ಡೆನ್ಮಾರ್ಕಿನಲ್ಲಿ ಬ್ರ್ಯಾಂಡ್ಸ್, ಇಂಗ್ಲೆಂಡಿನಲ್ಲಿ ಆರ್ನಲ್ಡ್, ಸ್ಪೇನಿನಲ್ಲಿ ಇಪೆಲಾಗೊ ಅಂಥ ಗಣ್ಯ ಪುರುಷರೆಂದು ಪ್ರಸಿದ್ಧಿ ಪಡೆದರು. ಜರ್ಮನಿ, ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಮಾತ್ರ ಹೆಸರಾಂತ ವಿಮರ್ಶಕ ಎದ್ದು ಬರಲಿಲ್ಲ.
ಸಾಹಿತ್ಯವಿಮರ್ಶೆ ಇತಿಹಾಸ
[ಬದಲಾಯಿಸಿ]ಆಗಲೇ ಪುಷ್ಕಳವಾಗಿ ಬೆಳೆದ ಸಾಹಿತ್ಯವಿಮರ್ಶೆ ಇಪ್ಪತ್ತನೆಯ ಶತಮಾನದಲ್ಲಿ ವಿಪರೀತ ಸಮೃದ್ಧಿಹೊಂದಿ ಕಣಜದ ಗೋಡೆಯನ್ನು ಎಂಟು ಕಡೆಗಳಿಂದಲೂ ಚುಚ್ಚಿ ಬಿರಿಸುತ್ತಿದೆ. ಅದರ ಸಮಗ್ರ ಅವಲೋಕನ ಹಾಗಿರಲಿ, ಸಾಕಷ್ಟು ವೀಕ್ಷಣೆಯೂ ಶ್ರಮಸಾಧ್ಯವಾದ ವ್ಯಾಪಾರ. ಕೆಲವು ಪ್ರಧಾನಾಂಶಗಳನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ವಿವೇಚಿಸುವುದು ಹಿತ. ಆಧುನಿಕತೆಯ ವಿಚಾರ ಸಂಕೀರ್ಣವಾಗಿದ್ದು ಗೋಜು, ತಬ್ಬಿಬ್ಬು ಹಿಡಿಸುವಂಥಾದ್ದು. ಇಡೀ ಪಾಶ್ಚಾತ್ಯ ಪ್ರಪಂಚ ವಿಮರ್ಶೆಯ ಅಗಾಧ ಪ್ರಯೋಗಶಾಲೆಯಾಯಿತು. ಚಾರಿತ್ರಿಕ ದೃಷ್ಟಿ., ವೈಜ್ಞಾನಿಕತೆ, ಮನೋವಿಜ್ಞಾನ, ವೈಯಕ್ತಿಕತೆ, ಪರಿಣಾಮವಿಧಾನ (ಇಂಪ್ರೆಷನಿಸಂ), ಸಾಂಕೇತಿಕತೆ, ಅತಿವಾಸ್ತವತೆ, ಸಾಪೇಕ್ಷತೆ-ಯಾವುದಿಲ್ಲ? ಯಾವುದುಂಟು? ತತ್ಪರಿಣಾಮವಾಗಿ ಬಹುಮಂದಿ ಒಪ್ಪುವ ಸಿದ್ಧಾಂತವಾಗಲಿ, ತರ್ಕಸಮ್ಮತವಾದ ವಿಧಾನವಾಗಲಿ ಇನ್ನೂ ರೂಪಿತವಾಗಿಲ್ಲ. ಸಾಹಿತ್ಯದ ಮತ್ತು ವಿಮರ್ಶೆಯ ನೆಲೆ, ಮೂಲ ಮೌಲ್ಯ ಇತ್ಯಾದಿ ಅಧಿಷ್ಠಾನ ವಿಷಯವೇ ವಾದಗ್ರಸ್ತವಾಗಿಬಿಟ್ಟಿದೆ.ಕಳೆದ ನೂರ ಮೂವತ್ತು ನೂರ ನಲವತ್ತು ವರ್ಷಗಳ ವಿಮರ್ಶೆಯನ್ನು ಕಲಾ ಮೂಲ ಅಥವಾ ಕೃತಿಸೀಮಿತ (ಈಸ್ತೆಟೆಕ್), ವೈಜ್ಞಾನಿಕ, ಮಾನವತಾತಿಷ್ಠ (ಹ್ಯೂಮನಿಸ್ಟಿಕ್) ಎಂಬ ಸ್ಥೂಲ ವಿಭಾಗಗಳಾಗಿ ವಿಂಗಡಿಸಿಕೊಂಡು ವಿವೇಚಿಸುವುದು ಒಳ್ಳೆಯದು.
ಕಲಾಮೂಲ ವಿಮರ್ಶೆ
[ಬದಲಾಯಿಸಿ]ಕಲಾಮೂಲ ವಿಮರ್ಶೆಗೆ ಮಹಾದಾರ್ಶನಿಕ ಕ್ಯಾಂಟನೇ ಜನಕನೆಂಬ ಹೇಳಿಕೆಯಿದೆ. ಅವನು ತನ್ನ ಕ್ರಿಟಿಕ್ ಆಫ್ ಜಜ್ಮೆಂಟ್ ಗ್ರಂಥದಲ್ಲಿ ಘೋಷಿಸಿದ ತತ್ತ್ವಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಚೋದಕವಾಗಿದ್ದು ಆ ನಿಟ್ಟಿನಲ್ಲಿ ತುಂಬ ಪ್ರಭಾವ ಬೀರಿದುವು. ಸೃಷ್ಟಿಶಕ್ತಿಯುಳ್ಳ ವಿಭಾವನೆ, ಕಲಾವಿಚಾರದ ಪ್ರತ್ಯೇಕ ಲಕ್ಷಣ, ಉದ್ದೇಶ ತೋರಿಸದ ಉದ್ದೇಶತೆ ಮೊದಲಾದ ಘನಾಭಿಪ್ರಾಯಗಳು ತತ್ತ್ವಜ್ಞರ ವಿವರಣೆಯೊಂದಿಗೆ ವಿಮರ್ಶಕರ ಕೈವಶವಾದುವು. ಕಲಾಮೂಲ ವಿಮರ್ಶೆಯ ವಿಷಯ ಕಲಾಸೃಷ್ಟಿಯ ಕಾರ್ಯ, ಕಲಾಕೃತಿಯ ಗುಣಲಕ್ಷಣ, ವಿಮರ್ಶೆಯ ಕೆಲಸ. ಅದರ ದೃಷ್ಟಿಗೆ ಕಲಾಸ್ವಾದ ವಿಶಿಷ್ಟವಾದೊಂದು ಅನುಭವ. ಅದರಿಂದ ಲಭಿಸುವ ಜ್ಞಾನ ಇತರ ಬಗೆಯ ಜ್ಞಾನದಿಂದ ಬೇರೆ. ವಿಜ್ಞಾನ, ನೀತಿಶಾಸ್ತ್ರಗಳು ತಂದು ಕೊಡುವ ಜ್ಞಾನದಿಂದ ಬೇರೆ. ಆದ್ದರಿಂದ ಕಲಾಕೃತಿಯನ್ನು ವಿಮರ್ಶಿಸುವಾಗ ನೀತಿ, ನಿಯಮಾವಳಿ, ಸನ್ನಿವೇಶ ಮುಂತಾದ ವಿಚಾರವೆಲ್ಲ ಅನ್ಯ; ಅವಾವುವಕ್ಕೂ ಗಮನವೀಯಲಾಗದು. 1790-1820ರ ಅವಧಿಯಲ್ಲಿ ಕ್ಯಾಂಟನನ್ನು ಅನುಸರಿಸಿ ಫಿಶ್ಟೆ, ಷೆಲ್ಲಿಂಗ್, ಸಾಲ್ಗರ್, ಹೆಗಲ್ ಮುಂತಾದವರು ಗ್ರಂಥ ಬರೆದರು. ತತ್ತ್ವಶಾಸ್ತ್ರದ ಮಾರ್ಗದಲ್ಲಿ. ಸ್ಕಿಲ್ಲರ್, ಷೆಗಲ್ ಸಹೋದರರು, ರಿಕ್ಟರ್ ಮೊದಲಾದವರು ಕಾರ್ಯನಿರತ ಕಲೆಗಾರನ ಮಾರ್ಗದಲ್ಲಿ ಗ್ರಂಥ ಬರೆದರು. ಸಾಹಿತ್ಯ ವಿಮರ್ಶಕರೂ ಹಿಂದುಳಿಯಲಿಲ್ಲ. ಕೋಲ್ರಿಜನ ಉದ್ಗ್ರಂಥ 1817ರಲ್ಲಿ ಹೊರಬಂತು. ಅನಂತರ ಕಲಾಮೂಲ ವಿಮರ್ಶೆ ಹಲವು ವಿಧಗಳಾಗಿ ಒಡೆಯಿತು. ಫ್ರೆಂಚರೂ ಅವರನ್ನು ಹಿಂಬಾಲಿಸಿ ಇಂಗ್ಲಿಷರೂ ಕಲೆಗಾಗಿ ಕಲೆ (ನೋಡಿ- ಕಲೆಗಾಗಿ-ಕಲೆ) ಎಂಬ ಪಂಗಡವನ್ನು ಹೊರ ತಂದರು. ತನಗೆ ತೋಚಿದಂತೆ ವಿಮರ್ಶೆ ನಡೆಸಬೇಕೆಂಬುದು ಬಲಿದು ಪರಿಣಾಮ ವಿಧಾನ (ಇಂಪ್ರೆಷನಿಸಂ) ಹುಟ್ಟಿತು. ಕ್ಯಾಂಟನ ಕಲಾಭಿರುಚಿಯ ತೀರ್ಮಾನಗಳಿಗೆ ವ್ಯಕ್ತಿತಿಷ್ಠ ವಿಶ್ವತ್ವವುಂಟು-ಎಂಬ ಹೇಳಿಕೆ ಹಲವರಿಗೆ ಪ್ರಿಯವಾಯಿತು. ಅವರಿಗೆ ಕಲಾಸೌಂದರ್ಯ ವ್ಯಕ್ತಿತಿಷ್ಠ, ವಸ್ತುತಿಷ್ಠವಲ್ಲ; ಉತ್ತಮ ಕಲಾಕೃತಿಗಳೊಂದಿಗೆ ರಸಿಕ ವ್ಯಕ್ತಿ ನಡೆಸುವ ವೈಯಕ್ತಿಕ ಸಾಹಸಗಳೇ ವಿಮರ್ಶೆ. ವಿಮರ್ಶಕ ತನ್ನ ಆತ್ಮೀಯ ಅನುಭವವನ್ನಲ್ಲದೆ ಮತ್ತೇನನ್ನು ವರ್ಣಿಸಿಯಾನು? ಕಲೆಗಾಗಿ ಕಲೆ, ಪರಿಣಾಮವಿಧಾನ ಎರಡೂ ಯಾವ ವಿಮರ್ಶಾ ಸಿದ್ಧಾಂತವನ್ನೂ ಹೊರತರಲಿಲ್ಲ. ಅಷ್ಟೇಕೆ, ಅವು ವಿಮರ್ಶೆಯಲ್ಲಿ ಒಮ್ಮತ ಅಸಾಧ್ಯವೆಂದೇ ಹೇಳಿಬಿಟ್ಟವು.
ಸಾಂಕೇತಿಕತೆ
[ಬದಲಾಯಿಸಿ]ಕೃತಿಸೀಮಿತದಿಂದ ಹುಟ್ಟಿಬಂದ ಇನ್ನೊಂದು ಕಲಾಪದ್ಧತಿ ಸಾಂಕೇತಿಕತೆ. ಅದನ್ನು ಸ್ಥಾಪಿಸಿದಾತ ಫ್ರೆಂಚರ ಸಾಹಿತಿ ಬೋದಿಲೇರ್. ಅವನು ಸ್ವೀಡನ್ಬರ್ಗ್ ಎಂಬ ವಿಶಿಷ್ಟ ಲಕ್ಷಣದ ದಾರ್ಶನಿಕನಿಂದ ಸಮರೂಪತೆ ನಿಯಮ ಅಥವಾ ಸಂವಾದಿ ಸಿದ್ಧಾಂತವನ್ನು (ಥಿಯೊರಿ ಆಫ್ ಕರೆಸ್ಪಾಂಡೆನ್ಸಸ್) ಕಲಿತುಕೊಂಡ. ಫ್ಲಾಬರ್ಟನಿಂದ ಕಲಾವಿರಚನಾ ತಂತ್ರದ ಮುಖ್ಯತೆಯನ್ನು ಅರಿತ. ಮೇಲಾಗಿ ಕೋಲ್ರಿಜನ ಮೂಲಕ ಎಡ್ಗರ್ ಆಲನ್ ಪೋಗೆ ಇಳಿದು ಅವನಿಂದ ಬೋದಿಲೇರನ್ನು ಮುಟ್ಟಿದ ಪ್ರಭಾವ ಕ್ವಾಂಟನದು. ವಿಷಯಾತೀತವೂ ಅನುಭವಜನ್ಯವಲ್ಲದ್ದೂ ಆದ ಗೂಢ ಹೊಂದಿಸುವ ವಿದ್ಯೆಯಲ್ಲಿ ಬೋದಿಲೇರನಿಗೆ ಪೋನೇ ಗುರು. ಬೋದಿಲೇರನ ಶಿಷ್ಯರಾಗಿ ಬಂದವರು ವರ್ಲೇನ್ ಮತ್ತು ಮಲಾರ್ಮೆ. ಆದರೆ ಸಾಂಕೇತಿಕತೆ ಕೇವಲ ವೈಯಕ್ತಿಕ ವೈಚಿತ್ರ್ಯಕ್ಕೆ ತಿರುಗಿ ಸತ್ವ ಕಳೆದುಕೊಂಡಿತು. ಯೇಟ್ಸ್, ಪಾಲ್ ವ್ಯಾಲೆರಿ ಮೊದಲಾದ ಕೆಲವೇ ಕೆಲವರು ಅದನ್ನು ಮತ್ತೆ ರೂಢಿಗೆ ತರಲು ಪ್ರಯತ್ನಿಸಿ ಜಯಗಳಿಸದೇ ಹೋದರು. ಆದರೂ ಸಾಹಿತ್ಯವಿಮರ್ಶೆಯಲ್ಲಿ ಸಂಕೇತದ ವಿಚಾರ ಸೂಕ್ತ ಸಂದರ್ಭದಲ್ಲಿ ಬಳಕೆಗೆ ಬಂತು. ಕೃತಿಸೀಮಿತತ್ತ್ವದ ತತ್ತ್ವಶಾಸ್ತ್ರೀಯ ಮುಖವನ್ನು ಕ್ರೋಚೆ, ಬರ್ಗ್ಸನ್ನರಲ್ಲಿ ಕಾಣಬಹುದು. ಅವರಿಗೆ ಹೆಗಲನ ಮೂಲಕ ಕ್ಯಾಂಟನೇ ಮಾರ್ಗದರ್ಶಕ.
ಡಾಲಿನ ಸಾಹಿತ್ಯವ್ಯಾಸಂಗ
[ಬದಲಾಯಿಸಿ]20ನೆಯ ಶತಮಾನದ ಎರಡನೆಯ ದಶಕದಲ್ಲಿ ಹೊಸ ವಿಮರ್ಶೆಯೆಂಬ ಡಾಲಿನ ಸಾಹಿತ್ಯವ್ಯಾಸಂಗ ತಲೆಯೆತ್ತಿತ್ತು. ಹಿಂದಿನಿಂದ ಸಾಂಪ್ರದಾಯಿಕವಾಗಿ ಬಂದ ತತ್ತ್ವಗಳು, ಸೂತ್ರಗಳು, ಸನ್ನಿವೇಶ ವಿವರಣೆ, ಕವಿಸ್ವಭಾವದ ವಿಚಾರ-ಇವೇ ಮುಂತಾದ, ಕೃತಿಯಿಂದ ಹೊರಚ್ಚಾದ ಸಮಸ್ತವನ್ನೂ ಬದಿಗೊತ್ತಿ ಕೃತಿಯೊಂದನ್ನೇ ಪರೀಕ್ಷಿಸಬೇಕು-ಎಂಬುದು ಅದರ ಚಾಲಕಶಕ್ತಿ. ಆದರೆ ಹೊಸ ವಿಮರ್ಶಕರಲ್ಲಿ ಅನೇಕ ವಿಭಿನ್ನ ಗುಂಪುಗಳಾದುವು. ಅವರಿಂದ ಆಗಿರುವ ಒಂದು ಪ್ರಯೋಜನ ಕಲಾಕೃತಿಗೆ ಹೆಚ್ಚುಕಡಿಮೆ ಸಂಪುರ್ಣವಾಗಿ ಲಕ್ಷ್ಯವೇ ಮೀಸಲಾಗಬೇಕೆಂಬ ಅಭಿಪ್ರಾಯ; ಕಲಾಕೃತಿಗೆ ಆಂಗಿಕ ಹೊಂದಾಣಿಕೆ (ಆಗಾರ್ಯ್ನಿಕ್ ಯೂನಿಟಿ) ಇರಲೇಬೇಕೆಂಬ ತತ್ತ್ವ.
ಮನೋವಿಜ್ಞಾನಿ ಯೂಂಗ
[ಬದಲಾಯಿಸಿ]ಇತ್ತೀಚೆಗೆ ಮನೋವಿಜ್ಞಾನಿ ಯೂಂಗನಿಂದ ಪ್ರಚೋದಿತವಾದ ವಿಧಾನವೊಂದು ವಿಮರ್ಶೆಯೊಳಕ್ಕೆ ಕಾಲಿಟ್ಟಿದೆ. ಅವನು ಜಾರಿಗೆ ತಂದ ಭಾವನೆಗಳಲ್ಲಿ ನರರ ಅಂತರಾಳದಲ್ಲಿ ಹುದುಗಿದೆಯೆಂದು ಹೇಳಲಾಗುವ ಸಾಮೂಹಿಕ ಅಪ್ರಜ್ಞೆ (ದಿ ಕಲೆಕ್ಟಿವ್ ಅನ್ಕಾಂಷಸ್) ಕಡುಪುಳ್ಳದ್ದು. ಕೆಲವೊಮ್ಮೆ ಅದು ಜಾಗರಿತವಾಗಿ ಭಾವ ಭಾವನೆಗಳ ಆದ್ಯ ಮಾದರಿಯ (ಆರ್ಕಿಟೈಪ್ಸ್) ಅರಿವನ್ನು ಒದಗಿಸುತ್ತದೆ. ಕೆಲವರಿಗೆ ಸೃಷ್ಟಿಗೈಯುವ ರಾಗೋತ್ಸಾಹವನ್ನು ಎಬ್ಬಿಸಿ ಕಲಾನಿರ್ಮಿತಿಗೆ ಕಾರಣವಾಗುತ್ತದೆ. ಈ ಅಭಿಪ್ರಾಯದ ಸುಳಿವು ಕ್ಯಾಂಟನ ವಿಭಾವನಾ ಕಲ್ಪನೆಯಲ್ಲಿ ಗೋಚರಿಸಿದೆಯೆಂದು ಕೆಲವರ ಹೇಳಿಕೆ. ಯೂಂಗನ ನಿರ್ಧಾರದಂತೆ ಆದ್ಯ ಮಾದರಿಗಳು ಮೂಲ ಐತಿಹ್ಯ (ಲೆಜೆಂಡ್), ಕಥಾವಳಿ (ಮಿತ್ಸ್), ಶಾಶ್ವತ ಸಂಕೇತಗಳು (ಇಂಟರ್ನಲ್ ಸಿಂಬಲ್ಸ್), ದ್ರವ್ಯವರ್ಗಗಳು (ಕೆಟಗೊರೀಸ್) ಇತ್ಯಾದಿ ರೂಪಗಳಲ್ಲಿ ಪ್ರಕಟಿತವಾಗಿ ನುಡಿದ ವಚನಕ್ಕೆ ಅರ್ಥ ತುಂಬುತ್ತವೆ. ರುದ್ರನಾಟಕ ಭವ್ಯಕಾವ್ಯಪ್ರಭೇದಗಳ ಜಿಜ್ಞಾಸೆಯಲ್ಲೂ ಸಾಂಕೇತಿಕತೆಯ ವ್ಯಾಖ್ಯಾನದಲ್ಲೂ ಆದ್ಯಮಾದರಿಗಳ ಪ್ರಸ್ತಾಪ ಬರುತ್ತಿದೆ. 20ನೆಯ ಶತಮಾನಕ್ಕೆ ಮನಃವಿಜ್ಞಾನದ ಯುಗವೆಂಬ ಹೆಸರು ಯುಕ್ತ.
ಯಂತ್ರೋದ್ಯಮದ ಕಾಲ
[ಬದಲಾಯಿಸಿ]18ನೆಯ ಶತಮಾನ ಯಂತ್ರೋದ್ಯಮದ ಕಾಲವಾದರೆ 19ನೆಯ ಶತಮಾನ ವಿಜ್ಞಾನ ಯುಗವಾಯಿತು. ನಾನಾ ಪ್ರಬಲ ಸಂಶೋಧನೆಗಳಿಂದ ಮನುಷ್ಯಚಿಂತನೆ ಅಲ್ಲೋಲ್ಲಕಲ್ಲೋಲಗೊಂಡಿತು. ವಿಜ್ಞಾನಕ್ಕೆ ಹಿಗ್ಗಿಬಂದ ವಿಧಿಗಳು. ವಿಕಾಸ-ಇವು ಸಮಾಜ ಸಂಸ್ಕೃತಿ ಸಾಹಿತ್ಯಕ್ಕೂ ಯಥೋಚಿತವಾಗಿ ಅನ್ವಯವಾಗಬಹುದೆಂದು ಯೋಚನಾಪರರಿಗೆ ಭಾಸವಾಯಿತು. ಬೆಂತಮ್, ಕಾಂಪ್ಟ್, ಹರ್ಬರ್ಟ್ ಸ್ಪೆನ್ಸರ್ ಮೊದಲಾದವರು ವೈಜ್ಞಾನಿಕವಾಗಿ ಸಮಾಜವಿಜ್ಞಾನ ರಚಿಸುವುದಕ್ಕೆ ಆಸಕ್ತಿವಹಿಸಿದರು. ಕ್ಯಾಂಟನ ತತ್ತ್ವಶಾಸ್ತ್ರ ಬ್ರಿಟನ್ನಿನಲ್ಲಿ ಪ್ರಬಲಗೊಳ್ಳುತ್ತಿದ್ದ ಅನುಭವೈಕವಾದಕ್ಕೆ ತಡೆಹಾಕಲು ಪ್ರಯತ್ನಿಸಿದರೂ ಆ ವಾದ ಬೆಳೆಯುತ್ತಲೇ ಬಂತು; ವೈಜ್ಞಾನಿಕ ಪ್ರಗತಿಯೂ ಯಂತ್ರೋದ್ಯಮ ಪ್ರಗತಿಯೂ ಪ್ರಯೋಗ ಅನುಭವಗಳಿಗೆ ಪ್ರಶಸ್ತಿ ತಂದುಕೊಟ್ಟುವು.
ಸಂಸ್ಕೃತಿಮೂಲ ಪ್ರಭಾವಗಳು
[ಬದಲಾಯಿಸಿ]ವೈಜ್ಞಾನಿಕ ವಿಮರ್ಶಕರೆಲ್ಲರೂ ಒಂದೇ ಪಂಗಡದವರಲ್ಲ. ಸಾಮಾಜಿಕ ವಿಮರ್ಶಕರಿಗೆ ಸಂಸ್ಕೃತಿಮೂಲ ಪ್ರಭಾವಗಳು ಮುಖ್ಯ. ಮತಧರ್ಮ, ಅರ್ಥಶಾಸ್ತ್ರ, ರಾಜಕೀಯ ತತ್ತ್ವಗಳಂತೆ ಸಾಹಿತ್ಯ ನಿರ್ಮಾಣಗೊಳ್ಳುತ್ತದೆಂದು ಅವರ ನಿಲುವು. ಸಾಹಿತ್ಯ ಚರಿತ್ರಕಾರರಿಗೆ ಆಧಾರಗಳೂ ಸಂಪ್ರದಾಯಗಳೂ ಮುಖ್ಯ. ಮನೋವಿಜ್ಞಾನಪ್ರೇರಿತ ವಿಮರ್ಶಕರು ಸಾಹಿತಿಗಳ ಸ್ವಂತ ಅನುಭವಗಳನ್ನೂ ಆತ್ಮಚರಿತ್ರೆಯನ್ನೂ ಬಹುವಾಗಿ ಗೌರವಿಸುತ್ತಾರೆ. ಜೋóಲ ಮೊದಲಾದ ಕಾದಂಬರಿಕಾರರಿಗೆ ತಮ್ಮ ಕೃತಿಗಳು ವಿಜ್ಞಾನದ ವಿಧಿಗಳಿಗೆ ಅನುರೂಪ ಎಂಬ ಹೆಮ್ಮೆ.ವೈಜ್ಞಾನಿಕ ವಿಮರ್ಶೆ ಕಲಾಕೃತಿಯಿಂದ ಹೊರಗಣ ಸಂಗತಿಗಳಿಗೆ ಎಡೆಕೊಡುವುದನ್ನು ಧ್ಯೇಯವಾಗಿ ಇಟ್ಟುಕೊಂಡಿರುವುದರಿಂದ ಅದಕ್ಕೂ ಕಲಾಮೂಲ ವಿಮರ್ಶೆಗೂ ಬದ್ಧವೈರ. ಎರಡು ಗುಂಪಿಗೂ ವಾದ ವಿವಾದ ರೊಮ್ಯಾಂಟಿಕರಿಂದ ಪ್ರಾರಂಭವಾಗಿ ಇಪ್ಪತ್ತನೆಯ ಶತಮಾನದಲ್ಲೂ ನಡೆದಿದೆ.ಮೊದಲು ಎದ್ದುಬಂದ ವೈಜ್ಞಾನಿಕ ವಿಮರ್ಶೆ ಸಮಾಜ ಸಂಬಂಧವಾದದ್ದು. ಅನುವಂಶಿಕತೆ, ವಾಯುಗುಣ, ಸಮಾಜ ಪದ್ಧತಿ ಮುಂತಾದವು ಸಾಹಿತ್ಯಸೃಷ್ಟಿಯಾಗುವ ಬಗೆಯನ್ನು ನಿರ್ಣಯಿಸುತ್ತವೆಯೆಂದೇ ಅದರ ನಂಬಿಕೆ.
ಮದಾಂ ಡ ಸ್ಟೀಲಳ ಸಾಹಿತ್ಯ
[ಬದಲಾಯಿಸಿ]ಇಂಥ ಅಭಿಪ್ರಾಯದ ಮುನ್ಸೂಚನೆ 18ನೆಯ ಶತಮಾನದಲ್ಲೇ ಹರ್ಡರ್, ಮಾಂಟೆಸ್ಕೂ ಮೊದಲಾದವರಿಂದ ಆಗಿಬಂದರೂ ವೈಜ್ಞಾನಿಕತೆ ಅಧಿಕೃತವಾಗಿ ಜನಿಸಿದ್ದು ಮದಾಂ ಡ ಸ್ಟೀಲಳ ಸಾಹಿತ್ಯವೂ ಸಮಾಜ ಸಂಸ್ಥೆಗಳೂ (1800) ಎಂಬ ಪುಸ್ತಕದಿಂದ. ಸ್ಟೆಂಡಲ್, ಸೇಂಟ್ ಬವ್, ರೀನನ್ ಮೊದಲಾದವರಿಂದ ಅದಕ್ಕೆ ಪುಷ್ಟಿ ದೊರೆಯಿತು. ಟೇನ್ ಬರೆದ ಇಂಗ್ಲಿಷ್ ಸಾಹಿತ್ಯ ಚರಿತ್ರೆ (1864) ಆ ವಿಧಾನದ ವಿವರಣೆಯೂ ಉದಾಹರಣೆಯೂ ಆಯಿತು.ಜರ್ಮನಿ ತನ್ನದೇ ಆದ ವೈಜ್ಞಾನಿಕ ವಿಮರ್ಶೆಯನ್ನು ಹೊರತಂದಿತು. ಗ್ರಿಮ್ ಸೋದರರು, ವರ್ನರ್, ಷೀರರ್ ಮತ್ತು ಇತರ ವೈಯಾಕರಣಿಗಳು ಭಾಷಾಪ್ರಮುಖ ವಿಮರ್ಶೆಯೂ ಒಂದು ವಿಜ್ಞಾನವಾಗಬಹುದೆಂಬ ಆಶೋತ್ತರ ಪಂಡಿತ ವರ್ಗದಲ್ಲಿ ಹರಡಿತು. 1860-1916ರ ವರೆಗಿನ ಐವತ್ತಾರು ಸಂವತ್ಸರಗಳ ಕಾಲದಲ್ಲಿ ಜರ್ಮನ್ ಪಾಂಡಿತ್ಯ ಜಗತ್ಕೀರ್ತಿ ಯನ್ನು ಸಂಪಾದಿಸಿಕೊಂಡಿತು. ಅದರ ಬಹುಪಾಲು ಭಾಷಾವಿಜ್ಞಾನಕ್ಕೆ ಸಂಬಂಧಿಸಿದ್ದು. ಬೊ ಅಕ್ ಕೈಫನಾಕ್ ರಚಿಸಿದ ಬೃಹದ್ಗ್ರಂಥಗಳು ಇದಕ್ಕೆ ನಿದರ್ಶನ. ಅದೇ ದಾರಿಯಲ್ಲಿ ಸ್ಕೀಟ್, ಚೇಂಬರ್ಸ್, ಕೋರ್ಟ್ಹೋಪ್ ಇತ್ಯಾದಿ ಬ್ರಿಟಿಷ್ ಪಂಡಿತರೂ ನಡೆದರು.
ಡಾರ್ವಿನ್ನನ ಪ್ರಭಾವ ಸಾಹಿತ್ಯ ಚರಿತ್ರೆ
[ಬದಲಾಯಿಸಿ]ಡಾರ್ವಿನ್ನನ ಪ್ರಭಾವ ಸಾಹಿತ್ಯ ಚರಿತ್ರೆಯ ಮೇಲೂ ಕಾದಂಬರಿಯ ವಿಮರ್ಶೆಯ ಮೇಲೂ ಬಲವಾಗಿ ಬಿತ್ತು. ಸಾಹಿತ್ಯದ ಶಕ್ತಿಗಳು ವಿಕಾಸ ಹೊಂದುತ್ತ ಹೋಗುತ್ತವೆಂದೂ ಉದ್ಘಕೃತಿಗಳು ಆಗಿಬಂದು ಅವಧಿಯ ಘಟ್ಟಗಳನ್ನು ಏರ್ಪಡಿಸುತ್ತವೆಂದೂ ಬ್ರೂನಟೇರ್ ಹೇಳಿದ. ಪ್ಯಾಸ್ಕಲ್, ಚಾಟೊಬ್ರಯಾನ್ ಅಂಥ ಕೃತಿಕಾರರು. 1890ರಲ್ಲಿ ಬ್ರೂನಟೇರ್ ಸಾಹಿತ್ಯ ಪ್ರಭೇದಗಳ ವಿಕಾಸ ಎಂಬ ಗ್ರಂಥವನ್ನು ಹೊರತಂದ; 1897ರಲ್ಲಿ ಫ್ರೆಂಚ್ ಸಾಹಿತ್ಯದ ಕೈಪಿಡಿಯನ್ನು ಬರೆದ.ಜೋಲ ಮತ್ತು ಇತರರು ಕಾದಂಬರಿಯ ನಿಯಂತ್ರಣವನ್ನು ವೈಜ್ಞಾನಿಕವಾಗಿ ವಿವರಿಸಿದರು. ಕಾದಂಬರಿಯಲ್ಲೂ ನಾಟಕದಲ್ಲೂ ಸ್ವಭಾವತೆಯೆಂಬ ತತ್ತ್ವ ಲೇಖಕರನ್ನು ಆಳತೊಡಗಿತು. ಜೀವನ ಒಂದು ಗೊಂಡಾರಣ್ಯ, ಬದುಕುವುದು ಹೋರಾಟದಲ್ಲಿ ಗೆದ್ದರೇನೆ. ಆದ್ದರಿಂದ ಲೇಖಕ ಇರುವ ಸ್ಥಿತಿಯನ್ನು ಇದ್ದಂತೆ ಪ್ರತಿಚಿತ್ರಿಸತಕ್ಕದ್ದು. ಇದು ಸ್ವಭಾವತೆ ತತ್ತ್ವದ ತಿರುಳು. ಜೋóಲ ತನ್ನ ಕೃತಿಗಳನ್ನು ಪ್ರಾಯೋಗಿಕ ಕಾದಂಬರಿಗಳು ಎಂದು ಹೆಸರಿಟ್ಟು ಕರೆದ (1880).ವೈಜ್ಞಾನಿಕತೆಯ ಎರಡು ಮುಖ್ಯ ಕವಲುಗಳೆಂದರೆ ಮಾರ್ಕ್ಸ್ ಮತ್ತು ಎಂಗೆಲ್ಸ್, ಫ್ರಾಯ್ಡ್-ಇವರ ತತ್ತ್ವ. ಸಾಹಿತ್ಯಕ್ಕೆ ನಿಜವಾದ ಆಸರೆ ಅದರ ಕಾಲದ ಆರ್ಥಿಕ ವಸ್ತುವ್ಯವಸ್ಥೆ ಎಂಬುದು ಮಾಕ್ರ್ಸ್ ಮತ್ತು ಎಂಗೆಲ್ಸರ ವಾದ. ಕಾವ್ಯ, ಭಾಷೆ, ಪಾತ್ರ ಶಿಲ್ಪ ಸಂವಿಧಾನ ಮೊದಲಾದ ವಿಚಾರಗಳನ್ನು ಮನೋವಿಜ್ಞಾನ ರೀತ್ಯಾ ವಿವರಿಸಿ ಫ್ರಾಯ್ಡ್ ತಾನೇ ಪ್ರಬಂಧ ಬರೆದ. ಹಾಗೆಯೇ ಕವಿಯ ಆತ್ಮಕಥೆ ಸಾಂಕೇತಿಕತೆಗಳ ಮೇಲೂ ಬರೆದ. ಫ್ರಾಯ್ಡನ್ನು ಹಿಂಬಾಲಿಸಿದ ವಿಮರ್ಶೆಗೆ ಕಲಾಕೃತಿಯಲ್ಲಿ ಕಾಣಬಹುದಾದ ಕೃತಿಕಾರನ ಲಕ್ಷಣ ಗಮನೀಯ ಅಂಶ.
ಗಣಿತವಿಜ್ಞಾನ
[ಬದಲಾಯಿಸಿ]ಈ ಶತಮಾನದ ಎರಡನೆಯ ದಶಕದಲ್ಲಿ ಗಣಿತವಿಜ್ಞಾನಕ್ಕೆ ಅಂಗೀಕಾರವಾಗಿರುವ ಅಂಕಿಅಂಶ ನಕ್ಷೆ ಮುಂತಾದ ಕ್ರಮಗಳನ್ನು ಸಾಹಿತ್ಯ ವಿಮರ್ಶೆಯಲ್ಲಿ ಬಳಸಲಾರಂಭಿಸಿದರು. ನಾಮಪದ, ಕ್ರಿಯಾಪದ, ಗುಣವಾಚಕಾದಿಗಳು ಕಾವ್ಯದಲ್ಲಿ ಎಷ್ಟೆಷ್ಟು ಬರುತ್ತವೆಂದು ವರ್ನನ್ ಲೀ ಲೆಕ್ಕಮಾಡಿ ಹೇಳಿದ. ಇತರರಿಂದ ವಿಷಯಗಳ ನಕಾಶೆ, ಪದಗಳ ಸಂವಿಧಾನ ಮುಂತಾದವು ಗಣಿತವಾದುವು. ಷೇಕ್ಸ್ಪಿಯರನ ಮತ್ತು ಅವನ ಸಮಕಾಲೀನರ ಕೃತಿಗಳಲ್ಲಿ ಬರುವ ಅಭಿಪ್ರಾಯ ಪ್ರತಿಮೆಗಳನ್ನು ಕ್ಯಾರೊಲೀನ್ ಸ್ಪರ್ಜನ್ ನಕ್ಷೆ ಮಾಡಿದಳು. ಷೇಕ್ಸ್ಪಿಯರನ್ನು ಓದುವಾಗ ಅಕ್ಷರಣೆಯೂ (ಸ್ಟೆಲ್ಲಿಂಗ್), ವಿರಾಮ ಚಿಹ್ನೆಗಳೂ ಹೇಗೆ ಬೇಕಾಗುತ್ತವೆಂಬುದನ್ನು ಲಾರಾ ರೈಡಿಂಗ್ ಮತ್ತು ರಾಬರ್ಟ್ ಗ್ರೇವ್ಸ್ ತೋರಿಸಿದ್ದಾರೆ. ಇಂಥ ವ್ಯವಸಾಯವನ್ನು ಹಿಂಬದಿಗೆ ತಳ್ಳಿ ಶಬ್ದಾರ್ಥ ಪ್ರಮುಖ ವಿಮರ್ಶೆ ಎದ್ದು ಬಂತು. ಅದರ ಪ್ರತಿಪಾದಕರಲ್ಲಿ ಐ.ಎ.ರಿಚಡ್ರ್ಸ್ ಗಣ್ಯನಾದವ.ಮಾನವತಾಮೂಲ ವಿಮರ್ಶೆ ಸುಲಭವಾಗಿ ಹಿಡಿತಕ್ಕೆ ಸಿಕ್ಕುವಂಥದಲ್ಲ. ತಮ್ಮ ಉದ್ದೇಶ ವಿಧಾನಗಳನ್ನು ಆ ಪಂಗಡದ ವಿಮರ್ಶಕರು ಸ್ಪಷ್ಟವಾಗಿ ವಚನಿಸಿಲ್ಲ. ಅವರ ವಂಶ ಹೊಸ ಹುಟ್ಟಿನವರೆಗೂ ಹಿಂದಕ್ಕೆ ಹೋಗುತ್ತದೆ. ಸಂಸ್ಕೃತಿಯ ಧ್ಯೇಯ ಮತ್ತು ನೀತಿಬೋಧೆ ಅದರ ಪ್ರಧಾನ ಲಕ್ಷಣ. 19ನೆಯ ಶತಮಾನದಲ್ಲಿ ಆದ ವಿಜ್ಞಾನ ಪ್ರಸಾರ, ಕಲೆಗಾರ ಪ್ರತ್ಯೇಕಿಸಲ್ಪಟ್ಟಿದ್ದು, ಸಾರ್ವಜನಿಕ ವಿದ್ಯಾಭ್ಯಾಸ, ಸಾಂಪ್ರದಾಯಿಕ ಮೌಲ್ಯಗಳ ಪರಾಭವ, ಹಳೆಯ ಸಂಸ್ಕೃತಿಯ ಕುಸಿತ ಮೊದಲಾದವನ್ನು ಆ ಕಾಲದ ಸಾಹಿತ್ಯ ವಿಮರ್ಶಕರು ಪರಿಶೀಲಿಸಬೇಕಾಯಿತು. ಅವರಲ್ಲಿ ಕೆಲವರು ಘಂಟಾಘೋಷವಾಗಿ ಬಲಿಷ್ಠ ಕೇಂದ್ರ ಸರ್ಕಾರ, ವ್ಯವಸ್ಥಿತ ಶಿಕ್ಷಣ ಪದ್ಧತಿ ಲಲಿತಕಲೆಗಳಿಗೆ ಸುಭದ್ರಸ್ಥಾನ-ಇವು ಏರ್ಪಡಲೇಬೇಕೆಂದು ಸಾರಿದರು. ಅವರಿಗೆ ಕಲಾಮೂಲ ವಿಮರ್ಶೆ ಹೊಲ್ಲ. ಸಾಹಿತ್ಯದಿಂದ ಶೀಲ ನೆಟ್ಟಗಾಗದಿದ್ದರೆ ಅದು ಸಾಹಿತ್ಯವೇ ಅಲ್ಲ. ಅವರ ನೋಟಕ್ಕೆ. ವೈಜ್ಞಾನಿಕತೆಯೂ ಅವರಿಗೆ ರುಚಿಯೆನಿಸುವುದಿಲ್ಲ. ಏತಕ್ಕೆಂದರೆ ಅದು ಮಾನವ ಸ್ವಾತಂತ್ರ್ಯವನ್ನು ಇಲ್ಲವೆನಿಸುತ್ತದೆ, ನೀತಿ ಧರ್ಮ ಬೇಡ ಎನ್ನುತ್ತದೆ. ಅವರ ಪಾಂಡಿತ್ಯವೆಲ್ಲ ಜೀವವಿಲ್ಲದ ಕ್ಷುಲ್ಲಕ ಸಂಗತಿಗಳ ಮೇಲೆ ಕಟ್ಟಿದುದು. ಅವರಲ್ಲಿ ಅನೇಕರಿಗೆ ಗಯಟೆಯೇ ಮೇಲ್ಪಂಕ್ತಿ. ಏತಕ್ಕೆಂದರೆ ಅವನು ರೊಮ್ಯಾಂಟಿಕತೆಯನ್ನು ಕಾಯಿಲೆಯೆಂದು ಹಳಿದ. ಅಭಿಜಾತ ಸಾಧುವೆಂದು ಹೇಳಿದ. ತೀವ್ರ ರಾಷ್ಟ್ರೀಯತೆಯನ್ನು ಖಂಡಿಸಿ ಜಗತ್ಸಾಹಿತ್ಯವೆಂಬುದನ್ನು ಹೊಗಳಿದ. ಕಲೆಗಾರನಿಂದ ಸಮಾಜದ ನೈತಿಕಾರೋಗ್ಯ ದೃಢವಾಗಿರಬೇಕೆಂಬುದೇ ಅವನ ಸಿದ್ಧಾಂತ. ಆದರೆ ಅವನಲ್ಲಿ ಅನಿಶ್ಚಿತತೆಯೂ ಪುರ್ವಾಪರ ವಿರೋಧವೂ ಹೇರಳ.
ಇಂಗ್ಲೆಂಡಿನ ಮ್ಯಾಥ್ಯೂ ಆರ್ನಲ್ಡ್ ಮತ್ತು ಫ್ರಾನ್ಸಿನ ಸೇಂತ್ ಬವ್ ಗಯಟೆ
[ಬದಲಾಯಿಸಿ]ಇಂಗ್ಲೆಂಡಿನ ಮ್ಯಾಥ್ಯೂ ಆರ್ನಲ್ಡ್ ಮತ್ತು ಫ್ರಾನ್ಸಿನ ಸೇಂತ್ ಬವ್ ಗಯಟೆಯ ಬಗೆಯವರೇ. ಆದರೆ ಅವರ ದೃಷ್ಟಿ ನಿಶ್ಚಂಚಲ, ಅವರ ನುಡಿ ನಿಸ್ಸಂದಿಗ್ಧ. ಚಾರಲ್ಸ್ ಮೌರಾ ಮತ್ತು ಅರ್ವಿಂಗ್ ಬ್ಯಾಬಿಟ್ ಮನುಷ್ಯ ವಾತ್ಸಲ್ಯದ ವಿಮರ್ಶಕರು. ಕೆಲವೊಮ್ಮೆ ಲೋಕವನ್ನು ತಿದ್ದುವ ಚಟಕ್ಕೆ ತುತ್ತಾಗಿದ್ದಾರೆ, ನಿಜ. ಟಾಲ್ಸ್ಟಾಯ್ ಮತ್ತು ನೀಚೆ ಅದೇ ಹವ್ಯಾಸದ ವೈಪರೀತ್ಯ. ತಮ್ಮ ಕಾಲದ ಲಲಿತಕಲೆ ಅವರ ಸೂಕ್ಷ್ಮ ನಾಸಿಕಕ್ಕೆ ನಾತಗೂಡಿದ ಕಸ. ಟಾಲ್ಸ್ಟಾಯ್ ಕಲೆಯಲ್ಲಿ ಸರಳತೆ, ದೈವಭಕ್ತಿ, ಪ್ರಾಮಾಣಿಕತೆ ಇರಬೇಕೆಂದು ಹಠ ತೊಟ್ಟ; ಒಂದು ಬಗೆಯ ಸಂತೋಷಾವೇಶ ಸ್ಫುರಿಸದಿದ್ದರೆ ಕಲೆ ಕಲೆಯಲ್ಲ-ಎಂಬುದು ನೀಚೆಯ ಮತ.ಕಲಾಮೂಲ ವಿಮರ್ಶೆಯೂ ವೈಜ್ಞಾನಿಕ ವಿಮರ್ಶೆಯೂ ಅತಿರೇಕಕ್ಕೆ ಹೋಗುವಂತೆ ತೋರಿದಾಗ ಮಾನವತಾ ವಿಮರ್ಶೆ ಮುಂದೆ ಬಂದು ಹಾಳತವನ್ನೂ ಮಿತಿಯನ್ನೂ ಪೋಷಿಸುತ್ತದೆ. ಅದರ ಸಹಾಯದಿಂದ ಇನ್ನೊಂದು ಒಳ್ಳೆಯದಾಗಿದೆ. ಪರಿಣಾಮವಿಧಾನವೂ ವೈಯಕ್ತಿಕತೆಯೂ ಕಲಾಪ್ರಪಂಚದಲ್ಲಿ ಮಿತಿಯನ್ನು ಮೀರಿ ವರ್ತಿಸುವುದುಂಟು; ಹಾಗೆಯೇ ಸಾಂಪ್ರದಾಯಿಕತೆ ಪಾಂಡಿತ್ಯಗಳಿಗೂ ಅತಿಯ ಕಡೆಗೆ ಸರಿಯುವ ಚಾಪಲ್ಯವುಂಟು. ಮಾನವತಾಮೂಲ ವಿಮರ್ಶೆ ಅವನ್ನೂ ಮಧ್ಯಮಾರ್ಗಕ್ಕೆ ಎಳೆತರುವುದರಲ್ಲಿ ಉಪಯುಕ್ತ. ಜಾಕ್ ಮಾರಿಟೇನ್ ಅಂಥ ಸಮತೋಲ ಕಾರ್ಯದಲ್ಲಿ ಪ್ರವೀಣ.
ಮ್ಯಾರಿಟೇನ
[ಬದಲಾಯಿಸಿ]ಮ್ಯಾರಿಟೇನನ ಹೆಸರನ್ನು ಹೇಳಿದ ಕೂಡಲೆ ಯಾವ ಗುಂಪಿಗೂ ಸೇರದೆ ತಮ್ಮ ಅಗಾಧ ಪ್ರತಿಭೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ಕುತೂಹಲ ಕೆರಳಿಸಿರುವ ಇತರ ಕೆಲವರನ್ನೂ ಒಂದೆರಡು ಪದ್ಧತಿಗಳನ್ನೂ ಹೆಸರಿಸಲೇಬೇಕು; ಅಂದರೆ ಬ್ರಿಟನ್, ಜೀನ್ಪಾಲ್ ಸಾರ್ಟ್ೃ. ಇವರ ಕಾಣಿಕೆ ಅಮೂಲ್ಯವಾದುದು. ಮೊದಲ ಮಹಾಯುದ್ಧ ಮುಗಿದ ಮೇಲೆ ಯುರೋಪಿನಲ್ಲಿ ಕಷ್ಟನಷ್ಟ ಆಶಾನಾಶ ನಿರುತ್ಸಾಹ ದುಗುಡಗಳ ಹೆಚ್ಚಳದಿಂದ ಎಲ್ಲ ಕಡೆಯೂ ನೀರಸ ಬಂiÀÄಲೇ ಇದ್ದಂತೆ ಕಾಣಬಂದಿತು. ಕಲೆಗಾರರು ಹಲವು ಪ್ರಯೋಗಗಳ ಮೂಲಕ ಉಲ್ಲಾಸವುಂಟುಮಾಡಲು ಹವಣಿಸಿದರು. ಅತೀವ ವಾಸ್ತವತೆ (ಸರ್ರಿಯಲಿಸಂ) ಅವುಗಳಲ್ಲಿ ಒಂದು. ಅದರ ತಿರುಳು ಇಷ್ಟೆ; ಮಾನವನ ಅಂತಶ್ಚೇತನ ಅಥವಾ ಆತ್ಮಕ್ಕೆ ಸ್ವಯಂಚಾಲಕ ಶಕ್ತಿಯಿದೆ; ಬುದ್ಧಿ ಭಾವ ಸಂಕಲ್ಪ ಮೊದಲಾದವುಗಳಿಂದ ಅದಕ್ಕೆ ಅಡ್ಡಿ ಹೂಡದೆ ಅದರಷ್ಟಕ್ಕೆ ಅದನ್ನು ಬಿಟ್ಟರೆ ಅದು ಶುದ್ಧವಾದ ಕಲೆಯನ್ನು ರೂಪಿಸುತ್ತದೆ. ಬುದ್ಧಿ ವಿವೇಚನೆಯ ಅಥವಾ ನೈತಿಕ ಭಾವನೆಯ ಅಧಿಕಾರದಿಂದ ಚೇತನವನ್ನು ವಿಮೋಚಿಸಿದಾಗ ಪ್ರಕೃತಿಸಹಜವಾಗಿ ಅದು ಕೆಲಸಮಾಡುತ್ತದೆ. ನಿರ್ಮಲ ನೈಸರ್ಗಿಕ ಕಲೆಯನ್ನು ಸೃಷ್ಟಿಸುತ್ತದೆ. ಸ್ವಪ್ನದಂಥ ಅದರ ಅನಿಸಿಕೆಗಳೂ ತುಡಿತ ಮಿಡಿತಗಳೂ ನೈಜರೂಪದಲ್ಲಿ ಹೊರಬರುವುದೇ ಅತೀವ ವಾಸ್ತವತೆ. ಈ ವಾದಕ್ಕೆ ಫ್ರಾಯ್ಡನ ತತ್ತ್ವಗಳು ಬಹುಮಟ್ಟಿಗೆ ಪ್ರಚೋದಕವೆಂದು ಬೇರೆ ಹೇಳಬೇಕಾಗಿಲ್ಲ.
ಅಸ್ತಿತ್ವ ತತ್ತ್ವ (ಎಕ್ಸಿಸ್ಟೆಂಷಿಯಲಿಸಂ)
[ಬದಲಾಯಿಸಿ]ಅಸ್ತಿತ್ವ ತತ್ತ್ವ (ಎಕ್ಸಿಸ್ಟೆಂಷಿಯಲಿಸಂ) 1950ರಿಂದ ನಾನಾ ದೇಶಗಳಿಗೆ ಹರಡಿ ಕಲೆ ಸಾಹಿತ್ಯಗಳ ಮೇಲೆ ಪ್ರಭಾವ ಬೀರಿದೆ. ವಿಮರ್ಶೆಯಲ್ಲಿ ಅದರ ಅಭಿಪ್ರಾಯಗಳನ್ನು ಶಕ್ತಿಯುತವಾಗಿ ಮೂಡಿಸಿದವ ಜೀನ್ಪಾಲ್ ಸಾರ್ಟ್ೃ. ಮೌಲ್ಯವೆಲ್ಲ ಸಾಪೇಕ್ಷ. ಆದರ್ಶವ್ಯವಸ್ಥೆಯೆಂಬುದಾವುದೂ ಇಲ್ಲವೇ ಇಲ್ಲ. ಆದರೆ ಮನುಷ್ಯ ಕಾರ್ಯ ನಡೆಸಲೇಬೇಕು. ಈ ಪರಸ್ಪರ ವಿರುದ್ಧ ಸಮಸ್ಯೆಯನ್ನು ಜೀವನ ವ್ಯಕ್ತಿಯ ಎದುರು ಒಡ್ಡುತ್ತದೆ. ಅದನ್ನು ಬಿಡಿಸಿ ಬಗೆಹರಿಸುವುದೆಂತು? ಇದಕ್ಕೆ ಸಾರ್ಟ್ೃ ಕೊಡುವ ಉತ್ತರ ಇದು. ಸಮಸ್ಯೆ ಒಂದು ವಿಧದಲ್ಲಿ ತನ್ನ ವಿರೋಧಾಭಾಸದಿಂದ ನಗುತರುವಂಥದು. ಆದ್ದರಿಂದ ಬಿಡಿ ವ್ಯಕ್ತಿ ಒಂದು ಪರಿಸ್ಥಿತಿಯ ಹೊಣೆಯನ್ನು ಸ್ವಾತಂತ್ರ್ಯದಿಂದ ಗೆಲುವಾಗಿ ಹೊತ್ತುಕೊಳ್ಳಲಿ. ಆ ಹೊಣೆಗಾಗಿ ಶಕ್ತಿಮೀರಿ ಶ್ರಮಿಸಲಿ. ಹಾಗೆ ಮಾಡಿದರೆ ಸರ್ವಸಿದ್ಧಿಯಾಗಿ ಅವನು ವಿಜಯಿಯಾಗುತ್ತಾನೆ. ಕವಿಗೆ ಬೇರಾವ ಸ್ವಾತಂತ್ರ್ಯ ಬೇಕು? ಈ ತತ್ತ್ವ ನಾಟಕ ಕಾದಂಬರಿಗಳ ವಿಮರ್ಶೆಯಲ್ಲಿ ಹಲವು ಉತ್ತಮ ಪರಿಣಾಮಗಳಿಗೆ ಮೂಲವಾಗಿದೆ.
ಬಾಹ್ಯನಿಷ್ಠಾವಾದ (ಫಾರ್ಮಲಿಸಂ)
[ಬದಲಾಯಿಸಿ]ಬಾಹ್ಯನಿಷ್ಠಾವಾದ (ಫಾರ್ಮಲಿಸಂ) ಎಂಬುದು ಕೆಲಕಾಲ ರಷ್ಯದಲ್ಲಿ ಗಲಭೆ ಮಾಡಿತು. ಅದರ ಧ್ಯೇಯವನ್ನು ವಿವರಿಸಿದ ಲನ್ಜ್ನ ಹೇಳಿಕೆಯಂತೆ ಕಲೆ ಜೀವನದಷ್ಟೇ ಮುಖ್ಯ, ಯಥಾರ್ಥ; ಜೀವನದ ಹಾಗೆಯೇ ಕಲೆಗೂ ಗುರಿಯಿಲ್ಲ, ಅರ್ಥವಿಲ್ಲ. ಕಲೆ ಇರುವುದೇಕೆಂದರೆ ಇರದೇ ಅದಕ್ಕೆ ಗತ್ಯಂತರವಿಲ್ಲ. ಆದ್ದರಿಂದ ಕಲೆಯಲ್ಲಿ ನಾವು ಭಾವಿಸಬೇಕಾದದ್ದು ನಿಪುಣತಂತ್ರದಿಂದ ಅದು ಮುಂದಿಡುವ ಬಾಹ್ಯಾಕೃತಿಯನ್ನು, ಸಾಹಿತ್ಯ ಪ್ರಬಂಧದ ವಿಷಯ ಅದರ ಶೈಲಿಯ ವಿಧಾನ ವಿನ್ಯಾಸವೆಷ್ಟೂ ಅಷ್ಟೆ-ಎಂಬುದು ಮತ್ತೊಂದು ವ್ಯಾಖ್ಯೆ. ಸಾಹಿತ್ಯ ವಿಮರ್ಶೆಯ ಪ್ರಕಾರಗಳನ್ನು ಕ್ಲ್ಯಾಸಿಕಲ್, ನಿಯೊಕ್ಲ್ಯಾಸಿಕಲ್, ರೊಮ್ಯಾಂಟಿಕ್, ಆಧುನಿಕ ಎಂದು ವಿಭಾಗಿಸಿ ತೃಪ್ತರಾಗುತ್ತಿದ್ದರು. ದಶಕಗಳ ಹಿಂದೆ. ಈಗ ಅದು ಅಪುರ್ಣ, ಅಸಮರ್ಪಕ-ಎಂದಾಗಿದೆ. ಸಂಪ್ರದಾಯದ ಚಿಂತನೆಯನ್ನು ಬಿಟ್ಟುಕೊಟ್ಟು ವಿಮರ್ಶೆಯ ಕೆಲಸವೇನು ಎಂಬ ವಿಚಾರದಲ್ಲಿ ನಿರತವಾಗಿರುವ ಮತ್ತೊಂದು ಬಗೆಯ ಪಂಗಡಗಳನ್ನು ಕಾಣಬಹುದು. ಕಾವ್ಯಕ್ಕೆ ವ್ಯಾಖ್ಯಾನ ಮಾಡುವುದು, ಕಾವ್ಯದ ಬೆಲೆಕಟ್ಟುವುದು, ಕಾವ್ಯ ಎಬ್ಬಿಸುವ ವಿಮರ್ಶಕನ ಪ್ರತಿಕ್ರಿಯೆಯ ವಿವರಣೆ-ಇವು ಮೂರು ವಿಧದ ವಿಮರ್ಶೆಯನ್ನು ಹೊರತಂದುವು: ವಿಮರ್ಶೆಯಿಂದ ಕವಿಗೆ ಸಹಾಯವಾಗಬೇಕು. ಇವುಗಳಿಂದ ಬೇರೆ ತರಹದ ವಿಮರ್ಶೆ ಉಂಟಾದುವು. ಈ ಪರಿಯ ಅನೇಕ ಅಭಿಪ್ರಾಯಗಳು ಐರೋಪ್ಯ ಸಾಹಿತ್ಯ ವಿಮರ್ಶೆಯನ್ನು ಸಾರವತ್ತಾಗಿಸಿವೆ, ಗೋಜುಗೋಜಾಗಿಸಿವೆ, ಚೈತನ್ಯ ತುಂಬಿ ಬಾಳಿಸುತ್ತಿವೆ.
ಉಲ್ಲೇಖಗಳು
[ಬದಲಾಯಿಸಿ]